ಕೋಲಾರ ಲೋಕಸಭಾ ಕ್ಷೇತ್ರ | ಮಹಿಳೆಯರು ಮನಸ್ಸು ಮಾಡಿದವರ ಕೊರಳಿಗೆ ಜಯದ ಮಾಲೆ

Date:

ಕೋಲಾರ ಹೇಳಿಕೇಳಿ ದಲಿತರು ಮತ್ತು ಮುಸ್ಲಿಮರು ಅಧಿಕವಾಗಿರುವ ಕ್ಷೇತ್ರ. ಮಹಿಳಾ ಮತದಾರರು ಹೆಚ್ಚಾಗಿರುವ ಕ್ಷೇತ್ರ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮಹಿಳೆಯರೇ ಆಗಿರುವುದು- ಮಹಿಳೆಯರನ್ನು ಹೇಗೆ ಮನವೊಲಿಸುತ್ತಾರೆನ್ನುವುದರ ಮೇಲೆ ಕಾಂಗ್ರೆಸ್ಸಿನ ಗೆಲುವಿದೆ. ಹಾಗೆಯೇ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಗೆ ದೇವೇಗೌಡರ ಬಲವಿದೆ, ಮೋದಿಯ ಅಲೆ ಇದೆ. 

ದಲಿತ ಮತ್ತು ಅಹಿಂದ ಚಳವಳಿಯನ್ನು ಹುಟ್ಟುಹಾಕಿದ ಕೋಲಾರ ಜಿಲ್ಲೆಯ ಜನ ಶ್ರಮಜೀವಿಗಳು. ಕಲ್ಲುಬಂಡೆಗಳ ಬರಡು ಭೂಮಿಗೆ ಸರಿಯಾಗಿ ಮಳೆ ಬೀಳದಿದ್ದರೂ, ನೀರಾವರಿಯ ನೆರವಿಲ್ಲದಿದ್ದರೂ ಬೋರ್‌ವೆಲ್ ಮತ್ತು ಕೆರೆ-ಕಟ್ಟೆಗಳನ್ನು ನಂಬಿಯೇ ಬೇಸಾಯ ಮಾಡಿ ಬದುಕಿದವರು. ಹೈನುಗಾರಿಕೆ ಮತ್ತು ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವವರು. 60 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರಿಗೆ ನಿತ್ಯ ಹೂವು, ಹಣ್ಣು, ತರಕಾರಿ ಬೆಳೆದು ಸರಬರಾಜು ಮಾಡುವವರು. ದಲಿತರು ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದು ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಧಕ್ಕೆಯಾಗದಂತೆ ಬದುಕುತ್ತಿರುವವರು.

ಇಂತಹ ಕೋಲಾರ ಜಿಲ್ಲೆಯನ್ನು ದೇಶಕ್ಕೆ ಪರಿಚಯಿಸಿದವರು, ದಲಿತ ಸಮುದಾಯದ ಮೇರುನಾಯಕ ಟಿ. ಚನ್ನಯ್ಯನವರು. ಸಂವಿಧಾನ ರಚನಾ ಸಭೆಯಲ್ಲಿ ಮೈಸೂರು ಪ್ರಾಂತ್ಯವನ್ನು ಪ್ರತಿನಿಧಿಸುತ್ತಿದ್ದ ಚನ್ನಯ್ಯನವರು, 1954ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೋಲಾರಕ್ಕೆ ಕರೆತಂದಿದ್ದರು. ಚನ್ನಯ್ಯರಂತಹ ಪುಣ್ಮಾತ್ಮರನ್ನು ನೆನೆಯದೆ ಕೋಲಾರ ಜಿಲ್ಲೆಯ ಇತಿಹಾಸ ಗ್ರಹಿಸುವುದು ಅಪೂರ್ಣವಾಗುತ್ತದೆ.

ಸ್ವಾತಂತ್ರ್ಯಾನಂತರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರ, ಮೀಸಲು ಕ್ಷೇತ್ರವಾಗಿ ಕಾಂಗ್ರೆಸ್ಸಿನ ಭದ್ರಕೋಟೆ ಎನಿಸಿಕೊಂಡಿತ್ತು. 1952ರಿಂದ 62ರವರೆಗೆ, ಮೂರು ಸಲ ಗೆದ್ದ ದೊಡ್ಡತಿಮ್ಮಯ್ಯ, 1967ರಿಂದ 1980ರವರೆಗೆ ನಾಲ್ಕು ಸಲ ಗೆದ್ದ ಜಿ.ವೈ. ಕೃಷ್ಣನ್ ಇಲ್ಲಿ ದಾಖಲೆ ನಿರ್ಮಿಸಿದ್ದರು. ಕಾಂಗ್ರೆಸ್ಸಿನ ಈ ದಾಖಲೆಯನ್ನು 1984ರಲ್ಲಿ, ಜನತಾ ಪಕ್ಷದಿಂದ ವಿ. ವೆಂಕಟೇಶ್ ಗೆಲ್ಲುವ ಮೂಲಕ ಮುರಿದಿದ್ದರು. 1989ರಲ್ಲಿ ಮತ್ತೆ ಕಾಂಗ್ರೆಸ್ಸಿನ ವೈ. ರಾಮಕೃಷ್ಣ ಗೆದ್ದು, ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತೆಕ್ಕೆಗೆ ತಂದಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆ ನಂತರ, 1991ರಲ್ಲಿ, ಚಿಕ್ಕಬಳ್ಳಾಪುರದ ಮಾಜಿ ಸಂಸದ ವಿ. ಕೃಷ್ಣರಾವ್ ಅವರ ಒತ್ತಡಕ್ಕೆ ಮಣಿದ, ಅಲ್ಲಿಯವರೆಗೆ ರಾಜಕಾರಣದಿಂದ ದೂರವಿದ್ದ, ವಕೀಲರಾಗಿದ್ದ ಕೆ.ಎಚ್. ಮುನಿಯಪ್ಪ, ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಮೊದಲ ಪ್ರಯತ್ನದಲ್ಲಿಯೇ ಗೆದ್ದರು. ಆನಂತರ ಸತತ ಏಳು ಬಾರಿ ಕೆ.ಎಚ್. ಮುನಿಯಪ್ಪ ಕಾಂಗ್ರೆಸ್‌ನಿಂದ ಸಂಸತ್‌ಗೆ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲ, ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದ ಅವರು, 2009ರಲ್ಲಿ ರೈಲ್ವೆ ರಾಜ್ಯ ಸಹಾಯಕ ಸಚಿವರೂ ಆಗಿದ್ದರು. ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ, ಬೆಂಗಳೂರಿನ ಕೆ.ಆರ್. ಪುರಂನಿಂದ ಮುಳಬಾಗಿಲಿನ ನಂಗಲಿವರೆಗೆ ಹೆದ್ದಾರಿ ನಿರ್ಮಾಣಗಳಂತಹ ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದರು.

ಇಂತಹ ಸೋಲಿಲ್ಲದ ಸರದಾರ ಮುನಿಯಪ್ಪ, 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷದವರ ಪಿತೂರಿಗೆ ಬಲಿಯಾಗಿ, ಎಸ್.ಮುನಿಸ್ವಾಮಿ ಎಂಬ ಬಿಜೆಪಿಯ ಮಾಜಿ ಕಾರ್ಪೊರೇಟರ್ ಎದುರು, 2 ಲಕ್ಷದ 10 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಸೋತರೂ ಬಿಡದೆ 2023ರ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಗೆದ್ದು, ಸಿದ್ದರಾಮಯ್ಯನವರ ಸಂಪುಟದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದರು. ಸಾಲದು ಎಂದು ಪುತ್ರಿ ಎಂ. ರೂಪಕಲಾರಿಗೆ ಕೆಜಿಎಫ್ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡುಬಂದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪರನ್ನು ಕಾಂಗ್ರೆಸ್ಸಿಗರೇ ಸೋಲಿಸಲು ಕಾರಣವೂ ಇತ್ತು. ಸತತವಾಗಿ ಗೆಲ್ಲುತ್ತಲೇ ಸಾಗಿದ್ದ ಮುನಿಯಪ್ಪ, ಸ್ವಪಕ್ಷದವರನ್ನು ಸೋಲಿಸುವುದರಲ್ಲಿ ನಿಸ್ಸೀಮರಾಗಿದ್ದರು. ವಿರೋಧ ಪಕ್ಷದ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ತಾವು ಮತ್ತು ತಮ್ಮ ಕುಟುಂಬ ಮಾತ್ರ ರಾಜಕಾರಣದಲ್ಲಿದ್ದು, ಕೋಲಾರ ಎಂದಾಕ್ಷಣ ಮುನಿಯಪ್ಪ ಎನ್ನುವಂತೆ ನೋಡಿಕೊಂಡಿದ್ದರು.

ಈ ಬಾರಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿಯೂ ತಾವು ಹೇಳಿದವರಿಗೇ, ಅದರಲ್ಲೂ ಅಳಿಯ ಪೆದ್ದಣ್ಣನಿಗೇ ಟಿಕೆಟ್ ಕೊಡಬೇಕೆಂದು ಹಠಕ್ಕೆ ಬಿದ್ದಿದ್ದರು. ಕೋಲಾರ ಜಿಲ್ಲೆಯ ಕಾಂಗ್ರೆಸ್ಸಿನ ಹಾಲಿ ಮತ್ತು ಮಾಜಿ ಶಾಸಕರೆಲ್ಲ ಒಂದಾಗಿ, ‘ಯಾರಿಗಾದರೂ ಕೊಡಿ, ಮುನಿಯಪ್ಪನವರ ಕುಟುಂಬಕ್ಕೆ ಮಾತ್ರ ಬೇಡ’ ಎಂದು ಹೈಕಮಾಂಡಿನ ಎದುರು ದಿಟ್ಟವಾಗಿ ನಿಂತರು. ಕೊಟ್ಟರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಧಮ್ಕಿ ಹಾಕಿದರು.

ಕೆ.ಎಚ್.ಮುನಿಯಪ್ಪ-ರಮೇಶಕುಮಾರ್
ಕೆ.ಎಚ್.ಮುನಿಯಪ್ಪ-ರಮೇಶಕುಮಾರ್

ಹಾಗಾಗಿ, ಕೊನೆ ಕ್ಷಣದವರೆಗೂ ಅಭ್ಯರ್ಥಿ ಆಯ್ಕೆಯ ಬಗ್ಗೆ ಗೊಂದಲವಿದ್ದ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಅಂತಿಮವಾಗಿ ಕಾಂಗ್ರೆಸ್ಸಿನ ಎರಡೂ ಬಣಗಳಿಗೆ ಹೊರತಾದ, ಬೆಂಗಳೂರಿನ ಮಾಜಿ ಮೇಯರ್ ವಿಜಯಕುಮಾರ್ ಅವರ ಪುತ್ರ ಗೌತಮ್ ಅಭ್ಯರ್ಥಿಯಾಗುವಂತಾಗಿದೆ. ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿರುವ, ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ, ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಸೇರಿರುವ ಕೆ.ವಿ. ಗೌತಮ್, ಈಗ ಎರಡೂ ಬಣಗಳನ್ನು ಸಂಭಾಳಿಸಬೇಕಾಗಿದೆ.

ಅಭ್ಯರ್ಥಿ ಆಯ್ಕೆ ಗೊಂದಲ ಕಾಂಗ್ರೆಸ್‌ನಲ್ಲಿದ್ದಂತೆ, ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದಲ್ಲೂ ಇತ್ತು. ಕೊನೆ ಕ್ಷಣದವರೆಗೂ ಬಿಜೆಪಿಯ ಹಾಲಿ ಸಂಸದ ಮುನಿಸ್ವಾಮಿ ಪ್ರಯತ್ನಿಸುತ್ತಲೇ ಇದ್ದರು. ಜೊತೆಗೆ ಜೆಡಿಎಸ್‌ನ ಸಮೃದ್ಧಿ ಮಂಜುನಾಥ್‌ ಹಾಗೂ ದೇವನಹಳ್ಳಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಕೂಡ ರೇಸ್‌ನಲ್ಲಿದ್ದರು. ಅಂತಿಮವಾಗಿ ಜೆಡಿಎಸ್‌ನ ಮಲ್ಲೇಶ್ ಬಾಬು ಅಭ್ಯರ್ಥಿಯಾಗಿದ್ದಾರೆ.

ಮಲ್ಲೇಶ್ ಬಾಬು, ಈ ಹಿಂದೆ ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋತವರು. ಭೋವಿ ಸಮುದಾಯಕ್ಕೆ ಸೇರಿದವರು. 50 ವರ್ಷ ವಯಸ್ಸಿನ ಎಂಬಿಎ ಪದವೀಧರರು. ಐಎಎಸ್‌ ಅಧಿಕಾರಿಯಾಗಿದ್ದ ದಿವಂಗತ ಮುನಿಸ್ವಾಮಿ(ಮೊಲದ ಮುನಿಸ್ವಾಮಿ) ಹಾಗೂ ಮಂಗಮ್ಮ ಮುನಿಸ್ವಾಮಿ(ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ) ಪುತ್ರರೂ ಆಗಿರುವ ಮಲ್ಲೇಶ್ ಬಾಬು ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2009ರಲ್ಲಿ ಮಂಗಮ್ಮ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ.ಎಚ್‌. ಮುನಿಯಪ್ಪ ವಿರುದ್ಧ ಸೋತಿದ್ದರು.

ಇದನ್ನು ಓದಿದ್ದೀರಾ?: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಡಾ. ಸುಧಾಕರ್ – ರಕ್ಷಾ ರಾಮಯ್ಯರ ನಡುವಿನ ಕದನ ಕಣವಾಗಬಹುದೇ?

ಕೋಲಾರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ, ಐವರು ಕಾಂಗ್ರೆಸ್ ಶಾಸಕರು, ಮೂವರು ಜೆಡಿಎಸ್ ಶಾಸಕರು ಗೆದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರುವ ಶಿಡ್ಲಘಟ್ಟದಿಂದ ಜೆಡಿಎಸ್‌ನ ಬಿ.ಎನ್. ರವಿಕುಮಾರ್ ಗೆದ್ದಿದ್ದರೆ, ಚಿಂತಾಮಣಿಯಿಂದ ಕಾಂಗ್ರೆಸ್‌ನ ಡಾ.ಎಂ.ಸಿ. ಸುಧಾಕರ್ ಗೆದ್ದು ಸಚಿವರಾಗಿದ್ದಾರೆ. ಮಿಕ್ಕಂತೆ, ಕೋಲಾರ ಜಿಲ್ಲೆಗೆ ಸೇರುವ ಕೆಜಿಎಫ್, ಬಂಗಾರಪೇಟೆ, ಕೋಲಾರ, ಮಾಲೂರುಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಶ್ರೀನಿವಾಸಪುರ ಮತ್ತು ಮುಳಬಾಗಲುನಲ್ಲಿ ಜೆಡಿಎಸ್ ಗೆದ್ದಿದೆ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲದಿರುವುದರಿಂದ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಕೋಲಾರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 19,95,234. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮತದಾರರ ಸಂಖ್ಯೆ ಅತ್ಯಧಿಕವಾಗಿದ್ದು, ಅವರೇ ಮೊದಲ ಸ್ಥಾನದಲ್ಲಿದ್ದಾರೆ. ಆನಂತರ ಒಕ್ಕಲಿಗರು ನಾಲ್ಕು ಲಕ್ಷ, ಮುಸ್ಲಿಮರು ಎರಡೂವರೆ ಲಕ್ಷವಿದ್ದಾರೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದವರು ಇಲ್ಲಿ 2,09,855 ಮತದಾರರಿದ್ದರೆ, ಮಲ್ಲೇಶ್ ಬಾಬು ಅವರ ಭೋವಿ ಸಮುದಾಯದ ಮತದಾರರು 1,01,054 ಮತದಾರರಿದ್ದಾರೆ.

ಜೆಡಿಎಸ್‌ನ ಮಲ್ಲೇಶ್ ಬಾಬು, ಕಳೆದ ಬಾರಿ ಗೆದ್ದಿದ್ದ ಬಿಜೆಪಿ ಮೇಲೆ ಹೆಚ್ಚು ಅವಲಂಬಿತವಾಗಿದ್ದಾರೆ, ಮೋದಿ ನಾಮ ಜಪಿಸುತ್ತಿದ್ದಾರೆ. ಜೊತೆಗೆ ಶಿಡ್ಲಘಟ್ಟ, ಮುಳಬಾಗಲು ಮತ್ತು ಶ್ರೀನಿವಾಸಪುರದಿಂದ ಗೆದ್ದ ಜೆಡಿಎಸ್ ಶಾಸಕರನ್ನು ನಂಬಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿಯವರ ಕಡೆಯಿಂದ ಬರಲಿರುವ ಒಕ್ಕಲಿಗರ ಮತಗಳನ್ನು ನೆಚ್ಚಿ ಕೂತಿದ್ದಾರೆ. ಹಾಗೆಯೇ, ಕಾಂಗ್ರೆಸ್ ಅಭ್ಯರ್ಥಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಗೌತಮ್‌ ಹೊರಗಿನವರು ಎಂಬ ಅಸ್ತ್ರ ಪ್ರಯೋಗಿಸಲು ಸಜ್ಜಾಗಿ, ಈಗಾಗಲೇ ‘ಸ್ಥಳೀಯರು ವರ್ಸಸ್‌ ಹೊರಗಿನವರು’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಆದರೆ, ಬಿಜೆಪಿ-ಜೆಡಿಎಸ್ ಪಕ್ಷಗಳ ಸ್ಥಳೀಯ ನಾಯಕರು ಇವತ್ತಿನವರೆಗೂ ಒಂದಾಗದೆ, ಸಮನ್ವಯ ಸಭೆಗೂ ಹಾಜರಾಗದೆ ಇರುವುದು ಮಲ್ಲೇಶ್ ಬಾಬು ಅವರಿಗೆ ದೊಡ್ಡ ತಲೆನೋವಾಗಿದೆ.

ಇನ್ನು ಕಾಂಗ್ರೆಸ್ ಪಕ್ಷದತ್ತ ನೋಡುವುದಾದರೆ… ಮೇಲ್ನೋಟಕ್ಕೇ ಕೋಲಾರ ಕಾಂಗ್ರೆಸ್ ಭದ್ರಕೋಟೆ ಎನ್ನುವಂತೆ ಕಂಡರೂ, ಕೆ.ಎಚ್. ಮುನಿಯಪ್ಪ ಮತ್ತು ರಮೇಶಕುಮಾರ್ ಬಣಗಳು ಒಂದಾಗದೆ, ಇಲ್ಲಿ ಕಾಂಗ್ರೆಸ್ಸಿಗೆ ಜಯವಿಲ್ಲ ಎನ್ನುವುದನ್ನು ಇಲ್ಲಿನ ಮತದಾರರೇ ಹೇಳುತ್ತಿದ್ದಾರೆ. ಕೋಲಾರ ಹೇಳಿಕೇಳಿ ದಲಿತರು ಮತ್ತು ಮುಸ್ಲಿಮರು ಹೆಚ್ಚಾಗಿರುವ ಕ್ಷೇತ್ರ. ದಲಿತರಾದ ಕೆ.ಎಚ್.ಮುನಿಯಪ್ಪ, ರೂಪಕಲಾ, ನಾರಾಯಣಸ್ವಾಮಿಯವರು ದಲಿತರನ್ನು ಪ್ರತಿನಿಧಿಸಿದರೆ, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹಮದ್ ಮುಸ್ಲಿಮರ ನಾಯಕರಾಗಿದ್ದಾರೆ. ಸಚಿವ ಸುಧಾಕರ್, ಕೋತೂರು ಮಂಜುನಾಥ್, ಕೆ.ವೈ. ನಂಜೇಗೌಡ ಒಕ್ಕಲಿಗರು ಮತ್ತು ರೆಡ್ಡಿ ಸಮುದಾಯವನ್ನು ಸಂಭಾಳಿಸುತ್ತಾರೆ. ಹಾಗೆಯೇ ಮಾಜಿ ಸಚಿವ ರಮೇಶಕುಮಾರ್, ತಮ್ಮದೇ ಚುನಾವಣೆ ಎಂದು ಓಡಾಡಿದರೆ, ಕಾಂಗ್ರೆಸ್ ಗೆಲ್ಲುವುದು ಕಷ್ಟವಲ್ಲ ಎನಿಸುತ್ತದೆ.

ಜೊತೆಗೆ, ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ 6.45 ಲಕ್ಷವಿದ್ದು, ಪುರುಷ ಮತದಾರ(6.32 ಲಕ್ಷ)ರಿಗಿಂತ ಹೆಚ್ಚಾಗಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮಹಿಳೆಯರೇ ಆಗಿರುವುದು- ನಾಯಕರು ಮಹಿಳೆಯರನ್ನು ಹೇಗೆ ಮನವೊಲಿಸುತ್ತಾರೆನ್ನುವುದರ ಮೇಲೆ ಕಾಂಗ್ರೆಸ್ಸಿನ ಗೆಲುವಿದೆ ಎನ್ನಲಾಗುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರ ಬಜೆಟ್‌ | ಕರ್ನಾಟಕಕ್ಕಿಲ್ಲ ವಿಶೇಷ ಯೋಜನೆ; ಆಯವ್ಯಯದ ಮುಖ್ಯಾಂಶಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23)ರಂದು...

ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವ ಕಾಲ ಬಂದಿದೆ: ಛಲವಾದಿ ನಾರಾಯಣಸ್ವಾಮಿ

ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರೂ ಏನೂ...

ಕೇಂದ್ರ ಬಜೆಟ್ | ಬಿಹಾರ ರಸ್ತೆಗಳಿಗೆ ₹26,000 ಕೋಟಿ; ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ

ಮೂರನೇ ಅವಧಿಗೆ ಸರ್ಕಾರ ರಚಿಸಿರುವ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ...

ವಾಲ್ಮೀಕಿ ನಿಗಮ ಅಕ್ರಮ | ಇ.ಡಿ ವಿರುದ್ಧ ನೇರ ಸಂಘರ್ಷಕ್ಕೆ ಇಳಿದ ರಾಜ್ಯ ಸರ್ಕಾರ, ಗಾಂಧಿ ಪ್ರತಿಮೆ ಬಳಿ ಧರಣಿ

ವಾಲ್ಮೀಕಿ ನಿಗಮ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮಾಜಿ...