“ಮುಂದಿನ ಐವತ್ತು ವರ್ಷಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಶೇ.50ಕ್ಕಿಂತ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ದೇಶಾಂತರಗಳಲ್ಲಿ ಓದುತ್ತಾ, ಗ್ರೇಡ್‌ಗಳನ್ನು ವಿನಿಮಯ ಮಾಡಿಕೊಂಡು ಪದವಿ ಪಡೆಯುವ ಹೊಸ ಯುಗಕ್ಕೆ ನಾವು ಕಾಲಿಡುತ್ತಿದ್ದೇವೆ. ಈ ಹೊಸ ಯುಗದ ಸವಾಲುಗಳಿಗೆ ಸಜ್ಜಾಗಬೇಕಾದ ಅಗತ್ಯವಿದೆ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿನದ ಅಂಗವಾಗಿ ಮಾತನಾಡಿದ ಅವರು, “ಶಿಕ್ಷಣ ಕ್ಷೇತ್ರ ಜಾಗತೀಕ ಮಟ್ಟದಲ್ಲಿ ತನ್ನ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದ ಹೊಸ ಸವಾಲುಗಳಿಗೆ ಸಜ್ಜಾಗಬೇಕಾಗಿದೆ. ಭಾಷಾ ಪ್ರಾವೀಣ್ಯ ಮತ್ತು ಜ್ಞಾನ ಎರಡನ್ನೂ ವಿಶ್ವಮಟ್ಟದಲ್ಲಿ ನಿಲ್ಲಿಸುವ ಅಗತ್ಯ ಇದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಹೊಸ ಸವಾಲುಗಳನ್ನು ಸ್ವೀಕರಿಸಬೇಕಾದ ಸಮಯ ಬಂದಿದೆ. ಸವಾಲಿಗೆ ಪೂರಕವಾಗಿ ಬೋಧನಾ ವಿಧಾನದಲ್ಲೂ, ಚಿಂತನೆಯಲ್ಲೂ ಅಗತ್ಯವಾಗಿ ಬದಲಾವಣೆ ತರಬೇಕಾಗಿದೆ” ಎಂದರು.
2008ರಲ್ಲಿ ಯುಜಿಸಿ ನೇಮಿಸಿದ್ದ ಭೂಷಣ್ ಪಟವರ್ಧನ್ ಸಮಿತಿಯ ಶಿಫಾರಸುಗಳ ಪ್ರಸ್ತುತತೆಯನ್ನು ಉಲ್ಲೇಖಿಸಿ, “ಅಂದಿನ ಸಮಿತಿ ಭಾರತೀಯ ಶಿಕ್ಷಣದ ಭವಿಷ್ಯ ರೂಪಿಸುವಲ್ಲಿ ಮೂರು ಪ್ರಮುಖ ಶಿಫಾರಸುಗಳನ್ನು ಮಾಡಿತ್ತು, ಅವು ಇಂದಿಗೆ ಜಾರಿಯ ಹಂತಕ್ಕೆ ಬಂದಿವೆ. ಮೊದಲ ಶಿಫಾರಸು- ವಿದೇಶಿ ವಿದ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸುವುದು: ಇಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ 2,000ಕ್ಕಿಂತ ಹೆಚ್ಚು, ಜೆಎನ್‌ಯುವಿನಲ್ಲಿ 6,000ಕ್ಕೂ ಹೆಚ್ಚು, ಅಶೋಕ ವಿಶ್ವವಿದ್ಯಾಲಯದಲ್ಲಿ 11,000ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗುರು ರವೀಂದ್ರನಾಥ ಟ್ಯಾಗೂರ್ ಅವರು ನಿರ್ಮಿಸಿದ ವಿಶ್ವಭಾರತಿಯಲ್ಲಿ ವಿದ್ಯಾರ್ಥಿಗಳ ಶೇಕಡಾ 75ರಷ್ಟು ವಿದೇಶಿಗರೇ ಇದ್ದಾರೆ. ಮುಂದಿನ 50 ವರ್ಷಗಳಲ್ಲಿ ಬಹುತೇಕ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳೇ ಹೆಚ್ಚಾಗಿ ಕಲಿಯುವ ಪರಿಸ್ಥಿತಿ ಬರಲಿದೆ. ಎರಡನೆಯದಾಗಿ- ಎರಡು ದೇಶಗಳ ವಿಶ್ವವಿದ್ಯಾಲಯಗಳ ನಡುವಿನ ಸಹಭಾಗಿತ್ವ: ಒಬ್ಬ ವಿದ್ಯಾರ್ಥಿಯು ಬೆಂಗಳೂರಿನಲ್ಲಿ ಒಂದು ಸೆಮಿಸ್ಟರ್ ಓದಿ, ಮುಂದಿನ ಸೆಮಿಸ್ಟರ್‌ನ್ನು ಚಿಕಾಗೋ ಅಥವಾ ಟೋಕಿಯೋದಲ್ಲಿ ಓದುವಂತ ವ್ಯವಸ್ಥೆ ಈಗ ಸಾದ್ಯವಾಗುತ್ತಿದೆ. ಇದು ‘ಫ್ಲೋಟಿಂಗ್ ಸ್ಟೂಡೆಂಟ್’ ವ್ಯವಸ್ಥೆ. 1991ರ ಜಾಗತೀಕರಣದ ನಂತರ ಈ ಹೊಸ ರೀತಿಯ ಶಿಕ್ಷಣ ಸಂಸ್ಕೃತಿ ಬೆಳೆದು ಬಂದಿದೆ. ಅಂದರೆ ವಿದ್ಯಾರ್ಥಿ ಜಾಗತಿಕವಾಗಿ ಚಲಿಸುತ್ತಾ ಕಲಿಯುವ ಹೊಸ ಯುಗ” ಎಂದು ವಿವರಿಸಿದರು.
“ಮೂರನೇ ಶಿಫಾರಸು- ಅಂತಾರಾಷ್ಟ್ರೀಯ ಗ್ರೇಡಿಂಗ್ ಪದ್ದತಿ: ಇನ್ನು ಮುಂದೆ ವಿದ್ಯಾರ್ಥಿಯು ಭಾರತ, ಜಪಾನ್ ಅಥವಾ ಅಮೆರಿಕಾದಲ್ಲಿ ಓದಿದರೂ, ಅಳವಡಿಸಿಕೊಳ್ಳಬೇಕಾದ ಗ್ರೇಡಿಂಗ್ ಮಾನದಂಡ ಒಂದೇ ಆಗುತ್ತದೆ. ಅಂದರೆ ಮೌಲ್ಯಮಾಪನ ವಿಧಾನ ಜಾಗತಿಕವಾಗುತ್ತದೆ. ಇದರಿಂದ ವಿದ್ಯಾರ್ಥಿಯ ಶಿಕ್ಷಣವನ್ನು ವಿಶ್ವ ಮಟ್ಟದಲ್ಲಿ ಗುರುತಿಸಲಾಗುತ್ತದೆ” ಎಂದು ತಿಳಿಸಿದರು.
ಈ ಪ್ರಗತಿಯಲ್ಲಿ ವಿದ್ಯಾರ್ಥಿಗಳಿಗೆ ಎರಡು ಪ್ರಮುಖ ಸವಾಲುಗಳು ಎದುರಾಗುತ್ತವೆ ಎಂದು ಎಚ್ಚರಿಸಿದ ಅವರು, “ಮೊದಲನೆಯದು ಭಾಷೆ; ಇಂದು ನಾವು ಕಲಿಯುತ್ತಿರುವ ಇಂಗ್ಲಿಷ್ ಅಮೆರಿಕಾ ಅಥವಾ ಲಂಡನ್‌ನಲ್ಲಿ ಸ್ವೀಕೃತವಾಗದಿರಬಹುದು ಅಥವಾ ಸಾಕಾಗದಿರಬಹುದು. ಅದಕ್ಕಾಗಿ ‘ಗ್ಲೋಬಲ್ ಇಂಗ್ಲಿಷ್’ ಕಲಿಯುವ ಅಗತ್ಯವಿದೆ. ಎರಡನೆಯದು; ಅಂತಾರಾಷ್ಟ್ರೀಯ ಮಟ್ಟದ ಗ್ರೇಡಿಂಗ್‌ಗೆ ತಕ್ಕ ರೀತಿಯಲ್ಲಿ ನಮ್ಮ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಧರ್ಮ ಮೀರಿ ದೇಶ ಕಟ್ಟಿದ ಆಜಾದ್ ಅವರ ಚಿಂತನೆ ಇಂದಿಗೂ ಪ್ರಸ್ತುತ: ಡಾ. ಎ ನಾರಾಯಣ
“ವಿದ್ಯಾರ್ಥಿಗಳು ಬೆಳೆಯಬೇಕಾದರೆ, ಅಧ್ಯಾಪಕರು ಮೊದಲು ಅಪ್‌ಡೇಟ್ ಆಗಬೇಕು. ಹೊಸ ತಂತ್ರಜ್ಞಾನ, ಹೊಸ ಬೋಧನಾ ವಿಧಾನ ಮತ್ತು ಅಂತಾರಾಷ್ಟ್ರೀಯ ಶಿಕ್ಷಣದ ದಿಕ್ಕುಗಳ ಬಗ್ಗೆ ಶಿಕ್ಷಕ ಮೊದಲು ತಿಳಿದುಕೊಳ್ಳಬೇಕು. ಶಿಕ್ಷಣ ಜ್ಞಾನಾಧಾರಿತ ವಿಶ್ವದತ್ತ ಸಾಗುತ್ತಿರುವಾಗ, ನಮ್ಮ ನಾಲೆಡ್ಜ್ ಕೂಡ ಅಂತಾರಾಷ್ಟ್ರೀಯ ಮಟ್ಟಕ್ಕೆ ಸಮಾನಾಂತರವಾಗಿ ಬೆಳೆಯಬೇಕು. ಕನ್ನಡ ಸೇರಿದಂತೆ ನಮ್ಮ ಭಾಷೆಗಳ ಅಸ್ತಿತ್ವ ಕಾಪಾಡಿಕೊಳ್ಳುತ್ತಲೇ ನಾವು ಜಾಗತೀಕರಣದ ದಾರಿಯಲ್ಲಿ ಹೆಜ್ಜೆ ಇಡಬೇಕು. ಸರ್ಕಾರಗಳು, ಶಿಕ್ಷಕರು, ವಿದ್ಯಾರ್ಥಿಗಳು, ಎಲ್ಲರೂ ಸೇರಿ ಶಿಕ್ಷಣ ವ್ಯವಸ್ಥೆಯನ್ನು ಅತ್ಯಾಧುನಿಕಗೊಳಿಸಿದರೆ ಮಾತ್ರ ಈ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಹೊಸ ಚಾಲೆಂಜ್‌ಗಳನ್ನು ಸ್ವೀಕರಿಸಿ ಮುಂದೆ ಸಾಗೋಣ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ನಸೀರ್ ಅಹಮದ್, ಮೈನಾರಿಟಿ ಕಮಿಷನ್ ಅಧ್ಯಕ್ಷ ನಿಸಾರ್ ಅಹಮದ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಮೆಹರೋಜ್ ಖಾನ್ ಸೇರಿದಂತೆ ಇಲಾಖೆಯ ಮುಖಂಡರು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




