ಆರೋಗ್ಯಕರ ಗಂಡಸುತನ ಎಂದರೆ ಅಧಿಕಾರ ತೋರಿಸುವುದಲ್ಲ; ಭಾವನೆಗಳನ್ನು ವ್ಯಕ್ತಪಡಿಸುವುದು, ತಪ್ಪಾದಾಗ ಕ್ಷಮೆ ಕೇಳುವುದು, ನಿರಾಕರಣೆಯನ್ನು ಒಪ್ಪಿಕೊಳ್ಳುವುದು ಮತ್ತು ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವುದೂ ಅದರ ಭಾಗ.
ಕೆಲವು ಸುದ್ದಿಗಳು ಓದಿ ಮುಗಿದ ಮೇಲೂ ಮನಸ್ಸಿನಿಂದ ಅಳಿಯುವುದಿಲ್ಲ. ಕೊಪ್ಪಳದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿ, ಅದನ್ನು ವಿಡಿಯೋ ಮಾಡಿಕೊಂಡು ಸ್ನೇಹಿತರೊಂದಿಗೆ ಹಂಚಿಕೊಂಡು, ಆ ವಿಡಿಯೋವನ್ನೇ ಬೆದರಿಕೆಯಾಗಿ ಬಳಸಿಕೊಂಡು ಹಲವು ಮಂದಿ ಪದೇಪದೇ ದೌರ್ಜನ್ಯ ನಡೆಸಿದ ಪ್ರಕರಣ ಅಂತಹದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಘಟನೆಗೆ ಕಾನೂನು ತನ್ನ ಕೆಲಸ ಮಾಡಬೇಕು. ತಪ್ಪಿತಸ್ಥರು ಶಿಕ್ಷೆಗೆ ಒಳಗಾಗಬೇಕು. ಆದರೆ ಪ್ರಕರಣವನ್ನು ಅಲ್ಲಿಗೇ ಮುಗಿಸಿದರೆ, ಅದರೊಳಗಿರುವ ದೊಡ್ಡ ಸಾಮಾಜಿಕ ಪ್ರಶ್ನೆ ನಮ್ಮ ಗಮನಕ್ಕೆ ಬರುವುದಿಲ್ಲ. ಪ್ರೀತಿ, ಸ್ನೇಹ ಮತ್ತು ನಂಬಿಕೆಯ ಸಂಬಂಧವೊಂದು ಯಾವ ಹಂತದಲ್ಲಿ ಮತ್ತೊಬ್ಬರ ಮೇಲೆ ಅಧಿಕಾರ ಸಾಧಿಸುವ ಸಾಧನವಾಗುತ್ತದೆ?
ಈ ಪ್ರಶ್ನೆಗೆ ಉತ್ತರ ಹುಡುಕುವಾಗ “ಇಂದಿನ ಯುವಕರು ಹಾಳಾಗುತ್ತಿದ್ದಾರೆ” ಎಂಬ ಸಾಮಾನ್ಯೀಕರಣಕ್ಕೆ ಹೋಗುವುದು ಸರಿಯಲ್ಲ. ಯುವಜನರೆಲ್ಲರೂ ಒಂದೇ ರೀತಿಯವರಲ್ಲ. ಅವರ ಬದುಕು ಕುಟುಂಬದ ವಾತಾವರಣ, ಶಿಕ್ಷಣ, ಆರ್ಥಿಕ ಪರಿಸ್ಥಿತಿ, ಗ್ರಾಮ–ನಗರದ ಹಿನ್ನೆಲೆ, ಸ್ನೇಹ ವಲಯ, ವೈಯಕ್ತಿಕ ಅನುಭವ ಮತ್ತು ಡಿಜಿಟಲ್ ಜಗತ್ತಿನ ಸಂಪರ್ಕದಿಂದ ವಿಭಿನ್ನವಾಗಿ ರೂಪುಗೊಳ್ಳುತ್ತದೆ. ಬಹುಪಾಲು ಯುವಜನರು ಇಂತಹ ಅಪರಾಧಗಳಿಂದ ದೂರವೇ ಇದ್ದಾರೆ. ಆದರೂ ಕೆಲವು ನಿರ್ದಿಷ್ಟ ವರ್ತನೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ.
ಪ್ರೀತಿ ಯಾವಾಗ ಅಧಿಕಾರವಾಗುತ್ತದೆ?
“ಅವಳು ನನ್ನವಳು” ಎಂಬ ಮಾತು ಪ್ರೀತಿಯಂತೆ ಕೇಳಿಸಬಹುದು. ಆದರೆ ಅದರೊಳಗೆ ಮತ್ತೊಬ್ಬರ ಮೇಲೆ ಮಾಲೀಕತ್ವದ ಭಾವನೆ ಅಡಗಿದ್ದರೆ ಅದು ಪ್ರೀತಿಯಲ್ಲ. ಪ್ರೀತಿಸುವ ವ್ಯಕ್ತಿಗೂ ತನ್ನದೇ ಆದ ಇಚ್ಛೆ, ನಿರ್ಧಾರ ಮತ್ತು ಗಡಿ ಇರುತ್ತದೆ.
ನಮ್ಮ ಲಿಂಗಸಂಸ್ಕೃತಿಯ ಕೆಲವು ಹಳೆಯ ಕಲ್ಪನೆಗಳು ಇಲ್ಲಿ ಪ್ರಭಾವ ಬೀರುತ್ತವೆ. ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಎಚ್ಚರಿಕೆಗಳ ಪಟ್ಟಿ ಸಿಗುತ್ತದೆ—ಯಾರನ್ನು ನಂಬಬೇಕು, ಎಲ್ಲಿಗೆ ಹೋಗಬೇಕು, ಎಷ್ಟು ಹೊತ್ತು ಹೊರಗಿರಬೇಕು. ಆದರೆ ಹುಡುಗರಿಗೆ ನಿರಾಕರಣೆಯನ್ನು ಗೌರವಿಸುವುದು, ಕೋಪವನ್ನು ನಿಭಾಯಿಸುವುದು, ಭಾವನೆಗಳನ್ನು ವ್ಯಕ್ತಪಡಿಸುವುದು ಮತ್ತು ಇನ್ನೊಬ್ಬರ ಗಡಿಯನ್ನು ಒಪ್ಪಿಕೊಳ್ಳುವುದು ಅಷ್ಟೇ ಗಂಭೀರವಾಗಿ ಕಲಿಸಲಾಗುತ್ತದೆಯೇ ಎಂಬುದು ಪರಿಶೀಲಿಸಬೇಕಾದ ಪ್ರಶ್ನೆ.

ಇದು ಎಲ್ಲ ಹುಡುಗರನ್ನೂ ಒಂದೇ ರೀತಿಯಲ್ಲಿ ನೋಡುವ ಮಾತಲ್ಲ. ಬದಲಿಗೆ, ಕೆಲವು ಕುಟುಂಬಗಳು ಮತ್ತು ಸಾಮಾಜಿಕ ಪರಿಸರಗಳಲ್ಲಿ ಪುರುಷತ್ವಕ್ಕೆ ಜೋಡಿಸಲಾಗಿರುವ ಅಧಿಕಾರದ ಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ. “ಗಂಡು ಗಟ್ಟಿಯಾಗಿರಬೇಕು”, “ಸೋಲಬಾರದು”, “ತನ್ನ ಮಾತು ನಡೆಯಬೇಕು” ಎಂಬ ಕಲ್ಪನೆಗಳ ನಡುವೆ “ಬೇಡ ಎಂದರೆ ನಿಲ್ಲಬೇಕು” ಎಂಬ ಮೌಲ್ಯವೂ ಸಮಾನವಾಗಿ ಬೆಳೆದರೆ ಸಂಬಂಧಗಳ ಸ್ವರೂಪ ಬದಲಾಗಬಹುದು.
ಆರೋಗ್ಯಕರ ಗಂಡಸುತನ ಎಂದರೆ ಅಧಿಕಾರ ತೋರಿಸುವುದಲ್ಲ. ಭಾವನೆಗಳನ್ನು ವ್ಯಕ್ತಪಡಿಸುವುದು, ತಪ್ಪಾದಾಗ ಕ್ಷಮೆ ಕೇಳುವುದು, ನಿರಾಕರಣೆಯನ್ನು ಒಪ್ಪಿಕೊಳ್ಳುವುದು ಮತ್ತು ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವುದೂ ಅದರ ಭಾಗ.
ಸಮ್ಮತಿ ಎಂದರೆ ಸರಳವಾದ ಗಡಿ
ಸಮ್ಮತಿಯ ಬಗ್ಗೆ ದೊಡ್ಡ ತತ್ವಗಳ ಅಗತ್ಯವಿಲ್ಲ. “ಬೇಡ” ಎಂದರೆ ಬೇಡ. ಮೌನವನ್ನು ಸಮ್ಮತಿ ಎಂದು ಅರ್ಥೈಸಲಾಗುವುದಿಲ್ಲ. ಪ್ರೀತಿಯಲ್ಲಿರುವುದು ಎಲ್ಲದಕ್ಕೂ ಒಪ್ಪಿಗೆ ಎಂದಲ್ಲ. ಒಂದು ಸಂದರ್ಭದಲ್ಲಿ ನೀಡಿದ ಒಪ್ಪಿಗೆ ಮತ್ತೊಂದು ಸಂದರ್ಭಕ್ಕೂ ಅನ್ವಯಿಸುವುದಿಲ್ಲ.
ಈ ಅರಿವು ಮನೆಯ ಸಣ್ಣ ಸಂಗತಿಗಳಿಂದಲೇ ಆರಂಭವಾಗಬಹುದು. ಮಗುವಿನ ದೇಹವನ್ನು ಅದರ ಅನುಮತಿಯಿಲ್ಲದೆ ಮುಟ್ಟದಿರುವುದು, ಇನ್ನೊಬ್ಬರ ವಸ್ತುವನ್ನು ಕೇಳದೆ ತೆಗೆದುಕೊಳ್ಳದಿರುವುದು, ಯಾರಾದರೂ “ಬೇಡ” ಎಂದಾಗ ಅದನ್ನು ಗೌರವಿಸುವುದು—ಇವು ಮುಂದೆ ಸಂಬಂಧಗಳಲ್ಲಿನ ಗಡಿಯನ್ನು ಅರ್ಥಮಾಡಿಕೊಳ್ಳುವ ನೆಲೆಯಾಗುತ್ತವೆ.
ಶಾಲೆ ಮತ್ತು ಕಾಲೇಜುಗಳಲ್ಲಿ ಸಂಬಂಧಗಳು, ವೈಯಕ್ತಿಕ ಗಡಿಗಳು, ಸಮ್ಮತಿ, ಲಿಂಗಸಮಾನತೆ ಮತ್ತು ಹೊಣೆಗಾರಿಕೆಯ ಕುರಿತು ವಯೋಸೂಕ್ತ ಚರ್ಚೆಗಳು ನಡೆಯಬೇಕಾಗಿರುವುದೂ ಇದೇ ಕಾರಣಕ್ಕೆ.
ಒಂದು ವಿಡಿಯೋ ಹೇಗೆ ಅಧಿಕಾರವಾಗುತ್ತದೆ?
ಕೊಪ್ಪಳದ ಪ್ರಕರಣದ ಅತ್ಯಂತ ಆತಂಕಕಾರಿ ಅಂಶಗಳಲ್ಲಿ ಒಂದು ಡಿಜಿಟಲ್ ತಂತ್ರಜ್ಞಾನದ ದುರುಪಯೋಗ. ಖಾಸಗಿ ಕ್ಷಣವನ್ನು ಚಿತ್ರೀಕರಿಸಿ, ಮತ್ತೊಬ್ಬರಿಗೆ ಕಳುಹಿಸಿ, ಅದನ್ನೇ ತೋರಿಸಿ ಬೆದರಿಸುವಾಗ ವಿಡಿಯೋ ಕೇವಲ ಒಂದು ದಾಖಲೆ ಆಗಿರುವುದಿಲ್ಲ. ಅದು ವ್ಯಕ್ತಿಯ ಮೇಲೆ ನಿಯಂತ್ರಣ ಸಾಧಿಸುವ ಸಾಧನವಾಗುತ್ತದೆ.
ಇಲ್ಲಿ ಡಿಜಿಟಲ್ ಸಾಕ್ಷರತೆಯ ಅರ್ಥವನ್ನು ವಿಸ್ತರಿಸಬೇಕಾಗಿದೆ. ಮೊಬೈಲ್ ಬಳಸುವುದು ಅಥವಾ ಸಾಮಾಜಿಕ ಜಾಲತಾಣದ ಖಾತೆ ಹೊಂದಿರುವುದಷ್ಟೇ ಡಿಜಿಟಲ್ ಜ್ಞಾನವಲ್ಲ. ಮತ್ತೊಬ್ಬರ ಖಾಸಗಿತನವನ್ನು ಗೌರವಿಸುವುದು, ಯಾವ ಚಿತ್ರ ಅಥವಾ ವಿಡಿಯೋವನ್ನು ಹಂಚಬಾರದು ಎಂಬ ಅರಿವು ಮತ್ತು ಆನ್‌ಲೈನ್ ವರ್ತನೆಗೂ ಕಾನೂನಿನ ಹೊಣೆಗಾರಿಕೆ ಇದೆ ಎಂಬ ತಿಳಿವಳಿಕೆಯೂ ಅದರ ಭಾಗ.
ಅಪ್ರಾಪ್ತರನ್ನು ಒಳಗೊಂಡ ಲೈಂಗಿಕ ಚಿತ್ರ ಅಥವಾ ವಿಡಿಯೋವನ್ನು ಸೃಷ್ಟಿಸುವುದು, ಸಂಗ್ರಹಿಸುವುದು, ಹಂಚುವುದು ಅಥವಾ ಪ್ರಸಾರ ಮಾಡುವುದು ಗಂಭೀರ ಕಾನೂನು ಪರಿಣಾಮಗಳನ್ನು ಹೊಂದಿದೆ. ಪೋಕ್ಸೊ ಕಾಯ್ದೆಯ ಸೆಕ್ಷನ್ 13–15 ಮಕ್ಕಳನ್ನು ಲೈಂಗಿಕ ಚಿತ್ರಣಕ್ಕಾಗಿ ಬಳಸುವುದು ಮತ್ತು ಅಂತಹ ವಸ್ತುಗಳನ್ನು ಸಂಗ್ರಹಿಸುವುದು ಅಥವಾ ಹಂಚುವುದಕ್ಕೆ ಸಂಬಂಧಿಸಿದ ಅಪರಾಧಗಳನ್ನು ನಿರ್ದಿಷ್ಟಪಡಿಸುತ್ತವೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67B ಕೂಡ ಮಕ್ಕಳನ್ನು ಒಳಗೊಂಡ ಲೈಂಗಿಕವಾಗಿ ಸ್ಪಷ್ಟವಾದ ವಸ್ತುಗಳ ಪ್ರಕಟಣೆ, ಪ್ರಸಾರ, ಸಂಗ್ರಹಣೆ ಮುಂತಾದವುಗಳನ್ನು ಅಪರಾಧವೆಂದು ಪರಿಗಣಿಸುತ್ತದೆ.
ಹೀಗಾಗಿ “ನಾನು ಕೇವಲ ಫಾರ್ವರ್ಡ್ ಮಾಡಿದೆ” ಎನ್ನುವುದು ನಿರಪರಾಧಿತ್ವದ ಸರಳ ನೆಪವಲ್ಲ.
NCRBಯ 2023ರ ಮಾಹಿತಿಯ ಪ್ರಕಾರ, POCSO ಕಾಯ್ದೆಯ ಸೆಕ್ಷನ್ 4 ಮತ್ತು 6 ಅಡಿಯಲ್ಲಿ ದಾಖಲಾಗಿದ್ದ 40,434 ಪ್ರಕರಣಗಳಲ್ಲಿ 96.6% ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರಿಗೆ ಪರಿಚಿತರಾಗಿದ್ದರು.
ಈ ಅಂಕಿಅಂಶ ಮಕ್ಕಳ ಸುರಕ್ಷತೆಯ ಬಗ್ಗೆ ಇರುವ ಒಂದು ಸಾಮಾನ್ಯ ಕಲ್ಪನೆಯನ್ನು ಬದಲಿಸುತ್ತದೆ. ಅಪಾಯ ಎಂದರೆ ಅಪರಿಚಿತ ವ್ಯಕ್ತಿಯಿಂದ ಮಾತ್ರ ಬರುವುದಿಲ್ಲ. ಪರಿಚಯ, ಸ್ನೇಹ, ಪ್ರೀತಿ ಅಥವಾ ನಂಬಿಕೆಯ ಸಂಬಂಧಗಳೊಳಗೂ ಗಡಿ ಉಲ್ಲಂಘನೆಯಾಗಬಹುದು. ಆದ್ದರಿಂದ ಮಕ್ಕಳಿಗೆ ಅಪರಿಚಿತರ ಬಗ್ಗೆ ಎಚ್ಚರಿಕೆ ನೀಡುವುದರ ಜೊತೆಗೆ, ಪರಿಚಿತ ವ್ಯಕ್ತಿಯ ವರ್ತನೆಯಲ್ಲೂ ಅಸಹಜತೆಯನ್ನು ಗುರುತಿಸುವ ಸಾಮರ್ಥ್ಯ ಬೇಕಾಗುತ್ತದೆ.
ಒಂದು ಅಪರಾಧದ ಪರಿಣಾಮ ಅಷ್ಟಕ್ಕೇ ಮುಗಿಯುವುದಿಲ್ಲ
ಕೊಪ್ಪಳದ ಬಾಲಕಿ ಸುಮಾರು ಎರಡು ವರ್ಷಗಳ ಕಾಲ ದೌರ್ಜನ್ಯ ಮತ್ತು ಬೆದರಿಕೆಯ ನಡುವೆ ಬದುಕಿದ್ದಾಳೆ ಎಂದು ವರದಿಯಾಗಿದೆ. ಆಕೆ ಗರ್ಭಿಣಿಯಾಗಿರುವುದಾಗಿಯೂ ವರದಿಯಾಗಿದೆ. ದೌರ್ಜನ್ಯದಿಂದ ಆಕೆಯ ಶಿಕ್ಷಣ ನಿಂತಿದೆ. ಒಮ್ಮೆ ವಿದ್ಯಾರ್ಥಿನಿಯಾಗಿದ್ದ ಆಕೆಯ ಬದುಕಿನ ದಿಕ್ಕೇ ಬದಲಾಗಿದೆ.
ಇದನ್ನು ಕೇವಲ “ಶಿಕ್ಷಣ ಮೊಟಕುಗೊಂಡಿತು” ಎಂಬ ಮಾಹಿತಿಯಾಗಿ ನೋಡುವುದು ಸಾಲದು. ಭಯದಿಂದ ಕಳೆದುಹೋದ ವರ್ಷಗಳು, ನಂಬಿಕೆಯ ಮೇಲೆ ಬಿದ್ದ ಗಾಯ, ಆತ್ಮವಿಶ್ವಾಸಕ್ಕೆ ಉಂಟಾದ ಧಕ್ಕೆ—ಇವೆಲ್ಲವೂ ಆ ಘಟನೆಯ ಪರಿಣಾಮಗಳೇ.
ಆದರೆ ಇಲ್ಲಿ ಒಂದು ಮಾತು ಸ್ಪಷ್ಟವಾಗಿರಬೇಕು. ಆಕೆಯ ಬದುಕಿಗೆ ಹಾನಿ ಮಾಡಿದ್ದು ಆಕೆ ಮಾಡಿದ ಆಯ್ಕೆಯಲ್ಲ; ಆಕೆಯ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡವರ ಕೃತ್ಯ. ಅವಳು ಯಾರನ್ನಾದರೂ ಪ್ರೀತಿಸಿದ್ದು ತಪ್ಪಲ್ಲ. ಯಾರನ್ನಾದರೂ ನಂಬಿದ್ದೂ ತಪ್ಪಲ್ಲ. ಅಪರಾಧದ ಹೊಣೆ ಅವಳ ಮೇಲೆ ಇರಬಾರದು.
ಆಕೆಯ ಮುಂದಿನ ಬದುಕನ್ನೂ ಆ ಅಪರಾಧವೇ ನಿರ್ಧರಿಸಬೇಕಿಲ್ಲ. ಮತ್ತೆ ಶಿಕ್ಷಣ ಪಡೆಯಲು, ಸುರಕ್ಷಿತವಾಗಿ ಬದುಕಲು, ಸಂಬಂಧಗಳನ್ನು ತನ್ನ ಆಯ್ಕೆಯಿಂದ ರೂಪಿಸಿಕೊಳ್ಳಲು ಮತ್ತು ತನ್ನ ಭವಿಷ್ಯದ ಮೇಲೆ ಹಕ್ಕು ಸಾಧಿಸಲು ಅವಕಾಶ ದೊರೆಯುವುದು ನ್ಯಾಯದ ಮತ್ತೊಂದು ಮುಖ.
ಮೌನವನ್ನು ದೋಷವನ್ನಾಗಿಸಬಾರದು
ಬಾಲಕಿ ದೀರ್ಘಕಾಲ ಮೌನವಾಗಿದ್ದಾಳೆ. “ಏಕೆ ಮೊದಲೇ ಹೇಳಲಿಲ್ಲ?” ಎಂದು ಕೇಳುವುದು ಸುಲಭ. ಆದರೆ ಬೆದರಿಕೆ, ಅವಮಾನ, ಕುಟುಂಬದ ಭಯ ಮತ್ತು ವಿಡಿಯೋ ಹೊರಬರುವ ಆತಂಕ ಒಬ್ಬರನ್ನು ಮೌನವಾಗಿರಿಸಬಹುದು.
ಆದ್ದರಿಂದ ದೂರು ನೀಡುವ ಮಗುವಿನ ಮುಂದೆ ಮೊದಲ ಪ್ರತಿಕ್ರಿಯೆ ಅನುಮಾನವಾಗಬಾರದು. ಅವಳ ಮಾತನ್ನು ಕೇಳುವುದು, ಸುರಕ್ಷತೆ ಒದಗಿಸುವುದು ಮತ್ತು ಅಗತ್ಯ ನೆರವು ನೀಡುವುದು ಮುಖ್ಯ.
ಕುಟುಂಬ, ಶಿಕ್ಷಣ ಸಂಸ್ಥೆಗಳು, ಪೊಲೀಸರು ಮತ್ತು ಕೌನ್ಸಿಲರ್‌ಗಳು ಇಂತಹ ಸಂದರ್ಭಗಳಲ್ಲಿ ಮಗುವಿಗೆ ಮತ್ತೊಂದು ಭಯದ ಸ್ಥಳವಾಗದೆ, ನೆರವು ಸಿಗುವ ಸ್ಥಳವಾಗಬೇಕು. ಕಾನೂನು ನೆರವು, ವೈದ್ಯಕೀಯ ನೆರವು ಮತ್ತು ಮನೋಸಾಮಾಜಿಕ ಬೆಂಬಲ ಪುನರ್ವಸತಿಯ ಭಾಗವಾಗಬೇಕು.
ಹೊಕ್ರಾಣಿ ಘಟನೆ ಹೇಳುವ ಮತ್ತೊಂದು ಅಸುರಕ್ಷತೆ
ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ 18 ವರ್ಷದ ಯುವತಿಯ ಶವ ಬಾವಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಶಂಕೆಯ ಕುರಿತು ತನಿಖೆ ನಡೆಯುತ್ತಿದೆ.
ಈ ಪ್ರಕರಣವನ್ನು ಕೊಪ್ಪಳದ ಪ್ರಕರಣದೊಂದಿಗೆ ಒಂದೇ ಕಾರಣದಿಂದ ಜೋಡಿಸಲಾಗುವುದಿಲ್ಲ. ಎರಡೂ ಘಟನೆಗಳ ಸಂದರ್ಭಗಳು ಭಿನ್ನವಾಗಿವೆ. ಆದರೆ ಹೊಕ್ರಾಣಿ ಘಟನೆ ಮಹಿಳೆಯರ ಸುರಕ್ಷತೆಯನ್ನು ಕೇವಲ ವೈಯಕ್ತಿಕ ಎಚ್ಚರಿಕೆಯ ಪ್ರಶ್ನೆಯಾಗಿ ನೋಡುವುದು ಸಾಕಾಗುವುದಿಲ್ಲ ಎಂಬುದನ್ನು ನೆನಪಿಸುತ್ತದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ದಾರಿ, ಬೆಳಕು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಮಹಿಳೆಯರ ದೈನಂದಿನ ಬದುಕಿನ ಸ್ವಾತಂತ್ರ್ಯಕ್ಕೂ ಪರಿಣಾಮ ಬೀರುತ್ತದೆ. ಹೊಕ್ರಾಣಿ ಪ್ರಕರಣದಲ್ಲಿ ಯುವತಿ ದಲಿತ ಸಮುದಾಯಕ್ಕೆ ಸೇರಿದವಳು ಎಂಬ ವರದಿಯೂ ಇರುವುದರಿಂದ, ಮಹಿಳೆಯರ ಬದುಕನ್ನು ಅರ್ಥಮಾಡಿಕೊಳ್ಳುವಾಗ ಜಾತಿ, ವರ್ಗ ಮತ್ತು ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನೂ ಕಡೆಗಣಿಸಲಾಗುವುದಿಲ್ಲ.
ಬದಲಾವಣೆ ಎಲ್ಲಿಂದ ಆರಂಭವಾಗುತ್ತದೆ?
ಯುವಜನರನ್ನು ಒಟ್ಟಾರೆ ಅಪರಾಧಿಗಳಂತೆ ನೋಡುವುದು ಸಮಸ್ಯೆಗೆ ಪರಿಹಾರವಲ್ಲ. ಬದಲಿಗೆ, ಕೆಲವು ಯುವಜನರು ಬೆಳೆದುಬರುವ ಪರಿಸರದಲ್ಲಿ ಅಧಿಕಾರ, ನಿರಾಕರಣೆ, ಪ್ರೀತಿ ಮತ್ತು ಖಾಸಗಿತನದ ಬಗ್ಗೆ ಯಾವ ಕಲ್ಪನೆಗಳು ರೂಪುಗೊಳ್ಳುತ್ತವೆ ಎಂಬುದನ್ನು ಗಮನಿಸಬೇಕು.
ಸ್ನೇಹಿತರ ಗುಂಪಿನಲ್ಲಿ ಖಾಸಗಿ ವಿಡಿಯೋ ಬಂದಾಗ ಅದನ್ನು ಹಂಚದೆ ನಿಲ್ಲಿಸುವುದು, ತಪ್ಪು ನಡೆಯುತ್ತಿದ್ದರೆ ಸ್ನೇಹಿತನನ್ನೇ ತಡೆಯುವುದು, ಮನೆಯಲ್ಲಿ ಮಗುವಿನ “ಬೇಡ”ವನ್ನು ಗೌರವಿಸುವುದು, ಶಾಲೆಯಲ್ಲಿ ಸಂಬಂಧಗಳ ಬಗ್ಗೆ ಮಾತನಾಡಲು ಅವಕಾಶ ನೀಡುವುದು—ಇವು ಸಣ್ಣ ಬದಲಾವಣೆಗಳಂತೆ ಕಾಣಬಹುದು. ಆದರೆ, ಸಾಮಾಜಿಕ ಮೌಲ್ಯಗಳು ಇಂತಹ ದೈನಂದಿನ ವರ್ತನೆಗಳಿಂದಲೇ ರೂಪುಗೊಳ್ಳುತ್ತವೆ.
ಹೆಣ್ಣುಮಕ್ಕಳಿಗೆ ಮಾತ್ರ ಎಚ್ಚರಿಕೆ ನೀಡುವುದರಿಂದ ಸುರಕ್ಷತೆ ಸಂಪೂರ್ಣವಾಗುವುದಿಲ್ಲ. ಹುಡುಗರಿಗೂ ತಮ್ಮ ವರ್ತನೆಯ ಜವಾಬ್ದಾರಿ, ನಿರಾಕರಣೆಯ ಗೌರವ ಮತ್ತು ಮತ್ತೊಬ್ಬರ ಸ್ವಾತಂತ್ರ್ಯದ ಅರ್ಥ ತಿಳಿಯಬೇಕು.
ಇದನ್ನೂ ಓದಿ ಅವಳ ಕಣ್ಣೋಟ | ʼಮಾತೃಭೂಮಿ: ಎ ನೇಷನ್ ವಿಥೌಟ್ ವುಮೆನ್ʼ- ಹೆಣ್ಣಿಲ್ಲದ ಭವಿಷ್ಯದ ಎಚ್ಚರಿಕೆ
ಕಾನೂನು ತಪ್ಪಿತಸ್ಥರನ್ನು ಶಿಕ್ಷಿಸುವುದು ಅಗತ್ಯ. ಆದರೆ ಒಂದು ಪ್ರಕರಣದ ತೀರ್ಪಿನಿಂದ ಅದರ ಸಾಮಾಜಿಕ ಕಾರಣಗಳು ಮುಗಿಯುವುದಿಲ್ಲ. ಕುಟುಂಬ, ಶಿಕ್ಷಣ, ಸ್ನೇಹ ಮತ್ತು ಡಿಜಿಟಲ್ ಬದುಕಿನೊಳಗೆ ಸಂಬಂಧಗಳ ಅರ್ಥವನ್ನು ಹೆಚ್ಚು ಸಮಾನವಾಗಿ ಮತ್ತು ಜವಾಬ್ದಾರಿಯುತವಾಗಿ ಕಟ್ಟಿಕೊಳ್ಳುವ ಕೆಲಸ ಮುಂದುವರಿಯಬೇಕಾಗುತ್ತದೆ.
ಕೊಪ್ಪಳದ ಬಾಲಕಿಯ ಕಳೆದುಹೋದ ವರ್ಷಗಳು ಮತ್ತು ಹೊಕ್ರಾಣಿಯಲ್ಲಿ ಪ್ರಾಣ ಕಳೆದುಕೊಂಡ ಯುವತಿಯ ಪ್ರಕರಣ—ಇವೆರಡೂ ಬೇರೆ ಬೇರೆ ಸಂದರ್ಭಗಳ ಕಥೆಗಳು. ಆದರೆ ಇಂತಹ ಸುದ್ದಿಗಳು ಕೇವಲ ಆತಂಕ ಹುಟ್ಟಿಸಿ ಮರೆಯಾಗದೆ, ಸುರಕ್ಷತೆ ಎಂದರೆ ಹೆಣ್ಣುಮಕ್ಕಳು ತಮ್ಮನ್ನು ತಾವು ಕಾಪಾಡಿಕೊಳ್ಳುವುದಷ್ಟೇ ಅಲ್ಲ; ಅವರ ಸುತ್ತಲಿನ ಸಮಾಜವೂ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವುದು ಎಂಬ ಅರಿವಿನ ಕಡೆ ನಮ್ಮನ್ನು ಕರೆದೊಯ್ಯಬೇಕು.

ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.



