ಈ ದಿನ ಸಂಪಾದಕೀಯ | ಬಿಜೆಪಿಯ ಹಾದಿ ಹಿಡಿದರೆ ಕಾಂಗ್ರೆಸ್‌ನ ಸೊಂಟವನ್ನೂ ಮುರಿದೀತು ಜನಶಕ್ತಿ!

Date:

ಕಾಂಗ್ರೆಸ್ಸಿಗರು ಅಧಿಕಾರದ ಕಚ್ಚಾಟದಲ್ಲೇ ಕಾಲ ಕಳೆಯಕೂಡದು. ಕನ್ನಡ ಜನ ತಮ್ಮ ಮೇಲೆ ಇರಿಸಿರುವ ನಂಬಿಕೆಗೆ ಭಂಗ ತರಕೂಡದು. ಹಾಗೇನಾದರೂ ಮಾಡಿದರೆ ಸುಲಭದಲ್ಲಿ ಅವರಿಗೆ ಕ್ಷಮೆ ಸಿಗುವುದಿಲ್ಲ.

ಬಿಜೆಪಿಯ ವಿರುದ್ಧ ನಿರ್ಣಾಯಕ ಜನಾದೇಶ ಪಡೆದ ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯುವ ಗಳಿಗೆಗಳು ಸಮೀಪಿಸುತ್ತಿವೆ.

ನಾಲ್ಕು ದಿನಗಳ ಕಾಲ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಜರುಗಿದ ತುರುಸಿನ ಪೈಪೋಟಿಯ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರಸ್ಪರರನ್ನು ಆಲಿಂಗಿಸಿ ಅಭಿನಂದಿಸಿದ್ದಾರೆ.

ಒಗ್ಗಟ್ಟಿನಿಂದ ಜನಸೇವೆಗೆ ತೊಡಗುವುದಾಗಿ ಸಾರಿದ್ದಾರೆ. ಶಿವಕುಮಾರ್ ಬಂಡಾಯದ ಬಾವುಟ ಹಾರಿಸುತ್ತಾರೆ, ಕಾಂಗ್ರೆಸ್ ಪಕ್ಷಕ್ಕೆ ದೊರೆತ ಜನಾದೇಶ ಛಿದ್ರವಾಗುತ್ತದೆ ಅಥವಾ ಶಿವಕುಮಾರ್ ಹಟ ಹಿಡಿದು ತಾವೇ ಮುಖ್ಯಮಂತ್ರಿಯಾಗುತ್ತಾರೆ. ಕೇಸುಗಳನ್ನು ಬಡಿದೆಬ್ಬಿಸಿ ಅವರನ್ನೂ, ಕಾಂಗ್ರೆಸ್ ಪಕ್ಷವನ್ನೂ ಹಣಿದು ಮುಜುಗರಕ್ಕೆ ಒಡ್ಡಬಹುದು ಎಂಬೆಲ್ಲ ನಿರೀಕ್ಷೆಗಳ ಮೇಲೆ ತಣ್ಣೀರು ಬಿದ್ದಿದೆ.

ರಾಜಕೀಯ ಪಕ್ಷಗಳಲ್ಲಿ ಹುದ್ದೆಗಳಿಗಾಗಿ ಅಧಿಕಾರಕ್ಕಾಗಿ ಆಂತರಿಕ ಪೈಪೋಟಿ ಸ್ವಾಭಾವಿಕ. ಆದರೆ ಅದು ಪಕ್ಷವನ್ನು ಒಡೆಯುವ ಹಂತ ತಲುಪಿದರೆ ಅನಾರೋಗ್ಯಕರ. ಮುಖ್ಯಮಂತ್ರಿ ಹುದ್ದೆ ತಮಗೇ ಸಿಗಬೇಕೆಂಬ ಶಿವಕುಮಾರ್ ಬಯಕೆ ತಪ್ಪೇನೂ ಅಲ್ಲ.

ಐದು ವರ್ಷಗಳ ಅವಧಿಯನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಹಂಚಿಕೊಳ್ಳಬೇಕೆಂಬ ಸೂತ್ರವೇನಾದರೂ ಇದ್ದಲ್ಲಿ, ಅದೂ ನ್ಯಾಯಸಮ್ಮತವೇ. ಕಾಂಗ್ರೆಸ್ ಪಕ್ಷದಲ್ಲಿ ಅದನ್ನು ದನಿಯೆತ್ತಿ ವಿರೋಧಿಸುವವರು ಯಾರೂ ಇರಲಿಲ್ಲ.

ಅಧಿಕಾರ ಸಂಘರ್ಷ ಇಲ್ಲದ ರಾಜಕಾರಣ ಅಥವಾ ರಾಜಕೀಯ ಪಕ್ಷ ಯಾವುದಾದರೂ ಇದೆಯೆಂಬ ಮಾತು ಸತ್ಯದೂರ. ಕಡೆಯ ನಿಮಿಷದ ತನಕ ಚೌಕಾಶಿ ನಡೆಸಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕಡೆಗೂ ತಮ್ಮ ವರಿಷ್ಠರ ಮಾತಿಗೆ ತಲೆಬಾಗಿದ್ದಾರೆ.

ತಮ್ಮ ಮೇಲಿನ ಕೇಸುಗಳ ಕುರಿತು ಮತ್ತು ಅವುಗಳ ನೆವದಲ್ಲಿ ತಮ್ಮನ್ನು ಹಣಿಯಲು ಸಜ್ಜಾಗಿರುವ ಶಕ್ತಿಗಳ ಕುರಿತು ಶಿವಕುಮಾರ್ ಚೆನ್ನಾಗಿ ಬಲ್ಲರು. ಪ್ರಾಯಶಃ ಎರಡನೆಯ ಅವಧಿಗೆ ತಮ್ಮನ್ನು ಮುಖ್ಯಮಂತ್ರಿ ಮಾಡುತ್ತಾರೆಂಬ ಗಟ್ಟಿ ಆಶ್ವಾಸನೆಯನ್ನು ವರಿಷ್ಠರಿಂದ ಪಡೆಯಲೋಸುಗ ಅವರು ಕಠಿಣ ಚೌಕಾಶಿಯಲ್ಲಿ ತೊಡಗಿದ್ದಿರಬಹುದು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಐದು ಗ್ಯಾರಂಟಿಗಳನ್ನು ಮತದಾರರಿಗೆ ನೀಡಿರುವ ಶಿವಕುಮಾರ್, ತಮ್ಮ ವರಿಷ್ಠರಿಂದ ತಾವೂ ಒಂದು ‘ಗ್ಯಾರಂಟಿ’ಯನ್ನು ಪಡೆದುಕೊಂಡಂತಿದೆ. ಇಂತಹ ಗ್ಯಾರಂಟಿಯನ್ನು ಕೊಟ್ಟವರಾಗಲಿ, ಪಡೆದುಕೊಂಡವರಾಗಲಿ ಅದನ್ನು ಹೊರಜಗತ್ತಿಗೆ ತಿಳಿಸಲಾರರು. ಪ್ರಾಯಶಃ ಈಡೇರಿಕೆಯ ಹಂತದಲ್ಲಿ ಬಿಕ್ಕಳಿಕೆಗಳು ಶುರುವಾದರೆ ಆಗ ವಿವರಗಳು ಬಟಾಬಯಲಾಗುತ್ತವೆ.

ಸಿದ್ದರಾಮಯ್ಯ ಅವರ ಜನಪ್ರಿಯತೆ ಮತ್ತು ಡಿ.ಕೆ.ಶಿವಕುಮಾರ್ ಅವರ ಸಂಪನ್ಮೂಲ ಮತ್ತು ಸಂಘಟನಾ ಸಾಮರ್ಥ್ಯಗಳು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಸಾಕಷ್ಟು ಮಟ್ಟಿಗೆ ಕೆಲಸ ಮಾಡಿರಬಹುದು. ಆದರೆ ಇಡೀ ಗೆಲುವು ಕೇವಲ ಇವರಿಬ್ಬರ ಗೆಲುವಲ್ಲ. ಕರ್ನಾಟಕದ ದೀನದುರ್ಬಲರ, ಜಾತ್ಯತೀತರ ಗೆಲುವು. ದಲಿತ ಸಂಘಟನೆಗಳ ಬಲ, ಬಹುತ್ವ ಕರ್ನಾಟಕ, ಎದ್ದೇಳು ಕರ್ನಾಟಕದಂತಹ ನಾಗರಿಕ ಸಂಘಟನೆಗಳ ಶ್ರಮ, ಹಿಂದುಳಿದ ವರ್ಗಗಳು ಮತ್ತು ಲಿಂಗಾಯತ ಸಮಾಜದ ಬೆಂಬಲದ ಜೊತೆಗೆ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯೂ ತುಸುಮಟ್ಟಿಗೆ ಪಾತ್ರವಹಿಸಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ದುರಾಡಳಿತದ ವಿರುದ್ಧ ಭುಗಿಲೆದ್ದ ಆಡಳಿತ ವಿರೋಧಿ ಆಕ್ರೋಶ ಬಿಜೆಪಿಯನ್ನು ನೆಲಕಚ್ಚಿಸಿದೆ. ಹೀಗಾಗಿ ಇದು ಸಮಷ್ಟಿಯ ಗೆಲುವು. ಈ ವಾಸ್ತವಾಂಶವನ್ನು ಇಬ್ಬರೂ ನಾಯಕರು ಅರಿಯುವುದು ಒಳಿತು.

ಅಧಿಕಾರದ ಪೈಪೋಟಿಯ ಒಂದು ಆರಂಭಿಕ ಅಧ್ಯಾಯ ಮುಗಿದಿದೆ. ಖಾತೆಗಳ ಹಂಚಿಕೆಯ ಮತ್ತೊಂದು ಪ್ರಮುಖ ಅಧ್ಯಾಯ ಇನ್ನೇನು ಸುರುಳಿ ಬಿಚ್ಚಲಿದೆ. ಕಾಂಗ್ರೆಸ್ ಪಕ್ಷಕ್ಕೆ ಲಭಿಸಿರುವ ದೊಡ್ಡ ಬಹುಮತ ಈ ಕೆಲಸವನ್ನು ಮತ್ತಷ್ಟು ಜಟಿಲಗೊಳಿಸಲಿದೆ. ಪ್ರದೇಶವಾರು, ಜಾತಿವಾರು, ಕೋಮುವಾರು ಹಂಚಿಕೆಯ ಕೆಲಸ ಹಗ್ಗದ ಮೇಲಿನ ನಡಿಗೆ. ಆಗ ಮತ್ತಷ್ಟು ಅಸಮಾಧಾನ, ಆಕ್ರೋಶ ಭುಗಿಲೇಳುವುದನ್ನು ಈಗಲೇ ನಿರೀಕ್ಷಿಸಬಹುದಾಗಿದೆ.

ಆದರೆ ಕಾಂಗ್ರೆಸ್ಸಿಗರು ಅಧಿಕಾರದ ಕಚ್ಚಾಟದಲ್ಲೇ ಕಾಲ ಕಳೆಯಕೂಡದು. ಕನ್ನಡ ಜನ ತಮ್ಮ ಮೇಲೆ ಇರಿಸಿರುವ ನಂಬಿಕೆಗೆ ಭಂಗ ತರಕೂಡದು. ಹಾಗೇನಾದರೂ ಮಾಡಿದರೆ ಸುಲಭದಲ್ಲಿ ಅವರಿಗೆ ಕ್ಷಮೆ ಸಿಗುವುದಿಲ್ಲ. ವರ್ಷದೊಪ್ಪತ್ತಿನಲ್ಲೇ ಲೋಕಸಭಾ ಚುನಾವಣೆ ನಡೆಯಲಿದೆ. ಭಾರೀ ಬಹುಮತದ ಬಹುಮಾನ ನೀಡಿರುವ ಇದೇ ಮತದಾರರು, ಮಾತು ತಪ್ಪಿ ನಡೆಯುವವರನ್ನು ಕಠಿಣವಾಗಿ ಶಿಕ್ಷಿಸಲೂ ಬಲ್ಲರು ಎಂಬುದು ನೆನಪಿರಲಿ.

ಶೇ.40ರ ಬಿಜೆಪಿ ಭ್ರಷ್ಟಾಚಾರವನ್ನು ಚುನಾವಣೆಯ ಅಸ್ತ್ರವನ್ನಾಗಿಸಿ ಬಳಸಿಕೊಂಡಿದ್ದರು ಕಾಂಗ್ರೆಸ್ಸಿಗರು. ಅಧಿಕಾರ ಕೈಗೆ ಬಂದೊಡನೆ ಈ ಅಂಶ ಮರೆತು ತಾವೂ ಇಂತಹುದೇ ಭ್ರಷ್ಟಾಚಾರದಲ್ಲಿ ಮುಳುಗುವುದು, ಬೆಲೆ ಏರಿಕೆಯ ಬೇಗೆಯಲ್ಲಿ ಬೆಂದವರಿಗೆ ಆಸರೆಯಾಗದೆ, ಹಿಂದಿನ ಸರ್ಕಾರ ನಿರ್ಮಿಸಿರುವ ಕೋಮುವಾದಿ ಕೆಂಡದ ಹೊಂಡಗಳನ್ನು ನಂದಿಸದೆ, ಅಧಿಕಾರದ ಅಮಲಿನಲ್ಲಿ ಮುಳುಗಿ ತೇಲಿದರೆ ವಿನಾಶ ನಿಶ್ಚಿತ.

ಆಂತರಿಕ ಭಿನ್ನಾಭಿಪ್ರಾಯಗಳು, ಭಿನ್ನಮತಗಳು ಸ್ವಾಭಾವಿಕ. ಅವುಗಳನ್ನು ಚುರುಕಾಗಿ ಬಗೆಹರಿಸಿಕೊಂಡು ಜನಸೇವೆಗೆ ಟೊಂಕ ಕಟ್ಟಬೇಕು. ಇಲ್ಲವಾದರೆ ಕಾಂಗ್ರೆಸ್ಸಿನ ಸೊಂಟವನ್ನೂ ಮುರಿದೀತು ಜನಶಕ್ತಿ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕರಾವಳಿಯ ಜನ ಹಿಂದುತ್ವದ ನಶೆಯಿಂದ ಹೊರಬರಲು ಇದು ʼಚೈತ್ರಕಾಲʼ

ಬಿಜೆಪಿ ತನ್ನ ಕೇಸರಿ ಪ್ರಯೋಗಶಾಲೆಯಲ್ಲಿ ಹಲವು ಉಗ್ರವಾದಿ ಭಾಷಣಕಾರರನ್ನು ತಯಾರಿಸಿ ಸಮಾಜಕ್ಕೆ ಕೋಮುವಾದಿ...

ಈ ದಿನ ಸಂಪಾದಕೀಯ | ರೈತರ ಆತ್ಮಹತ್ಯೆ ತೀವ್ರ ಹೆಚ್ಚಳ; ಅನ್ನದಾತರ ಬದುಕಿಗೆ ಬೇಕಿದೆ ಭರವಸೆ

ಆಘಾತಕಾರಿ ಮಾಹಿತಿಯೊಂದು ಬಯಲಾಗಿದೆ. 2023ರ ಏಪ್ರಿಲ್‌ನಿಂದ ಇಲ್ಲಿಯವರೆಗೆ 251 ಮಂದಿ ರೈತರು...

ಈ ದಿನ ಸಂಪಾದಕೀಯ | ಯೋಧ ರಾಯಭಾರಿ; ಹಲವು ಕೋನಗಳಿಂದ ಅಪಾಯಕಾರಿ ಈ ಹುಲಿಸವಾರಿ

ಮೋದಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸೈನಿಕರನ್ನು ಬಳಸಿಕೊಳ್ಳುವ ಸೇನೆಯ ಆದೇಶ ಕಳೆದ...

ಈ ದಿನ ಸಂಪಾದಕೀಯ | ಅಸಮಾಧಾನದ ಕಿಡಿ ಜ್ವಾಲೆಯಾಗಿ ಸರ್ಕಾರವನ್ನು ಸುಡದಿರಲಿ

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಪಕ್ಷ ಏನಾದರೂ ಉಸಿರಾಡುತ್ತಿದ್ದರೆ, ಅದು ಕರ್ನಾಟಕದಲ್ಲಿ ಮಾತ್ರ....