ಅಣ್ಣಾಮಲೈ ತಮಿಳುನಾಡಿನ ಗಲ್ಲಿಗಲ್ಲಿಗೆ ತಿರುಗಿ ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯದ ಅಲೆ ಎಬ್ಬಿಸಿದ್ದರು. ʼಎನ್ ಮಣ್, ಎನ್ ಮಕ್ಕಳ್ʼ ಪಾದಯಾತ್ರೆ ಅದಕ್ಕೆ ಒಂದು ಸಾಕ್ಷಿ. ದ್ರಾವಿಡ ನೆಲದಲ್ಲಿ ಇದೊಂದು ಅಸಮಾನ್ಯ ಸಾಧನೆ ಎನ್ನುವುದು ದೆಹಲಿ ಬಿಜೆಪಿ ನಾಯಕರಿಗೆ ಗೊತ್ತಿಲ್ಲದ ವಿಚಾರವೇನೂ ಆಗಿರಲಿಲ್ಲ. ಎಐಎಡಿಎಂಕೆ ಮೈತ್ರಿ ಬಗ್ಗೆ ಅಸಮಾಧಾನ ಹೊಂದಿದ್ದಕ್ಕೆ ಅಣ್ಣಾಮಲೈ ಅವರನ್ನು ಮೂಲೆಗುಂಪು ಮಾಡಲಾಗಿದೆ. ಐಪಿಎಸ್ ಹುದ್ದೆ ತ್ಯಜಿಸಿ ಬಂದು ಮೋದಿ ಜಪ ಮಾಡಿದ್ದಕ್ಕೆ ಅಣ್ಣಾಮಲೈ ಈಗ ರಾಜಕೀಯವಾಗಿ ಪರಿತಪಿಸುವಂತಾಗಿದೆ.
ತಮಿಳುನಾಡಿನ ರಾಜಕೀಯವೇ ಬೇರೆ. ದ್ರಾವಿಡ ಪಕ್ಷಗಳನ್ನಷ್ಟೇ ತಮಿಳುನಾಡಿನ ಮಂದಿ ಹೆಚ್ಚಾಗಿ ಈವರೆಗೆ ಪುರಸ್ಕರಿಸಿದ್ದಾರೆ. ಪರ್ಯಾಯವಾಗಿ ರಾಷ್ಟ್ರೀಯ ಪಕ್ಷವೊಂದಕ್ಕೆ ಅಧಿಕಾರ ಕೊಟ್ಟ ಉದಾಹರಣೆ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಲ್ಲ. ಸುಮಾರು ನಾಲ್ಕು ವರ್ಷಗಳ ಕಾಲ ದ್ರಾವಿಡ ಪಕ್ಷಗಳನ್ನು ಎದುರು ಹಾಕಿಕೊಂಡು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ರಾಜಕಾರಣ ನಡೆಸಿ, ತಮಿಳುನಾಡಿನ ಒಂದಿಷ್ಟು ಮತಗಳನ್ನು ಸೆಳೆದಿದ್ದ ಕರ್ನಾಟಕ ಕೇಡರ್ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಈಗ ಪಕ್ಷದ ವಿರುದ್ಧವೇ ಅಸಮಾಧಾನದಿಂದ ನಡೆದುಕೊಂಡಿದ್ದು, ತಮಿಳುನಾಡಿನ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲೇ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ತಮಿಳುನಾಡಿನಲ್ಲಿ ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ದ್ರಾವಿಡ ಪಕ್ಷಗಳ ಎದುರು ಹೀನಾಯವಾಗಿ ಸೋತಿದೆ. ಮಾತ್ರವಲ್ಲದೇ, ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅಣ್ಣಾಮಲೈ ಸ್ಪರ್ಧಿಸಿ ಸೋತಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಂತೂ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲಲಿಲ್ಲ. ಆದರೆ, ಪಕ್ಷದ ವೋಟ್ ಶೇರ್ 2019ರಲ್ಲಿ ಶೇ. 3.5 ರಿಂದ 2024ರಲ್ಲಿ ಶೇ. 11.2ಕ್ಕೆ ಏರಿಕೆಯಾಗಿತ್ತು, ಅದು ಅಣ್ಣಾಮಲೈ ತಮಿಳುನಾಡಿನ ಗಲ್ಲಿಗಲ್ಲಿಗೆ ತಿರುಗಿ ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯದ ಅಲೆ ಎಬ್ಬಿಸಿರುವುದು ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ʼಎನ್ ಮಣ್, ಎನ್ ಮಕ್ಕಳ್ʼ ಪಾದಯಾತ್ರೆ ಅದಕ್ಕೆ ಒಂದು ಸಾಕ್ಷಿ. ದ್ರಾವಿಡ ನೆಲದಲ್ಲಿ ಇದೊಂದು ಅಸಮಾನ್ಯ ಸಾಧನೆ ಎನ್ನುವುದು ದೆಹಲಿ ಬಿಜೆಪಿ ನಾಯಕರಿಗೆ ಗೊತ್ತಿಲ್ಲದ ವಿಚಾರವೇನೂ ಆಗಿರಲಿಲ್ಲ.
ಪಕ್ಷದ ಅಧ್ಯಕ್ಷನ ಸ್ಥಾನದಿಂದ ಕೆಳಗಿಳಿದ ಬಳಿಕ ಕೊಯಮತ್ತೂರಿನಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ‘ಯಾರಿಗೂ ಕೂಡ ತಲೆಯ ಮೇಲೆ ಬಂದೂಕು ಇಟ್ಟು, ಬಲವಂತವಾಗಿ ಪಕ್ಷದಲ್ಲಿ ಇರುವಂತೆ ಹೇಳಲು ಸಾಧ್ಯವಿಲ್ಲ’ ಎಂದು ಅಣ್ಣಾಮಲೈ ಹೇಳಿದ್ದು, ಬಿಜೆಪಿಯಲ್ಲಿ ಸ್ವಾತಂತ್ರ್ಯ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ ರೀತಿಯದು. ಇನ್ನು, ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಚಟುವಟಿಕೆಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದರು. ಅಲ್ಲಿಗೆ ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಹಾಗೂ ಇವರ ನಡುವೆ ಭಿನ್ನಾಭಿಪ್ರಾಯವಿರುವುದು ಸ್ಪಷ್ಟವಾಗಿತ್ತು.
ಇದನ್ನೂ ಓದಿ : ನಾನೇ ರಾಮ, ನಾನೇ ಶಿವʼ ಎಂದು ಮಾಡಿದ್ದು ಅತ್ಯಾಚಾರ! ಸ್ವಯಂಘೋಷಿತ ʼದೇವಮಾನವʼರ ಬಣ್ಣ ಬಯಲು
ದ್ರಾವಿಡ ಪಕ್ಷದಲ್ಲಿಯೇ ರಾಜಕೀಯ ಜೀವನ ಆರಂಭಿಸಿದ್ದ ನೈನಾರ್ ನಾಗೇಂದ್ರನ್, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಅನುಕೂಲವಾಗಲಿದೆ ಎನ್ನುವುದು ಬಿಜೆಪಿ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ʼಕೊಡದೆಯೂ ಕೊಟ್ಟʼ ನೆಪ. ಇನ್ನು, ರಾಜಕೀಯಕ್ಕಾಗಿ ಸ್ವಂತ ಹಣವನ್ನು ವ್ಯಯಿಸಿದ್ದೇನೆ ಎಂದು ಹೇಳಿರುವ ಅಣ್ಣಾಮಲೈ, ʼನಾನು ರಾಜಕೀಯದಲ್ಲಿ ಖುಷಿಯಲ್ಲಿದ್ದರೆ, ಇಲ್ಲಿಯೇ ಉಳಿಯುತ್ತೇನೆ. ಇಲ್ಲವಾದರೆ, ನಾನು ರಾಜಕೀಯ ತೊರೆದು, ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಯಾರೂ ಕೂಡ ಬಂದೂಕನ್ನು ತಲೆ ಮೇಲಿಟ್ಟು, ಪಕ್ಷದಲ್ಲಿ ಇರುವಂತೆ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿರುವುದು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿತ್ತು. ಅದಾದ ಬಳಿಕ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಜವಾಬ್ದಾರಿ ನೀಡಿದ ಸಂದದರ್ಭದಲ್ಲಿಯೂ ಅದನ್ನು ತಂದೆಯ ಆರೋಗ್ಯದ ಕಾರಣ ಕೊಟ್ಟು ತ್ಯಜಿಸಿದರು. ಇವೆಲ್ಲಾ ಬಿಜೆಪಿ ಮೇಲಿನ ಅಣ್ಣಾಮಲೈ ಅವರ ಅಸಮಾಧಾನ ಎನ್ನುವುದು ಸ್ಪಷ್ಟವಾಗಿತ್ತು. ಈಗ ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧಿಸುವುದಕ್ಕೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದೆ ಎನ್ನಲಾಗುತ್ತಿದೆ. ಎಂದಿನಂತೆ ತಮಿಳುನಾಡಿನಲ್ಲೂ ʼಬಳಸಿ ಬಿಸಾಕುವʼ ತನ್ನ ಹಳೆಯ ಧೋರಣೆಯನ್ನು ಬಿಜೆಪಿ ತೋರಿಸಿದೆ.
ಈ ಹಿಂದೆ ಎಐಎಡಿಎಂಕೆ ಪಕ್ಷವನ್ನು ಜರೆಯುತ್ತಿದ್ದ ಅಣ್ಣಾಮಲೈ ಅವರನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಲವಂತ ಎನ್ನುವ ಹಾಗೆ ಒಪ್ಪಿಸಿ ಜೊತೆಗೂಡಿ ಕೆಲಸ ಮಾಡುವಂತೆ ಕೇಂದ್ರ ಬಿಜೆಪಿ ಮಾಡಿತ್ತು. ವೇದಿಕೆ ಮೇಲೆ ಅಣ್ಣಾಮಲೈ ಅವರಿಗೆ ಮುಜುಗರ ಆಗುವ ಹಾಗೆ ಎಐಎಡಿಎಂಕೆ ನಾಯಕರೊಂದಿಗೆ ನಿಲ್ಲುವ ಹಾಗೆ ಮಾಡಿತ್ತು ಬಿಜೆಪಿ ಹೈಕಮಾಂಡ್. ಆ ಎಲ್ಲಾ ಸಿಟ್ಟು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಹೊರ ಬಂದಿತ್ತು. ʼಮೈತ್ರಿಕೂಟವನ್ನು ಸಾರ್ವಜನಿಕವಾಗಿ ಟೀಕಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾತುಕೊಟ್ಟಿದ್ದರಿಂದ ಸುಮ್ಮನಿದ್ದೇನೆ’ ಎಂದು ಹೇಳುವ ಮೂಲಕವೇ ತಮ್ಮ ಆಕ್ರೋಶವನ್ನು ಅಣ್ಣಾಮಲೈ ಹೊರಹಾಕಿದ್ದರು. ‘ಅಣ್ಣಾಮಲೈ ಪಕ್ಷದ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ರಾಜ್ಯದಾದ್ಯಂತ ಪ್ರವಾಸ ಮಾಡಿ, ಡಿಎಂಕೆ ಸರ್ಕಾರದ ವೈಫಲ್ಯಗಳನ್ನು ಆಕ್ರಮಣಕಾರಿಯಾಗಿ ಟೀಕಿಸುವ ಮೂಲಕ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ, ಎಐಎಡಿಎಂಕೆ- ಬಿಜೆಪಿ ಮೈತ್ರಿಯಾದ ಬಳಿಕ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿದೆ ಎನ್ನುವುದು ಅಣ್ಣಾಮಲೈ ಅವರ ಅಭಿಪ್ರಾಯ.
ಇನ್ನು, ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಅಣ್ಣಾಮಲೈ, ತಮಿಳುನಾಡಿನ ಪ್ರಮುಖ ಗೌಂಡರ್ ಸಮುದಾಯದವರು ಮತ್ತು ರಾಜ್ಯದ ಪಶ್ಚಿಮ ಭಾಗದವರು. ಎಐಎಡಿಎಂಕೆ ಜೊತೆಗಿನ ಮೈತ್ರಿಯಲ್ಲಿ ಒಂದೇ ಸಮುದಾಯದ ನಾಯಕರು ಇರುವುದಕ್ಕಿಂತ, ರಾಜ್ಯದ ಇನ್ನೊಂದು ಪ್ರಮುಖ ತೇವರ್ ಸಮುದಾಯದ ನಾಯಕರಿದ್ದರೆ, ಡಿಎಂಕೆ ಮೈತ್ರಿಕೂಟಕ್ಕೆ ಚುನಾವಣಾ ಕಣದಲ್ಲಿ ಸವಾಲು ಹಾಕಲು ಸುಲಭ ಎನ್ನುವ ಕಾರಣವೇ ಅಣ್ಣಾಮಲೈ ಪದತ್ಯಾಗದ ಹಿಂದಿನ ಪ್ರಮುಖ ಅಂಶಗಳಲ್ಲೊಂದು ಎನ್ನಲಾಗಿತ್ತು. ಬಿಜೆಪಿಗೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಮಾತ್ರ ದಿಕ್ಕು, ಹಾಗಾಗಿಯೇ, ಅಮಿತ್ ಶಾ ಈ ಯೋಜನೆ ರೂಪಿಸಿದ್ದರು. ಈ ಬಗ್ಗೆ ಅಸಮಾಧಾನ ಅಣ್ಣಾಮಲೈ ಅವರಲ್ಲಿತ್ತು. ನೇರವಾಗಿ ತೋರಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದರೂ, ಅವರೊಳಗೆ ಅಗಾಧ ನೋವಿತ್ತು ಎನ್ನುವುದು ಸುಳ್ಳಲ್ಲ. ಅವ್ಯಕ್ತವಾಗಿದ್ದ ಆ ನೋವೆಲ್ಲಾ ಈಗ ವ್ಯಕ್ತವಾಗುತ್ತಿದೆ.
ಅಣ್ಣಾಮಲೈ ಅವರ ಇಂತಹ ಅಸಮಾಧಾನದ ಹೇಳಿಕೆ/ನಡೆ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡಿತ್ತು. ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಯ ಬಗ್ಗೆ ಅಣ್ಣಾಮಲೈ ಅವರಿಂದ ಅತೃಪ್ತಿಯ ಸಂದೇಶ ಸಾರ್ವಜನಿಕ ವಲಯಕ್ಕೆ ಹೋಗಿದ್ದನ್ನು ಡಿಎಂಕೆ ರಾಜಕೀಯವಾಗಿ ಬಳಸಿಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲಂತೂ ಅಣ್ಣಾಮಲೈ ಅವರನ್ನು ಬಿಜೆಪಿ ಅತ್ಯಂತ ಹೀನಾಯವಾಗಿ ನೋಡಿಕೊಂಡಿದೆ. ಮೋದಿ ಬಂದಾಗಲೂ ಅಣ್ಣಾಮಲೈ ಮಾಜಿ ಅದ್ಯಕ್ಷರಾಗಿ ಬೇಟಿ ಮಾಡುವುದಕ್ಕೆ ಹೋಗದೆ ಇರುವುದೇ ಅದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಒಬ್ಬ ವ್ಯಕ್ತಿ ಪಕ್ಷ ಮತ್ತು ಆರ್‌ಎಸ್‌ಎಸ್ ಸಿದ್ದಾಂತವನ್ನು ಮೀರಿ ಬೆಳೆಯುವುದನ್ನು ಸಹಿಸಿಕೊಳ್ಳುವುದಿಲ್ಲ. ತಮಿಳುನಾಡಿನ ಕೆಲವು ಭಾಗಗಳಲ್ಲಿ ಅಣ್ಣಾಮಲೈ ಪಕ್ಷ ಮತ್ತು ಆರ್‌ಎಸ್‌ಎಸ್ ಸಿದ್ದಾಂತವನ್ನು ಮೀರಿ ಆ ಸಾಧನೆ ಮಾಡಿದ್ದರು. ಅದು ಬಿಜೆಪಿ ಹೈಕಮಾಂಡ್ ಮತ್ತು ಆರ್‌ಎಸ್‌ಎಸ್ ನಾಯಕರಿಗೆ ಹಿಡಿಸಿಲ್ಲ. ನಿಧಾನವಾಗಿ ಅಣ್ಣಾಮಲೈ ಅವರನ್ನು ಮೂಲೆಗುಂಪು ಮಾಡುತ್ತಾ ಬರಲಾಯಿತು. ಇಂತಹ ಅನುಭವ ಸ್ವತಃ ಸ್ವಯಂ ಘೋಷಿತ ವಿಶ್ವಗುರು ನರೇಂದ್ರ ಮೋದಿ ಅವರಿಗೂ ಆಗಿದೆ. ಎಲ್.ಕೆ ಅಡ್ವಾನಿಯಂತಹ ನಾಯಕರೂ ಇಂತದ್ದನ್ನೇ ಎದುರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮತ್ತು ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಆ ಪೈಕಿಯಲ್ಲಿ ಒಬ್ಬರು. ಹಾಗಾಗಿ ಅಣ್ಣಾಮಲೈ ಅವರೇನೂ ಹೊಸಬರಲ್ಲ. ಒಟ್ಟಿನಲ್ಲಿ, ಮೋದಿ ಜಪ ಮಾಡಿದ್ದಕ್ಕೆ ಅಣ್ಣಾಮಲೈ ಈಗ ರಾಜಕೀಯವಾಗಿ ಪರಿತಪಿಸುವಂತಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.




