- ನನ್ನನ್ನು ಜೀವನಪರ್ಯಂತ ಜೈಲಿಗೆ ಹಾಕಿದರೂ ಹೋರಾಟ ಮುಂದುವರೆಸುತ್ತೇನೆ
- ಯಾವುದೇ ಸಮುದಾಯವನ್ನು ಅಪಮಾನ ಮಾಡಿಲ್ಲ, ನನಗೆ ಎಲ್ಲ ಸಮಾಜ ಒಂದೇ
ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ, ಗಾಂಧಿ ಎಂದಿಗೂ ಕ್ಷಮೆ ಕೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ, ಪತ್ರಕರ್ತರೊಬ್ಬರು ಬಿಜೆಪಿಯು ಬ್ರಿಟನ್ ಭಾಷಣದ ಕ್ಷಮೆಯಾಚನೆಗೆ ಆಗ್ರಹಿಸುತ್ತಿರುವುದನ್ನು ಉಲ್ಲೇಖಿಸಿ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನಡೆಯ ವಿರುದ್ಧ ಪ್ರತಿಪಕ್ಷಗಳು ತಮಗೆ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದರು.
“ದೇಶವು ನನಗೆ ಪ್ರೀತಿ ಮತ್ತು ಗೌರವವನ್ನು ನೀಡಿದೆ. ಭ್ರಷ್ಟ ಅದಾನಿ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಕ್ಕಾಗಿ ಹಾಗೂ ಮುಂದಿನ ನನ್ನ ಭಾಷಣಕ್ಕೆ ಹೆದರಿ ನನ್ನನ್ನು ಲೋಕಸಭಾ ಸ್ಥಾನದಿಂದ ಅನರ್ಹಗೊಳಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನನ್ನನ್ನು ಜೀವನಪರ್ಯಂತ ಜೈಲಿಗೆ ಹಾಕಿದರೂ, ಮತ್ತೆ ಸದಸ್ಯತ್ವ ಸ್ಥಾನವನ್ನು ಮರುಕಳಿಸಿದರೂ ಭಾರತದ ಜನರ ಪ್ರಜಾಸತ್ತಾತ್ಮಕ ಧ್ವನಿಯನ್ನು ರಕ್ಷಿಸುವ ಸಲುವಾಗಿ ನನ್ನ ಹೋರಾಟ ಮುಂದುವರೆಯುತ್ತದೆ. ನಾನು ಯಾರಿಗೂ ಹೆದರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುವುದಿಲ್ಲ. ಅವರು ನನ್ನನ್ನು ಅನರ್ಹಗೊಳಿಸುವ ಮೂಲಕ ಅಥವಾ ಜೈಲಿಗೆ ಹಾಕುವ ಮೂಲಕ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಈ ಹೋರಾಟದಿಂದ ಹಿಂದೆ ಸರಿಯಲ್ಲ” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಈ ಸುದ್ದಿ ಓದಿದ್ದೀರಾ? ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಹೆದರಿ ಅನರ್ಹಗೊಳಿಸಿದ ಪ್ರಧಾನಿ: ರಾಹುಲ್ ಗಾಂಧಿ ಆಕ್ರೋಶ
ಯಾವುದೇ ಸಮುದಾಯದ ವಿರುದ್ಧ ಮಾತನಾಡಿಲ್ಲ
ನೀವು ಒಂದು ಸಮುದಾಯವನ್ನು ಅಪಮಾನ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ”ನಾನು ಕೇಳಿರುವುದು ಅದಾನಿ ಹಾಗೂ ಮೋದಿ ನಡುವಿನ ಸಂಬಂಧ. ಯಾವುದೇ ಸಮುದಾಯವನ್ನು ನಾನು ಅಪಮಾನ ಮಾಡಿಲ್ಲ. ನನಗೆ ಎಲ್ಲ ಸಮಾಜ ಒಂದೇ. ಭಾರತ್ ಜೋಡೋ ಯಾತ್ರೆಯಲ್ಲಿ ನನ್ನ ಉದ್ದೇಶ ಎಲ್ಲರಿಗೂ ಗೊತ್ತಾಗಿದೆ. ಹಿಂಸಾರಹಿತ, ಶಾಂತಿ ಸುವ್ಯವಸ್ಥೆ ಸಮಾಜ ಪ್ರಸ್ತುತ ನಮ್ಮ ದೇಶಕ್ಕೆ ಅಗತ್ಯವಾಗಿದೆ” ಎಂದು ಹೇಳಿದರು.