ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಬೀದಿಯ ದೀಪಗಳು ಹತ್ತಿಕೊಂಡವು. ಅಂಗಡಿ, ಸಿನಿಮಾ, ಹೋಟೆಲುಗಳ ನಿಯಾನ್ ಜಗ್ಗನೆ ಬಣ್ಣವನ್ನು ಚೆಲ್ಲಿದವು. ಕಪ್ಪು ರಸ್ತೆಯ ಮೇಲೆ ಸರ್‍ರನೆ, ಬುರ್‍ರನೆ ಓಡುತ್ತಿರುವ ವಾಹನಗಳ ತಲೆದೀಪಗಳು ಒಂದನ್ನು ಮತ್ತೊಂದು ಕತ್ತರಿಸುತ್ತ ಕೊನೆಯ ತಿರುವಿನವರೆಗೂ ಬೆಳಕಿನ ಪಟ್ಟಿಯನ್ನು ಕಟ್ಟಿದವು.

- Advertisement -

ಸಂಜೆ ಎಷ್ಟು ಸುಂದರ ಎಂದುಕೊಳ್ಳುತ್ತ ಆತ ಫುಟ್‌ಪಾತಿನ ಮೇಲೆ ಆರಾಮವಾಗಿ ನಡೆಯುತ್ತಿದ್ದ. ಬಗಲಿಗೊಂದು ಚೀಲವನ್ನು ಇಳಿಬಿಟ್ಟು ತಾನು ಗ್ರಹಿಸುತ್ತಿರುವ ಸೌಂದರ್ಯವನ್ನೆಲ್ಲ ಒಳಗೆ ಸೆಳೆದುಕೊಳ್ಳುತ್ತಿರುವವನಂತೆ ದೀರ್ಘ ಉಸಿರನ್ನು ಎಳೆಯುತ್ತಾ ಹೋಗುತ್ತಿದ್ದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಹೆಗಲಿನ ಮೇಲೆ ಒಂದು ಭಾರವಾದ ವಸ್ತು ಬಿದ್ದಂತಾಗಿ ಗಕ್ಕನೆ ನಿಂತ. ಭಾರವಾದ ವಸ್ತು ಭುಜವನ್ನು ಮತ್ತಷ್ಟು ಅಮುಕಿದಂತಾಗಿ ತಿರುಗಿ ನೋಡಿದ. ಅವನಿಗಿಂತ ಕೇವಲ ಒಂದು ಅಡಿ ಎತ್ತರವಿದ್ದ ಭಾರೀ ಆಸಾಮಿ ತನ್ನ ಕೈಯನ್ನು ಇವನ ಬಲಭುಜದಿಂದ ತೋಳಿಗೆ ಜಾರಿಸಿ, ತೋಳನ್ನು ಗಟ್ಟಿಯಾಗಿ ಹಿಡಿದು, ಅನಾಯಾಸ ಈತನನ್ನು ತನ್ನ ಕಡೆ ತಿರುಗಿಸಿದ.

ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ

ಇವನಿಗೆ ಏನೊಂದೂ ಹೊಳೆಯಲಿಲ್ಲ. ಆ ಎತ್ತರದ, ಕಟ್ಟುಮಸ್ತಾದ, ಭಾರೀ ಆಸಾಮಿಯ ಜತೆ ಪ್ರಶ್ನೆ ಕೇಳದೇ ಇರುವುದೇ, ಮಾತಾಡದಿರುವುದೇ ಕ್ಷೇಮ ಎಂದು ಆತನ ಅಂತಃಪ್ರಜ್ಞೆಗೆ ಹೊಳೆದು ಸುಮ್ಮನೆ ಪಿಳಿ ಪಿಳಿ ಕಣ್ಣು ಬಿಡುತ್ತಾ ನಿಂತ. ಎತ್ತರದ ವ್ಯಕ್ತಿ ಈತನ ತೋಳಿಂದ ತನ್ನ ಹಿಡಿತವನ್ನು ಸಡಿಲಿಸಿ, ಎಡಗೈಯಲ್ಲಿ ಚಿಟಿಕೆ ಹೊಡೆದು ಬಾ ಎನ್ನುವಂತೆ ಸನ್ನೆ ಮಾಡಿ ಇವನು ಬಂದ ದಿಕ್ಕಿಗೇ ತಿರುಗಿ ನಡೆಯತೊಡಗಿದ.

ಈತನಿಗೆ ಕ್ಷಣಕಾಲ ತಾನು ಅಲ್ಲಿಂದ ಓಡಿಹೋಗಬೇಕೆನಿಸಿತು. ಎತ್ತರದ ವ್ಯಕ್ತಿಯು ಒಮ್ಮೆಯೂ ಕೂಡಾ ತಿರುಗಿ ನೋಡದೆ ಮುಂದೆ ಹೋಗುತ್ತಿದ್ದ. ಓಡಿಹೋಗುವುದೂ ಸುಲಭವಲ್ಲವೆಂದು, ಆತನ ಪ್ರಯತ್ನವಿಲ್ಲದೆಯೇ ಕಾಲುಗಳು ಎತ್ತರದ ವ್ಯಕ್ತಿಯನ್ನು ಹಿಂಬಾಲಿಸಿದವು.

ಎತ್ತರದ ವ್ಯಕ್ತಿ ತನ್ನ ಭಾರೀ ದೇಹವನ್ನು ಗುಂಪಿನಲ್ಲಿ ನಿರಾಯಾಸವಾಗಿ ಆ ಕಡೆ ಈ ಕಡೆ ಹೊರಳಿಸಿಕೊಳ್ಳುತ್ತ ಮುಂದೆ ನಡೆದ. ಒಂದು ಫರ್ಲಾಂಗ್ ಹೋದ ಮೇಲೆ ರಸ್ತೆಯನ್ನು ಕ್ರಾಸ್ ಮಾಡಿ ಒಂದು ಜೀಪಿನ ಬಳಿ ಹೋಗಿ నింತ.

ಅಂಥ ವಿಶೇಷವೇನೂ ಇಲ್ಲದ ಒಂದು ಸಾಧಾರಣ ಜೀಪ್ ಅದು, ಎನಿಸಿತು ಈತನಿಗೆ. ತುಟಿ ಪಿಟಿಕ್ ಎನ್ನದೆ ಜೀಪಿನ ಬಳಿ ಈತನೂ ಬಂದು ನಿಂತಾಗ ಎತ್ತರದ ಆಸಾಮಿ ಮತ್ತೊಂದು ಚಿಟಿಕೆ ಹೊಡೆದು ಹಿಂದಿನಿಂದ ಜೀಪನ್ನು ಏರು ಎನ್ನುವಂತೆ ಸನ್ನೆ ಮಾಡಿದ. ಇವನು ಹಿಂದೆ ಹೋಗಿ ಹತ್ತುತ್ತಿರುವಾಗ ಎತ್ತರದ ವ್ಯಕ್ತಿ ಸಣ್ಣ ಧ್ವನಿಯಲ್ಲಿ ಡ್ರೈವರಿಗೆ ಏನೋ ಸೂಚನೆ ಕೊಟ್ಟ. ಅದು ಯಾವ ಭಾಷೆಯೋ ಈತನಿಗೆ ಅರ್ಥವಾಗಲಿಲ್ಲ. ಈತ ಒಳಗೆ ಹೋದ ಮೇಲೆ ಈಗಾಗಲೇ ಮೂರೂ ಬದಿಗೆ ಟಾರ್ಪಲಿನ್ ಮರೆ ಇದ್ದ ಜೀಪಿನ ಪ್ರವೇಶವನ್ನೂ ಮುಚ್ಚಿ ಎತ್ತರದ ವ್ಯಕ್ತಿ ಒಳಕ್ಕೆ ನುಸುಳಿದ. ತಟ್ಟನೆ ದೀಪಗಳೆಲ್ಲಾ ಆರಿಹೋದಂತಾಗಿ ಕತ್ತಲು ಆವರಿಸಿತು. ಆ ಕತ್ತಲಲ್ಲಿ ಒಂದು ಬಗೆಯ ದಿಗಿಲು ಆರಂಭವಾಯಿತು. ಇದ್ದಕ್ಕಿದ್ದಂತೆ ಆ ಕತ್ತಲಲ್ಲಿ ತಾನು ಮತ್ತು ಆ ಎತ್ತರದ ವ್ಯಕ್ತಿ ಇಬ್ಬರೇ ಅಲ್ಲ, ಇನ್ನೂ ಒಂದು ಆಸಾಮಿ ಇದೆ ಎನಿಸಿತು. ಇಷ್ಟು ಹೊತ್ತಿಗೆ ಜೀಪು ಚಲಿಸಲಾರಂಭಿಸಿತು. ಮೂರನೆಯ ಒಂದು ವ್ಯಕ್ತಿ ಸಣ್ಣಗೆ ಧ್ವನಿ ಮಾಡಿತು, ಎತ್ತರದ ವ್ಯಕ್ತಿ- ಬಹುಶಃ- ಅಷ್ಟೇ ಸಣ್ಣಗೆ ಉತ್ತರ ಕೊಟ್ಟಿತು. ಅದೇನೆಂದು ಇವನಿಗೆ ಅರ್ಥವಾಗಲಿಲ್ಲ.

ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ

ಜೀಪು ಸುಮಾರು ಒಂದೆರಡು ಮೈಲು ಹೋಗಿರಬಹುದೋ ಏನೋ, ಯಾರೋ ಒಬ್ಬರು ಜೀಪಿನ ಸೀಟಿನ ಕಬ್ಬಿಣದ ಪಟ್ಟಿಯ ಮೇಲೆ ಎರಡು ಬಾರಿ ಶಬ್ದ ಮಾಡಿದರು. ತಕ್ಷಣ ಸಣ್ಣ ಬಲ್ಬೊಂದು ಮಿಣ್ಣಗೆ ಬೆಳಗಿತು.

ಈತನ ಊಹೆ ನಿಜವಾಗಿತ್ತು. ಅಲ್ಲಿ ಇನ್ನೊಬ್ಬ ಇದ್ದ. ಆತನೂ ತಾನು ಮೊದಲು ನೋಡಿದ ವ್ಯಕ್ತಿಯಂತೆಯೇ ಇದ್ದ. ಅವಳಿ-ಜವಳಿ ಎನ್ನಬಹುದಾದಷ್ಟು ಇಬ್ಬರಿಗೂ ಹೋಲಿಕೆ. ಇದುವರೆಗೂ ಯೋಚನೆಗೆ ಗರಬಡಿದಂತಿದ್ದ ಈತ, ಈಗ ಇವರು ಯಾರು ಎಂದು ಮೊದಲ ಪ್ರಶ್ನೆಯನ್ನು ತನಗೇ ಕೇಳಿಕೊಂಡ. ಆದರೆ ಆ ಪ್ರಶ್ನೆ ಅಸಂಬದ್ಧ ಎನಿಸಿತು ಅವನಿಗೆ, ಕೂಡಲೇ. ಯಾವುದೋ ಬಿಸಿನೆಸ್ ಎಕ್ಸಿಕ್ಯೂಟಿವ್ಸ್‌ ಥರ ವೇಷಭೂಷಣ. ಆದರೆ ಅವರು ಅದು ಅಲ್ಲ ಎಂದೂ ಇವನ ಒಳಮನವು ಒಲಿದು, ಒಂದು ರೀತಿಯ ಕಸಿವಿಸಿಯಲ್ಲಿ ಅವರನ್ನು ಸುಮ್ಮನೆ ನೋಡತೊಡಗಿದ. ಅವರು ಮುಖದಲ್ಲಿ ಏನೊಂದು ಭಾವನೆಯನ್ನೂ ತೋರದೆ ಸೀಟಿಗೆ ಅಂಟಿಕೊಂಡು ಕೂತಿದ್ದರು. ಜೀಪು ಈಗ ಕೊಂಚ ವೇಗವಾಗಿ ಓಡುತ್ತಿದೆ ಎನಿಸಿತು. ಕುಲುಕುತ್ತಿತ್ತು. ಕುಲುಕಿದಾಗೆಲ್ಲ ಅವರ ಮೀಸೆ…

ಹಾಂ… ಈತನಿಗೆ ಬೆಳಕು ಹೊಡೆದಂತಾಗಿ ಸತ್ಯ ಅವರ ಮೀಸೆಯಲ್ಲಿದೆ ಎಂದು ಕಂಡುಕೊಂಡ. ಆ ಮೀಸೆ ಮೊದಲೂ ಇತ್ತು. ಆದರೆ ತಾನೇಕೆ ಅದನ್ನು ಗಮನಿಸಲಿಲ್ಲ. ಆ ಮೀಸೆಯಿಲ್ಲದಿದ್ದರೆ ಅವರು ಪೊಲೀಸರೆಂದು ತನಗೆ ಈ ಜನ್ಮದಲ್ಲಿ ಗೊತ್ತಾಗುತ್ತಿರಲಿಲ್ಲ. ಜೀಪು ಕುಲುಕಿದಂತೆಲ್ಲ ಆ ಮೀಸೆ ಕುಣಿಯುತ್ತಿತ್ತು. ಕಣ್ಣು ಉಜ್ಜಿಕೊಂಡು ನೋಡಿದ. ಅದು ಬೆಳೆಯುತ್ತಲೂ ಇತ್ತು.

ತೀರಾ ಹತಾಶನಾಗಿ ”ನನ್ನನ್ನು ಎಲ್ಲಿಗೆ ಒಯ್ತೀರಿ?” ಎಂದು ಕೇಳಿದ. ಅಥವಾ ಕೇಳಿದೆ ಎಂದು ತಿಳಿದುಕೊಂಡ. ಮೀಸೆಯವರು ಕಣ್ಣು ಮಿಟುಕಿಸಲಿಲ್ಲ. ತುಟಿ ಒಡೆಯಲಿಲ್ಲ.

ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ

ಈತ ಮತ್ತೊಮ್ಮೆ ತನ್ನ ಒಳಗೇ ತಿರುಗಿಕೊಂಡ. ಆ ಮೀಸೆ ಕುಣಿಯುವ ಕ್ರಮ, ಅದು ಕ್ಷಣಕ್ಷಣಕ್ಕೂ ಬೆಳೆಯುವ ರೀತಿಯನ್ನು ನೋಡಿ ಅವರು ಪೊಲೀಸರೆಂಬುದರಲ್ಲಿ ಈತನಿಗೆ ಸಂಶಯ ಉಳಿಯಲಿಲ್ಲ. ಆದರೆ ತನ್ನನ್ನು ಒಯ್ಯುತ್ತಿರುವುದಾದರೂ ಎಲ್ಲಿಗೆ? ಯಾಕೆ? ತಾನೇನಾದರೂ ಅಪರಾಧ ಮಾಡಿದ್ದೇನೆಯೇ? ಎಂದು ನೂರಾರು ಪ್ರಶ್ನೆಗಳನ್ನು ಹಾಕಿಕೊಂಡ.

ಬೆಳಗಿನಿಂದ ನಡೆದದ್ದನ್ನು ಜ್ಞಾಪಿಸಿಕೊಂಡ.

ಹೆಂಡತಿಯೊಡನೆ ಜಗಳಾಡಿದ್ದ. ಹಿಂದಿನ ರಾತ್ರಿ ತಡವಾಗಿ ಬಂದಿದ್ದಕ್ಕೆ ಆಕೆ ಕೊಂಕು ನುಡಿದಿದ್ದಳು.

ಮಕ್ಕಳನ್ನು ಎತ್ತಿ ಮುದ್ದಾಡಿದ್ದ. ಅವು ಬಂದು ಇವನನ್ನು ಲಲ್ಲೆಗರೆದಿದ್ದವು.

ಹಿಂದಿನ ದಿನ ಸಂಜೆ ಮಾರ್ಕೆಟ್ಟಿನ ಚೌಕದ ಬಳಿ ಗೆಳೆಯರೊಡನೆ ನಿಂತು “ಹಹ” ಎಂದು ನಕ್ಕಿದ್ದ. ಅವರು ಜೋಕ್ ಮಾಡಿದ್ದರು.

ಬೆಲೆ ಜಾಸ್ತಿ ಎಂದು ಗೊಣಗಿದ್ದ. ಅವರು ಸರಕು ನಾಪತ್ತೆ ಎಂದಿದ್ದರು.

ದಾರಿಯಲ್ಲಿ ಕೈಬೀಸಿಕೊಂಡು ನಡೆದಿದ್ದ. ತನ್ನ ಕೈ ಯಾರಿಗೂ ತಾಗಿರಲಿಲ್ಲ.

ತರಕಾರಿ ತರಲು ಹೋಗಿದ್ದ. ಒಂದಕ್ಕೆ ಎರಡು ಬೆಲೆ ಹೇಳಿದರೂ ದೂಸರಾ ಮಾತಿಲ್ಲದೆ ತಂದಿದ್ದ. ತರಕಾರಿ ಕೊಳೆತುಹೋಗಿತ್ತು. ಸೊಪ್ಪು ಹುಳ ಹಿಡಿದಿತ್ತು.

ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು

ಇದಕ್ಕಿಂತ ಹೆಚ್ಚಿನ ಮಹತ್ವದ ಘಟನೆಗಳೇನೂ ತನ್ನ ಜೀವನದಲ್ಲಿ ನಡೆದಿದೆ ಎನಿಸಲಿಲ್ಲ ಅವನಿಗೆ.

ಜೀಪು ಇನ್ನೂ ಹೋಗುತ್ತಲೇ ಇತ್ತು. ತಿರುವು-ಮುರುವುಗಳನ್ನು ದಾಟುತ್ತಿತ್ತು. ಹಾರ್ನ್ ಹೊಡೆಯುತ್ತಿತ್ತು. ಅದರ ಪಕ್ಕದಲ್ಲಿ ಯಾವ ಯಾವುದೋ ವಾಹನಗಳು ಹಾದುಹೋಗುತ್ತಿದ್ದವು. ಅಂದರೆ ಈ ಜೀಪು ಇನ್ನೂ ನಗರದಲ್ಲೇ ಸುತ್ತುತ್ತಿದೆ. ಮೀಸೆಯವರನ್ನು ನೋಡಿದ. ಅವರ ತುಟಿಯಲ್ಲಿ ಕೊಂಚ ನಗೆ ಇದೆ ಎನಿಸಿತು ಆತನಿಗೆ. ಆದರೆ ಅದಕ್ಕಿಂತ ಹೆಚ್ಚಾಗಿ ಅವರ ಮೀಸೆ ಒಂದು ದೊಡ್ಡ ಪೊದೆಯಾಗಿ ಅವರ ಮುಖದ ಮೇಲೆ ಬೆಳೆದು ನಿಂತಿದೆ. ಬಳ್ಳಿಯಾಗಿ ಚಾಚಿಕೊಳ್ಳುತ್ತಿದೆ. ನಿಧಾನವಾಗಿ ಇಂಚು ಇಂಚಾಗಿ ಉದ್ದವಾಗುತ್ತ ಎರಡು ಮೀಸೆಗಳ ನಾಲ್ಕು ತುದಿಗಳು ಇವನ ಕಾಲ ಬಳಿ ಬಂದಿದ್ದವು. ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ಅವು ತನ್ನ ಕಾಲನ್ನು ಸುತ್ತುತ್ತವೆ, ತನ್ನ ದೇಹವನ್ನು ಸುತ್ತುತ್ತವೆ, ಕೈಗಳನ್ನು, ಮುಖವನ್ನು, ಪ್ರಜ್ಞೆಯನ್ನು, ಮನಸ್ಸನ್ನು, ಬುದ್ದಿಯನ್ನು ಬಂಧಿಸುತ್ತವೆ, ಉಸಿರನ್ನು ಕಟ್ಟುತ್ತವೆ, ಜೀವವನ್ನು ರಕ್ಷಿಸುತ್ತದೆ, ಪ್ರಾಣವನ್ನು ಕಬಳಿಸುತ್ತದೆ…

ಒಂದು ದೀರ್ಘವಾದ, ಕೊನೆಯೇ ಇಲ್ಲವೇನೋ ಅನ್ನುವಂಥ ದುಃಸ್ವಪ್ನವೊಂದು ತಟ್ಟನೆ ಕಡಿದಂತೆ ಕಣ್ಣು ಬಿಟ್ಟ. ಜೀಪ್ ಗಕ್ಕನೆ ನಿಂತಿತ್ತು. ಅವರನ್ನು ನೋಡಿದ. ಮೀಸೆ ತಾನು ಮೊದಲು ನೋಡಿದ ಪ್ರಮಾಣದಲ್ಲಿ ಅವರ ಮುಖವನ್ನು ನೀಟಾಗಿಸಿ, ಭಾವವನ್ನು ಮರೆಯಾಗಿಸಿ ಕೂತಿತ್ತು.

ಮೀಸೆ-2 ಚಿಟಿಕೆ ಹೊಡೆದ. ಈ ಚಿಟಿಕೆಯ ಭಾಷೆಯೊಂದೇ ತಮ್ಮ ನಡುವಣ ಸಂಭಾಷಣೆ ಎಂದುಕೊಂಡ. ಈ ಮೂರನೆಯ ಚಿಟಿಕೆಯ ಅರ್ಥ ಕೆಳಗಿಳಿ ಎಂದಿರಬೇಕು. ಜೀಪಿನಿಂದ ಕೆಳಗಿಳಿದ.

ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ

ಆ ಜಾಗ ತೀರಾ ಅಪರಿಚಿತ ಎನಿಸಿತು. ಇಷ್ಟು ಹೊತ್ತೂ ಆ ಜೀಪು ತಾನಿದ್ದ ನಗರದಲ್ಲೇ ಗಸ್ತು ಹೊಡೆಯುತ್ತಿತ್ತೆಂಬುದರಲ್ಲಿ ಅವನಿಗೆ ಸಂದೇಹವಿಲ್ಲ. ಆದರೂ ಈ ಜಾಗವನ್ನು ತಾನು ಹಿಂದೆಂದೂ ನೋಡಿಲ್ಲ. ಇಲ್ಲಿ ಜನಸಂಚಾರ ಕಡಿಮೆ. ಅಲ್ಲೊಂದು ಇಲ್ಲೊಂದು ಮನೆಗಳು ಚದರಿದ್ದವು. ರಾತ್ರಿ ತುಂಬಾ ಹೊತ್ತಾಗಿರಬೇಕು. ತಾನು ಜೀಪಿನಲ್ಲಿ ಎರಡು ಗಂಟೆ ಕಳೆದಿರಬೇಕು. ತಾನು ಬಂದ ಜೀಪು ಒಂದು ಹಳೆಯ ಕಟ್ಟಡದ ಎದುರು ನಿಂತಿತ್ತು. ಡ್ರೈವ‌ರ್ ಕೆಳಗಿಳಿಯಲಿಲ್ಲ. ಮೀಸೆಯ ಇಬ್ಬರು ಇಳಿದು ಡ್ರೈವರ್‌ಗೆ ಮತ್ತೇನೋ ತನಗೆ ಅರ್ಥವಾಗದ ಭಾಷೆಯಲ್ಲಿ ಸೂಚನೆ ಕೊಟ್ಟು ಚಿಟಿಕೆ ಹೊಡೆದು ಹಳೆಯ ಕಟ್ಟಡದ ಕಡೆ ಹೊರಟರು. ಈತ ಅವರ ಹಿಂದೆ ನಡೆದ.

ಆ ಕಟ್ಟಡವನ್ನು ಹೊಕ್ಕ ಕೂಡಲೇ ಇದು ಮತ್ತೊಂದೇ ಪ್ರಪಂಚ ಎನ್ನುವಷ್ಟು ಬೇರೆಯಾಗಿತ್ತು. ಅದು ಹೊರಗೆ ನೋಡುವಷ್ಟು ಹಳೆಯದಾಗಲೀ, ಸಾಧಾರಣದ್ದಾಗಲೀ ಅಲ್ಲ ಎನಿಸುವಷ್ಟು ಭಿನ್ನವಾಗಿತ್ತು. ಒಂದು ವಿಶಾಲವಾದ ಹಾಲು. ಅಲ್ಲಿ ಎಂತೆಂಥದೋ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು. ಈ ಉಪಕರಣಗಳ ಶಬ್ದವನ್ನು ಬಿಟ್ಟು ಅಲ್ಲಿ ಇನ್ನು ಯಾವ ಶಬ್ದವೂ ಇಲ್ಲ. ಸುಮಾರು 30-40 ಮಂದಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದರು. ಟೆಲಿಫೋನಿನಲ್ಲಿ “ಹಲೋ” ಎನ್ನುತ್ತಿದ್ದರು. “ಎಸ್” ಎನ್ನುತ್ತಿದ್ದರು. ”ಓಕೆ” ಎನ್ನುತ್ತಿದ್ದರು. ಅಷ್ಟನ್ನು ಬಿಟ್ಟು ಬೇರೆ ಮಾತಿಲ್ಲ. ವಿಚಿತ್ರವಾದ ಶಿಸ್ತಿನಿಂದ ಸ್ಟಾಪ್ ವಾಚಿಗನುಗುಣವಾಗಿ ಕೆಲಸ. ಅವನು ಎರಡೆ ನಿಮಿಷಗಳಲ್ಲಿ ಇದನ್ನೆಲ್ಲ ಗ್ರಹಿಸಿದ. ಅಷ್ಟರಲ್ಲೇ ಮತ್ತೊಂದು ಚಿಟಿಕೆ. ಮೀಸೆಯವರು ಆ ಹಾಲಿನ ಒಂದು ಕಡೆ ಹೋಗಿ ಬಾಗಿಲು ತೆಗೆದು ಒಳಗೆ ಹೋದರು. ಈತ ಹಿಂಬಾಲಿಸಿದ.

ಅದೊಂದು ‘ಸೆಲ್’ ಇದ್ದ ಹಾಗಿತ್ತು. ಬಿಳೀ ಬಣ್ಣದ ಖಾಲೀ ಗೋಡೆಗಳು, ಅದಕ್ಕೆ ಬಾಗಿಲನ್ನು ಬಿಟ್ಟು ಬೇರೆ ಏನೂ ಇಲ್ಲ. ಒಂದು ಸಣ್ಣ ಟೇಬಲ್. ಎರಡು ಕುರ್ಚಿ. ಟೇಬಲ್ ಮೇಲೊಂದು ಟೆಲಿಫೋನ್. ಇಷ್ಟು ಬಿಟ್ಟರೆ ಅಲ್ಲಿ ಇನ್ನೇನೂ ಇಲ್ಲ. ಈ ಕೋಣೆಗೆ ಪ್ರವೇಶಿಸಿ, ಬಾಗಿಲು ಹಾಕಿದ ಮೇಲೆ ಹೊರಗಿನ ಎಲ್ಲ ಶಬ್ದವೂ ತಟಸ್ಥವಾಗಿ ಒಂದು ಬಗೆಯ ಮೌನ ನೆಲೆಸಿತು. ಮೀಸೆಯವರಿಬ್ಬರೂ ಅಲ್ಲಿದ್ದ ಎರಡು ಕುರ್ಚಿಗಳ ಮೇಲೆ ಕೂತರು. ಈತ ನಿಂತೇ ಇದ್ದ.

“ಏನು ನಿನ್ನ ಹೆಸರು?” ಒಬ್ಬ ಮೀಸೆಯವ ಮೊದಲ ಬಾರಿ ಈತನ ಬಳಿ ಬಾಯಿಬಿಟ್ಟ.

ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು

“ನನ್ನ ಹೆಸರು ನಿಮಗೆ ಗೊತ್ತಿಲ್ವೆ?” ಎಂದ ಈತ ಆಶ್ಚರ್ಯದಿಂದ. ಅವನ ಆಶ್ಚರ್ಯಕ್ಕೆ ಕಾರಣ ತನ್ನ ಹೆಸರು ಅಷ್ಟು ಜನಪ್ರಿಯವಾಗಿತ್ತೆಂದಲ್ಲ. ಇಲ್ಲಿಯವರೆಗೆ ತನ್ನನ್ನು ತರುವ ಶ್ರಮ ವಹಿಸಿದ ಅವರು ಮೊದಲೇ ಅದನ್ನು ತಿಳಿದಿರುತ್ತಾರೆಂಬ ನಂಬಿಕೆ ಇದ್ದುದ್ದಕ್ಕಾಗಿ ಆಶ್ಚರ್ಯ.

ಇಬ್ಬರೂ ಒಂದು ಕ್ಷಣ ಮೌನವಾಗಿದ್ದರು. ಒಬ್ಬರನ್ನೊಬ್ಬರು ನೋಡಿಕೊಂಡು ತಲೆಯಾಡಿಸಿ ಮೀಸೆಯಲ್ಲಿ ನಕ್ಕರು. ಈತನಿಗೆ ಅವರ ಮೀಸೆಯ ಕುಡಿಗಳು ಮತ್ತೊಮ್ಮೆ ಉದ್ದವಾಗುತ್ತಿದೆ ಎನಿಸತೊಡಗಿತು.

“ವಯಸ್ಸೆಷ್ಟು?” ಎಂದ ಮತ್ತೊಬ್ಬ.

“ಇವತ್ತಿಗೆ 29 ತುಂಬಿತು” ಎಂದ. ಅದಕ್ಕೂ ಅವರು ತಲೆಯಾಡಿಸಿದರು. ಒಬ್ಬ ಕುರ್ಚಿಯಿಂದ ಎದ್ದು ಬಂದು ಈತನ ಹೆಗಲಿಗೆ ಜೋತುಬಿದ್ದ ಚೀಲವನ್ನು ತೆಗೆದುಕೊಂಡು ಹೋಗಿ ಮತ್ತೆ ಕುರ್ಚಿಯಲ್ಲಿ ಕೂತ. ತನ್ನ ಚೀಲದಲ್ಲಿ ಏನಿದೆ ಎಂದು ಮನಸ್ಸಿನಲ್ಲೇ ಯೋಚಿಸಿದ. ಒಂದು ನೋಟ್ಬುಕ್. ಅದರಲ್ಲಿ ಮನಸ್ಸಿಗೆ ತೋಚಿದ್ದನ್ನು ಗೀಚುತ್ತಿದ್ದ. ಒಂದೆರಡು ಪತ್ರಗಳು. ಒಂದು ಬಾಲ್ ಪಾಯಿಂಟ್ ಪೆನ್, ಬಸ್ ಕ್ಯೂಗೆ ಕಾಯುವ ಬೋರ್ ತಪ್ಪಿಸಿಕೊಳ್ಳಲೆಂದು ಇಟ್ಟಿದ್ದ ಒಂದು ಪೇಪರ್ ಬ್ಯಾಕ್ ಜನಪ್ರಿಯ ಕಾದಂಬರಿ. ಇನ್ನೇನೂ ಇದ್ದಂತಿಲ್ಲ. ಚೀಲದ ವಸ್ತುಗಳನ್ನೆಲ್ಲ ಟೇಬಲ್ ಮೇಲೆ ಚೆಲ್ಲಿದ. ಮತ್ತೊಬ್ಬ ಮೀಸೆಯವ ಈತನ ಹಿಂದಿನ ಗೋಡೆಯನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದ. ಚೀಲ ತೆಗೆದುಕೊಂಡವನು ತನ್ನ ನೋಟ್‌ಬುಕ್ ತೆಗೆದು ಅಲ್ಲಿರುವುದನ್ನು ಓದತೊಡಗಿದ.

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

”ಅದು ನನ್ನ ಖಾಸಗಿ ವಿಷಯ” ಎಂದು ಹೇಳಲು ಈತ ಬಾಯಿತೆರೆದ. ಶಬ್ದಗಳು ಗಂಟಲಲ್ಲೇ ಉಳಿದವು. ತನಗೇಕೆ ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ ಎಂದು ತನ್ನ ಮೇಲೇ ಕೋಪ ಮಾಡಿಕೊಂಡ. ತಾನು ಜಗಳಾಡಿದ ಹೆಂಡತಿ, ಮುದ್ದು ಮಾಡಿದ ಮಕ್ಕಳು ನೆನಪಿನಲ್ಲಿ ಸುಳಿದರು.

ನೋಟ್‌ಬುಕ್ ನೋಡುತ್ತಿದ್ದವನು ಈತ ಬರೆದ ಯಾವುದನ್ನೋ ಬೆರಳುಮಾಡಿ, ಗೋಡೆಯನ್ನು ನೋಡುತ್ತಿದ್ದವನಿಗೆ ತೋರಿಸಿದ. ಅವನು ನಕ್ಕ. ಮೀಸೆ ಕುಣಿಯಿತು.

“ನಿನ್ನೆ ಸಂಜೆ ಚೌಕದ ಬಳಿ ಏನು ಮಾಡಿದೆ?” ಎಂದು ನಗುತ್ತ ಕೇಳಿದ.

ಈತ ಸುಮ್ಮನಿದ್ದ.

“ಹಹ ಎಂದು ನಗಲಿಲ್ಲವ?” ಎಂದ.

ಈತ ತಲೆಯಾಡಿಸಿದ. ನಗುವುದು ಅಪರಾಧ ಇರಬಹುದೆ?

“ಕೈ ಬೀಸಿಕೊಂಡು ನಡೆಯಲಿಲ್ಲವ?” ಎಂದ.

“ಆದರೆ ನನ್ನ ಕೈ ಯಾರಿಗೂ ತಾಗಲಿಲ್ಲ.”

ಶತಮಾನದ ಸಣ್ಣ ಕತೆಗಳು

“ಎದುರು ಮಾತಾಡಬೇಡ.”

ಸುಮ್ಮನಾದ.

ಚಿಟಿಕೆ ಹೊಡೆದು ಹತ್ತಿರ ಕರೆದ. “ತಲೆ ಹಿಡುಕ ಯಾರು?” ಎಂದ.

ಅರ್ಥವಾಗದವನಂತೆ ನಿಂತ. ನೋಟ್‌ಬುಕ್‌ನಲ್ಲಿ ಬೆರಳಿಟ್ಟು ತೋರಿಸಿದ. ಅಲ್ಲಿ “ಅವನೊಬ್ಬ ತಲೆಹಿಡುಕ” ಎಂದು ಈತ ಬರೆದಿದ್ದ.

“ನಿನ್ನ ಮೇಲಧಿಕಾರೀನ?” ಎಂದು ಕೇಳಿದ.

ತಲೆಯಾಡಿಸಿದ.

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

“ನಿನಗೆ ಶಿಸ್ತಿಲ್ಲ. 29 ವರ್ಷ ಆದ್ದು ದಂಡ. ಅಧಿಕಾರೀನ ಪ್ರಶ್ನೆ ಮಾಡಬಾರದು, ತಿಳೀತಾ?” ಎಂದ. ತಿಳಿಯಲಿಲ್ಲ ಎನ್ನುವಂತೆ ಸುಮ್ಮನೆ ನಿಂತಿದ್ದ.

ಟೆಲಿಫೋನ್ ಶಬ್ದ ಮಾಡಿತು. ಒಬ್ಬ ಎತ್ತಿಕೊಂಡು “ಹಲೋ” ಎಂದ. “ಇದಾನೆ” ಎಂದ. ”ಒದೆ ಕೊಟ್ಟರೆ ಸರಿಹೋಗ್ತಾನೆ” ಎಂದ. “ಹಾಗೇ ಮಾಡ್ತೀನಿ” ಅಂದ.

ಮೀಸೆಯವರಿಬ್ಬರ ಮೀಸೆಗಳೂ ಈಗ ಉದ್ದವಾಗುತ್ತ, ಈತನ ದೇಹವನ್ನೆಲ್ಲ ಸುತ್ತಿಕೊಳ್ಳುತ್ತ ಬೆಳೆಯುತ್ತಿತ್ತು. ಈ ಬಾರಿ ಅದು ಕಾಯಂ ಆಗಿ ತನ್ನನ್ನು ಸುತ್ತಿಕೊಂಡೇ ಇರುತ್ತದೆ ಎನ್ನುವ ದಿಗಿಲು. ಭಯದಲ್ಲಿ ಪಿಳಿಪಿಳಿ ಕಣ್ಣುಬಿಡುತ್ತ ನಿಂತಿದ್ದ. ಒಬ್ಬ ಅಲ್ಲಿಂದಲೇ ಕಾಲು ಚಾಚಿ “ಒಪ್ಪಿಕೋ” ಎಂದು ಹೊಟ್ಟೆಯ ಮೇಲೆ ಒಂದು ಒದ್ದ.

ಪ್ರಜ್ಞೆ ಮಸುಕಾಯಿತು. ತಲೆ ರಾಕೆಟ್ಟಿನ ವೇಗದಲ್ಲಿ ಸುತ್ತಿತು. ಮರುಕ್ಷಣ ಆ ಜಾಗದಲ್ಲಿ ಕತ್ತಲು ತುಂಬಿಕೊಂಡಿತು.

*

ಎಷ್ಟೋ ಹೊತ್ತಿನ ಮೇಲೆ ಎಚ್ಚರಾಯಿತು. ತಾನೊಂದು ವಿಶಾಲವಾದ ಬಯಲಿನಲ್ಲಿದ್ದೇನೆನಿಸಿತು. ಮರಗಿಡಗಳಿದ್ದವು. ದೂರದಲ್ಲಿ ಕಟ್ಟಡಗಳಿದ್ದವು. ಆದರೆ ಈ ಬಯಲೊಂದು ಜೈಲು ಎನ್ನಿಸತೊಡಗಿತು ಆತನಿಗೆ.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

GS Sadashiva 1

ಜಿ.ಎಸ್. ಸದಾಶಿವ (1939-2007): ತಂದೆ ಶ್ರೀಪಾದರಾಯರು. ತಾಯಿ ಲಲಿತಮ್ಮ. ತಾಯಿಯ ತೌರೂರು ಗಿಂಡೀಮನೆಯಲ್ಲಿ ಜನಿಸಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಭಾರಂಗೀ ಹೋಬಳಿ ಗುಂಡಮನೆಯಲ್ಲಿ ಬೆಳೆದರು. ಕೃಷಿಕ ಕುಟುಂಬ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ ಮಾನಸಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದರು. ಸದಾಶಿವ ಅವರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶ ಮಾಡಿದರು. ಅಲ್ಲಿಂದ ‘ಪ್ರಜಾವಾಣಿ’ಯಲ್ಲಿ, ನಂತರದ ವರ್ಷಗಳಲ್ಲಿ ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು. ಪ್ರಕಟಿತ ಕೃತಿಗಳು: ‘ಮಗುವಾಗಿ ಬಂದವನು'(1964), ‘ತುಣುಕುಗಳು'(1973), ‘ನಂ ಕೌಲಿ ಕಂಡ್ರಾ'(1978) (ಕಥಾಸಂಕಲನಗಳು); ‘ಚೆಲುವು'(ಮಂಗೋಲಿಯ, ಚೀನ, ಜಪಾನ್, ಕೊರಿಯ ಕಥೆಗಳು-1980), ‘ತಾಯಿ'(1987), ‘ಕಥರೀನ್ ಬ್ರಮ್'(1988), ‘ಶಿಬಿರದ ದಾರಿಯಲ್ಲಿ'(1995) (ಎಲ್ಲ ಅನುವಾದಗಳು). ಹಲವಾರು ಮಕ್ಕಳ ಸಾಹಿತ್ಯಕೃತಿಗಳನ್ನೂ ಕನ್ನಡಕ್ಕೆ ಅನುವಾದಿಸಿರುವ ಸದಾಶಿವ ‘ಹದಿನೈದು ಕತೆಗಳು’, ‘ಪ್ರಶಸ್ತಿ-83’ ಸಂಕಲನಗಳನ್ನೂ ಸಂಪಾದಿಸಿದ್ದಾರೆ (ಇತರರ ಜೊತೆ). ‘ಆಕ್ಸಿಡೆಂಟ್’ ಮತ್ತು ‘ಮೂರು ದಾರಿಗಳು’ ಚಿತ್ರಗಳಿಗೆ ಸಂಭಾಷಣೆ, ‘ಆಕ್ರಮಣ’ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ, ಮತ್ತು ‘ಎಲ್ಲಿಂದಲೋ ಬಂದವರು’ ಚಿತ್ರಕ್ಕೆ ಚಿತ್ರಕಥೆ (ಪಿ. ಲಂಕೇಶರ ಜೊತೆ) ಬರೆದಿರುವ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ ಸಂದಿದ್ದವು. ಬೆಂಗಳೂರಿನಲ್ಲಿ 2007ರ ಜನವರಿ 9ರಂದು ನಿಧನರಾದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...