ಮೋದಿ ಮತ್ತು ಅವರ ಸರ್ಕಾರವು ಪ್ರಸ್ತುತ ಇಂಧನ ಮತ್ತು ಆರ್ಥಿಕ ಬಿಕ್ಕಟ್ಟಿಗೆ ದೂರದ ಗುಮ್ಮನನ್ನು ತೋರಿಸಿ, ಸಮಸ್ಯೆಗಳಿಗೆ ಬೆನ್ನು ಹಾಕಿ ಪರಾರಿಯಾಗುವ ಪ್ರವೃತ್ತಿಯನ್ನು ಬಿಡಬೇಕು. ಜನರಿಗೆ ಮಿತವ್ಯಯದ ಪಾಠ ಹೇಳುವ ಮುನ್ನ ಸರ್ಕಾರಿ ವೆಚ್ಚಗಳು ಮತ್ತು ಅದ್ದೂರಿ ರಾಜಕೀಯ ಪ್ರಚಾರಗಳನ್ನು ತಗ್ಗಿಸಿ, ಜನರೊಂದಿಗೆ ನಿಲ್ಲುವಂತಾಗಬೇಕು.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಭಾರತವು ತೈಲ ಬಿಕ್ಕಟ್ಟು ಮತ್ತು ಆರ್ಥಿಕ ಪರಿಣಾಮಗಳನ್ನು ಎದುರಿಸುತ್ತಿದೆ. ಇದೇ ಸಮಯದಲ್ಲಿ, ಪ್ರಧಾನಿ ಮೋದಿ ಅವರು ದೇಶದ ನಾಗರಿಕರು ಆರ್ಥಿಕ ಶಿಸ್ತು ಅನುಸರಿಸಬೇಕು, ಅಡುಗೆ ಎಣ್ಣೆ, ಎಲ್‌ಪಿಜಿ ಹಾಗೂ ಇಂಧನವನ್ನು ಮಿತವಾಗಿ ಬಳಸಬೇಕು ಎಂದು ಕರೆ ಕೊಟ್ಟಿದ್ದಾರೆ. ಚಿನ್ನ, ವಿದೇಶಿ ಪ್ರವಾಸ ಹಾಗೂ ರಸಗೊಬ್ಬರಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸುವಂತೆಯೂ, ಉದ್ಯೋಗಿಗಳು ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡಬೇಕೆಂದೂ ಮನವಿ ಮಾಡಿಕೊಂಡಿದ್ದಾರೆ.
ಆದರೆ, ವಿಶ್ವಗುರು ಮೋದಿ ಅವರ ಮಿತವ್ಯಯದ ಮನವಿ ದೇಶದಲ್ಲಿನ ಬೃಹತ್ ಆರ್ಥಿಕ ವೈಫಲ್ಯದ ಒತ್ತಡವನ್ನು ಜನರ ಮೇಲೆ ಹೇರುವ ಪ್ರಯತ್ನವಾಗಿ ಕಾಣುತ್ತಿದೆ. ಅವರು ಜನರ ದೈನಂದಿನ ಚಟುವಟಿಕೆಗಳು ಮತ್ತು ನಡವಳಿಕೆಗಳನ್ನು ನಿಯಂತ್ರಿಸಿ, ತಮ್ಮ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಬಯಸಿದಂತೆ ತೋರುತ್ತಿದೆ.
ಆದರೆ, ಈ ಪರಿಸ್ಥಿತಿಗೆ ನಿಜಕ್ಕೂ ಹೊಣೆ ಯಾರು? ಅಮೆರಿಕವೇ? ಇಸ್ರೇಲೇ? ಅಥವಾ ಈ ಎರಡೂ ದೇಶಗಳ ದಾಳಿಗಳನ್ನು ದಿಟ್ಟತನದಿಂದ ಎದುರಿಸುತ್ತಿರುವ ಇರಾನೇ? ಈ ಮೂರು ರಾಷ್ಟ್ರಗಳ ಯುದ್ಧದ ಪ್ರಭಾವವು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿರುವುದನ್ನು ಅಲ್ಲಗಳೆಯಲಾಗದು. ಆದರೆ, ಅದಷ್ಟೇ ಕಾರಣವಲ್ಲ. ಅದಕ್ಕಿಂತಲೂ ಮುಖ್ಯವಾಗಿ ಮೋದಿ ಸರ್ಕಾರದ ನೀತಿ-ನಿಲುವು-ಧೋರಣೆಗಳು.
ಬಿಜೆಪಿ ಸರ್ಕಾರದ ತಪ್ಪು ಆರ್ಥಿಕ ಮತ್ತು ಕಳಪೆ ವಿದೇಶಾಂಗ ನೀತಿಗಳ ನಿರ್ವಹಣೆಯಿಂದ ದೇಶದಲ್ಲಿ ಇಂಧನ ಮತ್ತು ಹಣಕಾಸಿನ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದೊಂದು ರಚನಾತ್ಮಕ ದೌರ್ಬಲ್ಯ. ಈ ವೈಫಲ್ಯವನ್ನು ಸರಿಯಾದ ನೀತಿಗಳು ಮತ್ತು ಪರಿಹಾರ ಕ್ರಮಗಳನ್ನು ಅನುಸರಿಸುವ ಮೂಲಕ ಸರಿಪಡಿಸಬೇಕಿತ್ತು. ಆದರೆ, ಮೋದಿ ಸರ್ಕಾರದ ಧೋರಣೆಯು ತದ್ವಿರುದ್ಧವಾಗಿದೆ. ಪ್ರಧಾನಿಯವರು ದೇಶದ ಸ್ಥಿರತೆಯ ಜವಾಬ್ದಾರಿಯ ಸಂಪೂರ್ಣ ಹೊರೆಯನ್ನು ಭಾರತೀಯರ ಹೆಗಲಿಗೆ ವರ್ಗಾಯಿಸುತ್ತಿದ್ದಾರೆ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಆರಂಭದಲ್ಲಿ, ಮೋದಿ ಸರ್ಕಾರವು ಭಾರತದ ಕಚ್ಚಾ ತೈಲ ಆಮದಿನಲ್ಲಿ 70% ಭಾಗವು ಹಾರ್ಮುಜ್ ಜಲಸಂಧಿಯನ್ನು ಅವಲಂಬಿಸಿಲ್ಲ. ಈ ಬೃಹತ್ ಪ್ರಮಾಣದ ತೈಲ ಇತರ ಮಾರ್ಗಗಳಿಂದ ಬರುತ್ತಿದೆ ಎಂದು ಹೇಳಿಕೊಂಡಿತ್ತು. ಭಾರತದಲ್ಲಿ ಇಂಧನ ಕೊರತೆ ಎದುರಾಗುವುದಿಲ್ಲವೆಂದು ಭಾರತೀಯರಿಗೆ ಭರವಸೆ ನೀಡಿತ್ತು. ಆದರೆ, ಈ ಭರವಸೆಗಳು ಈಗ ಸುಳ್ಳಾಗಿವೆ. ಮೋದಿ ಸರ್ಕಾರದ ಎಡಬಿಡಂಗಿ ನೀತಿಗಳು ಇದಕ್ಕೆ ಪ್ರಮುಖ ಕಾರಣವಾಗಿದೆ.
ಈ ಹಿಂದೆ, ಇರಾನ್ ಮತ್ತು ವೆನೆಜುವೆಲಾದಿಂದ ಭಾರತೀಯ ರೂಪಾಯಿಗಳಲ್ಲೇ ರಿಯಾಯಿತಿ ದರದಲ್ಲಿ ಭಾರತವು ತೈಲವನ್ನು ಖರೀದಿಸುತ್ತಿತ್ತು. ಅಂತೆಯೇ, ಭಾರತದ ಒಟ್ಟು ಕಚ್ಚಾ ತೈಲ ಆಮದಿನಲ್ಲಿ ಸುಮಾರು 40%ರಷ್ಟು ತೈಲವನ್ನು ರಿಯಾಯತಿ ದರದಲ್ಲಿ ರಷ್ಯಾ ಕೂಡ ಪೂರೈಕೆ ಮಾಡುತ್ತಿತ್ತು. ಆದರೆ, ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ದಾಳಿ ನಡೆಸಿದ ಬಳಿಕ, ಇಸ್ರೇಲ್ ಪರವಾಗಿ ಭಾರತ ನಿಲುವು ತಳೆಯಿತು. ಇರಾನ್-ವೆನೆಜುವೆಲಾದಿಂದ ಭಾರತೀಯ ರೂಪಾಯಿ ಮತ್ತು ರಿಯಾಯತಿಯಲ್ಲಿ ತೈಲ ಖರೀದಿಸುವ ಅವಕಾಶವನ್ನು ಮೋದಿ ಸರ್ಕಾರವೇ ಹಾಳುಮಾಡಿತು. ಅದೇ ರೀತಿ, ಅಮೆರಿಕ ಸರ್ಕಾರ ಸುಂಕ ವಿಧಿಸಿದ ತಕ್ಷಣವೇ ಟ್ರಂಪ್‌ಗೆ ಹೆದರಿದ ಮೋದಿ ಸರ್ಕಾರ, ರಷ್ಯಾದಿಂದ ರಿಯಾಯಿತಿ ದರದಲ್ಲಿ ಪಡೆಯುತ್ತಿದ್ದ ತೈಲ ಆಮದನ್ನು ಗಣನೀಯವಾಗಿ ಕಡಿತಗೊಳಿಸಿತು. ಇದರೊಂದಿಗೆ, ಭಾರತದ ಇಂಧನ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಸ್ವತಃ ಮೋದಿ ಸರ್ಕಾರವು ಮುಂದೆ ನಿಂತು ಹಾಳುಮಾಡಿತ್ತು.
ಪ್ರಸ್ತುತ, ಭಾರತದಲ್ಲಿ ಎಲ್‌ಪಿಜಿ ಮತ್ತು ಇಂಧನ ಬಿಕ್ಕಟ್ಟು ಎದುರಾಗಿದೆ. ಐದು ರಾಜ್ಯಗಳ ಚುನಾವಣೆಯೂ ಇದೇ ಸಮಯದಲ್ಲಿ ನಡೆಯುತ್ತಿದ್ದರಿಂದ, ಯಾವುದೇ ಬೆಲೆ ಏರಿಕೆಗೆ ಮುಂದಾಗದೆ ಮೋದಿ ಸರ್ಕಾರ ಮೌನವಾಗಿತ್ತು. ಈಗ ಚುನಾವಣೆಗಳು ಮುಗಿದು, ಸರ್ಕಾರಗಳು ರಚನೆಯಾಗುತ್ತಿದ್ದಂತೆ ಜನರ ಮೇಲೆ ಬೆಲೆ ಏರಿಕೆ ಹೊರೆ ಹೇರಿದೆ. ಪೆಟ್ರೋಲ್-ಡೀಸೆಲ್ ಬೆಲೆಗಳನ್ನು 3 ರೂ. ಏರಿಕೆ ಮಾಡಿದೆ. ಎಲ್‌ಪಿಜಿ ಬೆಲೆಯಂತೂ ದಿನದಿಂದ ದಿನಕ್ಕೆ ಗಗಕ್ಕೇರುತ್ತಿದೆ. ಕಾಳಸಂತೆಯಲ್ಲಂತೂ ಎಲ್‌ಪಿಜಿ ಬೆಲೆಗೆ ಯಾವುದೇ ಲಗಾಮುಗಳಿಲ್ಲ.
ಮಧ್ಯಪ್ರಾಚ್ಯದ ಯುದ್ಧದಿಂದ ಉಂಟಾಗಿರುವ ಬಿಕ್ಕಟ್ಟನ್ನು ಭಾರತ ನಿಭಾಯಿಸಲು ಭಾರತೀಯರು ಈ ಹೊರೆ ಹೊರಬೇಕು ಎಂದು ಜನರಲ್ಲಿ ಮನೋಭೂಮಿಕೆಯನ್ನು ಮೋದಿ ಸರ್ಕಾರ ಸಜ್ಜುಗೊಳಿಸಿದೆ. ಆದರೆ, ಈ ಹಿಂದೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿದ್ದಾಗಲೂ ಸಹ ಮೋದಿ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕೇವಲ ಹದಿನೈದು ತಿಂಗಳ ಅವಧಿಯಲ್ಲಿ ಒಂಬತ್ತು ಬಾರಿ ಹೆಚ್ಚಿಸಿತ್ತು. ಆ ಲಾಭವನ್ನು ಭಾರತೀಯ ಗ್ರಾಹಕರಿಗೆ ವರ್ಗಾಯಿಸುವ ಬದಲಿಗೆ ಸರ್ಕಾರ ಮತ್ತು ಕಾರ್ಪೊರೇಟ್ ಕುಳಗಳು ತಮ್ಮ ಜೇಬಿಗೆ ಇಳಿಸಿಕೊಂಡಿದ್ದರು.
2014 ಮತ್ತು 2021ರ ನಡುವೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ಪ್ರತಿ ಲೀಟರ್‌ಗೆ 9.48 ರೂಪಾಯಿಗಳಿಂದ 32.98 ರೂ.ಗಳಿಗೆ ಏರಿಕೆಯಾಗಿದೆ. ಅಂದರೆ, 248%ರಷ್ಟು ಹೆಚ್ಚಾಗಿದೆ. ಇದರಿಂದ, ಭಾರತ ಸರ್ಕಾರಕ್ಕೆ ಬರೋಬ್ಬರಿ 38.89 ಲಕ್ಷ ಕೋಟಿ ರೂ. ಲಾಭವಾಗಿದೆ. ಈ ಬೃಹತ್ ಲಾಭ ಪಡೆದಾಗಲೂ ದೇಶದ ನಾಗರಿಕರ ಮೇಲಿನ ಹೊರೆಯನ್ನು ಮೋದಿ ಸರ್ಕಾರ ತಗ್ಗಿಸಲಿಲ್ಲ. ಬೆಲೆ ಇಳಿಕೆಗೆ ಮುಂದಾಗಲಿಲ್ಲ. ಆದರೀಗ, ಬಿಕ್ಕಟ್ಟಿನ ಹೊರೆಯನ್ನು ಜನಸಾಮಾನ್ಯರ ಹೆಗಲಿಗೆ ವರ್ಗಾಯಿಸಿದ್ದಾರೆ.
ಮತ್ತೊಂದು ಅಂಶವೆಂದರೆ, ಮೋದಿ ಅವರು ಜನರಲ್ಲಿ ಮಿತವ್ಯಯದ ಮನವಿ ಮಾಡಿರುವುದು ಅವರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ. 2013ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ದೇಶದ ಆರ್ಥಿಕ ಹಿತದೃಷ್ಟಿಯಿಂದ ಚಿನ್ನದ ಆಮದನ್ನು ನಿಯಂತ್ರಿಸುವಂತೆ ಮನವಿ ಮಾಡಿದ್ದರು. ಆಗ, ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಚಿದಂಬರಂ ಅವರ ಮನವಿಯನ್ನು ಮೋದಿ ತೀವ್ರವಾಗಿ ಟೀಕಿಸಿದ್ದರು. ‘ಚಿದಂಬರಂ ಅವರ ಮನವಿಯು ಭಾರತೀಯ ಮಹಿಳೆಯರ ಮಂಗಲಸೂತ್ರವನ್ನು ಕಿತ್ತುಕೊಳ್ಳುವ ಪ್ರಯತ್ನ’ ಎಂದು ಲೇವಡಿ ಮಾಡಿದ್ದರು. ಆದರೆ, ಇಂದು ತಾವೇ ಪ್ರಧಾನಿಯಾಗಿ, ದೇಶದ ಆರ್ಥಿಕ ನಿರ್ವಹಣೆಯ ವೈಫಲ್ಯ ಮುಚ್ಚಿಕೊಳ್ಳಲು ಜನರ ಮೇಲೆಯೇ ಮಿತವ್ಯಯದ ನಿರ್ಬಂಧಗಳನ್ನು ಹೇರುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಗ್ಯಾಸ್ ಸಿಲಿಂಡರ್ ದುಬಾರಿ; ಬಿಕ್ಕಟ್ಟಿನತ್ತ ಜನಸಾಮಾನ್ಯರ ಬದುಕು
ಸರ್ಕಾರವು ಇಂಧನ ಕೊರತೆಯ ಹಾನಿಯನ್ನು ತಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಜನರಿಗೆ ಭರವಸೆ ನೀಡುವ ಬದಲಾಗಿ, ಪ್ರತಿಯೊಬ್ಬ ನಾಗರಿಕನೂ ಎಲ್ಲೆಲ್ಲಿ ವೆಚ್ಚ ಕಡಿತಗೊಳಿಸಬೇಕು ಎಂಬ ಪಟ್ಟಿಯನ್ನು ಮೋದಿ ಸರ್ಕಾರ ನೀಡುತ್ತಿದೆ. ಇದು ದೇಶದ ಜಿಡಿಪಿ ಮೌಲ್ಯವು ಮತ್ತಷ್ಟು-ಮೊಗದಷ್ಟು ಕುಸಿಯುವಂತೆ ಮಾಡುತ್ತಿದೆ.
ಮೋದಿ ಅವರು ಪ್ರಸ್ತುತ ಪರಿಸ್ಥಿತಿಯನ್ನು ‘ಕೋವಿಡ್ ಮಾದರಿ’ಯಲ್ಲಿ ನಿರ್ವಹಿಸುವಂತೆ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳಿಂದಾಗಿ ಷೇರು ಮಾರುಕಟ್ಟೆ ಏರುಪೇರಾಗಿ, ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ. ಏಷ್ಯಾದಲ್ಲಿಯೇ ಅತ್ಯಂತ ಕಳಪೆ ಕರೆನ್ಸಿಯಾಗಿ ರೂಪಾಯಿ ಗುರುತಿಸಿಕೊಂಡಿದೆ.
ಮತ್ತೊಂದು ಹಾಸ್ಯಾಸ್ಪದವೆಂದರೆ, ಜನಸಾಮಾನ್ಯರಿಗೆ ಇಂಧನ ಬಳಕೆಯನ್ನು ಕಡಿಮೆ ಮಾಡಲು, ಸಾರ್ವಜನಿಕ ಸಾರಿಗೆ ಬಳಸಲು ಮತ್ತು ವರ್ಚುವಲ್ ಸಭೆಗಳನ್ನು ನಡೆಸಲು ಕರೆ ಕೊಟ್ಟಿರುವ ಮೋದಿ, ತಾವೇ ಸ್ವತಃ ಸತತವಾಗಿ ವಿಮಾನಗಳು, ಹೆಲಿಕಾಪ್ಟರ್‌ಗಳು ಹಾಗೂ ಬೆಂಗಾವಲು ವಾಹನಗಳ ದೊಡ್ಡ ದಂಡಿನೊಂದಿಗೆ ವಿವಿಧ ರಾಜ್ಯಗಳಲ್ಲಿ ಬೃಹತ್ ರಾಜಕೀಯ ರ್‍ಯಾಲಿಗಳು, ರೋಡ್‌ಶೋಗಳು ಹಾಗೂ ವಿದೇಶಿ ಪ್ರವಾಸಗಳನ್ನು ನಡೆಸುತ್ತಿದ್ದಾರೆ. ಮೋದಿ ಮನವಿಗೆ ಮೋದಿಯೇ ಡಿಕ್ಕಿ ಹೊಡೆಯುತ್ತಿದ್ದಾರೆ.
ಮೋದಿ ಮತ್ತು ಅವರ ಸರ್ಕಾರವು ಪ್ರಸ್ತುತ ಇಂಧನ ಮತ್ತು ಆರ್ಥಿಕ ಬಿಕ್ಕಟ್ಟಿಗೆ ದೂರದ ಗುಮ್ಮನನ್ನು ತೋರಿಸಿ, ಸಮಸ್ಯೆಗಳಿಗೆ ಬೆನ್ನು ಹಾಕಿ ಪರಾರಿಯಾಗುವ ಪ್ರವೃತ್ತಿಯನ್ನು ಬಿಡಬೇಕು. ಬಿಕ್ಕಟ್ಟಿನ ಹೊರೆಯನ್ನು ಜನಸಾಮಾನ್ಯರ ಮೇಲೆ ಹೇರದೆ, ತಕ್ಷಣವೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಬೇಕು. ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಪಾಶ್ಚಿಮಾತ್ಯ ದೇಶಗಳ ಒತ್ತಡಕ್ಕೆ ಮಣಿಯದೆ ಇರಾನ್, ರಷ್ಯಾದಂತಹ ರಾಷ್ಟ್ರಗಳಿಂದ ರೂಪಾಯಿ ಆಧರಿತ ವ್ಯಾಪಾರ ಅಥವಾ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಆಮದನ್ನು ಹೆಚ್ಚಿಸಿ ಇಂಧನ ಭದ್ರತೆ ಕಾಪಾಡಬೇಕು. ಜನರಿಗೆ ಮಿತವ್ಯಯದ ಪಾಠ ಹೇಳುವ ಮುನ್ನ ಸರ್ಕಾರಿ ವೆಚ್ಚಗಳು ಮತ್ತು ಅದ್ದೂರಿ ರಾಜಕೀಯ ಪ್ರಚಾರಗಳನ್ನು ತಗ್ಗಿಸಿ, ಜನರೊಂದಿಗೆ ನಿಲ್ಲುವಂತಾಗಬೇಕು.



