ಚಿತ್ರಕಲೆ ಮತ್ತು ಸಿನಿಮಾ ಪರಸ್ಪರ ಭಿನ್ನವಾಗಿದ್ದರೂ, ಅವುಗಳ ಆತ್ಮ ಒಂದೇ. ಚಿತ್ರಕಲೆಯು ಒಂದು ಕ್ಷಣವನ್ನು ಸ್ತಬ್ಧಗೊಳಿಸಿ ನಮಗೆ ತೋರಿಸಿದರೆ, ಸಿನಿಮಾ ಆ ಸ್ಥಿರತೆಗೆ ಚಲನೆಯನ್ನು ನೀಡಿ ಆ ಕ್ಷಣದ ಹಿಂದಿನ ಮತ್ತು ಮುಂದಿನ ಕಥೆಯನ್ನು ಹೇಳುತ್ತದೆ. ಈ ಅಪೂರ್ವ ಬೆಸುಗೆ ಇಲ್ಲದಿದ್ದರೆ, ಸಿನಿಮಾ ಎಂಬುದು ಕೇವಲ ಚಲಿಸುವ ಚಿತ್ರಗಳ ಸಂಗ್ರಹವಾಗುತ್ತಿತ್ತೇ ಹೊರತು, ಅದು ನಮಗೆ ಇಷ್ಟು ಆಳವಾಗಿ ಕಥೆ ಹೇಳುವ ಒಂದು ಕಲಾ ಮಾಧ್ಯಮವಾಗುತ್ತಿರಲಿಲ್ಲ.
ಕಲೆ ಬದುಕನ್ನು ಪ್ರತಿಫಲಿಸುತ್ತದೆ ಎಂಬುದು ನಿಜ. ಆದರೆ ಸೃಜನಶೀಲತೆಯ ಜಗತ್ತಿನಲ್ಲಿ ಒಂದು ಕಲೆ ಮತ್ತೊಂದು ಕಲೆಯನ್ನು ಅಪ್ಪಿಕೊಳ್ಳುವ ರೀತಿ ಬಹಳ ಸುಂದರವಾದದ್ದು. ನೂರಾರು ವರ್ಷಗಳ ಹಿಂದಿನ ಚಿತ್ರಕಲೆಗಳು ಇಂದಿಗೂ ಹಲವು ನಿರ್ದೇಶಕರಿಗೆ ದೃಶ್ಯ ರೂಪಕಗಳನ್ನು ಸೃಷ್ಟಿಸಲು ಪ್ರಮುಖ ಪ್ರೇರಣೆಯಾಗಿವೆ. ಕೆಲವು ಅಪರೂಪದ ಸಿನಿಮಾಗಳಲ್ಲಿ ನಾವು ಕಾಣುವ ಅದ್ಭುತ ದೃಶ್ಯಗಳ ಹಿಂದೆ ಇಂತಹ ಕಲಾಕೃತಿಗಳ ಗಾಢವಾದ ಪ್ರಭಾವವಿರುತ್ತದೆ. ವಿಶ್ವದ ಶ್ರೇಷ್ಠ ನಿರ್ದೇಶಕರು ತಮಗೆ ಇಷ್ಟವಾದ ಚಿತ್ರಕಲೆಗಳನ್ನು ತಮ್ಮ ಸಿನಿಮಾದ ದೃಶ್ಯಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.
ಈ ಬೆಸುಗೆಗೆ ಅತ್ಯುತ್ತಮ ಉದಾಹರಣೆ ಎಂದರೆ ಲಿಯೋನಾರ್ಡೊ ಡಾ ವಿಂಚಿಯ ‘ದ ಲಾಸ್ಟ್ ಸಪ್ಪರ್'(The Last Supper). ಈ ಪ್ರಸಿದ್ಧ ಚಿತ್ರದ ದೃಶ್ಯ ಸಂಯೋಜನೆಯನ್ನು ನಾವು ‘ವಿರಿಡಿಯಾನ'(1961) ಮತ್ತು ‘ಇನ್ಹೆರೆಂಟ್ ವೈಸ್'(2014)ನಂತಹ ಚಿತ್ರಗಳ ಮೇಜಿನ ಊಟದ ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಇಲ್ಲಿ ನಿರ್ದೇಶಕರು ಚಿತ್ರಕಲೆಯಲ್ಲಿದ್ದ ಪಾತ್ರಗಳ ಜೋಡಣೆ ಮತ್ತು ಆ ಸನ್ನಿವೇಶದ ನಾಟಕೀಯತೆಯನ್ನು ಸಿನಿಮಾದ ಚೌಕಟ್ಟಿಗೆ ಅಳವಡಿಸಿಕೊಂಡಿದ್ದಾರೆ. ಅದೇ ರೀತಿ, ಎಡ್ವರ್ಡ್ ಹಾಪರ್ ಅವರ ‘ನೈಟ್‌ಹಾಕ್ಸ್'(Nighthawks) ಚಿತ್ರವು ನಗರದ ಒಂಟಿತನ ಮತ್ತು ಮೌನವನ್ನು ಬಿಂಬಿಸುತ್ತದೆ. ಈ ಚಿತ್ರದ ವಿಶಿಷ್ಟ ಬೆಳಕು ಮತ್ತು ಬಣ್ಣಗಳನ್ನು ‘ಬ್ಲೇಡ್ ರನ್ನರ್’ ಮತ್ತು ‘ಪೆನ್ನಿಸ್ ಫ್ರಮ್ ಹೆವನ್’ ಸಿನಿಮಾಗಳು ರಾತ್ರಿಯ ಹೊತ್ತಿನ ಕೆಫೆ ದೃಶ್ಯಗಳಲ್ಲಿ ಆ ಒಂಟಿತನದ ಭಾವವನ್ನು ಮೂಡಿಸಲು ಬಳಸಿಕೊಂಡಿವೆ. ಅದೇ ರೀತಿ, ಆಂಡ್ರೆ ಟಾರ್ಕೋವ್ಸ್ಕಿ ಅವರು ತಮ್ಮ ‘ಸೋಲಾರಿಸ್'(1972) ಚಿತ್ರದ ಕೊನೆಯ ದೃಶ್ಯದಲ್ಲಿ ರೆಂಬ್ರಾಂಟ್ ಅವರ ಪ್ರಸಿದ್ಧ ‘ದ ರಿಟರ್ನ್ ಆಫ್ ದ ಪ್ರಾಡಿಗಲ್ ಸನ್’ ಚಿತ್ರಕಲೆಯನ್ನೇ ಮರುಸೃಷ್ಟಿಸಿದ್ದಾರೆ. ಮಗನು ತಂದೆಯ ಕಾಲಿಗೆ ಬಿದ್ದು ಶರಣಾಗುವ ಆ ಪೇಂಟಿಂಗ್‌ನ ದೃಶ್ಯ ಸಂಯೋಜನೆಯನ್ನು ಬಳಸುವ ಮೂಲಕ, ಟಾರ್ಕೋವ್ಸ್ಕಿ ಮನುಷ್ಯನು ಮರಳಿ ತನ್ನ ಮನೆಗೆ ಅಥವಾ ತನ್ನವರ ಬಳಿಗೆ ಸೇರುವ ಆಳವಾದ ಹಂಬಲವನ್ನು ಯಾವುದೇ ಮಾತಿಲ್ಲದೆ ದೃಶ್ಯದ ಮೂಲಕ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ.
ಇದನ್ನು ಓದಿದ್ದೀರಾ?: ರಸರೆಕ್ಷನ್: ಇಂದ್ರಿಯಗಳ ಮೂಲಕ ಒಂದು ಶತಮಾನದ ಸಿನೆಮಾ ಪಯಣ ಬಿಡಿಸಿಡುವ ಚಿತ್ರ
ಮನುಷ್ಯನ ಆಳವಾದ ಭಾವನೆಗಳನ್ನು ಬೆಳ್ಳಿತೆರೆಯ ಮೇಲೆ ದೃಶ್ಯ ಭಾಷೆಯಾಗಿ ಹೆಣೆಯಲು ಚಿತ್ರಕಲೆಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಎಡ್ವರ್ಡ್ ಮುಂಕ್ ಅವರ ‘ದ ಸ್ಕ್ರೀಮ್'(The Scream) ಚಿತ್ರದಲ್ಲಿರುವ ಆತಂಕವು ‘ಸ್ಕ್ರೀಮ್’ ಹಾರರ್ ಸಿನಿಮಾ ಸರಣಿಯ ಪ್ರಸಿದ್ಧ ಮುಖವಾಡಕ್ಕೆ ಪ್ರೇರಣೆಯಾಗಿದೆ. ಫ್ರಾನ್ಸಿಸ್ಕೋ ಗೋಯಾ ಅವರ ಕ್ರೂರತೆಯನ್ನು ಬಿಂಬಿಸುವ ‘ಸ್ಯಾಟರ್ನ್ ಡಿವೋರಿಂಗ್ ಹಿಸ್ ಸನ್’ ಚಿತ್ರದ ಪ್ರಭಾವವನ್ನು ‘ಪ್ಯಾನ್ಸ್ ಲ್ಯಾಬ್ರಿಂತ್’ ಚಿತ್ರದ ಭಯಾನಕ ರಾಕ್ಷಸನ ಪಾತ್ರದಲ್ಲಿ ಕಾಣಬಹುದು. ಇನ್ನು ವಿನ್ಸೆಂಟ್ ವ್ಯಾನ್ ಗೋ ಅವರ ‘ಪ್ರಿಸನ್ ರೌಂಡ್’ ಚಿತ್ರವು ಸ್ಟಾನ್ಲಿ ಕುಬ್ರಿಕ್ ಅವರ ‘ಎ ಕ್ಲಾಕ್‌ವರ್ಕ್ ಆರೆಂಜ್’ ಸಿನಿಮಾದ ಜೈಲಿನ ದೃಶ್ಯಕ್ಕೆ ಮಾದರಿಯಾದರೆ, ರೆನೆ ಮ್ಯಾಗ್ರಿತ್ ಅವರ ‘ದ ಸನ್ ಆಫ್ ಮ್ಯಾನ್’ ಚಿತ್ರದ ನಿಗೂಢ ಶೈಲಿಯು ‘ದ ಥಾಮಸ್ ಕ್ರೌನ್ ಅಫೇರ್’ ಸಿನಿಮಾದ ದೃಶ್ಯಗಳಲ್ಲಿ ಮರುಜೀವ ಪಡೆದಿದೆ.
ವಿಶ್ವದ ಶ್ರೇಷ್ಠ ನಿರ್ದೇಶಕರು ಈ ತಂತ್ರವನ್ನು ಬಳಸಿದ ರೀತಿಗೆ ಮಾರುಹೋಗುವ ನಾವು, ನಮ್ಮವರೇ ಆದ ಮಣಿ ಕೌಲ್ ಅಥವಾ ಅಮಿತ್ ದತ್ತಾ ಅವರ ಕೆಲಸಗಳನ್ನು ಗಮನಿಸಿದಾಗ ಸಿನಿಮಾದ ಒಂದು ಭಿನ್ನ ಸಾಧ್ಯತೆ ಗೋಚರಿಸುತ್ತದೆ, ಕಲೆಗೆ ದೇಶದ ಗಡಿಗಳಿಲ್ಲ; ಚಿತ್ರಕಲೆಯ ಮೌನವು ಎಲ್ಲ ಭಾಷೆಯ ಸಿನಿಮಾಗಳಿಗೂ ಒಂದೇ ರೀತಿಯ ಜೀವ ತುಂಬಬಲ್ಲದು. ಭಾರತೀಯ ಸಿನಿಮಾದಲ್ಲಿ ಚಿತ್ರಕಲೆಯ ಪ್ರಭಾವವು ಅದರ ಉಗಮ ಕಾಲದಿಂದಲೇ ಆರಂಭವಾಗಿದೆ. ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರು ರಾಜಾ ರವಿವರ್ಮ ಅವರ ಚಿತ್ರಕಲೆಗಳಿಂದ ಸ್ಫೂರ್ತಿ ಪಡೆದು, ಆ ಪೌರಾಣಿಕ ಸೌಂದರ್ಯವನ್ನು ಬೆಳ್ಳಿತೆರೆಯ ಮೇಲೆ ಮೊಟ್ಟಮೊದಲ ಬಾರಿಗೆ ತಂದರು. ಈ ಪರಂಪರೆಯನ್ನು ಮುಂದೆ ಸತ್ಯಜಿತ್ ರೇ ಅವರು ಚಿತ್ರಕಲೆಯ ಶಿಸ್ತಿನೊಂದಿಗೆ ಮುಂದುವರಿಸಿದರೆ, ಮಲಯಾಳಂನ ಜಿ. ಅರವಿಂದನ್ ಅವರು ಪ್ರಕೃತಿಯನ್ನು ಒಂದು ಪೇಂಟಿಂಗ್‌ನಂತೆ ದೃಶ್ಯೀಕರಿಸುವುದರಲ್ಲಿ ನಿಸ್ಸೀಮರಾಗಿದ್ದರು. ಹಾಗೆಯೇ, ಮಣಿ ಕೌಲ್ ಮತ್ತು ಕುಮಾರ್ ಶಹಾನಿ ಚಿತ್ರಕಲೆಯ ಗಾಂಭೀರ್ಯವನ್ನು ಸಿನಿಮಾದ ಚೌಕಟ್ಟಿಗೆ ತಂದರು. ಇನ್ನು ಇಂದಿನ ತಲೆಮಾರಿನ ಅಮಿತ್ ದತ್ತಾ ಅವರು ಚಿತ್ರಕಲೆಗಳನ್ನೇ ಸಿನಿಮಾದ ಜೀವಾಳವಾಗಿಸಿಕೊಂಡು, ಆ ಸ್ಥಿರ ಚಿತ್ರಗಳ ಒಳಗೆ ಅಡಗಿರುವ ಕಥೆಗಳನ್ನು ಕ್ಯಾಮೆರಾದ ಮೂಲಕ ಅನಾವರಣಗೊಳಿಸುತ್ತಿದ್ದಾರೆ.
ಈ ದೃಶ್ಯ ವೈವಿಧ್ಯತೆಗೆ ಅತ್ಯಂತ ಆಕರ್ಷಕ ಉದಾಹರಣೆಯೆಂದರೆ ಸರ್ ಜಾನ್ ಎವೆರೆಟ್ ಮಿಲೈಸ್ ಅವರ ‘ಒಫೇಲಿಯಾ'(1851-52) ಚಿತ್ರಕಲೆ. ಕೇವಲ ಒಂದು ವರ್ಣಚಿತ್ರವು ದಶಕಗಳ ಕಾಲ ಬೇರೆ ಬೇರೆ ನಿರ್ದೇಶಕರ ಕಣ್ಣಿನಲ್ಲಿ ಹೇಗೆ ವಿಭಿನ್ನವಾಗಿ ಮರುಜನ್ಮ ಪಡೆದಿದೆ ಮತ್ತು ಸಿನಿಮಾದ ಸಂದರ್ಭಕ್ಕೆ ತಕ್ಕಂತೆ ಹೇಗೆ ಹೊಸ ಅರ್ಥ ಕಂಡುಕೊಂಡಿದೆ ಎಂಬುದು ಕುತೂಹಲಕಾರಿ. ಹೀಗೆ ಚಿತ್ರಕಲೆಗಳು ಸಿನಿಮಾದ ಚೌಕಟ್ಟಿನೊಳಗೆ ಹೊಸ ಜೀವ ಪಡೆಯುವ ಈ ವಿಶಿಷ್ಟ ಕಲಾತಂತ್ರವನ್ನೇ ‘ಟ್ಯಾಬ್ಲೋ ವಿವಂಟ್'(Tableau Vivant) ಎಂದು ಕರೆಯಲಾಗುತ್ತದೆ. ಇದೊಂದು ಫ್ರೆಂಚ್ ಪದವಾಗಿದ್ದು, ಇದರ ಅರ್ಥ ‘ಜೀವಂತ ಚಿತ್ರ'(Living Picture) ಎಂದು. ಪ್ರಸಿದ್ಧ ಚಿತ್ರಕಲೆ ಅಥವಾ ಐತಿಹಾಸಿಕ ಕ್ಷಣವೊಂದನ್ನು ನೈಜ ನಟರು ಮತ್ತು ವಸ್ತುಗಳನ್ನು ಬಳಸಿ ಬೆಳ್ಳಿತೆರೆಯ ಮೇಲೆ ಮರುಸೃಷ್ಟಿಸುವುದನ್ನು ಇದು ಸೂಚಿಸುತ್ತದೆ. ಈ ತಂತ್ರವು, ಮಾತುಗಳಿಂದ ಹೇಳಲಾಗದ ಆಳವಾದ ಭಾವನೆಯನ್ನು ಪ್ರೇಕ್ಷಕರಿಗೆ ದಾಟಿಸಲು ನಿರ್ದೇಶಕರಿಗೆ ನೆರವಾಗುತ್ತದೆ.

ವಿಶ್ವದ ಕಲಾ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಸುಂದರವಾದ ದುರಂತದ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಕಲಾಕೃತಿ ಸರ್ ಜಾನ್ ಎವೆರೆಟ್ ಮಿಲೈಸ್ ಅವರ ‘ಒಫೇಲಿಯಾ'(1851-52). ಶೇಕ್ಸ್‌ಪಿಯರ್‌ನ ‘ಹ್ಯಾಮ್ಲೆಟ್’ ನಾಟಕದ ಒಂದು ಶೋಚನೀಯ ಸನ್ನಿವೇಶಕ್ಕೆ ಈ ತೈಲಚಿತ್ರವು(Oil Painting) ದೃಶ್ಯರೂಪ ನೀಡಿದೆ. ತನ್ನ ತಂದೆಯ ಸಾವು ಮತ್ತು ಹ್ಯಾಮ್ಲೆಟ್‌ನ ತಿರಸ್ಕಾರದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡ ಒಫೇಲಿಯಾ, ನದಿಯ ದಂಡೆಯ ಮೇಲಿದ್ದ ನೀರವಂಜಿ(Willow) ಮರದ ಬಾಗಿದ ಕೊಂಬೆಯನ್ನೇರಿ ಹೂವಿನ ಮಾಲೆಗಳನ್ನು ನೇತುಹಾಕಲು ಹೋದಾಗ, ಆ ಕೊಂಬೆ ಮುರಿದು ಆಕೆ ಆಕಸ್ಮಿಕವಾಗಿ ನೀರಿಗೆ ಬೀಳುತ್ತಾಳೆ. ಅವಳ ಭಾರವಾದ ಉಡುಪುಗಳು ಅವಳನ್ನು ನೀರಿನ ಆಳಕ್ಕೆ ಎಳೆಯುತ್ತಿದ್ದರೂ, ಅವಳು ಯಾವುದೇ ಪ್ರತಿರೋಧ ತೋರದೆ ಹಾಡುತ್ತಾ, ಶಾಂತವಾಗಿ ಸಾವಿಗೆ ಶರಣಾಗುವ ಆ ಒಂದು ಕ್ಷಣವನ್ನು ಮಿಲೈಸ್ ಅದ್ಭುತವಾಗಿ ಚಿತ್ರಿಸಿದ್ದಾರೆ.
ಮಿಲೈಸ್ ಅವರು ಈ ಚಿತ್ರದ ಹಿನ್ನೆಲೆಯನ್ನು ಪೂರ್ಣಗೊಳಿಸಲು ಸರ್ರೆ(Surrey) ಎಂಬಲ್ಲಿನ ನದಿಯ ದಂಡೆಯ ಮೇಲೆ ಕುಳಿತು ಸತತ ಐದು ತಿಂಗಳುಗಳ ಕಾಲ ಶ್ರಮಿಸಿದ್ದರು. ನೀರಿನ ಮೇಲಿರುವ ಪಾಚಿ, ಮುರಿದು ಬಿದ್ದ ಕೊಂಬೆಗಳು ಮತ್ತು ಪ್ರತಿಯೊಂದು ಎಲೆಯನ್ನು ಅತ್ಯಂತ ಸೂಕ್ಷ್ಮವಾಗಿ ವಿವರವಾಗಿ ಬಿಡಿಸಲಾಗಿದೆ. ಮುಳುಗುತ್ತಿರುವ ಒಫೇಲಿಯಾಳ ತೆರೆದ ಕೈಗಳು ಮತ್ತು ಆಕಾಶದತ್ತ ನೋಡುತ್ತಿರುವ ಅವಳ ಮುಖವು ಜೀವನದ ಸಂಕಟಗಳಿಂದ ಮುಕ್ತಿ ಪಡೆಯುತ್ತಿರುವ ‘ಶರಣಾಗತಿಯ ಭಾವ’ವನ್ನು(Resignation) ಎತ್ತಿ ತೋರಿಸುತ್ತವೆ. ಪ್ರಸ್ತುತ ಲಂಡನ್‌ನ ‘ಟೇಟ್ ಬ್ರಿಟನ್’ ಮ್ಯೂಸಿಯಂನಲ್ಲಿರುವ ಈ ಚಿತ್ರದ ಸೌಂದರ್ಯ ಮತ್ತು ಭಾವನೆಯ ತೀವ್ರತೆಯೇ ಅನೇಕ ಆಧುನಿಕ ನಿರ್ದೇಶಕರು ಇದನ್ನು ತಮ್ಮ ಸಿನಿಮಾಗಳಲ್ಲಿ ಮರುಸೃಷ್ಟಿಸಲು ಕಾರಣವಾಗಿದೆ. ಅವುಗಳಲ್ಲಿ ಕೆಲವು ಪ್ರಮುಖ ಉದಾಹರಣೆಗಳನ್ನು ಗಮನಿಸೋಣ.
ಇದನ್ನು ಓದಿದ್ದೀರಾ?: ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!
ನಿರ್ದೇಶಕ ಲಾರ್ಸ್ ವಾನ್ ಟ್ರೈಯರ್ ಅವರು ತಮ್ಮ ‘ಮೆಲಂಕೋಲಿಯಾ'(2011) ಚಿತ್ರದಲ್ಲಿ ಒಫೇಲಿಯಾ ಚಿತ್ರದ ಸಂಯೋಜನೆಯನ್ನು ಬಳಸಿಕೊಂಡಿರುವುದು ಬರೀ ದೃಶ್ಯದ ಅಂದಕ್ಕಾಗಿಯಲ್ಲ. ಖಿನ್ನತೆಯಲ್ಲಿದ್ದ ಒಫೇಲಿಯಾ ಹೇಗೆ ಸಾವನ್ನು ಶಾಂತವಾಗಿ ಅಪ್ಪಿಕೊಂಡಳೋ, ಅದೇ ಮೌನ ಮತ್ತು ಸ್ಥಿರತೆಯನ್ನು ಪ್ರಪಂಚದ ಅಂತ್ಯವನ್ನು ಎದುರಿಸುವ ತನ್ನ ನಾಯಕಿಯಲ್ಲೂ ತರಲು ಅವರು ಈ ಚಿತ್ರವನ್ನು ಬಳಸಿದ್ದಾರೆ. ಇಲ್ಲಿ ಚಿತ್ರಕಲೆಯು ಕೇವಲ ಒಂದು ಪ್ರೇರಣೆಯಾಗಿ ಉಳಿಯದೆ, ನಿರ್ದೇಶಕರ ಮನೋವೈಜ್ಞಾನಿಕ ಸಿದ್ಧಾಂತಕ್ಕೆ ಒಂದು ದೃಶ್ಯರೂಪವಾಗಿ ಮಾರ್ಪಟ್ಟಿದೆ.

ವಿಶೇಷವೆಂದರೆ, ಒಫೇಲಿಯಾ ಚಿತ್ರದ ಪ್ರಭಾವವು ಕೇವಲ ದುರಂತಕ್ಕೆ ಸೀಮಿತವಾಗಿಲ್ಲ. 1986ರ ‘ಫೈರ್ ವಿತ್ ಫೈರ್’ ಸಿನಿಮಾದಲ್ಲಿ ಇದೇ ಚಿತ್ರದ ಸಂಯೋಜನೆಯನ್ನು ಪ್ರಣಯ ಮತ್ತು ಸೌಂದರ್ಯದ ದೃಶ್ಯವಾಗಿ ಬಳಸಲಾಗಿದೆ. ಇಲ್ಲಿ ನಿರ್ದೇಶಕರು ಚಿತ್ರಕಲೆಯ ‘ದೃಶ್ಯ ಭಾಷೆ’ಯ ಮೂಲಕ ನಾಯಕಿಯ ಮುಗ್ಧತೆಯನ್ನು ಕಟ್ಟಿಕೊಟ್ಟಿದ್ದಾರೆ. ಹೀಗೆ ಮಿಲೈಸ್ ಅವರ ಒಂದೇ ಕಲಾಕೃತಿಯು ‘ಮೆಲಂಕೋಲಿಯಾ’ದಲ್ಲಿ ಸಾವಿನ ಭೀತಿಯನ್ನು ಮತ್ತು ‘ಫೈರ್ ವಿತ್ ಫೈರ್’ನಲ್ಲಿ ಪ್ರೇಮದ ಪರವಶತೆಯನ್ನು ವ್ಯಕ್ತಪಡಿಸಲು ಬಳಕೆಯಾಗಿರುವುದು ಕಲೆಯ ಅನಂತ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ. ಅದು ನೋಡುವ ಕಣ್ಣು ಮತ್ತು ನಿರ್ದೇಶಕನ ದೃಷ್ಟಿಕೋನಕ್ಕೆ ತಕ್ಕಂತೆ ತನ್ನ ಅರ್ಥವನ್ನು ಬದಲಿಸಿಕೊಳ್ಳುತ್ತಾ ಹೋಗುತ್ತದೆ.

2018ರ ‘ಒಫೇಲಿಯಾ’ ಸಿನಿಮಾದಲ್ಲಿ ಮಿಲೈಸ್ ಅವರ ಚಿತ್ರಕಲೆಯು ಒಂದು ಹೊಸ ಅರ್ಥವನ್ನು ಪಡೆದುಕೊಳ್ಳುತ್ತದೆ. ಮೂಲ ಚಿತ್ರದಲ್ಲಿ ಒಫೇಲಿಯಾ ಸಾವು ಮತ್ತು ಅಸಹಾಯಕತೆಯ ಸಂಕೇತವಾದರೆ, ಈ ಸಿನಿಮಾದಲ್ಲಿ ಅವಳು ಅದೇ ದೃಶ್ಯವನ್ನು ತನ್ನ ಪ್ರಾಣ ಉಳಿಸಿಕೊಳ್ಳುವ ಉಪಾಯವಾಗಿ ಬಳಸುತ್ತಾಳೆ. ಚಿತ್ರಕಲೆಯಲ್ಲಿ ಕಾಣುವ ಆ ಮುಳುಗುವ ಕ್ಷಣವು ಇಲ್ಲಿ ಅಂತ್ಯವಲ್ಲ; ಬದಲಿಗೆ ಅವಳ ಹೊಸ ಬದುಕಿನ ಆರಂಭ. ಈ ಮೂಲಕ ನಿರ್ದೇಶಕರು ಹಳೆಯ ಚಿತ್ರದಲ್ಲಿದ್ದ ಆ ‘ದುರಂತ’ವನ್ನು ಅವಳ ‘ಗೆಲುವಿನ ಕ್ಷಣ’ವನ್ನಾಗಿ ಮಾರ್ಪಡಿಸಿದ್ದಾರೆ.

1967ರ ‘ಡಾಂಟೆಯ ಇನ್ಫರ್ನೋ'(Dante’s Inferno) ಸಿನಿಮಾದಲ್ಲಿ ಮಿಲೈಸ್ ಅವರ ಈ ‘ಒಫೇಲಿಯಾ’ ಚಿತ್ರದ ಹಿಂದಿನ ಒಂದು ಮನಕಲಕುವ ಕಥೆಯಿದೆ. ನಿರ್ದೇಶಕ ಕೆನ್ ರಸೆಲ್ ಅವರು ಆ ಚಿತ್ರದ ಅಂದಕ್ಕಿಂತ ಹೆಚ್ಚಾಗಿ, ಅದನ್ನು ಸೃಷ್ಟಿಸಲು ಆ ಕಾಲದ ಕಲಾವಿದರು ಪಟ್ಟ ಕಷ್ಟವನ್ನು ಇಲ್ಲಿ ದೃಶ್ಯೀಕರಿಸಿದ್ದಾರೆ. ಆ ಚಿತ್ರಕ್ಕೆ ಮಾದರಿಯಾಗಿ(Model) ನಟಿಸಿದ ಎಲಿಜಬೆತ್ ಸಿಡಾಲ್, ಚಳಿಗಾಲದ ಕೊರೆಯುವ ಚಳಿಯಲ್ಲಿ ಗಂಟೆಗಟ್ಟಲೆ ನೀರಿನ ಟಬ್‌ನಲ್ಲಿ ಮಲಗಬೇಕಿತ್ತು. ಒಂದು ಸುಂದರ ಕಲಾಕೃತಿಯ ಹಿಂದೆ ಎಷ್ಟು ಶ್ರಮವಿರುತ್ತದೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ. ಇಲ್ಲಿ ಚಿತ್ರಕಲೆಯು ಕೇವಲ ಒಂದು ಪ್ರೇರಣೆಯಾಗಿ ಉಳಿಯದೆ, ಆ ಕಲಾವಿದರ ಬದುಕಿನ ಕಟು ವಾಸ್ತವವನ್ನು ನಮಗೆ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.

ಕೊರೆಯುವ ಚಳಿಯಲ್ಲಿ ನೀರಿನ ಟಬ್‌ನಲ್ಲಿ ಮಲಗಿ ಪೋಸ್ ಕೊಡುತ್ತಿರುವ ದೃಶ್ಯ
ಹೀಗೆ, ಚಿತ್ರಕಲೆ ಮತ್ತು ಸಿನಿಮಾ ಪರಸ್ಪರ ಭಿನ್ನವಾಗಿದ್ದರೂ, ಅವುಗಳ ಆತ್ಮ ಒಂದೇ. ಚಿತ್ರಕಲೆಯು ಒಂದು ಕ್ಷಣವನ್ನು ಸ್ತಬ್ಧಗೊಳಿಸಿ ನಮಗೆ ತೋರಿಸಿದರೆ, ಸಿನಿಮಾ ಆ ಸ್ಥಿರತೆಗೆ ಚಲನೆಯನ್ನು ನೀಡಿ ಆ ಕ್ಷಣದ ಹಿಂದಿನ ಮತ್ತು ಮುಂದಿನ ಕಥೆಯನ್ನು ಹೇಳುತ್ತದೆ. ಈ ಅಪೂರ್ವ ಬೆಸುಗೆ ಇಲ್ಲದಿದ್ದರೆ, ಸಿನಿಮಾ ಎಂಬುದು ಕೇವಲ ಚಲಿಸುವ ಚಿತ್ರಗಳ ಸಂಗ್ರಹವಾಗುತ್ತಿತ್ತೇ ಹೊರತು, ಅದು ನಮಗೆ ಇಷ್ಟು ಆಳವಾಗಿ ಕಥೆ ಹೇಳುವ ಒಂದು ಕಲಾ ಮಾಧ್ಯಮವಾಗುತ್ತಿರಲಿಲ್ಲ.

ಬಾಬು ಈಶ್ವರ್ ಪ್ರಸಾದ್
ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.



