ರಾಮಚಂದ್ರ ದೇವ ಅವರ ಕತೆ | ದಂಗೆಯ ಪ್ರಕರಣ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ನೀವು ಈ ಊರಿಗೆ ಹೋಗಿದ್ದೀರೋ ಇಲ್ಲವೋ ಗೊತ್ತಿಲ್ಲ. ಹೋಗುವುದಕ್ಕೆ ಇದು ಅಂಥಾ ಹೇಳಿಕೊಳ್ಳುವ ಊರೇನೂ ಅಲ್ಲ. ಏನಾದರೂ ದೊಂಬಿ ಗಲಭೆ ಆಗಿ ನಾಲ್ಕು ಜನರ ಬಾಯಲ್ಲಿ ಈ ಊರಿನ ಹೆಸರು ಕೇಳಬಹುದು ಎಂದರೆ, ಇದು ಗಲಾಟೆ ಎಂದರೆ ಹೆದರುವ ಜನರಿಂದ ತುಂಬಿದ, ನೆಮ್ಮದಿಗೆ ಶಾಂತಿಗೆ ಹೆಸರಾದ ಊರು. ಇಂಥಾ ಊರಿನಲ್ಲೂ ಮೂರು ನಾಲ್ಕು ವರ್ಷದ ಹಿಂದೆ ಒಂದು ಘಟನೆಯಾಗಿಬಿಟ್ಟಿತು. ಈ ಘಟನೆ ಊರಿನಲ್ಲಿ ಸ್ವಲ್ಪ ಗಲಾಟೆ ಎಬ್ಬಿಸಿತೆಂದರೂ ಸರಿಯೇ. ನಾನು ಈಗ ಹೇಳಹೊರಟಿರುವುದು ಆ ಘಟನೆಯ ಬಗ್ಗೆಯೇ.

- Advertisement -

ಈ ಊರು ಪುತ್ತೂರು-ಸುಬ್ರಹ್ಮಣ್ಯದ ಮಧ್ಯೆ ಬಸ್ಸಿನ ಮಾರ್ಗದಿಂದ ಒಂದು ಐದಾರು ಮೈಲಿ ದೂರದಲ್ಲಿದೆ. ಇದು ಸಾಮಾನ್ಯ ಊರು ಎಂದರೂ ಎಲ್ಲಾ ಊರುಗಳ ಹಾಗೆ ಅಲ್ಲ. ಈ ಊರಿಗೆ ಇದರದ್ದೇ ಆದ ನೀತಿ ನಿಯಮಾವಳಿಗಳಿವೆ, ಸ್ಥಳಪುರಾಣಗಳಿವೆ. ಉಳಿದ ಊರುಗಳ ಹಾಗೇ ಎಂದು ತಿಳಿದುಕೊಂಡು ಬಂದವರು ಇಲ್ಲಿ ದಿಕ್ಕುಗಾಣದೆ ಹೋಗಬೇಕಾಗುತ್ತದೆ. ಇಲ್ಲಿಗೆ ಬರುವ ಜನಗಳೂ ಹಾಗೇ ಬಹಳ ಅಪರೂಪವಾಗಿ ಬರುತ್ತಾರೆ. ಅಪ್ಪಿತಪ್ಪಿ, ಎಲ್ಲಾದರೂ ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುವಾಗ ಬಸ್ಸು ಈ ಊರಿನ ಹತ್ತಿರ ಕೆಟ್ಟುಹೋಗಿ, ಮುಸ್ಸಂಜೆಯಾಗಿದ್ದು, ಪ್ರಯಾಣಿಕರು ರಾತ್ರಿ ಎಲ್ಲಾದರೂ ಉಳಕೊಳ್ಳಲೇಬೇಕಾಗಿ ಬಂದು, ಒಂದು ತಾಣ ಹುಡುಕುತ್ತಾ ಹೊರಟರೆ ಈ ಊರಿನ ದರ್ಶನವಾಗಬೇಕಷ್ಟೇ. ಹಾಗೆ ನಗರದಿಂದ ಈ ಊರಿಗೆ ಯಾರಾದರೂ ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಬರಬೇಕು. ಬಂದವರೂ ಒಂದು ರಾತ್ರಿಗಿಂತ ಹೆಚ್ಚು ಇಲ್ಲಿ ನಿಲ್ಲುವುದಿಲ್ಲ. ಅವರಿಗೆ ಈ ಊರಿನ ದರ್ಶನವಾಗುವುದು ಕುರುಡನಿಗೆ ಆನೆಯ ದರ್ಶನವಾದಷ್ಟೇ ಸರಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಮೊದಲು ಈ ಊರು ಹೊಕ್ಕಾಗ ಯಾವುದೋ ನಿರ್ಜನ ರಾಜಧಾನಿಯನ್ನು ಹೊಕ್ಕಂತೆ ಆಗುತ್ತದೆ. ಊರನ್ನು ಆಳೆತ್ತರ ಗೋಡೆಯೊಂದು ವರ್ತುಲಾಕಾರವಾಗಿ ಸುತ್ತುವರಿದಿದೆ. ದೂರದಿಂದ ಬರುವಾಗ ಗೋಡೆಯ ಯಾವುದೋ ಪಾರ್ಶ್ವವನ್ನು ನೋಡಿ ಯಾವುದೋ ಹಾಳುಬಿದ್ದ ಕಟ್ಟಡವಿರಬೇಕೆಂದೋ, ಅದರ ಭದ್ರತೆ, ಎತ್ತರ ನೋಡಿ ಯಾವುದೋ ಜೈಲಿರಬೇಕೆಂದೋ ಅನ್ನಿಸುವುದುಂಟು. ಮೊದಲಿಗೆ ಊರಿನೊಳಗೆ ಹೋಗುವ ದಾರಿ ಯಾವುದೆಂದು ಗೊತ್ತಾಗದೆ ಕಕ್ಕಾಬಿಕ್ಕಿಯಾಗಬೇಕಾಗುವುದು. ಈ ಊರಿನಲ್ಲಿ ಯಾವಾಗಲೂ ಒಂದು ಬಗೆಯ ಶೂನ್ಯ ನೀರವತೆ ಕವಿದಿರುತ್ತದೆ. ಮಧ್ಯಾಹ್ನದ ಉರಿಬಿಸಿಲಿನಲ್ಲೂ ಈ ನೀರವತೆ ಕಾಡುತ್ತದೆ. ನೆತ್ತಿಯ ಮೇಲೆ ಉರಿಯುವ ಸೂರ ಮುಂಜಾನೆಯಿಂದ ಸಂಜೆಯ ತನಕ ಹಚ್ಚಿಬಿಡುವ ಬೆಂಕಿ ಎಷ್ಟು ಖಾರವಾಗಿರುತ್ತದೆಂದರೆ ಹುಡುಕುವ ವಸ್ತು ಎದುರಿಗೇ ಇದ್ದರೂ ಗುರುತು ಸಿಕ್ಕಲಾರದಷ್ಟು ಕಿರಣಗಳು ಕಣ್ಣನ್ನು ಹೊಕ್ಕುಬಿಡುತ್ತವೆ. ಬೀದಿಯಲ್ಲಿ ಮುಸ್ಸಂಜೆ ಮಧ್ಯಾಹ್ನದ ಹೊತ್ತುಗಳಲ್ಲಿ ಹುಡುಕಿದರೂ ಒಂದು ಜನ ಸಿಗಲಾರದು. ಮುಸ್ಸಂಜೆ ಹೊತ್ತಿನಲ್ಲಿ ಬಸ್ಸುಕೊಟ್ಟು ಮನೆ ಹುಡುಕುತ್ತಾ ಯಾರಾದರೂ ಹೊಸಬರು ಬೀದಿಗಳಲ್ಲಿ ಅಲೆಯುವಾಗ ಅವರದ್ದೇ ಹೆಜ್ಜೆ ಸಪ್ಪಳ, ಆಗೊಮ್ಮೆ ಈಗೊಮ್ಮೆ ದೀರ್ಘದನಿಯಲ್ಲಿ ಈಳಿಡುವ ನಾಯಿಯ ಪಾಂಕು-ಇವಷ್ಟೇ ಕಿವಿಗೆ ಬಿದ್ದು ಯಾರ ಜೊತೆಗಾದರೂ ಮಾತಾಡಬೇಕೆಂಬ ಬಯಕೆ ತೀವ್ರವಾಗುತ್ತದೆ. ಆದರೆ ಮೊದಲು ಕಾಣಿಸುವುದು ಈ ಊರಿನ ಗತವೈಭವವನ್ನು ಸಾರುವ ಹಳೆಯ ಕಟ್ಟಡಗಳು, ನಿರ್ಜನ ಬೀದಿಯುದ್ದಕ್ಕೂ ಅಷ್ಟೆತ್ತರ ಎದ್ದುನಿಂತ ಗೋಪುರಗಳಷ್ಟೇ ತಲೆನಿಗುರಿಸಿ ದಿಟ್ಟಿಸುತ್ತಿರುತ್ತವೆ. ನಿರ್ಜನತೆ ಹೆಚ್ಚಿಸಲೆಂದೋ ಏನೋ-ಗೋಪುರಕ್ಕೆ ತೂಗಿಕೊಂಡ ಬಾವಲಿಗಳು; ಇನ್ನೂ ಮುಸ್ಸಂಜೆಯಿರುವಾಗಲೇ ರೆಕ್ಕೆ ಬಡಿಯಲು ಹೋಗಿ ಗೋಪುರದ ಗೋಡೆಗೆ ಢಿಕ್ಕಿ ಹೊಡೆಯುವವು ಕೆಲವು. ಸ್ವಲ್ಪ ದೂರದಲ್ಲಿ ಹಿಂದಿನ ಕಾಲದ ಅರಸರು ಕಟ್ಟಿಸಿದ ಒಂದು ಧರ್ಮಛತ್ರವಿದೆ. ಈ ಊರಿನ ವಿಶೇಷವೇನೆಂದರೆ ಹೊರಗೆ ನೋಡಿ ಇದು ಇಂಥಾದ್ದೇ ಎಂದು ಹೇಳುವುದು ಸಾಧ್ಯವೇ ಇಲ್ಲ. ಉದಾಹರಣೆಗೆ ಈ ಛತ್ರವೇ ಬೇಕಾದರೆ ಕಮಾನಾಗಿ ಬಾಗಿದ ಬಾಗಿಲ ಚೌಕಟ್ಟು, ದೇವಸ್ಥಾನಕ್ಕಿರುವ ಹಾಗೆ ಮುಗುಳಿ ಇರುವ ಮಾಡು ನೋಡಿ ಇದು ದೇವಸ್ಥಾನವೇ, ಇಲ್ಲಿ ಆಸ್ರಣ್ಣರಿರುತ್ತಾರೆ, ಉಳಕೊಳ್ಳಲಿಕ್ಕೊಂದು ತಾಣ ಸಿಕ್ಕುತ್ತದೆಂದು ಹೋದರೆ ಒರಲೆ ಹಿಡಿದ ನೆಲದ, ಜರಿದ ಗೋಡೆಯ ನಿರ್ಜನ ಛತ್ರ ಕಾಣಿಸುವುದು. ಕಟ್ಟಿಸಿ ಎರಡು ಶತಮಾನ ಮಿಕ್ಕಿದರೂ ಬೀಳದೆ ಉಳಿದಿದೆ ಈ ಛತ್ರ. ಆದರೆ ಇದಕ್ಕೆ ದೇವಸ್ಥಾನಕ್ಕಿರುವ ಹಾಗೆ ಮುಗುಳಿ ಯಾಕೆ ಇದೆಯೆಂದು ಯಾರಿಗೂ ಗೊತ್ತಿಲ್ಲ-ಶ್ಯಾಮಾಚಾರ್‍ರಂಥಾ ಊರ ಪ್ರಮುಖರಿಗೂ ಕೂಡಾ. ಮೇಲಿಂದ ಮೇಲೆ ಕೇಳಿದರೆ ‘ಹಿರಿಯರು ಮಾಡಿಟ್ಟಿದ್ದು, ಇದೆ. ಇರಲಿ’ ಎನ್ನುತ್ತಾರೆ. ಆದರೂ ಕೆಲವರು ಇಲ್ಲಿ ದೇವರ ಪ್ರತಿಮೆಯಿತ್ತೆಂದೂ, ಇನ್ನು ಕೆಲವರು ದೇವಸ್ಥಾನವೆಂದು ಕಟ್ಟಿಸಿ ಪ್ರತಿಮೆಯನ್ನು ಪ್ರತಿಷ್ಠಾಪಿಸದೆ ಬಿಟ್ಟರೆಂದೂ ಹೇಳುತ್ತಾರೆ.

ಈ ಊರಿನಲ್ಲಿ ಹಿಂದೆ ಇಲ್ಲಿದ್ದವರು ಕಟ್ಟಿಸಿದ ನಿರ್ಮಲವಾದ ಆದರೆ ಈಗ ಪಾಚಿ ಬೆಳೆದು ಕಪ್ಪಾದ ನೀರಿನ ಕೊಳ, ಹಳೆಯ ಕಾಲದ ಇನ್ನೊಂದು ಧರ್ಮಛತ್ರ, ಮುಸ್ಸಂಜೆಯಲ್ಲಿ ನಿಜವಾದ ಹಸುವೋ ಎಂಬ ಭ್ರಮೆ ಹುಟ್ಟಿಸುವ ಒಂದು ಬಸವನ ಮೂರ್ತಿ, ಅದರಾಚೆ ಒಂದು ಕಲ್ಲಿನ ರಥ, ರಥದ ಪಕ್ಕದಲ್ಲಿ ಒಂದು ದೊಡ್ಡ ಮಗುಳಿಯ ದೇವಸ್ಥಾನ, ಹಳೆಯ ಒಂದು ಅಶ್ವತ್ಥ ವೃಕ್ಷ ಕಾಣಿಸುತ್ತವೆ. ಆದರೆ ಈ ಊರಿನ ಜನರ ಜೀವನ ರೂಪಿಸುವ ಮುಖ್ಯ ಕೇಂದ್ರವೆಂದರೆ ಊರ ತುದಿಯಲ್ಲಿ ಕಾಣಿಸುವ ಸೋಗೆ ಮಾಡಿನ ಒಂದು ದೇವರ ಗುಡಿ. ಆ ಗುಡಿಯಲ್ಲಿ ಈಗ ಮುಖವಿಲ್ಲದೆ ಮುದ್ದೆಯಾಕಾರ ಮಾತ್ರ ಉಳಿದ ಒಂದು ದೇವರ ಮೂರ್ತಿಯಿದೆ. ಊರಿನವರಿಗೆ ಅದೇಕೆ ಹಾಗೆಂದು ಕೇಳಿದರೆ ಅವರು ಕಣ್ಣುಮುಚ್ಚಿಕೊಂಡು ವಿವರಿಸುತ್ತಾರೆ. ಹಿಂದೊಂದು ಕಾಲದಲ್ಲಿ ಈಗ ಎದ್ದು ಬರುತ್ತಿದೆಯೇನೋ ಎಂದು ಕಾಣಿಸುತ್ತಿದ್ದ, ಹೊಳೆಯುವ ಕಣ್ಣುಗಳ, ಒಂದು ಕೈಯನ್ನು ಆಶೀರ್ವದಿಸಲು ಮೇಲಕ್ಕೆತ್ತಿದ, ಇನ್ನೊಂದು ಕೈಯನ್ನು ಕೆಳಗೆ ಬೀರಿದ, ಉಳಿದೆರಡು ಕೈಗಳಲ್ಲಿ ಶಂಖ ಚಕ್ರ ಗದಾ ಪದ್ಮಗಳನ್ನು ಭಕ್ತರ ರಕ್ಷಣೆಗಾಗಿ ಎತ್ತಿ ಹಿಡಿದ, ಮಂದಹಾಸ-ಕ್ರೂರತೆ ಎರಡೂ ಬೆರೆತ ಸುಮನೋಹರ ಗೋಪಾಲಕೃಷ್ಣನ ಕಂಚಿನ ಮೂರ್ತಿಯಾಗಿತ್ತಂತೆ ಅದು. ನಿಜವಾಗಿ ಆ ಮೂರ್ತಿ ಯಾವ ದೇವರದ್ದೆಂದು ಯಾರಿಗೂ ಗೊತ್ತಿಲ್ಲ. ನಿರಾಕಾರ ನಿರ್ಗುಣ ಬ್ರಹ್ಮನಿಗೆ ಹೆಸರೇನು, ಆಕಾರವೇನು, ಕುಲಗೋತ್ರಗಳೇನು? ಆದರೂ ಊರವರು ಅದನ್ನು ಗೋಪಾಲಕೃಷ್ಣನ ಮೂರ್ತಿ ಎಂದು ಕರೆಯುತ್ತಾರೆ. ಹಿಂದೆ ಊರಿಗೊಂದು ಸಲ ಪ್ಲೇಗು ಬಂದಿತ್ತಂತೆ. ನೆರೆಯೂರುಗಳಲ್ಲಿ ಜನರು ಹುಳುಗಳಂತೆ ಪಟಪಟನೆ ಬಿದ್ದು ಸಾಯುತ್ತಿದ್ದರು. ಆಗ ಈ ಊರಿನ ಹಿರಿಯರು ಊರ ಮಧ್ಯ ಭಾಗದಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿ, ಪ್ಲೇಗು ಈ ಊರನ್ನು ಸೋಕದೆ ಹೊರಟು ಹೋಯಿತೆಂದೂ ಅಂದಿನಿಂದ ಈ ದೇವರಿಗೆ ಅಗ್ರಪೂಜೆ ಸಲ್ಲುತ್ತಿದೆಯೆಂದೂ ಪ್ರಚಲಿತವಿರುವ ಕಥೆ. ಜನರ ಜೀವನದ ಕೇಂದ್ರ ಈ ಗುಡಿ. ಏನಿದ್ದರೂ ನಾನು ಈಗ ಹೇಳಹೊರಟಿರುವುದು ಈ ದೇವರ ಬಗ್ಗೆಯೇ.

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

ಈ ಊರಿನ ದೃಶ್ಯಗಳನ್ನಷ್ಟೇ ವಿವರಿಸುವುದನ್ನು ನೋಡಿ ಇಲ್ಲಿ ಜನರಿಲ್ಲವೇ ಎಂದು ಯಾರಿಗಾದರೂ ಅನ್ನಿಸಬಹುದು. ಒಂದು ದೃಷ್ಟಿಯಲ್ಲಿ ನೋಡಿದರೆ, ಇಲ್ಲಿ ಜನರಿಲ್ಲ ಎಂದರೂ ಸಲ್ಲುತ್ತದೆ. ಯಾಕೆಂದರೆ ಇಲ್ಲಿ ಜನಗಳನ್ನೂ, ಮನೆಗಳನ್ನೂ ಹುಡುಕುತ್ತಾ ಬೀದಿ ಅಲೆಯುತ್ತಿದ್ದರೆ, ಈ ಬೀದಿಗಳು ವಕ್ರಾಕಾರವಾಗಿ ಸುತ್ತುತ್ತಾ ನಮ್ಮನ್ನು ಮೊದಲಿದ್ದಲ್ಲಿಗೇ ಕರೆದುಕೊಂಡು ಬಂದುಬಿಡುತ್ತವೆ. ಒಂದು ಕಡೆ ನೋಡಿದಂಥದ್ದೇ ಗೋಪುರಗಳನ್ನು, ಸ್ಥಳಗಳನ್ನು ಇನ್ನೊಂದು ಕಡೆಯೂ ಕಂಡು ಮೊದಲಿದ್ದಲ್ಲೇ ಇದ್ದೇವೆ ಎಂದು ತಲೆ ಮೇಲೆ ಕೈಹೊತ್ತುಕೊಳ್ಳುವುದು ಊರಿನವರಿಗೆ ಇದು ತಮಾಷೆಗೆ ದಾರಿಯಾಗುತ್ತದೆ. ಅವರು ಹೇಳುವ ಪ್ರಕಾರ, ಕೆಲವರು ಅಪರಿಚಯಸ್ಥರು ಬಂದವರು ಇಲ್ಲೇ ನೆಲೆಸಿ, ಮದುವೆಯಾಗಿ ಅವರವರೇ ಆಗಿಬಿಟ್ಟಿದ್ದಾರಂತೆ. ಸುಮಾರು ವರ್ಷಗಳ ಕೆಳಗೆ ಒಬ್ಬ ಕುದಿಯುತ್ತಿದ್ದ ಜೀವನದ ಬಿಸಿಯ ಯುವಕ ಬಂದವನು ಈ ಹಳೆಯ ಕಾಲದ ಗೋಪುರಗಳಲ್ಲಿ, ಮೂರ್ತಿಗಳಲ್ಲಿ ಏನಿದೆ ಮಹಾ ಎಂದು ಸಹಜವಾಗಿಯೇ ರೇಗುತ್ತಿದ್ದ. ಆದರೆ ಸ್ವಲ್ಪ ದಿವಸದಲ್ಲೇ ಎಲ್ಲರ ಜೊತೆಯವನಾದ. ಈಗ ಕೇಳಿದರೆ, ಅವನು ಈ ಊರಿನ ಅಂಗುಲಂಗುಲವನ್ನು ಬಲ್ಲನಂತೆ. ಅಲ್ಲೇ ಮದುವೆಯಾಗಿ ನೆಲೆಸಿದ್ದಾನೆ. ನೋಡಿದರೆ ಮುದುಕನ ಹಾಗೆ ಕಂಡ.

ಮನೆಗಳನ್ನು ಸುಮ್ಮನೆ ಹುಡುಕುತ್ತಾ ಹೋದರೆ ಅವು ಈ ಊರಿನಲ್ಲಿ ಸಿಗಲಿಕ್ಕೂ ಇಲ್ಲ, ಒಂದು ನೆಲೆ ಕಾಣಲಿಕ್ಕೂ ಇಲ್ಲ. ಅವು ಧರ್ಮಛತ್ರದ ಅಡಿ ಮೈಯಲ್ಲೋ, ದೇವಸ್ಥಾನ ಮತ್ತು ಮಠದ ಸಂಧಿಯಲ್ಲೋ ಇರುತ್ತವೆ. ಒಬ್ಬರ ಮನೆ ಆ ದೊಡ್ಡ ಗೋಪುರ ಮತ್ತು ಸಣ್ಣ ಗೋಪುರದ ಮಧ್ಯದ ಖಾಲಿ ಜಾಗದಲ್ಲಿ ಸ್ವಲ್ಪ ಹಿಂಬದಿಗೆ ಒತ್ತಿಕೊಂಡು ಇದೆ. ಸದಾಶಿವಯ್ಯ ಎನ್ನುವ ಇನ್ನೊಬ್ಬರದ್ದು ಹಳೆಯ ಧರ್ಮಛತ್ರದ ಕೆಳಗೆ, ಮೆಟ್ಟಿಲು ಇಳಿದು ಹೋಗುವಾಗ ಕಾಣಿಸುವ ಒಂದು ಬತ್ತಿದ ಒರತೆಯ ಪಕ್ಕದಲ್ಲಿದೆ. ಶ್ಯಾಮಾಚಾರ್‍ರದ್ದು ಬಸವನಮೂರ್ತಿಯ ಹಿಂದೆ ಇದೆ. ನೋಡಿದರೆ ಈ ಮನೆಗಳೆಲ್ಲಾ ಇತ್ತೀಚೆಗೆ ಕಟ್ಟಿದವುಗಳಂತೆ ಕಾಣುತ್ತವೆ. ಅಲ್ಲದೆ ಬಹಳ ಸಣ್ಣವು. ಆಕಾಶಕ್ಕೆ ತಲೆಯೆತ್ತಿ ಹಿಂದಿನ ರಾಜವೈಭವವನ್ನು ದಶದಿಕ್ಕುಗಳಿಗೆ ಸಾರಿ ಹೇಳುತ್ತಾ ಸುತ್ತಲಿದ್ದದ್ದನ್ನು ತಿರಸ್ಕರಿಸಿ ಮೆರೆಯುವ ಗತಕಾಲದ ಭವ್ಯ ಕಟ್ಟಡಗಳ ಎದುರು ಇವು ಕಾಣಿಸಲಿಕ್ಕೇ ಇಲ್ಲ. ಮಾಡಿಗೆ ಸೋಗೆ ಹೊದಿಸಿದ್ದರಿಂದ ಕತ್ತಲಿನಲ್ಲಿ ಕಪ್ಪಾಗಿ ಇವು ಬಂಡೆಕಲ್ಲುಗಳಂತೆ ಕಾಣಿಸುತ್ತವೆ.

ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು

ಈ ಊರು ಗಲಭೆ ಗಲಾಟೆ ಎಂದರೆ ಹಿಂಜರಿಯುವ ಊರು ಎಂದು ಹೇಳಿದೆನಷ್ಟೇ- ರಾತ್ರಿ ಹೋಗಲಿ, ಮುಸ್ಸಂಜೆಗೇ ಇಲ್ಲಿನವರು ಊಟ ಮುಗಿಸಿ ನಿದ್ದೆ ಮಾಡುತ್ತಾರೆ. ಹಗಲಿನಲ್ಲೂ ಇಲ್ಲಿ ಹೆಚ್ಚು ಗಲಾಟೆ ಕೇಳಿಸುವುದಿಲ್ಲ. ಪೂಜೆಮಂತ್ರದ, ಗಂಟಾಮಣಿಯ ನಾದ ಮುಚ್ಚಿದ ಬಾಗಿಲೊಳಗಿನಿಂದ ಅಸ್ಪಷ್ಟವಾಗಿ ಕೇಳಿಸುತ್ತದೆ. ವಿಶೇಷವೆಂದರೆ ಇಲ್ಲಿ ಹುಡುಗರೂ ಹೆಚ್ಚು ಗಲಾಟೆ ಮಾಡುವುದಿಲ್ಲ. ಚಿಕ್ಕಂದಿನಿಂದಲೂ ಅವರನ್ನು ಕಠೋರ ನಿಯಮದಲ್ಲಿ ಬೆಳೆಸುತ್ತಾರೆ. ಹತ್ತು, ಹನ್ನೆರಡು ವರ್ಷವಾಗುತ್ತಲೇ ಅವರು ಬಾಲಸಹಜ ಹುಡುಗಾಟಿಕೆ ಬಿಟ್ಟು ದೊಡ್ಡವರ ಹಾಗೆ ವ್ಯವಹರಿಸುವುದಕ್ಕೆ ಕಲಿಯುತ್ತಾರೆ. ಆದ್ದರಿಂದ ಇಪ್ಪತ್ತು ವರ್ಷದ ಹುಡುಗರ ಮತ್ತು ಮುದುಕರ ಅಭಿರುಚಿಯ ವಿಷಯಗಳು ಒಂದೇ ಆಗಿರುತ್ತವೆ. ಆದ್ದರಿಂದಲೇ ಇಲ್ಲಿ ತಲೆ ತಲಾಂತರಗಳ ನಡುವೆ ಹೆಚ್ಚು ವ್ಯತ್ಯಾಸವೇ ಇಲ್ಲ. ಅಶ್ವತ್ಥ ಮರದ ಕೆಳಗಿರುವ ಐಗಳ ಶಾಲೆಯಲ್ಲಿ ಹುಡುಗರೆಲ್ಲಾ ಓದು ಬರಹ ಕಲಿಯುತ್ತಾರೆ. ಸರಕಾರಿ ಶಾಲೆ ಇಲ್ಲಿಗೆ ಇನ್ನೂ ಬಂದಿಲ್ಲ. ಉಪನಯನವಾದದ್ದೇ ಅಲ್ಲಿ ಸೇರಿಸುತ್ತಾರೆ. ಮರಳಿನಲ್ಲಿ ಶ್ರೀ ಗಣಾಧಿಪತಯೇ ನಮಃ ಎಂದು ಸಂಸ್ಕೃತದಲ್ಲಿ ಬರೆದು ಅವರು ಬರೆಹ ಕಲಿಯುತ್ತಾರೆ. ಐಗಳು ಊರಿನಲ್ಲಿ ಆಳಿದ ಅರಸರ ಕತೆಗಳನ್ನೂ ಊರಿನ ಗತವೈಭವವನ್ನೂ ಹುಡುಗರಿಗೆ ಉಣ್ಣಿಸುತ್ತಾರೆ. ಆದ್ದರಿಂದ ಈ ಊರಿನ ಗತವೈಭವ ಹುಡುಗರು ದೊಡ್ಡವರಾಗುವಷ್ಟು ಹೊತ್ತಿಗೆ ರಕ್ತಗತವಾಗಿರುತ್ತದೆ. ಹಿಂದೆ ಒಬ್ಬ ಶೂದ್ರರ ಹುಡುಗ ಆಡಲಿಕ್ಕೆಂದು ಹೋದವನು ಗೋಪಾಲಕೃಷ್ಣದೇವರ ಗುಡಿಯ ಒಳಗೆ ಹೋಗಿ ದೇವರ ಮೇಲೆ ಹತ್ತಿ ನಲಿಯುತ್ತಾ ಕೇಕೆ ಹಾಕುತ್ತಿದ್ದ. ಅವನ ಜೊತೆಗಿದ್ದ ಹುಡುಗರು-ಪೇಲವ ಮುಖದಿಂದ ನೋಡುತ್ತಿದ್ದವರು- ಬಂದು ಹೇಳಿದರು. ಆಗ ಅವನಿಗೆ ಬಿದ್ದ ಛಡಿಯೇಟು, ಉಗ್ರಾಣದಲ್ಲಿ ಕೋದಂಡ ತೂಗಿದ ಕಥೆ ಇಂದಿಗೂ ಹುಡುಗರ ಮನದಲ್ಲಿ ಅಷ್ಟೊತ್ತಿದೆ. ಈ ಕಥೆ ಆದದ್ದು ಎಷ್ಟೋ ವರ್ಷಗಳ ಹಿಂದೆ. ಇಂದಿನ ಹುಡುಗರು ಅವರಿಗೆ ಸಹಜವಾಗಿ ನಗುತ್ತಾ ಬಾಲಚೇಷ್ಟೆ ಮಾಡುವಾಗ, ಕಿಟ್ಟಣ್ಣನಿಗೆ ಆದದ್ದು ಮರೆತೆಯೋ ಎಂದರೆ ಮನೆಯೊಳಗೆ ಓಡಿ ಬಂದು ತಪ್ಪು ಮಾಡಿದವರ ಹಾಗೆ ಮುದುರಿಕೊಳ್ಳುತ್ತಾರೆ.

ಆದರೆ ಈ ಊರಿಗೆ ಬಂದು ನೆಲೆಸಿದವರಿರುವ ಹಾಗೆ ಇಲ್ಲಿಂದ ಹೊರಗೆ ಹೋದವರೂ ಇದ್ದಾರೆ. ಮೊದಲಿನಿಂದಲೂ ಒಬ್ಬರಲ್ಲ ಒಬ್ಬರಲ್ಲಿ ಸ್ವಾತಂತ್ರ್ಯದ ಇಚ್ಛೆ ಇದ್ದ ಹಾಗೆ ಕಾಣುತ್ತದೆ. ಒಬ್ಬ ‘ಇಲ್ಲಿ ಏನು ಮಾಡುವುದಕ್ಕೂ ಸಾಧ್ಯವಿಲ್ಲ. ಬೇರೆ ಎಲ್ಲಿಗಾದರೂ ಹೋಗಿ ಬದುಕುತ್ತೇನೆ. ನನಗೆ ಬದುಕು ಮುಖ್ಯ’ ಎಂದು ಈ ಊರು ಬಿಟ್ಟು ಹೋದ. ಯಾಕೋ ಏನೋ-ಮೂರು ತಿಂಗಳಲ್ಲಿ ಹಿಂದೆ ಬಂದ. ಈ ಕಥೆ ಹೇಳುತ್ತಾ ಊರಿನ ಮಹಿಮೆ ವಿವರಿಸುವಾಗ ಶ್ಯಾಮಾಚಾರ್‍ರ ಮುಖ ಹಿಗ್ಗಿ ಹೀರೇಕಾಯಿಯಾಗುತ್ತದೆ. ‘ಅಲ್ಲಿ, ಇಲ್ಲಿನ ಸುಖ, ವೈಭವ ಎಲ್ಲಿ ಬರುತ್ತದೆ ಹೇಳಿ. ಪ್ರಾಯಕಾಲದಲ್ಲಿ ಏನಾದರೂ ಹುಚ್ಚು ಮಾಡುವುದು ಸುಲಭ’. ಈಗ ಅವನೂ ಕೂಡಾ ಮದುವೆಯಾಗಿ, ಮಕ್ಕಳಾಗಿ ಊರಿನವರ ಜೊತೆ ಒಂದಾಗಿದ್ದಾನಂತೆ.

ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ

ಈ ಊರಿನಲ್ಲಿ ಗಲಾಟೆಯ ಹೊತ್ತು ಎಂದರೆ ಬೆಳಿಗ್ಗೆ ಹತ್ತು ಗಂಟೆಗೆ ಮೊದಲು. ಈ ಊರಿನಲ್ಲಿ ಒಂದು ಹೊಳೆ ಇದೆ. ಇದರ ಉಗಮ ಈ ಊರಿನ ಆಚೆ ಇರುವ ಒಂದು ಬೆಟ್ಟದಲ್ಲಿರುವ ಗುಹೆಯಿಂದ. ತ್ರೇತಾಯುಗದಲ್ಲಿ ಸ್ವಯಂಪ್ರಭೆ ಇಲ್ಲೇ ತಪಸ್ಸು ಮಾಡುತ್ತಿದ್ದಳೆಂದೂ, ಸೀತೆಯನ್ನು ಹುಡುಕುತ್ತಾ ಹೊರಟ ಹನುಮಂತ ಜಾಂಬವಾದಿಗಳು ಈ ಗುಹೆಗೆ ಅಕಸ್ಮಾತ್ತಾಗಿ ಬಂದು, ಸ್ವಯಂಪ್ರಭೆಯನ್ನು ಕಂಡು ಅವಳ ಆಶೀರ್ವಾದ ಪಡೆದರೆಂದೂ ಹೇಳುತ್ತಾರೆ. ಅವಳನ್ನು ಕಂಡ ಬಳಿಕವೇ ಹನುಮಂತನಿಗೆ ತಾನು ಸಾಮಾನ್ಯ ಮಂಗ ಅಲ್ಲ, ಲಂಕೆಗೆ ಲಂಘಿಸಬಲ್ಲ ವೀರಾಧಿವೀರ ಎಂಬ ಅರಿವು ಸ್ಪುರಿಸಿದ್ದು. ಈ ಹೊಳೆ ಗಂಗಾನದಿಯ ಅವತಾರ ಎಂದು ಊರವರು ನಂಬುತ್ತಾರೆ. ಊರಿನಲ್ಲಿ ಇಂದೂ ಕೂಡಾ ಸಾಯುವಾಗ ಈ ಹೊಳೆಯ ಒಂದು ತಟಕು ನೀರು ಬಾಯಿಗೆ ಬೀಳಲೇಬೇಕು.

ಬೆಳಗ್ಗಿನ ಹೊತ್ತಿನಲ್ಲಿ ನಾಲ್ಕಾರು ಜನ ಹೆಂಗಸರು ಗಂಡಸರು ಹೊಳೆಯ ಬದಿಯಲ್ಲಿ ಬಟ್ಟೆ ಒಗೆಯುತ್ತಲೋ ಪಾತ್ರೆ ತಿಕ್ಕುತ್ತಲೋ ಮೀಯುತ್ತಲೋ ಇರುವುದು ಕಾಣಿಸುತ್ತದೆ. ಆದರೂ ಅಲ್ಲಿ ಕೂಡಾ ಹೆಚ್ಚು ಗಲಾಟೆಯಾಗಲೀ ಮಾತುಕತೆಯಾಗಲೀ ನಗೆಯಾಗಲೀ ಇಲ್ಲ. ಹೊಳೆಯ ಸುತ್ತ ಆಳೆತ್ತರಕ್ಕೆ ಎದ್ದು ನಿಂತ ಕಪ್ಪು ಕಪ್ಪು ಬಂಡೆಕಲ್ಲುಗಳು ಒಂದು ಕೋಟೆಯನ್ನೇ ನಿರ್ಮಿಸಿ ಬಿಟ್ಟಿವೆ. ಆಕಾಶದಲ್ಲಿ ಕೆಂಗಣ್ಣು ಕಾರುವ ಸೂರ, ಸುತ್ತೆಲ್ಲಾ ನಿರ್ಜನಮೌನ. ಬಂಡೆಗಳ ಮಧ್ಯೆ ಅವರವರ ಕೆಲಸದಲ್ಲಿ ತೊಡಗಿರುವ ಕರಿಮೈಯ ಜನರು ಬಂಡೆಗಳ ಹಾಗೆಯೂ, ಬಂಡೆಗಳು ಮನುಷ್ಯರ ಹಾಗೂ ಮಧ್ಯಾಹ್ನದ ಬಿಸಿಲಿನಲ್ಲಿ ಕಾಣಿಸಿದರೆ ಆಶ್ಚಯವಿಲ್ಲ. ಬಟ್ಟೆ ಒಗೆದು ಮುಗಿಸಿಯೋ ಸ್ನಾನ ಮಾಡಿಯೋ ಇವರೆಲ್ಲಾ ತಮ್ಮ ತಮ್ಮ ಮನೆಗಳಿಗೆ ಹೋದ ನಂತರ ಊರಿನಲ್ಲಿ ಯಾವ ಜನಸಂಚಾರವನ್ನೂ ಕಾಣುವುದು ಸಾಧ್ಯವಿಲ್ಲ.

ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ

ಈ ಊರಿನ ಮುಖಂಡರು ಎಂದರೆ ಶ್ಯಾಮಾಚಾರ್‍ರು. ಊರಿನ ಹಳೆಯ ತಲೆ ಇವರು. ಗೋಪಾಲಕೃಷ್ಣ ಆದ ಮೇಲೆ ಜನ ಸಲಹೆಗಾಗಿ ಓಡುವುದು ಇವರ ಕಡೆಗೆ. ತಮ್ಮ ಜವಾಬ್ದಾರಿಯನ್ನು ಜನರು ಶ್ಯಾಮಾಚಾರ್‍ರ ಮೇಲೆ ಹಾಕುತ್ತಾರೆ, ಶ್ಯಾಮಾಚಾರ್‍ರು ಅದನ್ನು ಗೋಪಾಲಕೃಷ್ಣನ ಮೇಲೆ ಹಾಕುತ್ತಾರೆ. ಇವರ ಅಜ್ಜನ ಅಜ್ಜ ಬಹಳ ಪ್ರಖ್ಯಾತರಾದವರಂತೆ. ಭವದಲ್ಲಿ ಸನ್ಯಾಸಿಯ ಹಾಗೆ, ತಪಸ್ಸಿನಲ್ಲಿ ಭೋಗಿಯ ಹಾಗೆ ಬದುಕಿದವರು ಅವರು. ಇದ್ದಕ್ಕಿದ್ದ ಹಾಗೆ ವಾರಗಟ್ಟಲೆ ಮೌನವಾಗಿ, ಮತ್ತೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರ ಜೊತೆಗೆ ಸ್ನೇಹಿತರಾಗಿ, ಇದ್ದೂ ಇಲ್ಲದ ಹಾಗೆ, ನಕ್ಷತ್ರಗಳ ಹಾಗೆ ನಿರಪೇಕ್ಷೆಯಲ್ಲಿ ಇದ್ದು ಬಿಟ್ಟವರು. ಶ್ಯಾಮಾಚಾರ್‍ರು ಸಾಮಾನ್ಯವಾಗಿ ಜಡ ಮನುಷ್ಯರು. ‘ಈ ಜಗತ್ತು ದೇವರ ಸೃಷ್ಟಿ. ಅವನು ಹೇಗೆ ಹೇಗೆ ಇಚ್ಛಿಸುತ್ತಾನೋ ಹಾಗೆ ಹಾಗೆ ಆಗಬೇಕು. ನಮ್ಮ ಕೆಲಸವೆಂದರೆ ಕೂತು ಅವನ ಲೀಲೆಗಳನ್ನು ನೋಡುವುದು’ ಎಂದು ಜಗುಲಿಯಲ್ಲಿ ಕುಕ್ಕುರು ಕಾಲಲ್ಲಿ ಕೂತುಕೊಳ್ಳುತ್ತಾರೆ.

ಶ್ಯಾಮಾಚಾರ್‍ರು ಹೇಳುವ ಪ್ರಕಾರ- ನಾನ್ನೂರು ಐನೂರು ವರ್ಷಗಳ ಹಿಂದೆ- ಈ ಊರು ಅರಸರೊಬ್ಬರ ರಾಜಧಾನಿಯಾಗಿತ್ತಂತೆ. ಅವರ ಕಾಲದ ಅರಮನೆಯ, ಅವರು ತಮ್ಮ ರಾಣಿವಾಸದೊಂದಿಗೆ ವಾಯುವಿಹಾರಕ್ಕೆ ಹೋದಾಗ ಕೂತುಕೊಳ್ಳುತ್ತಿದ್ದ ಜಾಗದ ಕುರುಹನ್ನು ಶ್ಯಾಮಾಚಾರ್‍ರು ತಮ್ಮ ಸುಕ್ಕು ಮುಖವನ್ನು ಸವರಿಕೊಳ್ಳುತ್ತಾ ಹೆಮ್ಮೆಯಿಂದ ತೋರಿಸುತ್ತಾರೆ. ಅವರ ಅಂತಃಪುರದ ವೈಭವವನ್ನು, ರಾಣಿಯರ ಸೌಂದರ್ಯವನ್ನು, ಅಂತಃಪುರವನ್ನು ಥಳಥಳಿಸುವ ವಜ್ರಗಳಿಂದ ಬೆಳಗಿಸುತ್ತಿದ್ದುದನ್ನು ಕುರಿತು-ಮುಸ್ಸಂಜೆ ಎಲ್ಲಾ ಕೆಲಸ ಮುಗಿಸಿ, ಹರಿದ ಸೀರೆಗೆ ತೇಪೆ ಹಾಕುತ್ತಾ ಅತ್ತ ನಿದ್ದೆ ಅಲ್ಲ ಇತ್ತ ಎಚ್ಚರ ಅಲ್ಲ ಸ್ಥಿತಿಯಲ್ಲಿ ಅಡಿಗೆ ಮನೆಯಲ್ಲಿ ಕುಳಿತು ಕಂಗಾಲಾದ ಮುತ್ತೈದೆಯರು, ವಿಧವೆಯರು ಮಾತಾಡಿಕೊಳ್ಳುತ್ತಾರೆ. ಅಶ್ವತ್ಥಮರವನ್ನು ಒಬ್ಬ ರಾಜರ ಪಟ್ಟಾಭಿಷೇಕದ ದಿನ ನೆಟ್ಟಿದ್ದಂತೆ. ಅದರ ನೆರಳು ಈಗ ಊರಿನ ಅರ್ಧಾಂಶವನ್ನೂ ಮಿಕ್ಕಿ ತಬ್ಬಿದೆ. ಊರವರು ಅರಸರು ನಡೆದು ಹೋಗುತ್ತಿದ್ದ ದಾರಿಯನ್ನೂ ತೋರಿಸುತ್ತಾರೆ. ಗುಹೆಯ ಮೂಲಕ ಗಂಗಾನದಿ ಇಲ್ಲಿ ಹರಿಯುವ ಹಾಗೆ ಮಾಡಿದವರೂ ಅವರೇ. ಇಡೀ ಊರಿಗೆ ಊರೇ ಬರಗಾಲದಿಂದ, ನಿಶ್ಚೈತನ್ಯದಿಂದ ನರಳುತ್ತಿದ್ದ ಕಾಲ ಅದು. ಒಬ್ಬರ ಕಣ್ಣಿನಲ್ಲೂ ಉತ್ಸಾಹವಿಲ್ಲ: ಮುಖದಲ್ಲಿ ನಗುವಿಲ್ಲ; ಲವಲವಿಕೆಯಿಲ್ಲ. ದೊಡ್ಡ ರಾಜಧಾನಿ ಸ್ಮಶಾನದ ಹಾಗೆ; ಜನಗಳು ಇತ್ತ ಬದುಕಿಯೂ ಇಲ್ಲ: ಅತ್ತ ಸತ್ತೂ ಇಲ್ಲ ಎನ್ನುವ ಹಾಗೆ ಉಸಿರು ಕಟ್ಟಿಕೊಂಡು ತಮ್ಮ ತಮ್ಮ ಮನೆಗಳಲ್ಲಿ ಕೈದಿಗಳಾಗಿದ್ದ ಕಾಲ. ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಬರಿಯ ಕಲ್ಲುಬಂಡೆಗಳು ಮಾತ್ರ ಕಪ್ಪಾಗಿ, ಬಿಸಿಲಿನಲ್ಲಿ ಮೈತೆರೆದುಕೊಂಡು ದೂರಕ್ಕೆ ಮನುಷ್ಯರ ಹಾಗೆ ಕಾಣಿಸುತ್ತಿದ್ದವು. ಆಗ ಜನರ ಸಂಕಷ್ಟವನ್ನು ಮನಗಂಡ ದೊರೆಗಳು ಸಮಸ್ತವನ್ನೂ ತೊರೆದು ಬರಿಮೈಯಾಗಿ ಆ ಗುಹೆಗೆ ಹೋಗಿ ಗಂಗಾದೇವಿಯನ್ನು ಕುರಿತು ಒಂಟಿಕಾಲದಲ್ಲಿ ತಪಸ್ಸು ಮಾಡುತ್ತಾ ನಿಂತು ಬಿಟ್ಟರಂತೆ. ಹಾಗೆ ನಿಂತವರಿಗೆ ಮತ್ತೆ ಎಚ್ಚರವಾದದ್ದು ತಮ್ಮ ಕಾಲನ್ನು ಸೋಕಿಕೊಂಡು ಗಂಗಾನದಿ ಹರಿದುಹೋದಾಗಲೇ. ಊರವರು ಹೊಳೆಯ ಮಹಿಮೆಯನ್ನು ಆಸ್ವಾದಿಸುತ್ತಾ ತಮ್ಮೊಳಗೇ ಸುಖ ಪಡುತ್ತಾರೆ. ಇದೆಲ್ಲಾ, ಸತ್ಯ ಏನೆಂದು ನೋಡಲಾಗದ ಕನಸಿಗರ ಕಲ್ಪನೆ ಎನ್ನುವ ನೆರೆಯೂರವರು ಮಳೆ ಬಂದದ್ದರಿಂದ ಬರಗಾಲ ನೀಗಿತೆಂದೂ, ಇನ್ನು ಕೆಲವರು, ದೊರೆಗಳು ಸುರಂಗ ತೋಡಿಸಿ ನೀರು ಹರಿಯುವ ಹಾಗೆ ಮಾಡಿದರೆಂದೂ ಹೇಳುತ್ತಾರೆ. ಈಗ ಜನರು ಕುಂಡೆ ತೊಳೆಯುವದರಿಂದ ಹಿಡಿದು ದೇವರ ಪೂಜೆಯ ತನಕ ಇದೇ ನೀರನ್ನು ಉಪಯೋಗಿಸುವುದರಿಂದ ನೀರು ಮಲಿನವಾಗಿದೆ. ಊರಿನಲ್ಲಿ ಇದಲ್ಲದೆ ಬೇರೆ ಯಾವ ನೀರಿನ ಊಟೆಗಳೂ ಇಲ್ಲ. ಮಧ್ಯಾಹ್ನದಲ್ಲಿ ಇಡೀ ಊರೇ ಧಗಧಗಿಸುತ್ತಿರುವ ಮರಳುಗಾಡಿನ ಹಾಗೆ ಕಾಣುತ್ತದೆ. ಅದಕ್ಕೇ ನೀವು ಇಲ್ಲಿ ಕೆಲವು ಹಳೆಯ ಮರಗಳನ್ನು ಬಿಟ್ಟರೆ ಹೆಚ್ಚಿನ ಗಿಡಮರಗಳನ್ನೂ ಹಸಿರು ಪಚ್ಚೆಯನ್ನೂ ಕಾಣಲಾರಿರಿ.

ಇದನ್ನು ಓದಿದ್ದೀರಾ?: ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ

ಊರ ಸುತ್ತ ಹಬ್ಬಿದ, ಜೈಲಿನ ಗೋಡೆಯ ಹಾಗೆ ಕಾಣಿಸುವ ಈ ಗೋಡೆಯನ್ನು ಕಟ್ಟಿಸಿದ್ದೂ ಅರಸರೇ. ಜನರ ಸ್ವಾತಂತ್ರ್ಯ ರಕ್ಷಣೆಗಾಗಿ ಕಟ್ಟಿಸಿದರು. ರಾಜಧಾನಿಯ ಸಾವಯವ ಬಲ ಸಂವರ್ಧನೆಗೆ ಅದು ಅಗತ್ಯವೇ ಆಗಿತ್ತು. ಆಗ ಊರಿನ ಪ್ರಜೆಗಳು ಯಾರೂ ಅರಕ್ಷಿತತೆಯಿಂದ ಭೀತರಾದದ್ದಿಲ್ಲ. ಸ್ವಾತಂತ್ರ್ಯ ರಕ್ಷಣೆಗೆಂದು ಕಟ್ಟಿಸಿದ ಗೋಡೆಯ ಸಾಲೇ ಈಗ ಊರಿಗೊಂದು ಗಡಿಯಾಗಿದೆ. ಈ ಗೋಡೆ ದಾಟಿ ಯಾರಾದರೂ ಹೋದರೆಂದರೆ ಈ ಊರಿನ ಪರಿಧಿ ಬಿಟ್ಟು ಹೋದರೆಂದೇ ಅರ್ಥ. ಅದನ್ನು ಕಟ್ಟಿಸುವುದಕ್ಕೆ ಬಹಳ ಕಾಲ, ಶ್ರಮ ಎರಡೂ ಹಿಡಿಯಿತೆಂದು ಹೇಳುತ್ತಾರೆ. ಯಾಕೆಂದರೆ, ನನ್ನ ವಿವರಣೆ ಕೇಳಿ ಈ ಊರು ಬಹಳ ಚಿಕ್ಕ ಊರಿನ ಹಾಗೆ ಕಾಣಬಹುದಾದರೂ ಇದು ಅಂಥ ಚಿಕ್ಕ ಊರಲ್ಲ. ಎಷ್ಟು ದೊಡ್ಡ ಊರೆಂದು ಹೇಳುವುದೂ ಸಾಧ್ಯವಿಲ್ಲ. ಶ್ಯಾಮಾಚಾರ್‍ರ ಪ್ರಕಾರ, ‘ಒಂದು ಮೂಲೆಯಲ್ಲಿರುವ ಬಲಿಕಲ್ಲಿನಿಂದ ಲೆಕ್ಕ ಮಾಡುತ್ತಾ ಹೊರಟರೆ ಎಲ್ಲಿಗೆ ನಿಲ್ಲಿಸುತ್ತೀರಿ? ದೇವಸ್ಥಾನಕ್ಕೇ? ಗೋಪಾಲಕೃಷ್ಣನ ಗುಡಿಗೇ? ಅದರಾಚೆ ಇರುವ ಅಶ್ವತ್ಥ ಮರಕ್ಕೆ? ಹೊಳೆಗೇ? ಗೋಡೆ ಕಟ್ಟುವಾಗ ಎಂಥಾ ಸಮಸ್ಯೆ ಎದುರಾಗಿರಬೇಕೆಂದು ತೋರಿಸುವುದಕ್ಕೆ ಹೇಳಿದೆ-ಅಷ್ಟೆ’ ಇಷ್ಟೆಲ್ಲಾ ಒಳಗೊಂಡ ಈ ಊರು ಎಷ್ಟು ದೊಡ್ಡ ಊರೆಂದು ನಾನು ಅಳೆಯಲು ಹೋಗಿಲ್ಲ. ಒಂದು ಕಡೆಯಲ್ಲಿರುವಂಥದ್ದೇ ಜಾಗ-ಗೋಪುರಗಳು ಇನ್ನೊಂದು ಕಡೆಯೂ ಕಂಡು ಗೊತ್ತು ಗುರಿ ಎಲ್ಲಿ ಎಂದು ಗೊತ್ತಾಗದಿರುವಾಗ ಹೇಗೆ ಸಾಧ್ಯ? ಅಥವಾ ಇದು ಅಷ್ಟು ದೊಡ್ಡ ಊರು ಎಂದು ಅನ್ನಿಸುವುದು ಈ ಕಾರಣಕ್ಕಾಗಿಯೋ ಏನೋ. ಆದರೂ ಯಾವ ಕಡೆ ಹೋದರೂ ದೊಡ್ಡ ಗೋಡೆಯ ಸಾಲು ಎದುರಾಗಿ ಮುಂದೆ ಹೋಗದಂತೆ ತಡೆಯುತ್ತದೆ.

ಆದರೆ ಈ ಊರಿನಲ್ಲಿ ಮುಖ್ಯವಾದದ್ದು ಎಂದರೆ ಗೋಪಾಲಕೃಷ್ಣ ದೇವರು. ನಾನು ಹೇಳಲಿಕ್ಕೆ ಹೊರಟಿರುವುದು ಈ ದೇವರಿಗೆ ಸಂಬಂಧಪಟ್ಟೆ. ಆದರೆ, ಅದು ಇದು ಎಂದು ಹರಿಕಥೆ ಮಾಡುತ್ತಾ ಹೇಳಿದ್ದನ್ನೆ ಹೇಳುತ್ತಾ ಸುತ್ತು ಹೊಡೆಯುತ್ತಿದ್ದೇನೆ. ಮಾತನಾಡುವುದಕ್ಕೆ ಹೊರಟರೆ ಯಾವಾಗಲೂ ಆಗುವುದು ಹೀಗೆ- ಹೇಳಬೇಕೆಂದದ್ದು ಒಂದು, ಹೇಳುವುದು ಇನ್ನೊಂದು, ಅದರ ಅರ್ಥ ಮತ್ತೊಂದೇ. ಕೊನೆಗೆ ಹೇಳುವವನಿಗೂ ಕೇಳುವವನಿಗೂ ಇಬ್ಬರಿಗೂ ಬೇಜಾರಾಗಿ ಸಂವಾದವೇ ಸಾಧ್ಯವಿಲ್ಲದೆ ಹೋಗುವುದು. ನಾನು ಹೇಳಬೇಕೆಂದಿರುವ ಕತೆಯೂ ಅಷ್ಟೇ: ದೇವರ ಜೊತೆ ಸಂವಾದಿಸಲು ಹೊರಟವನ ಬಗ್ಗೆ; ಸಂವಾದಿಸುವುದರ ಬಗ್ಗೆ.

ಮೊದಲೇ ಹೇಳಿದ ಹಾಗೆ, ಪ್ಲೇಗು ಬಂದು ಹೋದಂದಿನಿಂದ ಗೋಪಾಲಕೃಷ್ಣನ ಮೂರ್ತಿ ಈ ಊರಿನ ಗ್ರಾಮದೇವತೆಯಾಗಿದೆ. ಗೋಪಾಲಕೃಷ್ಣ ದೇವರನ್ನು ಕೇಳದೆ ಯಾರೂ ಒಂದು ಹೆಜ್ಜೆ ಚಲಿಸುವುದಿಲ್ಲ.

ಇದನ್ನು ಓದಿದ್ದೀರಾ?: ಶ್ರೀಕೃಷ್ಣ ಆಲನಹಳ್ಳಿ ಅವರ ಕತೆ | ಆಗಂತುಕ

ಈ ಊರಿನ ಸಮಸ್ತ ಸೂತ್ರವನ್ನೂ ಆ ದೇವರು ಹೊತ್ತಿದ್ದಾನೆ. ವರ್ಷಕ್ಕೊಮ್ಮೆ ಉತ್ಸವ, ಜಾತ್ರೆ, ಭರ್ಜರಿ ಪೂಜೆ ನಡೆಯುತ್ತದೆ. ಒಂದು ವಾರ ಕಾಲ ಊರವರೆಲ್ಲಾ, ವೈಭವ, ವಿಜೃಂಭಣೆಗಳಿಂದ ಒಂದು ಕಡೆ ನೆರೆಯುತ್ತಾರೆ. ಹೆಂಗಸರು ಮಕ್ಕಳಾದಿಗಳಿಂದ ತುಂಬಿ ಕೋಲಾಹಲ ಗೌಜುಗಳಿಂದ ಊರಿಡೀ ಗಿಜಿಗುಟ್ಟುತ್ತಿರುತ್ತದೆ. ರಥೋತ್ಸವ, ಹಣ್ಣುಕಾಯಿ, ಮಹಾಪೂಜೆಗಳು ನಡೆಯುತ್ತವೆ. ಇವರ ಜೀವನದಲ್ಲಿ ಬರುವ ಒಂದು ಸಂಭ್ರಮ ಎಂದರೆ ಇದು. ಬಲ್ಲವರು ಈ ಉತ್ಸವ ಹಿಂದೆ ಅರಸರಿದ್ದಾಗ ನಡೆಸುತ್ತಿದ್ದ ಉತ್ಸವದ ಸರಿಸಮ ಬರುವಂಥಾದ್ದು ಎನ್ನುತ್ತಾರೆ. ಒಂದು ವಾರದ ಉತ್ಸವ ಕಳೆದ ಮೇಲೆ ಈ ಊರು ತಣ್ಣನೆಯ ಬೀಡಾಗುತ್ತದೆ. ಮತ್ತೆ ಮೊದಲಿನ ಹಾಗೆ ಜನರು ಬೆಳಿಗ್ಗೆ ಹೊತ್ತಿನಲ್ಲಿ ಹೊಳೆಗೆ ಹೋಗಿ, ಮೌನವಾಗಿ ಬಟ್ಟೆ ಒಗೆದು ಮನೆ ಸೇರಿ, ಮಕ್ಕಳು ಗಲಾಟೆ ಮಾಡಿದರೆ ಕಿಟ್ಟಣ್ಣನ ಕತೆ ಹೇಳಿ ಸುಮ್ಮನಿರಿಸಿ, ಊಟ ಮಾಡಿ, ಪಾರಾಯಣ, ನಿದ್ದೆ-ಮಧ್ಯಾಹ್ನ ಉರಿಯುವ ಸ್ಮಶಾನ ಭೀಕರತೆಯಲ್ಲಿ, ಮುಸ್ಸಂಜೆ ನಾಯಿಯ ಪಾಂಕಿನಲ್ಲಿ ಊರು ಮುಳುಗುತ್ತದೆ. ವರ್ಷವಿಡೀ ಮನೆಯಲ್ಲಿ ಆಗಾಗ ಮನೆ ಜನರು ಜಾತ್ರೆಯ ಉತ್ಸವವನ್ನು ಜ್ಞಾಪಿಸಿಕೊಳ್ಳುವುದನ್ನೋ ಜಾತ್ರೆಯಲ್ಲಿ ಕೊಂಡಿದ್ದೇನನ್ನೋ ಭದ್ರವಾಗಿ ಕಾಪಾಡಿಕೊಳ್ಳುವುದನ್ನೋ ಕಾಣಬಹುದು. ಆ ಕನಸಿನ ಲೋಕ ಅವರ ಮುಂದೆ ಮತ್ತೆ ಮತ್ತೆ ಎದುರಾಗಿ ದಿನಕ್ರಮದ ಜೀವನದ ಜಡತೆಯಲ್ಲಿ ಕನಸಿನ ಸಂಭ್ರಮವನ್ನು ಸೃಷ್ಟಿಸುತ್ತದೆ. ಆ ಕನಸಿನ ಲೋಕಕ್ಕೆ ಅವರು ವರ್ಷವಿಡೀ ಜೋಲುತ್ತಾರೆ.

ಗೋಪಾಲಕೃಷ್ಣ ದೇವರ ಕಾರಣಿಕವೂ ಅಂಥದ್ದೇ ಅಂತೆ. ಗೋವಿಂದಾಚಾರ್‍ರಿಗೆ ಮಗು ಹುಟ್ಟಿದಾಗ ಪೂಜೆ ಮಾಡಿಸಿ ಪ್ರಸಾದ ತೆಗೆದುಕೊಳ್ಳುವ ಹೊತ್ತು ದೇವರ ದೀಪ ಆರಿ ಹೋಯಿತಂತೆ. ಒಂದೇ ವಾರದಲ್ಲಿ ಮಗು ತೀರಿಹೋಯಿತು. ಶ್ಯಾಮಾಚಾರು ಇನ್ನೊಂದು ಕತೆ ಹೇಳುತ್ತಾರೆ. ರಾಮಾಚಾರು ಎಂಬೊಬ್ಬರಿಗೆ ಒಂದು ದಿನ ಗೋಪಾಲಕೃಷ್ಣ ಕನಸಿನಲ್ಲಿ ಕಾಣಿಸಿಕೊಂಡ- ಅವರು ಪೂಜೆ ಮಾಡಿಸಿ ಪ್ರಸಾದಕ್ಕೆ ಕೈಯೊಡ್ಡಿದ ಹಾಗೆ, ಇನ್ನೊಂದು ತಿಂಗಳಿಗೆ ನಿನ್ನ ಜನ್ಮವಾರ, ಜನ್ಮನಕ್ಷತ್ರ, ಜನ್ಮತಿಥಿ ಒಂದೇ ದಿನದಲ್ಲಿ ಬರುತ್ತದೆ, ಆಗ ತೀರ್ಥ ಕೊಡುತ್ತೇನೆ ಎಂದ ಹಾಗೆ. ರಾಮಾಚಾರ್‍ರು ಅದೇ ದಿನ ಕೈಲಾಸವಾಸಿಗಳಾದರು. ಮುಖ್ಯ ಸಂಗತಿಯೆಂದರೆ, ದೇವರಿಗೆ ಊರವರೆಲ್ಲಾ ಹೆದರುತ್ತಾರೆ. ಮುಖ್ಯವಾಗಿ ಈ ಕಾರಣಕ್ಕಾಗಿಯೇ ಊರಿನ ನೀತಿ ನಿಯಮಗಳನ್ನು ಯಾರೂ ಉಲ್ಲಂಘಿಸಲು ಹೋಗುವುದಿಲ್ಲ.

ಇದನ್ನು ಓದಿದ್ದೀರಾ?: ಪಿ.ಲಂಕೇಶ್ ಅವರ ಕತೆ | ಕಲ್ಲು ಕರಗುವ ಸಮಯ

ಈ ಕಥೆಗೆ ಸಂಬಂಧಪಟ್ಟದ್ದೇ ಗೋವಿಂದನ ಕತೆ. ಗೋವಿಂದನಿಗೆ ಅಪ್ಪ, ಅಮ್ಮ ಇಲ್ಲ. ಯಾವುದೋ ಊರಿನಲ್ಲಿ ಮಾರ್ಗದ ಬದಿಯಲ್ಲಿ ಬಿದ್ದಿದ್ದ ಅವನನ್ನು ಯಾರೋ ಎತ್ತಿಕೊಂಡು ಬಂದು ಸಾಕಿದರು. ಅವರಿಗೆ ಎತ್ತಿಕೊಂಡು ಬರಲು ಹೇಗೆ ಮನಸ್ಸಾಯಿತು, ಊರವರು ಅದಕ್ಕೆ ಹೇಗೆ ಒಪ್ಪಿಗೆ ನೀಡಿದರು ಎಂದು ಯಾರೂ ವಿವರಿಸುವುದಿಲ್ಲ. ಈ ಊರಿಗೆ ಬಂದ ಮೇಲೆ ಈ ಊರಿನ ನೀತಿ ನಿಯಮಗಳನ್ನು ಕಲಿತು ಅವನೂ ಈ ಊರಿನ ಹುಡುಗನಾಗಿಬಿಟ್ಟ. ಆದರೆ ಗೋವಿಂದ ಚಿಕ್ಕಂದಿನಿಂದಲೇ ಉಳಿದ ಹುಡುಗರಿಗಿಂತ ಬೇರೆಯಾಗಿದ್ದವನು. ವೆಂಕಟಯ್ಯನವರ ಜುಟ್ಟು, ಬೋಳು ತಲೆಯ ಮೇಲೆ ಬಿಸಿಲಿನಲ್ಲಿ ಕುಣಿಯುತ್ತಾ ಹಲ್ಲಿಯ ಬಾಲದ ಹಾಗೆ ಕಾಣುತ್ತದೆಂದು, ಇವನ ಜೊತೆಗೆ ತೆಪ್ಪಗೆ ಬರುತ್ತಿದ್ದ ಹುಡುಗರ ಮುಖದಲ್ಲಿ ನಗೆ ಮೂಡಿಸುತ್ತಿದ್ದ. ಪೋಲಿ ಜೋಕುಗಳನ್ನು ಮಾಡುತ್ತಿದ್ದ. ಮನೆ, ಐಗಳ ಶಾಲೆ ಇವಷ್ಟೇ ಪ್ರಪಂಚವಾಗಿದ್ದ ಹುಡುಗರಿಗೆ ಇವನ ರೀತಿ ಹೊಸದಾಗಿತ್ತು. ಸ್ವಲ್ಪ ದೊಡ್ಡವನಾಗುತ್ತಿದ್ದ ಹಾಗೇ ಅವನಿಗೆ ಈ ಊರು ಬಿಟ್ಟು ಬೇರೆ ಎಲ್ಲಿಗಾದರೂ ಹೋಗಿ ನನ್ನ ಜೀವನ ನಾನು ಬದುಕಬೇಕು ಅನ್ನಿಸಿರಬೇಕು. ಹದಿಮೂರು ಹದಿನಾಲ್ಕು ವರ್ಷವಾಗುತ್ತಲೇ ಒಂದು ದಿನ ಮಂಗಳೂರಿಗೆ ಹೊರಟುಬಿಟ್ಟ. ಊರವರು ಯಾರೂ ಅವನನ್ನು ತಡೆಯಲಿಕ್ಕೆ ಹೋಗಲಿಲ್ಲ. ಅವನನ್ನು ಎತ್ತಿಕೊಂಡು ಬಂದಾಗ ಸುಮ್ಮನಿದ್ದ ಹಾಗೆ ಈಗಲೂ ಸುಮ್ಮನಿದ್ದರು.

ಮಂಗಳೂರಿನಲ್ಲಿ ಗೋವಿಂದ ಒಂದು ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದ. ಹೋಟೆಲ್ಲಿನಲ್ಲಿ ಕೆಲಸ ಮಾಡುತ್ತಾ ಶಾಲೆಗೆ ಸೇರಿ ಅವನು ಬಿ.ಎ.ವರೆಗೂ ತಲುಪಿದ. ಶಾಲೆಯಲ್ಲಿ, ಆಮೇಲೆ ದೊಡ್ಡವನಾದ ಮೇಲೆ ಅವನಿಗೆ ಕೆಲವರು ಗೆಳೆಯರಾದರು. ಕ್ರಾಂತಿಕಾರಿ ಮನೋಭಾವವಿದ್ದ ಗೆಳೆಯರು. ಅವರಲ್ಲಿ ರಾಮಭಟ್ಟ ಎನ್ನುವವನೊಬ್ಬನಿಗೂ ಗೋವಿಂದನಿಗೂ ನಿಕಟ ಸ್ನೇಹವೇರ್ಪಟ್ಟಿತು. ರಾಮಭಟ್ಟ ಅತ್ಯಂತ ಸಂಪ್ರದಾಯಸ್ಥ ಬ್ರಾಹ್ಮಣರ ಮನೆತನದಲ್ಲಿ ಬೆಳೆದು ಬಂದವನು. ಮಂಗಳೂರಿಗೆ ಬಂದವನೇ ಅವನು ಜನಿವಾರ ಕಿತ್ತು ಬೆಂಕಿಕೊಟ್ಟ. ಮಾಂಸ ತಿಂದ; ಬೀರು ಕುಡಿದ. ದೇವರ ಮೇಲೆ ಗೋವಿಂದನಿಗಿದ್ದ ಹೆದರಿಕೆಯನ್ನು ಹೋಗಲಾಡಿಸಿದವನೂ ಅವನೇ. ಗೋವಿಂದ ಮತ್ತು ರಾಮಭಟ್ಟ-ದೇವರು ನಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ನುಂಗುವುದಕ್ಕೆ ಕೂತವನು, ನಮ್ಮ ವ್ಯಕ್ತಿತ್ವ ಏನಿದ್ದರೂ ನಾವೇ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುತ್ತಿದ್ದರು. ಸಮಾಜದಿಂದ ಸಂಪೂರ್ಣ ಬೇರೆಯಾಗಿ ನಿಂತು ನಮ್ಮ ವ್ಯಕ್ತಿತ್ವ ನಿರ್ಮಿಸಿಕೊಳ್ಳುವುದು ನಮ್ಮ ಗುರಿಯಾಗಬೇಕು, ಅದು ಸಾಧ್ಯವಾಗಬೇಕು ಎನ್ನುವುದು ಅವರ ಅಭಿಪ್ರಾಯ. ಅವರು ಮುಖ್ಯವಾಗಿ ಮಾರ್ಕ್ಸನನ್ನೂ, ಕಮೂನನ್ನೂ ಓದುತ್ತಿದ್ದರು. ಮೂಲಭೂತವಾಗಿ ಹಳೆಯ ಸಾಮಾಜಿಕ ವ್ಯವಸ್ಥೆ ಬದಲಾಗಿಬಿಡಬೇಕೆಂದು ಅವರ ಆಸೆಯಾಗಿತ್ತು. ಓದುವಾಗ, ಚರ್ಚೆ ಮಾಡುವಾಗ ಗೋವಿಂದನಿಗೆ ತನ್ನ ಊರಿನ ನೆನಪಾಗುತ್ತಿತ್ತು. ಎಲ್ಲರೂ ದೇವರಿಗೆ ಜೋತುಬಿದ್ದು, ಹೆದರುತ್ತಾ, ಮೌಡ್ಯಹಿಡಿದ ವರ್ತಮಾನದಲ್ಲಿ ಹಿಂದಿನ ಕಾಲದ ವೈಭವವನ್ನು ಸ್ಮರಿಸಿಕೊಳ್ಳುತ್ತಾ ಬದುಕುತ್ತಿದ್ದುದನ್ನು ನೆನೆಸಿದಾಗ ಅದನ್ನು ಮೂಲಭೂತವಾಗಿ ಬದಲಾಯಿಸಬೇಕು, ಇಲ್ಲಿ ಏನಾದರೂ ಹೊಸತು ಸಂಭವಿಸಬೇಕು ಅನ್ನಿಸುತ್ತಿತ್ತು. ನಾವು ಹಳೆಯ ವ್ಯವಸ್ಥೆಗಳ ವಿರುದ್ಧ ದಂಗೆಯೇಳದಿದ್ದರೆ ಈಗ ಇರುವ ಹಾಗೇ ಎಲ್ಲವೂ ಚಕ್ರ ಸುತ್ತುತ್ತಾ ಏನೂ ಸೃಷ್ಟಿಯಾಗುವುದೇ ಇಲ್ಲವೆಂದು ಅವನಿಗೆ ಗೊತ್ತಿತ್ತು.

ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ

ಗೋವಿಂದನಲ್ಲಿ ಈ ಬದಲಾವಣೆಯೆಲ್ಲಾ ಒಟ್ಟಿಗೇ ಆಯಿತೆಂದು ನಾನು ಹೇಳಿದರೂ ಅಷ್ಟು ಸುಲಭವಾಗಿ ಆಗಲಿಲ್ಲ. ನಿಧಾನವಾಗಿ, ಐದಾರು ವರ್ಷಗಳಲ್ಲಿ ಸ್ವಲ್ಪ ಸ್ವಲ್ಪವಾಗಿಯೇ ಆಯಿತು. ಯಾವ ರೀತಿಯಲ್ಲಿ ಆಯಿತು ಎನ್ನುವ ಒಂದು ರೂಪರೇಷೆ ಕೊಡುವುದಕ್ಕಾಗಿ ಮಾತ್ರ ಹೀಗೆ ಅವಸರವಸರವಾಗಿ ಹೇಳಿದೆ, ಅಷ್ಟೇ. ಇದರ ಪರಿಣಾಮವೆಂದರೆ, ಅವನಿಗೆ ಜಗತ್ತಿನ ಮೇಲೆ ಸಿಟ್ಟು ಬಂದಿತು. ಎಲ್ಲರೂ ತನ್ನನ್ನು ಹಿಡಿದು ಅದುಮುತ್ತಿದ್ದಾರೆಂದು ಸಹಜವಾಗಿಯೇ ಅನ್ನಿಸಿತು. ಇದಕ್ಕೆ ಒಂದು ಉದಾಹರಣೆಯೆಂದರೆ ಅವನು ಅವರ ಹೋಟೆಲ್ಲಿನ ಯಜಮಾನರ ಜೊತೆ ಜಗಳವಾಡಿದ್ದು, ಅವರು ಉಡುಪಿಯ ಬ್ರಾಹ್ಮಣರು, ತಮ್ಮ ಕೆಲಸಗಾರರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಅವರ ವ್ಯಕ್ತಿತ್ವದ ಮೇಲೆ ತಮ್ಮ ಅಧಿಕಾರ ಮುದ್ರಿಸುತ್ತಿದ್ದರು. ದಿನದ ಎಂಟು ಗಂಟೆಯ ಅವಿರತ ಕೆಲಸಕ್ಕೆ ಅವರು ಕೊಡುತ್ತಿದ್ದುದು ಹತ್ತು ರೂಪಾಯಿ ಸಂಬಳ, ಮೂರು ಹೊತ್ತು ಊಟ. ಊಟ ಕೊಡುತ್ತಿದ್ದರಾದರೂ ಮಿತಿಗಿಂತ ಹೆಚ್ಚು ಊಟ ಮಾಡದ ಹಾಗೆ ತಾವೇ ಬಂದು ಪರೀಕ್ಷಿಸುತ್ತಾ ನಿಲ್ಲುತ್ತಿದ್ದರು. ಗೋವಿಂದ ಒಂದು ದಿನ ಮಿತಿಗಿಂತ ಹೆಚ್ಚು ಊಟ ಮಾಡುತ್ತಿದ್ದ. ಯಜಮಾನರು ಬಂದು ಬೈಯುವುದಕ್ಕೆ ಸುರು ಮಾಡಿದರು. ಗೋವಿಂದನಿಗೆ ಈ ಗುಲಾಮಗಿರಿ ರೋಸಿ ಹೋಗಿತ್ತು. ಅವನು ಸಾರು ಹಾಕಿದ ಕಪ್ಪನ್ನು ತೆಗೆದು ಯಜಮಾನನ ಮುಖಕ್ಕೆ ಬೀಸಿ ಒಗೆದ. ಹೋಟೆಲ್ಲಿನಲ್ಲಿ ದೊಡ್ಡ ಗಲಾಟೆಯಾಯಿತು. ಹೋಟೆಲ್ಲಿನಲ್ಲಿ ಇವನ ಹಾಗೆ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ರೂಢಿಯಿಲ್ಲದ ಈ ಹೊಸ ರೀತಿಯಿಂದ ಗಾಬರಿಯಾಗಿ ಗೋವಿಂದನ ಸಹಾಯಕ್ಕೆ ಬರುವುದರ ಬದಲು ಯಜಮಾನರ ಸಹಾಯಕ್ಕೆ ಧಾವಿಸಿದರು. ಗೋವಿಂದನನ್ನು ಹೋಟೆಲ್ಲಿನಿಂದ ಕತ್ತು ಹಿಡಿದು ಹೊರಗೆ ತಳ್ಳಿದರು. ಕೆಲಸಗಾರರು ಮತ್ತೆ ಕೆಲಸಕ್ಕೆ ಹೋದರು. ಅವನು ಏನು ಮಾಡುವುದೋ ಗೊತ್ತಾಗದೇ, ಅಪಮಾನ, ಸಿಟ್ಟಿನಿಂದ ಕುರುಡನಂತಾಗಿ ರಾಮಭಟ್ಟನ ರೂಮಿಗೆ ಬಂದ. ರಾಮಭಟ್ಟ ಅವನನ್ನು ಕೂರಿಸಿಕೊಂಡು ಬಹಳ ಹೊತ್ತು ಸಂತೈಸಿದ. ತಾನು ಇಷ್ಟು ಗಲಾಟೆ ಮಾಡಿದ ಮೇಲೂ ಎಲ್ಲವೂ ಮೊದಲಿನ ಹಾಗೇ ನಡೆಯುವುದು ನೋಡಿ ಅವನಿಗೆ ವ್ಯಥೆಯಾಗಿತ್ತು. ಗೋವಿಂದ ಬಿ.ಎ.ಯಲ್ಲಿ ಓದುತ್ತಿದ್ದ. ಈಗ ಅದನ್ನು ಹೇಗೂ ಬಿಡಲೇಬೇಕಷ್ಟೇ. ರಾಮಭಟ್ಟ ಗೋವಿಂದನಿಗೆ ಊರಿಗೆ ಹೋಗುವುದಕ್ಕೆ ಸಲಹೆ ಮಾಡಿದ. ಮೊದಮೊದಲು ಗೋವಿಂದ ಒಪ್ಪಲಿಲ್ಲವಾದರೂ ಕೊನೆಗೆ ಊರಿಗೆ ಹೊರಟ.

ನಾಲೈದು ವರ್ಷ ಕಳೆದ ಮೇಲೆ ಅವನು ಊರಿಗೆ ಬಂದಿದ್ದ. ಅಷ್ಟರವರೆಗೆ ಈ ಊರಿನಿಂದ ಹೀಗೆ ಊರುಬಿಟ್ಟು ಹೋಗಿ ಬಹಳ ಕಾಲ ಹೊರಗಿದ್ದವರು ಯಾರೂ ಇಲ್ಲ-ನಗರದ ಸಂಪರ್ಕವಂತು ಮೊದಲೇ ಇಲ್ಲ. ಅಲ್ಲೇ ಹುಟ್ಟಿ, ಮದುವೆ ಆಗಿ, ಅದೇ ಹೊಳೆಯ ನೀರು ಕುಡಿದು, ದೇವರ ಮಹಿಮೆ ಕೊಂಡಾಡಿ, ಅದೇ ಸ್ಮಶಾನದಲ್ಲಿ ಬೆಂಕಿ ಕಾಣುವವರು. ಗೋವಿಂದ ಬಂದಾಗ ಯಾರೂ ಏನೂ ಅನ್ನಲಿಲ್ಲ. ಜುಟ್ಟು, ವಿಭೂತಿ ಇವಷ್ಟೇ ಗೊತ್ತಿದ್ದ ಐಗಳ ಶಾಲೆಯ ಹುಡುಗರು ಅವನ ಕ್ರಾಪನ್ನೂ ಚಪ್ಪಲಿಯನ್ನೂ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದವು. ಅವನಿಗೆ ಊರಿಗೆ ಬಂದ ಮೇಲೆ ಊರವರ ಗೊಡ್ಡು ನೀತಿಗಳನ್ನು ನೋಡಿ ಮತ್ತಷ್ಟು ಸಿಟ್ಟು ಬಂತು. ಸ್ವಾತಂತ್ರ್ಯವೇ ಇಲ್ಲದೆ ತಾನು ಸದಾ ಯಾವುದಕ್ಕೋ ಬಂಧಿತನಾದ ಹಾಗೆ ಅನ್ನಿಸುತ್ತಿತ್ತು.

ಇದನ್ನು ಓದಿದ್ದೀರಾ?: ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು

ಇದೇ ಸಮಯದಲ್ಲಿ ಇನ್ನೊಂದು ಕತೆಯಾಗಿತ್ತು. ಗೋವಿಂದನ ತಂಗಿಗೆ- ತಂಗಿ ಅಂದರೆ ತಂಗಿ ಅಲ್ಲ ಅವನನ್ನು ಸಾಕಿದವರ ಮಗಳು- ಹುಚ್ಚು ಹಿಡಿಯಿತು. ಊರಿನಲ್ಲಿ ಗಂಡು-ಹೆಣ್ಣು ಜಾತಕ ಕೂಡಿ ಬರುತ್ತದೋ ಎಂದು ನೋಡುವುದಕ್ಕೆ ಗೋಪಾಲಕೃಷ್ಣ ದೇವರ ಎದುರು ಹೂಕಟ್ಟಿ ಹಾಕಿ ನೋಡುವುದು ಪದ್ಧತಿ. ಬಿಳಿ ಹೂ ಬಂದರೆ ಅಸ್ತು ಎಂದೇ ಅರ್ಥ. ಊರಿನಲ್ಲಿ ಪ್ರತಿಯೊಂದು ಮದುವೆಯೂ ಹೀಗೇ ನಡೆದದ್ದು. ಗೋವಿಂದನ ತಂಗಿಯನ್ನು ಇದೇ ರೀತಿಯಲ್ಲಿ ಜಾತಕ ನೋಡಿ ಗೋಪಾಲಕೃಷ್ಣಾಚಾರ್‍ರು ಎಂಬೊಬ್ಬರ ಮಗನಿಗೆ ಮದುವೆ ಮಾಡಿಕೊಟ್ಟರು. ಹನ್ನೆರಡು ವರ್ಷಕ್ಕೇ ರುದ್ರ ಜಟೆಗಳನ್ನು ಧ್ವನಿ ತಪ್ಪದೇ ಹೇಳಲು ಕಲಿತನೆಂದು ಊರವರೆಲ್ಲಾ ಅವನನ್ನು ಕೊಂಡಾಡುತ್ತಿದ್ದರು. ಆದರೆ ಮದುವೆಯಾದ ಆರು ತಿಂಗಳಿಗೆ ಅವನು ಹಾವು ಕಚ್ಚಿ ತೀರಿಕೊಂಡ. ಅವನ ಹೆಂಡತಿ- ಹದಿಮೂರು ಹದಿನಾಲ್ಕು ವರ್ಷದ ಹುಡುಗಿ- ಕೇಶಮುಂಡನ ಮಾಡಿಸಿಕೊಂಡು ಕೆಂಪು ಸೀರೆ ಉಟ್ಟಳು. ಎರಡು ಮೂರು ತಿಂಗಳಿಗೆ ಅವಳಿಗೆ ಹುಚ್ಚು ಹಿಡಿಯಿತು. ಊರವರು ಇದು ಗೋಪಾಲಕೃಷ್ಣ ದೇವರ ಶಾಪ ಎಂದು ಮಾತಾಡಿಕೊಂಡರು. ಅವಳ ಅಪ್ಪ ಬೀದಿಯಲ್ಲಿ ಬಿದ್ದಿದ್ದ ಯಾವುದೋ ಜಾತಿಯವನನ್ನು ಮನೆಗೆ ನುಗ್ಗಿಸಿಕೊಂಡಿದ್ದರಿಂದ ಗೋಪಾಲಕೃಷ್ಣ ದೇವರಿಗೆ ಸಿಟ್ಟು ಬಂದಿದೆ, ಮಗಳು ಫಲ ಅನುಭವಿಸುತ್ತಿದ್ದಾಳೆ ಎಂದು ಮಾತಾಡಿಕೊಂಡರು.

ಗೋವಿಂದ ಬಂದ. ತಂಗಿಯ ಹುಚ್ಚು ನೋಡಿ ಅವನಿಗೆ ಎಲ್ಲಿಲ್ಲದ ಸಿಟ್ಟು ಬಂತು. ಅವಳು ಮಧ್ಯಾಹ್ನದ ಬಿಸಿಲಿನಲ್ಲಿ ಬೀದಿಯುದ್ದಕ್ಕೂ ಓಡುತ್ತಾ ದೇವರ ಗುಡಿಯ ಮೆಟ್ಟುಕಲ್ಲಿಗೆ ತಲೆ ಜಪ್ಪಿಕೊಳ್ಳುತ್ತಿದ್ದಳು. ಮೊದಮೊದಲು ತಡೆಯಲು ಪ್ರಯತ್ನಿಸುತ್ತಿದ್ದ ಊರವರು ಆಮೇಲೆ ಅದನ್ನು ಮಾಮೂಲು ದೃಶ್ಯವೆಂದು ತೆಗೆದುಕೊಂಡರು. ಗೋವಿಂದ ಬಂದಾಗ ಯಾರ ಮನೆಗೂ ಹೋಗಿರಲಿಲ್ಲ. ಮಧ್ಯಾಹ್ನ ಯಾರ ಮನೆಗಾದರೂ ಒಂದೊಂದು ಸಲ ಊಟಕ್ಕೆ ಹೋದರೆ ಹೋದ, ಇಲ್ಲವಾದರೆ ಇಲ್ಲ. ಊರವರು ಅವನನ್ನು ಮನೆಗೆ ಬರುವಂತೆ ಕರೆದರು. ಒಂದು ಸಲ ಅವರ ಜತೆ ಸೇರಿದ ಮೇಲೆ ನಿಧಾನವಾಗಿ ತಾನೂ ಆ ಸ್ಥಾಪಿತ ಸಮಾಜದವನಾಗಿ ಬಿಡುತ್ತೇನೆಂದು ಅವನಿಗೆ ಭಯವಾಯಿತು. ಮೊದಮೊದಲು ಕರೆಯುತ್ತಿದ್ದವರು ಆಮೇಲೆ ಇವನೊಬ್ಬ ಹುಚ್ಚ ಎಂದುಕೊಂಡು ತೃಪ್ತಿಪಟ್ಟುಕೊಂಡರು. ಗೋವಿಂದನಿಗೆ ಇನ್ನೂ ಬಿಸಿ ರಕ್ತದ ಯುವಕರು ಹೇಗೆ ಮುದುಕರ ಹಾಗೆ ಮಾತಾಡುತ್ತಾ, ಯೌವನದಲ್ಲೇ ಮುದುಕರಾಗುತ್ತಾ ಹೇಗೆ ಜಡ್ಡು ಬಿದ್ದ ಜೀವನ ಬದುಕುತ್ತಿದ್ದಾರೆನ್ನುವುದು ಎದುರೇ ಕಾಣಿಸುತ್ತಿತ್ತು. ಇಡೀ ಊರೇ ಬದಲಾಗಿ ಬಿಡಬೇಕು, ಈ ಕಂದಾಚಾರಗಳನ್ನೆಲ್ಲಾ ಸುಟ್ಟು ಬಿಡಬೇಕು ಎನ್ನಿಸುತ್ತಿತ್ತು. ಅವನ ತಂಗಿಯ ಯೌವನ ದೇವರ ಭಯದಲ್ಲಿ ಕೆಂಪು ಸೀರೆಯಲ್ಲಿ, ಬೋಳಿಸಿದ ಕೇಶದಲ್ಲಿ ಒಣಗಿ ಹೋಗುತ್ತಿತ್ತು. ಈ ಊರಿನಲ್ಲಿರುವವರೆಲ್ಲಾ ಹಳೆಯ ಗುಡಿಗಳಿಗೆ, ಕಂದಾಚಾರಕ್ಕೆ, ದೇವರಿಗೆ ಜೋತು ಬಿದ್ದ ಗೊಡ್ಡು ಬ್ರಾಹ್ಮಣರು; ಈ ದೇವರನ್ನೆಲ್ಲಾ ತೆಗೆದು ತಿಪ್ಪೆಗುಂಡಿಗೆಸೆಯಬೇಕು ಎನ್ನಿಸುತ್ತಿತ್ತು ಗೋವಿಂದನಿಗೆ. ಅವರವರ ಕರ್ಮಕ್ಕೆ ದೇವರು ಪಡಿಕೊಡುವುದಕ್ಕೆ ನಾವು ಹೊಣೆಯೆ? ಎಂದು ಊರವರು ಮಾತಾಡಿಕೊಂಡರು.

ಇದನ್ನು ಓದಿದ್ದೀರಾ?: ಗಿರಡ್ಡಿ ಗೋವಿಂದರಾಜ ಅವರ ಕತೆ | ನಮ್ಮೂರಿನಲ್ಲೊಬ್ಬ ತಲಾಠಿ

ಆಗಲೇ ನೋಡಿ ಈ ಘಟನೆ ನಡೆದದ್ದು. ಒಂದು ದಿನ ಮುಂಜಾವದ ಹೊತ್ತಿನಲ್ಲಿ ಎಲ್ಲರೂ ಇನ್ನೂ ಮಲಗಿದ್ದಾಗಲೇ ಛಟಛಟ ಎಂದು ಬೆಂಕಿಗೆ ಬಿದಿರುಗಂಟು ಒಡೆಯುವ ಶಬ್ದ ಕೇಳಿಸಿತು. ಏನೆಂದು ಹೋಗಿ ನೋಡುತ್ತಾರೆ-ಗೋಪಾಲಕೃಷ್ಣ ಗುಡಿ ಉರಿಯುತ್ತಿತ್ತು. ಮುಕ್ಕಾಲಂಶ ಆಗಲೇ ಉರಿದು ಮುಗಿದಿತ್ತು. ಒಂದು ಕ್ಷಣ ಏನಾಗುತ್ತಿದೆಯೆಂದು ಗೊತ್ತಾಗದೆ ಎಲ್ಲರೂ ದಿಗ್ಭ್ರಾಂತರಾಗಿ ನಿಂತರು. ಕತ್ತಲೆಯೇ ಉರಿಯುತ್ತಿದ್ದಂತೆ ಉರಿಯುತ್ತಿದ್ದ ಬೆಂಕಿ. ಬೆಂಕಿ ಬಿದ್ದಿರುವುದು ದೇವರ ಗುಡಿಗೇ ಎಂದು ಆಗತಾನೇ ಎದ್ದು ಕಣ್ಣು ಹೊಸಕಿಕೊಳ್ಳುತ್ತಿದ್ದ ಊರವರ ಮನಸ್ಸಿಗೆ ಬರುವುದಕ್ಕೆ ಸ್ವಲ್ಪ ಹೊತ್ತು ಬೇಕಾಯಿತು. ದಿಗ್ಭ್ರಾಂತಿಯಲ್ಲಿ ಆಚೀಚೆ ಕುರುಡರಂತೆ ಪರದಾಡುತ್ತಾ ನೀರು ಹೊತ್ತುತಂದು ಆರಿಸುವುದಕ್ಕೆ ನೋಡಿದರು. ದೇವಸ್ಥಾನ ಆಗಲೇ ಹೊತ್ತಿ ಮುಗಿದಿತ್ತು. ಗಳಗಳು ಹೊತ್ತಿ ಉರಿಯುತ್ತಾ ಕೆಳಗೆ ಬಿದ್ದು ಮಸಿಯಾಗುತ್ತಿದ್ದವು. ಬೆಂಕಿಯ ನಾಲಗೆಗಳು ಆಕಾಶ ಮುಟ್ಟುತ್ತಿದ್ದವು. ಅಷ್ಟು ಹೊತ್ತಿಗೆ ಬೆಳಗಾಗುತ್ತಾ ಬಂದಿತ್ತು. ದೇವರ ಮುಖದ ಜಾಗದಲ್ಲಿ ಕರಗಿದ ಕಂಚಿನ ಮುದ್ದೆಯೊಂದಿತ್ತು. ಶಂಖ ಚಕ್ರ ಗದಾಪದಗಳು ಬಿಸಿಗೆ ಕರಗಿ ಕಂಚಿನ ನೀರು ಕೆಳಗೆ ಇಳಿಯುತ್ತಿತ್ತು. ಹೊಂಗಿರಣಗಳು ಅದರ ಮೇಲೆ ಬಿದ್ದು ಅದು ಮಿರಿಮಿರಿ ಮಿಂಚುತ್ತಿತ್ತು.

ಊರವರಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಜೋತುಕೊಂಡಿದ್ದ ಸಂಭ್ರಮದ ಲೋಕ ಚೂರಾಗಿ ದಿನನಿತ್ಯದ ಅಭ್ಯಾಸ ತಪ್ಪಿ ಅವರು ಬೋಳು ಬಯಲಲ್ಲಿ ನಿಂತಿದ್ದರು. ದೇವರು ವಿಕಾರವಾಗಿ ನಿಂತಿದ್ದ. ಕನಸು ಕಾಣುತ್ತಿದ್ದವರಿಗೆ ಎಚ್ಚರವಾದಾಗ ಉರಿಯುವ ಕೊರೆಯುವ ರಾತ್ರಿಯ ವಾಸ್ತವತೆ ಎದುರು ನಿಂತಾಗ ಅವರೆಲ್ಲಾ ಕಂಗಾಲಾದರು. ಗಲಾಟೆ ಎಂದರೆ ಪ್ರಾಣ ಬಿಡುತ್ತಿದ್ದವರು ಇನ್ನೇನು ವಿಪತ್ತು ಕಾದಿದೆಯೋ ಎಂದು ಮೊದಲ ಬಾರಿ ತೊಡಕಿಗೆ ಸಿಕ್ಕಿ ತೊಳಲಿದರು. ಯಾರೋ ಸತ್ತು ಹೋಗಿ, ಹೆಣ ಕೊಳೆಯುತ್ತಿದ್ದು, ಸುಡದೆ ಇಟ್ಟುಕೊಂಡ ಹಾಗೆ ಆತಂಕಿತರಾದರು. ಹೆಂಗಸರು ಮಕ್ಕಳಾದಿಯಾಗಿ ಎಲ್ಲರೂ ಗುಡಿಯ ಮುಂದೆ ನೆರೆದಿದ್ದರು.

ಇದನ್ನು ಓದಿದ್ದೀರಾ?: ಬಿ.ಸಿ. ದೇಸಾಯಿ ಅವರ ಕತೆ | ಸಾವು

ಇತ್ತ ಗೋವಿಂದನಿಗೆ ತಲೆಯ ಮೇಲಿನ ಒಂದು ದೊಡ್ಡ ಭಾರ ಇಳಿಸಿದ ಹಾಗಾಯಿತು. ಊರವರು ಆತಂಕದಲ್ಲಿ ಸಿಕ್ಕಿಕೊಂಡದ್ದು ನೋಡಿ ಅವನಿಗೆ ತೃಪ್ತಿಯಾಗಿತ್ತು. ಇನ್ನು ಮುಂದೆ ಮಕ್ಕಳ, ಯುವಕರ ಬದುಕು ಮುರುಟದೆ ಸಂಪೂರ್ಣ ಅರಳಬಹುದು ಎಂದುಕೊಂಡ. ಈ ಮಾತಿಗೆ ಆಗಲೇ ಮೂರು ನಾಲ್ಕು ವರ್ಷ ಕಳೆದವು. ಅಭ್ಯಾಸಕ್ಕೆ ಒಗ್ಗಿದ ಊರವರು ನಿತ್ಯಕ್ರಮ ತಪ್ಪಿಹೋದದ್ದರಿಂದ ಪಾತಾಳಕ್ಕೆ ಬಿದ್ದ ಹಾಗೆ, ದಿನದಲ್ಲಿ ಏನೂ ಆಗದ ಹಾಗೆ ಅನ್ನಿಸಿ ಕಂಗಾಲಾದರು. ದೇವರ ಪೂಜೆ ಇಲ್ಲದೆ, ಬೆಳಿಗ್ಗೆದ್ದು ತೀರ್ಥಪ್ರಸಾದ ತೆಗೆದುಕೊಳ್ಳದೆ ಒಬ್ಬರೊಬ್ಬರ ಜೊತೆ ಯಾವ ಸಂಬಂಧವಿಟ್ಟುಕೊಳ್ಳಬೇಕೆಂದೇ ಅವರಿಗೆ ಗೊತ್ತಾಗುತ್ತಿರಲಿಲ್ಲ. ಎರಡು ಮೂರು ದಿನ ಹೀಗೆ ಅಲೆದ ಮೇಲೆ ಒಂದು ದಿನ ಶ್ಯಾಮಾಚಾರ್‍ರ ನೇತೃತ್ವದಲ್ಲಿ ಸುಟ್ಟು ಹೋದ ದೇವಸ್ಥಾನದ ಎದುರು ಊರ ಮುಖಂಡರ ಸಭೆ ಕೂಡಿತು. ಹೆಂಗಸರು ಮಕ್ಕಳಾದಿಯಾಗಿ ಎಲ್ಲರೂ ದೂರದಲ್ಲಿ ನಿಂತು ಕೇಳುತ್ತಿದ್ದರು. ಶ್ಯಾಮಾಚಾರ್‍ರು ಎದ್ದುನಿಂತು, ‘ಇಷ್ಟರವರೆಗೆ ಆಗದೆ ಇದ್ದಂಥಾ ರೀತಿಯಲ್ಲಿ ಗೋವಿಂದ ದೇವಸ್ಥಾನಕ್ಕೆ ಬೆಂಕಿಕೊಟ್ಟಿರುವುದು, ದೇವರ ಮೂರ್ತಿ ಮೊದಲಿನ ಸೌಂದರ್ಯವನ್ನು ಕಳೆದುಕೊಂಡಿರುವುದು ನಿಜ. ಅದರಿಂದಾಗಿ ನಾವು ಎರಡು ಮೂರು ದಿನ ಏನು ಮಾಡುವುದೋ ಗೊತ್ತಾಗದೆ ಅಲೆದದ್ದೂ ನಿಜ. ಆದರೆ ಈಗ ಶಾಂತವಾಗಿ ಕೂತು ವಿಚಾರಿಸಿದಾಗ ಇದು ಗಾಬರಿಗೊಳ್ಳುವ ವಿಚಾರವಲ್ಲವೆಂದು ವಿಶದವಾಗುತ್ತದೆ. ಇದು ಗೋಪಾಲಕೃಷ್ಣನ ಇಚ್ಛೆಯಿಂದಲೇ ನಡೆದದ್ದಿರಬೇಕೆಂದು ನನ್ನ ಅಭಿಮತ. ಇಲ್ಲವಾದರೆ ಅಷ್ಟು ವರ್ಷ ದೂರ ಹೋಗಿದ್ದವನು ಒಮ್ಮಿಂದೊಮ್ಮೆ ಯಾಕೆ ಊರಿಗೆ ಬರಬೇಕು? ಬಂದವನು ಬೇರೆ ಯಾವ ಉಪದ್ರವನ್ನೂ ಮಾಡದೆ ಇಷ್ಟು ಮಾತ್ರ ಮಾಡಬೇಕು ಯಾಕೆ? ಗೋವಿಂದ, ದೇವರ ಆದೇಶದಂತೆಯೇ ನಡೆದುಕೊಂಡಿರಬೇಕೆಂದು ನನ್ನ ಮತ’ ಎಂದರು. ಈ ಮಾತಿಗೆ ಊರವರೆಲ್ಲರೂ ಒಪ್ಪಿದರು. ಆಮೇಲೆ ಎಲ್ಲರ ಅಭಿಪ್ರಾಯದ ಪ್ರಕಾರ ಕೆಲವು ನಿರ್ಣಯಗಳಾದುವು. ಒಂದು, ಗೋವಿಂದನಿಗೆ ಹೀಗೆ ಮಾಡೆಂದು ಕನಸೇನಾದರೂ ಬಿದ್ದಿತ್ತೇ ಎಂದು ವಿಚಾರಿಸಬೇಕು. ಎರಡನೆಯದು, ದೇವರ ಗುಡಿಯನ್ನು ಮತ್ತೆ ಕಟ್ಟಬೇಕು. ಮೂರು, ದೇವರಮೂರ್ತಿ ಈಗ ಇರುವ ಹಾಗೇ ಇರಬೇಕಷ್ಟೇ ಹೊರತು ಬದಲಾಯಿಸಬಾರದು. ಈಗ ಇರುವಂತೆಯೇ, ದೇವರಿಗೆ ಮೊದಲಿನ ಹಾಗೇ ಸಕಲ ಪೂಜೆ ಮರ್ಯಾದೆಗಳೂ ನಡೆಯಬೇಕು. ನಾಲ್ಕನೆಯದಾಗಿ, ಗೋವಿಂದನನ್ನು ಊರಿಗೆ ಕರೆದುಕೊಂಡು ಬಂದು ಊರಿನವರಂತೆ ನೋಡಿಕೊಳ್ಳಬೇಕು. ವಿನಾಕಾರಣವಾಗಿ ಸೇಡಿಟ್ಟುಕೊಳ್ಳುವುದು ದೇವರ ವಿರುದ್ಧ- ಅವನು ಯಾವ ದೃಷ್ಟಿಯಿಂದ ಹಾಗೆ ಮಾಡಿದನೋ ಹೇಳುವಂತಿಲ್ಲ- ಕನಸಿನಲ್ಲಿ ದೇವರು ಬಂದು ಹಾಗೆ ಮಾಡುವಂತೆ ಹೇಳಿದ್ದರೆ? ಈ ನಿರ್ಣಯವಾದ ನಂತರ ಊರವರಿಗೆ ದೊಡ್ಡದೊಂದು ಭಾರ ಕೆಳಗೆ ಇಳಿದಂತಾಯ್ತು. ಎಲ್ಲರೂ ಮತ್ತೆ ತಮ್ಮ ನಿತ್ಯಜೀವನದ ಅಭ್ಯಾಸಕ್ಕೆ ಹಿಂದಿರುಗಬಹುದೆಂದು ತೃಪ್ತರಾದರು. ಅದೇ ದಿವಸ ಶ್ಯಾಮಾಚಾರ್‍ರಿಗೆ ಗೋವಿಂದ ಸಿಕ್ಕಿದ. ಶ್ಯಾಮಾಚಾರ್‍ರು ಅವನಿಗೆ ಹೀಗೆ ಮಾಡುವಂತೆ ದೇವರು ಕನಸಿನಲ್ಲೇನಾದರೂ ಆದೇಶವಿತ್ತಿದ್ದನೇ ಎಂದು ವಿಚಾರಿಸಿದರು. ಗೋವಿಂದ ಅವರನ್ನು ಒಂದುಸಲ ನೋಡಿ ಮಾತಾಡದೆ ಸುಮ್ಮನೆ ಹೊರಟುಹೋದ.

ಊರವರು- ಗಟ್ಟಿ ಆಳುಗಳೆಲ್ಲಾ ಒಟ್ಟುಕೂಡಿ- ಎರಡು ಮೂರು ದಿನದಲ್ಲಿ ದೇವಸ್ಥಾನವನ್ನು ಮತ್ತೆ ಕಟ್ಟಿದರು. ಈಗ ಮೊದಲಿನ ಹಾಗೆ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಉತ್ಸವವೂ ಭರ್ಜರಿಯಿಂದ ನಡೆಯುತ್ತಿದೆ. ಮೊದಲಿನ ಹಾಗೇ ಜಡ ವರ್ತಮಾನದ ಮಧ್ಯೆ ಈ ಕನಸಿನ ಲೋಕದಲ್ಲಿ ಊರವರು ಮೈಮರೆಯುತ್ತಾರೆ. ಆ ಕನಸಿನ ಲೋಕವನ್ನು ದಿನನಿತ್ಯದ ಜೀವನದ ಮಧ್ಯೆ ಆಗಾಗ ನೆನಸಿಕೊಂಡು ಸಂಭ್ರಮಪಡುತ್ತಾರೆ. ಮೂರ್ತಿಯ ಮುಖ ಮಾತ್ರ ವಿಕಾರವಾಗಿದೆ. ಆದರೆ ಅದೊಂದು ಕುಂದಾಗಿ ಊರವರಿಗೆ ಕಾಣಿಸುವುದಿಲ್ಲ. ಅದೇಕೆ ಹಾಗಿದೆಯೆಂದು ಕೇಳಿದರೆ ‘ಗೋಪಾಲಕೃಷ್ಣ ಇಚ್ಛಿಸಿದ ರೂಪ ಅದು’ ಎನ್ನುತ್ತಾರೆ. ಗೋವಿಂದ ದೇವರ ಇಚ್ಛೆಯಿಂದಲೇ ಹಾಗೇ ಮಾಡಿರಬೇಕೆಂದೂ, ಅವನಿಗೆ ಹಾಗೆ ಮಾಡೆಂದು ಕನಸು ಬಿದ್ದಿತ್ತೆಂದೂ ಜನರೆಲ್ಲಾ ನಂಬುತ್ತಾರೆ. ಈಗಲೂ ಮೊದಲಿನ ಹಾಗೇ ಗೋಪಾಲಕೃಷ್ಣನ ಹತ್ತಿರ ಜನ ಸಲಹೆಗಾಗಿ ಧಾವಿಸುತ್ತಾರೆ. ಮೊದಲಿನ ಹಾಗೇ ಈಗಲೂ ಗೋಪಾಲಕೃಷ್ಣ ಊರ ಜನರ ಜೀವನವನ್ನು ನಿರ್ದೇಶಿಸುತ್ತಾನೆ; ತಿದ್ದುತ್ತಾನೆ. ಅವನಿಗೆ ಜನ ಹೆದರುತ್ತಾರೆ.

ಇದನ್ನು ಓದಿದ್ದೀರಾ?: ದೇವನೂರ ಮಹಾದೇವ ಅವರ ಕತೆ | ಮಾರಿಕೊಂಡವರು

ಗೋವಿಂದ ಕೆಲವು ದಿನಗಳ ಬಳಿಕ ಈ ಚಕ್ರವ್ಯೂಹದಿಂದ ಹೊರಗೆ ಹೋಗಬೇಕು ಅಂದುಕೊಂಡ. ಅವನಿಗೆ ಸುಸ್ತಾಗಿತ್ತು. ಇದೆಲ್ಲಾ ಸಾಕು ಅನ್ನಿಸಿತ್ತು. ಎಲ್ಲಾದರೂ ಹೊರಟು ಹೋಗೋಣವೆಂದು ಅವನು ಹೊಳೆಯ ಬಳಿ ಬಂದಿದ್ದ. ಮೇಲೆ ನಿರಂಕುಶವಾಗಿ ಉರಿಯುತ್ತಿದ್ದ ಮಧ್ಯಾಹ್ನದ ಸೂರ. ಕಣ್ಣುಕತ್ತಲೆ ಬಂದಂತಾಗಿ ಅವನು ಬಂಡೆಗಳ ಮೇಲೆ ಕೂತ. ಎಲ್ಲಾ ಮಂಜಾದ ಹಾಗೆ. ಏನೋ ಒಂದು ಮಾತ್ರ ಚಲಿಸುತ್ತಿದ್ದ ಹಾಗೆ. ದೂರದಿಂದ ನಡೆದುಕೊಂಡು ಬಂದು ತನ್ನನ್ನು ಸುತ್ತುವರಿದು ಹಿಚುಕುತ್ತಾ ಎಲುಬನ್ನು ಹುಡಿಮಾಡುತ್ತಿದ್ದ ಹಾಗೆ ಅವನಿಗನ್ನಿಸಿತು. ಏನದು? ಗೋಡೆ? ಗೋಪುರ? ಅರಸರು? ದೇವರು? ಏನೋ ಒಂದು ಅವ್ಯಕ್ತವಾದದ್ದು. ಬಹುಶಃ ಎಂದೂ ಅವ್ಯಕ್ತವಾಗಿಯೇ ಉಳಿಯುವಂಥದು. ಗೋವಿಂದನ ಕಣ್ಣುಗಳು ಒಂದು ಸಲ ಥಳಥಳಿಸಿ, ಪಟ ಪಟ ರೆಪ್ಪೆ ಬಡಿದು, ಮತ್ತೆ ನಿಧಾನವಾಗಿ ಮುಚ್ಚಿಕೊಂಡವು. ಬಳಲಿಕೆಯಲ್ಲಿ, ಅಸಹಾಯಕ ಸ್ಥಿತಿಯಲ್ಲಿ ಅವನು ಬಂಡೆಯ ಮೇಲೆ ಉದ್ದಕ್ಕೆ ಬಿದ್ದುಕೊಂಡ. ಮೇಲೆ ಆಕಾಶದಲ್ಲಿ ಕಾಗೆಗಳು ಶ್ರಾದ್ಧದ ದಿವಸ ಮಾಡುವ ಹಾಗೆ ಕರ್ಕಶ ಶಬ್ದ ಮಾಡುತ್ತಿದ್ದವು. ಅವನ ತಲೆ ಎದೆಯ ಮೇಲೆ ನಿಧಾನವಾಗಿ ಒರಗುತ್ತಿತ್ತು.

ಊರು ಮೊದಲಿನ ಹಾಗೇ ಶಾಂತವಾಗಿ ಮಲಗಿ ನಿದ್ರಿಸುತ್ತಿತ್ತು.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

Ramachandra Deva

ಡಾ. ರಾಮಚಂದ್ರ ದೇವ (1948-2013): ದಕ್ಷಿಣ ಜಿಲ್ಲೆಯ ಕಲ್ಮಡ್ಕ ಇವರ ಹುಟ್ಟೂರು. ಎಂ.ಎ. (ಇಂಗ್ಲಿಷ್) ಪಿಎಚ್.ಡಿ ಪದವೀಧರರಾದ ಇವರು ಕವಿ, ಕತೆಗಾರ, ವಿಮರ್ಶಕ, ನಾಟಕಕಾರ, ಅನುವಾದಕರಾಗಿ ಹೆಸರು ಮಾಡಿದವರು. ಕೆಲವು ಕಾಲ ಬೆಂಗಳೂರು, ಮೈಸೂರಿನ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ನವದೆಹಲಿಯ ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್‌ನಲ್ಲಿ ಗ್ರಂಥಪಾಲಕರಾಗಿ, ‘ಪ್ರಜಾವಾಣಿ’ ಬಳಗದಲ್ಲಿ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ಗಿರೀಶ್ ಕಾಸರವಳ್ಳಿಯವರ ಚಿತ್ರ ‘ಬಣ್ಣದ ವೇಷ’ಕ್ಕೆ ಕತೆ- ಚಿತ್ರಕತೆ ಬರೆದಿದ್ದರು. ನಿವೃತ್ತಿಯ ನಂತರ ತಮ್ಮ ಹಳ್ಳಿಯಲ್ಲಿ ನೆಲೆಸಿ ಪ್ರಗತಿಪರ ಕೃಷಿಕರಾಗಿದ್ದುದೂ ಅಲ್ಲದೆ ಬೋಧಿ ಟ್ರಸ್ಟ್ ಎಂಬ ಸಂಸ್ಥೆ ಸ್ಥಾಪಿಸಿ ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿದ್ದರು. ಪ್ರಕಟಿತ ಕೃತಿಗಳು: ‘ದಂಗೆಯ ಪ್ರಕರಣ’ (1974), ‘ಮೂಗೇಲ ಮತ್ತು ಇತರ ಕಥೆಗಳು’ (1985) (ಕಥಾ ಸಂಕಲನಗಳು); ‘ಇಂದ್ರಪ್ರಸ್ಥ ಮತ್ತು ಇತರ ಕವನಗಳು’ (1994- ಕವನ ಸಂಕಲನ); ‘ಮ್ಯಾಕ್‌ಬೆತ್’ (1976), ‘ಹ್ಯಾಮ್ಮೆಟ್‌’ (1978) (ಅನುವಾದ); ‘ರಥಮುಸಲ’ (1982-ನಾಟಕ). ಇತರೆ: ‘ಶೇಕ್‌ ಸ್ಪಿಯ‌ರ್-ಎರಡು ಸಂಸ್ಕೃತಿಗಳಲ್ಲಿ’ (1993); ‘ಮುಚ್ಚು ಮತ್ತು ಇತರ ಲೇಖನಗಳು’ (1994). 2013ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...