ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರದ ಪ್ರಕರಣ ಗಳಿದ್ದರೆ ಅದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಲ್ಲ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು(ಡಿ.17) ಬಾಲಕಿಯರ ಬಾಲಮಂದಿರ ಕಟ್ಟಡದ ಉದ್ಘಾಟನೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
‘ಕೆಎಸ್‌ಆರ್‌ಟಿಸಿಯ ಸಾಕಷ್ಟು ಬಸ್ ಕೆಟ್ಟು ನಿಂತಿದ್ದು, ಚಾಲಕರಿಗೆ ಡ್ಯೂಟಿ ಸಿಗುತ್ತಿಲ್ಲ. ಡ್ಯೂಟಿ ಹಾಕಲು ಅಧಿಕಾರಿಗಳು ಹಣ ಕೇಳುತ್ತಾರೆ’ ಎಂದು ಚಾಲಕರೇ ಆರೋಪಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, “ಈಗಾಗಲೇ ನಾವು ಹಿಂದಿನ ಸರ್ಕಾರದ 40% ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ಮಾಡಿಸುತ್ತಿದ್ದೇವೆ. ಆರೋಪಗಳು ಸಾಬೀತಾದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಡ್ಯೂಟಿ ಹಾಕಲು ಲಂಚ ಕೇಳಿದ ಪ್ರಕರಣವನ್ನೂ ತನಿಖೆ ಮಾಡಿಸಲಾಗುವುದು” ಎಂದು ತಿಳಿಸಿದರು.
ಮುಖ್ಯಮಂತ್ರಿ @siddaramaiah ಅವರು ಗದಗದಲ್ಲಿ ಇಂದು ಬಾಲಕಿಯರ ಬಾಲಮಂದಿರ ಕಟ್ಟಡವನ್ನು ಉದ್ಘಾಟಿಸಿದರು. pic.twitter.com/PJlX8dn2qC
— CM of Karnataka (@CMofKarnataka) December 17, 2023
ಜಾತಿಗಣತಿ ಬಗ್ಗೆ ಮಾತನಾಡಿದ ಸಿಎಂ, “ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ವರದಿ ಕೊಟ್ಟಿಲ್ಲ. ಕೆಲವರು ವರದಿ ವೈಜ್ಞಾನಿಕವಲ್ಲ ಎಂದು ಕೆಲವರು ವಿಚಾರ ಮಾಡುತ್ತಿದ್ದು, ವರದಿ ಬರದೆ, ಏನಿದೆ ಎಂದು ತಿಳಿಯದೇ ಊಹಾಪೋಹದ ಮೇಲೆ ನಿರ್ಧಾರ ಮಾಡುತ್ತಿದ್ದಾರೆ. ವರದಿ ಬರಲಿ ನೋಡೋಣ” ಎಂದರು.
‘ಶಕ್ತಿ ಯೋಜನೆಗೆ ಸರ್ಕಾರ ಮೀಸಲಿಟ್ಟ ಹಣ ಪೂರ್ಣಗೊಂಡಿದೆ’ ಎಂಬ ಬಗ್ಗೆ ಉತ್ತರಿಸಿದ ಅವರು, ಯೋಜನೆಗೆ ಎಷ್ಟು ಹಣ ಖರ್ಚಾಗುತ್ತದೆಯೋ ಅಷ್ಟು ಹಣ ಒದಗಿಸಲಾಗುವುದು ಎಂದರು.
“ಶಕ್ತಿ ಯೋಜನೆಗೆ ಪ್ರತಿ ವರ್ಷ ವೆಚ್ಚವಾಗುವ ಹಣವನ್ನು ಕೆ.ಎಸ್.ಆರ್.ಟಿ. ಸಿಗೆ ಸರ್ಕಾರ ತುಂಬಿ ಕೊಡಲಾಗುವುದು. ಬಸ್ಸುಗಳ ದುರಸ್ತಿ ಹಾಗೂ ಹೊಸ ಬಸ್ಸುಗಳ ಖರೀದಿಯೂ ಆಗಲಿದೆ. ರಿಪೇರಿಗೆ ಅನುದಾನ ಒದಗಿಸಲಾಗಿದೆ. ಅನುದಾನವಿಲ್ಲ ಎಂದಿರುವ ಅಧಿಕಾರಿಗಳ ಹೆಸರು ನೀಡಿದರೆ ಪರಿಶೀಲನೆ ನಡೆಸಲಾಗುವುದು. ನಮ್ಮ ಸರ್ಕಾರದಲ್ಲಿ ಘೋಷಿಸಿರುವ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ. ಅಭಿವೃದ್ಧಿ ಕೆಲಸಗಳು ನಿಂತಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕೊಟ್ಟ ಮಾತಿನಂತೆ ನಡೆದಿದ್ದೇವೆ
ನವೆಂಬರ್ ಅಂತ್ಯದವರೆಗೆ ಹಿಂದಿನ ಸರ್ಕಾರ 70,814 ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಖರ್ಚು ಮಾಡಿತ್ತು. ನಮ್ಮ ಸರ್ಕಾರ 73, 928 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಹಣವನ್ನು ಖರ್ಚು ಮಾಡಿಲ್ಲ ಎನ್ನುವುದು ಸುಳ್ಳು ಎಂದರು. 3000 ಕೋಟಿ ರೂ.ಗಳಷ್ಟು ಮೊತ್ತವನ್ನು ಹೆಚ್ಚು ವೆಚ್ಚ ಮಾಡಿದ್ದೇವೆ. ನಾವು ಸರ್ಕಾರ ರೂಪಿಸಿದ್ದು ಮೇ 20ಕ್ಕೆ, ಬಜೆಟ್ ಮಂಡಿಸಿದ್ದು ಜುಲೈ ನಲ್ಲಿ, ಅದು ಜಾರಿಯಾಗಿದ್ದು ಆಗಸ್ಟ್ 1 ರಿಂದ . 4 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, 5 ನೇ ಗ್ಯಾರಂಟಿ ಜನವರಿಯಲ್ಲಿ ಪ್ರಾರಂಭವಾಗಲಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದರು.