ಶಿಖಾರ ಖಾನೆ ಸ್ಲಂ ಭಾಗ-3ರಲ್ಲಿ 150ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಈ ಪ್ರದೇಶವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯ್ದೆಯಡಿ ಘೋಷಿಸಲಾಗಿದೆ. ಹಕ್ಕುಪತ್ರ ವಿತರಣೆಗಾಗಿ ಈಗಾಗಲೇ ಸರ್ವೇ ನಡೆದಿದ್ದು, ಕೆಲವು ನಿವಾಸಿಗಳು ಶುಲ್ಕವನ್ನೂ ಪಾವತಿಸಿದ್ದಾರೆ. ಆದರೆ ಅಧಿಕಾರಿಗಳು ಹಕ್ಕುಪತ್ರ ನೀಡುವುದಾಗಿ ಕಳೆದೊಂದು ವರ್ಷದಿಂದ ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿತ್ತು. ಈ ಹೋರಾಟಕ್ಕೆ ಮಣಿದ ಅಧಿಕಾರಿಗಳು ಇದೀಗ 15 ದಿನಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದಾರೆ.
ಶಿಖಾರ ಖಾನೆ ಭಾಗ-3ರ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕೆಂದು ಆಗ್ರಹಿಸಿ ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ಜನವೇದಿಕೆ(ಸಿಸಿಎಫ್‌ಎಫ್) ಹಾಗೂ ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ 3ನೇ ಉಪವಿಭಾಗ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸಮಿತಿ ಅಧ್ಯಕ್ಷ ಮುತ್ತು ಭೋವಿ ಮಾತನಾಡಿ, “ಹಕ್ಕುಪತ್ರ ಸಿಗುತ್ತದೆಂಬ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದು, ಅಧಿಕಾರಿಗಳ ಸುಳ್ಳು ಭರವಸೆಗಳಿಂದ ಬೇಸತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಮಂಡಳಿಯ ಅಧಿಕಾರಿಗಳಾದ ಮೀನಾಕ್ಷಿ ಚೋರಿ ಹಾಗೂ ಪಗಲ್ಲಾದರ ಅವರು, “ಈಗಾಗಲೇ ಸರ್ವೇ ಪೂರ್ಣಗೊಂಡಿದ್ದು, ಸ್ಲಂ ಗಡಿ ಗುರುತಿಸುವ ಕಾರ್ಯ ನಡೆಯಬೇಕಿದೆ. 15 ದಿನಗಳೊಳಗೆ ಈ ಎಲ್ಲ ಕಾರ್ಯ ಪೂರ್ಣಗೊಳಿಸಿ ಹಕ್ಕುಪತ್ರ ವಿತರಿಸಲಾಗುವುದು” ಎಂದು ಭರವಸೆ ನೀಡಿದರು. ಬಳಿಕ ಧರಣಿ ಹಿಂಪಡೆಯಲಾಯಿತು.
ಇದನ್ನೂ ಓದಿದ್ದೀರಾ? ಬಳ್ಳಾರಿ | ಕುಡಿತಿನಿ ಭೂ ಸಂತ್ರಸ್ತರ ಹೋರಾಟದ ಜ್ವಾಲೆ: ಸರ್ಕಾರಕ್ಕೆ ಎಚ್ಚರಿಕೆ
ಸಮಿತಿಯ ಮಿನಾಕ್ಷಿ ಕಾಲೇಭಾಗ, ಪಂಡಿತ ಖಂಡಗಳೆ, ಪುಪ್ಪಾ ನೇಗಿನಾಳ, ಕೃಷ್ಣಾ ಜಾಧವ, ಅಕ್ರಂ ಮಾಶ್ಯಾಳಕರ, ದೇವೆಂದ್ರ ಸಕ್ರಿ, ರೇಖಾ ಹಲಸಂಗಿ, ರೇಣುಕಾ ಬೈಚಬಾಳ, ಕೈರುನಾ ಸುತರ ಇದ್ದರು.




