ನೆನಪು | ನವೆದು ನೀಗಿಕೊಂಡ ಭಾವಜೀವಿ ಪುಟ್ಟಣ್ಣ ಕಣಗಾಲ್

Date:

ಜೂನ್ 5, ಪುಟ್ಟಣ್ಣ ಕಣಗಾಲ್ ಕಣ್ಮರೆಯಾದ ದಿನ. ಸಿನೆಮಾಗಳ ಕಡುಮೋಹಿಯಾಗಿದ್ದ, ಚಿತ್ರ ನಿರ್ಮಾಣದಲ್ಲಿ ಶಾಸ್ತ್ರೀಯ ಕಲಿಕೆಯನ್ನು ಕರಗತ ಮಾಡಿಕೊಂಡಿದ್ದ, ತಮ್ಮ ಚಿತ್ರಗಳ ಬಗ್ಗೆ ಅತಿಯಾದ ಆತ್ಮವಿಶ್ವಾಸವಿಟ್ಟುಕೊಂಡಿದ್ದ, ನಿರ್ದೇಶಕನಿಗೆ ಘನತೆ ಗೌರವ ತಂದು, ಸಿನೆಮಾ ಎನ್ನುವುದು ನಿರ್ದೇಶಕನ ಮಾಧ್ಯಮ ಎನ್ನುವುದನ್ನು ಸಾಧಿಸಿ ತೋರಿದ ಪುಟ್ಟಣ್ಣ- ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ. 

ಜೂನ್ 5, ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಸುಬ್ರವೇಷ್ಟಿ ರಾಮಸ್ವಾಮಿ ಪುಟ್ಟಣ್ಣ ಕಣಗಾಲ್ ಕಣ್ಮರೆಯಾದ ದಿನ. ಅವರು ಬದುಕಿದ್ದು ಕೇವಲ 53 ವರ್ಷಗಳು. ಹಾಗೆ ನೋಡಿದರೆ ಅದು ಸಾಯುವ ವಯಸ್ಸಲ್ಲ. ಆದರೆ ಭಾವಜೀವಿ ಪುಟ್ಟಣ್ಣ ಬದುಕನ್ನು ಕೂಡ ಭಾವನಾತ್ಮಕ ನೆಲೆಯಲ್ಲಿಯೇ ನೋಡಿ ನವೆದು ನೀಗಿಕೊಂಡರು. ತಮ್ಮ ಬದುಕನ್ನೆ ಮಾನಸ ಸರೋವರ ಚಿತ್ರವನ್ನಾಗಿಸಿ, ಸುಳಿಯಲ್ಲಿ ಸಿಕ್ಕಿ ಸೆರೆಯಾದರು, ಒಳ ತುಮುಲವನ್ನೇ ತೆರೆದಿಟ್ಟು ತಿಳಿಯಾದರು.

ಪುಟ್ಟಣ್ಣ ಎಂದಾಕ್ಷಣ ನೆನಪಿಗೆ ಬರುವುದು ಬೆಳ್ಳಿಮೋಡ, ಗೆಜ್ಜೆಪೂಜೆ, ನಾಗರಹಾವು ಚಿತ್ರಗಳು. 1967ರಲ್ಲಿ ಬಂದ ‘ಬೆಳ್ಳಿಮೋಡ’ ಚಿತ್ರ ತ್ರಿವೇಣಿಯವರ ಕಾದಂಬರಿಯನ್ನು ಆಧರಿಸಿತ್ತು. ಕವಿ ಬೇಂದ್ರೆಯವರ ‘ಮೂಡಣ ಮನೆಯ ಮುತ್ತಿನ ತೇರಿನ’ ಕವನವನ್ನು ಒಳಗೊಂಡಿತ್ತು. ಕಲ್ಪನಾರ ನೈಜ ಅಭಿನಯ ಅನಾವರಣಗೊಂಡಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲರ ಚಿತ್ರಕಶಕ್ತಿಯನ್ನು, ಅಭಿರುಚಿಯನ್ನು ತೆರೆಯ ಮೇಲೆ ತೆರೆದಿಟ್ಟಿತ್ತು. ಈ ಚಿತ್ರ ಅವರ ಮೊದಲ ಚಿತ್ರವಾಗಿದ್ದು, ಸಿನಿಮಾ ತಯಾರಿಕೆಯ ಕುಸುರಿ ಕೆಲಸದಿಂದ ಗೆದ್ದಿತ್ತು. ಹೊಸ ಭರವಸೆಯನ್ನು ಹುಟ್ಟುಹಾಕಿತ್ತು. ಬಹುಕಾಲ ನೆನಪಿಸಿಕೊಳ್ಳುವಂತಹ ಚಿತ್ರಗಳ ಸಾಲಿಗೆ ಸೇರಿತ್ತು.

‘ಬೆಳ್ಳಿ ಮೋಡ’ ಮೊದಲ ಬಾರಿಗೆ ಕನ್ನಡದ ಪ್ರಾದೇಶಿಕತೆಯನ್ನು ಪರಿಚಯಿಸಿದ ಚಿತ್ರ. ಅಂದರೆ, ಜೀವಂತ ಪರಿಸರದ ಪಾತ್ರಗಳನ್ನು ಮೊದಲನೆಯ ಬಾರಿಗೆ ಕನ್ನಡಿಗರು ಅನುಭವಿಸುವಂತೆ ಮಾಡಿದ ಚಿತ್ರ. ಆಧುನಿಕ ಕನ್ನಡ ಸಿನೆಮಾ ಪಡೆದುಕೊಂಡ ಮೊದಲ ತಿರುವನ್ನು ಪುಟ್ಟಣ್ಣ ಕಣಗಾಲರ ‘ಬೆಳ್ಳಿ ಮೋಡ’ ಚಿತ್ರದಲ್ಲಿ ಗುರುತಿಸಬಹುದು. ಹಾಗೆಯೇ ತಮಿಳು ಸಿನೆಮಾಗಳ ಪ್ರಭಾವದಿಂದ ಬಿಡಿಸಿಕೊಂಡ ಸಂಪೂರ್ಣ ಕನ್ನಡದ ಚಿತ್ರವಾಗಿಯೂ ಕೂಡ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಬೆಳ್ಳಿ ಮೋಡ ಚಿತ್ರದಲ್ಲಿ ಕಲ್ಪನಾ
ಬೆಳ್ಳಿ ಮೋಡ ಚಿತ್ರದಲ್ಲಿ ಕಲ್ಪನಾ

ಅಲ್ಲಿಯವರೆಗೂ ಕನ್ನಡ ಚಿತ್ರಗಳು ಮದರಾಸಿನಲ್ಲಿಯೇ ತಯಾರಾಗುತ್ತಿದ್ದದ್ದು ಮಾತ್ರವಲ್ಲ, ತಮಿಳು ಚಿತ್ರಗಳ ಫೋಟೋಕಾಪಿಗಳಂತಿದ್ದವು. ಬೀದಿನಾಟಕಗಳ ಪ್ರಭಾವದಿಂದ ಬಿಡಿಸಿಕೊಳ್ಳದ ತಮಿಳು ಚಿತ್ರರಂಗ ಅಬ್ಬರದ ಅಭಿನಯ-ಸಂಭಾಷಣೆಗಳಿಗೆ ಮಾರುಹೋಗಿತ್ತು. ಆ ಪ್ರಭಾವ ಮತ್ತು ಹಿಡಿತದಿಂದ ಬಿಡಿಸಿಕೊಂಡ ‘ಬೆಳ್ಳಿ ಮೋಡ’ ಚಿತ್ರ, ವಾಣಿಜ್ಯ ಚಿತ್ರಗಳ ಸಂಪ್ರದಾಯಗಳನ್ನು, ಸಿದ್ಧಸೂತ್ರಗಳನ್ನು ಮುರಿದ ಚಿತ್ರವಾಗಿ ದಾಖಲಾಯಿತು.

‘ಬೆಳ್ಳಿ ಮೋಡ’ದ ನಂತರದ ಇಪ್ಪತ್ತು ವರ್ಷಗಳ ಕಾಲ ಪುಟ್ಟಣ್ಣನವರು ನಾಯಕನಟ-ನಟಿಗಿಂತ ಮೀರಿ ಬೆಳೆದಿದ್ದರು. ಸಿನೆಮಾದ ನಿಜವಾದ ಹೀರೋ ನಿರ್ದೇಶಕ ಎಂಬುದನ್ನು ಚಿತ್ರದಿಂದ ಚಿತ್ರಕ್ಕೆ ಸಾಬೀತು ಮಾಡುತ್ತಲೇ ಸಾಗಿದ್ದರು. ಅಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರನಿರ್ದೇಶಕರು ಕನ್ನಡದತ್ತ ಕುತೂಹಲದಿಂದ ನೋಡುವಂತಹ ವಾತಾವರಣ ಸೃಷ್ಟಿಸಿದ್ದರು. ತಮಿಳಿನ ಬಾಲಚಂದರ್, ಭಾರತೀರಾಜ ಮತ್ತು ತೆಲುಗಿನ ಕೆ.ವಿಶ್ವನಾಥ್‌ರಂಥವರೂ ಕೂಡ, ಪುಟ್ಟಣ್ಣನವರ ಚಿತ್ರಗಳನ್ನು ಕಲಿಕೆಗಾಗಿ, ಕಾಣ್ಕೆಗಾಗಿ ಕಾದು ನೋಡುತ್ತಿದ್ದರು. ಕನ್ನಡದ ಸುದ್ದಿ ಮಾಧ್ಯಮಗಳು ಕೂಡ ಅವರ ಬಗ್ಗೆ ಕರುಣೆಯಿಂದಿದ್ದು, ಅವರ ಬೆಳೆವಣಿಗೆಗೆ ಧಾರಾಳವಾಗಿ ನೀರು-ಗೊಬ್ಬರ ಹಾಕಿ ಬೆಳೆಸಿದ್ದವು. ಅದೇ ಸಮಯದಲ್ಲಿ ಅಷ್ಟೇ ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡಿದ್ದ ಸಿದ್ಧಲಿಂಗಯ್ಯನವರ ಬಗ್ಗೆ ಕೊಂಚ ಕುರುಡಾಗಿದ್ದವು.

ಇದನ್ನು ಓದಿದ್ದೀರಾ?: ‘ಈ ದಿನ’ ವಿಶ್ಲೇಷಣೆ | ಮೋದಿತ್ವದ ಅಬ್ಬರಕ್ಕೆ ಲಗಾಮು ಹಾಕಿದ ಅಸಾಧಾರಣ ಜನಾದೇಶ

ಇಂತಹ ಪುಟ್ಟಣ್ಣ ನಿರ್ದೇಶಿಸಿದ ಚಿತ್ರಗಳು ಹಲವಾರು, ಸೃಷ್ಟಿಸಿದ ಪಾತ್ರಗಳು ನೂರಾರು. ಅವರ ರಾಮಾಚಾರಿ, ಜಲೀಲ್, ಚಾಮಯ್ಯ ಮೇಸ್ಟ್ರು- ಇವತ್ತಿಗೂ ಚಿತ್ರರಸಿಕರ ಭಾವಭಿತ್ತಿಯಲ್ಲಿ ಅಚ್ಚಳಿಯದೇ ಉಳಿದಿವೆ. ಶುಭಮಂಗಳದ ಈ ಶತಮಾನದ ಹೆಣ್ಣು, ಎಡಕಲ್ಲು ಗುಡ್ಡದ ಮೇಲಿನ ವಿರಹಿ ಜಯಂತಿ, ರಂಗನಾಯಕಿಯ ಆರತಿ, ಮಾನಸ ಸರೋವರದ ಶ್ರೀನಾಥ್ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಂತಕತೆಗಳಾಗಿ ದಾಖಲಾಗಿಹೋಗಿದ್ದಾರೆ.

ಮೇಲಿನ ಅಷ್ಟೂ ಚಿತ್ರಗಳು ಮತ್ತು ಪಾತ್ರಗಳನ್ನು ಅವಲೋಕಿಸಿದರೆ, ಪುಟ್ಟಣ್ಣನವರ ಶಕ್ತಿ ಇರುವುದು ಕೌಟುಂಬಿಕ ಕಥನಗಳಲ್ಲಿ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಭಾವನಾತ್ಮಕ ಎಳೆಯನ್ನು ವೈಯಕ್ತಿಕ ನೆಲೆಯನ್ನು ತೆರೆಯ ಮೇಲೆ ತರುವುದರಲ್ಲಿರುವ ಅವರ ಅಸಾಧಾರಣ ಪ್ರತಿಭೆ ಎದ್ದು ಕಾಣುತ್ತದೆ. ಆದರೆ ಇವರ ಈ ಪ್ರತಿಭೆ ಮಧ್ಯಮವರ್ಗವನ್ನು ಮೀರಿ ಹೋಗಲಿಲ್ಲ ಎನ್ನುವುದೂ ಗಮನಕ್ಕೆ ಬರುತ್ತದೆ.

ಬಿ.ಆರ್. ಪಂತುಲು ಗರಡಿಯಲ್ಲಿ ಪಳಗಿದ ಪುಟ್ಟಣ್ಣ, ಚಿತ್ರ ನಿರ್ಮಾಣದ ಪ್ರತಿಯೊಂದು ವಿಭಾಗದಲ್ಲಿಯೂ ಪರಿಣತಿ ಪಡೆದಿದ್ದರು. ಸಿನೆಮಾಗಳ ಕಡುಮೋಹಿಯಾಗಿದ್ದರು. ಚಿತ್ರ ನಿರ್ಮಾಣದಲ್ಲಿ ಶಾಸ್ತ್ರೀಯ ಕಲಿಕೆಯನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಚಿತ್ರಗಳ ಬಗ್ಗೆ ಅತಿಯಾದ ಆತ್ಮವಿಶ್ವಾಸವಿಟ್ಟುಕೊಂಡಿದ್ದರು. ನಿರ್ದೇಶಕನಿಗೆ ಘನತೆ ಗೌರವ ತಂದು, ಸಿನೆಮಾ ಎನ್ನುವುದು ನಿರ್ದೇಶಕನ ಮಾಧ್ಯಮ ಎನ್ನುವುದನ್ನು ಸಾಧಿಸಿ ತೋರಿದರು.

ನಾಗರಹಾವು ಚಿತ್ರದಲ್ಲಿ ಅಂಬರೀಷ್, ಎಂ.ಪಿ.ಶಂಕರ್, ವಿಷ್ಣುವರ್ಧನ್
ನಾಗರಹಾವು ಚಿತ್ರದಲ್ಲಿ ಅಂಬರೀಷ್, ಎಂ.ಪಿ.ಶಂಕರ್, ವಿಷ್ಣುವರ್ಧನ್

ಇಂತಹ ಪುಟ್ಟಣ್ಣ ವೈಯಕ್ತಿಕ ಬದುಕಿನಲ್ಲಿ ತಮ್ಮ ಚಿತ್ರಗಳ ಪಾತ್ರಗಳಂತೆಯೇ ಭಾವುಕರಾಗಿದ್ದರು. ತಮ್ಮ ಅಂತಿಮ ದಿನಗಳಲ್ಲಿ ತಾವೇ ಕಟ್ಟಿಸಿದ ತಮ್ಮ ಹೊಸ ಮನೆಯ ಗೃಹಪ್ರವೇಶದಂದು ಇಟ್ಟಿಗೆಯ ಮೇಲೆ ತಲೆ ಇಟ್ಟು, ತಮ್ಮ ಆತ್ಮೀಯ ಗೆಳೆಯ ವಿಜಯನಾರಸಿಂಹರಿಂದ ‘ನೀನೇ ಸಾಕಿದ ಗಿಣಿ’ ಹಾಡು ಬರೆಸಿದ್ದರು. ಆ ಮೂಲಕ ಯಾರಿಗೆ ಸಂದೇಶ ರವಾನಿಸಬೇಕೋ ಅವರಿಗೆ ತಲುಪಿಸಿ ಭಾವನಾತ್ಮಕತೆಗೇ ಬ್ರಾಂಡ್ ಆಗಿದ್ದರು. ಬಯಸಿ ಆ ಬಲೆಯೊಳಗೇ ಬಂದಿಯಾಗಿದ್ದರು. ತಮ್ಮ ಒಳಗಿನ ವೇದನೆ ಹೊರಹಾಕಲು ಸಿನೆಮಾವನ್ನೇ ಬಳಸಿಕೊಂಡಿದ್ದರು.

ಪುಟ್ಟಣ್ಣ ಕಣಗಾಲರು ತೀರಿಹೋದಾಗ ಪಿ. ಲಂಕೇಶರು, ಪುಟ್ಟಣ್ಣ, ಕಲ್ಪನಾ ಮುಂತಾದ ಕಲಾವಿದರು ಒಂದು ರೀತಿಯಲ್ಲಿ ಮರ್ಲಿನ್ ಮನ್ರೋ, ಮೀನಾಕುಮಾರಿಗಳು; ಅವರೇ ಸೃಷ್ಟಿಸಿಕೊಂಡ ಕಲಾಲೋಕದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಸಾವನ್ನು ಜೊತೆಗೇ ಕರೆದುಕೊಂಡು ಓಡಾಡುವ ಕೀಟ್ಸ್, ಶೆಲ್ಲಿ, ಬೋದಿಲೇರ್‌ಗಳು ಎಂದಿದ್ದರು.

ಇಂತಹ ಅಪರೂಪದ ವ್ಯಕ್ತಿತ್ವಗಳನ್ನು ಆಗಾಗ್ಗೆ ನೆನೆಯುವುದು, ನೆನೆಯುತ್ತಲೇ ಅವರ ಶಕ್ತಿ ಮತ್ತು ದೌರ್ಬಲ್ಯಗಳನ್ನು ಆರೋಗ್ಯಕರ ಚರ್ಚೆಯ ಮೂಲಕ ತೂಗಿ ನೋಡುವುದು, ಮುಂದಿನ ಪೀಳಿಗೆಗೆ ಉಪಯುಕ್ತವಾಗುವಂಥದ್ದು.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫಝಲ್ ಕೋಯಮ್ಮ ತಂಙಳ್: ಸರಳ, ನಿಗರ್ವಿ ವಿದ್ವಾಂಸರೊಬ್ಬರ ನಿರ್ಗಮನ

ಜ್ಞಾನಸಂಪನ್ನ ವ್ಯಕ್ತಿಗಳು ಅವರದ್ದೇ ಆದ ಒಂದು ನೆಮ್ಮದಿಯ ಸ್ಥಿತಿಯಲ್ಲಿರುತ್ತಾರೆ. ಸಾವಿರಾರು ಜನರು...

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 10 ಆರೋಪಿಗಳ ಬೆರಳಚ್ಚು ಹೊಂದಾಣಿಕೆ?

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮಾದರಿ, ಬಂಧಿತ ಆರೋಪಿಗಳ ಪೈಕಿ...

ಸತ್ಯ, ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ, ನಾಚಿಕೆಗೇಡು; ಮೋದಿ ವಿರುದ್ಧ ನಟ ಕಿಶೋರ್ ಕಿಡಿ

ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಿಜೆಪಿ, ಆರ್‌ಎಸ್‌ಎಸ್‌ನ ಕೋಮುವಾದಿ, ಸರ್ವಾಧಿಕಾರಿ ಧೋರಣೆಗಳನ್ನು...

ದರ್ಶನ್ ಪ್ರಕರಣ | ಆರೋಪಿ ನಟನಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ...