(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)
“ಈ ಫಿಶಿಂಗ್ ಐಟಂ ಹುಡುಕಿಕೊಂಡು ಬರೋರು ಕಡಿಮೆ ಅಲ್ವಾ?” ಅಂದೆ. “ಅಯ್ಯೋ ಸಾರ್… ಈಗ ಇದು ಫ್ಯಾಷನ್ ಆಗೋಗಿದೆ. ಮೀನು ಹಿಡಿಯೋದು ಇದೆಯಲ್ಲ ಸಾರ್, ಇದು ಸಹನೆ, ತಾಳ್ಮೆ ಕಲ್ಸುತ್ತೆ. ಇವತ್ತಿನ ಮಕ್ಕಳಿಗೆ ಅದೇ ಅಲ್ವಾ ಇಲ್ದೇ ಇರೋದು, ಬೇಕಿರೋದು,” ಅಂದರು…
ಕಾಟನ್ ಪೇಟೆಯ ತವಕ್ಕಲ್ ಮಸ್ತಾನ್ ದರ್ಗಾಕ್ಕೆ ಹೊಂದಿಕೊಂಡಂತಿರುವ, ದರ್ಗಾದ ಹಿಂದಿನ ರಸ್ತೆಯಲ್ಲಿರುವ ʻಬೆಂಗಳೂರ್ ಫಿಶಿಂಗ್ ಟ್ಯಾಕಲ್ಸ್ʼ ಅಂಗಡಿಯ ಮಾಲೀಕರ ಹೆಸರು ಇರ್ಫಾನ್. 52ರ ಹರೆಯ. ಕೈಗೆ ಸಿಕ್ಕ ಕೆಲಸಗಳನ್ನು ಮಾಡುತ್ತ, ಅನುಭವದ ಬಲದಿಂದಲೇ ಬದುಕು ಕಟ್ಟಿಕೊಳ್ಳುತ್ತ, ಬಂದದ್ದನ್ನು ಬಂದಂತೆ ಸ್ವೀಕರಿಸುತ್ತ ಮುನ್ನಡೆದ ಇರ್ಫಾನ್, ಮೊದಲು ಲೇಜರ್ ಪ್ರಿಂಟರ್‌ಗಳಿಗೆ ಬಳಸುವ ಟೋನರ್ ಕಾಟ್ರಿಡ್ಜ್‌ಗಳ ರೀಫಿಲ್ಲಿಂಗ್ ಕೆಲಸ ಮಾಡುತ್ತಿದ್ದರು.
ಈಗ ಹೊಸ ತಲೆಮಾರು ತವಕಿಸುವ ಫಿಶಿಂಗ್ ಅಂಗಡಿ ಮಾಲೀಕರಾಗಿದ್ದಾರೆ. ಫಿಶಿಂಗ್ ರಾಡ್, ರೀಲ್ಸ್, ಲೂರ್, ಥ್ರೆಡ್, ಹುಕ್ಸ್‌ಗಳ ಜಪ ಮಾಡುತ್ತಿದ್ದಾರೆ. ಅಲ್ಲಿ ಹೆಸರಾಂತ ಡೈವಾ, ಶಿಮಾನೋ, ಲೂಮಿಸ್, ಪೆನ್, ಒಕುಮಾ ಕಂಪನಿಗಳ ಬ್ರಾಂಡೆಡ್ ಗಾಳದಿಂದ ಹಿಡಿದು, ಹಳ್ಳಿಯ ಕೆರೆ-ಕಟ್ಟೆಗಳಲ್ಲಿ ಮೀನು ಹಿಡಿಯಲು ಬಳಸುವ ಲೋಕಲ್ ಗಾಳಗಳಿವೆ. ಮೀನಿನ ಗಾಳಕ್ಕೆ ಹಾಕುವ ರೆಡಿ ಫುಡ್, ನೈಲಾನ್ ದಾರದಿಂದ ಹಿಡಿದು ಬಣ್ಣಬಣ್ಣದ ವಿನ್ಯಾಸದ ಬಲೆಯವರೆಗೆ, ಫಿಶಿಂಗ್‌ಗೆ ಸಂಬಂಧಿಸಿದ ಎಲ್ಲ ರೀತಿಯ ವಸ್ತುಗಳಿವೆ.
“ನಮಸ್ಕಾರ ಇರ್ಫಾನ್… ಆ ಕೆಲಸ ಬಿಟ್ಟು, ಇದನ್ನು ಯಾವಾಗಿನಿಂದ ಶುರು ಮಾಡಿದ್ರಿ?” ಎಂದೆ.
“ಕೋವಿಡ್ ಆದ್ಮೇಲೆ. ಅದೂ ಇದೆ, ಎಷ್ಟು ಬೇಕೋ ಅಷ್ಟಿದೆ. ಹಂಗೇ ಇದ್ನೂ ಮಾಡ್ತಾಯಿದೀನಿ. ಅದಕ್ಕಿಂತ ಇದು ವಾಸಿ ಅನ್ನಸ್ತು, ಕಳೆದ ಮೂರು ವರ್ಷದಿಂದ ಇದ್ನೇ ಜಾಸ್ತಿ ಮಾಡ್ತಿದೀನಿ,” ಎಂದರು.
ಹತ್ತನೇ ಕ್ಲಾಸ್‌ವರೆಗೆ ಓದಿರುವ ಇರ್ಫಾನ್, ಹುಟ್ಟಿ ಬೆಳೆದದ್ದೆಲ್ಲ ತವಕ್ಕಲ್ ಮಸ್ತಾನ್ ದರ್ಗಾದ ಗೋಡೆಗೆ ಅಂಟಿಕೊಂಡಿರುವ ಮನೆಯಲ್ಲಿ. ಆಡಿ ಬೆಳೆದದ್ದು ಕಾಟನ್ ಪೇಟೆಯ ಬ್ಯುಸಿ ಬ್ಯುಸಿನೆಸ್ ಏರಿಯಾದಲ್ಲಿ. ತಂದೆ ಶಾನೂರ್ ಮೊಹಮ್ಮದ್ – ಹೈಸ್ಕೂಲ್ ಹೆಡ್ಮಾಸ್ಟರ್ – ಕನ್ನಡ ಪಂಡಿತರು. ತಾಯಿಗೆ ಮನೆಗೆಲಸ. ಮಾಸ್ಟರ್ ಮಗನಾದ ಇರ್ಫಾನ್, ಹತ್ತನೇ ತರಗತಿವರೆಗೆ ಓದಿ, ಅರ್ಧಕ್ಕೇ ಬಿಟ್ಟವರು. 1989ರಲ್ಲಿ ಬರ್ಮಾ ಬಜಾರ್‌ನಲ್ಲಿ ಹತ್ತು ರೂಪಾಯಿಯ ದಿನಗೂಲಿ ಕೆಲಸಕ್ಕೆ ಸೇರಿದರು. ಅಪ್ಪ ನಿವೃತ್ತರಾದ ನಂತರ, ಅವರೊಂದಿಗೆ ಕಚ್ಚಾ ರೇಷ್ಮೆ ವ್ಯಾಪಾರಕ್ಕೆ ಇಳಿದರು. ಮಾಗಡಿ ಹಳ್ಳಿಗಳಲ್ಲಿ ಸೈಕಲ್ ತುಳಿದು, ಮೂಟೆಗಳನ್ನು ಹೊತ್ತು ಊರೂರು ಅಲೆದರು. ಬಿಸಿಲು, ಚಳಿ, ಮಳೆ, ಗಾಳಿಗೂ ಕೇರ್ ಮಾಡದೆ ಕಷ್ಟಪಟ್ಟು ದುಡಿದರು. ಆ ವ್ಯಾಪಾರದಲ್ಲಿ ಒಳ್ಳೆಯ ಸಂಪಾದನೆ ಇತ್ತು. ಆದರೆ, ಅಪ್ಪನ ಧಾರಾಳತನದಿಂದಾಗಿ ನಷ್ಟದ ಹಾದಿ ಹಿಡಿಯಿತು. ಕೊನೆಗೆ ಆ ವ್ಯಾಪಾರಕ್ಕೆ ತೆರೆ ಬಿತ್ತು.

ಆ ನಂತರ, ಪರಿಚಿತರೊಬ್ಬರ ಕಂಪ್ಯೂಟರ್ ಸೇಲ್ಸ್ ಅಂಡ್ ಸರ್ವೀಸ್ ಅಂಗಡಿಯಲ್ಲಿ ರಿಪೇರಿ ಸಹಾಯಕನಾಗಿ ಕೆಲಸಕ್ಕೆ ಸೇರಿದರು. ಅಲ್ಲಿ ತಿಂಗಳಿಗೆ ಒಂದು ಸಾವಿರ ಸಂಬಳ. 1994ರಿಂದ 2004ರವರೆಗಿನ ಆ ಕೆಲಸದಲ್ಲಿ, ಕೊನೆಗೆ ಬಿಡುವಾಗ ಸಂಬಳ ಹತ್ತು ಸಾವಿರಕ್ಕೇರಿತ್ತು. ಅದೇ ಸಮಯದಲ್ಲಿ ಇರ್ಫಾನ್, ಲೇಜರ್ ಪ್ರಿಂಟರ್‌ನ ಟೋನರ್ ಕಾಟ್ರಿಡ್ಜ್‌ಗಳನ್ನು ಬಿಚ್ಚಿ ಜೋಡಿಸುವುದನ್ನು, ಖಾಲಿಯಾಗಿದ್ದ ಪೌಡರನ್ನು ಸರಿಯಾದ ಪ್ರಮಾಣದಲ್ಲಿ ತುಂಬುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಪರಿಚಯದವರು ಕೇಳಿದಾಗ, ರೀಫಿಲ್ಲಿಂಗ್ ಮಾಡಿಕೊಡುತ್ತಿದ್ದರು. ಗಿರಾಕಿಗಳು ಹೆಚ್ಚಾಗುತ್ತಿದ್ದಂತೆ ರೀಫಿಲ್ಲಿಂಗ್ ಕೆಲಸವನ್ನೇ ಪೂರ್ಣಾವಧಿ ವೃತ್ತಿಯನ್ನಾಗಿಸಿಕೊಂಡರು.
90ರ ದಶಕದಲ್ಲಿ, ಕಂಪ್ಯೂಟರ್ ಲೋಕ ತೆರೆದುಕೊಳ್ಳುತ್ತಿದ್ದ ಕಾಲದಲ್ಲಿ ಪ್ರತಿಷ್ಠಿತ ಎಚ್‌ಪಿ ಕಂಪನಿಯ A4, A3 ಲೇಜರ್ ಪ್ರಿಂಟರ್‌ಗಳ ಬೆಲೆ ಮತ್ತು ಬೇಡಿಕೆ ಹೆಚ್ಚಾಗಿತ್ತು. ಅದಕ್ಕೆ ಬಳಸುವ ಟೋನರ್ ಕಾಟ್ರಿಡ್ಜ್‌ಗೆ 5ರಿಂದ 10 ಸಾವಿರವಿತ್ತು. ವಿದೇಶದಲ್ಲಾದರೆ ಯೂಸ್ ಅಂಡ್ ಥ್ರೋ; ಆದರೆ, ಇಂಡಿಯಾದಲ್ಲಿ ಇಲ್ಲ. ರೀಸೈಕ್ಲಿಂಗ್, ರೀಫಿಲ್ಲಿಂಗ್ ಬಳಸುವವರೇ ಎಲ್ಲ. ಆ ಸಂದರ್ಭದಲ್ಲಿ ಎಚ್‌ಪಿ ಕಂಪನಿ ಕೂಡ ರೀಫಿಲ್ಲಿಂಗ್ ಮಾಡುತ್ತಿರಲಿಲ್ಲ. ಆದರೆ ಇರ್ಫಾನ್, ಕೇವಲ ಎರಡು ಸಾವಿರಕ್ಕೆ, ಹೊಸದರಂತೆ ಕೆಲಸ ಮಾಡುವ ರೀಫಿಲ್ಲಿಂಗ್ ಮಾಡಿಕೊಡುವ ನುರಿತ ನಿಪುಣರಾಗಿದ್ದರು. ಆಧುನಿಕ ತಂತ್ರಜ್ಞಾನವನ್ನೂ ತಮ್ಮ ಅನುಭವದಿಂದ ಅರಗಿಸಿಕೊಂಡಿದ್ದರು. ಇರ್ಫಾನ್ ಆವಿಷ್ಕಾರ ಕಂಪ್ಯೂಟರ್ ಜಗತ್ತಿನ ದಿಗ್ಗಜರಿಗೆ ಏನಾದರೂ ಗೊತ್ತಾಗಿದ್ದರೆ, ಇರ್ಫಾನ್ ಅವರ ಪಾರ್ಟ್ನರ್ ಆಗಿರುತ್ತಿದ್ದರು, ಇರಲಿ.
ಈ ಕೆಲಸದಲ್ಲಿ ಬದುಕು ಒಂದು ಹಂತಕ್ಕೆ ಬರುತ್ತಿದ್ದಂತೆ, ನಿಶ್ಚಿತ ಆದಾಯ ಗಳಿಸುವಷ್ಟು ಶಕ್ತರಾಗುತ್ತಿದ್ದಂತೆ ಇರ್ಫಾನ್ ಮದುವೆಯಾದರು. ಇಬ್ಬರು ಮಕ್ಕಳಾದವು. ತಂದೆ-ತಾಯಿ ಜೊತೆಯಲ್ಲಿಯೇ ಇದ್ದರು. ವರ್ಷದಿಂದ ವರ್ಷಕ್ಕೆ ರೀಫಿಲ್ಲಿಂಗ್ ವ್ಯಾಪಾರ ವೃದ್ಧಿಯಾಗುತ್ತಲೇ ಇತ್ತು. “2013ರಲ್ಲಿ ಮೊದಲ ಬಾರಿಗೆ ಹಾರ್ಟ್ ಅಟ್ಯಾಕ್ ಆಯ್ತು. ಡಾಕ್ಟರ್ ‘ಸ್ಮೋಕ್ ಮಾಡ್ತೀರಾ?’ ಕೇಳಿದ್ರು. ನಾನು ನನ್ನ ರೀಫಿಲ್ಲಿಂಗ್ ಕೆಲಸ, ಮನೆ ತುಂಬ ಕಪ್ಪು ಪೌಡರ್ ಚೆಲ್ಲಾಟವನ್ನೆಲ್ಲ ಡಾಕ್ಟರಿಗೆ ಹೇಳಿದೆ. ‘ಮಾಸ್ಕ್ ಹಾಕಿಕೊಂಡು ರೀಫಿಲ್ಲಿಂಗ್ ಮಾಡಬೇಕು, ಇಲ್ಲ ನಿಲ್ಲಿಸಬೇಕು; ಇಲ್ಲದಿದ್ದರೆ ನಿಮ್ಮ ಹಾರ್ಟ್ ಅಲ್ಲ, ಮನೆಯವರದೆಲ್ಲ ನಿಲ್ಲುತ್ತದೆ’ ಎಂದರು. ಆದರೆ ಹೊಟ್ಟೆಪಾಡು ಕೇಳಬೇಕಲ್ಲ… ಮುಂದುವರಿಸಿದೆ. ಅದೇ ಸಮಯಕ್ಕೆ ಅಪ್ಪ ಸತ್ತರು. ಅಮ್ಮನಿಗೆ ಶುಗರ್, ಕಿಡ್ನಿ ಸಮಸ್ಯೆ; ವಾರಕ್ಕೆ ಮೂರು ಬಾರಿ ಡಯಾಲಿಸಿಸ್, ದುಡ್ಡು ನೀರಿನಂತೆ ಹರಿಯತೊಡಗಿತು. ಎಲ್ಲವನ್ನು ತಡಕೊಂಡೆ. ಆದರೆ, ಅಪ್ಪ ಹೋದ ಎರಡೇ ವರ್ಷಕ್ಕೆ ಅಮ್ಮನೂ ಹೋಗಿಬಿಟ್ಟರು. ನನಗೂ ಬಿಪಿ, ಶುಗರ್ ಜಾಸ್ತಿ ಆಯ್ತು. ಮತ್ತೊಂದು ಸಲ ಹಾರ್ಟ್ ಅಟ್ಯಾಕ್ ಆಯ್ತು. ಅದ್ನೂ ತಡಕೊಂಡೆ. ಯಾವಾಗ ಕೋವಿಡ್ ಲಾಕ್ಡೌನ್ ಆಯ್ತೋ, ರೀಫಿಲ್ಲಿಂಗ್ ಕೆಲಸಕ್ಕೆ ಕಲ್ಲು ಬಿತ್ತು. ಎರಡು ವರ್ಷ ಅದು ಹೇಗೆ ಬದುಕಿದೆವೋ… ದೇವರಿಗೇ ಗೊತ್ತು. ಆಮೇಲೆ, ಇಂಕ್ ಜೆಟ್, ರಿಬ್ಬನ್ ಚಾಲ್ತಿಗೆ ಬಂದು, ಟೋನರ್ ಬಳಕೆ ಕಡಿಮೆಯಾಯಿತು. ನನ್ನ ಕೆಲಸ ಹೋಯಿತು,” ಎಂದು ಮೌನವಾದರು.
“ಮತ್ತೆ… ಈ ಫಿಶಿಂಗ್ ಅಂಗಡಿ ಹೇಗೆ?” ಎಂದೆ.
“ರೀಫಿಲ್ಲಿಂಗ್ ಕೆಲ್ಸಕ್ಕೆ ಹೋಗ್ತಿದ್ನಲ್ಲ, ಆಗ ಒಂದ್ಕಡೆ ಫಿಶಿಂಗ್ ರಾಡ್ ಕಣ್ಣಿಗೆ ಬಿತ್ತು. ನನ್ಗೆ ಮೀನು ಹಿಡಿಯೋ ಖಯಾಲಿ ಇತ್ತು. ₹1,300 ಕೊಟ್ಟು ತಂದಿದ್ದೆ. ಮೀನು ಹಿಡಿಯೋಕೆ ಅಂತ ಹೆಬ್ಬಾಳ ಕೆರೆಗೆ ಹೋಗಿ, ಎರಡು ಸಲ ಮೀನು ಹಿಡ್ಕೊಂಡ್ ಬಂದಿದ್ದೆ. ಮೂರನೇ ಸಲ ಹೋದಾಗ, ಪೊಲೀಸ್ನೋರ ಕೈಗೆ ಸಿಕ್ಕಿ, ‘ಟೆಂಡರ್ ಆಗಿದೆ, ಇಲ್ಲಿ ಹಿಡಿದ್ರೆ ಒಳಕ್ಕಾಗ್ತಿವಿ’ ಅಂದ್ರು. ಅವತ್ತಿಂದ ಬಿಟ್ಟೆ. ಫಿಶಿಂಗ್ ರಾಡು ಮನೆ ಮೂಲೆ ಸೇರ್ತು. ಈ ಕೋವಿಡ್ ಬಂದು ಕೈಯಲ್ಲಿ ಕಾಸಿಲ್ದಂಗಾಯ್ತಲ್ಲ, ಆಗ ನನ್ನ ಹೆಂಡ್ತಿ, ‘ಬಟ್ಟೆ ಹೊಲಿಸಿದ್ದೀನಿ, ದುಡ್ ಕೊಡಬೇಕು’ ಅಂತ ಹಠ ಮಾಡದ್ರು. ನನ್ನ ಹತ್ರ ಕಾಸಿಲ್ಲ ಅಂದೆ. ಅವರೇ, ‘ಈ ರಾಡಿದ್ಯಲ್ಲ, OLXಗೆ ಹಾಕಿ’ ಅಂತ ಐಡಿಯಾ ಕೊಟ್ರು. ಹಾಕ್ದೆ, ಎರಡು ಮೂರು ಕಾಲ್ ಬಂತು, ಎಂಟು ನೂರಕ್ಕೆ ಸೇಲ್ ಆಯ್ತು. ಆಕೆ ಕೈಗೆ ದುಡ್ ಕೊಟ್, ‘ಇನ್ ನನ್ನ ಕೇಳಬೇಡ’ ಅಂದೆ. ಆದರೆ, OLX ಗಿರಾಕಿಗಳು ಕೇಳಲಿಕ್ಕೆ ಶುರು ಮಾಡಿದರು. ಫೋನ್ ಬರೋದು ಜಾಸ್ತಿ ಆಯ್ತು. ಕೂತು ಯೋಚ್ನೆ ಮಾಡ್ದೆ, ಫಿಶಿಂಗ್ ರಾಡ್ ಎಲ್ಲೆಲ್ಲಿ ಕಡಿಮೆಗೆ ಸಿಗುತ್ತೆ ಅಂತೆಲ್ಲ ಗೂಗಲ್‌ನಲ್ಲಿ ಸರ್ಚ್ ಮಾಡ್ದೆ. ಮುಂಬೈನಿಂದ ಎರಡು ರಾಡ್ ತರಿಸಿ, ಅದನ್ನೂ OLXಗೆ ಹಾಕ್ದೆ. ನನ್ನ ಫೋನ್ ನಂಬರ್ ಫಿಶಿಂಗ್ ರಾಡ್ ಮಾರುವ, ಹುಡುಕುವ, ಖರೀದಿಸುವವರ ಗುಂಪುಗಳಲ್ಲಿ ಹರಿದಾಡಿತು. ನನ್ನನ್ನು ಮಾರಾಟಗಾರನನ್ನಾಗಿ ಮಾಡಿತು. ಮನೆಯಿಂದ್ಲೇ ಎರಡು-ಮೂರು ವರ್ಷ, ಇದೇ ರೀತಿ ಆನ್ಲೈನ್‌ನಲ್ಲಿ ತರಿಸೋದು, ಮಾರಾಟ ಮಾಡೋದು ನಡೀತು. ನಾನೇ ‘ಬೆಂಗಳೂರ್ ಫಿಶಿಂಗ್ ಟ್ಯಾಕಲ್ಸ್’ ಅಂತ ನನ್ನ ಅಂಗಡಿಗೆ ಹೆಸರು ಕೊಟ್ಟೆ. ಅಷ್ಟೊತ್ತಿಗೆ ಫಿಶಿಂಗ್ ಖಯಾಲಿ ಇರುವವರ ಒಂದಷ್ಟು ನಂಬರ್ ಸಿಕ್ತು; ಅವರನ್ನು ಹುಡುಕ್ಕೊಂಡ್ ಹೋಗಿ, ಅವರಿಗೆ ಕ್ಯಾಪು, ಟೀ-ಶರ್ಟು ಕೊಟ್ಟು ಹುರಿದುಂಬಿಸಿದೆ. ಕಾರ್ಡು ಕೈಗಿಟ್ಟು ಫೋನ್ ಮಾಡಿ ಅಂತೇಳಿ ಬಂದೆ. ಅಲ್ಲಿಂದ ನಿಧಾನಕ್ಕೆ ಆರ್ಡರ್ ಬರಕ್ಕೆ ಶುರುವಾದೋ. ಮಗ ಕೂಡ ಬೆಳೆದು ನಿಂತ, ಅವನೂ ನನ್ನ ಜೊತೆ ಕೈಜೋಡಿಸಿದ. ಅವನು ಈ ಕಾಲದವನು, ಆನ್‌ಲೈನ್ ಚೆನ್ನಾಗಿ ಗೊತ್ತಿರೋನು, ‘ಅಂಗಡಿ ಇಡೋಣಪ್ಪ’ ಅಂದ. ಆಗ್ಲಿ ಅಂದೆ. ಅದೃಷ್ಟಕ್ಕೆ ಮನೆ ಪಕ್ಕಾನೇ ಅಂಗಡಿ ಸಿಕ್ತು, ಐದ್ ಸಾವ್ರ ಬಾಡಿಗೆಗೆ. ಇದೇ ಅಂಗಡೀನಲ್ಲಿ ಈಗ ನೀವು ಕೂತಿದ್ದೀರ,” ಎಂದು ಸಮಾಧಾನದ ಸಂತೃಪ್ತ ನಗೆ ಬೀರಿದರು.
“ಅದ್ಸರಿ… ಈ ಅಂಗಡೀಲಿ ಇನ್ನೂರಕ್ಕೂ ಹೆಚ್ಚು ಫಿಶಿಂಗ್ ವೆರೈಟಿ ಸಾಮಾನಿದೆ, ಅದೆಲ್ಲ ಹೆಂಗ್ ಗೊತ್ತಾಯ್ತು ನಿಮ್ಗೆ?” ಎಂದೆ. “ಅದೆಲ್ಲ ನಮ್ ಮಗಂದು ಸಾರ್. ಅವ್ನು ಅಂಗಡಿ ಅಂದ್ನಲ್ಲ, ಗಿರಾಕಿಗಳು ಬಂದು ಕೇಳಕ್ಕೆ ಶುರು ಮಾಡುದ್ರು; ಅವ್ನು ಒಂದು ಕಡೆ ಬರಕ್ಕೊಂಡ್ ಇಟ್ಕೊಂಡು-ಇಟ್ಕೊಂಡು… ಇಷ್ಟಾಯ್ತು ನೋಡಿ,” ಅಂದರು.
ಇರ್ಫಾನ್ ಮಗ ಅದ್ನಾನ್ ಬಿ.ಕಾಂ ಮುಗಿಸಿದ್ದಾನೆ. ಹೊಸ ಕಾಲದ ಹುಡುಗ. ಆಂಡ್ರಾಯ್ಡ್ ಫೋನ್, ಆನ್‌ಲೈನ್, ಗೂಗಲ್, ಯೂಟ್ಯೂಬ್, ಇನ್ಸ್ಟಾಗ್ರಾಂ, ವಾಟ್ಸಾಪ್ ಗ್ರೂಪುಗಳಲ್ಲಿ ಹೊಕ್ಕಾಡುವ ಹುಡುಗ. ಅಪ್ಪನ ವ್ಯಾಪಾರವನ್ನು ಆತ ಆನ್‌ಲೈನ್‌ಗೆ ತಂದ. ಯೂಟ್ಯೂಬ್ ಚಾನಲ್ ಮಾಡಿ, ಅಂಗಡಿಯಲ್ಲಿ ಸಿಗುವ ವಸ್ತುಗಳನ್ನು ವಿವರಿಸಿದ. ಅದಕ್ಕೆ 17 ಸಾವಿರ ವೀವರ್ಸ್ ಇದ್ದು, ಗೂಗಲ್‌ನಲ್ಲಿ ಒಳ್ಳೆ ರೇಟಿಂಗ್ ಸಿಕ್ಕಿದೆ. ಬೆಂಗಳೂರಿನಿಂದ ಕಾಶ್ಮೀರದವರೆಗೆ ಗಿರಾಕಿಗಳನ್ನು ಹುಡುಕಿಕೊಟ್ಟಿದೆ. ವ್ಯಾಪಾರ-ವಹಿವಾಟು ವಿಸ್ತಾರವಾಗಿದೆ…”
“ಈ ಫಿಶಿಂಗ್ ಐಟಂ ಹುಡುಕಿಕೊಂಡು ಬರೋರು ಕಡಿಮೆ ಅಲ್ವಾ?” ಅಂದೆ. “ಅಯ್ಯೋ ಸಾರ್… ಈಗ ಇದು ಫ್ಯಾಷನ್ ಆಗೋಗಿದೆ. ಒಂದು ರಾಡಿಗೆ ಒಂದು ಸಾವಿರದಿಂದ ಹತ್ತು ಸಾವಿರದವರೆಗೂ ಬೆಲೆ ಇದೆ. ಅದರಲ್ಲೂ ಬ್ರಾಂಡೆಡ್ ಇದೆ. ಲೋಕಲ್, ಡೂಪ್ಲಿಕೇಟು ಎಲ್ಲಾ ಇದೆ; ಗಿರಾಕಿ ನೋಡಿ ಕೊಡ್ತೀವಿ. ಕೇರಳದ ಒಬ್ಬ ಡಾಕ್ಟರ್ ನನ್ಗೆ ಪರ್ಮನೆಂಟ್ ಗಿರಾಕಿ, ಹುಡುಕ್ಕೊಂಡ್ ಬರ್ತಾರೆ. ಅವರು ಮಕ್ಕಳನ್ನೆಲ್ಲ ಕರೆದುಕೊಂಡು ವಾರಗಟ್ಟಲೆ ಔಟಿಂಗ್ ಹೋದ್ರೆ, ಮಕ್ಕಳ ಕೈಗೆ ಫಿಶಿಂಗ್ ರಾಡ್ ಕೊಟ್ಟು ಕೂರಸ್ತರಂತೆ. ಮೀನು ಹಿಡಿಯೋದು ಇದೆಯಲ್ಲ ಸಾರ್, ಇದು ಸಹನೆ, ತಾಳ್ಮೆ ಕಲ್ಸುತ್ತೆ. ಇವತ್ತಿನ ಮಕ್ಕಳಿಗೆ ಅದೇ ಅಲ್ವಾ ಇಲ್ದೇ ಇರೋದು, ಬೇಕಿರೋದು,” ಅಂದರು. ಇರ್ಫಾನ್ ಹೊಸ ತಲೆಮಾರಿಗೆ ಸಹನೆ-ತಾಳ್ಮೆ ಕಲಿಸುತ್ತಿರುವ ಗುರುವಿನಂತೆ ಕಾಣತೊಡಗಿದರು.
“ಹಾಗಾದ್ರೆ ಫಿಶಿಂಗ್‌ಗೆ ಫ್ಯೂಚರ್ ಇದೆ…” ಎಂದೆ. “ಇದು ಸೋಷಿಯಲ್ ಮೀಡಿಯಾ ಕಾಲ. ಮೀನು ಹಿಡಿಯೋದು, ಫೋಟೋ ತೆಗಿಯೋದು, ಅದನ್ನು ಸೋಷಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡೋದು ಹೆಚ್ಚಾಗಿದೆ. ಜೊತೆಗೆ ಟೆಕ್ಕಿಗಳು, ಟೆನ್ಷನ್‌ನಲ್ಲಿ ಕೆಲಸ ಮಾಡೋ ಡಾಕ್ಟರ್ಸ್, ಬ್ಯುಸಿನೆಸ್ಮನ್, ಲಾಯರ್ಸ್, ಕಾಲೇಜ್ ಹುಡ್ಗ-ಹುಡ್ಗೀರು ಔಟಿಂಗ್ ಹೋದ್ರೆ, ಮೊದ್ಲು ಟ್ರೆಕ್ಕಿಂಗ್ ಅಂತಿದ್ರು; ಈಗ ಅವ್ರೆಲ್ಲ ಫಿಶಿಂಗ್ ಕಡೆ ವಾಲಿದ್ದಾರೆ. ಪೀಸ್ ಆಫ್ ಮೈಂಡ್, ಮೆಡಿಟೇಷನ್, ಮೈಂಡ್ ಸ್ಟಿಮುಲೇಷನ್ ಅಂತರೆ; ರೆಸಾರ್ಟ್, ಹೋಂ ಸ್ಟೇ, ಫಾರ್ಮ್ ಹೌಸ್‌ಗಳು ಕೂಡ ಈಗ ಇನ್ನರ್-ಔಟರ್ ಫಿಶಿಂಗ್ ಶುರು ಮಾಡಿವೆ. ಈ ಮೆಡಿಕೋ ಟ್ರಾವಲಿಂಗ್‌ನಲ್ಲಿ ಬರ್ತಾರಲ್ಲ, ಫಾರಿನ್ನೋರು, ಅವ್ರು ನಮ್ ಅಂಗಡಿ ಹುಡಕ್ಕೊಂಡ್ ಬಂದು ತಗೊಂಡೋಕ್ತರೆ. ಮಗ ಆನ್ಲೈನ್-ಹೋಲ್‌ಸೇಲ್ ನೋಡ್ಕತನೆ; ನಾನು ಲೋಕಲ್ ನೋಡ್ಕೋತೀನಿ. ಈ ವ್ಯಾಪಾರಕ್ಕೆ ಐಡಿಯಾ ಕೊಟ್ಟೋರು ನನ್ ಹೆಂಡ್ತಿ, ನಾವಿಬ್ರು ಇಲ್ದಾಗ ಅಂಗಡೀಲಿ ಕೂರ್ತರೆ. ಮಗಳು ಪಿಯು ಮಾಡ್ತಿದಾಳೆ; ಅವ್ಳಿಗೊಂದು ಮದ್ವೆ ಮಾಡದ್ರೆ, ಮಗ ಇದ್ನ ಬೆಳಸಿದ್ರೆ, ಸಾಕು. ಹುಟ್ದಾಗಿಂದ ದರ್ಗಾಕ್ಕೆ ಹೋಗ್ತಿದ್ದೆ, ಮಂಡಿಯೂರಿ ಬೇಡ್ಕೊತಿದ್ದೆ, ಏನೋ ದೇವ್ರು ಕಣ್ಬುಟ್ಟ ಸಾರ್…” ಎಂದು ನಿಟ್ಟುಸಿರು ಬಿಟ್ಟರು.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ