‘ಶೂದ್ರರು ಯಾರಾಗಿದ್ದರು?: ‘…ಅಜ್ಞಾನಿ ಶೂದ್ರರಿಗಾಗಿ ಈ ಪುಸ್ತಕ’

Date:

ಕೃತಿ: WHO WERE THE SHUDRAS? How they came to be the Fourth Varna in the Indo-Aryan Society (ಶೂದ್ರರು ಯಾರಾಗಿದ್ದರು? ಭಾರತೀಯ ಆರ್ಯ ಸಮಾಜದಲ್ಲಿ ಅವರು ನಾಲ್ಕನೇ ವರ್ಣದವರಾಗಿದ್ದು ಹೇಗೆ?)

- Advertisement -

ಮೊದಲ ಮುದ್ರಣ: 1946 (Thacker and Co.’s editions)
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1990, ಜನವರಿ 26
ಇಂಗ್ಲಿಷ್ ಸಂಪುಟ: 7
ಕನ್ನಡ ಸಂಪುಟ: 6
Namaskar Books Edition- 2023


ಸುಮಾರು ಹದಿನೈದು ವರ್ಷಗಳ ನಿರಂತರ ಅಧ್ಯಯನದ ಫಲವಾಗಿ ಬಾಬಾಸಾಹೇಬರು ಬರೆದ ಕೃತಿಯೇ ‘ಶೂದ್ರರು ಯಾರಾಗಿದ್ದರು?’. ಶೂದ್ರರ ಮೂಲವನ್ನು ಶೂದ್ರರಿಗೆ ತಿಳಿಸಿಕೊಟ್ಟು ಅವರಲ್ಲಿ ಸಾಮಾಜಿಕ ಅರಿವು ಮೂಡಿಸುವುದೇ ಈ ಕೃತಿಯ ಉದ್ದೇಶವೆಂದು ತೋರುತ್ತದೆ. ಇಂಡೋ- ಆರ್ಯನ್ ಮೂಲಕ್ಕೆ ಕೈಹಾಕುವ ಡಾ.ಅಂಬೇಡ್ಕರ್ ಅವರು, ವೇದಗಳನ್ನು, ಸ್ಮೃತಿ, ಪುರಾಣಗಳನ್ನು ತಮ್ಮ ತೀಕ್ಷ್ಣ ವಿಮರ್ಶೆಗೆ ಒಳಪಡಿಸುತ್ತಾರೆ. ‘ಶೂದ್ರರು ಸೂರ್ಯವಂಶದ ಆರ್ಯ ಸಮುದಾಯಗಳಲ್ಲಿ ಒಂದು ಸಮುದಾಯವಾಗಿದ್ದರು. ಇಂಡೋ-ಆರ್ಯ ಸಮಾಜದಲ್ಲಿ ಶೂದ್ರರು ಕ್ಷತ್ರಿಯ ವರ್ಣಕ್ಕೆ ಸೇರಿದ್ದರು’ ಎಂಬ ಸಿದ್ಧಾಂತವನ್ನು ಮಂಡಿಸುತ್ತಾರೆ. ಅದಕ್ಕೆ ಪ್ರಾಚೀನ ಸಾಹಿತ್ಯವನ್ನು ಆಧಾರವಾಗಿ ಉಲ್ಲೇಖಿಸುತ್ತಾರೆ. ‘ಜನಿವಾರ ದೀಕ್ಷೆಯಿಂದ ವಂಚಿತರಾದ ಶೂದ್ರರು ಸಾಮೂಹಿಕವಾಗಿ ಅವಹೇಳನಗೊಂಡು, ವೈಶ್ಯರಿಗಿಂತಲೂ ಕೆಳಗಿಳಿದು ನಾಲ್ಕನೇ ವರ್ಣ ನಿರ್ಮಾಣ ಮಾಡಿದರು’ ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಶೂದ್ರರು ತಮ್ಮ ಮೂಲವನ್ನು ಅರಿತು ಜಾತಿ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕೆಂಬುದು ಈ ಕೃತಿಯ ಆಶಯವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವೈಯಕ್ತಿಕ...

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಿಂಚದೆ ಹಿನ್ನಡೆ ಅನುಭವಿಸಿವೆ. ಕಳೆದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಈ ಎರಡು ವಿಭಾಗಗಳಿಂದ ಬರೋಬ್ಬರಿ 51...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

1946ರಲ್ಲಿ ಮೊದಲ ಮುದ್ರಣ ಕಂಡ ‘ಶೂದ್ರರು ಯಾರಾಗಿದ್ದರು?’ (Who Were The Shudras? How they came to be the Fourth Varna in the Indo Aryan Society?) ಕೃತಿಯು ಡಾ. ಬಿ.ಆರ್. ಅಂಬೇಡ್ಕರ್ ಅವರು ಸುಮಾರು 15 ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿದ ಫಲವಾಗಿತ್ತು. ಅಂಬೇಡ್ಕರ್ ಅವರು ಯಾವುದೇ ಹೊಸ ವಿಚಾರವನ್ನು ಮಂಡಿಸುವಾಗ ಹೇಗೆ ಆಳವಾದ ಅಧ್ಯಯನ ನಡೆಸುತ್ತಿದ್ದರು ಎಂಬುದಕ್ಕೆ ಈ ಕೃತಿಯೂ ಒಂದು ನಿದರ್ಶನ. ‘ತಾವು ಯಾರು, ಏಕೆ ಈ ಸ್ಥಿತಿಗೆ ಬಂದೆವು ಎಂದು ಗೊತ್ತಿಲ್ಲದ ಅಜ್ಞಾನಿ ಶೂದ್ರರಿಗಾಗಿ ಈ ಪುಸ್ತಕ ರಚಿತವಾಗಿದೆ…’ ಎನ್ನುವ ಬಾಬಾಸಾಹೇಬರು ಕೃತಿಯನ್ನು ಆಧಾರ ಸಹಿತವಾಗಿ ರೂಪಿಸಿದ್ದಾರೆ. ‘…ಕುಖ್ಯಾತವಾದ ಚಾತುರ್ವರ್ಣ ವ್ಯವಸ್ಥೆ ಉಳಿದುಕೊಂಡು ಬರಲು ಶೂದ್ರರೇ ಸಾಧನವಾಗಿದ್ದರೂ, ಚಾತುರ್ವರ್ಣವೇ ಅವರ ಹೀನಸ್ಥಿತಿಗೆ ಪ್ರಪ್ರಥಮ ಕಾರಣವಾಗಿದ್ದರೂ, ಅದನ್ನು ನಿರ್ನಾಮ ಮಾಡಲು ಅವರಿಂದ ಮಾತ್ರವೇ ಸಾಧ್ಯ ಎಂಬುದನ್ನು ನೆನಪಿಟ್ಟುಕೊಂಡರೆ, ನಾನು ಶೂದ್ರರಿಗೆ ತಿಳಿವಳಿಕೆ ಕೊಟ್ಟು ಚಾತುರ್ವರ್ಣ ವಿನಾಶದ ಪವಿತ್ರ ಕಾರ್ಯಕ್ಕೆ ಅವರನ್ನು ಸಿದ್ಧಗೊಳಿಸಬೇಕೆಂಬ ಪರಿಗಣನೆಯಿಂದ ಉದ್ಧರಣೆಗಳನ್ನು ಬಿಡದೆ ಸಂಕ್ಷಿಪ್ತವಾಗಿ ಕೊಟ್ಟಿರುವುದು ಅರ್ಥವಾಗುತ್ತದೆ…’ ಎನ್ನುವ ಅವರ ಮಾತುಗಳು ಈ ಪುಸ್ತಕದ ತುಂಬಾ ತುಂಬಿರುವ ವೇದ, ಸೂಕ್ತ, ಉಪನಿಷತ್ತು, ಅರಣ್ಯಕ, ಬ್ರಾಹ್ಮಣ, ಸ್ಮೃತಿ, ಪುರಾಣಗಳ ದಟ್ಟ ಉಲ್ಲೇಖಗಳಿಗೆ ಪೂರಕ ಎಂಬಂತಿವೆ.

ಈ ಕೃತಿಯನ್ನು ಮಹಾತ್ಮ ಜ್ಯೋತಿಬಾ ಫುಲೆ ಅವರಿಗೆ (1827-1890) ಸಮರ್ಪಿಸಲಾಗಿದೆ. “ಉಚ್ಚ ವರ್ಗಗಳಿಗೆ ಗುಲಾಮರಾಗಿದ್ದ ತಳವರ್ಗಗಳಲ್ಲಿ ಆ ಕುರಿತು ಅರಿವು ಮೂಡಿಸಿದ ಮತ್ತು ಸಾಮಾಜಿಕ ಜನತಂತ್ರ ಎಂಬುದು ವಿದೇಶೀಯರಿಂದ ಸ್ವಾತಂತ್ರ‍್ಯ ಗಳಿಸುವುದಕ್ಕಿಂತಲೂ ಹೆಚ್ಚು ಮಹತ್ವದ್ದು ಎಂಬ ಪರಮಸತ್ಯವನ್ನು ಬೋಧಿಸಿದ ಆಧುನಿಕ ಭಾರತದ ಮಹಾಶೂದ್ರ” ಎಂದು ಜ್ಯೋತಿಬಾ ಅವರನ್ನು ಬಾಬಾಸಾಹೇಬರು ಬಣ್ಣಿಸಿದ್ದಾರೆ.

Jyothi Bha Pule
ಮಹಾತ್ಮ ಜ್ಯೋತಿಬಾ ಫುಲೆ

ಸಂಪ್ರದಾಯನಿಷ್ಠ ಬ್ರಾಹ್ಮಣ ವಿದ್ವಾಂಸರು ತಮ್ಮ ವಾದವನ್ನು ಒಪ್ಪುವುದಿಲ್ಲ ಎಂಬ ಮುನ್ನೆಚ್ಚರಿಕೆ ಬಾಬಾಸಾಹೇಬರಿಗಿತ್ತು. ಯಾವ ಧಾರ್ಮಿಕ ಕೃತಿಗಳನ್ನು ಚಾತುರ್ವರ್ಣ್ಯದ ಮೂಲವೆಂದು ಬ್ರಾಹ್ಮಣ ವಿದ್ವಾಂಸರು ನಂಬುತ್ತಾರೆಯೋ ಅವುಗಳ ಕಟುವಿಮರ್ಶೆಗೆ ಅಂಬೇಡ್ಕರ್ ಕೈಗೆತ್ತಿಕೊಂಡಿದ್ದರು. ಪೀಠಿಕೆಯಲ್ಲಿ ಅವರು ಹೇಳುವ ಮಾತುಗಳೇ ಇದಕ್ಕೆ ನಿದರ್ಶನದಂತಿವೆ:

“ಈ ಕೃತಿಯನ್ನು ಕುರಿತು ಸನಾತನ ಹಿಂದೂ ಏನು ಹೇಳುತ್ತಾನೆಂದು ನಾನು ಚೆನ್ನಾಗಿ ಊಹಿಸಬಲ್ಲೆ; ಏಕೆಂದರೆ ನಾನು ಹಲವಾರು ವರ್ಷಗಳಿಂದ ಅವನ ಜೊತೆ ಸಮರ ಮಾಡುತ್ತಿದ್ದೇನೆ.. ಧಾರ್ಮಿಕ ಗ್ರಂಥಗಳೆಂಬ ಹೆಸರಿನಲ್ಲಿ ರಚಿತವಾಗಿರುವ ಈ ಕಟ್ಟುಕತೆಗಳು ತಮ್ಮ ರಚನೆಯಲ್ಲಿ ಪಕ್ಷಪಾತಿಯಾಗಿಯೂ, ಉದ್ದೇಶದಲ್ಲಿ ರಾಜಕೀಯ ಮತ್ತು ವಂಚಕ ದೃಷ್ಟಿಯುಳ್ಳವಾಗಿಯೂ ಇರುವುದನ್ನು ಅಧ್ಯಾಯ ಮತ್ತು ಶ್ಲೋಕಗಳಸಮೇತ ಇಲ್ಲಿ ತೋರಿಸಿರುವುದರಿಂದ ಅವರ ಕೋಪ ಇನ್ನೂ ಹೆಚ್ಚಾಗುತ್ತದೆ. ಅವರ ನಿಂದನೆಗಳನ್ನಾಗಲೀ ಅಥವಾ ಅವರ ಬೆದರಿಕೆಗಳನ್ನಾಗಲೀ ನಾನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ತಮ್ಮ ಧರ್ಮವನ್ನು ರಕ್ಷಿಸುತ್ತೇವೆಂದುಕೊಂಡು ಅದನ್ನು ಒಂದು ವ್ಯಾಪಾರೀ ಸರಕನ್ನಾಗಿ ಮಾಡಿರುವ ಅವರದು ಒಂದು ನೀಚ ಗುಂಪೆಂದು ನಾನು ಚೆನ್ನಾಗಿ ಬಲ್ಲೆ. ಪ್ರಪಂಚದ ಯಾವುದೇ ಗುಂಪಿಗಿಂತ ಅವರು ಹೆಚ್ಚು ಸ್ವಾರ್ಥಿಗಳಾಗಿದ್ದಾರೆ; ತಮ್ಮ ಜಾತಿಯ ಪಟ್ಟಭದ್ರ ಹಿತಾಸಕ್ತಿಗಳನ್ನು ಬೆಂಬಲಿಸಲು ತಮ್ಮ ಬುದ್ಧಿಯನ್ನು ಹಾದರಗೊಳಿಸುತ್ತಿದ್ದಾರೆ. ಯಾವುದೇ ವ್ಯಕ್ತಿ ಹಿಂದೂ ಧರ್ಮ ಗ್ರಂಥಗಳ ವಿರುದ್ಧ ಧೈರ್ಯದಿಂದ ದನಿಯೆತ್ತಿದರೆ ಸಂಪ್ರದಾಯ ಶರಣರು ಅವನ ಮೇಲೆ ಹುಚ್ಚುನಾಯಿಗಳ ಹಾಗೆ ಬೀಳುತ್ತಾರೆ; ಆಗ ಉನ್ನತ ವಿದ್ಯಾವಂತರೆಂದು, ಅನಾಸಕ್ತರಾಗಿ ಮುಕ್ತ ಮನಸ್ಸುಳ್ಳವರಾಗಿದ್ದಾರೆಂದು ಹೇಳಿಕೊಳ್ಳುವ ಉನ್ನತ ಹುದ್ದೆಗಳನ್ನಲಂಕರಿಸಿರುವ ಪ್ರಮುಖ ಹಿಂದೂಗಳು ಪಕ್ಷಪಾತಿಗಳಾಗಿ ಈ ಗದ್ದಲದಲ್ಲಿ ಸೇರಿಕೊಂಡುಬಿಡುವುದು ದೊಡ್ಡ ಅಚ್ಚರಿಯೇ ಸರಿ. ಉನ್ನತ ನ್ಯಾಯಾಲಯಗಳ ಹಿಂದೂ ನ್ಯಾಯಾಧೀಶರು ಮತ್ತು ಭಾರತೀಯ ರಾಜ್ಯಗಳ ಹಿಂದೂ ಪ್ರಧಾನಮಂತ್ರಿಗಳು ಕೂಡ ಅವರ ಜೊತೆ ಸೇರಿಕೊಳ್ಳಲು ಹಿಂಜರಿಯುವುದಿಲ್ಲ. ಅವರು ಇನ್ನೂ ಮುಂದೆ ಹೋಗುತ್ತಾರೆ. ಅವನ ವಿರುದ್ಧ ಅವರು ಹುಯಿಲೆಬ್ಬಿಸಲು ಮುಂದಾಗುವುದಷ್ಟೇ ಅಲ್ಲದೆ ಅವನನ್ನು ಬೇಟೆಯಾಡಲು ಅವರ ಜೊತೆ ಸೇರಿಕೊಳ್ಳುತ್ತಾರೆ. ತಾವು ಜೀವನದಲ್ಲಿ ಉನ್ನತ ಸ್ಥಾನಗಳಲ್ಲಿರುವುದರಿಂದ ತಮ್ಮ ಮಾತುಗಳಿಗೆ ಭಯವೊಡ್ಡುವ ಬಲವಿದೆಯೆಂದೂ, ಅದರಿಂದ ಸಂಪ್ರದಾಯ ಶರಣತೆಯ ಪ್ರತಿಯೊಬ್ಬ ವಿರೋಧಿಯನ್ನೂ ಹೆದರಿಸಬಹುದೆಂದು ಅವರು ನಂಬುವುದು ಅಸಹ್ಯಕರವಾಗಿದೆ. ನಿಮ್ಮ ನಿಂದನೆಗಳಿಂದ ನನ್ನನ್ನು ತಡೆಗಟ್ಟಲು ಸಾಧ್ಯವಿಲ್ಲವೆಂದು ಈ ಸಜ್ಜನರಿಗೆ ನಾನು ಹೇಳಲು ಇಚ್ಛೆಪಡುತ್ತೇನೆ..”

ಇದನ್ನೂ ಓದಿರಿ: ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’

ಇವು ಬಾಬಾಸಾಹೇಬರ ಮಾತುಗಳು. ‘ಶೂದ್ರರು ಯಾರು?’ ಎಂಬುದನ್ನು ಶೋಧಿಸಿದರೆ ವರ್ಣವ್ಯವಸ್ಥೆಯ ಪ್ರತಿಪಾದಕರು ಸಿಡಿದೇಳುತ್ತಾರೆ ಎಂಬುದನ್ನು ತಮ್ಮ ಅನುಭವದಿಂದ ಕಂಡುಕೊಂಡಿದ್ದ ಬಾಬಾಸಾಹೇಬರು, “ಹಿಂದೂ ಧಾರ್ಮಿಕ ಸಾಹಿತ್ಯದ ಬಗ್ಗೆ ಭಕ್ತಿ ಗೌರವಗಳು ಬ್ರಾಹ್ಮಣ ವಿದ್ವಾಂಸನಿಗೆ ಸಹಜವಾದವು. ಆದರೆ ಬ್ರಾಹ್ಮಣೇತರ ವಿದ್ವಾಂಸನಿಗೆ ಸಂಪೂರ್ಣವಾಗಿ ಅಸಹಜವಾಗುತ್ತವೆ. ಈ ವ್ಯತ್ಯಾಸದ ವಿವರಣೆ ಪೂರಾ ಸರಳವಾದುದು. ಈ ಧಾರ್ಮಿಕ ಸಾಹಿತ್ಯದ ಬಗ್ಗೆ ಬ್ರಾಹ್ಮಣ ವಿದ್ವಾಂಸ ವಿಮರ್ಶಾತೀತ ಗೌರವವನ್ನು ತಾಳುವುದರಿಂದ ಬರಿಯ ಅಕ್ಷರಸ್ಥರಗಿಂತ ಭಿನ್ನವಾಗಿ ನಿರಂಕುಶಮತಿಯ ನಿರ್ವಿಕಾರ ಮನೋಭಾವದಿಂದ ನೋಡಲು ಅವನಿಗೆ ಸಾಧ್ಯವಿಲ್ಲ ಎಂದು ಹೇಳಬಹುದು. ಈ ಧಾರ್ಮಿಕ ಸಾಹಿತ್ಯ ಏತಕ್ಕಾಗಿ? ಈ ಸಾಹಿತ್ಯ ಸಂಪೂರ್ಣವಾಗಿ ಬ್ರಾಹ್ಮಣರ ಸೃಷ್ಟಿ. ಎರಡನೆಯದಾಗಿ, ಅಬ್ರಾಹ್ಮಣರಿಗಿಂತ ಬ್ರಾಹ್ಮಣರು ಶ್ರೇಷ್ಠ ಅವರಿಗೆ ಎಲ್ಲ ಸೌಲಭ್ಯಗಳೂ ಸಲ್ಲಬೇಕು ಎಂಬ ಏಕೈಕ ಉದ್ದೇಶದಿಂದ ಅದು ಚೋದಿತವಾಗಿದೆ” ಎನ್ನುತ್ತಾರೆ. ಶೂದ್ರರ ಮೂಲವನ್ನು ಅನ್ವೇಷಿಸುವ ಮೂಲಕ ಅವರು ಈ ವರ್ಣವ್ಯವಸ್ಥೆಯ ವಿರುದ್ಧ ಸಿಡಿಯಬೇಕು ಎಂಬುದು ಅಂಬೇಡ್ಕರ್ ಅವರ ಆಶಯ.

Shusdraru Yaru

ಇಂದಿಗೂ ಈ ದೇಶದ ಹಳ್ಳಿಗಳಲ್ಲಿ ಅಸ್ಪೃಶ್ಯರ ಮೇಲೆ ನಡೆಯುತ್ತಿರುವ ಹೀನಾತಿಹೀನ ಕೃತ್ಯಗಳಲ್ಲಿ ಹೆಚ್ಚಿನ ಪಾಲು ನೇರ ಭಾಗೀದಾರರು ಶೂದ್ರರೇ ಆಗಿರುವುದರಿಂದ ಮತ್ತು ಪುರೋಹಿತಶಾಹಿಯನ್ನು ಪೋಷಿಸುವ ದೊಡ್ಡ ‘ಜವಾಬ್ದಾರಿ’ಯನ್ನು ಇನ್ನೂ ಶೂದ್ರರು ತಮ್ಮ ತಲೆಯ ಮೇಲೇ ಹೊತ್ತು ಕುಣಿಸುತ್ತಿರುವುದರಿಂದ ಅವರು ಈಗಲಾದರೂ ತಮ್ಮ ‘ಮೂಲ’ದ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ್ದು ಅನಿವಾರ್ಯ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗಿಂತ ವರ್ಣದಲ್ಲಿ ಕೊನೆಯಲ್ಲಿದ್ದರೂ ಅಸ್ಪೃಶ್ಯರಿಗಿಂತ, ಅತಿಶೂದ್ರರಿಗಿಂತ ತಾವು ಶ್ರೇಷ್ಠ ಎಂಬ ಮನೋಭಾವವು ಇಂದಿಗೂ ಶೂದ್ರರಲ್ಲಿರುವುದರಿಂದ ತಮ್ಮನ್ನು ಕೊನೆಯ ವರ್ಣದಲ್ಲೇ ಉಳಿಸಿಕೊಳ್ಳುವ ‘ಧನ್ಯತೆ’ಯ ದೀನಸ್ಥಿತಿಯು ಅವರನ್ನು ಇನ್ನಷ್ಟು ಪ್ರತಿಗಾಮಿಗಳನ್ನಾಗಿಸಿದೆ. ಇದಕ್ಕೆ ಮೂಲ ಕಾರಣವೇನು ಎಂಬುದನ್ನು ಬಾಬಾಸಾಹೇಬರ ಈ ಕೃತಿಯು ದಟ್ಟವಾದ ಆಧಾರಗಳ ಸಹಿತ ವಿವರಿಸುತ್ತದೆ.

ದೇಶಕ್ಕೆ ಸ್ವಾತಂತ್ರ‍್ಯ ಸಿಗುವ ಸಂದರ್ಭದಲ್ಲಿ ಬಂದ ಈ ಕೃತಿಯಲ್ಲಿ ಶೂದ್ರರ ರಾಜಕೀಯ ಚಳವಳಿಯ ಉಲ್ಲೇಖ ಬರುತ್ತದೆ. ಬಾಬಾಸಾಹೇಬರು ಬ್ರಾಹ್ಮಣೇತರ ರಾಜಕೀಯ ಚಳವಳಿಗೆ ಈ ಕೃತಿ ಪೀಠಿಕೆಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 20 ವರ್ಷ ಕಡಿಮೆ ಒಂದು ಶತಮಾನದ ಹಿಂದೆ ರೂಪ ಪಡೆದ ಶೂದ್ರರ ರಾಜಕೀಯ ಚಳವಳಿ ಇಂದು ಕೋಮುವಾದಿ ರಾಜಕೀಯದಲ್ಲಿ ಕರಗಿಹೋಗಿರುವುದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಶೂದ್ರರು ಎಚ್ಚೆತ್ತುಕೊಳ್ಳದೆ ಅಸ್ಪೃಶ್ಯತೆಯನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂಬ ಬಾಬಾಸಾಹೇಬರ ಮಾತುಗಳು ಇವತ್ತಿಗೂ ಆಶಯದಂತೆಯೇ ಕಾಣುತ್ತವೆ. ಆದರೆ, ಜಾತಿ ವಿನಾಶದಲ್ಲಿ ಶೂದ್ರರ ಜವಾಬ್ದಾರಿಯನ್ನೂ ಬಾಬಾಸಾಹೇಬರು ಸೂಚಿಸುವುದರಿಂದ ಶೂದ್ರರಿಗಷ್ಟೇ ಅಲ್ಲದೆ, ಸಮಾನತೆಯ ಉಸಿರಾಡುವ ಎಲ್ಲರಿಗೂ ಈ ಕೃತಿಯ ಓದು ಅರಿವಿನ ವಿಸ್ತರಣೆಯಂತಿದೆ.

ಜಾತಿ ಕೂಪಗಳಾಗಿದ್ದ ಹಳ್ಳಿಗಳನ್ನು ಈಗ ಇನ್ನಷ್ಟು ವಿಷಮಗೊಳಿಸಿರುವ ಕೋಮುವಾದಿ ರಾಜಕಾರಣಕ್ಕೆ ಕಾಲಾಳುಗಳು ಶೂದ್ರರೇ. ಈ ಕಾಲಾಳುಗಳಿಗೆ ಪುರೋಹಿತಶಾಹಿಯು ತಮ್ಮನ್ನೂ ನಾಲ್ಕನೇ ವರ್ಣದಲ್ಲಿಟ್ಟು ಶೋಷಿಸಿದ್ದರ ಬಗ್ಗೆ ಹಾಗೂ ಇಂದಿಗೂ ‘ಕೆಳಗೇ’ ಇಟ್ಟಿರುವ ಬಗ್ಗೆ ಅರಿವಿಲ್ಲ. ಈ ಕಾರಣಕ್ಕಾಗಿಯೇ ಶೂದ್ರರು ಎಚ್ಚೆತ್ತುಕೊಳ್ಳಬೇಕಾದರೆ ಶೂದ್ರರೆಲ್ಲರೂ ಬಾಬಾಸಾಹೇಬರ ‘ಶೂದ್ರರು ಯಾರಾಗಿದ್ದರು’ ಎಂಬ ಈ ಸಂಶೋಧನಾ ಕೃತಿಯನ್ನು ಓದಲೇಬೇಕು. ಅದರಲ್ಲೂ ಕೇಸರಿ ಬಣ್ಣದಲ್ಲಿ ಮುಳುಗೇಳುತ್ತಿರುವ ಇಂದಿನ ಶೂದ್ರ ಯುವಜನರು ಏನನ್ನು ಓದದಿದ್ದರೂ ಕನಿಷ್ಠ ಈ ಕೃತಿಯನ್ನಂತೂ ಓದಲೇಬೇಕು.

ಋಗ್ವೇದದಿಂದ ವರ್ತಮಾನದವರೆಗೆ

ಬ್ರಾಹ್ಮಣರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಹಾಗೂ ಆ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಬಳಸಿದ ತಂತ್ರಗಳನ್ನು ಬಾಬಾಸಾಹೇಬರು ಆಧಾರಗಳ ಉಲ್ಲೇಖಗಳ ಮೂಲಕ ಈ ಕೃತಿಯಲ್ಲಿ ವಿವರಿಸುತ್ತಾರೆ. ಬ್ರಾಹ್ಮಣರು ಧರ್ಮಶಾಸ್ತ್ರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿರುವುದು, ಶೂದ್ರರಿಗೆ ಶಿಕ್ಷಣವೂ ಸೇರಿದಂತೆ ಸಾಕಷ್ಟು ಹಕ್ಕುಗಳನ್ನು ನಿರಾಕರಿಸುವುದು ಹಾಗೂ ಶೂದ್ರರನ್ನು ದಾಸ್ಯಕ್ಕಾಗಿ ಬಳಸಿಕೊಳ್ಳುವ ಕುತಂತ್ರಗಳನ್ನು ಬಾಬಾಸಾಹೇಬರು ತಮ್ಮ ಈ ಕೃತಿಯಲ್ಲಿ ಸಂಶೋಧನಾ ಸಾಕ್ಷ್ಯಾಗಳ ಸಹಿತ ತೆರೆದಿಡುತ್ತಾರೆ. ಇದಕ್ಕಾಗಿ ಋಗ್ವೇದದಿಂದ ಹಿಡಿದು ಐತಿಹಾಸಿಕ ಉಲ್ಲೇಖಗಳವರೆಗೆ ದೀರ್ಘವಾದ ಸಾಕ್ಷ್ಯಗಳನ್ನು ನೀಡುತ್ತಾರೆ.

ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಬಾಬಾಸಾಹೇಬರ ಈ ಕೃತಿಯು ಕೇವಲ ಶೂದ್ರರ ಇತಿಹಾಸವನ್ನು ಮಾತ್ರ ವಿವರಿಸುವುದಿಲ್ಲ. ಪ್ರಾಚೀನ ಭಾರತದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ರಚನೆಗಳ ಸಂಕೀರ್ಣತೆಯನ್ನು ವಿಶ್ಲೇಷಿಸುವ ಜತೆಗೆ ಭಾರತದಲ್ಲಿ ಜಾತಿ ವ್ಯವಸ್ಥೆಯ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಮೂಲವನ್ನು ಪತ್ತೆಹಚ್ಚಲು ನೆರವಾಗುತ್ತದೆ. ಬಾಬಾಸಾಹೇಬರು ಈ ಕೃತಿಯಲ್ಲಿ ವೇದಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರೊಂದಿಗೆ ವೇದಗಳಲ್ಲಿ ಶೂದ್ರರ ಬಗ್ಗೆ ಇರುವ ಉಲ್ಲೇಖಗಳನ್ನು ಮೂಲಪಠ್ಯದೊಂದಿಗೇ ಪ್ರಸ್ತಾಪಿಸಿ ಅವುಗಳನ್ನು ವಿಶ್ಲೇಷಿಸುತ್ತಾರೆ.

ವೇದಗಳಲ್ಲಿ ಶೂದ್ರರನ್ನು ಕೇವಲ ಸೇವಕರು ಎಂದು ಮಾತ್ರ ಉಲ್ಲೇಖಿಸಿಲ್ಲ, ಬದಲಿಗೆ ಶೂದ್ರರು ಸಹ ರಾಜರು ಮತ್ತು ಯೋಧರಾಗಿದ್ದರು ಎಂಬುದಕ್ಕೆ ಧರ್ಮಶಾಸ್ತ್ರಗಳಲ್ಲೇ ಲಭ್ಯವಿರುವ ಪುರಾವೆಗಳನ್ನು ಬಾಬಾಸಾಹೇಬರು ನೀಡುತ್ತಾರೆ. ಋಗ್ವೇದದಲ್ಲಿನ ಅನೇಕ ಶ್ಲೋಕಗಳನ್ನು ಉಲ್ಲೇಖಿಸುವ ಮೂಲಕ ವೇದಗಳಲ್ಲಿ ಹೇಗೆ ಶೂದ್ರರನ್ನು ಆರ್ಯರಷ್ಟೇ ಶಕ್ತಿಯುತ ಮತ್ತು ಪ್ರಭಾವಶಾಲಿ ವರ್ಣವಾಗಿ ಚಿತ್ರಿಸಲಾಗಿದೆ ಎಂಬುದನ್ನು ವಿವರಿಸುತ್ತಾರೆ. ಇಂದಿಗೂ ತಮ್ಮನ್ನು ‘ಸವರ್ಣೀಯರು’ ಎಂದು ಕರೆದುಕೊಳ್ಳುವ ಬ್ರಾಹ್ಮಣೇತರ ವರ್ಣಗಳ ಬಗ್ಗೆ ಬ್ರಾಹ್ಮಣವಾದವು ಏನನ್ನು ಹೇಳುತ್ತದೆ ಎಂಬುದನ್ನು ಶೂದ್ರರು ಅರಿಯಬೇಕು. ಬ್ರಾಹ್ಮಣರು ತಮಗೆ ಬೇಕಾದಂತೆ ಧರ್ಮಶಾಸ್ತ್ರಗಳನ್ನು ಬಳಸಿಕೊಂಡು ಅದನ್ನೇ ಕಾನೂನಾಗಿ ಮಾಡಿರುವ ಹುನ್ನಾರವನ್ನು ಅರಿಯದಷ್ಟು ಶೂದ್ರರು ಪ್ರಜ್ಞಾಶೂನ್ಯರಾಗಿರುವುದನ್ನು ಬಾಬಾಸಾಹೇಬರು ಈ ಕೃತಿಯಲ್ಲಿ ಉದಾಹರಣೆಗಳ ಸಹಿತ ಮುಂದಿಡುತ್ತಾರೆ.

‘ಯಜ್ಞ ಮಾಡುವ ಉದ್ದೇಶದಿಂದ ಅಗತ್ಯವಿದ್ದರೆ ಯಾವುದೇ ಅಪರಾಧಿ ಭಾವನೆಯಿಲ್ಲದೆ ಶೂದ್ರನ ಆಸ್ತಿಯನ್ನು ಬ್ರಾಹ್ಮಣ ಕಿತ್ತುಕೊಳ್ಳಬಹುದು. ಶೂದ್ರನು ಸಂಪತ್ತನ್ನು ಸಂಗ್ರಹಮಾಡಬಾರದು, ಏಕೆಂದರೆ ಅದರಿಂದ ಬ್ರಾಹ್ಮಣನಿಗೆ ಬಾಧೆಯಾಗುತ್ತದೆ. ಏಕೆ ಹೀಗೆ? ಶೂದ್ರನನ್ನು ತನ್ನ ವಿಶೇಷ ಶತ್ರುವನ್ನಾಗಿ ಕಾಣಲು ಬ್ರಾಹ್ಮಣನಿಗೇನಾದರೂ ಕಾರಣವಿತ್ತೆ?’ ಎಂದು ಪ್ರಶ್ನಿಸುವ ಬಾಬಾಸಾಹೇಬರು ಬ್ರಾಹ್ಮಣರಲ್ಲಿ ನೈತಿಕ ಪ್ರಜ್ಞೆಯೇ ಮಂಕಾಗಿದೆ ಎನ್ನುತ್ತಾರೆ.

Sudraru12
ಪ್ರಾಚೀನ ಕಾಲದಲ್ಲಿ ಶೂದ್ರರು (ಸಾಂದರ್ಭಿಕ ಚಿತ್ರ)

ಮನುಸ್ಮೃತಿಯಂತಹ ಕುಕೃತಿಯ ಅಮಾನವೀಯ ನಿಯಮಗಳ ಉಲ್ಲೇಖಗಳನ್ನು ನೀಡುತ್ತಾ ಶೂದ್ರರನ್ನು ಬ್ರಾಹ್ಮಣರು ಹೇಗೆಲ್ಲ ಶೋಷಿಸಲು ಧಾರ್ಮಿಕ ಗ್ರಂಥಗಳನ್ನು ಹತಾರವಾಗಿ ಬಳಸಿಕೊಂಡರು ಹಾಗೂ ಶೂದ್ರರ ಹಕ್ಕುಗಳನ್ನು ಕಸಿದುಕೊಳ್ಳಲು ಏನೆಲ್ಲ ಕುತಂತ್ರಗಳನ್ನು ಹೆಣೆಯಲಾಗಿತ್ತು ಎಂಬುದನ್ನು ಬಿಚ್ಚಿಡುತ್ತಾರೆ. ಆರಂಭದಲ್ಲಿ ಆರ್ಯರ ಸಮ ಸ್ಥಾನದಲ್ಲಿದ್ದ ಶೂದ್ರರು ನಾಲ್ಕನೇ ವರ್ಣವಾಗಿ ಹೇಗೆ ಕೆಳಕ್ಕೆ ನೂಕಲ್ಪಟ್ಟರು ಎಂಬುದನ್ನು ಹೇಳುವ ಬಾಬಾಸಾಹೇಬರು, ಆರ್ಯರು ಹಾಗೂ ಶೂದ್ರರ ನಿರಂತರ ಸಂಘರ್ಷವನ್ನು ಉಲ್ಲೇಖಿಸುತ್ತಾರೆ. ಭಾರತದಲ್ಲಿ ಇಂದು ಕಾಣಲು ಸಿಗುವ ಶೂದ್ರ – ಬ್ರಾಹ್ಮಣ ‘ರಾಜಿ’ಗಳು ಐತಿಹಾಸಿಕವಾಗಿಯೂ ಕಾಲಕಾಲಕ್ಕೆ ಹೇಗೆಲ್ಲಾ ತಮ್ಮತಮ್ಮ ಅನುಕೂಲಗಳಿಗೆ ತಕ್ಕಂತೆ ಬದಲಾಗಿವೆ ಎಂಬುದನ್ನು ಸಾಕ್ಷö್ಯಸಹಿತ ಮುಂದಿಡುತ್ತಾರೆ.

ಮುಂದಿನ ಕೃತಿಗೆ ವಿಸ್ತಾರ ಭೂಮಿಕೆ

‘ಶೂದ್ರರು ಯಾರಾಗಿದ್ದರು’ ಎಂಬುದನ್ನು ಶೋಧಿಸುವ ಬಾಬಾಸಾಹೇಬರ ಉದ್ದೇಶವು ‘ಅಸ್ಪೃಶ್ಯರು’ ಯಾರಾಗಿದ್ದರು ಎಂಬುದನ್ನು ಆಧಾರ ಸಹಿತ ನಿರೂಪಿಸುವುದಕ್ಕೆ ನಿರ್ಮಿಸಿಕೊಂಡ ವಿಸ್ತಾರವಾದ ಭೂಮಿಕೆಯಂತೆ ಕಾಣುತ್ತದೆ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಶೂದ್ರರನ್ನೂ ವರ್ಣದಲ್ಲಿ ಕೆಳಕ್ಕೆ ತಳ್ಳಿ ಶೋಷಿಸಿದ ಪುರೋಹಿತಶಾಹಿ ವ್ಯವಸ್ಥೆಯು ಅಸ್ಪೃಶ್ಯರನ್ನು ಹೇಗೆ ಊರ ಹೊರಗಿಟ್ಟು ಶೋಷಿಸಿತು ಎಂಬುದರ ತುಲನಾತ್ಮಕ ವಿಶ್ಲೇಷಣೆಗೆ ಈ ಕೃತಿಯು ಮಹತ್ವದ ಹಾಗೂ ಪೂರಕ ಪಠ್ಯವಾಗಲಿದೆ ಎಂಬುದು ಬಾಬಾಸಾಹೇಬರ ಸಕಾರಣ ಉದ್ದೇಶವಾಗಿದ್ದಂತೆ ತೋರುತ್ತದೆ.

ಇಡೀ ಕೃತಿಯಲ್ಲಿ ಶೂದ್ರರ ಮೂಲ ಗುರುತಿಸುವ ಮತ್ತು ಅವರ ವರ್ಣ ಸ್ಥಾನದ ಕುಸಿತಕ್ಕೆ ಕಾರಣಗಳನ್ನು ಹುಡುಕುವ ಬಾಬಾಸಾಹೇಬರು ಕೊನೆಯ ಅಧ್ಯಾಯದಲ್ಲಿ ತಮ್ಮ ಈ ಸಂಶೋಧನಾ ಸಿದ್ಧಾಂತದ ಸಾರವನ್ನು ನೀಡಿರುವುದು ಹೀಗಿದೆ:

‘1) ಶೂದ್ರರು ಸೂರ್ಯವಂಶದ ಆರ್ಯ ಸಮುದಾಯಗಳಲ್ಲಿ ಒಂದು ಸಮುದಾಯವಾಗಿದ್ದರು.
2) ಇಂಡೋ-ಆರ್ಯ ಸಮಾಜದಲ್ಲಿ ಶೂದ್ರರು ಕ್ಷತ್ರಿಯ ವರ್ಣಕ್ಕೆ ಸೇರಿದ್ದರು.
3) ಆರ್ಯ ಸಮಾಜ ಮೂರೇ ವರ್ಣಗಳನ್ನು ಮನ್ನಿಸಿದ ಕಾಲವೊಂದಿತ್ತು. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ. ಶೂದ್ರರು ಪ್ರತ್ಯೇಕ ವರ್ಣವಾಗಿರದೆ, ಕ್ಷತ್ರಿಯ ವರ್ಣದ ಭಾಗವಾಗಿದ್ದರು.
4) ಶೂದ್ರ ಅರಸರು ಮತ್ತು ಬ್ರಾಹ್ಮಣರ ನಡುವೆ ನಿರಂತರ ದ್ವೇಷವಿತ್ತು. ಅದರಲ್ಲಿ ಬ್ರಾಹ್ಮಣರನ್ನು ಅತಿಯಾದ ಹಿಂಸೆಗೆ ಮತ್ತು ಅಪಮಾನಕ್ಕೆ ಗುರಿಪಡಿಸಲಾಗಿತ್ತು.
5) ಹಿಂಸೆ ಮತ್ತು ತುಳಿತದ ಪರಿಣಾಮವಾಗಿ ಶೂದ್ರರನ್ನು ದ್ವೇಷಿಸುತ್ತಿದ್ದ ಬ್ರಾಹ್ಮಣರು ಅವರಿಗೆ ಜನಿವಾರ ಕೊಡಲು ನಿರಾಕರಿಸಿದರು.
6) ಜನಿವಾರ ದೀಕ್ಷೆಯಿಂದ ವಂಚಿತರಾದ ಶೂದ್ರರು ಸಾಮೂಹಿಕವಾಗಿ ಅವಹೇಳನಗೊಂಡು, ವೈಶ್ಯರಿಗಿಂತಲೂ ಕೆಳಗಿಳಿದು ನಾಲ್ಕನೇ ವರ್ಣ ನಿರ್ಮಾಣ ಮಾಡಿದರು.’

ಶೂದ್ರರ ಮೂಲ ಹಾಗೂ ಅವರ ಸ್ಥಾನಮಾನದ ಬಗ್ಗೆ ದಟ್ಟ ಉಲ್ಲೇಖಗಳನ್ನು ನೀಡುವ ಈ ಕೃತಿಯು ಜಾತಿ ವ್ಯವಸ್ಥೆಯ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ ಹಾಗೂ ಸಮ ಸಮಾಜದ ನಿರ್ಮಾಣದಲ್ಲಿ ಶೂದ್ರರ ಪಾತ್ರ ಏನು ಎಂಬುದನ್ನು ವಿವರವಾಗಿ ಮನವರಿಕೆ ಮಾಡಿಕೊಡುತ್ತದೆ. ಇದೇ ಬರಹದ ಆರಂಭದಲ್ಲಿ ಹೇಳಿದಂತೆ ಕೇವಲ ಶೂದ್ರರು ಮಾತ್ರವಲ್ಲ, ಸಮಾಜದಲ್ಲಿ ಸಮಾನತೆ ಮತ್ತು ಸಮತೆಯನ್ನು ಸಾಧಿಸಲು ಬಯಸುವ ಪ್ರತಿಯೊಬ್ಬರೂ ಈ ಕೃತಿಯನ್ನೂ, ಇದರ ಮುಂದುವರಿಕೆಯೇ ಆಗಿರುವ ‘ಅಸ್ಪೃಶ್ಯರು’ (The Untouchables) ಕೃತಿಯನ್ನೂ ಓದಲೇಬೇಕು.

ಬಾಬಾಸಾಹೇಬರಿಗೆ ತಮ್ಮ ಈ ಸಂಶೋಧನಾ ಕೃತಿಯ ಮಿತಿಯ ಬಗ್ಗೆಯೂ ಸ್ಪಷ್ಟತೆ ಇತ್ತು. ಹೀಗಾಗಿಯೇ, ‘ವಸ್ತು ಪ್ರತಿಪಾದನೆಯಲ್ಲಿ ಅನೇಕ ನ್ಯೂನತೆಗಳಿವೆಯೆಂಬುದನ್ನು ನಾನು ಬಲ್ಲೆ. ಬಹಳ ದೀರ್ಘವಾದ ಹಾಗೂ ಅಸಂಖ್ಯಾತವಾದ ಉದ್ಧರಣೆಗಳಿಂದ ಈ ಪುಸ್ತಕ ತುಂಬಿಹೋಗಿದೆ. ಈ ಪುಸ್ತಕ ಒಂದು ಕಲಾಕೃತಿಯಲ್ಲ, ಇದನ್ನು ಓದಲು ವಾಚಕರಿಗೆ ಬೇಸರವಾಗಬಹುದು. ಆದರೆ ಈ ತಪ್ಪು ಸಂಪೂರ್ಣ ನನ್ನದಲ್ಲ, ನನ್ನಷ್ಟಕ್ಕೆ ಆಗಿದ್ದರೆ ನಾನು ಸವಣಿಸುವ ಕತ್ತಿಯನ್ನು ಮನಃಪೂರ್ವಕವಾಗಿ ಬಳಸುತ್ತಿದ್ದೆ’ ಎನ್ನುತ್ತಾರೆ.

‘ವಿಷಯವನ್ನು ಎಷ್ಟು ಕಲಾತ್ಮಕವಾಗಿ ಹೇಳಿದೆ ಎಂಬುದರ ಕಡೆ ಅವರು (ಶೂದ್ರರು) ಲಕ್ಷಿಸುವುದಿಲ್ಲ. ಅಪಾರ ವಿಷಯ ಸಂಗ್ರಹಣೆಯನ್ನು ಕೊಟ್ಟಷ್ಟೂ ಉತ್ತಮವೆಂದು ಅವರು ಭಾವಿಸುತ್ತಾರೆ. ನಾನು ಯಾರು ಯಾರಿಗೆ ಇದರ ಹಸ್ತಪ್ರತಿಯನ್ನು ತೋರಿಸಿದೆನೊ ಅವರೆಲ್ಲ ಉದ್ಧರಣೆಗಳನ್ನು ತೆಗೆಯಬೇಡಿ ಎಂದು ಒತ್ತಾಯಿಸಿದ್ದಾರೆ. ವಾಸ್ತವವಾಗಿ ಗ್ರಂಥದ ಒಡಲಲ್ಲಿ ಇಂಗ್ಲಿಷ್ ಅನುವಾದವನ್ನು ಕೊಡುವುದರ ಜೊತೆಗೆ ಅನುಬಂಧದಲ್ಲಿ ಮೂಲ ಸಂಸ್ಕೃತದ ಪಾಠಗಳನ್ನು ಕೊಡಬೇಕೆಂದು ಒತ್ತಾಯಿಸುವಷ್ಟರ ಮಟ್ಟಿಗೆ ಅವರು ಇಂಥ ವಿಷಯದ ಬಗ್ಗೆ ತೀವ್ರಾಸಕ್ತಿಯನ್ನು ತೋರಿದರು’ ಎನ್ನುವ ಬಾಬಾಸಾಹೇಬರು ಈ ಕೃತಿಗಾಗಿ ನಡೆಸಿರುವ ಸಂಶೋಧನೆಯು ದಂಗುಬಡಿಸುವಂತಿದೆ.

ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ

ಮಹಾಭಾರತದ ‘ಶಾಂತಿಪರ್ವ’ ಅಧ್ಯಾಯದ ಲೇಖಕನಿಗೆ (ಆತನು ವ್ಯಾಸನಿರಲಿ, ವೈಶಂಪಾಯನನಿರಲಿ, ಸುತ, ಲೋಮೋಹರ್ಷಣ ಅಥವಾ ಭೃಗುವಿನ ಪೈಕಿ ಯಾರೆಂದು ಹೇಳುವುದು ಕಷ್ಟ. ಈ ಪೈಕಿ ಕೃತಿಕಾರ ಯಾರೇ ಆಗಿರಲಿ) ತಾವು ಋಣಿಯೆಂದು ಸಾರಿದ್ದಾರೆ, ಪೈಜಾವಾನ ಸಂಪೂರ್ಣ ಬಣ್ಣನೆ ನೀಡುವ ಮೂಲಕ ಬಹುದೊಡ್ಡ ಲೋಕೋಪಕಾರ ಮಾಡಿದ್ದಾನೆ. ಪೈಜಾವನನ್ನು ಶೂದ್ರನೆಂದು ಬಣ್ಣಿಸದೆ ಹೋಗಿದ್ದರೆ ಶೂದ್ರನ ಮೂಲ ಯಾವುದೆಂಬ ಸುಳಿವು ಸಂಪೂರ್ಣವಾಗಿ ಕಳೆದು ಹೋಗುತ್ತಿತ್ತು ಎಂದು ಉಪಕಾರ ಸ್ಮರಿಸಿದ್ದಾರೆ.

ಶೂದ್ರ ಸಮುದಾಯದ ಐತಿಹಾಸಿಕ ಮೂಲವನ್ನು ಪರಿಶೋಧಿಸಿರುವ ಬಾಬಾ ಸಾಹೇಬರು, ಶೂದ್ರರು ಪ್ರಾಚೀನ ಯೋಧರ ಇಲ್ಲವೇ ವಿದೇಶೀ ದಾಳಿಕೋರರ ವಂಶಸ್ಥರು ಎಂಬ ಸಿದ್ಧಾಂತಗಳನ್ನು ಒಪ್ಪುವುದಿಲ್ಲ. ಅಷ್ಟೇ ಅಲ್ಲ, ಇವುಗಳಿಗೆ ಸವಾಲೆಸೆದಿದ್ದಾರೆ. ತಮ್ಮ ವಾದಕ್ಕೆ ಸಮರ್ಥನೆಯಾಗಿ ಐತಿಹಾಸಿಕ ಪುರಾವೆಯನ್ನು ಬಗೆದು ತೆಗೆದಿರುವ ಅವರು, ಶೂದ್ರರು ವಾಸ್ತವವಾಗಿ ಭಾರತದ ಮೂಲನಿವಾಸಿಗಳೇ ಆಗಿದ್ದರೆಂದೂ, ಬ್ರಾಹ್ಮಣರು ತಮ್ಮ ಯಜಮಾನಿಕೆಯನ್ನು ಮುಂದುವರೆಸಲು ಅವರನ್ನು ಅಧೀನಗೊಳಿಸಿದರೆಂದೂ ಪ್ರತಿಪಾದಿಸಿದ್ದಾರೆ.

ಇತಿಹಾಸದ ಉದ್ದಕ್ಕೂ ಶೂದ್ರ ಸಮುದಾಯ ಎದುರಿಸುತ್ತ ಬಂದಿರುವ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ. ವ್ಯಾಪಕ ಬಡತನ, ಶಿಕ್ಷಣದ ಕೊರತೆ ಹಾಗೂ ಅವರ ಹಿಂದುಳಿಯುವಿಕೆಯನ್ನು ಸತತವಾಗಿ ಮುಂದುವರೆಸುತ್ತ ಬಂದ ಅವಕಾಶಗಳ ಕೊರತೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಜಮೀನು, ಆರ್ಥಿಕ ಅವಕಾಶಗಳಂತಹ ಸಂಪನ್ಮೂಲಗಳನ್ನು ಶೂದ್ರರಿಗೆ ಹೇಗೆ ನಿರಾಕರಿಸಲಾಯಿತು ಮತ್ತು ಈ ನಿರಾಕರಣೆಯು ಅವರ ಸಾಮಾಜಿಕ-ಆರ್ಥಿಕ ಬವಣೆಯನ್ನು ಮತ್ತಷ್ಟು ಹೇಗೆ ಆಳಗೊಳಿಸಿತು ಎಂದೂ ಅವರು ವಿವರಿಸಿದ್ದಾರೆ.

ತಮ್ಮ ಅವನತಿಗೆ ಹಾದಿ ಮಾಡಿದ ಚಾತುರ್ವರ್ಣ್ಯ ಎಂಬ ದುಷ್ಟ ವ್ಯವಸ್ಥೆಯನ್ನು ಸುಸ್ಥಿರಗೊಳಿಸಿಕೊಂಡು ಬಂದವರು ಶೂದ್ರರೇ ಆಗಿರುವುದರಿಂದ, ಚಾತುರ್ವರ್ಣ್ಯದ ವಿನಾಶವೂ ಅವರ ಕೈಯಲ್ಲೇ ಇದೆ ಎಂಬ ದೂರಗಾಮಿ ಕ್ರಾಂತಿಯ ಸುಳಿವನ್ನೂ ಅವರು ನೀಡಿದ್ದಾರೆ.

ಅಸ್ಪೃಶ್ಯರು ಹಾಗೂ ಅಸಂಖ್ಯ ತಳಸಮುದಾಯಗಳು ಇಂದಿಗೂ ಹೆಚ್ಚು ಶೋಷಣೆಗೆ ಒಳಪಡುತ್ತಿರುವುದು ‘ಶೂದ್ರ’ ಎಂಬ ವರ್ಣದೊಳಗೆ ಸೇರಿರುವ ಬಲಾಢ್ಯ ಜಾತಿಗಳಿಂದಲೇ. ಶೂದ್ರರ ತಲೆಯೊಳಗೆ ತುಂಬಿರುವ ಪುರೋಹಿತಶಾಹಿಯ ಪ್ರತಿಗಾಮಿ ಧೋರಣೆಯೇ ಇದಕ್ಕೆ ಮುಖ್ಯ ಕಾರಣ. ಜಾತಿವಿನಾಶದ ಕಾರ್ಯದಲ್ಲಿ ಶೂದ್ರರು ಪಾಲ್ಗೊಳ್ಳದೆ ಅಸ್ಪೃಶ್ಯತೆಯ ಕ್ರೌರ್ಯಕ್ಕೂ, ಅಸಮಾನತೆಯ ಶೋಷಣೆಗೂ ಕೊನೆಯಿಲ್ಲ. ಇಂದು ಶೂದ್ರತ್ವದಿಂದ ಕಳಚಿಕೊಳ್ಳುತ್ತಾ ಜಾತಿಶ್ರೇಷ್ಠತೆಯನ್ನು ಆವಾಹಿಸಿಕೊಂಡಿರುವ ಶೂದ್ರರು ಈ ಕೃತಿಯನ್ನು ಓದಿದರೆ, ಆ ಓದು ಅವರನ್ನು ಮನುಷ್ಯರನ್ನಾಗಿ ಬದಲಿಸೀತು. ಕನಿಷ್ಠ ತಾವು ಮನುಷ್ಯರಾಗಲಾದರೂ ಶೂದ್ರರೆಲ್ಲರೂ ಬಾಬಾಸಾಹೇಬರ ಬರಹಗಳ ಕಡೆಗೆ ಮುಚ್ಚಿರುವ ತಮ್ಮ ‘ಕಣ್ಣು ಬಿಡಬೇಕು’. ನಿರ್ಣಾಯಕ ರಾಜಕೀಯ ಶಕ್ತಿಗಳಾಗಿ ರೂಪಾಂತರವಾಗಿರುವ ಹಾಗೂ ಸಾಮಾಜಿಕ ಬದಲಾವಣೆಯ ಕೆಲಸಗಳಿಂದ ಕಿಲೋಮೀಟರ್‌ಗಟ್ಟಲೆ ದೂರದಲ್ಲಿ ದೊಡ್ಡದೊಡ್ಡ ‘ಜಾತಿಬೇಲಿ’ಗಳನ್ನು ಹಾಕಿಕೊಂಡಿರುವ ಶೂದ್ರಮಠಗಳ ಗದ್ದುಗೆಯಲ್ಲಿರುವವರು ಬಾಬಾಸಾಹೇಬರ ಚಿಂತನೆಗಳನ್ನು ತಮ್ಮ ತಲೆಗಳಿಗೆ ತುಂಬಿಕೊಂಡು ಕನಿಷ್ಠ ತಾವಾದರೂ ಮನುಷ್ಯರಾಗಬೇಕು.

dayanand
ದಯಾನಂದ
+ posts

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನವರಾದ ದಯಾನಂದ ಅವರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಸಮಯ ಟಿವಿ', 'ಪ್ರಜಾವಾಣಿ', 'ಸಮಾಚಾರ.ಕಾಂ' ಪತ್ರಿಕಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಪತ್ರಿಕೋದ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲ ನಾಟಕ 'ಬಾಳಪೂರ್ಣ'. ಕಥಾ ಸಂಕಲನ 'ದೇವರು ಕಚ್ಚಿದ ಸೇಬು' ಛಂದಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ. ಇವರ 'ಬುದ್ಧನ ಕಿವಿ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದೆ. ಅಲೆಮಾರಿ ಸಮುದಾಯದಿಂದ ಬಂದಿರುವ ಇವರು ತಬ್ಬಲಿ ಸಮುದಾಯಗಳ ಬಗ್ಗೆ ನಿರಂತರ ಬರೆಯುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ದಯಾನಂದ
ದಯಾನಂದ
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನವರಾದ ದಯಾನಂದ ಅವರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಸಮಯ ಟಿವಿ', 'ಪ್ರಜಾವಾಣಿ', 'ಸಮಾಚಾರ.ಕಾಂ' ಪತ್ರಿಕಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಪತ್ರಿಕೋದ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲ ನಾಟಕ 'ಬಾಳಪೂರ್ಣ'. ಕಥಾ ಸಂಕಲನ 'ದೇವರು ಕಚ್ಚಿದ ಸೇಬು' ಛಂದಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ. ಇವರ 'ಬುದ್ಧನ ಕಿವಿ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದೆ. ಅಲೆಮಾರಿ ಸಮುದಾಯದಿಂದ ಬಂದಿರುವ ಇವರು ತಬ್ಬಲಿ ಸಮುದಾಯಗಳ ಬಗ್ಗೆ ನಿರಂತರ ಬರೆಯುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...

‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

ಕೃತಿ: Annihilation of Caste (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...