ಕರ್ನಾಟಕ ಚುನಾವಣೆ | ಬೆಲೆಯೇರಿಕೆ ಮತ್ತು ಜನವಿರೋಧಿತನಕ್ಕೆ ಒದ್ದು ಬುದ್ಧಿ ಕಲಿಸಿದ ಮಹಿಳೆಯರು

Date:

ಮಹಿಳೆಯರು ಮತದಾರರಾಗಿ ಮಾತ್ರವಲ್ಲದೆ ಎಚ್ಚೆತ್ತ ಪ್ರಜೆಗಳಾಗಿಯೂ ತಮ್ಮ ನ್ಯಾಯಬದ್ಧ ಹಕ್ಕನ್ನು ಆಗ್ರಹಿಸಿ ಪಡೆದುಕೊಳ್ಳುವ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು ಮತ್ತು ಅದನ್ನು ಪ್ರಯೋಗಿಸಬೇಕು. ಅಂತಹ ಪ್ರಬಲ ಕಣ್ಣೋಟ ಮತ್ತು ಕಾರ್ಯಸೂಚಿ ತುರ್ತಾಗಿ ಸಿದ್ಧಗೊಳ್ಳಬೇಕಾದ ಅಗತ್ಯವಂತೂ ಸುಸ್ಪಷ್ಟವಾಗಿದೆ.

ಬಹುನಿರೀಕ್ಷಿತ ಚುನಾವಣಾ ಫಲಿತಾಂಶ ಬಂದಿದೆ. ಕಾಂಗ್ರೆಸ್ ಸ್ಪಷ್ಟವಾದ ಜನಾದೇಶ ಪಡೆದಿದೆ. ಕರ್ನಾಟಕದ ಅನೇಕ ಮುಖ್ಯವಾಹಿನಿ ಟಿ.ವಿ ಚಾನಲ್‌ಗಳಿಗೆ ಬಹಳ ನಿರಾಸೆಯಾಗುವಂತೆ ಅತಂತ್ರ ವಿಧಾನಸಭೆ ಆಗದೇ ‘ಈ ದಿನ’ ಮೆಗಾ ಸರ್ವೇ ನಿಖರವಾಗಿ ಹೇಳಿದಂತೆ ಮತ್ತು ಇನ್ನೂ ಕೆಲವು ವಿಶ್ವಾಸಾರ್ಹ ಅಧ್ಯಯನಗಳ ಊಹೆಯಂತೆ ದುರಾಡಳಿತ, ಕಂಡು ಕೇಳರಿಯದ ಭ್ರಷ್ಟಾಚಾರ, ಬೆಲೆಯೇರಿಕೆ ಮತ್ತು ದ್ವೇಷ ರಾಜಕಾರಣದಲ್ಲಿ ಮುಳುಗೆದ್ದಿದ್ದ ಬಿಜೆಪಿಯನ್ನು ಜನರು ಸೋಲಿಸಿದ್ದಾರೆ. ‘ಮೋದಿ-ಷಾ ಮೋಡಿ’ಯನ್ನು ಪ್ರಯೋಗಿಸಲು ನಡೆದ ಪ್ರಯತ್ನದ ಹೊರತಾಗಿಯೂ ಕಳೆದ ಬಾರಿಯ ಚುನಾವಣೆಗಿಂತ ಹೆಚ್ಚು ಓಟುಗಳು ಕಾಂಗ್ರೆಸ್‌ಗೆ ಈ ಬಾರಿ ದೊರೆತದ್ದು ಮಾತ್ರವಲ್ಲದೆ, ಹೆಚ್ಚು ಸೀಟುಗಳು ಕೂಡಾ ದೊರೆತಿವೆ. ಈ ಬಗ್ಗೆ ಅನೇಕ ಬಗೆಯ ವಿಶ್ಲೇಷಣೆಗಳು ನಡೆಯುತ್ತಿವೆ, ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುವ ಕೆಲವು ಅಂಶಗಳು ಈ ಬಾರಿ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಅತ್ಯಂತ ಹೆಚ್ಚು ಪರಿಣಾಮ ಉಂಟುಮಾಡಿವೆ ಎಂಬುದನ್ನು ಗುರುತಿಸಬೇಕಾದ ಅಗತ್ಯವಿದೆ.

ಇಂಡಿಯಾ ಟುಡೇ ಚುನಾವಣೆಗೆ ಮೊದಲು ಮುಂದಿಟ್ಟ ಎಕ್ಸಿಟ್ ಪೋಲ್ ಫಲಿತಾಂಶವು ಕಾಂಗ್ರೆಸ್‌ಗೆ ಬಿಜೆಪಿಗಿಂತ ಹೆಚ್ಚು ಮತಗಳು ದೊರೆಯುವುದರಲ್ಲಿ ಒಟ್ಟಾರೆ ಶೇ.4ರಷ್ಟು ಗಂಡಸರ ಕೊಡುಗೆಯಾದರೆ ಶೇ.10ರಷ್ಟು ಮಹಿಳೆಯರ ಕೊಡುಗೆ ಎಂದು ತೋರಿಸಿತು. 224ರಲ್ಲಿ ಸುಮಾರು 43 ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಪುರುಷ ಮತದಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮತಚಲಾಯಿಸಿದ್ದನ್ನು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದದ್ದನ್ನು ನೋಡಿದರೆ, ಮಹಿಳೆಯರು ಕಾಂಗ್ರೆಸ್ಸನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ತೋರುತ್ತದೆ.

ಇದು ತಳಮಟ್ಟದಲ್ಲಿ ಕ್ಷೇತ್ರಗಳಲ್ಲಿ ಜನಸಮುದಾಯಗಳನ್ನು ಮಾತಾಡಿಸುವಾಗ ಕೂಡಾ ಸ್ಪಷ್ಟವಾಗಿ ಕಂಡ ವಿಚಾರ. ಅನೇಕ ರಾಷ್ಟ್ರಮಟ್ಟದ ಟಿ.ವಿ ಚಾನಲ್‌ಗಳು ಮಹಿಳೆಯರನ್ನು ಮಾತಾಡಿಸಿದ್ದನ್ನು ನಾವು ಗಮನಿಸಿದ್ದೇವೆ (ಏಕೆಂದರೆ ಕನ್ನಡದ ಟಿವಿ ಚಾನಲ್‌ಗಳಿಗೆ ಮೋದಿ ರೋಡ್‌ಶೋಗಳ ಸುತ್ತ ಸುತ್ತುವುದು ಬಿಟ್ಟು ಜನರ ಅಭಿಪ್ರಾಯಗಳನ್ನು ಗಮನಿಸಲು ಪುರುಸೊತ್ತಿರಲಿಲ್ಲ!), ಅದರಲ್ಲಿ ಎಲ್ಲ ಮಹಿಳೆಯರೂ ಬಹುಪಾಲು ಈ ಬಾರಿ ಕಾಂಗ್ರೆಸ್‌ಗೆ ಮತಹಾಕುವುದಾಗಿ ಹೇಳುವುದನ್ನು ನೋಡಿದ್ದೇವೆ, ಏಕೆ ಎಂಬುದನ್ನು ಕೂಡಾ ಮಹಿಳೆಯರು ವಿವರಿಸಿದ್ದಾರೆ; ಅಡುಗೆ ಗ್ಯಾಸ್‌ನ ಬೆಲೆ ಏರಿಕೆಯಾಗಿರುವುದನ್ನು, ದಿನಬಳಕೆ ವಸ್ತುಗಳ ಬೆಲೆಯೇರಿಕೆಯಾಗಿರುವುದನ್ನು, ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆಯಾಗಿರುವುದನ್ನು, ಬಡಕುಟುಂಬಗಳು ಉಣ್ಣುತ್ತಿದ್ದ ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಿದ್ದನ್ನು, ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ದನ್ನು, ಕೋವಿಡ್ ಸಮಯದಲ್ಲಿ ತಮ್ಮ ಕಷ್ಟಗಳಿಗೆ ಸರ್ಕಾರಗಳು ಸ್ಪಂದಿಸದಿರುವುದನ್ನು ಹೇಳಿಕೊಂಡಿದ್ದಾರೆ- ಒಟ್ಟಿನಲ್ಲಿ ಕುಟುಂಬಗಳ ಹೊಟ್ಟೆಹೊರೆಯುವ ಹೊಣೆಹೊತ್ತ ಹೆಣ್ಣುಮಕ್ಕಳು ತಮ್ಮ ಕಷ್ಟ ಕಾರ್ಪಣ್ಯ ಹೆಚ್ಚಿಸಿದ ಬಿಜೆಪಿ ಸರ್ಕಾರವನ್ನು ಸ್ಪಷ್ಟವಾದ ಮಾತುಗಳಲ್ಲಿ ಧಿಕ್ಕರಿಸಿ ಕಠಿಣ ಸಂದೇಶ ನೀಡಿದ್ದಾರೆ. ಇದಕ್ಕೆ ಅತಿಯಾದ ತರ್ಕ, ಜಿಜ್ಞಾಸೆ, ತಾತ್ವಿಕ ಚಿಂತನೆಗಳ ಅಗತ್ಯವಿಲ್ಲ; ಯಾರು ಬಡವರ, ಸಾಮಾನ್ಯರ ಹೊಟ್ಟೆಯ ಸಂಕಟವನ್ನು ಕಾಲಕಸವನ್ನಾಗಿ ಕಾಣುತ್ತಾರೋ, ಅವರಿಗೆ ಕಟುವಾದ ಪಾಠ ಕಲಿಸುವುದನ್ನು ನಾವು ಬಲ್ಲೆವು ಎಂಬ ಸರಳ ಸಂದೇಶ ಇದು. ಈವರೆಗೆ ಆಳಿದವರಿಗೆ ಮಾತ್ರವಲ್ಲ, ಇನ್ನು ಮುಂದೆ ಆಳಲಿರುವವರಿಗೂ ಈ ಸಂದೇಶ ಅನ್ವಯವಾಗುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?: ಕರ್ನಾಟಕ ಚುನಾವಣೆ: ಎಚ್ಚೆತ್ತ ಮತದಾರ ಕಲಿಸಿದ ನೂರೊಂದು ಪಾಠಗಳು

ಕರ್ನಾಟಕದ ಮತದಾರ ಸಮೂಹ ಈ ಬಾರಿ ಮೂರು ರೀತಿಗಳಲ್ಲಿ ಅತಿ ಸ್ಪಷ್ಟ ಸಂದೇಶ ನೀಡಿದೆ ಎಂಬುದು ಎದ್ದು ಕಾಣುತ್ತಿದೆ. ಮೊದಲನೇಯದಾಗಿ, ದ್ವೇಷವನ್ನು ಹರಡುವುದನ್ನು ಬಿಟ್ಟು ಇನ್ನೇನನ್ನೂ ಮಾಡದ ಬಿಜೆಪಿಯ ವಿರುದ್ಧ ಅಲ್ಪಸಂಖ್ಯಾತರ ಮತಗಳು ಅತ್ಯಂತ ನಿರ್ಧಾರಕ ಪಾತ್ರ ವಹಿಸಿವೆ. ಇಂಡಿಯಾ ಟುಡೆ ಎಕ್ಸಿಟ್ ಪೋಲ್ ಸರ್ವೇ ತೋರಿಸಿದಂತೆ 88% ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ವೋಟ್ ಮಾಡಿದ್ದಾರೆ. ಇದು ಸ್ಪಷ್ಟವಾಗಿ ದ್ವೇಷ ರಾಜಕಾರಣಕ್ಕೆ ಕರ್ನಾಟಕದ ಜನರ ಉತ್ತರ. ಈ ಸಮಯದಲ್ಲಿ ಮುಸ್ಲಿಮರನ್ನು ರೊಚ್ಚಿಗೆಬ್ಬಿಸಲು ಹಲವು ರೀತಿಗಳಲ್ಲಿ ಪ್ರಯತ್ನಗಳಾದವು, ಒಳಮೀಸಲಾತಿ ವಿವಾದವನ್ನು ಬಳಸಿಕೊಂಡು ಮುಸ್ಲಿಮ್ ಸಮುದಾಯದ 4% ಮೀಸಲಾತಿಯನ್ನು ಕಸಿದದ್ದು ಮಾತ್ರವಲ್ಲ, ಅದನ್ನು ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ಹಂಚಿ ಪರಸ್ಪರ ಈ ಮೂರೂ ಸಮುದಾಯಗಳ ನಡುವೆ ಗಲಾಟೆ ಮಾಡಿಸಲು ಕೀಳುಮಟ್ಟದ ತಂತ್ರಗಾರಿಕೆ ಮಾಡಿದರು; ದನ ಕದ್ದು ಸಾಗಿಸುತ್ತಿದ್ದಾನೆಂಬ ಕಥೆಕಟ್ಟಿ ಇದ್ರೀಸ್ ಪಾಷಾ ಎಂಬುವರನ್ನು ಚುನಾವಣೆಗೆ ಕೇವಲ ಒಂದು ತಿಂಗಳಿರುವಾಗ ರಾಮನಗರದ ಬಳಿ ಹಿಂದುತ್ವದ ಉಗ್ರಗಾಮಿಗಳು ಕ್ರೂರವಾಗಿ ಹೊಡೆದು ಕೊಂದರು; ಇದರಿಂದಲಾದರೂ ಮುಸ್ಲಿಮರು ರೊಚ್ಚಿಗೆದ್ದರೆ ಧರ್ಮದ ಆಧಾರದಲ್ಲಿ ಮತಗಳು ತಮ್ಮ ಬುಟ್ಟಿಗೆ ಬೀಳಬಹುದೆಂಬ ಆಸೆಯಲ್ಲಿದ್ದ ಬಿಜೆಪಿಗೆ ಅತ್ಯಂತ ಪ್ರಬುದ್ಧತೆಯಿಂದ ನಡೆದುಕೊಂಡ ಮುಸ್ಲಿಮ್ ಸಂಘಟನೆಗಳು ಮತ್ತು ಜನಸಾಮಾನ್ಯರು ಸೂಕ್ತ ಅವಕಾಶದಲ್ಲಿ ಚುನಾವಣೆಯಲ್ಲಿ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುವ ಮೂಲಕ ಸರಿಯಾದ ಪಾಠ ಕಲಿಸಿದರು. ಮುಸ್ಲಿಮರು ಮಾತ್ರವಲ್ಲದೆ ಇಡೀ ಅಲ್ಪಸಂಖ್ಯಾತ ಸಮುದಾಯಗಳು ಅತ್ಯಂತ ವಿವೇಕದೊಂದಿಗೆ ತಮ್ಮ ಮತಗಳು ವಿಭಜನೆಯಾಗದಂತೆ ಒಂದೇ ನಿಲುವಿನೊಂದಿಗೆ ಮತದಾನ ಮಾಡಿದ ರೀತಿಯನ್ನು ಅತ್ಯಂತ ಮುಕ್ತಕಂಠದಿಂದ ಪ್ರಶಂಸಿಸಬೇಕಿದೆ.

ಅದೇ ರೀತಿ ಕರ್ನಾಟಕದ ತಳಸಮುದಾಯಗಳು, ದಲಿತ ದಮನಿತ ಸಮುದಾಯಗಳು, ಹಿಂದುಳಿದ ಮತ್ತು ಅತಿಹಿಂದುಳಿದ ಸಮುದಾಯಗಳು ಮತ್ತು ದುಡಿಯುವ ವರ್ಗಗಳೂ ಕೂಡ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಕಾಂಗ್ರೆಸ್‌ಗೆ ದೊರೆತ ಮತಗಳು ಬಹಳ ಸ್ಪಷ್ಟವಾಗಿ ಮೇಲ್ಜಾತಿ-ಮೇಲ್ವರ್ಗಗಳ ಪ್ರತಿ-ಧೃವೀಕರಣದ ವಿರುದ್ಧ, ಬಡವರನ್ನು ಲೂಟಿ ಹೊಡೆದು ಬಂಡವಾಳಿಗರನ್ನು ಬೆಳೆಸುವ ದುಷ್ಟತನದ ವಿರುದ್ಧ, ಕುಲೀನತೆಯ ವ್ಯಸನವನ್ನೇ ಮೈವೆತ್ತ ಬಿಜೆಪಿ ಮಂತ್ರಿಗಳ ಜಾತಿ-ಧರ್ಮವನ್ನು ಮುಂದಿಟ್ಟು ಮಾತಾಡುವ ಮೇಲು ಕೀಳಿನ ರಾಜಕೀಯದ ವಿರುದ್ಧ, ಸಂವಿಧಾನವನ್ನು ಬದಲಿಸುತ್ತೇವೆನ್ನುವ ದಾಷ್ಟ್ಯದ ವಿರುದ್ಧ ಸಾಮಾನ್ಯ ರೈತರು, ದಲಿತರು, ಕೂಲಿ ಕಾರ್ಮಿಕರು ಚಲಾಯಿಸಿದ ಮತಗಳಾಗಿವೆ.

ಈಗಾಗಲೇ ಈ ಬರಹದ ಆರಂಭದಲ್ಲಿ ಹೇಳಿದಂತೆ, ಮಹಿಳೆಯರ ಅಭಿಪ್ರಾಯವಂತೂ ಈ ಬಾರಿ ಅತ್ಯಂತ ಸ್ಪಷ್ಟವಾಗಿ ವ್ಯಕ್ತವಾಗಿದೆ. ಬೆಲೆಯೇರಿಕೆ ಮತ್ತು ಪ್ರತಿದಿನದ ಬದುಕನ್ನು ನರಕಗೊಳಿಸಿದವರ ವಿರುದ್ಧ ಎಲ್ಲ ಜಾತಿ, ಧರ್ಮಗಳಿಗೆ ಸೇರಿದ ಬಡ ಮಹಿಳೆಯರು ಬಂಡೆದ್ದಿದ್ದಾರೇನೋ ಎಂಬಷ್ಟು ಮಟ್ಟಕ್ಕೆ ನಿರ್ಣಾಯಕವಾದ ಪಾತ್ರವನ್ನು ಈ ಅಭಿಪ್ರಾಯ ವಹಿಸಿದೆ ಎಂಬುದನ್ನು ಮರೆಯುವಂತೆಯೇ ಇಲ್ಲ. ಬಹುಶಃ ಇದನ್ನು ಕಾಂಗ್ರೆಸ್ ಕೂಡಾ ಅರಿವಿಗೆ ತಂದುಕೊಂಡ ಕಾರಣದಿಂದಲೇ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡ ಅನೇಕ ಯೋಜನೆಗಳನ್ನು ಚುನಾವಣೆಯ ಮೊದಲು ಪ್ರಕಟಿಸಿತು.

ಇದೇ ಅವಧಿಯಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಭೇಟಿಕೊಟ್ಟವರು ಭಾರತದ ಪ್ರಧಾನಿಗಳು ಮತ್ತು ಅವರ ಪಟಾಲಂ! ಭಾರತದ ಪ್ರಧಾನಿಗಳಿಗೆ ಇತ್ತೀಚೆಗೆ ಕರ್ನಾಟಕದ ಮೇಲೆ ಅಪಾರವಾದ ಪ್ರೀತಿಯುಕ್ಕಿತ್ತು; ಕರ್ನಾಟಕ ಈ ಹಿಂದೆ ಹತ್ತಾರು ಬಗೆಯ ಸಂಕಷ್ಟಗಳಿಗೆ ಗುರಿಯಾದಾಗ ಜನರ ಪಾಲಿಗೆ ಇಲ್ಲವಾಗಿದ್ದ ಇವರುಗಳು, ರಾಜ್ಯದಲ್ಲಿ ತಮ್ಮ ಪಕ್ಷದ ದುರಾಡಳಿತ ಮತ್ತು ದ್ವೇಷ ರಾಜಕಾರಣದ ಕಾರಣಕ್ಕೆ ತೀವ್ರ ಜನವಿರೋಧ ಎದುರಿಸುತ್ತಾ ದಯನೀಯ ಸ್ಥಿತಿಯಲ್ಲಿರುವ ತಮ್ಮ ಪಕ್ಷಕ್ಕೆ ಮತ ಯಾಚಿಸಲಿಕ್ಕಾಗಿ ಮಾತ್ರ ಇನ್ನಿಲದಂತಹ ಕಸರತ್ತು ಮಾಡುತ್ತಾ ಪದೇ ಪದೇ ಬಂದುಹೋದರು. ಈ ಮತಬೇಟೆಯ ಭೇಟಿಗಳ ನಡುವೆ ಅವರಿಗೆ ತಮ್ಮ ‘ಬೇಟಿ ಬಚಾವ್’ ಘೋಷಣೆ ಮರೆತೇ ಹೋಗಿತ್ತು.. ಏಕೆಂದರೆ ಭಾರತದ ಹೆಮ್ಮೆಯ ಕುಸ್ತಿಪಟು ‘ಬೇಟಿ’ಯರು ದೆಹಲಿಯ ಬೀದಿಬದಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದರೂ, ಅವರನ್ನು ಸೌಜನ್ಯಕ್ಕೂ ವಿಚಾರಿಸಲು ಇರ‍್ಯಾರೂ ಹೋಗಲಿಲ್ಲ!
ಪದೇ ಪದೇ ಪ್ರಯತ್ನಿಸಿದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಪ್ರತಿಭಟನಾ ನಿರತ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದರು. “ನಮಗೆ ನ್ಯಾಯ ಸಿಗುವವರೆಗೆ ನಾವು ಇಲ್ಲೇ ಮಲಗುತ್ತೇವೆ ಮತ್ತು ಊಟ ಮಾಡುತ್ತೇವೆ. ಪೋಡಿಯಂನಿಂದ ಫುಟ್‌ಪಾತ್‌ಗೆ,” ಎಂದು ಫೋಗಟ್ ಟ್ವಿಟ್ಟರ್‌ನಲ್ಲಿ ಕುಸ್ತಿಪಟುಗಳು ಫುಟ್‌ಪಾತ್‌ನಲ್ಲಿ ಮಲಗಿರುವ ಚಿತ್ರವನ್ನು ಹಂಚಿಕೊಂಡಿದ್ದರು. ಉತ್ತರ ಪ್ರದೇಶ, ಹರ್ಯಾಣಗಳಿಂದ ಪ್ರಯಾಣ ಮಾಡಿ ಬಂದು ರೈತ ನಾಯಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದರೂ ಪಕ್ಕದಲ್ಲೇ ಇದ್ದ ರಾಷ್ಟçನಾಯಕರು ಬರಲಿಲ್ಲ. ಅಷ್ಟೇ ಅಲ್ಲ ಪ್ರತಿಭಟನಾ ನಿರತರನ್ನು ಅವಮಾನಕರವಾಗಿ ಅಲ್ಲಿಂದ ಖಾಲಿ ಮಾಡಿಸಿದ ಅಮಾನವೀಯತೆಯನ್ನು ಕೇಂದ್ರ ತೋರಿಸಿತು.

ಇದು ಒಂದೇ ಪ್ರಕರಣವಲ್ಲ, ಬಿಲ್ಕೀಸ್ ಪ್ರಕರಣದಲ್ಲಿ, ಹತ್ರಾಸ್ ಪ್ರಕರಣದಲ್ಲಿ, ವಿವಿಧ ಸಂದರ್ಭಗಳಲ್ಲಿ ಮಹಿಳೆಯರ ಅಸ್ತಿತ್ವವನ್ನು ಕೇವಲ ಮಕ್ಕಳನ್ನು ಹಡೆಯುವುದಕ್ಕೆ ಸೀಮತಗೊಳಿಸಿ ಬಿಜೆಪಿ ಮುಖಂಡರು ಮಾತಾಡಿದ ಪ್ರಕರಣಗಳಲ್ಲಿ, ಮಹಿಳೆಯರ ಆಯ್ಕೆಯ ಸ್ವಾತಂತ್ರö್ಯವನ್ನು ಕ್ರೂರವಾಗಿ ಕೊಲೆಮಾಡಿದ ಮರ್ಯಾದೆಗೇಡು ಹತ್ಯೆಗಳ ಪ್ರಕರಣಗಳಲ್ಲಿ ಬಿಜೆಪಿಯ ಆಳ್ವಿಕೆದಾರರು ತೋರಿರುವ ಮಹಿಳಾ ವಿರೋಧಿತನವು ಕರ್ನಾಟಕದ ಪ್ರಜ್ಞಾವಂತ ಮಹಿಳಾ ಮತದಾರ ವರ್ಗವನ್ನು ತಲುಪಿದೆ. ಇಲ್ಲಿನ ಮಹಿಳಾ ಸಂಘಟನೆಗಳು, ಚಿಂತಕಿಯರು, ಬರಹಗಾರ್ತಿಯರು ಈ ವಿಚಾರಗಳಲ್ಲಿ ಅಭಿಪ್ರಾಯ ರೂಪಿಸುವ ಕೆಲಸವನ್ನು ನಿರಂತರವಾಗಿ ಸದ್ದಿಲ್ಲದೆ ಮಾಡಿದ್ದಾರೆ. ಇದು ಬರಿಗಣ ್ಣಗೆ ಕಾಣದ ಆದರೆ ಅಂತರ್ಗಾಮಿಯಾಗಿ ಕೆಲಸ ಮಾಡುವ ಜನಾಭಿಪ್ರಾಯ. ಇದರಲ್ಲೆಲ್ಲ ತಾವು ಹೇಗೆ ಬೇಕಾದರೂ ನಡೆದುಕೊಂಡು ದಕ್ಕಿಸಿಕೊಳ್ಳುತ್ತೇವೆ ಎಂಬ ಪುರುಷಾಹಂಕಾರವನ್ನು ಕರ್ನಾಟಕದ ಮಹಿಳೆಯರು ಮಣ್ಣುಮುಕ್ಕಿಸಿದ್ದಂತೂ ಸತ್ಯ.

ಇದು ಮಹಿಳಾ ಮತದಾರರ ಶಕ್ತಿ, ಅವರ ದೃಢ ನಿರ್ಧಾರಕ್ಕಿರುವ ಶಕ್ತಿ!

ಆದರೆ ಅದೇ ಸಮಯದಲ್ಲಿ ರಾಜಕೀಯ ಪಕ್ಷಗಳನ್ನು ಗೆಲ್ಲಿಸಬಲ್ಲ ಕರ್ನಾಟಕದ ಮಹಿಳೆಯರು ಸ್ವತಃ ತಾವು ಸೋಲುತ್ತಲೇ ಬಂದಿದ್ದಾರೆ ಎಂಬುದನ್ನೂ ಮರೆಯಬಾರದು. ಅದು ಮಹಿಳೆಯರನ್ನು ಉನ್ನತ ಮಟ್ಟದ ಜನಪ್ರತಿನಿಧಿಗಳನ್ನಾಗಿ ಆರಿಸುವ ವಿಚಾರದಲ್ಲಿ!

ಕರ್ನಾಟಕವು ಮಹಿಳೆಯರನ್ನು ಆಯ್ಕೆ ಮಾಡುವಲ್ಲಿ ವಿಶೇಷವಾಗಿ ಕಳಪೆ ದಾಖಲೆಯನ್ನು ಹೊಂದಿದೆ. ಒಟ್ಟಾರೆಯಾಗಿ ಭಾರತವೇ ಈ ವಿಚಾರದಲ್ಲಿ ಹಿಂದುಳಿದಿದೆಯಾದರೂ ಮಹಿಳಾ ಪ್ರತಿನಿಧಿಗಳ ವಿಚಾರದಲ್ಲಿ ಕರ್ನಾಟಕ ಇನ್ನಷ್ಟು ಮತ್ತಷ್ಟು ಹಿಂದುಳಿದಂತೆ ಕಾಣುತ್ತಿದೆ. 17ನೇ ಲೋಕಸಭೆ ಚುನಾವಣೆ ದೇಶಕ್ಕೆ ಅತ್ಯಧಿಕ ಮಹಿಳಾ ಸಂಸದರನ್ನು ನೀಡಿದರೆ, ಕರ್ನಾಟಕದ ಮಟ್ಟಿಗೆ ಮಾತ್ರ ಈ ವಾಸ್ತವ ಭಿನ್ನವಾಗಿದೆ. ಮೂರು ಬಾರಿ ಹೊರತುಪಡಿಸಿದರೆ ರಾಜ್ಯವು ಎರಡು ಅಂಕಿಗಳಲ್ಲಿ ಮಹಿಳೆಯರನ್ನು ಆಯ್ಕೆ ಮಾಡಿಲ್ಲ; ಆ ಮೂರು ಸಂದರ್ಭಗಳೂ ಕೂಡಾ 1990ಕ್ಕಿಂತ ಹಿಂದಿನ ಹಳೆಯ ಮಾತೇ ಹೊರತು, ಇತ್ತೀಚಿನವಲ್ಲ (1957 -ಮೈಸೂರು ವಿಧಾನಸಭೆ ಚುನಾವಣೆ, 1962, ಮತ್ತು 1989). ಈ ಬಾರಿಯೂ ಎಲ್ಲ ಪಕ್ಷಗಳಿಂದ ಮತ್ತು ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿದ್ದ ಒಟ್ಟು 185 ಮಹಿಳಾ ಸ್ಫರ್ಧಿಗಳಲ್ಲಿ ಶಾಸಕಿಯರಾಗಿ ಆಯ್ಕೆಯಾದ ಮಹಿಳೆಯರ ಸಂಖ್ಯೆ ಕೇವಲ 10 ಮಾತ್ರ!

ಬಿಜೆಪಿಯು 2004 ಮತ್ತು 2019 ಎರಡೂ ಚುನಾವಣೆಗಳ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಗಳಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ತರುವ ಬಗ್ಗೆ ಮಾತಾಡಿದ್ದರೂ, ಕರ್ನಾಟಕ ರಾಜ್ಯದ ಚುನಾವಣೆಗಳ ಸಂದರ್ಭದಲ್ಲಿ ಟಿಕೆಟ್ ನೀಡಿದ್ದು ಮಾತ್ರ ಬೆರಳೆಣ ಕೆಯ ಸಂಖ್ಯೆಯ ಮಹಿಳೆಯರಿಗೆ. ಈ ಬಾರಿ ಇದು ಒಟ್ಟು 224ರಲ್ಲಿ 11. ಜೆಡಿಎಸ್ ಈ ಬಾರಿ 13 ಜನ ಮಹಿಳೆಯರಿಗೆ ಟಿಕೆಟ್ ನೀಡಿತ್ತು. ಬಹುಶಃ ಇವೆರಡೂ ಪಕ್ಷಗಳಿಗೆ ಈ ವಿಷಯದಲ್ಲಿ ಇರಬಹುದಾದ ಒಂದೇ ಒಂದು ದುರ್ಬಲ ಸಮರ್ಥನೆಯೆಂದರೆ ಕಳೆದ ಬಾರಿಗಿಂತ ಹೆಚ್ಚು ಟಿಕೆಟ್ ನೀಡಿದ್ದೇವೆ ಎಂಬುದಿರಹುದು.

ಇದನ್ನು ಓದಿದ್ದೀರಾ?: ಅನ್ನ ನೀರು ಅರಿವೆಯೇ ಪರಮ- ಕೋಮುವಾದಕ್ಕೆ ಕಪಾಳಮೋಕ್ಷ

ಮಹಿಳೆಯರ ಸುತ್ತ ಧಾರಾಳವಾದ ಭರವಸೆಗಳ ಜಾಲವನ್ನೇ ಹೆಣೆದಿರುವ ಕಾಂಗ್ರೆಸ್ ಕರ್ನಾಟಕದ ಚುನಾವಣೆಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವ ವಿಷಯದಲ್ಲಿ ಮಾತ್ರ ಯಾವ ಧಾರಾಳತನವನ್ನೂ ತೋರಿಲ್ಲ, 224ರಲ್ಲಿ ಕೇವಲ 11 ಜನರಿಗೆ ಮಾತ್ರ ಟಿಕೆಟ್ ನೀಡಿತ್ತು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗಳ ನಡೆಯು ನೀಡಿರುವ ಟಿಕೆಟ್‌ಗಳ ಸಂಖ್ಯೆಯ ಕಾರಣಕ್ಕೆ ಮಾತ್ರವಲ್ಲದೆ, ಆ ಮಹಿಳೆಯರಲ್ಲಿ ಹೆಚ್ಚಿನವರು ಬಲಾಢ್ಯ ರಾಜಕೀಯ ಕುಟುಂಬಗಳಿಗೆ ಸೇರಿದವರೇ ಆಗಿದ್ದಾರೆಂಬ ಕಾರಣಕ್ಕೂ ಅಸಮರ್ಥನೀಯವೆನಿಸುತ್ತದೆ. ಈ ಬಗ್ಗೆ ಆ ಪಕ್ಷಗಳ ವಕ್ತಾರರ ಪ್ರತಿಕ್ರಿಯೆ ಯಾವಾಗಲೂ “ನಮ್ಮ ಬಗ್ಗೆ ಹೀಗೆ ಹೇಳುತ್ತಿದ್ದೀರಲ್ಲ, ‘ಆ’ ಪಕ್ಷ ನಮಗಿಂತ ಹೆಚ್ಚು ಸಮಸ್ಯಾತ್ಮಕ ನಿರ್ಧಾರ ಮಾಡಿಲ್ಲವೇ?” ಎಂಬುದಷ್ಟೇ ಹೊರತು, ತಮ್ಮ ನಿಲುವಿನಲ್ಲಿ ಬದಲಾವಣೆಯ ಪ್ರಶ್ನೆಯೇ ಇಲ್ಲ!

ಕರ್ನಾಟಕದ ಚುನಾವಣೆಯ ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷವು 199 ಸ್ಥಾನಗಳಲ್ಲಿ ಸ್ಫರ್ಧಿಸುತ್ತಾ 13 ಮಹಿಳೆಯರಿಗೆ ಟಿಕೆಟ್ ನೀಡಿದ್ದರೆ, ಆಮ್ ಆದ್ಮಿ ಪಕ್ಷ 212ರಲ್ಲಿ 20ಜನ ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ಅತಿಹೆಚ್ಚು ಮಹಿಳೆಯರಿಗೆ ಟಿಕೆಟ್ ನೀಡಿದ್ದ ಪಕ್ಷವೆನ್ನಿಸಿಕೊಂಡಿದೆ.
ಆದರೆ, ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ವಿಷಯವು ಕೇವಲ ಚುನಾವಣೆಗಳ ಟಿಕೆಟ್‌ಗಳಿಗಷ್ಟೇ ಸೀಮಿತವಾದ ವಿಷಯವಲ್ಲವಲ್ಲ! 1996ರಲ್ಲಿ ಮಂಡನೆಯಾದ ‘ಮಹಿಳೆಯರಿಗೆ ರಾಜಕೀಯ ಮೀಸಲಾತಿ ಮಸೂದೆ’ಯಲ್ಲಿ ಹೇಳಿರುವಂತೆ “ನಿಜವಾದ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಮುದಾಯ ಅಥವಾ ವರ್ಗವನ್ನು ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ಹೊರಗಿಡಬಾರದು”. ಹಾಗೆಯೇ ಭಾರತದ ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ‘ಎಲ್ಲ ಪ್ರಜೆಗಳಿಗೂ ಸಮಾನವಾದ ಅವಕಾಶಗಳು, ಎಲ್ಲ ರಂಗಗಳಲ್ಲೂ’ ದೊರೆಯಬೇಕು. ಇದೇ ಆಶಯದ ಮೇಲೆ 1993ರಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯ್ತಿಗಳಲ್ಲಿ ಶೇ.೩೩ರಷ್ಟು ಮೀಸಲಾತಿ ನೀಡುವ ನಿರ್ಧಾರ ಜಾರಿಯಾಯಿತು. ನಂತರ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಪ್ರಮಾಣ ಶೇ.50ಕ್ಕೆ ಏರಿದೆ. ಆದರೆ, ಮೇಲಿನ ಹಂತಗಳ ಚುನಾವಣೆಗಳಲ್ಲಿ ಮಿಸಲಾತಿ ಒದಗಿಸುವ ಮಸೂದೆ ಮಾತ್ರ ಅನೇಕ ಬಾರಿ ಮಂಡನೆಯಾಗಿ, ಅನುಮೋದನೆಯಾಗದೆ ಹಿಂದುಳಿಯುತ್ತಾ ಹಾಗೇ ನೆನಗುದಿಗೆ ಬಿದ್ದಿದೆ.

ಮಹಿಳಾ ಮೀಸಲಾತಿ ಮಸೂದೆ ಮಾತ್ರವಲ್ಲದೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟುವುದಕ್ಕೆ ಬೇಕಿರುವ ಕ್ರಮಗಳು, ದುಡಿಯುವ ಮಹಿಳೆಯರ, ವಿಶೇಷವಾಗಿ ಅಸಂಘಟಿತ ಕ್ಷೇತ್ರದಲ್ಲಿರುವ ಲಕ್ಷಾಂತರ ಮಹಿಳೆಯರ ಕೆಲಸದ ಭದ್ರತೆ ಮತ್ತು ಕೆಲಸದ ಸ್ಥಳದಲ್ಲಿ ಸುರಕ್ಷತೆಗೆ ಆಗಬೇಕಾದ ಉಪಕ್ರಮಗಳು, ಹೀಗೆ ಪಟ್ಟಿ ಮಾಡಬಹುದಾದ ಹಲವು ವಿಷಯಗಳು ಮಹಿಳೆಯರ ಬದುಕನ್ನು ನಿಜಕ್ಕೂ ಪ್ರಮುಖವಾಗಿರುವಂಥವು. ಆದರೆ, ಇವನ್ನೆಲ್ಲ ತಂದರೆ ಮಹಿಳಾ ಸಮುದಾಯದಲ್ಲಿ ಉಂಟಾಗಬಹುದಾದ ಅರಿವು ಮತ್ತು ಸಬಲತೆಯ ಸ್ಫೋಟ ರಾಜಕಾರಣ ಗಳಿಗೆ ಖಂಡಿತ ಬೇಕಿಲ್ಲ; ಅವರಿಗೆ ಬೇಕಿರುವುದು ಮತಗಳು ಮಾತ್ರ.

ಈ ಧೋರಣೆ ಬದಲಾಗಬೇಕು; ಸರ್ಕಾರದಲ್ಲೂ ಮತ್ತು ಸಮಾಜದಲ್ಲೂ. ಅದಾಗಬೇಕಾದರೆ, ಮಹಿಳೆಯರು ಮತದಾರರಾಗಿ ಮಾತ್ರವಲ್ಲದೆ ಎಚ್ಚೆತ್ತ ಪ್ರಜೆಗಳಾಗಿಯೂ ತಮ್ಮ ನ್ಯಾಯಬದ್ಧ ಹಕ್ಕನ್ನು ಆಗ್ರಹಿಸಿ ಪಡೆದುಕೊಳ್ಳುವ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು ಮತ್ತು ಅದನ್ನು ಪ್ರಯೋಗಿಸಬೇಕು. ಅಂತಹ ಪ್ರಬಲ ಕಣ್ಣೋಟ ಮತ್ತು ಕಾರ್ಯಸೂಚಿ ತುರ್ತಾಗಿ ಸಿದ್ಧಗೊಳ್ಳಬೇಕಾದ ಅಗತ್ಯವಂತೂ ಸುಸ್ಪಷ್ಟವಾಗಿದೆ. ಇದು ಸಾಧ್ಯವಾಗುವ ದಿಕ್ಕಿನಲ್ಲಿ ಕರ್ನಾಟಕದ ಸಶಕ್ತ ಮಹಿಳೆಯರು ಸಾಗುವಂತಾಗಲಿ.

ಮಲ್ಲಿಗೆ ಸಿರಿಮನೆ
+ posts

ಸಾಮಾಜಿಕ ಹೋರಾಟಗಾರರು

ಪೋಸ್ಟ್ ಹಂಚಿಕೊಳ್ಳಿ:

ಮಲ್ಲಿಗೆ ಸಿರಿಮನೆ
ಮಲ್ಲಿಗೆ ಸಿರಿಮನೆ
ಸಾಮಾಜಿಕ ಹೋರಾಟಗಾರರು

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ದರ್ಶನ್‌ ಅಂಧಾಭಿಮಾನಿಗಳು ಕೊಡುತ್ತಿರುವ ಸಂದೇಶವೇನು?

ಕೊಲೆ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಲನಚಿತ್ರ ನಟ ದರ್ಶನ್‌ ತೂಗುದೀಪ ಅವರ...

ಅಮಿತ್ ಮಾಳವೀಯ ಎಂಬ ಸ್ತ್ರೀಪೀಡಕನೂ, ಬಿಜೆಪಿಯ ಬೇಟಿ ಬಚಾವೋ ಎಂಬ ಘೋಷಣೆಯೂ…

ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್‌ ಮಾಳವೀಯ ಪಶ್ಚಿಮ ಬಂಗಾಳದ...

ನೆನಪು | ರಾಜೀವ್ ತಾರಾನಾಥ್ ಮತ್ತು ಗೋಧ್ರಾ

ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್, ಹಿಂದೊಮ್ಮೆ ಗೋಧ್ರಾ ಘಟನೆ...