ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ

Date:

  • ಜೈನ ಮುನಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಆರಗ ಜ್ಞಾನೇಂದ್ರ
  • ಕಾಂಗ್ರೆಸ್ ಈಗ ಕೊಲೆ ಭಾಗ್ಯ ನೀಡಿದೆ: ಮಾಜಿ ಸಚಿವ ಆರ್‌ ಅಶೋಕ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ದ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಎದುರು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ಬಿಜೆಪಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಜೈನ ಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು. ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ಕಾಲ್ನಡಿಗೆ ಜಾಥಾ ನಡೆಸಿದರು.

ಈ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಜೈನ ಮುನಿಗಳ ಹತ್ಯೆಯ ಹಿಂದೆ ಸಮಾಜ‌ಘಾತಕ ಶಕ್ತಿಗಳು ಇವೆ. ಮರಳು ಮಾಫಿಯಾ ತಡೆಗಟ್ಟಲು ಹೋದ ಪೊಲೀಸರ ಕೊಲೆಯಾಗಿದೆ. ಅಹಿಂಸೆ ಪರಮಧರ್ಮ ಎನ್ನುವ ಜೈನಮುನಿಗಳ ಕೊಲೆ ಆಗಿದೆ. ಇಂತಹವರನ್ನು ಕೊಲೆ ಮಾಡುವ ಮೂಲಕ ಸಮಾಜಘಾತಕ ಶಕ್ತಿಗಳು ನಮಗೆ ಸಂದೇಶ ನೀಡಿವೆ. ಆದರೆ, ದಪ್ಪ ಚರ್ಮದ ಈ ಸರ್ಕಾರ, ಈ ಬಗ್ಗೆ ಯಾವುದೇ ನಿಗಾ ವಹಿಸಿಲ್ಲ” ಎಂದು ಆರೋಪಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸದನದ ಒಳಗಡೆ ಗೃಹ ಸಚಿವರು ಕೊಲೆ ಮುಚ್ಚಿಹಾಕುವ ಅಧಿಕಾರಿಗಳನ್ನು ಹೊಗಳಿ ಪ್ರಕರಣ ಮುಚ್ಚಿ ಹಾಕಲು ಸಹಾಯ ಮಾಡುತ್ತಿದ್ದಾರೆ. ಬರ್ಬರ ಕೊಲೆಗೆ ನ್ಯಾಯ ಕೊಡಿಸುವ ಬದಲು ಅವರ ರಕ್ಷಣೆಗೆ ಸರ್ಕಾರ ಮುಂದಾಗಿದೆ. ತಮ್ಮ ಭಂಡತನ ಬಿಡದೆ ಸಮಾಜಘಾತಕ ಶಕ್ತಿಗಳ ರಕ್ಷಣೆಗೆ ಮುಂದಾಗಿದೆ” ಎಂದು ಕಿಡಿಕಾರಿದರು.

“ತಿ ನರಸಿಪುರ ಕೊಲೆ ಪ್ರಕರಣದ ಹಿಂದಿನ ದಿನ ನಡೆದ ಗಲಾಟೆ ಪೊಲೀಸರ ಗಮನಕ್ಕೆ ಬಂದರೂ ಅದರತ್ತ ಅವರು ಗಮನ ನೀಡದೆ ಹೋಗಿದ್ದಾರೆ. ಇಂತಹ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಸರ್ಕಾರ ಈ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಪೊಲೀಸ್ ಅಧಿಕಾರಿಗಳ ನಿಷ್ಠೆ ಕಾನೂನು ಪಾಲನೆ ಮಾಡುವತ್ತ ಇರಬೇಕೇ ಹೊರತು ವ್ಯಕ್ತಿ ನಿಷ್ಠೆ ಪಾಲನೆ ಮಾಡುವ ಕಡೆಗೆ ಅಲ್ಲ. ನಿಮ್ಮ ತನಿಖೆಯನ್ನು ಜನ ಗಮನಿಸುತ್ತಾರೆ. ನೀವು ಎಚ್ಚರಿಕೆಯಿಂದಿರಿ” ಎಂದರು.

“ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ನಿರ್ದೇಶನವನ್ನು ರಾಜ್ಯ ಸರ್ಕಾರಕ್ಕೆ ನೀಡಲು ರಾಜ್ಯಪಾಲರಿಗೆ ಮನವಿ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ಸರ್ಕಾರದ ನಡೆ ನೋಡಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುತ್ತೇವೆ” ಎಂದು ಹೇಳಿದರು.

ಜೈನ ಮುನಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಆರಗ ಜ್ಞಾನೇಂದ್ರ

ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, “ನನ್ನ ಕ್ಷೇತ್ರದಲ್ಲಿ ಹಾಡಹಗಲ್ಲಿನಲ್ಲಿಯೇ ಮಚ್ಚು ತೆಗೆದುಕೊಂಡು ಓಡಾಡುತ್ತಿದ್ದಾರೆ. ಕೊಲೆಗೇಡಿಗಳೆಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ಹೊರಗಡೆ ಬಂದಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜೈನ ಮುನಿಗಳ ಹತ್ಯೆ ಸಾಮಾನ್ಯ ಹತ್ಯೆಯಲ್ಲ. ಈ ಹತ್ಯೆ ಹಿಂದೆ ವಿದೇಶಿ ಕೈವಾಡ ಇರುವ ಹಾಗೆ ಕಾಣುತ್ತಿದೆ. ಈ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು” ಎಂದು ಆಗ್ರಹಿಸಿದರು.

“ನಮ್ಮ ಪೋಲಿಸರು ಸರಿಯಾಗಿ ಕೆಲಸ ಮಾಡುತ್ತಾರೆ. ಆದರೆ, ಅವರ ಮೇಲೆ ಒತ್ತಡ ಇದೆ, ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂಬುದು ನಮ್ಮ ಬೇಡಿಕೆ” ಎಂದರು.

“ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಮಾಜ ವಿದ್ರೋಹಿಗಳಿಗೆ ಶಕ್ತಿ ಬಂದಿದೆ. ಜೈನ ಮುನಿ ಸಾವು ನೋಡಿದರೆ, ಐಸೀಸ್ ಉಗ್ರರು ಮಾಡದಂತಹ ಕೊಲೆ ಮಾಡಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ‌, ಈ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಬೇಕು. ಕೊಲೆ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ಆಗಬೇಕು. ಪೊಲೀಸ್ ಇಲಾಖೆಯಲ್ಲಿ ಕೇಸರೀಕರಣ ಹಸಿರೀಕರಣ ನಡೆಯುತ್ತಿದೆ. ಈ ಸರ್ಕಾರ ನಿಷ್ಪಕ್ಷಪಾತ ತನಿಖೆ ಆಗಬೇಕು‌ ರಾಜ್ಯದ ಎಲ್ಲ ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ನ್ಯಾಯ ಸಿಗಬೇಕು” ಎಂದು ಆಗ್ರಹಿಸಿದರು.

ಕಾಂಗ್ರೆಸ್ ಈಗ ಕೊಲೆ ಭಾಗ್ಯ ನೀಡಿದೆ: ಆರ್‌ ಅಶೋಕ

ಮಾಜಿ ಸಚಿವ ಆರ್‌ ಅಶೋಕ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಶಾಂತಿ ಮೂಡಿದೆ. ಹಲವು ಭಾಗ್ಯವಳನ್ನು ನೀಡಿದ ಕಾಂಗ್ರೆಸ್ ಈಗ ಕೊಲೆ ಭಾಗ್ಯ ನೀಡಿದೆ. ಹಿಂದೂ ಕಾರ್ಯಕರ್ತರು ಹಾಗೂ ಜೈನ್ ಮುನಿಗಳ ಹತ್ಯೆ ಹಿಂದೆ ಷಡ್ಯಂತ್ರ ಇದೆ‌” ಎಂದು ಆರೋಪಿಸಿದರು.

“ಸರ್ಕಾರಕ್ಕೆ ನೈತಿಕತೆ ಇಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಗೂಂಡಾಗಳು, ಹಪ್ತಾವಸೂಲಿ ಮಾಡುವವರು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರು ಮುನ್ನೆಲೆಗೆ ಬಂದಿದ್ದಾರೆ. ಕಾಂಗ್ರೆಸ್ ಇವರ ಪರ ಇದೆ. ಲಜ್ಜೆ ಗೆಟ್ಟ ಸರ್ಕಾರ,ಟ್ರಾನ್ಪರ್ ದಂಧೆ ಮಾಡುತ್ತಿದೆ. ಈ ಸರ್ಕಾರದ ಕಿವಿಹಿಂಡಿ ಬುದ್ದಿ ಹೇಳಲು ಗವರ್ನರ್ ಗೆ ಮನವಿ ಮಾಡುತ್ತೇವೆ. ಇದಕ್ಕಾಗಿ ಈಗ ವಿಧಾನಸೌಧ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ

ರಾಜ್ಯದಲ್ಲಿ ಭಯದ ವಾತಾವರಣ ನೆಲೆಸಿದೆ: ಸುನೀಲ್‌ ಕುಮಾರ್‌

ಶಾಸಕ ಸುನೀಲ್ ಕುಮಾರ್ ಮಾತನಾಡಿ, “ರಾಜ್ಯ ಸರ್ಕಾರ ಬಂದು ಎರಡೇ ತಿಂಗಳಲ್ಲಿ ಹತ್ತು ಹದಿನೈದು ಘಟನೆಗಳು ನಡೆದಿವೆ. ಕಾನೂನು ಸುವ್ಯವಸ್ಥೆ ಹದಗೆಡುವ ಮಟ್ಟಿಗೆ ಘಟನೆಗಳು ನಡೀತಿವೆ. ಗುಂಡಾಗಿರಿ ವರ್ತನೆ ಹೆಚ್ಚಾಗಿದೆ. ರಾಷ್ಟ್ರೀಯ ವಿಚಾರ ಹೇಳುವ ವ್ಯಕ್ತಿಗಳ ವಿರುದ್ಧ ಹಲ್ಲೆ, ಕೊಲೆ, ದೌರ್ಜನ್ಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ಭಯದ ವಾತಾವರಣ ನೆಲೆಸಿದೆ. ಕಾನೂನಿನ ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸರ ಮೇಲೆ ಭಯ ಇಲ್ಲದಂತಾಗಿದೆ. ಜನ ದೊಡ್ಡ ಪ್ರಮಾಣದಲ್ಲಿ ಭಯಭೀತರಾಗಿದ್ದಾರೆ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವಂತೆ ಮನವಿ ಮಾಡುತ್ತೇವೆ. ಜೈನ ಮುನಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸದಿದ್ದರೆ ಮುಂದೆ ನಮ್ಮ ನಾಯಕರೆಲ್ಲ ಚರ್ಚೆ ಮಾಡಿ ಮುಂದಿನ‌ ಹೋರಾಟ ರೂಪಿಸುತ್ತೇವೆ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜಸ್ಥಾನ | ಮುಸಲ್ಮಾನರ ವಿರುದ್ಧ ಖುದ್ದು ದ್ವೇಷ ಭಾಷಣಗೈದ ಪ್ರಧಾನಿ ನರೇಂದ್ರ ಮೋದಿ!

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ಸುದ್ದಿಗಳು ಬರುತ್ತಿರುವ ನಡುವೆಯೇ...

ಜಪ್ತಿಯಾದ 2 ಕೋಟಿ ರೂ. ಬಿಜೆಪಿಗೆ ವಾಪಸ್‌; ಅಧಿಕಾರಿಗಳ ಮೇಲೆ ಕೃಷ್ಣ ಬೈರೇಗೌಡ ಗರಂ

"ನಾವೂ ಹೀಗೆ ಹಣದ ಮೂಲಕ ವಹಿವಾಟು ನಡೆಸಿದರೆ ನಮ್ಮ ಎಲ್ಲಾ ವಹಿವಾಟನ್ನು...

ಬೆಂಗಳೂರು | ಬಿಜೆಪಿಗೆ ಸೇರಿದ 2 ಕೋಟಿ ಹಣವನ್ನು ವಶಪಡಿಸಿಕೊಂಡ ಚುನಾವಣಾಧಿಕಾರಿಗಳು: ಎಫ್‌ಐಆರ್

ಬಿಜೆಪಿಗೆ ಸೇರಿದ ಸುಮಾರು ಎರಡು ಕೋಟಿಯಷ್ಟು ನಗದನ್ನು ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ...