11 ಮಂದಿ ಕಾಂಗ್ರೆಸ್ ಶಾಸಕರನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಕೇವಲ ಇಬ್ಬರು ಸಚಿವರನ್ನು ಮಾತ್ರ ನೀಡಿರುವುದು ರಾಜಕೀಯವಾಗಿ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ರಾಮದುರ್ಗದಂತಹ ಕ್ಷೇತ್ರಗಳಿಗೆ ಮತ್ತೆ ಸಚಿವ ಸ್ಥಾನ ಕೈತಪ್ಪಿರುವುದು ಸ್ಥಳೀಯ ಜನರ ನಿರೀಕ್ಷೆಗೆ ದೊಡ್ಡ ಹೊಡೆತ ನೀಡಿದೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಮತ್ತಷ್ಟು ವಿಸ್ತರಣೆ ನಡೆದರೆ ಬೆಳಗಾವಿಗೆ ಹೆಚ್ಚುವರಿ ಪ್ರಾತಿನಿಧ್ಯ ನೀಡುವ ಮೂಲಕ ಜಿಲ್ಲೆಯ ಅಸಮಾಧಾನವನ್ನು ಸರ್ಕಾರ ನಿವಾರಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುತೂಹಲಕ್ಕೆ ತೆರೆ ಬಿದ್ದಿದ್ದರೂ, ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಕೇವಲ ಎರಡು ಸಚಿವ ಸ್ಥಾನಗಳು ಮಾತ್ರ ದೊರೆತಿರುವುದು ಜಿಲ್ಲೆಯ ರಾಜಕೀಯ ವಲಯ ಹಾಗೂ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಅವರೊಂದಿಗೆ ಇದೀಗ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆತಿದೆ. ಆದರೆ ಜಿಲ್ಲೆಯ ಭೌಗೋಳಿಕ ವ್ಯಾಪ್ತಿ, ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹಾಗೂ ಕಾಂಗ್ರೆಸ್ ಶಾಸಕರ ಸಂಖ್ಯೆಯನ್ನು ಪರಿಗಣಿಸಿದರೆ ಇದು ಸಾಕಷ್ಟು ಕಡಿಮೆ ಪ್ರಾತಿನಿಧ್ಯ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಇವುಗಳಲ್ಲಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಸರ್ಕಾರ ರಚನೆಯಲ್ಲಿ ಜಿಲ್ಲೆಯ ಶಾಸಕರು ಮಹತ್ವದ ಪಾತ್ರ ವಹಿಸಿದ್ದರೂ, ಸಚಿವ ಸಂಪುಟದಲ್ಲಿ ಕೇವಲ ಇಬ್ಬರಿಗೆ ಮಾತ್ರ ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಜಿಲ್ಲೆಯ ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಕನಿಷ್ಠ ಮೂರು ಸಚಿವ ಸ್ಥಾನಗಳಾದರೂ ದೊರೆಯಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಗೆ ಐದು ಸಚಿವ ಸ್ಥಾನಗಳು ದೊರೆತಿದ್ದವು. ಜಿಲ್ಲೆಯ ವಿವಿಧ ಭಾಗಗಳಿಗೆ ಪ್ರಾತಿನಿಧ್ಯ ದೊರೆತಿದ್ದರಿಂದ ಆಡಳಿತಾತ್ಮಕ ನಿರ್ಧಾರಗಳಲ್ಲಿ ಜಿಲ್ಲೆಯ ಧ್ವನಿ ಹೆಚ್ಚು ಪ್ರಬಲವಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಕೇವಲ ಎರಡು ಸ್ಥಾನ ನೀಡಿರುವುದು ರಾಜಕೀಯ ಸಮತೋಲನದ ದೃಷ್ಟಿಯಿಂದ ಪ್ರಶ್ನೆಗೆ ಕಾರಣವಾಗಿದೆ.
ವಿಶೇಷವಾಗಿ ರಾಮದುರ್ಗ ಕ್ಷೇತ್ರದ ಹಿರಿಯ ಶಾಸಕ ಅಶೋಕ ಪಟ್ಟಣ ಅವರಿಗೆ ಸಚಿವ ಸ್ಥಾನ ದೊರೆಯದಿರುವುದು ಕ್ಷೇತ್ರದಲ್ಲಿ ನಿರಾಸೆಯ ವಾತಾವರಣ ನಿರ್ಮಿಸಿದೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ ಪಟ್ಟಣ ಅವರು ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಿಂದಲೂ ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿರುವ ಅವರು ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ತಂದೆ ಹಾಗೂ ತಾಯಿಯವರೂ ಶಾಸಕರಾಗಿ ಸೇವೆ ಸಲ್ಲಿಸಿದ್ದರಿಂದ ಈ ಕುಟುಂಬಕ್ಕೆ ದೀರ್ಘ ರಾಜಕೀಯ ಹಿನ್ನೆಲೆಯಿದೆ.
ಈ ಬಾರಿ ಲಿಂಗಾಯತ ಸಮುದಾಯದ ಕೋಟಾದಡಿ ಅಶೋಕ ಪಟ್ಟಣ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬಂದಿದ್ದವು. ಹೈಕಮಾಂಡ್ ಮಟ್ಟದಲ್ಲಿಯೂ ಅವರ ಹೆಸರಿನ ಕುರಿತು ಚರ್ಚೆ ನಡೆದಿತ್ತು ಎನ್ನಲಾಗಿತ್ತು. ಆದರೂ ಅಂತಿಮವಾಗಿ ಅವರಿಗೆ ಅವಕಾಶ ದೊರೆಯಲಿಲ್ಲ. ಇದರಿಂದ ರಾಮದುರ್ಗ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ ಪಟ್ಟಣ, ʼಆಗುವುದೆಲ್ಲ ಒಳ್ಳೆಯದಕ್ಕೆ. ನಾನು ಸಚಿವ ಸ್ಥಾನದ ಬಗ್ಗೆ ಯಾವುದೇ ಬೇಸರ ಹೊಂದಿಲ್ಲ. ಮುಂದೆಯೂ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆʼ ಎಂದು ಪ್ರತಿಕ್ರಿಯಿಸಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ಪ್ರಬುದ್ಧತೆಯನ್ನು ತೋರಿಸಿದರೂ, ಕ್ಷೇತ್ರದ ಜನರಲ್ಲಿರುವ ಅಸಮಾಧಾನ ಮಾತ್ರ ಕಡಿಮೆಯಾಗಿಲ್ಲ.
ರಾಮದುರ್ಗ ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ, ಸ್ವಾತಂತ್ರ್ಯಾನಂತರ ಈ ಕ್ಷೇತ್ರಕ್ಕೆ ಕೇವಲ ಒಂದು ಬಾರಿ ಮಾತ್ರ ಸಚಿವ ಸ್ಥಾನ ದೊರೆತಿದೆ. ನಂತರ ಹಲವು ಬಾರಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಶಾಸಕರು ಆಯ್ಕೆಯಾಗಿದ್ದರೂ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಈ ಕಾರಣದಿಂದ ರಾಮದುರ್ಗಕ್ಕೆ ಮತ್ತೆ ಅನ್ಯಾಯವಾಗಿದೆ ಎಂಬ ಭಾವನೆ ಸ್ಥಳೀಯರಲ್ಲಿ ಮೂಡಿದೆ.
ಇದೇ ವೇಳೆ, ಹಿಂದಿನ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳಕರ ಅವರಿಗೂ ಈ ಬಾರಿ ಅವಕಾಶ ದೊರೆಯದಿರುವುದು ಜಿಲ್ಲೆಯ ಮತ್ತೊಂದು ಚರ್ಚೆಯ ವಿಷಯವಾಗಿದೆ. ಮಹಿಳಾ ಕೋಟಾದಲ್ಲಿ ಅವರಿಗೆ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿ ಇತ್ತು. ಆದರೆ ಆ ನಿರೀಕ್ಷೆಯೂ ಈಡೇರದಿರುವುದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಬೆಳಗಾವಿ ಜಿಲ್ಲೆ ಉತ್ತರ ಕರ್ನಾಟಕದ ರಾಜಕೀಯವಾಗಿ ಅತ್ಯಂತ ಪ್ರಭಾವಿ ಜಿಲ್ಲೆಯಾಗಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಯಲ್ಲಿ ಭಾಷೆ, ಗಡಿ, ಕೈಗಾರಿಕೆ, ಕೃಷಿ, ನೀರಾವರಿ, ಶಿಕ್ಷಣ ಹಾಗೂ ಮೂಲಸೌಕರ್ಯ ಸೇರಿದಂತೆ ಹಲವು ಸಂಕೀರ್ಣ ಸಮಸ್ಯೆಗಳಿವೆ. ಇಂತಹ ದೊಡ್ಡ ಜಿಲ್ಲೆಯ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಮಂಡಿಸಲು ಹೆಚ್ಚಿನ ಸಚಿವರ ಪ್ರಾತಿನಿಧ್ಯ ಅಗತ್ಯವಾಗಿದೆ.
ಸಚಿವ ಸ್ಥಾನವು ಕೇವಲ ಅಧಿಕಾರ ಅಥವಾ ಗೌರವದ ಸಂಕೇತವಲ್ಲ. ಒಂದು ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವುದು, ವಿವಿಧ ಇಲಾಖೆಗಳ ಮೂಲಕ ಅನುದಾನ ತರುವುದು, ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಚಿವರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ದೊಡ್ಡ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಹೊಸದೇನಲ್ಲ.
ಶಂಕರ ಪಾಟೀಲ ಮಾತನಾಡಿ, “ರಾಜ್ಯದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಕೇವಲ ಎರಡು ಸಚಿವ ಸ್ಥಾನ ನೀಡಿರುವುದು ಸಮಂಜಸವಲ್ಲ. 11 ಕಾಂಗ್ರೆಸ್ ಶಾಸಕರಿದ್ದರೂ ಇಬ್ಬರಿಗೆ ಮಾತ್ರ ಅವಕಾಶ ಸಿಕ್ಕಿರುವುದು ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಸಚಿವರ ಪ್ರಾತಿನಿಧ್ಯ ಅಗತ್ಯವಾಗಿದೆ” ಎಂದರು.
ಸಂಜು ಕೆಲವಡಿ ಮಾತನಾಡಿ, “ಅಶೋಕ ಪಟ್ಟಣ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರು. ಪಕ್ಷಕ್ಕಾಗಿ ದೀರ್ಘಕಾಲ ದುಡಿದಿದ್ದರೂ ಸಚಿವ ಸ್ಥಾನ ಸಿಗದಿರುವುದು ರಾಮದುರ್ಗ ಕ್ಷೇತ್ರದ ಜನರಿಗೆ ಬೇಸರ ತಂದಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಅವಕಾಶ ನೀಡಿ ಕ್ಷೇತ್ರಕ್ಕೆ ನ್ಯಾಯ ಒದಗಿಸಬೇಕು” ಎಂದು ಹೇಳಿದರು.
“ಅಶೋಕ ಪಟ್ಟಣ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರಾಗಿದ್ದು, ಅವರ ತಂದೆ-ತಾಯಿಯೂ ಕಾಂಗ್ರೆಸ್ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪಕ್ಷದ ನಿಷ್ಠಾವಂತ ನಾಯಕರು. ಅಲ್ಲದೆ ಹಿರಿಯ ಶಾಸಕರು. ಮೊದಲ ಬಾರಿಗೆ ಶಾಸಕರಾದ ಬಸವಂತಪ್ಪ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಹಿರಿಯರಾದ ಅಶೋಕ ಪಟ್ಟಣ ಅವರಿಗೆ ಅವಕಾಶ ನೀಡದೇ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ. ಇನ್ನೂ ಕಾಲಾವಕಾಶವಿದ್ದು, ಪಕ್ಷದ ಹೈಕಮಾಂಡ್ ಅಶೋಕ ಪಟ್ಟಣ ಅವರಿಗೆ ಸಚಿವ ಸ್ಥಾನ ನೀಡಿ ನ್ಯಾಯ ಒದಗಿಸಬೇಕು” ಎಂದು ಕಾಂಗ್ರೆಸ್ ಕಾರ್ಯಕರ್ತ ಶಿವಾನಂದ ಲಗಳಿ ಈ ದಿನ.ಕಾಮ್‌ಗೆ ತಿಳಿಸಿದರು.
11 ಮಂದಿ ಕಾಂಗ್ರೆಸ್ ಶಾಸಕರನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಕೇವಲ ಇಬ್ಬರು ಸಚಿವರನ್ನು ಮಾತ್ರ ನೀಡಿರುವುದು ರಾಜಕೀಯವಾಗಿ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ರಾಮದುರ್ಗದಂತಹ ಕ್ಷೇತ್ರಗಳಿಗೆ ಮತ್ತೆ ಸಚಿವ ಸ್ಥಾನ ಕೈತಪ್ಪಿರುವುದು ಸ್ಥಳೀಯ ಜನರ ನಿರೀಕ್ಷೆಗೆ ದೊಡ್ಡ ಹೊಡೆತ ನೀಡಿದೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಮತ್ತಷ್ಟು ವಿಸ್ತರಣೆ ನಡೆದರೆ ಬೆಳಗಾವಿಗೆ ಹೆಚ್ಚುವರಿ ಪ್ರಾತಿನಿಧ್ಯ ನೀಡುವ ಮೂಲಕ ಜಿಲ್ಲೆಯ ಅಸಮಾಧಾನವನ್ನು ಸರ್ಕಾರ ನಿವಾರಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು



