ಈ ದಿನ ಸಂಪಾದಕೀಯ | ಅರ್ಚಕರಾಗಿ ದಲಿತರು, ಮಹಿಳೆಯರ ನೇಮಕ ಕ್ರಾಂತಿಕಾರಿ ಹೆಜ್ಜೆಯೇ? ದೇಶ ಬದಲಾಯಿತೇ?

Date:

1972ರಿಂದ 2023ರವರೆಗಿನ ನಿರಂತರ ಹೋರಾಟದಿಂದ; ದೇವಸ್ಥಾನಗಳಲ್ಲಿ ಅರ್ಚಕರಾಗಿ ದಲಿತರು ಮತ್ತು ಮಹಿಳೆಯರ ನೇಮಕವಾದರೆ ಹೊರತು, ಅದು ದೇವರಲ್ಲ ಕಲ್ಲು ಎಂದು ಕರೆಯುವಷ್ಟು ಜನ ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡು ಬದಲಾಗಲಿಲ್ಲ. ಜನ ಬದಲಾಗದ ಹೊರತು, ತಮ್ಮ ತಲೆಯನ್ನು ತಾವು ಸರಿಪಡಿಸಿಕೊಳ್ಳದ ಹೊರತು, ಯಾವ ಕ್ರಾಂತಿಕಾರಿ ಕಾಯ್ದೆಗಳೂ ಕೂಡ ಈ ದೇಶವನ್ನು ಬದಲಾಯಿಸುವುದಿಲ್ಲ.

ಕಳೆದ ವಾರ ತಮಿಳುನಾಡು ರಾಜ್ಯ ಸರ್ಕಾರ ಮೂವರು ಮಹಿಳೆಯರಿಗೆ- ಕೃಷ್ಣವೇಣಿ, ರಮ್ಯಾ ಮತ್ತು ರಂಜಿತಾರಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿನಿಧಿ ಇಲಾಖೆಯಡಿ ಬರುವ ದೇವಾಲಯಗಳಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸಲು ಪ್ರಮಾಣಪತ್ರ ನೀಡಿ ನೇಮಕ ಮಾಡಿದೆ.

ದ್ರಾವಿಡ ಮಾದರಿಯ ಆಡಳಿತದಲ್ಲಿ ಮಹಿಳಾ ಅರ್ಚಕರು ಕೂಡ ಪೂಜೆ ಮಾಡಲಿದ್ದಾರೆ. ಎಲ್ಲ ಜಾತಿಯ ಜನರನ್ನು ದೇವಾಲಯಗಳಿಗೆ ಅರ್ಚಕರಾಗಿ ನೇಮಿಸುವ ಮೂಲಕ ಪೆರಿಯಾರ್ ಅವರ ಹೃದಯದ ಮುಳ್ಳು ತೆಗೆದಿದ್ದೇವೆ. ಮಹಿಳೆಯರು ಕೂಡ ಗರ್ಭಗುಡಿಗೆ ಪ್ರವೇಶ ಮಾಡುವ ಮೂಲಕ ಸಮಾನತೆಯ ಯುಗವನ್ನು ತರುತ್ತಿದ್ದೇವೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

ಸದ್ಯದ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌, ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಕರುಣಾನಿದಿಯವರ ಪುತ್ರ. ಕರುಣಾನಿದಿಗೆ ಸಿಕ್ಕಿದ್ದು ಮೌಢ್ಯವಿರೋಧಿ ಮಹಾನಾಯಕ ಪೆರಿಯಾರ್‌ ಪ್ರೇರಣೆ. ಪೆರಿಯಾರ್‌, ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಮತ್ತು ತಮಿಳು ಸ್ವಾಭಿಮಾನಿ ಚಳವಳಿಯ ನಾಯಕ. ಸಾಮಾಜಿಕ ಪರಿವರ್ತನೆಯ ಹರಿಕಾರ. ಹೀಗೆ ಇವತ್ತಿನ ಮಹಿಳಾ ಅರ್ಚಕರ ನೇಮಕದ ಹಿಂದೆ ಬಹಳ ದೊಡ್ಡ ಇತಿಹಾಸ ಹಾಗೂ ವೈದಿಕ ವಿರೋಧಿ ಹೋರಾಟದ ಕಥನವಿದೆ. 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದೇವಸ್ಥಾನಗಳ ಗರ್ಭಗುಡಿ ಪ್ರವೇಶ ಮತ್ತು ದೇವರಿಗೆ ಪೂಜೆ, ಅರ್ಚನೆ, ಹೋಮ, ಹವನಗಳನ್ನು ಮೇಲ್ಜಾತಿಯ ಬ್ರಾಹ್ಮಣರು ಮಾತ್ರ ಮಾಡಲು ಅರ್ಹರು ಮತ್ತು ಯೋಗ್ಯರು ಎನ್ನುವುದು ಕಾಲದಿಂದ ಬಂದ ಅಲಿಖಿತ ಕಾಯ್ದೆ. ಈ ಅಲಿಖಿತ ಕಾಯ್ದೆಯನ್ನು ಮೊದಲ ಬಾರಿಗೆ ಪ್ರಶ್ನಿಸಿದವರು ಪೆರಿಯಾರ್.‌ ಅವರ ನಂತರ ಸರ್ಕಾರದ ಭಾಗವಾಗಿ, ಅದನ್ನು ಕಾಯ್ದೆಯನ್ನಾಗಿ ಮಾಡಿದ ಕೀರ್ತಿ ಕರುಣಾನಿಧಿಯವರಿಗೆ ಸಲ್ಲಬೇಕು.

1969ರಲ್ಲಿ ಮುಖ್ಯಮಂತ್ರಿ ಅಣ್ಣಾ ದೊರೈ ನಿಧನರಾದಾಗ, ಲೋಕೋಪಯೋಗಿ ಸಚಿವರಾಗಿದ್ದ ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನಕ್ಕೇರುತ್ತಾರೆ. ಆ ಕಾಲಕ್ಕೇ ಸಾಮಾಜಿಕ ಕಾಳಜಿ, ಕ್ರಾಂತಿಕಾರಿ ಹೋರಾಟ, ಪ್ರಖರ ವಿಚಾರ ಮಂಡನೆಗೆ ಹೆಸರಾಗಿದ್ದ ಕರುಣಾನಿಧಿಯವರು 1971ರಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಾರೆ. 1972ರಲ್ಲಿ ‘ತಮಿಳುನಾಡಿನ ದೇವಾಲಯಗಳಲ್ಲಿ ಪೌರೋಹಿತ್ಯ ಮಾಡಲು ಬ್ರಾಹ್ಮಣರೇ ಆಗಬೇಕಿಲ್ಲ. ಹಿಂದೂ ಧರ್ಮದ ಎಲ್ಲ ಜಾತಿಯ ಜನರೂ ಪೌರೋಹಿತ್ಯವನ್ನ ಮಾಡಬಹುದು’ ಎಂಬ ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ- ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಯನ್ನು ಹುಟ್ಟುಹಾಕಿ, ಜನರಲ್ಲಿ ಜಾಗೃತಿ ಉಂಟುಮಾಡಿದ್ದ ಪೆರಿಯಾರ್ ರಾಮಸ್ವಾಮಿಯವರ ಕ್ರಾಂತಿಕಾರಿ ಚಿಂತನೆಗೆ ಕಾಯ್ದೆಯ ಮನ್ನಣೆ ನೀಡುತ್ತಾರೆ. ವೈದಿಕರಷ್ಟೇ ಶ್ರೇಷ್ಠ ಎನ್ನುವ ಭಾವನೆ ಹೋಗಲಾಡಿಸಲು ಮತ್ತು ಗೊಡ್ಡು ಸಂಪ್ರದಾಯ, ಮೌಢ್ಯಾಚರಣೆ ತೊಲಗಿಸಲು ಶಕ್ತಿಮೀರಿ ಶ್ರಮಿಸುತ್ತಾರೆ. ಆದರೆ ಈ ಆದೇಶ ಕರ್ಮಠರ ಕಟು ಟೀಕೆಗೆ ಒಳಗಾಗುತ್ತದೆ, ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ಸರಕಾರಿ ಆದೇಶ ತಡೆ ಹಿಡಿಯಲ್ಪಡುತ್ತದೆ.

1972ರಲ್ಲಾದ ಈ ಹಿನ್ನಡೆಗೆ ಕರುಣಾನಿಧಿಯವರು 2006 ರವರೆಗೂ ಕಾಯುತ್ತಾರೆ. ಐದನೇ ಬಾರಿಗೆ ತಮಿಳುನಾಡಿಗೆ ಮುಖ್ಯಮಂತ್ರಿಯಾದಾಗ ತಮ್ಮ ಹಳೆಯ ಕ್ರಾಂತಿಕಾರಿ ಆದೇಶಕ್ಕೆ ಚಾಲನೆ ನೀಡುತ್ತಾರೆ. ಸರಕಾರದ ವತಿಯಿಂದಲೇ ಬ್ರಾಹ್ಮಣೇತರರಿಗೆ ಪೌರೋಹಿತ್ಯದ ತರಬೇತಿ ನೀಡುವ ಆಗಮ ಕೇಂದ್ರಗಳನ್ನು ಸ್ಥಾಪಿಸುತ್ತಾರೆ. ಆಗಮಶಾಸ್ತ್ರ ಕಲಿಸುವ ಕೇಂದ್ರಗಳಲ್ಲಿ ಅರ್ಚಕರಿಗೆ ದೇವಾಲಯದ ನಿರ್ಮಾಣ, ದೇವತಾ ಪೂಜೆ, ವಿಗ್ರಹಗಳ ಸ್ಥಾಪನೆ ಮತ್ತು ಪೂಜೆಯ ನಡವಳಿಕೆಯ ತರಬೇತಿ ನೀಡಲಾಗುತ್ತದೆ. ಆ ಕಾಲಕ್ಕೇ, ದಲಿತರೂ ಒಳಗೊಂಡಂತೆ 206 ವ್ಯಕ್ತಿಗಳ ತರಬೇತಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಈ ನಡುವೆ, 2008 ರಲ್ಲಿ, ಅರ್ಚಕರಾಗಿದ್ದ ತನ್ನ ತಂದೆ ಮರಣಹೊಂದಿದ ನಂತರ ಮಗಳಿಗೆ ಅರ್ಚಕರಾಗಿ ದೇವಾಲಯದಲ್ಲಿ ಪೂಜೆ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡುತ್ತದೆ. ಇದು ಮಹಿಳೆಯರು ಕೂಡ ಅರ್ಚಕರಾಗಬಹುದೆಂಬ ವಿಚಾರ ಮುನ್ನಲೆಗೆ ಬರುವುದಕ್ಕೆ ಕಾರಣವಾಗುತ್ತದೆ. ಆದರೆ ತಮಿಳುನಾಡಿನಲ್ಲಿ ಕರುಪ್ಪಣ್ಣಸ್ವಾಮಿ, ಮಾರಿಯಮ್ಮ ಮತ್ತು ಸುಡಲೈ ಉಪಸಂಸ್ಕೃತಿ ದೇವತೆಗಳನ್ನು ಹೊಂದಿರುವ ಗ್ರಾಮೀಣ ದೇವಾಲಯಗಳಲ್ಲಿ ಹಲವಾರು ಮಹಿಳೆಯರು ಅರ್ಚಕರಾಗಿ ಕೆಲಸ ಮಾಡುತ್ತಿದ್ದರೂ, ಕಟ್ಟುನಿಟ್ಟಾದ ಆಗಮ ಆಚರಣೆಗಳನ್ನು ಮಾಡುವ ಇತರ ದೇವಾಲಯಗಳಲ್ಲಿ ಅವರನ್ನು ಅರ್ಚಕರನ್ನಾಗಿ ಸ್ವೀಕರಿಸುವುದಿಲ್ಲ. ಅಲ್ಲಿ ಏನಿದ್ದರೂ ಬ್ರಾಹ್ಮಣ ಪುರುಷರೇ ಪುರೋಹಿತರು. ಅವರದೇ ಪಾರುಪತ್ಯ.

ಕೊನೆಗೆ ಸುಪ್ರೀಂ ಕೋರ್ಟ್ 2015ರಲ್ಲಿ ʻಆಗಮಶಾಸ್ತ್ರಗಳನ್ನು ಅಭ್ಯಾಸ ಮಾಡಿದ ಅರ್ಹ ವ್ಯಕ್ತಿಯನ್ನು ಪೌರೋಹಿತ್ಯ ಮಾಡಲು ನೇಮಕ ಮಾಡಬಹುದು’ ಎಂದು ಆದೇಶ ಹೊರಡಿಸುತ್ತದೆ. ಆದರೆ ಸರಕಾರ ಬದಲಾಗಿ, ಬ್ರಾಹ್ಮಣೇತರ ಪುರೋಹಿತರನ್ನು ನೇಮಕ ಮಾಡಲು ಮೀನಮೇಷ ಎಣಿಸುತ್ತಲೇ ಬಂದು, ಕೊನೆಗೆ 2018ರ ಮಾರ್ಚ್ 1ನೇ ತಾರೀಕಿನಂದು ಮಧುರೈನ ತಾಲ್ಲಕುಲಮ್ ಅಯ್ಯಪ್ಪನ್ ದೇವಾಲಯಕ್ಕೆ ಅಬ್ರಾಹ್ಮಣರನ್ನು ಅರ್ಚಕರಾಗಿ ನೇಮಕ ಮಾಡುತ್ತದೆ.

ಇದು ನಿಜಕ್ಕೂ ಪೆರಿಯಾರ್ ಕನಸನ್ನು ಕರುಣಾನಿಧಿಯವರು ನನಸು ಮಾಡಿದ, ತಮಿಳುನಾಡಿನ ಸಾಮಾಜಿಕ ಬದುಕಿನಲ್ಲಾದ ಬಹುಮುಖ್ಯ ಬದಲಾವಣೆ. ಅದರ ಹಿಂದೆ ಕರುಣಾನಿಧಿಯವರ ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಇದೆ. ಆದರೆ, 1972ರಿಂದ 2023ರವರೆಗಿನ ನಿರಂತರ ಹೋರಾಟದಿಂದ; ದೇವಸ್ಥಾನಗಳಲ್ಲಿ ಅರ್ಚಕರಾಗಿ ದಲಿತರು ಮತ್ತು ಮಹಿಳೆಯರ ನೇಮಕವಾದರೆ ಹೊರತು, ಬ್ರಾಹ್ಮಣರೇ ಅದು ದೇವರಲ್ಲ ಕಲ್ಲು ಎನ್ನುತ್ತಾರೆ, ಜನ ದೇವರು-ದೇವಸ್ಥಾನದಿಂದ ದೂರ ಉಳಿಯುತ್ತಾರೆ ಎಂಬ ಪೆರಿಯಾರ್ ಆಶಯ ಈಡೇರಲಿಲ್ಲ. ಧರ್ಮ, ದೇವರು, ದೇವಸ್ಥಾನಗಳು, ಭಕ್ತರ ಸಂಖ್ಯೆಯೇನು ಕಡಿಮೆಯಾಗಲಿಲ್ಲ. ಜನ ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡು ಬದಲಾಗಲಿಲ್ಲ. ಬದಲಾಗಿದ್ದರೆ, ಕರುಣಾನಿಧಿಯವರ ಮೂರನೇ ತಲೆಮಾರಾದ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಬಗ್ಗೆ ಈಗ ಇಷ್ಟು ಕಟುವಾಗಿ ಮಾತನಾಡುವ ಅಗತ್ಯವಿರಲಿಲ್ಲ.

ಜನ ಬದಲಾಗದ ಹೊರತು, ತಮ್ಮ ತಲೆಯನ್ನು ತಾವು ಸರಿಪಡಿಸಿಕೊಳ್ಳದ ಹೊರತು, ಯಾವ ಕ್ರಾಂತಿಕಾರಿ ಕಾಯ್ದೆಗಳೂ ಕೂಡ ಈ ದೇಶವನ್ನು ಬದಲಾಯಿಸುವುದಿಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರೈತರ ವಿರುದ್ಧ ʼರಾಷ್ಟ್ರೀಯ ಭದ್ರತಾ ಕಾಯ್ದೆʼ ಅಸ್ತ್ರ ಪ್ರಯೋಗ; ಪ್ರಜಾಪ್ರಭುತ್ವದ ಅಣಕ

ಈಗಾಗಲೇ ಮೋದಿಯವರ ಮಾತು ನಂಬಿ ಅದಾನಿ ಕಂಪನಿ ದೇಶದೆಲ್ಲೆಡೆ ಗೋದಾಮುಗಳನ್ನು ನಿರ್ಮಾಣ...

ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ...

ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ

ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್- ಯಾವ ಪಕ್ಷವಾದರೂ, ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ...

ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಬೇರೂರಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸರಕಾರ...