ಸುರಪುರ ವಿಧಾನಸಭಾ ಉಪ ಚುನಾವಣೆ: ʼಕೈʼ ಹಿಡಿಯುವುದೇ ಅನುಕಂಪದ ಅಲೆ

Date:

ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕರಾಗಿದ್ದ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಲೋಕಸಭೆ ಚುನಾವಣೆ ಜೊತೆಯಲ್ಲಿಯೇ ಮೇ.7ರಂದು ಉಪಚುನಾವಣೆ ನಡೆಸಲು ಆದೇಶ ಹೊರ ಬಿದ್ದ ಬೆನ್ನಲ್ಲೇ, ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.

ದಿವಂಗತ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕಗೆ ನಿರೀಕ್ಷೆಯಂತೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಅವರನ್ನು ಮತ್ತೆ ಕಣಕ್ಕಿಳಿಸುವುದು ನಿಚ್ಚಳವಾಗಿದೆ.

ತಂದೆಯ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣಾ ಕಣದಲ್ಲಿರುವ ರಾಜಾ ವೆಂಕಟಪ್ಪ ನಾಯಕ ಅವರ ಪುತ್ರನಿಗೆ ಅನುಕಂಪದ ಸಹಜವಾಗಿ ಅಲೆ ಇದ್ದೇ ಇದೆ. ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ. ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕವೇ ಕ್ಷೇತ್ರದಲ್ಲಿ ರಾಜಕೀಯ ಕಾವು ಮತ್ತಷ್ಟು ರಂಗೇರಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್‌ ಅಭ್ಯರ್ಥಿ ವೇಣುಗೋಪಾಲ ನಾಯಕ ಅವರಿಗೆ ಚುನಾವಣೆ ಹೊಸದೇನಲ್ಲ. ಚುನಾವಣೆ ಸಂದರ್ಭದಲ್ಲಿ ತಂದೆಯೊಂದಿಗೆ ಓಡಾಡಿದ ಅನುಭವವಿದೆ. ಹೀಗಾಗಿ ಚುನಾವಣೆ ಎದರಿಸುವುದು ತೀರಾ ಕಷ್ಟ ಏನಿಲ್ಲ. ಇನ್ನು ರಾಜ್ಯದಲ್ಲಿ ತಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಐದು ಗ್ಯಾರಂಟಿ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಇಟ್ಟುಕೊಂಡು ಅನುಕಂಪದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ತಂದೆಯಂತೆ ಕ್ಷೇತ್ರದ ಜನ ನನಗೂ ಕೈ ಹಿಡಿಯುತ್ತಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ದಿವಂಗತ ಶಾಸಕ ರಾಜಾ ವೆಂಕಟಪ್ಪ ನಾಯಕ ಪುತ್ರ ವೇಣುಗೋಪಾಲ ನಾಯಕ

ಎಲ್ಲ ಪಕ್ಷಗಳಿಗೂ ಮಣೆ ಹಾಕಿದ ಕ್ಷೇತ್ರ :

2008ರ ಕ್ಷೇತ್ರ ಮರು ವಿಂಗಡಣೆವರೆಗೂ ಸುರಪುರ ಸಾಮಾನ್ಯ ವರ್ಗಗಳಿಗೆ ಅವಕಾಶ ನೀಡುವ ಕ್ಷೇತ್ರವಾಗಿತ್ತು, 2008ರಲ್ಲಿ ಎಸ್‌ಟಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. 1957 ರಿಂದ ಇದುವರೆಗೂ ನಡೆದ 16 ಬಾರಿ ಚುನಾವಣೆ ನಡೆದಿದೆ. ಈ ಪೈಕಿ, ಕಾಂಗ್ರೆಸ್‌ 8 ಬಾರಿ, ಬಿಜೆಪಿ 2 ಬಾರಿ ಹಾಗೂ ಸ್ವತಂತ್ರ ಪಕ್ಷ, ಕರ್ನಾಟಕ ಕಾಂಗ್ರೆಸ್‌ ಪಕ್ಷ (ಕೆಸಿಪಿ), ಕನ್ನಡ ನಾಡು ಪಕ್ಷ (ಕೆಎನ್‌ಡಿಪಿ) ಮತ್ತು ಸ್ವತಂತ್ರ್ಯ ಅಭ್ಯರ್ಥಿಗಳು ತಲಾ ಒಮ್ಮೆ ಕ್ಷೇತ್ರದಲ್ಲಿ ಗೆದ್ದು, ವಿಧಾನಸಭೆ ಪ್ರವೇಶಿಸಿದ್ದಾರೆ.

2013ರಲ್ಲಿ ನಡೆದ ಚುನಾವಣೆ ವೇಳೆ ಬಿಜೆಪಿ ತೊರೆದು ಜೆಡಿಎಸ್‌ ಸೇರಿದ್ದ ನರಸಿಂಹ ನಾಯಕ (ರಾಜು ಗೌಡ) ಸೋಲನುಭವಿಸಿದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದ ರಾಜಾ ವೆಂಕಟಪ್ಪ ನಾಯಕ 65,033 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಅವರ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನರಸಿಂಹ ನಾಯಕ 60,958 ಮತಗಳನ್ನು ಪಡೆದು 4,075 ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಕೆಜೆಪಿ ಅಭ್ಯರ್ಥಿಯಾಗಿದ್ದ ಶಿವರಾಜ್ ಮಲ್ಲೇಶಿ 8,239 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯ್ತು.

2018ರಲ್ಲಿ ಸುರಪುರ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ತೊರೆದು ಮರಳಿ ಬಿಜೆಪಿ ಸೇರಿದ ನರಸಿಂಹ ನಾಯಕ (ರಾಜು ಗೌಡ) 1,04,426 ಮತಗಳನ್ನು ಪಡೆದು ಮೂರನೇ ಬಾರಿಗೆ ಗೆದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಜಾ ವೆಂಕಟಪ್ಪ ನಾಯಕ 81,851 ಮತಗಳನ್ನು ಪಡೆದು, 22,568 ಮತಗಳ ಅಂತರದಲ್ಲಿ ಹೀನಾಯವಾಗಿ ಸೋತಿದ್ದರು.

ಸುರಪುರ ಮತಕ್ಷೇತ್ರದಲ್ಲಿ 10 ತಿಂಗಳ ಹಿಂದೆ 2023ರ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ನಡೆದಿತ್ತು. ರಾಜಾ ವೆಂಕಟಪ್ಪ ನಾಯಕ ಅವರು ಎದುರಾಳಿ ಬಿಜೆಪಿಯ ರಾಜೂಗೌಡ ಅವರನ್ನು ಸೋಲಿಸಿದ್ದರು.  ಈಗ ಮತ್ತೆ ಉಪ ಚುನಾವಣೆ ನಿಗದಿಯಾಗಿದ್ದು, ಈ ಕ್ಷೇತ್ರದ ಮತದಾರರರು ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಗೆ ಏಕಕಾಲಕ್ಕೆ ಮತದಾನ ಮಾಡಬೇಕಾಗಿದೆ.

ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ರಾಜ್ಯದಲ್ಲಿ ಎರಡು ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಇದೇ ವೇಳೆ ಸುರಪುರ ಮತ ಕ್ಷೇತ್ರಕ್ಕೆ ಉಪ ಚುನಾವಣೆ ಸಹ ನಡೆಯಲಿದೆ. ಲೋಕಸಭೆ ಚುನಾವಣೆಗೆ ರಾಯಚೂರು ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ರಾಜಾ ವೆಂಕಟಪ್ಪ ನಾಯಕ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಯೋಜನೆ ಹೊಂದಿತ್ತು. ಆದರೆ ಅವರ ನಿಧನದಿಂದ ಉಪಚುನಾವಣೆ ಎದುರಿಸುವಂತೆ ಆಗಿದೆ.  ಲೋಕಸಭಾ ಚುನಾವಣೆ ಜೊತೆಗೆ ರಾಜ್ಯದಲ್ಲಿ ನಡೆಯುವ ಏಕೈಕ ಉಪಚುನಾವಣೆ ಸುರಪುರ ಕ್ಷೇತ್ರದಲ್ಲಿ ನಡೆಯುತ್ತಿದೆ.

ಮತದಾರರ ಬಲಾಬಲ:

ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಸುರಪುರನಲ್ಲಿ ಪರಿಶಿಷ್ಟ ಪಂಗಡದ ಜನರೇ ನಿರ್ಣಾಯಕ. ಅವರಲ್ಲದೆ, ದಲಿತರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಪಂಗಡದ ಮತಗಳನ್ನು ಒಡೆದು ಆಳುವವರಿಗೆ ದಲಿತರ ಮತಗಳಿಲ್ಲದೆ ಗೆಲ್ಲಲು ಸಾಧ್ಯವಿಲ್ಲ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಪರಿಶಿಷ್ಟ ಪಂಗಡ, 80 ಸಾವಿರ ದಲಿತರು ಹಾಗೂ 45 ಸಾವಿರಕ್ಕೂ ಅಧಿಕ ಮುಸ್ಲಿಂ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.

ಸುರಪುರ ಕ್ಷೇತ್ರದಲ್ಲಿ ಸದ್ಯ 1,41, 618 ಪುರುಷರು, 1,39,729 ಮಹಿಳಾ, 28 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು ಒಟ್ಟು 2,81,375 ಮತದಾರರಿದ್ದಾರೆ. ಇನ್ನು ಯುವ ಹೊಸ ಮತದಾರರು ಸೇರ್ಪಡೆಯಾಗುವ ಸಾಧ್ಯತೆಯಿದೆ.

2008ರಲ್ಲಿ ಎಸ್‌ಟಿ ಮೀಸಲು ಕ್ಷೇತ್ರವಾಗಿ ಬದಲಾದ ನಂತರ ನಾಲ್ಕು ಚುನಾವಣೆ ನಡೆದಿವೆ. ಮೂರು ಬಾರಿ ಬಿಜೆಪಿ, ಒಮ್ಮೆ ಜೆಡಿಎಸ್‌ನಿಂದ ಸ್ಪರ್ಧಿಸಿದ ರಾಜೂ ಗೌಡ ಹಾಗೂ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಮುಖಾಮುಖಿಯಾಗಿ ಚುನಾವಣೆ ಎದುರಿಸಿ ತಲಾ ಎರಡು ಬಾರಿ ಜಯ ಗಳಿಸಿದ್ದರು. ಇದೀಗ ರಾಜೂ ಗೌಡ ಐದನೇ ಬಾರಿಗೆ ದಿವಂಗತ ಶಾಸಕ ವೆಂಕಟಪ್ಪ ನಾಯಕ ಅವರ ಪುತ್ರನ ವಿರುದ್ಧ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಕ್ಷೇತ್ರದಲ್ಲಿ ಪಕ್ಷಗಳಿಗಿಂತ ವ್ಯಕ್ತಿ ಪ್ರತಿಷ್ಠೆಯೇ ಮುಖ್ಯವಾಗಿದ್ದು ಕಾಣಬಹುದು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆನೆ ಕದ್ದ ಕಳ್ಳನಿಗೂ ಅಡಿಕೆ ಕದ್ದ ಕಳ್ಳನಿಗೂ ವ್ಯತ್ಯಾಸವಿಲ್ಲವೇ?

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಯಾವ ಪಕ್ಷವೂ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ಮೀಸಲು ಕ್ಷೇತ್ರವಾದ ಬಳಿಕ ಪ್ರತಿ ಐದು ವರ್ಷಕ್ಕೊಮ್ಮೆ ಪಕ್ಷ ಬದಲಾಯಿಸಿದ್ದಾರೆ. ಆದರೆ ಅದೇ ವ್ಯಕ್ತಿಯನ್ನು ಪುನರಾಯ್ಕೆ ಮಾಡಿರುವುದು ಗಮನಾರ್ಹ ಸಂಗತಿ. ಈ ಬಾರಿಯ ಉಪ-ಚುನಾವಣೆಯಲ್ಲಿ ಮತದಾರರ ಯಾರಿಗೆ ಒಲವು ತೋರುತ್ತಾರೆ ಎಂಬುದು ಜೂ.4ರ ತನಕ ಕಾಯಲೇಬೇಕು.

ಬಾಲಾಜಿ ಕುಂಬಾರ್
+ posts

ಕವಿ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

1 COMMENT

  1. ಸುರಪುರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ಎಷ್ಟು? ನೀವು ನೀಡಿರುವ ಅಂಕಿಅಂಶಗಳ ಪ್ರಕಾರ ಪರಿಶಿಷ್ಟ ಪಂಗಡ, ದಲಿತ ಮತ್ತು ಮುಸ್ಲಿಂ ಮತದಾರರ ಸಂಖ್ಯೆಯೇ ಅಜಮಾಸು ಎರಡೂವರೆ ಲಕ್ಷದಷ್ಟಿದೆ. ಹಾಗಾದ್ರೆ ಅಲ್ಲಿ ಉಳಿದ ಜಾತಿ-ಜನಾಂಗಗಳ ಮತದಾರರರು ಇಲ್ಲವೇ? ಇದ್ದರೆ ಅವರ ಸಂಖ್ಯೆ ಎಷ್ಟು? ಅಂಕಿಅಂಶಗಳನ್ನು ನೀಡುವಾಗ ಸ್ವಲ್ಪ ಕಾಮನ್‌ಸೆನ್ಸ್ ಕೂಡಾ ಇಟ್ಟುಕೊಂಡರೆ ಒಳ್ಳೆಯದು ಸರ್…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತಗಟ್ಟೆಯ ಮತದಾನದ ಅಂಕಿಅಂಶ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಲು ಸುಪ್ರೀಂ ನಕಾರ

ಪ್ರತಿ ಮತಗಟ್ಟೆಯ ಮತದಾನದ ಅಂಕಿಅಂಶಗಳನ್ನು ಒದಗಿಸುವ ಫಾರ್ಮ್‌ 17ಸಿ ಪ್ರತಿಗಳನ್ನು ತನ್ನ...

ವಿಜಯಪುರ | ರೈತರ ಸಮಸ್ಯೆಗಳ ಪರಿಹಾರಕ್ಕೆ ರೈತಸಂಘ ಆಗ್ರಹ

ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು...

ಮೇ ಸಾಹಿತ್ಯ ಮೇಳ | ಹುಚ್ಚಮ್ಮ ಚೌಧರಿ ಕುಣಿಕೇರಿಗೆ ‘ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ’

ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ...

ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸಲು ಪ್ರಕ್ರಿಯೆ ಆರಂಭ: ಸಚಿವ ಪರಮೇಶ್ವರ್‌

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ನಾವು...