ಕಾಂಗ್ರೆಸ್ `ಕಡ್ಡಿಯನ್ನು ಗುಡ್ಡ’ ಮಾಡುತ್ತಿರುವ ಬಿಜೆಪಿ ಮತ್ತು ಮಾರಿಕೊಂಡ ಮೀಡಿಯಾ

Date:

ಕರ್ನಾಟಕದ ಹೊಸ ಮುಖ್ಯಮಂತ್ರಿ ಆಯ್ಕೆಯಲ್ಲಿ ಘನಘೋರ ವಿಳಂಬ ಆಗತೊಡಗಿದೆ, ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿಗಾಗಿ ಭಾರೀ ಕಾದಾಟ ನಡೆದಿದೆ ಎಂಬುದಾಗಿ ಬಿಜೆಪಿ ಮತ್ತು ಮಾರಿಕೊಂಡ ಮೀಡಿಯಾ ದೇಶಾದ್ಯಂತ ಬೊಬ್ಬೆ ಹೊಡೆಯುತ್ತಿವೆ. ಕಾಂಗ್ರೆಸ್ ಅಥವಾ ಇತರೆ ಪ್ರತಿಪಕ್ಷಗಳ ಅಂಗಳದ ಕಡ್ಡಿಯನ್ನು ಗುಡ್ಡ ಮಾಡುವುದು ಮತ್ತು ಬಿಜೆಪಿ ಅಂಗಳದ ಗುಡ್ಡವನ್ನು ಕಡ್ಡಿ ಮಾಡಿ ತೋರಿಸುವುದು ಬಿಜೆಪಿ ಮತ್ತು ಮಾರಿಕೊಂಡ ಮೀಡಿಯಾದ ಜಂಟಿ ಕಾರ್ಯಸೂಚಿ.

ಬೆಲೆ ಏರಿಕೆ, ಭ್ರಷ್ಚಾಚಾರದ ಬೇಗೆಯಲ್ಲಿ ಬಡಜನರ ನಿತ್ಯ ಬದುಕನ್ನು ಬೇಯಿಸಿ ನರಕ ಮಾಡಿದ್ದ ಬಿಜೆಪಿಯನ್ನು ರಾಜ್ಯದ ಜನಸಾಮಾನ್ಯರು ಸೋಲಿಸಿದ್ದಾರೆ. ಈ ಸೋಲು ಅಂತಿಂಥ ಸೋಲಲ್ಲ, ಅಪಮಾನಕರ ಸೋಲು, ಶೋಚನೀಯ ಸೋಲು. ಬಹುಕಾಲ ನೆಕ್ಕಿಕೊಂಡು ವಾಸಿ ಮಾಡಿಕೊಳ್ಳಬೇಕಿರುವ ಘೋರ ಪರಾಭವ.

ಘಟಾನುಘಟಿಗಳೂ, ಚಂಡಪ್ರಚಂಡರೂ ಆದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಜೋಡಿ ರಾಜ್ಯವನ್ನು ಬಿರುಗಾಳಿಯಂತೆ ಸುತ್ತಿ ಅಬ್ಬರಿಸಿತು. ಆಳುವ ಪಕ್ಷ ಹಣದ ಹೊಳೆಯನ್ನೇ ಹರಿಸಿತು. ಮೋದಿ ಮಡಿಲಲ್ಲಿ ಆಡುವ ಮುದ್ದಿನ ನಾಯಿಯಾಗಿತ್ತು ಬಹುತೇಕ ಮೀಡಿಯಾ. ಮಾರಿಕೊಂಡಿರುವ ಈ ಮೀಡಿಯಾ ಪ್ರತಿಪಕ್ಷಗಳನ್ನು ಪ್ರಶ್ನಿಸುತ್ತ ಬಂದಿದೆಯೇ ವಿನಾ ಸರ್ಕಾರ ನಡೆಸುತ್ತಿರುವವರನ್ನು ಅಲ್ಲ. ಕರ್ನಾಟಕದ ವಿಧಾನಸಭಾ ಚುನಾವಣೆಗಳೂ ಈ ಮಾತಿಗೆ ಹೊರತಾಗಿರಲಿಲ್ಲ. ಕಾಂಗ್ರೆಸ್- ಜಾತ್ಯತೀತ ಜನತಾದಳ ಎರಡೂ ಪ್ರತಿಪಕ್ಷಗಳು ಚುನಾವಣೆಯ ಉದ್ದಕ್ಕೂ ಮೀಡಿಯಾದ ಅವಗಣನೆ ಮತ್ತು ಪೂರ್ವಗ್ರಹಕ್ಕೆ ತುತ್ತಾಗಿದ್ದವು.

ಸಿದ್ದರಾಮಯ್ಯ ಅವರ ಜನಪ್ರಿಯತೆ ಮತ್ತು ಡಿ.ಕೆ ಶಿವಕುಮಾರ್ ಅವರ ಸಂಪನ್ಮೂಲ ಮತ್ತು ಸಂಘಟನಾ ಸಾಮರ್ಥ್ಯಗಳು ಗೆಲುವಿನ ಹಿಂದೆ ಇದ್ದಿರಬಹುದು. ಆದರೆ ಈ ಗೆಲುವು ಕೇವಲ ಇವರಿಬ್ಬರ ಗೆಲುವಲ್ಲ. ಕರ್ನಾಟಕದ ದೀನದುರ್ಬಲರು- ಜಾತ್ಯತೀತರ ಗೆಲುವು. ದಲಿತ ಸಂಘಟನೆಗಳ ಬಲ, ಬಹುತ್ವ ಕರ್ನಾಟಕ, ಎದ್ದೇಳು ಕರ್ನಾಟಕದಂತಹ ನಾಗರಿಕ ಸಂಘಟನೆಗಳ ಶ್ರಮ, ಹಿಂದುಳಿದ ವರ್ಗಗಳು ಮತ್ತು ಕೆಲಮಟ್ಟಿಗಿನ ಲಿಂಗಾಯತರ ಬೆಂಬಲ, ರಾಹುಲ್ ಗಾಂಧೀ ಅವರ ಭಾರತ್ ಜೋಡೋ ಯಾತ್ರೆಯ ಪಾತ್ರವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ದುರಾಡಳಿತದ ವಿರುದ್ಧ ಭುಗಿಲೆದ್ದ ಆಡಳಿತ ವಿರೋಧಿ ಆಕ್ರೋಶ ಬಿಜೆಪಿಯನ್ನು ನೆಲಕಚ್ಚಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದೇಶದಲ್ಲಿ ಬಿತ್ತಲಾಗಿರುವ ಭಯದ ಸಂಸ್ಕೃತಿಯ ನಡುವೆ ಅಗಣಿತ ಅಡೆತಡೆಗಳನ್ನು ಎದುರಿಸಿ ಕಾಂಗ್ರೆಸ್ ಗೆದ್ದು ಮೇಲೆದ್ದಿರುವ ವೈಖರಿ ಕಣ್ಣು ಕುಕ್ಕುವಂತಹುದು. ಮೋದಿ-ಶಾ ನಿರ್ಮಿಸಿ ನಿಲ್ಲಿಸಿರುವ ಅತಿ ಆತ್ಮವಿಶ್ವಾಸದ ಮತ್ತು ಘೋರ ಅಹಂಕಾರದ ಬಿಜೆಪಿಯನ್ನು ಹೇಗೆ ಸೋಲಿಸಬಹುದು ಎಂಬುದರ ಮಾದರಿಯೊಂದನ್ನು ಕರ್ನಾಟಕವು ದೇಶದ ಮುಂದಿಟ್ಟಿದೆ. ಪ್ರತಿಪಕ್ಷಗಳು ಕಲಿಯಬೇಕಾದ ಪಾಠಗಳನ್ನು ರೂಪಿಸಿಕೊಟ್ಟಿದೆ.

ಈ ಚುನಾವಣೆ ವರ್ಷದ ಹಿಂದೆ ಕದ ಬಡಿದಿದ್ದಾಗಲೇ ಸಿದ್ದು-ಶಿವಕುಮಾರ್ ನಡುವಣ ಕುರ್ಚಿ ಪೈಪೋಟಿ ಬಿಜೆಪಿ ವಿರೋಧದ ಆಟವನ್ನು ಕೆಡಿಸೀತು ಎಂಬ ಕಳವಳ ರಾಜ್ಯವನ್ನು ಕಾಡಿತ್ತು. ಆದರೆ ಈ ಇಬ್ಬರೂ ನಾಯಕರು ಚುನಾವಣೆಯ ಉದ್ದಕ್ಕೂ ಗೆಳೆತನವನ್ನು ತೋರಿದರು. ಒಡಕು ಕೆಡುಕಿನ ಶಂಕೆಗಳನ್ನು ಸುಳ್ಳು ಮಾಡಿದರು. ಪ್ರಬುದ್ಧವಾಗಿ ನಡೆದುಕೊಂಡರು.

ಆದರೆ ಕಾಂಗ್ರೆಸ್ ಸಾಧಿಸಿದ ಭಾರೀ ಗೆಲುವು ಪಕ್ಷದ ಹೈಕಮಾಂಡಿನ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಇದೊಂದು ವಿಡಂಬನೆಯೇ ಸರಿ. ಮುಖ್ಯಮಂತ್ರಿ ಹುದ್ದೆಗೆ ಇಬ್ಬರು ನಾಯಕರೂ ಅರ್ಹರೇ ಹೌದು. ಆದರೆ ಸಂವಿಧಾನದಲ್ಲಿರುವುದು ಒಂದೇ ಮುಖ್ಯಮಂತ್ರಿ ಹುದ್ದೆ. ಒಂದು ಕುರ್ಚಿಯಲ್ಲಿ ಇಬ್ಬರು ಕುಳಿತುಕೊಳ್ಳುವ ಅವಕಾಶ ಇಲ್ಲ. ಸೋಲಿನ ಗಾಯವನ್ನು ನೆಕ್ಕಿಕೊಳ್ಳುತ್ತ ಅಪಮಾನವನ್ನು ನುಂಗಿ ಪ್ರತೀಕಾರಕ್ಕಾಗಿ ಕಾಯುತ್ತಿದೆ ಬಿಜೆಪಿ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಕಾತರಿಸಿದೆ. ಡೀಕೇ ಮೇಲಿರುವ ಕೇಸುಗಳ ಕೆಂಡವನ್ನು ಕೆದರಿ ಗಾಳಿ ಹಾಕುತ್ತಿದೆ. ಡೀಕೇ ಮುಖ್ಯಮಂತ್ರಿ ಆದರೆ ಅವರನ್ನು ತಾಸುಗಟ್ಟಲೆ, ದಿನಗಟ್ಟಲೆ ಕೂರಿಸಿ ‘ವಿಚಾರಣೆ’ಗೆ ಗುರಿಪಡಿಸಲು ಇ.ಡಿ., ಇನ್ಕಮ್ ಟ್ಯಾಕ್ಸ್ ಹಾಗೂ ಸಿಬಿಐ ನಂತಹ ಏಜೆನ್ಸಿಗಳನ್ನು ತುದಿಗಾಲಲ್ಲಿ ನಿಲ್ಲಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯೊಬ್ಬರನ್ನು ಭಾರೀ ಮುಜುಗರಕ್ಕೆ ಸಿಕ್ಕಿಸುವ ತಯಾರಿಗಳು ಜರುಗಿವೆ. ಡಿ.ಕೆ.ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ಸಿಬಿಐ ಮುಖ್ಯಸ್ಥರ ಹುದ್ದೆಯಲ್ಲಿ ಕೂರಿಸಿದ ಹಿಂದಿನ ಮರ್ಮ ಇದೇ ಎಂಬುದು ಬೆಳಕಿನಷ್ಟೇ ನಿಚ್ಚಳ.

ಬೆಲೆ ಏರಿಕೆಯಲ್ಲಿ ಬಳಲಿದ್ದ ಜನತೆಯನ್ನು ಸಂತೈಸುವ ಐದು ಜನಪ್ರಿಯ ಯೋಜನೆಗಳ ಆಶ್ವಾಸನೆಯನ್ನು ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ದಿನದಿಂದಲೇ ಜಾರಿಗೆ ತರಬೇಕಿದೆ. ಇದೊಂದು ಭಾರೀ ಜವಾಬ್ದಾರಿ. ಈ ಹಿಂದೆ ಆಡಳಿತದಲ್ಲಿ ದಕ್ಷತೆ ತೋರಿರುವ ಮತ್ತು ಅನ್ನಭಾಗ್ಯ ಮುಂತಾದ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸು ನಿರ್ವಹಣೆಯಲ್ಲೂ ಹೆಸರು ಗಳಿಸಿರುವವರು. ಮುಂದಿನ ವರ್ಷ ಲೋಕಸಭಾ ಚುನಾವಣೆಗಳು ಕದ ಬಡಿದಿವೆ. ಕೊಟ್ಟ ವಚನವನ್ನು ಈಡೇರಿಸಿ, ಉತ್ತಮ ಜನಪರ ಆಡಳಿತವನ್ನು ನೀಡದೆ ಹೋದರೆ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಸೊನ್ನೆ ಸುತ್ತಬೇಕಾದ ದುರ್ಗತಿ ತಪ್ಪುವುದಿಲ್ಲ.

ಈ ಎಲ್ಲ ಕಾರಣಗಳಿಗಾಗಿ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಅತ್ಯಗತ್ಯ. ಸಿದ್ದರಾಮಯ್ಯ ಈಗಾಗಲೆ ಒಂದು ಅವಧಿಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತವರು. ಎರಡನೆಯ ಈ ಅವಧಿಯನ್ನು ಅಗತ್ಯ ಬಿದ್ದರೆ ಶಿವಕುಮಾರ್ ಜೊತೆ ಹಂಚಿಕೊಳ್ಳಬೇಕು. ಡಿ.ಕೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿಕೊಂಡು ಸಮರ್ಥವಾಗಿ ಪಕ್ಷವನ್ನು ಮುನ್ನಡೆಸಿದ್ದಾರೆ. ಅವರ ಕೊಡುಗೆ ದೊಡ್ಡದು. ಪಕ್ಷದ ಸಂಘಟನೆಯನ್ನು ಜೀವಂತವಿಟ್ಟು ಹೋರಾಟಕ್ಕೆ ಹುರಿಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು ಹೌದು.

ಆದರೆ ಹಳೆಯ ಮೈಸೂರು ಪ್ರದೇಶದ ದೇವೇಗೌಡರು- ಕುಮಾರಸ್ವಾಮಿಯವರ ಭದ್ರಕೋಟೆಯನ್ನು ತಾವು ಏಕಾಂಗಿಯಾಗಿ ಕೆಡವಿದ್ದೇನೆ ಎಂದು ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೆ ದಾವೆ ಹೂಡಿದ್ದಾರೆ. ಈ  ಲೆಕ್ಕಾಚಾರವನ್ನು ಪರಿಗಣಿಸುವುದೇ ಆದರೆ ಈ  ಸಲ ದಾಖಲೆ ಪ್ರಮಾಣದ ಲಿಂಗಾಯತರು ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದಿದ್ದಾರೆ. ಅವರೂ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದರೆ ಪರಿಸ್ಥಿತಿ ಎಲ್ಲಿಗೆ ಮುಟ್ಟೀತು ಎಂಬುದನ್ನು ಆಲೋಚಿಸಬೇಕಿದೆ.

ಶಿವಕುಮಾರ್ ತಾವೇ ಮುಖ್ಯಮಂತ್ರಿ ಎಂಬುದಾಗಿ ಹಟ ಹಿಡಿದಿದ್ದಾರೆ. ಯಾವುದೇ ರಾಜಕೀಯ ಪಕ್ಷದಲ್ಲಿ ಹುದ್ದೆಗಳಿಗಾಗಿ ಆಂತರಿಕ ಸ್ಪರ್ಧೆ ಪೈಪೋಟಿ ಇರುವುದು ಸ್ವಾಭಾವಿಕ ಮತ್ತು ಆಂತರಿಕ ಜನತಂತ್ರದ ಲಕ್ಷಣ ಕೂಡ. ಆದರೆ ಸಾರ್ವಜನಿಕವಾಗಿ ಇದೊಂದು ಅಧಿಕಾರಕ್ಕಾಗಿ ನಡೆಸುವ ಕಚ್ಚಾಟದ ಹಂತ ಮುಟ್ಟಬಾರದು. ಮುಖ್ಯಮಂತ್ರಿಯ ಆಯ್ಕೆ ಇನ್ನೂ ಎರಡು- ಮೂರು ದಿನ ಹಿಡಿದೀತು ಎಂಬುದಾಗಿ ಕಾಂಗ್ರೆಸ್ ವರಿಷ್ಠ ಸುರ್ಜೇವಾಲಾ ಬುಧವಾರ ಮಧ್ಯಾಹ್ನ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ- ಶಿವಕುಮಾರ್ ತಿಕ್ಕಾಟ ಬಿಕ್ಕಟ್ಟಿನತ್ತ ಸಾಗಿದೆ ಎಂಬುದು ಸ್ಪಷ್ಟವಾಗತೊಡಗಿದೆ. ಘನ ಗೆಲುವನ್ನು ಅಪಮಾನಿಸುವ ಈ ಅಸಹ್ಯವನ್ನು ಮತದಾರರು ಸುಲಭಕ್ಕೆ ಕ್ಷಮಿಸುವುದಿಲ್ಲ.

ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಇದೆಯೆಂಬ ಸಂಗತಿ ಕಾಂಗ್ರೆಸ್ ಹೈಕಮಾಂಡ್ ಗೆ ಮೊದಲೇ ಗೊತ್ತಿತ್ತು. ಈ ಚುನಾವಣೆಯಲ್ಲಿ ಗೆಲ್ಲುವ ಅಚಲ ನಂಬಿಕೆಯೂ ಪಕ್ಷಕ್ಕೆ ಇತ್ತು. ಹೀಗಿದ್ದಾಗ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು, ಎಂತಹ ರಾಜೀಸೂತ್ರವನ್ನು ಹೆಣೆಯಬೇಕು ಎಂದು ಹೋಮ್ ವರ್ಕ್ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ನ್ಯಾಯಸಮ್ಮತ.
ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿರುವ ಮತ್ತು ಕೆಲವೇ ರಾಜ್ಯಗಳಲ್ಲಿ ಸರ್ಕಾರ ಹೊಂದಿರುವ ಕಾರಣ ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿರುವುದೂ ಇಂದಿನ ಬಿಕ್ಕಟ್ಟಿನ ಹಿಂದಿನ ಮುಖ್ಯ ಕಾರಣಗಳಲ್ಲೊಂದು. ಮೋದಿ-ಶಾ ಹೇಳಿದವರೇ ಬಿಜೆಪಿಯಲ್ಲಿ ಮುಖ್ಯಮಂತ್ರಿ ಎಂಬಂತಹ ಪರಿಸ್ಥಿತಿ, ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಇಂದಿರಾಗಾಂಧೀ ಅವರ ಕಾಲದಲ್ಲಿ ಮುಖ್ಯಮಂತ್ರಿಯಿರಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೂ ಹೈಕಮಾಂಡ್ ಮಾತೇ ಅಂತಿಮ ಎಂಬ ಸ್ಥಿತಿ ಇತ್ತು. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡುಗಳ ಸ್ಥಿತಿ ಅದಲುಬದಲಾಗಿದೆ.

ಕರ್ನಾಟಕದ ಹೊಸ ಮುಖ್ಯಮಂತ್ರಿ ಆಯ್ಕೆಯಲ್ಲಿ ಘನಘೋರ ವಿಳಂಬ ಆಗತೊಡಗಿದೆ, ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿಗಾಗಿ ಭಾರೀ ಕಾದಾಟ ನಡೆದಿದೆ ಎಂಬುದಾಗಿ ಬಿಜೆಪಿ ಮತ್ತು ಮಾರಿಕೊಂಡ ಮಾಧ್ಯಮ ದೇಶಾದ್ಯಂತ ಬೊಬ್ಬೆ ಹೊಡೆಯುತ್ತಿವೆ. ಕಾಂಗ್ರೆಸ್ ಅಥವಾ ಇತರೆ ಪ್ರತಿಪಕ್ಷಗಳ ಅಂಗಳದ ಕಡ್ಡಿಯನ್ನು ಗುಡ್ಡ ಮಾಡುವುದು ಮತ್ತು ಬಿಜೆಪಿ ಅಂಗಳದ ಗುಡ್ಡವನ್ನು ಕಡ್ಡಿ ಮಾಡಿ ತೋರಿಸುವುದು ಬಿಜೆಪಿ ಮತ್ತು ಮಾರಿಕೊಂಡ ಮೀಡಿಯಾದ ಜಂಟಿ ಕಾರ್ಯಸೂಚಿ. ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧೀ, ಸೋನಿಯಾಗಾಂಧೀ ಮುಂತಾದವರ ಜೊತೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಮಾತುಕತೆ ನಡೆದಾಗ ಅಲ್ಲಿ ತಮ್ಮ ಮೈಕ್ರೋಫೋನುಗಳನ್ನು ಇಟ್ಟು ಕೇಳಿಸಿಕೊಂಡರೇನೋ ಎಂಬಷ್ಟು ಖಚಿತವಾಗಿ ಹೀಗೆಯೇ ನಡೆದಿದೆ ಎಂಬುದಾಗಿ ವರದಿ ಮಾಡುತ್ತಿವೆ ಮಾಧ್ಯಮಗಳು. ವದಂತಿಗಳು—ಊಹಾಪೋಹಗಳನ್ನು ಪುಂಖಾನುಪುಂಖವಾಗಿ ಹರಿಯಬಿಡುತ್ತಿವೆ.

ಇದನ್ನು ಓದಿದ್ದೀರಾ?: ಕಾಂಗ್ರೆಸ್‌ಗೆ ಅಹಿಂದ ಬಲ; ಬಲಾಢ್ಯ ಜಾತಿಗಳ ಅಬ್ಬರದಲ್ಲಿ ಅನಾಥ ಜಾತಿಗಳ ದನಿ ಕೇಳಿಸುವುದಾದರೂ ಹೇಗೆ?

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಪ್ರಚಂಡ ಜೋಡಿಯ ಅಬ್ಬರದ ಪ್ರಚಾರಕ್ಕೆ ಉಂಟಾದ ಮುಖಭಂಗದಿಂದ ಬಿಜೆಪಿ ಮತ್ತು ಮಾರಿಕೊಂಡ ಮೀಡಿಯಾ ಹತಾಶಗೊಂಡಿವೆ.

ಮಧ್ಯಪ್ರದೇಶದಲ್ಲಿ ವರ್ಷಗಟ್ಟಲೆ ಹೊತ್ತಿ ಉರಿದು ಈಗಲೂ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡಿರುವ ಉಮಾ ಭಾರತಿ ಮತ್ತು ಶಿವರಾಜಸಿಂಗ್ ಕದನವನ್ನು ಬಿಜೆಪಿ ಮರೆತಂತೆ ನಟಿಸಿದೆ.

ಈಗ 2017ಕ್ಕೆ ಹೋಗೋಣ. 14 ವರ್ಷಗಳ ನಂತರ ಉತ್ತರಪ್ರದೇಶದಲ್ಲಿ ಬಿಜೆಪಿ ಭಾರೀ ಗೆಲುವು ಗಳಿಸಿತ್ತು. ಫಲಿತಾಂಶ ಹೊರಬಿದ್ದದ್ದು ಮಾರ್ಚ್ 11ರಂದು. ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಅಖೈರುಗೊಳಿಸಿದ್ದು ಮಾರ್ಚ್. 18ರಂದು. ಮನೋಜ್ ಸಿನ್ಹಾ ಬದಲಿಗೆ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಿದ್ದು ಮಾರ್ಚ್ 19ರಂದು. ಅರ್ಥಾತ್ ತನ್ನ ಮುಖ್ಯಮಂತ್ರಿಯನ್ನು ಆರಿಸಲು ಬಿಜೆಪಿ ತೆಗೆದುಕೊಂಡ ಅವಧಿ ಎಂಟು ದಿನಗಳು.

2021ರ ಅಸ್ಸಾಮ್ ವಿಧಾನಸಭಾ ಚುನಾವಣೆಗಳಲ್ಲಿ ಸತತ ಎರಡನೆಯ ಸಲ ಭಾರೀ ಗೆಲುವು ಗಳಿಸಿದ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ತೀರ್ಮಾನಿಸಲು ಬಿಜೆಪಿಗೆ ಒಂಬತ್ತು ದಿನಗಳು ಬೇಕಾಯಿತು.

ಮೇ ಎರಡಕ್ಕೆ ಅಸ್ಸಾಮ್ ಚುನಾವಣೆ ಫಲಿತಾಂಶಗಳು ಹೊರಬೀಳುತ್ತವೆ. ಸರ್ಮ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಮೇ 12ರಂದು. ಈ ನಡುವಣ ಒಂಬತ್ತು ದಿನಗಳ ಕಾಲ ಬಿಜೆಪಿ ಹೈಕಮಾಂಡು ಏನು ಮಾಡುತ್ತಿತ್ತು? ಈ ವಿಳಂಬವನ್ನು ಏನೆಂದು ಕರೆಯಬೇಕು?

ಮಹಾರಾಷ್ಟ್ರದಲ್ಲಿ 2022ರಲ್ಲಿ ಕಾಂಗ್ರೆಸ್-ಶಿವಸೇನೆ-ಎನ್.ಸಿ.ಪಿ. ಸರ್ಕಾರವನ್ನು ಉರುಳಿಸಿದ ನಂತರ ಬಿಜೆಪಿ-ಬಂಡುಕೋರ ಶಿವಸೇನೆ ಸರ್ಕಾರ ರಚನೆಯಾಯಿತು. ಶಿಂಧೆ ಮತ್ತು ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಜೂನ್ 30ರಂದು. ಅವರಿಗೆ ಸಂಪುಟ ದೊರೆತದ್ದು ಆಗಸ್ಟ್ 10ರಂದು. ಮಂತ್ರಿ ಮಂಡಲ ನೀಡಲು 41 ದಿನಗಳ ಬಾರೀ ವಿಳಂಬ ಯಾಕೆ ಆಯಿತು ಎಂದು ಬಿಜೆಪಿ ಮತ್ತು ಮಾರಿಕೊಂಡ ಮೀಡಿಯಾ ಉತ್ತರ ಹೇಳಬೇಕು.

ಕರ್ನಾಟಕದಲ್ಲಿ 2019ರಲ್ಲಿ 17 ಮಂದಿ ಕಾಂಗ್ರೆಸ್ ಶಾಸಕರ ರಾಜೀನಾಮೆಯ ನಂತರ ಕಾಂಗ್ರೆಸ್- ಜೆ.ಡಿ.ಎಸ್. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಪದಚ್ಯುತಗೊಂಡಿತು. ಜುಲೈ 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಿಸುವ ಅನುಮತಿಯನ್ನು ನೀಡಿದ್ದು 25 ದಿನಗಳ ನಂತರ ಆಗಸ್ಟ್ 20ರಂದು. ಇದೇ ಅವಧಿಯಲ್ಲಿ ತೀವ್ರ ನೆರೆ ಹಾವಳಿ ರಾಜ್ಯವನ್ನು ಕಾಡಿತ್ತು. 22 ಜಿಲ್ಲೆಗಳು ಪ್ರವಾಹದಿಂದ ಜರ್ಝರಿತಗೊಂಡಿದ್ದವು. ಯಡಿಯೂರಪ್ಪ ದೆಹಲಿಗೆ ಹಲವು ಬಾರಿ ಎಡತಾಕಿದರೂ ಅಮಿತ್ ಶಾ ಅಥವಾ ಮೋದಿ ಭೇಟಿಯಿಲ್ಲದೆ ಬರಿಗೈಯಲ್ಲಿ ಹಿಂತಿರುಗಬೇಕಾಗಿ ಬಂದಿತ್ತು.

ಈ 25 ದಿನಗಳ ಜನದ್ರೋಹಿ ವಿಳಂಬಕ್ಕೆ ಯಾವ ಸಮಜಾಯಿಷಿ ಹೇಳಲಾಗುತ್ತದೆ?

2020ರಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಕೆಡವಿದ ಬಿಜೆಪಿ, ಶಿವರಾಜಸಿಂಗ್ ಚೌಹಾಣ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿತ್ತು. ಮಾರ್ಚ್ 23ರಂದು ಪ್ರಮಾಣವಚನ ಸ್ವೀಕರಿಸಿದ ಚೌಹಾಣ್ ಏಪ್ರಿಲ್ 21ರ ತನಕ 29 ದಿನಗಳ ಕಾಲ ಏಕವ್ಯಕ್ತಿ ಮಂತ್ರಿಮಂಡಲವಾಗಿ ಕೆಲಸ ಮಾಡಬೇಕಾಯಿತು.

ಕೋವಿಡ್ ಮಹಾಸಾಂಕ್ರಾಮಿಕ ಅಬ್ಬರಿಸಿದ್ದ ಈ ಅವಧಿಯಲ್ಲಿ ಆರೋಗ್ಯ ಮಂತ್ರಿಯ ಹುದ್ದೆ ಖಾಲಿ ಬಿದ್ದಿತ್ತು. 29 ದಿನಗಳ ಈ ವಿಳಂಬವನ್ನು ಯಾವ ಹೆಸರಿನಿಂದ ಕರೆಯುತ್ತೀರಿ ಎಂಬ ಪ್ರಶ್ನೆಯನ್ನು ಬಿಜೆಪಿ ಮತ್ತು ಮಾರಿಕೊಂಡ ಮೀಡಿಯಾವನ್ನು ಕೇಳಲೇಬೇಕಿದೆ.

ತಮ್ಮ ತಟ್ಟೇಲಿ ಬಿದ್ದಿರೋ ಹೆಗ್ಗಣ ಬಿಟ್ಟು, ಬೇರೆಯವರ ತಟ್ಟೇಲಿ ಬಿದ್ದಿರೋ ನೊಣವನ್ನು ಎತ್ತಿ ಆಡಿದ್ದರಂತೆ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...