ನೇರ ವೇತನ ಪಾವತಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವವರಿಗೆ ಇಎಸ್‌ಐ, ಇಪಿಎಫ್ ಒದಗಿಸಬೇಕು. ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೆ ನಡೆಸಬೇಕು ಎಂದು ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮ್ಯಾನ್ಯುಯಲ್ ನಡೆದ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಮಯಮ 2013ರನ್ವಯ ಜಿಲ್ಲಾ ಮಟ್ಟದ 2ನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, “ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ವೇತನವನ್ನು ನಿಗದಿತ ಅವಧಿಯಲ್ಲಿ ಪಾವತಿಸಬೇಕು. ನೇರ ವೇತನ ಪಾವತಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವವರಿಗೆ ಇಎಸ್‌ಐ, ಇಪಿಎಫ್ ಒದಗಿಸಬೇಕು. ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೆ ನಡೆಸಬೇಕು” ಎಂದು ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
“ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ಪ್ರತ್ಯೇಕ ಹೆಲ್ತ್ ಕಾರ್ಡ್ ಮಾಡಿಸಬೇಕು. ಅವರ ಆರೋಗ್ಯ ತಪಾಸಣೆ ಹಾಗೂ ಔಷಧೋಪಚಾರ ವಿವರ ಇರುವುದರಿಂದ ತುರ್ತು ಸಂದರ್ಭದಲ್ಲಿ ಉಪಯೋಗವಾಗುತ್ತದೆ, ಪೌರ ಕಾರ್ಮಿಕರಿಗೆ ಸಮವಸ್ತ್ರ, ಗುರುತಿನ ಚೀಟಿ, ಸುರಕ್ಷತಾ ಪರಿಕರಗಳಾದ ಹ್ಯಾಂಡ್ ಗ್ಲೋಜ್, ಗನ್ ಬೂಟ್ಸ್ ಹಾಗೂ ಮಾಸ್ಕ್ ಕಡ್ಡಾಯ. ವಿಶ್ರಾಂತಿಗೆ ಮಹಾನಗರ ಪಾಲಿಕೆಯಲ್ಲಿ ಸ್ಥಳಾವಕಾಶ ಕಲ್ಪಿಸಬೇಕು. ಅಲ್ಲಿ ಕುಡಿಯುವ ನೀರು, ಶೌಚಾಲಯ ಒದಗಿಸುವುದು ಕಡ್ಡಾಯ” ಎಂದರು.
“ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳ್ಳುವ ಉದ್ಯಮಶೀಲತಾ ಯೋಜನೆ ಅರ್ಹರಿಗೆ ತಲುಪಿಸಬೇಕು. ಸಾಲ ಸೌಲಭ್ಯಕ್ಕೆ ಸಲ್ಲಿಕೆಯಾಗುವ ಬ್ಯಾಂಕಿನಲ್ಲಿ ಯಾವುದೇ ಬಾಕಿ ಇರದೆ ಬ್ಯಾಂಕಿನವರೊಂದಿಗೆ ಸಂವಹನ ಸಾಧಿಸಬೇಕು. ಸ್ವಾವಲಂಬಿ ಸಾರಥಿ ಯೋಜನೆ, ನೇರ ಸಾಲ ಯೋಜನೆ ಸೇರಿ ನಿಗಮದಿಂದ ಅನುಷ್ಠಾನಗೊಳಿಸುವ ಯೋಜನೆಯು ಯಾವುದೇ ಸಮಸ್ಯೆಯಿಂದ ಬಾಕಿ ಉಳಿಯಬಾರದು. ಸಂಬಂಧಿಸಿದ ಅಧಿಕಾರಿಗಳು ಸಮನ್ವಯ ಸಾಧಿಸಿ ಫಲಾನುಭವಿಗಳಿಗೆ ಯೋಜನೆ ಲಾಭ ತಲುಪಿಸಬೇಕು. ಈ ಯೋಜನೆ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು” ಎಂದು ಆಗ್ರಹಿಸಿದರು.
ಸಫಾಯಿ ಕರ್ಮಚಾರಿ ನಾಮನಿರ್ದೇಶಿತ ಸದಸ್ಯ ಚೆನ್ನು ಕಟ್ಟಿಮನಿ ಮಾತನಾಡಿ, “ಪೌರ ಕಾರ್ಮಿಕರಿಗೆ ಸುರಕ್ಷತೆ ದೃಷ್ಟಿಯಿಂದ ಸುರಕ್ಷಾ ಪರಿಕರಗಳ ಬಳಕೆಗೆ ಜಾಗೃತಿ ಮೂಡಿಸಬೇಕು. ಅವರ ಅನುಪಮ ಸೇವೆಯ ಪ್ರತಿಯಾಗಿ ಅಗತ್ಯ ಆರೋಗ್ಯ ಸೌಲಭ್ಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಜಿಪಂ ಸಿಇಒರಿಷಿ ಆನಂದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಸಫಾಯಿ ಕರ್ಮಚಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಮಹಾದೇವ ಎಸ್ ಕಾಂಬಳೆ, ದಯಾನಂದ ಗಿರಮಲ್ಲಪ್ಪ ಅಲ್ಲಿಬಾದಿ, ಮಹಾದೇವಿ ಮಳಸಿದ್ದ ಹಾದಿಮನಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.




