ಗೋ ರಕ್ಷಣೆಯ ಮರೆಯಲ್ಲಿ ಹಿಂದುತ್ವವಾದಿಗಳ ದನದ ವ್ಯಾಪಾರ, ವಸೂಲಿ ದಂಧೆಯಲ್ಲಿ ಸಾಯುವ ಡ್ರೈವರ್‌ಗಳು​!

Date:

ಪ್ರಕರಣದ ಆಳಕ್ಕಿಳಿದರೆ ದನ ಸಾಗಾಟ ವಾಹನದ ಮಾಲೀಕ, ವ್ಯಾಪಾರಿ ಹಿಂದುವೂ, ಹಿಂದುತ್ವ ಸಂಘಟನೆಯ ಮುಖಂಡನೂ ಆಗಿರುತ್ತಾನೆ. ಹಿಂದುತ್ವ ಸಂಘಟನೆಗಳು ನಡೆಸುವ ಗೋ ರಕ್ಷಣೆ ಎಂಬ ಬೀದಿ ಗೂಂಡಾಗಿರಿ ಒಂದೋ ಹಫ್ತಾ ವಸೂಲಿಗಾಗಿರುತ್ತದೆ ಅಥವಾ ತಾವು ನಡೆಸುವ ದನದ ಕಳ್ಳ ವ್ಯಾಪಾರದ ಪ್ರತಿಸ್ಪರ್ಧಿಗಳನ್ನು ಹಣಿಯುವುದಕ್ಕಾಗಿರುತ್ತದೆ !

ಗೋ ರಕ್ಷಣೆಗಾಗಿ ನಡೆಯುವ ನೈತಿಕ ಪೊಲೀಸ್​​ಗಿರಿಯ ಹಿಂದೆ ಇರುವುದು ವಸೂಲಿ ಕೃತ್ಯವೇ ಹೊರತು ಇನ್ನೇನಲ್ಲ. ಹಿಂದುತ್ವ ಸಂಘಟನೆಗಳಿಗೆ ಹಣ ನೀಡದ ದನದ ವ್ಯಾಪಾರಿಗಳನ್ನು ಥಳಿಸಲಾಗುತ್ತದೆ. ಕೆಲವೊಮ್ಮೆ ಬಡಪಾಯಿ ಡ್ರೈವರ್​ಗಳಿಗೆ ಥಳಿಸಿಯೋ, ಕೊಲೆ ಮಾಡಿಯೋ ದನದ ವ್ಯಾಪಾರಿಗಳಿಗೆ ಹಣ ನೀಡುವಂತೆ ಎಚ್ಚರಿಕೆ ನೀಡಲಾಗುತ್ತದೆ. ಪ್ರತೀ ತಿಂಗಳ ಹಪ್ತಾ ಸಲ್ಲಿಕೆಯಾದರೆ ಮತ್ತೆ ಸಲೀಸಾಗಿ ಗೋ ಸಾಗಾಟ ಮಾಡಬಹುದು.

ಹಫ್ತಾ ಹೊರತಾದ ಮತ್ತೊಂದು ಕಾರಣಕ್ಕೂ ಹಿಂದುತ್ವ ಸಂಘಟನೆಗಳು ದನದ ವ್ಯಾಪಾರಿಗಳ ಮೇಲೆ ದಾಳಿ ನಡೆಸುತ್ತದೆ. ಅದು ದನದ ವ್ಯಾಪಾರದ ಸ್ಪರ್ಧೆ! ಹಿಂದುತ್ವ ಸಂಘಟನೆಗಳ ಮುಖಂಡರು, ಕಾರ್ಯಕರ್ತರೇ ದನದ ವ್ಯಾಪಾರವನ್ನು ಮಾಡುತ್ತಿರುತ್ತಾರೆ. ಹಿಂದುತ್ವ ಸಂಘಟನೆಗಳ ದನದ ಕಳ್ಳ ವ್ಯಾಪಾರಕ್ಕೆ ಪೈಪೋಟಿ ನೀಡುವ ಮುಸ್ಲಿಂ ಅಸಲೀ ವ್ಯಾಪಾರಿಗಳ ಮೇಲೆ ಹಿಂದುತ್ವ ಕಾರ್ಯಕರ್ತರು ದಾಳಿ ನಡೆಸುತ್ತಾರೆ.

2020 ಡಿಸೆಂಬರ್ 13 – ಉಡುಪಿಯ ಕಾರ್ಕಳದಲ್ಲಿ ಭಜರಂಗದಳದ ಸಂಚಾಲಕನಾಗಿದ್ದ ಅನಿಲ್ ಪ್ರಭುವನ್ನು ಗೋ ಕಳ್ಳಸಾಗಾಟ ಮತ್ತು ಗೋ ಹತ್ಯೆಯ ಕೇಸ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಗೋ ಹತ್ಯಾ ವಿರೋಧಿ ಹೋರಾಟದಲ್ಲಿ ಸಕ್ರಿಯನಾಗಿದ್ದ ಭಜರಂಗದ ಸಂಚಾಲಕನಾಗಿದ್ದ ಅನಿಲ್ ಪ್ರಭು ಗೋ ಕಳ್ಳತನವನ್ನು ಸಂಘಟಿತವಾಗಿ ಮಾಡುತ್ತಿದ್ದ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರೈತರು ಮುದಿ ದನಗಳನ್ನು ಹಣ ಪಡೆದುಕೊಂಡು ವ್ಯಾಪಾರಿಗಳಿಗೆ ಮಾರುವುದನ್ನು ತೀವ್ರವಾಗಿ ವಿರೋಧಿಸಿ ಪ್ರತಿಭಟಿಸುತ್ತಿದ್ದ ಭಜರಂಗದಳದ ಸಂಚಾಲಕನಾಗಿದ್ದ ಅನಿಲ್ ಪ್ರಭು ದನ ಕಳ್ಳತನಕ್ಕಾಗಿಯೇ ತಂಡ ಕಟ್ಟಿಕೊಂಡಿದ್ದ.

ಉಡುಪಿ ಜಿಲ್ಲೆಯ ಕಾರ್ಕಳದ ದನಕಳ್ಳತನದ ಪ್ರಕರಣಗಳು ವಿಪರೀತವಾದವು. ಯಾವಾಗ ಬೇಕಾದರೂ ದನಕಳ್ಳತನದ ವಿಚಾರದಲ್ಲಿ ಗಲಾಟೆಗಳಾಗಬಹುದು ಎಂಬ ಗುಮಾನಿಯಿಂದ ಪೊಲೀಸರು ಯಾಸಿರ್​ ಎಂಬ ದನಕಳ್ಳನನ್ನು ಅರೆಸ್ಟ್ ಮಾಡಿದರು. ಯಾಸಿರ್​​ ನನ್ನು ಪೊಲೀಸರು ಸುದೀರ್ಘವಾಗಿ ವಿಚಾರಣೆ ನಡೆಸಿದಾಗ ಆತ ತನ್ನ ಅನಿಲ್​ ಪ್ರಭು ಹೆಸರು ಹೇಳಿದ. ಪೊಲೀಸರು ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಭಜರಂಗದಳದ ಸಂಚಾಲಕನಾಗಿದ್ದ ಅನಿಲ್​ ಪ್ರಭುವನ್ನು ವಿಚಾರಣೆ ನಡೆಸಿದಾಗ ಕಾರ್ಕಳದಲ್ಲಿ ನಡೆದ ಬಹುತೇಕ ದನಗಳ ಕಳ್ಳ ಸಾಗಾಟ. ದನಗಳ ಕಳ್ಳತನವನ್ನು ಈತನೇ ಸಂಘಟಿಸಿರುವುದಾಗಿ ತಿಳಿದು ಬಂತು.

2021 ರ ನವೆಂಬರ್ 08 – ಮೂಡಬಿದ್ರೆಯಲ್ಲಿ ದನವನ್ನು ಕದ್ದು ಮಾಂಸಕ್ಕಾಗಿ ಮಾರಾಟ ಮಾಡುತ್ತಿದ್ದ ಮೂವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ನಂತರ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಆರೋಪಿಗಳು ಸ್ಥಳೀಯ ಹಿಂದೂ ಕಾರ್ಯಕರ್ತರಾಗಿದ್ದು ವಾಲ್ಪಾಡಿ ಗ್ರಾಮದ ಪವನ್​ ಕುಮಾರ್​, ಮಾರೂರಿನ ಸತೀಶ್​​ ಮತ್ತು ಜಯಾನಂದ ಎಂದು ಗುರುತಿಸಲಾಯಿತು. ಯಾರೋ ಮುಸ್ಲಿಂ ಯುವಕರು ದನ ಕಳ್ಳಸಾಗಾಟ ಮಾಡುತ್ತಿದ್ದಾರೆ ಎಂದು ಗ್ರಾಮದ ಜನ ಅನುಮಾನಿಸಿದ್ದರು. ಕೊನೆಗೆ ಗ್ರಾಮದ ಜನರೇ ಕಾರ್ಯಾಚರಣೆ ಮಾಡಿ ಹಿಂದುತ್ವವಾದಿ ದನಕಳ್ಳರನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಡಬಿದ್ರೆ ಪೊಲೀಸ್​​ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

2021 ಸೆಪ್ಟೆಂಬರ್ 17 – ಮೂಡಬಿದ್ರೆಯಲ್ಲಿ ಪದೇ ಪದೇ ಅಕ್ರಮ ದನ ಸಾಗಾಟ ನಡೆಯುತ್ತಿತ್ತು. ಭಜರಂಗದಳ ಹಲವು ಬಾರಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಸ್ಥಳೀಯ ಮುಸ್ಲಿಂ ಯುವಕರೇ ದನವನ್ನು ಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂಬುದು ಭಜರಂಗದಳ ಆರೋಪವಾಗಿತ್ತು. “ಒಂದೋ ಪೊಲೀಸರು ಅಕ್ರಮ ದನ ಸಾಗಾಟ ತಡೆಯಬೇಕು. ಪೊಲೀಸರಿಗೆ ಆಗದೇ ಇದ್ದಲ್ಲಿ ಭಜರಂಗದಳವೇ ದನ ಸಾಗಾಟ ತಡೆಯುತ್ತದೆ. ಆಗ ಆಗುವ ಅನಾಹುತಗಳಿಗೆ ಪೊಲೀಸರೇ ಜವಾಬ್ದಾರರು” ಎಂದು ಭಜರಂಗದಳ ಹೇಳಿಕೊಂಡಿತ್ತು. ದನ ಸಾಗಾಟ ಪ್ರಕರಣವು ಕೋಮುಗಲಭೆಯಾಗಿ ಮಾರ್ಪಾಡುವುದನ್ನು ತಪ್ಪಿಸಲು ಪೊಲೀಸರು ಹಗಲು ರಾತ್ರಿ ರಸ್ತೆಯಲ್ಲಿ ನಾಕಾಬಂಧಿ ಹಾಕಿದರು.

ಮೂಡಬಿದ್ರೆಯ ಮೂಡುಮಾರ್ನಾಡು ಗ್ರಾಮದ ಗುಡ್ಡದಮೇಲು ರಸ್ತೆಯಲ್ಲಿ ಪೊಲೀಸರು ನಾಕಾಬಂಧಿ ನಡೆಸಿ ವಾಹನಗಳ ತಪಾಸಣೆ ನಡೆಸಿದಾಗ ಒಂದು ಟೆಂಪೋದಲ್ಲಿ ಎರಡು ದನ ಮತ್ತು ಎರಡು ಹೋರಿಯನ್ನು ಸಾಗಿಸಲಾಗುತ್ತಿತ್ತು. ದನ ಹೋರಿ ಮತ್ತು ಟೆಂಪೋವನ್ನು ವಶಕ್ಕೆ ಪಡೆದು ಆರೋಪಿಗಳನ್ನು ವಿಚಾರಿಸಿದಾಗ ಆರೋಪಿಗಳು ಸ್ಥಳೀಯ ಹಿಂದುತ್ವವಾದಿ ಕಾರ್ಯಕರ್ತರಾಗಿದ್ದ ಹರಿಶ್ಚಂದ್ರ ಆಚಾರ್ಯ ಮತ್ತು ಕರಿಯ ಎಂಬವರಾಗಿದ್ದರು. ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

2021 ಸೆಪ್ಟೆಂಬರ್ 15 – ಗೋ ಮಾತೆಯ ರಕ್ಷಣೆಗಾಗಿ ನಡೆಯುವ ರಕ್ತಪಾತಕ್ಕೆ ಪೊಲೀಸರೇ ಹೊಣೆ ಎಂದು ಬೆಳ್ತಂಗಡಿಯ ಭಜರಂಗದಳ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಈ ಹಿನ್ನಲೆಯಲ್ಲಿ ರಾತ್ರಿಯಿಡೀ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟು ಲಾರಿ, ಟೆಂಪೋಗಳನ್ನು ಪರಿಶೀಲನೆ ಮಾಡುತ್ತಿದ್ದರು.

ಪೂಂಜಾಲಕಟ್ಟೆ ಉಪಪೊಲೀಸ್ ನಿರೀಕ್ಷಕ ಕುಟ್ಟಿ ಎಂ ಕೆ ನೇತೃತ್ವದ ಪೊಲೀಸ್ ತಂಡ ಬೆಳ್ತಂಗಡಿಯ ಸೋಣಂದೂರು ಶಾಲಾ ಬಳಿ ಟೆಂಪೋವೊಂದನ್ನು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಅದರಲ್ಲಿ ಎರಡು ಹೋರಿಗಳು ಮತ್ತು ಕರುಗಳು ಪತ್ತೆಯಾದವು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪಣಕಜೆ ಸಬರಬೈಲು ನಿವಾಸಿ ಗಣೇಶ್ ಎಂಬುದು ಬಯಲಾಯಿತು. ಈತ ಸ್ಥಳೀಯ ಹಿಂದುತ್ವವಾದಿ ಕಾರ್ಯಕರ್ತನಾಗಿದ್ದು ನವಾಜ್​​ ಎಂಬಾತನ ಸಹಾಯ ಪಡೆದು ದನಗಳನ್ನು ಕಳ್ಳತನ ಮಾಡಿ ಕಸಾಯಿಖಾನೆಗೆ ಮಾಂಸಕ್ಕಾಗಿ ಮಾರಾಟ ಮಾಡುತ್ತಿದ್ದ.

1,020,000 ಮೌಲ್ಯದ ಹೋರಿ ಕರುಗಳು ಮತ್ತು ಟೆಂಪೋವನ್ನು ವಶಪಡಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೂಂಜಾಲಕಟ್ಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2021 ಸೆಪ್ಟೆಂಬರ್ 23 – ನೆಲ್ಯಾಡಿ ರಸ್ತೆಯ ತೋಟ ಎಂಬಲ್ಲಿ ಅಪೆ ರಿಕ್ಷಾವೊಂದು ಉರುಳಿ ಬಿತ್ತು. ಆ ರಿಕ್ಷಾದಲ್ಲಿ ಅಮಾನವೀಯ ರೀತಿಯಲ್ಲಿ ದನಗಳನ್ನು ತುಂಬಿಸಲಾಗಿದ್ದು ರಿಕ್ಷಾದ ಜೊತೆ ದನ ಕರುಗಳೂ ರಸ್ತೆಗೆ ಬಿದ್ದವು. ರಿಕ್ಷಾವನ್ನು ಎಳೆದು ನಿಲ್ಲಿಸಿದ ಆರೋಪಿಗಳು ರಿಕ್ಷಾದೊಳಗೆ ಮತ್ತೆ ದನಕರುಗಳನ್ನು ತುಂಬಿಸಲು ಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಜನ ಜಮಾವಣೆಗೊಂಡು ವಿಚಾರಿಸಿದಾಗ ರಿಕ್ಷಾ ಚಾಲಕ ಸಫೀಕ್​ ಎಂಬಾತ ರಿಕ್ಷಾದ ಜೊತೆ ಪರಾರಿಯಾದ. ಸ್ಥಳದಲ್ಲಿದ್ದ ಮತ್ತೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದಾಗ ಆತ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಗುರುಪ್ರಸಾದ್​ ಎಂದು ತಿಳಿದು ಬಂತು.

ಗುರುಪ್ರಸಾದನು ದನವನ್ನು ಖರೀದಿಸಿಯೋ, ಕಳ್ಳತನ ಮಾಡಿಯೋ ಮಾಂಸಕ್ಕಾಗಿ ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದನು. ಈ ಗುರುಪ್ರಸಾದನು ಈ ಹಿಂದೆ ಕೇಸರಿ ಶಾಲು ಹಾಕಿ ಹಲವು ಹಿಂದೂ ಸಮಾಜೋತ್ಸವಗಳಲ್ಲಿ ಭಾಗಿಯಾಗಿದ್ದನಂತೆ. ಉಪ್ಪಿನಂಗಡಿ ಪೊಲೀಸರು ಗುರುಪ್ರಸಾದನ ವಿರುದ್ಧ ಆ.ಕ್ರ.96/2021 ಕಲಂ 11(ಡಿ) ಕಲಂ 66(1) 192 ಎ ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

2020 ಸೆಪ್ಟೆಂಬರ್ 4 – ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಓಮಿನಿ ಮಾರುತಿ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾಗ ಪುತ್ತೂರು ನಗರ ಪೊಲೀಸ್ ಠಾಣಾ ಎಸೈ ನೇತೃತ್ವದ ತಂಡ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಕಾರನ್ನು ಪರಿಶೀಲನೆ ನಡೆಸಿದಾಗ ಕಾರಿನ ಒಳಗೆ ಹಿಂಸಾತ್ಮಾಕ ರೀತಿಯಲ್ಲಿ ಕರುವಿನ ಕೈ ಕಾಲುಗಳನ್ನು ಕಟ್ಟಿ ಅಡ್ಡವಾಗಿ ಮಲಗಿಸಿರುವುದು ಕಂಡು ಬಂದಿದೆ. ಕಾಸರಗೋಡು ಪಾಲಾರ್ ಬಂದಡ್ಕ ನಿವಾಸಿಗಳಾದ ಶಿವಪ್ರಸಾದ್ ಭಟ್ ಕೆ (52) ಮತ್ತು ಚಂದ್ರನ್ ಟಿ (34) ಎಂಬವರುಗಳನ್ನು ವಶಕ್ಕೆ ಪಡೆದು, ವಾಹನ ಮತ್ತು ಜಾನುವಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

2020 ರ ಜುಲೈ 30 – ವಿಟ್ಲದ ಇಡ್ಕಿದು ಗ್ರಾಮದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ಪತ್ತೆ ಹಚ್ಚಿದರು. ಜೀಪೊಂದರಲ್ಲಿ ತೀರಾ ಅಮಾನವೀಯವಾಗಿ ದನಗಳನ್ನು ತುಂಬಿಸಿ ಸಾಗಿಸಲಾಗುತ್ತಿತ್ತು. ಪೊಲೀಸರು ದನ ಕಳ್ಳಸಾಗಾಟದ ಜೀಪನ್ನು ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೇ ಇದ್ದಾಗ ಬೆನ್ನಟ್ಟಿ ನಿಲ್ಲಿಸಬೇಕಾಯಿತು. ಮೂವರಿದ್ದ ಜೀಪು ನಿಂತ ತಕ್ಷಣ ಒಬ್ಬಾತ ತಪ್ಪಿಸಿಕೊಂಡರೆ ಉಳಿದವರಿಬ್ಬರು ಪೊಲೀಸರ ಕೈಗೆ ಸಿಕ್ಕಿ ಬಿದ್ದರು. ಬಂಧಿತ ಆರೋಪಿಯನ್ನು ಮಿತ್ತೂರು ಬರ್ಕೋಡಿ ನಿವಾಸಿ ಪದ್ಮನಾಭ ಗೌಡ ಎಂದು ಗುರುತಿಸಲಾಯಿತು. ಪದ್ಮನಾಭಗೌಡ, ದನಗಳು ಮತ್ತು ಜೀಪನ್ನು ವಶಪಡಿಸಿಕೊಂಡ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ ನಾನು ತಲೆಮರೆಸಿಕೊಂಡಿಲ್ಲ; ಫೇಸ್‌ಬುಕ್‌ನಲ್ಲಿ ವಿಡಿಯೋ ಹರಿಬಿಟ್ಟ ಪುನೀತ್‌ ಕೆರೆಹಳ್ಳಿ

2020 ಜುಲೈ 20 – ದೇಶದಾದ್ಯಂತ ಕೋವಿಡ್​​ ಲಾಕ್​ಡೌನ್​ ಇತ್ತು. ಮೀನು, ಕೋಳಿ, ಮಾಂಸದಂಗಡಿ, ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿಮುಂಗಟ್ಟುಗಳು ಬಂದ್ ಆಗಿದ್ದವು. ಸರ್ಕಾರಿ ಇಲಾಖೆ, ಆಸ್ಪತ್ರೆ, ತುರ್ತು ಸೇವೆಗಳು, ಪತ್ರಕರ್ತರಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ವಾಹನ ಪಾಸ್ ಅನ್ನು ಪೊಲೀಸರು ನೀಡುತ್ತಿದ್ದರು. ಅದೇ ರೀತಿ ತರಕಾರಿ, ಕೋಳಿ ಕುರಿ ಸಾಗಾಟಗಾರರಿಗೂ ಪಾಸ್ ನೀಡಲಾಗುತ್ತಿತ್ತು.

ಅವತ್ತು ಆಟಿ ಅಮಾವಾಸ್ಯೆಯ ದಿನ. ಬೆಳ್ತಂಗಡಿಯ ಸುರ್ಯ ಎಂಬಲ್ಲಿನ ಮನೆಯ ಕೊಟ್ಟಿಗೆಯಿಂದ ದನವನ್ನು ಕಳ್ಳತನ ಮಾಡಲಾಗುತ್ತೆ. ಆ ಮನೆಯವರು ನೋಡ ನೋಡುತ್ತಿದ್ದಂತೆ ಪಿಕಪ್​ ವಾಹನದಲ್ಲಿ ಕೊಟ್ಟಿಯಲ್ಲಿದ್ದ ದನಗಳನ್ನು ತುಂಬಿಸಿಕೊಂಡು ಪರಾರಿಯಾಗುತ್ತಾರೆ. ದನ ಕಳ್ಳತನದ ಪಿಕಪ್​​ ವಾಹನಕ್ಕೆ ಇನ್ನೊಂದು ಬೆಂಗಾವಲು ಕಾರು ಕೂಡಾ ಇರುತ್ತದೆ. ಇಷ್ಟು ವ್ಯವಸ್ಥಿತವಾಗಿ ದನವನ್ನು ಕೊಟ್ಟಿಗೆಯಿಂದಲೇ ಕಳ್ಳತನ ಮಾಡಲಾಗುತ್ತೆ. ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಊರಿಗೆ ಹಬ್ಬುತ್ತೆ. ಹೀಗಾದರೆ ಬದುಕುವುದು ಹೇಗೆ? ಕೊಟ್ಟಿಗೆಗೇ ನುಗ್ಗಿ ದನ ಕಳ್ಳತನ ಮಾಡುವ ಮಟ್ಟಿಗೆ ಮುಸ್ಲಿಮರು ಬಂದರು ಎಂದರೆ ಏನರ್ಥ ಎಂದು ಜನ ಲೊಚಗುಟ್ಟುತ್ತಾರೆ. ಒಂದಷ್ಟು ಯುವಕರು ಸಂಘಟಿತರಾಗಿ ದನ ಕಳ್ಳರನ್ನು ಹಿಡಿಯಲೇಬೇಕು ಎಂದು ಊರಿಗೆ ನಾಕಾಬಂಧಿ ಹಾಕಿದಾಗ ಪಿಕಪ್​​ ವಾಹನ ಸಿಕ್ಕಿ ಬಿತ್ತು. ದನಗಳಿದ್ದ ಪಿಕಪ್​ ನಿಲ್ಲುತ್ತಿದ್ದಂತೆ ಆರೋಪಿಗಳು ಹಿಂದುಗಡೆ ಬರುತ್ತಿದ್ದ ಬೆಂಗಾವಲು ಕಾರು ಹತ್ತಿ ಪರಾರಿಯಾದರು. ಅಲ್ಲಿದ್ದ ಯುವಕರು ಗುರುವಾಯನಕೆರೆಯ ಸ್ಥಳೀಯರಿಗೆ ಮಾಹಿತಿ ನೀಡಿದಾಗ ಗುರುವಾಯನಕೆರೆಯ ಸ್ಥಳೀಯರು ದನ ಕಳ್ಳಸಾಗಾಟಗಾರರು ಪರಾರಿಯಾಗುತ್ತಿದ್ದ ವಾಹವನ್ನು ತಡೆದು ನಿಲ್ಲಿಸಿದರು.

ಇದನ್ನು ಓದಿ ಕೋಮು ಹಿಂಸಾಚಾರ ಬಗ್ಗೆ ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಕಪಿಲ್‌ ಸಿಬಲ್‌

ಕೊಟ್ಟಿಗೆಯಲ್ಲಿ ಕಟ್ಟಿದ್ದ ದನವನ್ನು ಕಳ್ಳಸಾಗಾಟ ಮಾಡುತ್ತಿದ್ದ ಆರೋಪಿ ರಾಜೇಶ್​ ಎಂದು ಗುರುತಿಸಲಾಯಿತು. ರಾಜೇಶನು ತನ್ನ ಪ್ರಭಾವ ಬಳಸಿ ಚಿಕನ್​ ಸೆಂಟರ್​ ಗೆ ಕೋಳಿ ಸಾಗಾಟ ಎಂದು ಕೋವಿಡ್​ -19 ಪಾಸ್​ ತೆಗೆದುಕೊಂಡು ವಾಹನಕ್ಕೆ ಅಂಟಿಸಿ ಅದರಲ್ಲಿ ದನ ಕಳ್ಳಸಾಗಾಟ ಮಾಡುತ್ತಿದ್ದ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯರಿಗೆ ಗಾಯಗಳಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

2021 ನವೆಂಬರ್ 24 – ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ಅಕ್ರಮ ಗೋ ಸಾಗಾಟ ಪತ್ತೆಯಾಯಿತು. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಎರಡು ಹಸು, ಒಂದು ಕರು ಸಹಿತ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಬಸವರಾಜ್, ಅವಿನಾಶ್ ಬಿ ಆರ್, ಪುಷ್ಪರಾಜ್ ಜಿ.ಎಸ್ ಹರೀಶ್, ಬಿ.ಎಸ್ ಹರೀಶ್, ಶೀನ ಪುಜಾರಿ ಸುಮಾರು 18,500 ರೂ ಮೌಲ್ಯದ ಎರಡು ದನಗಳನ್ನು ಮತ್ತು ಒಂದು ಕರುವನ್ನು ಮುಂಜಾನೆ 2.45 ರ ಸಮಯದಲ್ಲಿ ಕಳ್ಳಸಾಗಾಟ ಮಾಡಿ ಇಸ್ಲಾಯಿಲ್ ಎಂಬಾತನಿಗೆ ಮಾರುತ್ತಿದ್ದರು. ಖರೀದಿಸಿ ತಂದಿದ್ದೋ, ಸಾಕಿರೋ ದನಗಳೋ, ಕಳ್ಳತನದ ದನಗಳೋ ಎಂದು ತಿಳಿಯದ ವ್ಯಾಪಾರಿ ಇಸ್ಮಾಯಿಲನು ಬಸವರಾಜ್, ಅವಿನಾಶ್ ಬಿ ಆರ್, ಪುಷ್ಪರಾಜ್, ಜಿ.ಎಸ್ ಹರೀಶ್, ಬಿ.ಎಸ್ ಹರೀಶ್, ಶೀನ ಪುಜಾರಿಯಿಂದ ದನಗಳನ್ನು ಖರೀದಿಸುತ್ತಿದ್ದನು. ಅವೆಲ್ಲವೂ ಕಳ್ಳತನದ ದನಗಳಾಗಿದ್ದು ಬಸವರಾಜ್ ಮತ್ತು ಇತರರು ನಡೆಸುತ್ತಿದ್ದರು. ಸಿಕ್ಕಿಬಿದ್ದರೆ ಇಸ್ಮಾಯಿಲ್​ ಸಿಕ್ಕಿಬಿದ್ದು ದನ ಕಳ್ಳತನದ ಆರೋಪ ಮುಸ್ಲಿಮರ ಮೇಲೆ ಬರುತ್ತಿತ್ತು. ಆದರೆ ಇಲ್ಲಿ ಎಲ್ಲರೂ ಸಿಕ್ಕಿಬಿದ್ದು ಬಟಾಬಯಲಾಗಿದೆ. ಆರೋಪಿಗಳನ್ನು ತನಿಖೆ ನಡೆಸಿದ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

2021 ಡಿಸೆಂಬರ್ 15 – ಬೆಳ್ತಂಗಡಿಯ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಟೆಂಪೋವನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ರು. ಆ ಸಂದರ್ಭದಲ್ಲಿ ಟೆಂಪೋದಲ್ಲಿ ದನ ಕರುಗಳನ್ನು ಕಾಲು ಕಟ್ಟಿ ಮಲಗಿಸಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಟೆಂಪೋ ಚಾಲಕ ಮತ್ತು ಸಾಗಾಟಗಾರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದನವನ್ನು ಸಾಗಾಟ ಮಾಡುತ್ತಿದ್ದವನು ಬೆಳ್ತಂಗಡಿಯ ಗರ್ಡಾಡಿ ಗ್ರಾಮದ ಶೇಖರ ಎಂದು ತಿಳಿದು ಬಂತು. ಇಲ್ಲೂ ಕೂಡಾ ಡ್ರೈವರ್ ಮಾತ್ರ ಮುಸ್ಲಿಮನಾಗಿದ್ದ. ದನಕಳ್ಳ ಶೇಖರ ಬಂಧನದ ವೇಳೆಯೂ ಕೇಸರಿ ಶಾಲು ಮತ್ತು ಕೇಸರಿ ಪಂಚೆ ಉಟ್ಟುಕೊಂಡಿದ್ದ.

ಇದನ್ನು ಓದಿ ರಾಮ ನವಮಿ ಸಂಘರ್ಷ | ಪ.ಬಂಗಾಳದ ಹೂಗ್ಲಿಯಲ್ಲಿ ಮತ್ತೆ ಕೋಮು ಹಿಂಸಾಚಾರ

2021 ಫೆಬ್ರವರಿ 12 – ಕರಾವಳಿ ಮೂಲಕ ಮುಂಬೈಗೆ ಅಕ್ರಮವಾಗಿ ದನ ಸಾಗಾಟ ಪ್ರಕರಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಮೈಸೂರಿನ ರಾಘವೇಂದ್ರ ಎಂಬಾತ ಮಂಗಳೂರು ನೋಂದಣಿ ಸಂಖ್ಯೆಯ (ಕೆಎ 19 ಎ 1801) 10 ಚಕ್ರದ ಲಾರಿಯಲ್ಲಿ 18 ಎತ್ತುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು. ಸಾಗಾಟದ ವೇಳೆ ಎರಡು ಎತ್ತುಗಳು ಸಾವನ್ನಪ್ಪಿದ್ದು, ಉಳಿದ 16 ಎತ್ತುಗಳನ್ನು ರಕ್ಷಿಸಲಾಯಿತು. ದನ ಕಳ್ಳಸಾಗಾಟದ ಖಚಿತ ಮಾಹಿತಿಯ ಆಧಾರದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ ಕೆ. ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿಯವರು ತ್ರಾಸಿ ಮರವಂತೆಯ ಬಳಿ ಈ ಕಾರ್ಯಾಚರಣೆ ನಡೆಸಿದರು. ಅಕ್ರಮ ಗೋ ಸಾಗಾಟ ವಾಹನವು ಮಹಾರಾಷ್ಟ್ರದ ಸೊಲ್ಲಾಪುರದಿಂದ ಕಾಸರಗೋಡಿನ ಚೇರ್ಕಳಕ್ಕೆ ತೆರಳುತ್ತಿತ್ತು. ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ನಜೀರುಲ್ಲ (43) ಎಂಬಾತನನ್ನು ಈ ವಾಹನದ ಡ್ರೈವರ್ ಆಗಿ ನೇಮಿಸಿದ್ದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020ರನ್ವಯ ಪ್ರಕರಣ ದಾಖಲಾಗಿದೆ.

ಪೊಲೀಸರು ದನ ಸಾಗಾಟ ಮಾಡುವ ವಾಹನ ನಿಲ್ಲಿಸಿದಾಗ ಸಿಗುವ ಡ್ರೈವರ್ ಮಾತ್ರ ಮುಸ್ಲಿಮನಾಗಿರುತ್ತಾನೆ. ಪ್ರಕರಣದ ಆಳಕ್ಕಿಳಿದರೆ ದನ ಸಾಗಾಟ ವಾಹನದ ಮಾಲೀಕ, ವ್ಯಾಪಾರಿ ಹಿಂದು, ಹಿಂದುತ್ವ ಸಂಘಟನೆಯ ಮುಖಂಡನೂ ಆಗಿರುತ್ತಾನೆ. ಹಿಂದುತ್ವ ಸಂಘಟನೆಗಳು ನಡೆಸುವ ಗೋ ರಕ್ಷಣೆ ಎಂಬ ಬೀದಿ ಗೂಂಡಾಗಿರಿ ಒಂದೋ ಹಫ್ತಾ ವಸೂಲಿಗಾಗಿರುತ್ತದೆ ಅಥವಾ ತಾವು ನಡೆಸುವ ದನದ ವ್ಯಾಪಾರದ ಪ್ರತಿಸ್ಪರ್ಧಿಗಳನ್ನು ಹಣಿಯುವುದಕ್ಕಾಗಿರುತ್ತದೆ ಎಂಬುದಂತೂ ಸ್ಪಷ್ಟ.

ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ)...