ಹೆಚ್ಚುತ್ತಿರುವ ತಾಪಮಾನದಿಂದ ತತ್ತರಿಸಿದ್ದ ಉತ್ತರ ಕರ್ನಾಟಕ ಭಾಗದ ಜನರಿಗೆ ನಿನ್ನೆಯ ಮಳೆ ಕೊಂಚ ತಂಪೆರೆದಿದೆ. ಉತ್ತರ ಕರ್ನಾಟಕದ ಹಾವೇರಿ, ಬಾಗಲಕೋಟೆ, ಹುಬ್ಬಳ್ಳಿ, ವಿಜಯನಗರ ಜಿಲ್ಲೆಯ ಹಲವೆಡೆ ಬುಧವಾರ ಮಳೆಯ ಸಿಂಚನವಾಗಿದೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಡಿಲು ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಹುಬ್ಬಳ್ಳಿ ನಗರ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದ್ದು, ಬುಧವಾರ ಬೆಳಿಗ್ಗೆ ಸುರಿದ ಮಳೆ ಸುಡು ಬಿಸಿಲ ತೀವ್ರತೆಯನ್ನು ಒಂದಿಷ್ಟು ತಗ್ಗಿಸಿದೆ.
ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗಿದ್ದು, ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ನಡುರಾತ್ರಿಯಿಂದ ಬುಧವಾರ ಬೆಳಿಗ್ಗೆಯ ತನಕ ಮಳೆ ಸುರಿದಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ, ತಂಬ್ರಹಳ್ಳಿ ಹೋಬಳಿ ಮತ್ತು ಕೂಡ್ಲಿಗಿ ತಾಲೂಕಿನ ಕೆಲ ಭಾಗಗಳಲ್ಲಿ ಮಳೆಯಾಗಿದೆ.
ರಾಯಚೂರಿನ ಹಟ್ಟಿ ತಾಲೂಕಿನ ಯರಜಂತಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಲಿಕಲ್ಲು ಸಹಿತ ಮಳೆಯಾಗಿದೆ. ಹನುಮಂತಿ ಬಸಯ್ಯ ಅವರ ಮನೆಯ ಮೇಲ್ಛಾವಣಿಯ ಟಿನ್ ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ. ಪರಿಣಾಮ ಮನೆಯಲ್ಲಿದ್ದ ಜೋಳ, ಸಜ್ಜೆ ಮಳೆಗೆ ತೋಯ್ದ ಪರಿಣಾಮ ₹75 ಸಾವಿರ ಮೌಲ್ಯದ ದವಸ ಧಾನ್ಯಗಳು ನಷ್ಟವಾದ ವರದಿಯಾಗಿದೆ.
ಇದನ್ನೂ ಓದಿ>ಯಾದಗಿರಿ | ಎಸ್‌ಐಆರ್ ಕುರಿತು ಸಂವಾದ ಗೋಷ್ಠಿ: ಪೌರತ್ವ ಪ್ರಶ್ನೆ, ಪ್ರಭುತ್ವದ ಹುನ್ನಾರಗಳ ವಿರುದ್ಧ ತೀವ್ರ ಚರ್ಚೆ
ಯಾದಗಿರಿ ಜಿಲ್ಲೆಯ ಕೆಂಭಾವಿ ಸಮೀಪದ ಮುದನೂರು ಗ್ರಾಮದ ಕೋರಿ ಸಿದ್ದೇಶ್ವರ ಶಾಖಾ ಮಠಕ್ಕೆ ಮಂಗಳವಾರ ತಡರಾತ್ರಿ ಸಿಡಿಲು ಬಡಿದಿದೆ. ದೇವರ ಮೂರ್ತಿಗಳು, ಪೀಠೋಪಕರಣಗಳು ಸಿಡಲಿನ ಹೊಡೆತಕ್ಕೆ ಸಿಕ್ಕು ಕರಕಲಾಗಿವೆ. ಮಠದ ಆವರಣದಲ್ಲಿದ್ದ ಭಕ್ತರು ಸ್ಥಳದಿಂದ ಓಡಿ ಹೋಗಿದ್ದರಿಂದ ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.




