ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಪೆದ್ದನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಗ್ರಾಮಸ್ಥರು ಒತ್ತುವರಿ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ತಹಶೀಲ್ದಾರ್ ಎನ್.ಗಗನಸಿಂಧು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲೆಗೆ ಸಂಬಂಧಿಸಿದ ಜಾಗವನ್ನು ಕೆಲವರು ಒತ್ತುವರಿ ಮಾಡಿರುವ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸರ್ಕಾರಿ ಶಾಲೆ ನಡೆಸದೆ ಮುಚ್ಚಿದ್ದಾರೆ. ಶಾಲೆಯ ಒತ್ತುವರಿ ಜಾಗ ತೆರವುಗೊಳಿಸಿದರೆ ಶಾಲೆಗೆ ಮಕ್ಕಳು ಬರುವಂತೆ ವ್ಯವಸ್ಥೆ ಮಾಡುತ್ತೇವೆಂದು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದರು. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಶಾಲೆಗೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸುತ್ತಿರುವವರಿಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.
“15 ದಿನದ ಒಳಗಾಗಿ ಈ ಜಾಗದ ದಾಖಲೆ ತಂದುಕೊಡಬೇಕು. ದಾಖಲೆಗಳು ಸರಿ ಇದ್ದಲ್ಲಿ ಕಾಮಗಾರಿ ಮುಂದುವರೆಸಲು ಅವಕಾಶ ನೀಡಲಾಗುತ್ತದೆ. ಪಿಡಿಒ ಅಥವಾ ನಮ್ಮ ಗಮನಕ್ಕೆ ತರದೆ ಕಾಮಗಾರಿ ಪ್ರಾರಂಭಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ” ಎಂದು ಎಚ್ಚರಿಸಿದರು.
“ಶಾಲೆಗೆ ಸೇರಿದ ಜಾಗ 75×100 ಅಡಿಯಷ್ಟಿರುವುದು ಶಾಲೆ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಆದರೆ ಸ್ಥಳದಲ್ಲಿ ಅಳತೆ ಮಾಡಿದರೆ 77×79 ಅಡಿ ಮಾತ್ರ ಬರುತ್ತಿದೆ. ಉಳಿದ ಜಾಗ ಎಲ್ಲಿ ಹೋಯ್ತು. ಗ್ರಾಮದಲ್ಲಿ ಈ ವರ್ಷ ಶಾಲೆ ಆರಂಭವಾಗದಿದ್ದಲ್ಲಿ ಸಂಪೂರ್ಣ ಜಾಗವನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು” ಎಂದು ಗ್ರಾಮಸ್ಥರು ಕಂದಾಯ ನಿರೀಕ್ಷಕರೂ ಸೇರಿದಂತೆ ಗ್ರಾಮ ಸಹಾಯಕರ ಗಮನಕ್ಕೆ ತಂದರು.
This video cannot be played in your browser. Open the video directly
“ಒತ್ತುವರಿ ಮಾಡಿರುವ ಸರ್ಕಾರಿ ಶಾಲೆಯ ಜಾಗವನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ಪಡೆದುಕೊಳ್ಳುತ್ತೇವೆ. ಗ್ರಾಮದಲ್ಲಿ ಸರ್ಕಾರಿ ಶಾಲೆ ಪುನರ್ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಸಾರ್ವಜನಿಕರು ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ” ಎಂದು ತಹಶೀಲ್ದಾರ್ ಸಲಹೆ ನೀಡಿದರು.
“ಗ್ರಾಮದ ಜನರಿಗೆ ನೀರು ಪೂರೈಸುವ ಉದ್ದೇಶದಿಂದ ಇದೇ ಸರ್ಕಾರಿ ಜಾಗದಲ್ಲಿ ಕೊಳವೆಬಾವಿ ಕೊರೆಸಿದ್ದು, ಅದರಲ್ಲಿ ನೀರು ಸಹ ಇತ್ತು. ಆದರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಉದ್ದೇಶದಿಂದ ಕೊಳವೆಬಾವಿಗೆ ಅಳವಡಿಸಿದ್ದ ಪಂಪು, ಮೋಟಾರನ್ನು ಒಳಗೆ ಬೀಳಿಸಿದ್ದಾರೆ. ಅದರಲ್ಲಿನ ಪಂಪು ಮೋಟಾರು ಮೇಲೆತ್ತಿದರೆ ಗ್ರಾಮಕ್ಕೆ ಕುಡಿಯುವ ನೀರು ಲಭ್ಯವಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೇಂದ್ರ ಆಯವ್ಯಯ ಸಂಪೂರ್ಣ ಕಳಪೆಯಾಗಿದೆ: ಮಾಜಿ ಶಾಸಕ ರಾಜು ಆಲಗೂರ ಆರೋಪ
ಕಂದಾಯ ನಿರೀಕ್ಷಕ ಅಮರೇಂದ್ರ, ಗ್ರಾಮ ಲೆಕ್ಕಾಧಿಕಾರಿ ರಾಕೇಶ್, ದಿಬ್ಬೂರಹಳ್ಳಿ ಠಾಣೆಯ ಪಿಎಸ್‌ಐ ಶ್ಯಾಮಲ, ಪಿಡಿಒ ವಜ್ರೇಶ್, ಸಿಆರ್‌ಪಿ ವೆಂಕಟೇಶಪ್ಪ, ಜಯಚಂದ್ರ, ರಾಮಕೃಷ್ಣಪ್ಪ, ಶ್ರೀನಿವಾಸ್, ಪಿಳ್ಳಪ್ಪ, ಶಿವಪ್ಪ, ವೆಂಕಟರೆಡ್ಡಿ ದ್ಯಾವಪ್ಪ ಇದ್ದರು.





