ಹುಬ್ಬಳ್ಳಿ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಅಪರಿಚಿತ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹಗುರ ಲಾಠಿ ಪ್ರಹಾರ ನಡೆಸಿದ್ದಾರೆ.
ಸೆಪ್ಟೆಂಬರ್ 12ರ ರಾತ್ರಿ ಸುಮಾರು 9:30ರ ವೇಳೆಗೆ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ಹೋಗುವ ರಸ್ತೆಯ ಬಳಿ ಈ ಘಟನೆ ಸಂಭವಿಸಿದೆ. ಮೇದಾರ್ ಓಣಿಯ ಗಣಪತಿ ಹಾಗೂ ಕಲಾಲ್ ಓಣಿಯ ಗಣೇಶ ಮೆರವಣಿಗೆಗಳು ಮುಖಾಮುಖಿಯಾದ ಸಂದರ್ಭದಲ್ಲಿ, ಕಲಾಲ್ ಓಣಿ ಗಣಪತಿಯ ಡಿಜೆ ಮುಂದೆ ಡ್ಯಾನ್ಸ್ ಮಾಡುತ್ತಿದ್ದ ಕೆಲವು ಅಪರಿಚಿತ ಯುವಕರು ಮೆರವಣಿಗೆಯಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಗುರುತಿನ ಚೀಟಿಯಿಲ್ಲ, ಸಮವಸ್ತ್ರವೂ ಇಲ್ಲ: ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದ ಈ ಅಪರಿಚಿತರು ಯಾರು?
ಘಟನೆಯಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಲಾಠಿ ಚಾರ್ಜ್ ಮಾಡಿ ಕಿಡಿಗೇಡಿಗಳನ್ನು ಸ್ಥಳದಿಂದ ಚದುರಿಸಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು, “ಅಪರಿಚಿತ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣ, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಲಘು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಲಾಯಿತು. ಈ ಸಂಬಂಧ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.





