ದೇಶದ ಆಹಾರ ಭದ್ರತೆಯಿಂದ ರೈತರ ಆದಾಯ ಭದ್ರತೆವರೆಗೆ ಸ್ವಾಮಿನಾಥನ್ ಚಿಂತನೆ

Date:

ಇಡೀ ದೇಶಕ್ಕೆ ನಿಜಾರ್ಥದಲ್ಲಿ ‘ಅನ್ನ ಭಾಗ್ಯ’ ನೀಡಿದ ಸ್ವಾಮಿನಾಥನ್ ಅವರಿಗೆ ಈ ದೇಶ ಸಲ್ಲಿಸಬಹುದಾದ ನಿಜವಾದ ಗೌರವವೇನೆಂದರೆ- ಅವರು ಪ್ರಸ್ತಾಪಿಸಿದಂತೆ ರೈತರ ಬೆಳೆಗಳಿಗೆ ಸಿ2+50 % ಎಂ.ಎಸ್.ಪಿ. ನೀಡಬೇಕಿರುವುದು

1960ರ ದಶಕ. ಭಾರತದಲ್ಲಿ ತೀವ್ರ ಬರಗಾಲ. ಅನ್ನಾಹಾರಗಳಿಗೆ ಆಹಾಕಾರ. ಆಗ ಭಾರತಕ್ಕೆ ‘ಶಿಪ್ ಟು ಮೌತ್’ ಎಂಬ ಕಳಂಕ. ಶಿಪ್ ಟು ಮೌತ್ ಎಂದರೆ ಅಮೆರಿಕಾದಿಂದ ಹಡಗಿನಲ್ಲಿ ಆಹಾರ ಧಾನ್ಯ ಬಂದಲ್ಲಿ ದೇಶವಾಸಿಗಳಿಗೆ ಒಪ್ಪೊತ್ತಿನ ಊಟ, ಇಲ್ಲದಿದ್ದರೆ ಇಲ್ಲ ಎಂಬ ದುಸ್ಥಿತಿ. ಆ ಸಂದರ್ಭದಲ್ಲಿ ದೇಶದ ಆಹಾರ ಭದ್ರತೆಗಾಗಿ ಟೊಂಕ ಕಟ್ಟಿ ನಿಂತವರು ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಕೃಷಿ ಸಚಿವ ಸಿ.ಸುಬ್ರಮಣಿಯಂ, ಇಂದಿರಾ ಗಾಂಧಿ ಹಾಗೂ ಡಾ.ಎಂ.ಎಸ್. ಸ್ವಾಮಿನಾಥನ್.

ಸರ್ಕಾರಿ ಯೋಜನೆ ಆಂದೋಲನವಾದ ಬಗೆ

1964 ಜೂನ್ ಮಾಹೆ. ಡಾ. ಎಂ.ಎಸ್. ಸ್ವಾಮಿನಾಥನ್ ಒಂದು ಸಾವಿರ ಸಣ್ಣ ರೈತರ ಹೊಲಗಳಲ್ಲಿ ನೀರಾವರಿ ವ್ಯವಸ್ಥೆಯೊಂದಿಗೆ ರಸಗೊಬ್ಬರ ಬಳಸಿ ಗೋಧಿ ಬೆಳೆಯುವ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಕೃಷಿ ಸಚಿವಾಲಯ ಆ ಪ್ರಸ್ತಾವವನ್ನು ವಿರೋಧಿಸುತ್ತದೆ. ಆದಾಗ್ಯೂ ಆಗಿನ ಕೃಷಿ ಸಚಿವರಾದ ಸಿ. ಸುಬ್ರಹ್ಮಣಿಯನ್ 1964 ರ ಆಗಸ್ಟ್ ಮಾಹೆಯಲ್ಲಿ ಯೋಜನೆಗೆ ಹಸಿರು ನಿಶಾನೆ ತೋರಿಸುತ್ತಾರೆ. ಸ್ವಾಮಿನಾಥನ್ ಮತ್ತು ಅವರ ತಂಡ ಯೋಜನೆಯನ್ನು ಜಾರಿಗೊಳಿಸುತ್ತಾರೆ. ರಾಷ್ಟ್ರ ಮಟ್ಟದ ಆ ಪ್ರಾತ್ಯಕ್ಷಿಕೆಯಲ್ಲಿ ಸಣ್ಣ ರೈತರು ಒಂದು ಹೆಕ್ಟೇರ್ ಗೆ ನಾಲ್ಕರಿಂದ ಐದು ಟನ್ ಗೋಧಿ ಇಳುವರಿ ಪಡೆಯುತ್ತಾರೆ. ಆ ಸಂದರ್ಭದಲ್ಲಿ ಇತರೆ ಜಮೀನುಗಳಲ್ಲಿ ಒಂದು ಹೆಕ್ಟೇರ್ ಗೆ ಒಂದು ಟನ್ ಇಳುವರಿ ಮೀರಿರುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ಈ ಯಶಸ್ಸು ರೈತರನ್ನು ಹುರಿದುಂಬಿಸುತ್ತದೆ. ನೋಡ ನೋಡುತ್ತಿದ್ದಂತೆಯೇ ಒಂದು ಸರ್ಕಾರಿ ಕಾರ್ಯಕ್ರಮ ದೇಶವ್ಯಾಪಿ ಆಂದೋಲನವಾಗಿ ಬೆಳೆಯುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೀಜೋತ್ಪಾದನೆ ಮತ್ತು ಬೀಜ ಆಮದು

ರಾಷ್ಟ್ರೀಯ ಪ್ರಾತ್ಯಕ್ಷಿಕೆಗಳ ಅಭೂತಪೂರ್ವ ಯಶಸ್ಸಿನಿಂದಾಗಿ ಹೊಸ ಬಿತ್ತನೆ ಬೀಜಕ್ಕೆ ಬೇಡಿಕೆ ಆಹಾಕಾರದ ಸ್ವರೂಪ ಪಡೆಯುತ್ತದೆ. ಹಾಗಾಗಿ ಬೀಜೋತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಆಗ ದೆಹಲಿ ರಾಜ್ಯದ ಜೌಂಟಿ ಗ್ರಾಮವನ್ನು ಬೀಜ ಗ್ರಾಮವನ್ನಾಗಿ ಮಾಡಲು ಸ್ವಾಮಿನಾಥನ್ ಚಿಂತನೆ ಮಾಡುತ್ತಾರೆ. ಹೊಸ ಬಿತ್ತನೆ ಬೀಜವನ್ನು ಅಭಿವೃದ್ಧಿಪಡಿಸಲು ಗ್ರಾಮಸ್ಥರ ಮನವೊಲಿಸಲು ಬೀಜ ತಜ್ಞ ಡಾ. ಅಮೀರ್ ಸಿಂಗ್ ಅವರಿಗೆ ಜವಾಬ್ಧಾರಿ ವಹಿಸುತ್ತಾರೆ. ಸಿಂಗ್ ಆ ಕೆಲಸವನ್ನು ಶಿಸ್ತು ಮತ್ತು ಶ್ರದ್ಧೆಯಿಂದ ಮಾಡುತ್ತಾರೆ. ಎರಡನೆಯದಾಗಿ ಮೆಕ್ಸಿಕೋದಿಂದ ಅಗಾಧ ಪ್ರಮಾಣದ ಬಿತ್ತನೆ ಬೀಜಗಳನ್ನು ತರಿಸುವ ಪ್ರಸ್ತಾವ ಮಂಡಿಸುತ್ತಾರೆ. ಕೃಷಿ ಸಚಿವ ಸಿ.ಸುಬ್ರಮಣಿಯಂ ಮತ್ತು ಇಂದಿರಾ ಗಾಂಧಿ ಆ ಪ್ರಸ್ತಾವ ಒಪ್ಪಿಕೊಳ್ಳುತ್ತಾರೆ. ಅಂತೆಯೇ 1965 ಮತ್ತು 66 ರಲ್ಲಿ ಗೋಧಿಯ ಎರಡು ತಳಿಗಳಾದ ಲೆರ್ಮಾ ರೋಜೋ ಮತ್ತು ಸೊನಾರ 64 ವೆರೈಟಿಗಳನ್ನು ಕ್ರಮವಾಗಿ 200 ಮತ್ತು 18,000 ಟನ್ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗೆ ಭಾರತದಲ್ಲಿ ಹಸಿರು ಕ್ರಾಂತಿ ಆರಂಭವಾದದ್ದು.

1967 ರಲ್ಲಿ ಇಂದಿರಾ ಗಾಂಧಿ ಜೌಂಟಿ ಗ್ರಾಮಕ್ಕೆ ಭೇಟಿ ಕೊಟ್ಟು ಜವಹರ್ ಜೌಂಟಿ ಬೀಜ ಸಹಕಾರ ಸಂಘವನ್ನು ಉದ್ಘಾಟಿಸುತ್ತಾರೆ. ಜೌಂಟಿ ಗ್ರಾಮ ಬೀಜ ಗ್ರಾಮವಾಗಿ ಪರಿವರ್ತನೆ ಹೊಂದುತ್ತದೆ.

ಕೃಷಿ ದರ್ಶನ ಆರಂಭ

1967ರ ಜನವರಿ ಮಾಹೆಯ ಒಂದು ಸಂಜೆ ಡಾ.ಎಂ.ಎಸ್. ಸ್ವಾಮಿನಾಥನ್ ಹಾಗೂ ಅಣುಶಕ್ತಿ ಆಯೋಗದ ಅಧ್ಯಕ್ಷರಾದ ವಿಕ್ರಮ್ ಸಾರಾಭಾಯಿ ದೆಹಲಿಯ ಸುತ್ತಮುತ್ತಲಿನ ಗೋಧಿ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಹಿಂದಿರುಗುವಾಗ, ಹೊಸ ವೆರೈಟಿ ಗೋಧಿ ಬೆಳೆಯುವಲ್ಲಿ ರೈತರು ತೋರುತ್ತಿದ್ದ ಆಸಕ್ತಿಯನ್ನು ಕಂಡ ಸಾರಾಭಾಯಿ ಪ್ರಭಾವಿತರಾಗಿರುತ್ತಾರೆ. ಮುಂದುವರೆದು ರೇಡಿಯೋ, ಟೆಲಿವಿಷನ್ ಮೂಲಕ ವಿಜ್ಞಾನ ತಂತ್ರಜ್ಞಾನದ ಹೊಳಹುಗಳು ಹಾಗೂ ರೈತರ ದೈನಂದಿನ ಚಟುವಟಿಕೆಗಳ ನಡುವೆ ಇರುವ ಅಗಾಧ ಕಂದಕಕ್ಕೊಂದು ಸೇತುವೆ ಕಟ್ಟುವ ಕೆಲಸ ಆಗಬೇಕೆಂದು ಸ್ವಾಮಿನಾಥನ್ ಅವರ ಬಳಿ ಪ್ರಸ್ತಾಪಿಸುತ್ತಾರೆ. ಆ ವಿಷಯವನ್ನು ಇಂದಿರಾ ಅವರಿಗೆ ಮುಟ್ಟಿಸಲು ಇಬ್ಬರೂ ಅವರ ಮನೆಗೆ ತೆರಳುತ್ತಾರೆ. ಇವರಿಬ್ಬರ ಪ್ರಸ್ತಾಪ ಆಲಿಸಿದ ಇಂದಿರಾ ಕೂಡಲೇ ಮಾಹಿತಿ ಹಾಗೂ ಪ್ರಸಾರ ಇಲಾಖೆಯ ಸಚಿವರಿಗೆ ಫೋನ್ ಮಾಡಿ ಕೃಷಿ ದರ್ಶನ ಕಾರ್ಯಕ್ರಮ ಆರಂಭಿಸಲು ಸೂಚಿಸುತ್ತಾರೆ. ಆಶ್ಚರ್ಯವೆಂಬಂತೆ 1967 ಜನವರಿ 26 ರಂದು ರೈತರಿಗೆ ಹೊಸ ಹೊಸ ಕೃಷಿ ತಂತ್ರಜ್ಞಾನಗಳ ಪರಿಚಯ ಮಾಡಿಕೊಡುವ ‘ಕೃಷಿ ದರ್ಶನ’ ಕಾರ್ಯಕ್ರಮ ಪ್ರಸಾರ ಆರಂಭವಾಗುತ್ತದೆ. ಭಾರತದಲ್ಲಿ ಹಸಿರು ಕ್ರಾಂತಿಯಾಗಲು ಈ ಕಾರ್ಯಕ್ರಮದ ಕೊಡುಗೆಯೂ ಪ್ರಮುಖವಾದುದು.

ಬೆಳೆ ಆಯ್ಕೆ ಮತ್ತು ರೈತರ ಆದಾಯ ದ್ವಿಗುಣ

1960 ರ ದಶಕದಲ್ಲಿ ಎಕರೆವಾರು ಬೆಳೆ ಉತ್ಪಾದಕತೆ, ಇಳುವರಿ ಹೆಚ್ಚಳದ ಬಗೆಗೆ ಆಸಕ್ತಿವಹಿಸಿದ್ದ (ಅದು ಆಗಿನ ಅನಿವಾರ್ಯ ಅಗತ್ಯ) ಡಾ.ಎಂ.ಎಸ್. ಸ್ವಾಮಿನಾಥನ್ 2018 ಜುಲೈ 13 ರಂದು ಆಗಿನ ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಆಹ್ವಾನದ ಮೇರೆಗೆ ರಾಜ್ಯಕ್ಕೆ ಆಗಮಿಸಿದಾಗ ರೈತರ ಆದಾಯದ ಕುರಿತು ಮಾತನಾಡಿದ್ದರು. ಅಂದು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ, ಕೃಷಿ ಸಚಿವ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತಾ ತೋಟಗಾರಿಕಾ ಬೆಳೆಗಳು ವಿಶೇಷವಾಗಿ ಕಮರ್ಷಿಯಲ್ ಕ್ರಾಪ್ ಬೆಳೆಯಲು ಪ್ರೋತ್ಸಾಹ ಸಿಗಬೇಕು. ಬೆಳೆ ಉತ್ಪಾದಕತೆಗಷ್ಟೇ ಕಾಳಜಿವಹಿಸದೆ ಆದಾಯ ಹೆಚ್ಚಳದ ಬಗೆಗೂ ನಿಗಾವಹಿಸಬೇಕೆಂದರು. ಕರ್ನಾಟಕದಲ್ಲಿ ತರಕಾರಿ ಹಾಗೂ ಹೂ ಬೆಳೆಗಳಿಗೆ ವಿಫುಲ ಅವಕಾಶಗಳಿವೆ ಎಂದೂ ಹೇಳಿದರು. ದೇಶದಲ್ಲಿ ತೋಟಗಾರಿಕಾ ಕ್ಷೇತ್ರಕ್ಕೆ ಪ್ರತ್ಯೇಕವಾದ ನಿರ್ದೇಶನಾಲಯ ಸ್ಥಾಪಿಸಿದ್ದು ಕರ್ನಾಟಕದಲ್ಲಿಯೇ ಮೊದಲು. ಬೇರೆಡೆ ಕೃಷಿ ಇಲಾಖೆಯೇ ತೋಟಗಾರಿಕಾ ಕ್ಷೇತ್ರವನ್ನೂ ಒಳಗೊಂಡಿದೆ ಎಂದರು.

ಹಾಗೆಯೇ ಸಮುದ್ರ ನೀರಿನ ಕೃಷಿ ಪ್ರೋತ್ಸಾಹಿಸಬೇಕು ಎಂದು ಒತ್ತು ಕೊಟ್ಟು ಹೇಳಿದ್ದರು. ವಿಶ್ವದ ಒಟ್ಟಾರೆ ನೀರಿನ ಪ್ರಮಾಣದ ಶೇಕಡಾ 97 ರಷ್ಟು ಸಮುದ್ರ ನೀರೇ ತುಂಬಿದೆ. ಕರ್ನಾಟಕದಲ್ಲಿ ಕೋಸ್ಟಲ್ ಏರಿಯಾ ಬಹಳ ದೊಡ್ಡದಿದೆ, ಹಾಗಾಗಿ ಆ ಪ್ರದೇಶದ ಹಾಗೂ ರೈತರ ಅಭಿವೃದ್ಧಿಗಾಗಿ ಸಮುದ್ರ ನೀರಿನ ಕೃಷಿ ಯೋಜನೆ ಮಾಡಬಹುದಾಗಿದೆ ಎಂದೂ ಸಲಹೆ ನೀಡಿದ್ದರು.

ರೈತರು ಬೆಳೆದ ಬೆಳೆಗಳಿಗೆ ಸಿ2+50 % ಎಂ.ಎಸ್.ಪಿ ನೀಡಬೇಕೆಂಬ ಸ್ವಾಮಿನಾಥನ್ ಅವರ ಪ್ರಸ್ತಾವ ದೇಶದಾದ್ಯಂತ ದಿನಂಪ್ರತಿ ಚರ್ಚೆಯಲಿ ಇರುತ್ತದೆ. ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇಡೀ ದೇಶಕ್ಕೆ ನಿಜಾರ್ಥದಲ್ಲಿ ‘ಅನ್ನ ಭಾಗ್ಯ’ ನೀಡಿದ ಸ್ವಾಮಿನಾಥನ್ ಅವರಿಗೆ ಈ ದೇಶ ಸಲ್ಲಿಸಬಹುದಾದ ನಿಜವಾದ ಗೌರವವೇನೆಂದರೆ- ಅವರು ಪ್ರಸ್ತಾಪಿಸಿದಂತೆ ರೈತರ ಬೆಳೆಗಳಿಗೆ ಸಿ2+50 % ಎಂ.ಎಸ್.ಪಿ. ನೀಡಬೇಕಿರುವುದು.

ಕೆ ಎನ್ ನಾಗೇಶ್
ಕೆ. ಎನ್ ನಾಗೇಶ್
+ posts

ಲೇಖಕ, ಪತ್ರಕರ್ತ, ಕೃಷಿ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಕೆ. ಎನ್ ನಾಗೇಶ್
ಕೆ. ಎನ್ ನಾಗೇಶ್
ಲೇಖಕ, ಪತ್ರಕರ್ತ, ಕೃಷಿ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ)...