ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ದರಾಮಯ್ಯರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ತಮ್ಮ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದವರು. ಹೀಗಿರುವಾಗ ಮೊದಲ ಹಂತದಲ್ಲಿ ಲಕ್ಷ್ಮೀ ಅವರಿಗೆ ಸಚಿವ ಸ್ಥಾನ ಸಿಗದಿರುವುದು ರಾಜಕೀಯ ಚರ್ಚೆಯನ್ನು ಇನ್ನಷ್ಟೂ ಬಿರುಸಾಗಿಸಿದೆ.
ಜೂನ್ 3ರಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜತೆಗೆ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಮತ್ತು 12 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಎಚ್. ಕೆ. ಪಾಟೀಲ್ ಆಯ್ಕೆಯಾಗುವ ಸಾಧ್ಯತೆ ಇದೆ. ಈವರೆಗೆ ಸ್ಪೀಕರ್ ಆಗಿದ್ದ ಯು. ಟಿ. ಖಾದರ್ ಅವರು ಸದ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ ಮೊದಲ ಪಟ್ಟಿಯಲ್ಲಿ ಮಹಿಳೆಯರ ಹೆಸರು ಮಾತ್ರ ಕಾಣಿಸಿಲ್ಲ. ಕಾಂಗ್ರೆಸ್ನ ಈ ನಡೆಗೆ ಕಾಂಗ್ರೆಸ್ ಹಿರಿಯ ನಾಯಕಿಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕಿಯರನ್ನು ಸಚಿವೆಯರನ್ನಾಗಿಸಿ ಎಂಬ ಆಗ್ರಹ ಮುಂದಿಟ್ಟಿದ್ದಾರೆ. ಈ ನಡುವೆ ಇದು ಮೊದಲ ಪಟ್ಟಿಯಷ್ಟೇ ಎಂಬ ಸಮರ್ಥನೆಗೂ ಕೆಲವು ಕಾಂಗ್ರೆಸ್ ನಾಯಕರು ಇಳಿದಿದ್ದಾರೆ.
ಈ ಹಿಂದೆ 2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರವನ್ನು ಪಡೆದ ಕೂಡಲೇ ಮಹಿಳೆಯರಿಗಾಗಿ ವಿಶೇಷ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಸದ್ದು ಮಾಡಿತ್ತು. ಈ ಪೈಕಿ ಗೃಹಲಕ್ಷ್ಮೀ, ಶಕ್ತಿ ಯೋಜನೆ ಹೆಚ್ಚು ಹೆಸರುವಾಸಿಯಾಗಿದೆ. ಕಾಂಗ್ರೆಸ್ ‘ಗೃಹಲಕ್ಷ್ಮಿ’ಯಂತಹ ಮಹಿಳಾ ಕೇಂದ್ರಿತ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿದ್ದರೂ, ಹೊಸ ಸರ್ಕಾರದ ಮೊದಲ ಸಂಪುಟ ರಚನೆಯಲ್ಲೇ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಸದ್ಯ ತೀವ್ರ ಟೀಕೆಗೆ ಗುರಿಯಾಗುತ್ತಿದೆ.
ಇದನ್ನು ಓದಿದ್ದೀರಾ? ಅಧಿಕಾರ ಹಸ್ತಾಂತರ ಚರಿತ್ರೆ: ಸಿದ್ದರಾಮಯ್ಯ ಬಿಟ್ಟು ಹೋದ ಆ ಮುತ್ಸದ್ದಿತನ… (ಭಾಗ-1)
ಈ ವಿಚಾರದಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅರ್ಧದಷ್ಟು ಜನಸಂಖ್ಯೆ ಇರುವ ಮತ್ತು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣರಾದ ಮಹಿಳೆಯರನ್ನು ಸಂಪುಟದಿಂದ ದೂರ ಇಟ್ಟಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು. ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬಲ್ಲ, ಅನುಭವವಿರುವ ಮಹಿಳಾ ನಾಯಕಿಯರಿದ್ದಾರೆ. ಆದರೂ ಕೇವಲ ಪುರುಷರಿಗೆ ಮಾತ್ರ ಆದ್ಯತೆ ನೀಡಿರುವುದು ಸರಿಯಲ್ಲ” ಎಂಬುದು ಕಾಂಗ್ರೆಸ್ ನಾಯಕಿ ವಾದ. ಜತೆಗೆ ಮಹಿಳಾ ಸಬಲೀಕರಣ ಮತ್ತು ಸಮಾನ ಹಂಚಿಕೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷವೇ ಸರ್ಕಾರ ರಚಿಸುವಾಗ ಮಹಿಳೆಯರನ್ನು ಕಡೆಗಣಿಸಬಾರದು ಎಂದು ನಾಯಕತ್ವಕ್ಕೆ ನೆನಪಿಸಿದ್ದಾರೆ.
ಈ ಆಕ್ಷೇಪಗಳ ಬೆನ್ನಲ್ಲೇ ಮುಂಬರುವ ದಿನಗಳಲ್ಲಿ ನಡೆಯಲಿರುವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಸ್ಥಾನ ನೀಡಿ ಈ ಕೊರತೆಯನ್ನು ಸರಿದೂಗಿಸಲಾಗುತ್ತದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ರೂಪಕಲಾ ಶಶಿಧರ್, ನಯನ ಮೋಟಮ್ಮ, ಲಕ್ಷ್ಮೀ ಹೆಬ್ಬಾಳ್ಕರ್ ಈ ಪಟ್ಟಿಯಲ್ಲಿರಬಹುದು ಎಂಬ ನಿರೀಕ್ಷೆಯಿದೆ. ಈ ಪೈಕಿ ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದಿನ ಸಂಪುಟದಲ್ಲೂ ಸಚಿವರಾಗಿದ್ದವರು. ಗ್ಯಾರಂಟಿ ಯೋಜನೆಗಳನ್ನು ಮುನ್ನಡೆಸಿದವರು. ಆದರೆ ಈ ಬಾರಿ ಅವರಿಗೆ ಯಾಕೆ ಮೊದಲ ಪಟ್ಟಿಯಲ್ಲಿ ಆದ್ಯತೆ ನೀಡಿಲ್ಲ ಎಂಬ ಪ್ರಶ್ನೆ ಹಲವರದ್ದು.
ಲಕ್ಷ್ಮೀ ಹೆಬ್ಬಾಳ್ಕರ್ ಖಾತೆ ಬದಲಾಗುವ ಸೂಚನೆಯೇ?
ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ದರಾಮಯ್ಯರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಡಿಕೆ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಹೀಗಿರುವಾಗ ಮೊದಲ ಹಂತದಲ್ಲಿ ಲಕ್ಷ್ಮೀ ಅವರಿಗೆ ಸಚಿವ ಸ್ಥಾನ ಸಿಗದಿರುವುದು ರಾಜಕೀಯ ಚರ್ಚೆಯನ್ನು ಇನ್ನಷ್ಟು ಬಿರುಸಾಗಿಸಿದೆ. ಆದರೆ ಇದರ ಹಿಂದೆ ಹಲವು ಲೆಕ್ಕಾಚಾರಗಳನ್ನು ಕಾಂಗ್ರೆಸ್ ನಾಯಕರು ಮುಂದಿಡುತ್ತಿದ್ದಾರೆ. “ಇದು ಕೇವಲ ಮೊದಲ ಪಟ್ಟಿ. ಮುಂಬರುವ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ. ಮುಂದಿನ ಪಟ್ಟಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಇರಲಿದೆ” ಎಂಬ ಮಾತುಗಳೂ ಇವೆ.
ಇನ್ನೊಂದೆಡೆ ಖಾತೆ ಬದಲಾವಣೆಯ ಸಾಧ್ಯತೆ ಬಗ್ಗೆಯೂ ಚರ್ಚೆಯಿದೆ. ಹೆಬ್ಬಾಳ್ಕರ್ ‘ಗೃಹಲಕ್ಷ್ಮಿ’ ಯೋಜನೆಯನ್ನು ಆರಂಭದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದರು. ಆದರೆ, ನಂತರ ಯೋಜನೆಯಲ್ಲಿ ಕೆಲವು ಲೋಪಗಳಾಗಿರುವುದು ನಿಜ. ಈಗ ಹೊಸದಾಗಿ ರಚಿಸಿರುವ ಡಿಕೆಶಿ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಹೆಬ್ಬಾಳ್ಕರ್ ಅವರಿಗೆ ಇನ್ನಷ್ಟು ಪ್ರಭಾವಿ ಅಥವಾ ಬೇರೆ ಖಾತೆಯನ್ನು ನೀಡುವ ಸಾಧ್ಯತೆಗಳಿವೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಹೆಬ್ಬಾಳ್ಕರ್ ಅವರನ್ನು ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಮಾಡಬೇಕು ಎಂಬ ಪೋಸ್ಟರ್ಗಳು, ಅಭಿಯಾನಗಳನ್ನೂ ನಾವು ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ಇವೆಲ್ಲವುದರ ನಡುವೆ ನಾವು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಹಿಳೆಯರಿಗೆ ಸಿಕ್ಕ ಸ್ಥಾನಮಾನದ ಕಡೆ ಕೊಂಚ ದೃಷ್ಟಿ ಹಾಯಿಸಬೇಕಾಗುತ್ತದೆ.
ಇದನ್ನು ಓದಿದ್ದೀರಾ? ಅಧಿಕಾರ ಹಸ್ತಾಂತರ ಚರಿತ್ರೆ: ಸಿದ್ದರಾಮಯ್ಯ ಬಿಟ್ಟು ಹೋದ ಆ ಮುತ್ಸದ್ದಿತನ.. (ಭಾಗ-2)
ರಾಜ್ಯದಲ್ಲಿ ಮಹಿಳಾ ರಾಜಕಾರಣಿಗಳು
ರಾಜ್ಯದ ರಾಜಕೀಯ ಇತಿಹಾಸದಲ್ಲಿ ಈವರೆಗೆ ಯಾರೊಬ್ಬ ಮಹಿಳೆಯೂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿಲ್ಲ. 1947ರಲ್ಲಿ ಮೈಸೂರು ರಾಜ್ಯ ರಚನೆಯಾದಾಗಿನಿಂದ ಇಂದಿನವರೆಗೂ ರಾಜ್ಯದಲ್ಲಿ ಕೇವಲ ಗಂಡಸರಷ್ಟೆ ಮುಖ್ಯಮಂತ್ರಿಯಾಗಿರುವುದು. ಮಹಿಳಾ ಸಚಿವರ ಸಂಖ್ಯೆಯೂ ಗಂಡಸರಿಗೆ ಹೋಲಿಸಿದರೆ ಅತಿ ಕಡಿಮೆ. ಆದರೆ ಹಲವು ಪ್ರಭಾವಿ ಮಹಿಳೆಯರು ತಮಗೆ ಸಿಕ್ಕ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಕರ್ನಾಟಕದ ಅಂದರೆ ಆಗಿನ ಮೈಸೂರು ಇತಿಹಾಸದಲ್ಲೇ ಮೊದಲ ಸಚಿವೆ ಯಶೋಧರ ದಾಸಪ್ಪ. 1962ರಲ್ಲಿ ಎಸ್. ಆರ್. ಕಂಠಿ ಹಾಗೂ ಎಸ್. ನಿಜಲಿಂಗಪ್ಪ ಅವರ ಸಂಪುಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಮದ್ಯಪಾನ ನಿಷೇಧ ಜಾರಿಗೆ ತರಬೇಕೆಂಬ ತಮ್ಮ ತತ್ವಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 1970ರ ದಶಕದಲ್ಲಿ ದೇವರಾಜ್ ಅರಸು ಸಂಪುಟದಲ್ಲಿ ಇವಾಜ್ ಬೇಗಂ ಮೆಕ್ಕಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿದ್ದರು. ಅದಾದ ಬಳಿಕ 1970 & 1989ರ ದೇವರಾಜ್ ಅರಸು ಮತ್ತು ವೀರೇಂದ್ರ ಪಾಟೀಲ್ ಸಂಪುಟದಲ್ಲಿ ಮನೋರಮಾ ಮಧ್ವರಾಜ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಷ್ಮೆ ಹಾಗೂ ಕರಾವಳಿ ಅಭಿವೃದ್ಧಿ ಇಲಾಖೆ ನಿರ್ವಹಿಸಿದ್ದರು.
1980ರ ದಶಕದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಎಸ್. ಬಂಗಾರಪ್ಪ ಸಂಪುಟ ಅವರ ಸಂಪುಟದಲ್ಲಿ ಚಂದ್ರಪ್ರಭಾ ಅರಸ್, ರೇಷ್ಮೆ, ಸಮಾಜ ಕಲ್ಯಾಣ ಮತ್ತು ಅಬಕಾರಿ ಇಲಾಖೆ ನಿರ್ವಹಿಸಿದ್ದರು. 1994 – 1999ರಲ್ಲಿ ಎಚ್. ಡಿ. ದೇವೇಗೌಡ ಮತ್ತು ಜೆ. ಎಚ್. ಪಟೇಲ್ ಸಂಪುಟದಲ್ಲಿ ಲೀಲಾ ದೇವಿ ಆರ್. ಪ್ರಸಾದ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿಭಾಯಿಸಿದ್ದರು. 1994ರಲ್ಲಿ ಬಿ. ಟಿ. ಲಲಿತಾ ನಾಯಕ್ ಅವರು ಜೆ. ಎಚ್. ಪಟೇಲ್ ಸಂಪುಟದಲ್ಲಿ ಕನ್ನಡ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ವಹಿಸಿದ್ದರು.
1990ರ ದಶಕದ ಕೊನೆಯಲ್ಲಿ ಜೆ. ಎಚ್. ಪಟೇಲ್ ಸಂಪುಟದಲ್ಲಿ ವಿಮಲಾಬಾಯಿ ದೇಶ್ಮುಖ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಭಾಯಿಸಿದ್ದರು. ಅದಾದ ಬಳಿಕ 1999 – 2004ರಲ್ಲಿ ಡಾ. ಮೋಟಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ನಿರ್ವಹಿಸಿದ್ದರು. ವಿಧಾನ ಪರಿಷತ್ತಿನ ಮೊದಲ ಮಹಿಳಾ ವಿರೋಧ ಪಕ್ಷದ ನಾಯಕಿಯೂ ಆದವರು ಮೋಟಮ್ಮ. 2008 – 2013ರ ಅವಧಿಯಲ್ಲಿ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಶೋಭಾ ಕರಂದ್ಲಾಜೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR), ಇಂಧನ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ವಹಿಸಿದ್ದಾರೆ.
ಇದನ್ನು ಓದಿದ್ದೀರಾ? ಸಾಲುಸಾಲು ಸವಾಲು ಗೆಲ್ಲಲು ‘ಇಮೇಜ್’ ಬದಲಾಯಿಸಿಕೊಳ್ಳಬಲ್ಲರೆ ‘ಡಿಕೆಶಿ’?
2013 – 2018ರಲ್ಲಿ ನಟಿ, ರಾಜಕಾರಣಿ ಉಮಾಶ್ರೀ ಅವರು ಸಿದ್ದರಾಮಯ್ಯ ಅವರ ಮೊದಲ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ನಿಭಾಯಿಸಿದ್ದಾರೆ. 2018 – 2019ರಲ್ಲಿ ಎಚ್. ಡಿ. ಕುಮಾರಸ್ವಾಮಿ ಮೈತ್ರಿ ಸಂಪುಟದಲ್ಲಿ ಡಾ. ಜಯಮಾಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸಿದ್ದಾರೆ. 2019 – 2023ರಲ್ಲಿ ಬಿ. ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆ ನಿಭಾಯಿಸಿದ್ದಾರೆ. 2023 – 2026ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಎರಡನೇ ಸಂಪುಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಹೀಗೆ ರಾಜ್ಯದ ಇತಿಹಾಸದಲ್ಲಿ ಈವರೆಗೆ ನಾವು ನೋಡಿದಾಗ ಕೇವಲ ಒಬ್ಬರೇ ಒಬ್ಬ ಮಹಿಳೆ ಇಂಧನ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಅತಿ ಪ್ರಮುಖ ‘ಭಾರೀ’ ಖಾತೆ ಎಂದು ಪರಿಗಣಿಸಲಾಗುವ ಖಾತೆಯನ್ನು ನಿಭಾಯಿಸಿರುವುದು. ಉಳಿದಂತೆ ಬಹುತೇಕ ಮಹಿಳೆಯರಿಗೆ ಸಾಂಪ್ರದಾಯಿಕವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನೇ ಹೆಚ್ಚಾಗಿ ನೀಡುತ್ತಾ ಬರಲಾಗಿದೆ. ಪ್ರಸ್ತುತ ಅಸ್ತಿತ್ವಕ್ಕೆ ಬಂದಿರುವ ಡಿ ಕೆ ಶಿವಕುಮಾರ್ ಅವರ ನೂತನ ಸಂಪುಟದಲ್ಲಿ ಆರಂಭಿಕವಾಗಿ ಯಾವುದೇ ಮಹಿಳೆಯರಿಗೆ ಸಚಿವ ಸ್ಥಾನ ನೀಡಿದ್ದಿದ್ದರೂ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಹಲವರದ್ದು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




