ಕಾಂಗ್ರೆಸ್ನಲ್ಲಿ “ಮುಸ್ಲಿಂ ಮುಖ” ಯಾರಾಗಬೇಕು ಎಂಬ ದೀರ್ಘಕಾಲದ ಪೈಪೋಟಿ ಈ ಆಂತರಿಕ ವೈಷಮ್ಯದ ಹಿಂದಿನ ಮೂಲ ಕಾರಣವಾಗಿದೆ. ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಶಿಸ್ತು ಸಮಿತಿ ಮುಂದಾಗಿದೆಯಾದರೂ, ‘ವೋಟ್ ಬ್ಯಾಂಕ್’ ರಾಜಕಾರಣದಿಂದಾಗಿ ಕಠಿಣ ಕ್ರಮ ಜರುಗಿಸಲು ಹಿಂಜರಿಯುತ್ತಿದೆ. ವಿಶೇಷವಾಗಿ ಜಾತಿ ಸಮೀಕರಣ ಪ್ರಬಲವಾಗಿರುವ ಈ ಜಿಲ್ಲೆಯಲ್ಲಿ ನಾಯಕರನ್ನು ಪಕ್ಷದಿಂದ ಉಚ್ಚಾಟಿಸುವುದು ಅಥವಾ ಕ್ರಮ ತೆಗೆದುಕೊಳ್ಳುವುದು “ದುಬಾರಿ”ಯಾಗಲಿದೆ ಎಂಬ ಭಾವನೆ ಹೈಕಮಾಂಡ್ ಮಟ್ಟದಲ್ಲಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಕೇಳಿಬಂದಿರುವ ಈ ಟೀಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಖ್ಯವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ನಡೆಗಳು ಮುಸ್ಲಿಂ ಮತಗಳ ವಿಭಜನೆಗೆ ಕಾರಣವಾಯಿತೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್ ಅವರು ಇತ್ತೀಚೆಗಷ್ಟೇ (ಏಪ್ರಿಲ್ 11, 2026) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದು ಕಾಂಗ್ರೆಸ್ ಒಳಜಗಳವನ್ನು ಬೀದಿಗೆ ತಂದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡದೆ ಶಾಮನೂರು ಕುಟುಂಬಕ್ಕೆ (ಸಮರ್ಥ್ ಮಲ್ಲಿಕಾರ್ಜುನ್) ನೀಡಿದ್ದಕ್ಕೆ ಸಮುದಾಯದ ಒಂದು ವರ್ಗದಲ್ಲಿ ತೀವ್ರ ಅಸಮಾಧಾನವಿತ್ತು. ಪಕ್ಷದೊಳಗಿನ ಕೆಲವು ನಾಯಕರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಮತ್ತು ಅಲ್ಪಸಂಖ್ಯಾತ ನಾಯಕರ ನಡುವೆ ಒಡಕು ಮೂಡಿಸುತ್ತಿದ್ದಾರೆ ಎಂದು ಜಬ್ಬಾರ್ ದೂರಿದ್ದರು. ಈ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದರು. ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ಪಕ್ಷದ ಅಭ್ಯರ್ಥಿ ಸಮರ್ಥ್ ಪರ ಪ್ರಚಾರದಿಂದ ದೂರ ಉಳಿದಿದ್ದರು ಎಂಬ ಕಾರಣ ನೀಡಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ವಜಾಗೊಳಿಸಲಾಗಿದೆ. ಈ ಬೆಳವಣಿಗೆ ಅನೇಕ ಚರ್ಚೆಗಳನ್ನು ಮುನ್ನೆಲೆಗೆ ತಂದಿದೆ.
ಇನ್ನು, ಸಚಿವ ಜಮೀರ್ ಅಹ್ಮದ್ ಖಾನ್ ಅವರು ದಾವಣಗೆರೆ ಉಪಚುನಾವಣೆಯ ಪ್ರಚಾರದಿಂದ ಆರಂಭದಲ್ಲಿ ದೂರ ಉಳಿದಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ತಾವು ಕೇರಳ ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವುದಾಗಿ ಜಮೀರ್ ಸಮರ್ಥಿಸಿಕೊಂಡರೂ, ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಅಂತಹವರು ಜಮೀರ್ ಅವರ ನಡೆಯನ್ನು ಟೀಕಿಸಿದ್ದರು. ಕೆ.ಸಿ ವೇಣುಗೋಪಾಲ್ ನಿರ್ದೇಶನನದಂತೆ ಕೇರಳದಲ್ಲಿ ಅಲ್ಪ ಸಂಖ್ಯಾತ ಮತಗಳನ್ನು ಸೆಳೆಯುವುದಕ್ಕೆ ಜಮೀರ್ ಕಾಂಗ್ರೆಸ್ಗೆ ಆಧಾರವಾಗಿದ್ದರು ಎಂಬ ಚರ್ಚೆ ಕಾಂಗ್ರೆಸ್ ವಲಯದಿಂದಲೇ ಕೇಳಿ ಬಂದಿತ್ತು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್ ಅವರು ಸರಿಯಾಗಿ ಪ್ರಚಾರ ಮಾಡದ ಕಾರಣ ಮತ್ತು ಅವರ ಬೆಂಬಲಿಗರು ತಟಸ್ಥರಾಗಿದ್ದರಿಂದ ಮುಸ್ಲಿಂ ಮತಗಳು ಎಸ್ಡಿಪಿಐ (SDPI)ನಂತಹ ಪಕ್ಷಗಳತ್ತ ವಾಲಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರು ಹೆಚ್ಚಿನ ಮತ ಪಡೆಯುವುದು ಕಾಂಗ್ರೆಸ್ಗೆ ಹೊಡೆತ ನೀಡಲಿದೆ ಎಂಬ ಆತಂಕ ಪಕ್ಷದಲ್ಲಿದೆ. ಹಾಗಾಗಿ ಸಚಿವ ಸಂಪುಟದಿಂದ ಜಮೀರ್ ಅವರ ತಲೆದಂಡವಾಗಲಿದೆ ಎನ್ನುವ ಚರ್ಚೆಯನ್ನೂ ಎಬ್ಬಿಸಿದೆ. ಇವೆಲ್ಲವೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆಯೇ ಆಗುತ್ತಿದೆ ಎಂಬ ಮತ್ತೊಂದು ಟೀಕೆಯೂ ಇದೆ.
ಜಮೀರ್-ಜಬ್ಬಾರ್ ಮೇಲಿನ ಆಪಾದನೆ ಏನು ?
ಪಕ್ಷದ ಶಿಸ್ತು ಸಮಿತಿಯ ಮುಂದೆ ಸಲ್ಲಿಕೆಯಾಗಿರುವ ದೂರುಗಳ ಪ್ರಕಾರ, ಈ ಇಬ್ಬರು ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಣದ ಅಭ್ಯರ್ಥಿಗಳನ್ನು ಸೋಲಿಸಲು ಆಂತರಿಕವಾಗಿ ತಂತ್ರ ರೂಪಿಸಿದ್ದಾರೆ ಎಂಬ ಟೀಕೆಗಳಿವೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಸೋತರೆ, ಅದರ ನೇರ ಹೊಣೆ ಜಮೀರ್ ಮತ್ತು ಜಬ್ಬಾರ್ ಅವರ ಮೇಲೆ ಹಾಕಿ, ಅವರ ಮೇಲೆ ಶಿಸ್ತು ಕ್ರಮ ವಹಿಸುವುದಕ್ಕೆ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಸಲೀಂ ಅಹ್ಮದ್ ಮತ್ತು ಇತರರು ಹೈಕಮಾಂಡ್ಗೆ ಈ ಬಗ್ಗೆ ಪತ್ರ ಬರೆದಿದ್ದು, ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಜಮೀರ್ ಅವರನ್ನು ಕೈಬಿಡಬೇಕು ಎಂಬ ಒತ್ತಡವೂ ಹೆಚ್ಚುತ್ತಿದೆ.
ಎಸ್ಡಿಪಿಐ ಫ್ಯಾಕ್ಟರ್
ದಾವಣಗೆರೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಕೈತಪ್ಪಲು ಎಸ್ಡಿಪಿಐ ಪ್ರಬಲ ಪೈಪೋಟಿ ನೀಡುತ್ತಿರುವುದೇ ಮೂಲ ಕಾರಣ. “ಕಾಂಗ್ರೆಸ್ ಕೇವಲ ನಮ್ಮನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ, ಅಧಿಕಾರ ನೀಡುತ್ತಿಲ್ಲ” ಎಂಬ ಅಲ್ಪ ಸಂಖ್ಯಾತರಲ್ಲಿದ್ದ ಅಸಮಾಧಾನವನ್ನು ಜಮೀರ್ ಅಹ್ಮದ್ ಅವರಂತಹ ನಾಯಕರು ಶಮನಗೊಳಿಸಲು ಪ್ರಾಥಮಿಕವಾಗಿಯೂ ಯತ್ನಿಸಿಲ್ಲ ಎನ್ನುವುದು ಪಕ್ಷದ ಕೆಲವು ನಾಯಕರ ವಾದ.
ಮಾತ್ರವಲ್ಲದೇ, ಜಮೀರ್ ಮತ್ತು ಜಬ್ಬಾರ್ ವಿರುದ್ಧದ ಈ ಟೀಕೆಯು ಕೇವಲ ವೈಯಕ್ತಿಕವಲ್ಲ, ಇದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವಿನ “ಪ್ರಾಕ್ಸಿ ವಾರ್” (Proxy War) ಎಂದೇ ವಿಶ್ಲೇಷಿಸಲಾಗುತ್ತಿದೆ. ಉಪಚುನಾವಣೆಯ ಫಲಿತಾಂಶ ಈ ನಾಯಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಅದರ ಕಾರಣಕ್ಕಾಗಿಯೇ ತೆರೆಮರೆಯಲ್ಲಿ ನಡೆಯುತ್ತಿರುವ ಕಸರತ್ತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ʼಧನಿಕರ ಕ್ಲಬ್ʼ ಆಗಿ ಬದಲಾಗುತ್ತಿರುವ ರಾಜಕಾರಣ; ʼಧನ ಪ್ರಭುತ್ವʼವನ್ನು ಮೆರೆಸುತ್ತಿರುವ ಚುನಾವಣೆಗಳು
ಇನ್ನು, ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಈ ಹಿಂದೆ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ನೀಡಿದ ಕೆಲವು ಹೇಳಿಕೆಗಳು ವಿಶೇಷವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆ ಒಕ್ಕಲಿಗ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ಉಪಚುನಾವಣೆಯಲ್ಲಿ ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎನ್ನುವ ಆತಂಕ ಪಕ್ಷದ ಇತರ ಮುಸ್ಲಿಂ ನಾಯಕರನ್ನು ಅಸಮಾಧಾನಗೊಳಿಸಿತ್ತು. ಆದರೇ, ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರಿರಲಿಲ್ಲ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಆದರೇ, ದಾವಣಗೆರೆಯಲ್ಲಿ ಪರಿಸ್ಥಿತಿ ಬೇರೆಯದ್ದೇ ಇರುವುದರಿಂದ ಈಗ ಇಷ್ಟೆಲ್ಲಾ ಚರ್ಚೆಗಳು ಮೇಲೆ ಬಂದಿದೆ.
ಜಮೀರ್ ಮತ್ತು ಜಬ್ಬಾರ್ ಅವರ ಮಾತು, ನಡೆಗಳು ಸಮುದಾಯಕ್ಕೆ ಮತ್ತು ಪಕ್ಷಕ್ಕೆ ಹಿನ್ನಡೆ ತರುತ್ತವೆ ಎಂದು ಬಹಿರಂಗವಾಗಿಯೇ ಟೀಕಗಳು ವ್ಯಕ್ತವಾಗುತ್ತಿವೆ.
ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಶಿಸ್ತು ಸಮಿತಿ ಮುಂದಾಗಿದೆಯಾದರೂ, ‘ವೋಟ್ ಬ್ಯಾಂಕ್’ ರಾಜಕಾರಣದಿಂದಾಗಿ ಕಠಿಣ ಕ್ರಮ ಜರುಗಿಸಲು ಹಿಂಜರಿಯುತ್ತಿದೆ. ವಿಶೇಷವಾಗಿ ಜಾತಿ ಸಮೀಕರಣಗಳು ಪ್ರಬಲವಾಗಿರುವ ಈ ಜಿಲ್ಲೆಯಲ್ಲಿ ನಾಯಕರನ್ನು ಪಕ್ಷದಿಂದ ಉಚ್ಚಾಟಿಸುವುದು ಅಥವಾ ಕ್ರಮ ತೆಗೆದುಕೊಳ್ಳುವುದು “ದುಬಾರಿ”ಯಾಗಲಿದೆ ಎಂಬ ಭಾವನೆ ಹೈಕಮಾಂಡ್ ಮಟ್ಟದಲ್ಲಿದೆ.
ದಾವಣಗೆರೆಯ ರಾಜಕೀಯದಲ್ಲಿ “ನಿಷ್ಠೆ”ಗಿಂತ “ವೈಯಕ್ತಿಕ ವರ್ಚಸ್ಸು” ಮೇಲುಗೈ ಸಾಧಿಸಿದ್ದು, ಈಗ ಶಿಸ್ತು ಉಲ್ಲಂಘನೆ ಎಂಬ ಟೀಕೆಗೆ ಮೂಲ ಕಾರಣವಾಗಿದೆ.
ಸಮುದಾಯದ ನಾಯಕತ್ವಕ್ಕಾಗಿ ಪೈಪೋಟಿ
ಕಾಂಗ್ರೆಸ್ನಲ್ಲಿ “ಮುಸ್ಲಿಂ ಮುಖ” ಯಾರಾಗಬೇಕು ಎಂಬ ದೀರ್ಘಕಾಲದ ಪೈಪೋಟಿ ಈ ಆಂತರಿಕ ವೈಷಮ್ಯದ ಹಿಂದಿನ ಮೂಲ ಕಾರಣವಾಗಿದೆ. ಜನಪ್ರಿಯತೆ ಮತ್ತು ಮುಖ್ಯಮಂತ್ರಿಯವರಿಗೆ ಹತ್ತಿರವಾಗಿರುವುದು ಜಮೀರ್ ಅವರಿಗೆ ಬಲ ತಂದಿದೆ. ತನ್ವೀರ್ ಸೇಠ್ ಅವರಂತಹ ನಾಯಕರು ಹಳೆಯ ಕಾಲದ ಸಂಯಮದ ರಾಜಕಾರಣವನ್ನು ಬಯಸುತ್ತಾರೆ. ಜಮೀರ್ ಅವರಲ್ಲಿನ ಆರ್ಥಿಕ ಸಂಪನ್ಮೂಲ ಅವರ ರಾಜಕೀಯಕ್ಕೆ ಆಧಾರವಾಗಿರುವುದು ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಲವರಲ್ಲಿ ಇಲ್ಲ. ಇದ್ದರೂ ಜಮೀರ್ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುವುದಕ್ಕೆ ಬಳಸಿದಷ್ಟು ಉಳಿದವರು ಬಳಸುತ್ತಿಲ್ಲ. ಇವೆಲ್ಲಾ ಪಕ್ಷದಲ್ಲಿ ಮತ್ತು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ಜಮೀರ್ ಅವರ ಸುತ್ತ ಬೆಳೆಯುತ್ತಿರುವ ರಾಜಕೀಯ ಪ್ರಭಾವ ಅನೇಕ ಅಲ್ಪಸಂಖ್ಯಾತ ನಾಯಕರಲ್ಲಿ ಅಸುರಕ್ಷಿತ ಭಾವನೆಯನ್ನು ಮೂಡಿಸಿರುವುದು ಸುಳ್ಳಲ್ಲ. ಅದಕ್ಕಾಗಿಯೇ ಇಂತೆಲ್ಲಾ ಆರೋಪ, ಪತ್ಯಾರೋಪ ಕೇಳಿಬರುತ್ತಿದೆ ಎಂದು ಹೇಳಲಾಗುತ್ತಿದೆ.
ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ
ಮುಸ್ಲಿಂ ಸಮುದಾಯದಿಂದ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆ ಕಳೆದೊಂದು ವರ್ಷದಿಂದ ಕೇಳಿಬರುತ್ತಿದೆ. ಈ ರೇಸ್ನಲ್ಲಿ ಜಮೀರ್ ಅಹ್ಮದ್, ಯು.ಟಿ. ಖಾದರ್ ಮತ್ತು ಸಲೀಂ ಅಹ್ಮದ್ ಅವರಂತಹ ನಾಯಕರುಗಳ ಹೆಸರು ಚರ್ಚೆಯಲ್ಲಿವೆ. ಯಾರಿಗೆ ಹೈಕಮಾಂಡ್ ಮನ್ನಣೆ ನೀಡುತ್ತದೆ ಎಂಬ ವಿಚಾರದಲ್ಲಿ ನಾಯಕರ ನಡುವೆ ಒಳಗೊಳಗೆ ಶೀತಲ ಸಮರ ನಡೆಯುತ್ತಿದ್ದು, ಈ ಉಪಚುನಾವಣೆಯ ನೆಪ ಸಿಕ್ಕಾಗ ಬಹಿರಂಗವಾಗುತ್ತಿದೆ. ನೇರವಾಗಿ ಹೇಳುವುದಾದರೆ, ಉಪಚುನಾವಣೆ ಈ ಜಗಳಕ್ಕೆ ಕಾರಣವಲ್ಲ, ಬದಲಿಗೆ ವೇದಿಕೆಯಾಗಿದೆ.
ಪಕ್ಷ ಹೊಸ ಮುಖಗಳಿಗೆ ಆದ್ಯತೆ ನೀಡಿದಾಗ, ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುವುದು ಅಥವಾ ಪಕ್ಷದ ಅಧಿಕೃತ ಕಾರ್ಯಕ್ರಮಗಳಿಂದ ದೂರ ಉಳಿಯುವುದು ರಾಜಕೀಯದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಜಿಲ್ಲೆಯ ಕೆಲವು ನಾಯಕರು ರಾಜ್ಯ ನಾಯಕತ್ವದ ವಿರುದ್ಧವೇ ವಾಗ್ದಾಳಿ ನಡೆಸುತ್ತಿರುವುದು ಪಕ್ಷದ ಶಿಸ್ತನ್ನು ಗಾಳಿಗೆ ತೂರಿದಂತಿದೆ ಎಂಬ ಟೀಕೆಗಳು ಕೇಳಿಬಂದಿವೆ. ಅದೇ, ಕಾಂಗ್ರೆಸ್ನಲ್ಲಿ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.




