ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗುತ್ತಿಗೆದಾರ ಸಂಸ್ಥೆಯಾಗಿರುವ ಅದಾನಿ ಸಂಸ್ಥೆ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರ ಮೇಲೆ ಅನ್ಯಾಯ ಮತ್ತು ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಕಾವೂರು ಜಂಕ್ಷನ್‌ನಲ್ಲಿ ಸಾಂಕೇತಿಕ ಧರಣಿ ನಡೆಸಲಾಯಿತು.
ಧರಣಿಯ ವೇಳೆ ಮಾತನಾಡಿದ ಕರ್ನಾಟಕ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸತ್ಯೇಂದ್ರ ಶೆಟ್ಟಿ, ದೇಶದ ಇತರೆ ಯಾವುದೇ ವಿಮಾನ ನಿಲ್ದಾಣಗಳಲ್ಲಿ ಇಲ್ಲದ ನಿಯಮಗಳನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿಗೊಳಿಸಿ ಚಾಲಕರ ಮೇಲೆ ಆರ್ಥಿಕ ಹೊರೆಯನ್ನು ಹೇರುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಇತರೆ ವಿಮಾನ ನಿಲ್ದಾಣಗಳಲ್ಲಿ ಟ್ಯಾಕ್ಸಿ ಹಾಗೂ ಕ್ಯಾಬ್‌ಗಳಿಗೆ ಪಿಕ್‌ಅಪ್ ಮತ್ತು ಡ್ರಾಪ್‌ಗಾಗಿ ಉಚಿತ ಸಮಯಾವಕಾಶ ನೀಡಲಾಗುತ್ತದೆ. ಆದರೆ ಮಂಗಳೂರಿನಲ್ಲಿ ಅಂತಹ ಸೌಲಭ್ಯವಿಲ್ಲದೆ ಅನಗತ್ಯ ಶುಲ್ಕ ವಿಧಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ವಾಹನಗಳಿಗೆ ನೀಡುವಂತೆ ಟ್ಯಾಕ್ಸಿ ಹಾಗೂ ಕ್ಯಾಬ್‌ಗಳಿಗೂ ಕನಿಷ್ಠ 10 ನಿಮಿಷಗಳ ಉಚಿತ ಪ್ರವೇಶಾವಕಾಶ ಕಲ್ಪಿಸಬೇಕು. ಬಳಿಕ ಗರಿಷ್ಠ ₹90 ಶುಲ್ಕ ಮಾತ್ರ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ಆನಂದ ಕೆ. ಮಾತನಾಡಿ, ಟ್ಯಾಕ್ಸಿ ಹಾಗೂ ಖಾಸಗಿ ವಾಹನಗಳ ನಡುವೆ ವಿಮಾನ ನಿಲ್ದಾಣ ಪ್ರಾಧಿಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಪಿಕ್‌ಅಪ್ ಅಥವಾ ಡ್ರಾಪ್‌ಗಾಗಿ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ₹180ಕ್ಕೆ ಏರಿಸಿರುವುದು ಚಾಲಕರಿಗೆ ಭಾರವಾಗಿದೆ. ಈ ಹೆಚ್ಚಳವನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಖಾಸಗಿ ವಾಹನಗಳಿಗೆ ಇರುವಂತೆ 10 ನಿಮಿಷಗಳ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ಟ್ಯಾಕ್ಸಿ ಮತ್ತು ಕ್ಯಾಬ್‌ಗಳಿಗೂ ನೀಡಬೇಕು ಎಂದು ಆಗ್ರಹಿಸಿದರು.
“ನಮ್ಮ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಸಾಂಕೇತಿಕವಾಗಿ ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ. ಮುಂದೆಯೂ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ,” ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಮಂಗಳೂರು ತಾಲೂಕು ಉಪ ತಹಶೀಲ್ದಾರ್ ನವೀನ್ ಕುಮಾರ್ ಹಾಗೂ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ರವಿ ಜಿ. ರಾವ್ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಮನವಿಯನ್ನು ಮೇಲಾಧಿಕಾರಿಗಳಿಗೆ ತಲುಪಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಧರಣಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 300ಕ್ಕೂ ಹೆಚ್ಚು ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರು ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಸರ್ಕಾರ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ ಶೀಘ್ರ ಈಡೇರಿಸುವಂತೆ ಆಗ್ರಹಿಸಿದರು.





