ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ: ಪ್ರೊ. ಬಿ. ಗಂಗಾಧರಮೂರ್ತಿ ಚಿಂತನೆ

Date:

ದಲಿತರ ಮೇಲೆ ಹೆಚ್ಚಾಗುತ್ತಿರುವ ಹಿಂದುತ್ವದ ಪ್ರಭಾವವು ಸಾರಾಂಶದಲ್ಲಿ ಈ ದೇಶದ ಪ್ರಜಾಸತ್ತೆ ಮತ್ತು ಸಮಾಜವಾದಿ ಕನಸುಗಳ ವಿರುದ್ಧ ಮತ್ತು ಈ ದೇಶದ ಜನತೆಯ ವಿರುದ್ಧ ಹಿಂದುತ್ವವಾದಿಗಳು ನಡೆಸುತ್ತಿರುವ ಪ್ರತಿಗಾಮಿ ಆಕ್ರಮಣದ ತಾತ್ಕಾಲಿಕ ವಿಜಯದ ಕಥನವನ್ನೇ ತೆರೆದಿಡುತ್ತದೆ.

ಇಂದು ಭಾರತದ ಜನತೆ ಎದುರಿಸುತ್ತಿರುವ ಅತಿದೊಡ್ಡ ಆಂತರಿಕ ಶತ್ರು ‘ಹಿಂದುತ್ವ’. ಹಿಂದುತ್ವವೆಂದರೆ ಹಿಂದೂಧರ್ಮವೂ ಅಲ್ಲ, ಬಹುಸಂಖ್ಯಾತ ಹಿಂದೂಗಳು ‘ಹಿಂದತ್ವವಾದಿಗಳೂ’ ಅಲ್ಲ. ಹಿಂದುತ್ವವೆಂದರೆ ಜನರನ್ನು ಧರ್ಮದ ಆಧಾರದಲ್ಲಿ ಒಡೆದು ಆಳುವ, ಮೇಲು – ಕೀಳು ಎಂಬ ಬ್ರಾಹ್ಮಣೀಯ ಶ್ರೇಣೀಕರಣವನ್ನು ಶಾಶ್ವತಗೊಳಿಸುವ ರಾಜಕಾರಣ.

ಪ್ರಜಾತಾಂತ್ರಿಕತೆ ಮತ್ತು ಸಮಾನತೆಯ ಮೌಲ್ಯಗಳು ಸರ್ವಮಾನ್ಯವಾಗುತ್ತಿರುವ ಈ ಆಧುನಿಕ ಯುಗದಲ್ಲಿ ದಲಿತರ ಮತ್ತು ಶೂದ್ರರ ದಾಸ್ಯವನ್ನು ಪುನರುಜ್ಜೀವಗೊಳಿಸುವ ಮತ್ತು ಅದನ್ನು ದಾಸ್ಯಕ್ಕೊಳಗಾದವರೇ ಒಪ್ಪಿಕೊಳ್ಳುವಂತೆ ಮಾಡುವ ಅತಿಕ್ರೂರ ರಾಜಕೀಯ ಆಕ್ರಮಣವೇ ‘ಹಿಂದುತ್ವ’. ಅದಕ್ಕೆ ಸಾಂಸ್ಕೃತಿಕ ರಾಜಕಾರಣದ ಮುಸುಕಿದ್ದರೂ ಹಿಂದುತ್ವವೆಂಬುದು ಆಧುನಿಕ ಯುಗದಲ್ಲಿ ಬ್ರಾಹ್ಮಣೀಯ ಮೌಲ್ಯಗಳ ಅಂದರೆ ಸಾಮಾಜಿಕ ತಾರತಮ್ಯ, ಆರ್ಥಿಕ ಶೋಷಣೆ ಮತ್ತು ಸಾಂಸ್ಕೃತಿಕ ಗುಲಾಮಗಿರಿಯನ್ನು ಮರುಸ್ಥಾಪಿಸಬಯಸುವ ಫ್ಯಾಸಿಸ್ಟ್ ರಾಜಕಾರಣವೇ ಆಗಿದೆ.

ಹಿಂದುತ್ವವಾದಿಗಳು ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ಭೌತಿಕ ಅಸ್ತಿತ್ವದ ಮೇಲೆ ದಾಳಿ ನಡೆಸಿ, ಅವರನ್ನು ನಿರ್ನಾಮ ಮಾಡುವ ಪ್ರಯತ್ನವನ್ನು ಸಾವರ್ಕರ್ ಕಾಲದಿಂದಲೂ ಬಹಿರಂಗವಾಗಿಯೇ ಮಾಡಿಕೊಂಡು ಬರುತ್ತಿದ್ದಾರೆ. ಹಿಂದುತ್ವವಾದಿಗಳ ಈ ಅಜೆಂಡಾವನ್ನು ಅರ್ಥಮಾಡಿಕೊಳ್ಳುವುದು ಸುಲಭ. ಆದರೆ ಅದೇ ಸಮಯದಲ್ಲಿ ಅದು ದಲಿತ ಮತ್ತು ಅತಿಶೂದ್ರರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಸ್ತಿತ್ವಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದ್ದರಿಂದಲೇ ಈ ಹಿಂದುತ್ವ ಮುಸ್ಲಿಮರಿಗೆ ಹಾಗೂ ಕ್ರಿಶ್ಚಿಯನ್ನರಿಗೆ ಎಷ್ಟು ದೊಡ್ಡ ಶತ್ರುವೋ ಅಷ್ಟೇ ಮಟ್ಟಿಗೆ ಎಲ್ಲಾ ದಲಿತ ಹಾಗೂ ಶೂದ್ರ ಜನ ಸಾಮಾನ್ಯರಿಗೂ ಅಷ್ಟೇ ದೊಡ್ಡ ಶತ್ರುವಾಗಿದೆ. ಹೀಗಾಗಿಯೇ ಇದು ಭಾರತದ ಅತಿ ದೊಡ್ಡ ಆಂತರಿಕ ಶತ್ರುವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾರತದ ಈ ಆಂತರಿಕ ಶತ್ರುವಾದ ‘ಹಿಂದುತ್ವ’ಕ್ಕೆ ಭಾರತದ ಜನತೆ ಎದುರಿಸುತ್ತಿರುವ ಅತಿದೊಡ್ಡ ಬಾಹ್ಯ ಶತ್ರುವಾಗಿರುವ ಅಮೆರಿಕ ನೇತೃತ್ವದ ನವವಸಾಹತುವಾದಿ ಶಕ್ತಿಗಳೊಂದಿಗೆ ಮತ್ತು ಅವರು ವಿಶ್ವದ ಜನತೆಯ ಮೇಲೆ ಹರಿಬಿಟ್ಟಿರುವ ಜಾಗತೀಕರಣವೆಂಬ ಆಕ್ರಮಣದ ಜೊತೆ ಸ್ನೇಹ ಸಂಬಂಧವಿದೆ. ಅದು ಆರ್ಥಿಕ  ದಾಸ್ಯವನ್ನು ಬಣ್ಣದ ಮಾತುಗಳಿಂದ ಹೇರುತ್ತಿದ್ದರೆ, ‘ಹಿಂದುತ್ವ’ವು ಅದನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳಲು ಬೇಕಾದ ದಾಸ್ಯದ ಮನಃಸ್ಥಿತಿಯನ್ನು ಪುನರುಜ್ಜೀವಗೊಳಿಸುತ್ತಿದೆ. ಈ ನವ ವಸಾಹತುವಾದಿ ಶಕ್ತಿಗಳು ಪ್ರಾಣಿಲೋಕದಲ್ಲಿ ಸಂಭವಿಸುವಂತೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲೂ ಬಲವಿದ್ದವನು ಮಾತ್ರ ಬದುಕಬೇಕೆಂಬ (Social Darvinism) ಸಿದ್ಧಾಂತವನ್ನು ಎತ್ತಿ ಹಿಡಿಯುತ್ತಿದ್ದರೆ, ಹಿಂದುತ್ವವಾದಿ ಶಕ್ತಿಗಳು ‘ಸಾಮಾಜಿಕ ತಾರತಮ್ಮ ಸಹಜ ಮತ್ತು ಅನುವಾರ್ಯ’ ಎಂಬ ಮನುವಾದಿ ಸಿದ್ಧಾಂತವನ್ನು ಎತ್ತಿಹಿಡಿದು ಶೋಷಣೆ ಮತ್ತು ದಮನಕ್ಕೆ ಸಮರ್ಥನೆ ಒದಗಿಸುತ್ತವೆ.

ಇದನ್ನು ಓದಿದ್ದೀರಾ?: ಮಹಾತ್ಮ ಗಾಂಧಿ | ಸಂಭಾಷಣೆಯಲ್ಲಿ ರೂಪುಗೊಂಡ ಲೋಕಹಿತ ಚಿಂತಕ

ಆದ್ದರಿಂದಲೇ ಪ್ರಖ್ಯಾತ ಚಿಂತಕ ಪ್ರೊ.ಕೆ.ಎನ್ ಪಣೀಕ್ಕರ್‍‌ರವರು ‘ಹಿಂದುತ್ವದ ಷಡ್ಯಂತ್ರಕ್ಕೆ ದಲಿತರು ಸುಲಭವಾಗಿ ಬಲಿಯಾಗಲು ಇರುವ ಇತರ ಕಾರಣಗಳಲ್ಲಿ ಜಾಗತೀಕರಣವೂ ಒಂದು’ ಎಂದು ಅಭಿಪ್ರಾಯ ಪಡುತ್ತಾರೆ. ಹೀಗಾಗಿ ಪ್ರಾಯಶಃ ಆಧುನಿಕ ಜಗತ್ತಿನಲ್ಲಿ ಹುಟ್ಟಿಕೊಂಡ ಅತ್ಯಂತ ಪ್ರತಿಗಾಮಿ, ಅತ್ಯಂತ ಬರ್ಬರ ರಾಜಕೀಯ ಸಿದ್ಧಾಂತವಾದ ‘ಫ್ಯಾಸಿಸಂ’ ಪರಿಕಲ್ಪನೆಯ ಭಾರತೀಕರಣವೇ ‘ಹಿಂದುತ್ವ’ ಎಂದರೆ ತಪ್ಪಾಗಲಾರದು.

ಫ್ಯಾಸಿಸಂ ಎಂದರೆ ಕೇವಲ ಕ್ರೌರ್ಯವಲ್ಲ, ಕೇವಲ ಬರ್ಬರತೆಯಲ್ಲ. ಫ್ಯಾಸಿಸಂನ ಅಪಾಯವಿರುವುದು ಅದು ತನ್ನ ಈ ಎಲ್ಲಾ ಬರ್ಬರ ಕಾರ್ಯಾಚರಣೆಗೆ ಸಾಮಾಜಿಕ ಸಮ್ಮತಿಯನ್ನು ರೂಢಿಸಿಕೊಂಡಿರುವುದರಲ್ಲಿ ಮತ್ತು ಆ ಪ್ರಕ್ರಿಯೆಯಲ್ಲಿ ಇಡೀ ಸಮಾಜವನ್ನು ಬರ್ಬರಗೊಳಿಸುವುದರಲ್ಲಿ. ಗುಜರಾತಿನಲ್ಲಿ ನಡೆದ ಹತ್ಯಾಕಾಂಡದ ಪ್ರಮಾಣ ದೊಡ್ಡದಾಗಿದ್ದರೂ, ದಲಿತರ ಮೇಲೆ ಮತ್ತು ಮಹಿಳೆಯರ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಈ ಬಗೆಯ ಹತ್ಯಾಕಾಂಡಗಳು ಮತ್ತು ದೌರ್ಜನ್ಯಗಳು ನಡೆದುಕೊಂಡೇ ಬರುತ್ತಿವೆ. ಆದರೆ ಗುಜರಾತ್ ಹತ್ಯಾಕಾಂಡಕ್ಕೂ ಮತ್ತು ಇತರ ಪ್ರಕರಣಗಳಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಗುಜರಾತ್ ಹತ್ಯಾಕಾಂಡದಲ್ಲಿ ಪ್ರತ್ಯಕ್ಷವಾಗಿಯೂ ಸಾವಿರಾರು ಜನ – (ಅದರಲ್ಲಿ ದಲಿತರು, ಆದಿವಾಸಿಗಳು ಮತ್ತು ಮಹಿಳೆಯರೂ ಇದ್ದರು!) ಭಾಗವಹಿಸಿದರೆ, ಅದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದು ಕೋಟ್ಯಂತರ ಮಂದಿ. ಹೀಗಾಗಿಯೇ ಮನುಕುಲವೇ ತಲೆತಗ್ಗಿಸುವಂತಹ ಹತ್ಯಾಕಾಂಡ ನಡೆಸಿದ ನಂತರವೂ ನರೇಂದ್ರಮೋದಿ ಹಿಂದಿಗಿಂತಲೂ ಹೆಚ್ಚಿನ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಇದು ಮೋದಿಯ ರಾಜಕಾರಣ, ಇಡೀ ಸಮಾಜದ ನ್ಯಾಯಪ್ರಜ್ಞೆಯನ್ನು ಅಳಿಸಿಹಾಕಿ ಸಮಾಜವನ್ನು ಬರ್ಬರಗೊಳಿಸಿರುವುದನ್ನಷ್ಟೇ  ಸೂಚಿಸುತ್ತದೆ.

ಫ್ಯಾಸಿಸಂನ ಅತಿದೊಡ್ಡ ಅಪಾಯವಿದು. ಇತಿಹಾಸದಲ್ಲಿ ಇಂದಿರಾಗಾಂಧಿಯ ಎಮೆರ್ಜೆನ್ಸಿ ಕಾಲದ ನಿರಂಕುಶ ಆಡಳಿತ, ಪೊಲೀಸ್ ದೌರ್ಜನ್ಯ, ದೆಹಲಿಯ ಸಿಖ್ ಹತ್ಯಾಕಾಂಡ ಅಥವಾ ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಸಶಸ್ತ್ರ ಪಡೆಗಳ ದೌರ್ಜನ್ಯ ಕೆಲವು ಮಾನದಂಡಗಳಲ್ಲಿ ಗುಜರಾತನ್ನು ಮೀರಿಸಬಹುದು. ಆದರೆ ಅವೆಲ್ಲದರ ಬಗ್ಗೆ ಸರ್ಕಾರ ಏನೇ ಹೇಳಿದರೂ ಸಮಾಜದಲ್ಲಿ ಅದರ ಬಗ್ಗೆ ಖಂಡನೆಯಿತ್ತು. ಆದರೆ ಗುಜರಾತ್ ಹತ್ಯಾಕಾಂಡ ಸಮಾಜವನ್ನೇ ಛಿದ್ರಗೊಳಿಸಿದೆ. ಸಮಾಜದಲ್ಲಿ ಪರಸ್ಪರರಲ್ಲಿ ಇದ್ದ ವಿಶ್ವಾಸವನ್ನು ವಿಧ್ವಂಸಗೊಳಿಸಿ ಸಮಾಜವನ್ನು ಮತಧರ್ಮಗಳ ಆಧಾರದಲ್ಲಿ ಧ್ರುವೀಕರಣಗೊಳಿಸಿದೆ. ಹೀಗಾಗಿಯೇ ಹಿಂದುತ್ವದ ತ್ರಿಶೂಲದಿಂದ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಮಾತ್ರ ಸಾಯುತ್ತಿಲ್ಲ, ಬದಲಿಗೆ ಸಮಾಜದ ನ್ಯಾಯಪ್ರಜ್ಞೆ ಮತ್ತು ನೈತಿಕ ಮೌಲ್ಯಗಳೂ ಸಾಯುತ್ತಿವೆ.

ಒಂದು ಸಮಾಜದಲ್ಲಿ ನ್ಯಾಯಪ್ರಜ್ಞೆ ಸತ್ತು ಅನ್ಯಾಯವೇ ರಾಜ್ಯಭಾರ ಮಾಡುತ್ತಿದ್ದರೆ ಬಲಿಯಾಗುವುದು ಕೇವಲ ಅಲ್ಪಸಂಖ್ಯಾತರು ಮಾತ್ರವಲ್ಲ, ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಎಲ್ಲಾ ದುರ್ಬಲ, ಶೋಷಿತ ಮತ್ತು ದಮನಿತ ವರ್ಗಗಳು ಈ ಅನ್ಯಾಯದ ರಾಜ್ಯಭಾರದಲ್ಲಿ ಬಲಿಯಾಗುತ್ತಲೇ ಹೋಗುತ್ತವೆ. ಈವರೆಗೆ ಹೋರಾಟದಿಂದ ಗಳಿಸಿಕೊಂಡಿದ್ದೆಲ್ಲವನ್ನೂ ಕಳೆದುಕೊಳ್ಳುತ್ತಾ ತಮಗೇ ಗೊತ್ತಿಲ್ಲದಂತೆ ಗುಲಾಮಗಿರಿಯತ್ತ ಸರಿಯುತ್ತಾ ಹೋಗುತ್ತವೆ.

ಆದ್ದರಿಂದಲೇ ಹಿಂದುತ್ವ ರಾಜಕಾರಣ ಉಚ್ಛ್ರಾಯ ದೆಸೆಗೆ ಹೋದ ಕಾಲಘಟ್ಟದಲ್ಲೇ ಜಾಗತೀಕರಣ, ಉದಾರೀಕರಣದ ಆಕ್ರಮಣಗಳು ಜನಸಾಮಾನ್ಯರ ಮೇಲೆ ನಡೆಯುತ್ತಲಿವೆ. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಈ ದೇಶದ ಶೋಷಿತ ಜನತೆ ಪಡೆದುಕೊಂಡಿದ್ದ ಆಹಾರ, ಶಿಕ್ಷಣ, ಆರೋಗ್ಯ, ವಸತಿಯಂತಹ ಎಲ್ಲಾ ಹಕ್ಕುಗಳನ್ನು ಮತ್ತು ಸೌಲಭ್ಯಗಳನ್ನೂ ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮೇಲೆ ಆಗುತ್ತಿರುವ ಈ ಅನ್ಯಾಯವನ್ನು ಅರ್ಥಮಾಡಿಕೊಳ್ಳುವ, ಅದನ್ನು ತಮ್ಮ ಮೇಲೆ ಹೇರುತ್ತಿರುವ ಶಕ್ತಿಗಳನ್ನು ಗುರುತಿಸುವ ಹಾಗೂ ಅದರ ವಿರುದ್ಧ ಹೋರಾಡುವ ಪ್ರಜ್ಞೆಯನ್ನೇ ಇಂದು ಜಾಗತೀಕರಣ ಮತ್ತು ಹಿಂದುತ್ವವಾದಿ ಶಕ್ತಿಗಳು ಭ್ರಷ್ಟಗೊಳಿಸಿಬಿಟ್ಟಿವೆ. ಇದು ಈ ಹಿಂದುತ್ವ ಫ್ಯಾಸಿಸಂ ಭಾರತದ ಜನತೆಗೆ ಮತ್ತು ಪ್ರಜಾತಂತ್ರಕ್ಕೆ ಒಡ್ಡಿರುವ ಅತಿದೊಡ್ಡ ಅಪಾಯ.

ಈ ಅಪಾಯವು ಹಿಂದುತ್ವದ ಪ್ರಭಾವಕ್ಕೆ ದಲಿತರು ಹೆಚ್ಚೆಚ್ಚು ಒಳಗಾಗುತ್ತಿರುವುದರಲ್ಲಿ ಎದ್ದು ಕಾಣುತ್ತಿದೆ. ಅನ್ಯಾಯ, ಸಾಮಾಜಿಕ ತಾರತಮ್ಯ, ಶೋಷಣೆ ಮತ್ತು ದಮನಗಳನ್ನು ಮುಂದುವರೆಸಲು ಹಿಂದುತ್ವವು ನ್ಯಾಯ, ಸಾಮಾಜಿಕ ನ್ಯಾಯ, ಸಮಾನತೆ ಇನ್ನಿತರ ಮೌಲ್ಯಗಳ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ಹಿಂದುತ್ವದ ವಿರುದ್ಧ ಸಮಾಜಕ್ಕೆ ನಾಯಕತ್ವ ಕೊಟ್ಟು ಯಾವ ದಲಿತ ಶಕ್ತಿಗಳು ಈ ನ್ಯಾಯ ಸಂಗ್ರಾಮದ ದಂಡನಾಯಕರಾಗಬೇಕಿತ್ತೋ ಅಂಥಾ ಶಕ್ತಿಗಳೇ ಇಂದು ಹಿಂದುತ್ವದ ಪಡೆಗಳ ಕಾಲಾಳುಗಳಾಗಿರುವುದು ಸಂದರ್ಭದ ಗಂಭೀರತೆಯನ್ನೂ, ಅಪಾಯವನ್ನೂ, ವಿಪರ್ಯಾಸವನ್ನೂ ಸೂಚಿಸುತ್ತಿದೆ.

ಇದನ್ನು ಓದಿದ್ದೀರಾ?: ನೂರರ ನೆನಪು | ಕಾವಾಡಿಗರ ಹಟ್ಟಿಯಿಂದ ಹಾಲಿವುಡ್ ಅಂಗಳಕ್ಕೆ ಜಿಗಿದ ಮೈಸೂರ್ ಸಾಬು

ಗುಜರಾತಿನಲ್ಲಿ ಹಾಗೂ ಇತ್ತೀಚೆಗೆ ದೇಶದ ಇತರೆಡೆಗಳಲ್ಲಿ ಮುಸ್ಲಿಮರ ಮೇಲೆ ಹಿಂದುತ್ವವಾದಿಗಳು ನಡೆಸುತ್ತಿರುವ ಹಲವು ಹತ್ಯಾಕಾಂಡಗಳಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಬಹಳಷ್ಟು ಕಡೇ ತಾವೇ ನೇರವಾಗಿ ಮುಸ್ಲಿಂ ವಿರೋಧಿ ಗಲಭೆಗಳಲ್ಲಿ ಭಾಗವಹಿಸದಿದ್ದರೂ ಪರೋಕ್ಷವಾಗಿ ಮುಸ್ಲಿಮರ ಮೇಲಿನ ದಾಳಿಯ ಹಿಂದುತ್ವದ ರಾಜಕಾರಣದ ಸಮರ್ಥನೆಯನ್ನು ಭಿಡೆಯಿಲ್ಲದೆ ಮಾಡುತ್ತಿದ್ದಾರೆ. ಕೆಲವು ಕಡೆ ಹಿಂದುತ್ವವಾದಿಗಳ ಬರ್ಬರ ಆಕ್ರಮಣದ ಬಗ್ಗೆ ದಲಿತ ಶಕ್ತಿಗಳು ಮೌನವಾಗುಳಿದು ಹಿಂದುತ್ವವಾದಿಗಳ ದೌರ್ಜನ್ಯಕ್ಕೆ ಸಮ್ಮತಿ ವ್ಯಕ್ತಪಡಿಸುತ್ತಿದ್ದರೆ, 2003ರ ಚುನಾವಣೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ, ದಲಿತ ನಾಯಕಿ ಮಾಯಾವತಿ ಮಾಡಿದಂತೆ ಬಹಿರಂಗವಾಗಿಯೇ ನರೇಂದ್ರಮೋದಿ ನಿರಪರಾಧಿ ಎಂಬ ಪ್ರಚಾರಕ್ಕೆ ತಮ್ಮ ಧ್ವನಿಯನ್ನೂ ಸೇರಿಸುತ್ತಿದ್ದಾರೆ. ದೇಶದ ಹಲವು ಕಡೆ ಮತ್ತು ವಿಶೇಷವಾಗಿ ಕರ್ನಾಟಕದಲ್ಲೂ ಹಸಿ ಹಸಿ ಅವಕಾಶವಾದ ಮತ್ತು ಸ್ವಾರ್ಥಗಳಿಂದಾಗಿ ಹಿಂದೊಮ್ಮೆ ಜಾಗೃತ ದಲಿತ ಶಕ್ತಿಯ ಪ್ರತೀಕಗಳಾಗಿದ್ದ ವ್ಯಕ್ತಿಗಳು ಮತ್ತು ಶಕ್ತಿಗಳು ಹಿಂದುತ್ವವಾದಿ ಶಕ್ತಿಗಳೆಡೆ ಸಾಂಸ್ಕೃತಿಕ ವಲಸೆ ಪ್ರಾರಂಭಿಸಿದ್ದಾರೆ.

ಇದು ಈ ದೇಶದ ತುಳಿತಕ್ಕೊಳಗಾದ, ದಮನಿತ ಶೋಷಿತ ಜನರ ದೃಷ್ಟಿಯಿಂದ ಹಾಗೂ ಈ ದೇಶದ ಪ್ರಜಾಸತ್ತೆಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಆತಂಕಕಾರಿ ವಿದ್ಯಮಾನವಾಗಿದೆ. ಈ ದೇಶದ ಸಮಾಜವಾದೀ
ಮತ್ತು ಪ್ರಜಾಸತ್ತಾತ್ಮಕ ಭವಿಷ್ಯದಲ್ಲೇ ದಲಿತರ ವಿಮೋಚನೆಯ ಬೆಳಕು ಇದೆಯೆಂದು ಈ ದೇಶದ ದಮನಿತ ಜನರೆಲ್ಲರ ನಾಯಕ ಮತ್ತು ದಾರ್ಶನಿಕ ಅಂಬೇಡ್ಕರ್ ಸ್ಪಷ್ಟವಾದ ಮಾತುಗಳಲ್ಲಿ ಹಲವಾರು ಬಾರಿ ಹೇಳಿದ್ದರು. ಈ ಪ್ರಜಾತಂತ್ರೀಕರಣವು ಕೇವಲ ಪ್ರಭುತ್ವ ರಚನೆಯ ಮಟ್ಟದಲ್ಲಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲೂ ಬಲುಬೇಗನೆ ನಡೆಯದಿದ್ದರೆ ಈ ದೇಶದ ಸ್ವಾತಂತ್ರ್ಯಕ್ಕೆ ಏನೂ ಅರ್ಥವಿರುವುದಿಲ್ಲವೆಂದೂ ಸ್ಪಷ್ಟವಾಗಿ ಘೋಷಿಸಿದ್ದರು. ಆದರೆ ಕಳೆದ ಆರು ದಶಕಗಳಲ್ಲಿ ಅದರಲ್ಲೂ ಕಳೆದ ಎರಡು ದಶಕಗಳಲ್ಲಿ ಹಿಂದುತ್ವವಾದಿ ಶಕ್ತಿಗಳು ಅಂಬೇಡ್ಕರ್ ಪ್ರತಿಪಾದಿಸಿದ ಮೌಲ್ಯಗಳಾದ ಪ್ರಜಾತಂತ್ರ ಮತ್ತು ಸಮಾಜವಾದದ ಮೇಲೆಯೇ ಸಮರ ಸಾರಿದ್ದಾರೆ. ಈ ಸಮರಕ್ಕೆ ದಲಿತರನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದು ಹೇಗೆ ಸಾಧ್ಯವಾಯಿತು?

ಆನಂದ್ ತೇಲ್ತುಂಬ್ಡೆಯವರು ಒಂದು ಕಡೆ ಹೇಳಿರುವಂತೆ, ಅಂಬೇಡ್ಕರ್ ಅವರನ್ನು ಈ ದೇಶದ ದಲಿತ ಸಮೂಹ ದಾರಿದೀಪವಾಗಿ ಕಾಣುವ ಬದಲಿಗೆ ‘ಪ್ರತಿಮೆ’ಯಂತೆ ಕಾಣತೊಡಗಿದ್ದೂ ಇದಕ್ಕೆ ಒಂದು ಪ್ರಮುಖ ಕಾರಣ. ಅದೇ ರೀತಿ ಸಮಕಾಲೀನ ದಲಿತ ಸಂಘಟನೆಗಳು ಇಡೀ ಸಮಾಜವನ್ನೇ ಕ್ರಾಂತಿಕಾರಿಯಾಗಿ ಪುನಾರಚನೆ ಮಾಡಬೇಕೆಂಬ ಅಂಬೇಡ್ಕರ್ ವಾದವನ್ನು ದಲಿತರಿಗೆ ಅಧಿಕಾರ ಬೇಕೆಂಬ ಹಂಬಲಿಕೆಯ ಮಟ್ಟಕ್ಕೆ ಇಳಿಸಿದ್ದೂ ಸಹ, ವ್ಯವಸ್ಥೆಗೆ ಅದರಲ್ಲೂ ಹಿಂದುತ್ವವಾದಿಗಳಿಗೆ ಅಂಬೇಡ್ಕರ್‍‌ರನ್ನು ಅಪವ್ಯಾಖ್ಯಾನಗೊಳಿಸಿ ತಮ್ಮ ಅಜೆಂಡಾಗಳಿಗೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಾಗುವಂತೆ ಮಾಡಿತು.

ಹೀಗೆ ದಲಿತರ ಮೇಲೆ ಹೆಚ್ಚಾಗುತ್ತಿರುವ ಹಿಂದುತ್ವದ ಪ್ರಭಾವವು ಸಾರಾಂಶದಲ್ಲಿ ಈ ದೇಶದ ಪ್ರಜಾಸತ್ತೆ ಮತ್ತು ಸಮಾಜವಾದಿ ಕನಸುಗಳ ವಿರುದ್ಧ ಮತ್ತು ಈ ದೇಶದ ಜನತೆಯ ವಿರುದ್ಧ ಹಿಂದುತ್ವವಾದಿಗಳು ನಡೆಸುತ್ತಿರುವ ಪ್ರತಿಗಾಮಿ ಆಕ್ರಮಣದ ತಾತ್ಕಾಲಿಕ ವಿಜಯದ ಕಥನವನ್ನೇ ತೆರೆದಿಡುತ್ತದೆ.

ಆದರೆ ಈ ದೇಶದ ಭವಿಷ್ಯದ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾಗಿರುವ ಈ ವಿಷಯದ ಬಗ್ಗೆ ಈ ದೇಶದ ಬುದ್ದಿಜೀವಿಗಳು ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಯಾವಾಗ ಗುಜರಾತ್ ಹತ್ಯಾಕಾಂಡದಲ್ಲಿ ಆದಿವಾಸಿಗಳ ಮತ್ತು ದಲಿತರ ಪಾಲುದಾರಿಕೆ ಬೆಳಕಿಗೆ ಬಂತೋ, ಆಗ ದಲಿತರ ಮೇಲೆ ದಟ್ಟವಾಗುತ್ತಿರುವ ಹಿಂದುತ್ವದ ಪ್ರಭಾವವನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ತಡೆಗಟ್ಟಲು ಪ್ರಗತಿಪರ ರಾಜಕಾರಣವು ಏನು ಮಾಡಬೇಕೆಂಬ ಬಗ್ಗೆ ಹಲವು ಅಧ್ಯಯನಗಳು ಪ್ರಾರಂಭವಾದವು. ಏಕೆಂದರೆ ಈ ಪ್ರಕ್ರಿಯೆ ಕೇವಲ ಗುಜರಾತಿಗೆ ಮಾತ್ರ ಸೀಮಿತವಾದದ್ದೇನೂ ಆಗಿರಲಿಲ್ಲ.

(ಅಕ್ಷರ ಲೋಕದಲ್ಲಿ ಹಂಗಿಲ್ಲದ ಅಲೆಮಾರಿ ಪುಸ್ತಕದ ‘ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ’ ಎಂಬ ಲೇಖನದ ಆಯ್ದ ಭಾಗ)

ಪ್ರೊ. ಬಿ. ಗಂಗಾಧರಮೂರ್ತಿಯವರು (ಬಿಜಿಎಂ) ಬರೆದ ನಲವತ್ತೆರಡು ವೈವಿಧ್ಯಮಯ ಬರಹಗಳ ಎರಡು ಸಂಪುಟಗಳ ಬಿಡುಗಡೆ ಫೆ. 8 ರಂದು ಗೌರಿಬಿದನೂರಿನಲ್ಲಿ ಜರುಗಲಿದೆ.

ಪ್ರತಿ ಸಂಪುಟದ ಬೆಲೆ ರೂ. 220, ಪ್ರಕಾಶನ: ಆದಿಮ ಸಾಂಸ್ಕೃತಿಕ ಕೇಂದ್ರ, ಕೋಲಾರ. ಸಂಪರ್ಕ: 9449073119, 9480273292, 9449041430

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೈಚಾರಿಕ ನಿಲುವು, ಬರಹಗಳ ಮೂಲಕ ಕನ್ನಡಿಗರಿಗೆ ಓದುವ ಅಭಿರುಚಿ ಪೋಷಿಸಿದವರು ‘ಕೆ.ಟಿ.ಗಟ್ಟಿ’

ಇಂದು ನಮ್ಮನ್ನು ಅಗಲಿದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿಯವರು ತನ್ನ ವೈಚಾರಿಕ ನಿಲುವು,...

ಅಂಬೇಡ್ಕರ್ ಫಿಲಾಸಫಿ | ಮನುಷ್ಯನ ಮನಸ್ಸು – ಬೌದ್ಧಿಕ ಕ್ರಿಯಾಶೀಲತೆ ಅರಳುವುದೇ ಮಾನವೀಯ ಮೌಲ್ಯಗಳಿಂದ

ಮನುಷ್ಯ ಮನುಷ್ಯರ ನಡುವೆ ತರತಮ ನೀತಿಯನ್ನು ಪಸರಿಸಿರುವ ʼವರ್ಣ ಪದ್ಧತಿʼಯನ್ನು ನಿರಾಕರಿಸಿ...

ಅಂದು ಬ್ರಾಹ್ಮಣ ಹೆಣ್ಣುಮಕ್ಕಳಿಗೆಂದೇ ಮಂಗಳೂರಿನಲ್ಲಿ ಶಾಲೆ ತೆರೆದಿದ್ದ ಮಿಷನರಿಗಳು

ಹಣ, ಅಧಿಕಾರದ ಅಮಲು ತಲೆಗೆ ಅಡರಿದಾಗ ತಮ್ಮದೇ ಅಜ್ಜಿ, ಮುತ್ತಜ್ಜಿಯಂದಿರು ಹೇಗೆ...

ನೆನಪು | ಸ್ಸಾರಿ ಪ್ರೊಫೆಸರ್… ಪೂರ್ವಗ್ರಹಪೀಡಿತನಾಗಿದ್ದೆ!

ನಂಜುಂಡಸ್ವಾಮಿ ಮತ್ತು ಲಂಕೇಶ್- ಇಬ್ಬರೂ ಕನ್ನಡನಾಡು ಕಂಡ ಮಹಾನ್ ಚಿಂತಕರು. ಆ...