ಏನೇ ಹೇಳ್ರಿ, ಜಗದೀಶ ಶೆಟ್ಟರ್ ಸೋಲಬಾರದಿತ್ತು!

Date:

ಜಗದೀಶ ಶೆಟ್ಟರ್ ಅವರ ರಾಜಕೀಯ ಜೀವನವನ್ನು ಸಮೀಪದಿಂದ ನೋಡಿದ ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸೋತ ಕ್ಷಣವನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. 

ಶೆಟ್ಟರ್ ಮುಖ್ಯಮಂತ್ರಿ ಆಗುವಾಗ, ಆಗಿದ್ದಾಗ, ಆ ಹುದ್ದೆಯಿಂದ ಕೆಳಗಿಳಿಯುವಾಗ ಹುಡುಕಾಡಿ ಸ್ಟೋರಿ ಮಾಡಿದ ಹುಬ್ಬಳ್ಳಿಯ ಪತ್ರಕರ್ತರಲ್ಲಿ ನಾನೂ ಒಬ್ಬ. ಅದರಲ್ಲೂ ನೆಗೆಟಿವ್ ಸ್ಟೋರಿಗಳೇ ಜಾಸ್ತಿ. ಅದು ನನ್ನ ವೃತ್ತಿ ಧರ್ಮವೂ ಹೌದು. ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಒಂದು ಹಾರ್ಡ್-ಹಿಟ್ ಹೇಳಿಕೆ ಕೊಡಲಿಲ್ಲ ಎಂದು ವಟಗುಡುತ್ತಿದ್ದ ಮಾಧ್ಯಮದವರಲ್ಲಿ ನಾನೂ ಒಬ್ಬ.

ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಅವರನ್ನು ಟೀಕಿಸುವ ಸಾವಿರಾರು ಮತದಾರರಲ್ಲಿ ನಾನೂ ಒಬ್ಬ. ಆದರೆ ಮುಖ್ಯಮಂತ್ರಿ ಇದ್ದಾಗಲೂ, “ಸಾಹೇಬರು ಅದಾರನ್ರಿ?” ಅಂತ ನಾವು ಕೇಳಿದರ “ನಾನ ಜಗದೀಶ ಶೆಟ್ಟರ್ ಮಾತಾಡೂದು ಹೇಳ್ರಿ” ಅಂತ ತಾವೇ ಫ್ರೀ ಇದ್ದರೆ ಕರೆ ಸ್ವೀಕರಿಸುತ್ತಿದ್ದವರು; ಬಿಜಿ ಇದ್ದರೆ ಕರೆ ಸ್ವೀಕರಿಸೋದೇ ಇಲ್ಲ. ತಂತ್ರಜ್ಞಾನ ಬಳಕೆಯಲ್ಲಿ ಬಹಳ ಹಿಂದುಳಿದವರು (ನನ್ನ ಗ್ರಹಿಕೆ ತಪ್ಪೂ ಇರಬಹುದು). ಒಮ್ಮೆಯೂ ನನ್ನ ವಾಟ್ಸ್ಯಾಪ್ ಮೆಸ್ಸೇಜ್ ನೋಡಿದವರಲ್ಲ. ಟೀಕಿಸಿ ಬರೆದಾಗ, ಅವರದೇ ಪಕ್ಷದ ಇನ್ನೊಬ್ಬ ಶಾಸಕರಂತೆ ‘ಕಹಿಯಾಗಿ’ ಮಾತನಾಡಿದವರಲ್ಲ, ಹೊಗಳಿ ಬರೆದಾಗ ಉಬ್ಬಿದವರೂ ಅಲ್ಲ. ಇದು ಬಹುತೇಕ ಪತ್ರಕರ್ತರ ಅನುಭವವೂ ಆಗಿರಬಹುದು.

ಎಲ್ಲರಂತೆ ನಾನೂ “ಇವರೇನು ಕೆಲಸ ಮಾಡ್ಯಾರ…?” ಅಂತ ಜರೆದದ್ದೂ ಇದೆ. ಹಲವು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇವರು ಯಾವತ್ತೂ ಅಧಿಕಾರಿಗಳನ್ನು ಏರಿದ ದನಿಯಲ್ಲಿ ಗದರಿಸಿದವರಲ್ಲ, ಅವರು ಕೊಡುವ ಮಾಹಿತಿಯನ್ನು ವೆರಿಫೈ ಮಾಡಿಕೊಳ್ಳುವ ಗೋಜಿಗೆ ಹೋಗುವವರಲ್ಲ. “ಅದೇನು ಇದೆ ನೋಡಿ ಸರಿ ಮಾಡ್ರಿ… ಪಬ್ಲಿಕ್‌ಗೆ ತೊಂದರೆ ಆಗಬಾರದು ಅಷ್ಟ…” ಎಂದು ಷರಾ ಬರೆದವರು. ಒಂಥರಾ ಮನಮೋಹನ್ ಸಿಂಗ್, “ಐ ಬಿಲೀವ್ ಮೈ ಬ್ಯುರೊಕ್ರಾಟ್ಸ್” ಅಂದಂತೆ ಶೆಟ್ಡರ್ ಸ್ವಭಾವ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಾಗಂತ ಯಾವಾಗಲೂ ಇದೇ ರೀತಿ ಶಾಂತತೆಯಿಂದ ಇದ್ದರು ಎಂದು ಹೇಳಲಾಗದು. ಹುಬ್ಬಳ್ಳಿ- ಧಾರವಾಡ ನೀರು ಪೂರೈಕೆ ಹದಗೆಟ್ಟಾಗ ವಿಧಾನ ಸಭೆ ಅಧಿವೇಶನದಲ್ಲಿ ತಮ್ಮದೇ ಪಕ್ಷದ ಸರಕಾರದ ವಿರುದ್ಧ ಗುಡುಗಿದರು. ಹಾವೇರಿಯ ಸರಕಾರಿ ಮೆಡಿಕಲ್ ಕಾಲೇಜಿಗೆ ಬೋಧಕ ಸಿಬ್ಬಂದಿ ನೇಮಕಗೊಂಡು ವರ್ಷ ಕಳೆದರೂ ಆದೇಶ ನೀಡದ ಆರೋಗ್ಯ ಸಚಿವರ ಆರೋಗ್ಯ ಸರಿಪಡಿಸಲು ತರಾಟೆಗೆ ತೆಗೆದುಕೊಂಡರು.

ಇವೆಲ್ಲ ಏಪ್ರಿಲ್ 11ರವರೆಗೂ ಅವರ ಶಕ್ತಿಗಳೇ ಆಗಿದ್ದವು. ಯಾವಾಗ ನಡ್ಡಾ ಅವರು ಕರೆ ಮಾಡಿ ಟಿಕೆಟ್ ಇಲ್ಲ ಅಂದರೋ, ಶೆಟ್ಟರ್ ಅವರ ಸಹನೆ, ಮೃದುತ್ವಗಳೇ ಅವರಿಗೆ ದೌರ್ಬಲ್ಯಗಳಾಗಿ ಕಾಡಿದವೇ ಎಂಬ ಪ್ರಶ್ನೆ ನನ್ನಂಥವರಲ್ಲಿ ಹುಟ್ಟಿದ್ದು ಸಹಜವೇ.

ಮೊನ್ನೆ ಶಾ ಹುಬ್ಬಳ್ಳಿಯ ಪತ್ರಿಕಾಗೋಷ್ಠಿಯಲ್ಲಿ, “ಜಿಸ್ ನೇತಾ ಕೋ ಮಿನಿಸ್ಟೀರಿಯಲ್ ಬರ್ತ್ ನಹೀಂ ಚಾಹಿಯೆ, ಉಸ್ ನೇತಾ ಕೊ ಟಿಕಟ್ ಕ್ಯೋಂ ಚಾಹಿಯೆ?” ಅಂತ ಕೇಳಿದಾಗ ಶೆಟ್ಟರ್, ಬಿಜೆಪಿಗೆ ಯಾವಾಗಿನಿಂದ ಬೇಡವಾದರು ಎಂಬುದರ ಬಗ್ಗೆ ಮಾಧ್ಯಮದವರಿಗೆ ಸುಳಿವು ಸಿಕ್ಕಿತು. ಬೊಮ್ಮಾಯಿಯಂಥ ಕಿರಿಯರು ಮುಖ್ಯಮಂತ್ರಿ ಆದಾಗ ತಮಗೆ ಸಚಿವ ಸ್ಥಾನ ಬೇಡ ಅಂದದ್ದೇ ಬಿಜೆಪಿ ಹೈಕಮಾಂಡ್‌ಗೆ ದೊಡ್ಡ ತಪ್ಪಾಗಿ ಕಂಡಿತ್ತು! ಅಂಥ ಅಸಮಾಧಾನದ ಹೇಳಿಕೆಯ ನಂತರ ಶೆಟ್ಟರ್ ರಹಸ್ಯವಾಗಿಯಾದರೂ ಪಕ್ಷವಿರೋಧಿ- ಆಡಳಿತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರಲ್ಲ.

ಇದೇ ವೇಳೆ ಸಿಟಿ ರವಿ ಅವರು ಲಿಂಗಾಯತ ಸಮುದಾಯದ ಬಗ್ಗೆ ಬಹಿರಂಗವಾಗಿ ಆಡಿದ ಮಾತು, ಕಟೀಲ್ ಅವರು ಆಪ್ತರ ಬಳಿ ಹೇಳಿಕೊಂಡಿದ್ದೆನ್ನಲಾದ ಮಾತುಗಳು ಶೆಟ್ಟರ್ ಬಗೆಗಿನ ಬಿಜೆಪಿ ತಳೆಯುವ ಧೋರಣೆಯ ದಿಕ್ಸೂಚಿಗಳಂತಿದ್ದವು! ಆದರೆ ಶೆಟ್ಟರ್ ಅವರು ಇದಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ವಿಸ್ಪರಿಂಗ್ ಕ್ಯಾಂಪೇನ್, ಮಾಧ್ಯಮಗಳಲ್ಲಿ ವರದಿಗಳು ಕಿವಿಗೆ- ಕಣ್ಣಿಗೆ ಬಿದ್ದಾಗಲೂ ಬಹಿರಂಗವಾಗಿ ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ.

ಕಳೆದ ಡಿಸೆಂಬರ್‌ನಲ್ಲಿ ತಮ್ಮ ಜನ್ಮ ದಿನದ ಆಚರಣೆ ಸಮಾರಂಭದಲ್ಲಿ ಮಾತ್ರ, “ನನ್ನನ್ನು ಎಲ್ಲರೂ ಸಜ್ಜನ ರಾಜಕಾರಣಿ ಅಂತ ನೀವೆಲ್ಲರೂ (ಅಲ್ಲಿದ್ದ ಹಲವು ಸ್ವಾಮಿಗಳಿಗೆ) ಹೊಗಳ್ತೀರಿ. ಅದನ್ನ ನಾನು ಆಶೀರ್ವಾದ ಅಂತ ಸ್ವೀಕರಿಸ್ತೀನಿ. ನಾನು ಯಾರ ತಂಟೆಗೂ ಹೋಗಲ್ಲ. ಆದರೆ ಯಾರಾದರೂ ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ” ಎಂದು ಎಚ್ಚರಿಕೆ ನೀಡಿದ್ದರು. ಅದು ಯಾರಿಗೆ ನೀಡಿದ್ದ ಎಚ್ಚರಿಕೆ ಎಂಬುದು ಅಲ್ಲಿದ್ದ ಎಲ್ಲರಿಗೂ ಅರ್ಥವಾಗಿತ್ತು. ಆದರೆ ಶೆಟ್ಟರ್ ಯಾವತ್ತೂ ಇಂಥ ವಿಷಯಗಳಲ್ಲಿ ವಾಚ್ಯವಾಗಿ ಮಾತನಾಡಿದವರಲ್ಲ, ಸೂಚ್ಯವಾಗಿ ಹೇಳಿ ಅಸಮಾಧಾನ ವ್ಯಕ್ತಪಡಿಸುವಲ್ಲಿಯೂ ಪ್ರಬುದ್ಧತೆ ತೋರಿದ್ದರು.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಅಷ್ಟಕ್ಕೂ ಶೆಟ್ಟರ್‌ಗೆ ಟಿಕೆಟ್ ನಿರಾಕರಣೆಯ ಕಾರಣವಾದರೂ ಏನು? ಇದೇ ಪ್ರಶ್ನೆಯನ್ನು ಶೆಟ್ಟರ್ ಸತತವಾಗಿ ಕೇಳಿದ್ದಾರೆ. ಮಾಧ್ಯಮದವರು ಇದೇ ಪ್ರಶ್ನೆಯನ್ನು ಅಮಿತ್ ಶಾಗೆ ಕೇಳಿದರೆ ಸಿಕ್ಕದ್ದು ಮತ್ತೊಂದು ಉಡಾಫೆಯ ಉತ್ತರ- “ಕಾರಣವನ್ನು ಶೆಟ್ಟರ್‌ಗೆ ತಿಳಿಸಿದ್ದೇವೆ; ಮತದಾರರಿಗೆ ಹೇಳುತ್ತೇವೆ; ನಿಮಗೆ (ಮಾಧ್ಯಮದವರಿಗೆ) ಹೇಳಲ್ಲ!”

ಶೆಟ್ಟರ್ ಅಷ್ಟೇ ಅಲ್ಲ, ಬಹುತೇಕ ರಾಜಕೀಯಾಸಕ್ತರ ಪ್ರಶ್ನೆಗಳಿವು- ಶೆಟ್ಟರ್ ಮೇಲೆ ಭ್ರಷ್ಟಾಚಾರದ ಆರೋಪಗಳಿವೆಯೇ? ಸಿಡಿಗಳಲ್ಲಿ ಸಿಲುಕಿ ನ್ಯಾಯಾಲಯದಿಂದ ಇಂಜಂಕ್ಷನ್ ಆರ್ಡರ್ ತಂದಿದ್ದಾರೆಯೇ? ಬಿಜೆಪಿಯೇ ಹಾಕಿಕೊಂಡಿರುವ ನಿಯಮದಂತೆ ವಯಸ್ಸು 75 ವರ್ಷ ಮೀರಿದೆಯೇ? ಯಡಿಯೂರಪ್ಪನವರಾದರೂ ಸೋಲಿನ ರುಚಿ ಕಂಡಿದ್ದಾರೆ. ಆದರೆ ಶೆಟ್ಟರ್ ಒಮ್ಮೆಯೂ ಸೋತಿಲ್ಲವಾದರೂ ಇದ್ದಕ್ಕಿದ್ದಂತೆ ನಿರಾಕರಣೆ ಏಕೆ? ಆರು ಬಾರಿ ಗೆದ್ದದ್ದು ಜಾಸ್ತಿ ಆಯಿತು ಅನ್ನುವುದಾದರೆ ಕಾಗೇರಿ ಅವರಿಗೆ ಹೇಗೆ ಟಿಕೆಟ್ ಸಿಕ್ಕಿತು? ಮುಖ್ಯಮಂತ್ರಿ ಸೇರಿದಂತೆ ಎಲ್ಲ ಹುದ್ದೆಗಳನ್ನು ಅನುಭವಿಸಿದ್ದಾರೆ- ಹಾಗಾಗಿ ಯುವಕರಿಗೆ ಅವಕಾಶ ಮಾಡಿಕೊಡಬೇಕು ಅನ್ನೋದಾದರೆ, ನಾಲ್ಕು ಬಾರಿ ಮುಖ್ಯಮಂತ್ರಿ ಮತ್ತು ಎರಡು ಬಾರಿ ಪ್ರಧಾನಿ ಹುದ್ದೆಯನ್ನು ಅನುಭವಿಸಿರುವ ನರೇಂದ್ರ ಮೋದಿ ಕೂಡ ಇದೇ ಮಾದರಿಯನ್ನು ಅನುಸರಿಸಬೇಕಲ್ಲವೇ?

ಹುಬ್ಬಳ್ಳಿಯ ನಾಗರಿಕನಾಗಿ ನಾನು ಇಷ್ಟನ್ನು ಹೇಳಲೇಬೇಕು ಅನ್ನಿಸ್ತು ಹೇಳಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...