- ನವಜಾತ ಶಿಶು ಯಾರದ್ದೆಂಬುದು ಪತ್ತೆಯಾಗಿಲ್ಲ
- ನವಜಾತ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ
ನವಜಾತ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ಬೀದಿನಾಯಿಯೊಂದು ಓಡಾಡುತ್ತಿದ್ದ ಘಟನೆ ಶಿವಮೊಗ್ಗದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಮಾರ್ಚ್ 31 ರ ಮುಂಜಾನೆ ನಾಯಿ ನವಜಾತ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುತ್ತಿರುವುದು ಕಂಡುಬಂದಿದೆ, ಆದರೆ ಈ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಭದ್ರತಾ ಸಿಬ್ಬಂದಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ನವಜಾತ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ಬೀದಿ ನಾಯಿ ಓಡಾಡುತ್ತಿರುವುದನ್ನು ನೋಡಿ, ಶುಕ್ರವಾರ(ಮಾ.31) ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಬಂದ ಕೂಡಲೇ, ಕೆಲವರು ಮಾಹಿತಿ ನೀಡಿದ್ದಾರೆ” ಎಂದು ಭದ್ರತಾ ಸಿಬ್ಬಂದಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಹೆರಿಗೆ ವಾರ್ಡ್‌ಗಳಿರುವ ಕಟ್ಟಡದಿಂದ ನಾಯಿ ಬಂದಿದೆಯೆಂದು ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಕಟ್ಟಡಕ್ಕೆ ಹೋದಾಗ, ನಾಯಿ ಇನ್ನೂ ಮಗುವನ್ನು ತನ್ನ ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡು ಓಡಾಡುತ್ತಿರುವುದನ್ನು ನೋಡಿದ್ದಾರೆ. ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾರೆ.
ಮಗು ಹುಟ್ಟಿದ ಸ್ವಲ್ಪ ಸಮಯದ ಬಳಿಕ ಸಾವನ್ನಪ್ಪಿರಬಹುದು ಅಥವಾ ಅಕ್ರಮ ಸಂಬಂಧದಿಂದ ಮಗು ಜನಿಸಿರಬಹುದು ಇಲ್ಲವೇ ಮೃತ ಶಿಶುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಯಾರೋ ಮನೆ ತೊರೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ನವಜಾತ ಶಿಶು ಯಾರದ್ದೆಂದೂ ಪತ್ತೆ ಕೂಡ ಆಗಿಲ್ಲ. ಹಾಗಾಗಿ ಶಿಶುವನ್ನು ಬಿಟ್ಟು ಹೋದ ಪಾಲಕರ ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೆಗ್ಗಾನ್ ಆಸ್ಪತ್ರೆ ಭದ್ರತಾ ಸಿಬ್ಬಂದಿ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ತೀರ್ಥಹಳ್ಳಿ – ಕುಂದಾಪುರ ಹೆದ್ದಾರಿಯಲ್ಲಿ ಏ. 15ರ ವರೆಗೆ ವಾಹನ ಸಂಚಾರ ಬಂದ್
“ಮೃತ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹದ ತೂಕ 900 ಗ್ರಾಂ ಇತ್ತು. ಇದು ಅಕಾಲಿಕ ಹೆರಿಗೆಯೇ ಹೊರತು ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಭವಿಸಲಿಲ್ಲ. ಈ ಬಗ್ಗೆ ತನಿಖೆ ನಡೆಸಲು ಮೂರು ತಂಡಗಳನ್ನು ರಚಿಸಲಾಗಿದೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
“ಕಳೆದ 15 ದಿನಗಳಲ್ಲಿ ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆದ ಎಲ್ಲ ಹೆರಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಸುರಗಿಹಳ್ಳಿ ತಿಳಿಸಿದ್ದಾರೆ.
“ಆಸ್ಪತ್ರೆಯ ಆವರಣದಲ್ಲಿ ಹೊರಗಿನಿಂದ ಯಾರೋ ಮಗುವನ್ನು ಇಟ್ಟಿರಬಹುದು, ತನಿಖೆ ನಡೆಯುತ್ತಿದೆ. ಡಿಎನ್ಎ ಪರೀಕ್ಷೆಗಾಗಿ ಮಾದರಿಗಳನ್ನು ಶೀಘ್ರದಲ್ಲೇ ದಾವಣಗೆರೆಯ ಎಫ್ಎಸ್ಎ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.