ಸುಬ್ರಮಣ್ಯನ್ ಸ್ವಾಮಿ ಎಂಬ ಅತೃಪ್ತ ಆತ್ಮದ ಚೀರಾಟ

Date:

ಮೋದಿ ಮತ್ತು ದೀದಿ- ಇಬ್ಬರೂ ಸುಬ್ರಮಣ್ಯನ್ ಸ್ವಾಮಿಯನ್ನು ಅನುಮಾನದಿಂದ ನೋಡುತ್ತಿದ್ದಾರೆ. ಅವರ ಪೂರ್ವಾಪರಗಳನ್ನು ಬಲ್ಲವರೆಲ್ಲರೂ ಅವರನ್ನು ವಿದೂಷಕನನ್ನಾಗಿ ಚಿತ್ರಿಸುತ್ತಿದ್ದಾರೆ. ಹಾಗಾಗಿ ಇವತ್ತು ಸ್ವಾಮಿ ಆಡುವ ಮಾತುಗಳು, ಟಂಕಿಸುವ ಟ್ವೀಟ್‌ಗಳು ಅಸ್ತಿತ್ವ ಕಳೆದುಕೊಂಡ ಅತೃಪ್ತ ಆತ್ಮದ ಚೀರಾಟದಂತೆ ಕೇಳಿಸತೊಡಗಿವೆ.

`ಮೋದಿಯವರ ಪಾಲಿಸಿಗಳಲ್ಲಿ ಆರ್ಥಿಕತೆ ಮತ್ತು ವಿದೇಶಾಂಗ ವ್ಯವಹಾರಗಳ ಬಗ್ಗೆ ನನ್ನ ವಿರೋಧವಿದೆ. ಈ ಬಗ್ಗೆ ಎಲ್ಲಿ ಬೇಕಾದರೂ ಚರ್ಚೆ ಮಾಡಲು ನಾನು ಸಿದ್ಧ. ಅವರಲ್ಲಿ ಪ್ರಜಾಪ್ರಭುತ್ವದ ಬಹುಮುಖ್ಯ ಅಂಶವಾದ ಪಾಲ್ಗೊಳ್ಳುವಿಕೆಯೇ ಇಲ್ಲ. ಆತ ರಾಜ ಅಲ್ಲ’ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣ್ಯನ್ ಸ್ವಾಮಿ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ, ಪಾಲಿಸಿ ಮತ್ತು ವರ್ತನೆ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಭಾರೀ ವೈರಲ್ ಆಗಿತ್ತು. ಹಾಗೆಯೇ ಮೋದಿಯವರನ್ನು ಕಂಡರಾಗದವರು ಆ ಟ್ವೀಟನ್ನು ಇಷ್ಟಪಟ್ಟು ಹಂಚಿಕೊಂಡಿದ್ದರು. ಮಾಧ್ಯಮಗಳು ಪ್ರಾಮುಖ್ಯತೆ ನೀಡಿ ಪ್ರಚಾರ ನೀಡಿದ್ದವು.

ಸುಬ್ರಮಣ್ಯನ್ ಸ್ವಾಮಿ, ಬಲಪಂಥೀಯ ವಿಚಾರಧಾರೆಗಳ ಒಲವುಳ್ಳವರು. ಹಿಂದುತ್ವ, ರಾಮಸೇತು ವಿಷಯಗಳನ್ನು ಕಾಲಕಾಲಕ್ಕೆ ಕೆದಕಿ ಸಮಾಜವನ್ನು ಕಲುಷಿತಗೊಳಿಸಿದವರು. ಅಂಥದ್ದೇ ಬಲಪಂಥೀಯ ವಿಚಾರಧಾರೆಗಳ ಭಾರತೀಯ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡವರು. ಈಗ ಅದೇ ಪಕ್ಷದ ಪ್ರಧಾನಿ ಮೋದಿಯವರ ನಡೆ ಮತ್ತು ನುಡಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಸುದ್ದಿ ಮಾಧ್ಯಮಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಇಂತಹ ಕಟು ಟೀಕೆ ಎಡಪಂಥೀಯರಿಂದ, ಪತ್ರಕರ್ತರಿಂದ, ಸಾಮಾಜಿಕ ಹೋರಾಟಗಾರರಿಂದ ಬಂದಿದ್ದರೆ; ಅವರ ಮೇಲೆ ಕೇಸುಗಳನ್ನು ದಾಖಲಿಸಿ, ಮಾನಸಿಕ ಹಿಂಸೆಗೆ ಗುರಿಪಡಿಸುತ್ತಿದ್ದರು. ಜೈಲಿಗೂ ಹಾಕುತ್ತಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ ಸ್ವಾಮಿಯವರನ್ನು ಯಾರೂ ಮುಟ್ಟುತ್ತಿಲ್ಲ. ಇದು ದೇಶದ ಜನತೆಗೆ ವಿಚಿತ್ರವಾಗಿ ಕಾಣಬಹುದು. ಇನ್ನೂ ವಿಚಿತ್ರವೆಂದರೆ, ಪ್ರಧಾನಿ ಮೋದಿಯವರು ಇದರಿಂದ ಕೊಂಚವೂ ವಿಚಲಿತರಾಗಿಲ್ಲ. ಮಾತನಾಡಿದವರ ಬಗ್ಗೆ ಪ್ರತಿಕ್ರಿಯಿಸಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.

84ರ ಹರೆಯದ ಸುಬ್ರಮಣ್ಯನ್ ಸ್ವಾಮಿ, ಮಧುರೈ ಮೂಲದ ಬ್ರಾಹ್ಮಣರು. ಖ್ಯಾತ ಅರ್ಥಶಾಸ್ತ್ರಜ್ಞರು. ಹೆಸರಾಂತ ಹಾರ್ವರ್ಡ್ ವಿವಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದವರು. ದೆಹಲಿಯ ಐಐಟಿಯಲ್ಲಿ ಸೇವೆ ಸಲ್ಲಿಸಿದವರು. ಐಐಟಿಯಲ್ಲಿದ್ದಾಗ, `ಆರ್ಥಿಕ ಉದಾರೀಕರಣ ನೀತಿಯಲ್ಲಿ ದೇಶ ಬೆಳವಣಿಗೆ ಹೊಂದುವುದು ಸಾಧ್ಯವಿದೆ’ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದಾಗ, ಅದನ್ನು ಅಲ್ಲಗಳೆದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು, ಸ್ವಾಮಿಯನ್ನು ಐಐಟಿಯಿಂದ ಉಚ್ಚಾಟಿಸಲು ಸೂಚಿಸಿದ್ದರು. ಹಾಗಾಗಿ ಅಂದಿನಿಂದಲೇ ಇಂದಿರಾ ಗಾಂಧಿಯವರ ವಿರುದ್ಧ ಬಹಿರಂಗ ಕಾದಾಟಕ್ಕಿಳಿದ ಸ್ವಾಮಿ, ಬಲಪಂಥೀಯ ಸಂಘಟನೆಯಾದ ಜನಸಂಘ ಸೇರಿದರು. ಜನಸಂಘ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ, ಇಂದಿರಾ ಗಾಂಧಿಯವರ ವಿರುದ್ಧ ಹೋರಾಡಲು ವೇದಿಕೆ ನಿರ್ಮಿಸಿಕೊಟ್ಟಿತು.

ಸುಬ್ರಮಣ್ಯನ್ ಸ್ವಾಮಿ ಸಾಮಾನ್ಯರಲ್ಲ, ಆಳವಾದ ಅಧ್ಯಯನ, ಅಪಾರ ಅನುಭವಗಳ ಪ್ರಕಾಂಡ ಪಂಡಿತರು. ಸರ್ವೋದಯ ಹೋರಾಟದ ಬಗ್ಗೆ ಒಲವುಳ್ಳವರು. ಅಷ್ಟೇ ಅಲ್ಲ, ಜಯಪ್ರಕಾಶ್ ನಾರಾಯಣರಿಂದ ಸ್ಥಾಪಿತವಾಗಿದ್ದ ಜನತಾ ಪಕ್ಷ ಸೇರಿ ರಾಜಕಾರಣದ ಒಳ-ಹೊರಗನ್ನು ಅರಿತವರು. ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡ ಸ್ವಾಮಿ, ಎರಡು ಸಲ ಲೋಕಸಭೆಗೂ ಆಯ್ಕೆಯಾಗಿದ್ದರು. ಯೋಜನಾ ಆಯೋಗದ ಸದಸ್ಯರಾಗಿ, ಕೇಂದ್ರದಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಜನತಾ ಪಕ್ಷದ ಕೊನೆಯ ಅಧ್ಯಕ್ಷರಾಗಿದ್ದ ಸ್ವಾಮಿ, 2013ರಂದು ಜನತಾ ಪಕ್ಷವನ್ನು ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನಗೊಳಿಸಿದರು.

ಭ್ರಷ್ಟರನ್ನು ಹಾಗೂ ಜನ ವಿರೋಧಿ ಸರ್ಕಾರದ ನಡೆಗಳ ಹಿಂದಿರುವ ರಹಸ್ಯಗಳನ್ನು ಬಯಲಿಗೆಳೆಯುವಲ್ಲಿ ನಿಷ್ಣಾತರಾಗಿರುವ ಸುಬ್ರಮಣ್ಯನ್ ಸ್ವಾಮಿ, ಸಾರ್ವಜನಿಕ ವಲಯದಲ್ಲಿ `ನಕ್ಷತ್ರಿಕ’ನೆಂದೇ ಹೆಸರಾಗಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಹಗರಣ, ರಾಮಕೃಷ್ಣ ಹೆಗಡೆ ಫೋನ್ ಕದ್ದಾಲಿಕೆಗಳನ್ನು ಬಯಲಿಗೆಳೆದು ದೇಶದಾದ್ಯಂತ ಸುದ್ದಿಯಾಗಿದ್ದರು. ಮುಂದುವರೆದು, ಸೋನಿಯಾ ಗಾಂಧಿ ಪದವಿ ವಿಚಾರ, ಕಾಂಗ್ರೆಸ್ ಪಕ್ಷದ ನ್ಯಾಷನಲ್ ಹೆರಾಲ್ಡ್ ಹಗರಣ, ಯುಪಿಎ ಸರ್ಕಾರದ 2ಜಿ ತರಂಗಾಂತರ ಹಗರಣ ಮುಂತಾದ ಬಹುಕೋಟಿ ಹಗರಣಗಳನ್ನು ಆಳವಾಗಿ ಅಧ್ಯಯನ ಮಾಡಿ ಸೂಕ್ತ ದಾಖಲೆಗಳೊಂದಿಗೆ ಕೋರ್ಟ್ ನಲ್ಲಿ ದಾವೆ ಹೂಡಿ ಖ್ಯಾತಿ ಗಳಿಸಿದರು.

ಹಾಗಾಗಿ ಸ್ವಾಮಿ ಎಂದರೆ, ಒಂದು ಕಾಲಕ್ಕೆ ಫೈರ್ ಬ್ರಾಂಡ್. ಮಾಧ್ಯಮದವರ ಪಾಲಿನ ಡಾರ್ಲಿಂಗ್. ಅವರ ತರ್ಕಬದ್ಧ ಖಡಕ್ ಮಾತು, ದಾಖಲೆ ಸಮೇತ ಮಂಡಿಸುತ್ತಿದ್ದ ವಾದ ಎಂತಹವರಿಗೂ ವಿಶ್ವಾಸ ಹುಟ್ಟಿಸುತ್ತಿದ್ದವು. ನಂಬುವಂತೆ ಮಾಡುತ್ತಿದ್ದವು. ಸ್ವಾಮಿಯವರ ಈ ಹೋರಾಟವನ್ನು, ಅದರಲ್ಲೂ ಯುಪಿಎ ಸರ್ಕಾರದ, ಆ ಕಾಲದ ಭಾರೀ ಭ್ರಷ್ಟಾಚಾರವೆಂದು ಬಿಂಬಿತವಾದ 2ಜಿ ತರಂಗಾಂತರದ ವಿರುದ್ಧದ ಹೋರಾಟವನ್ನು ಅಂದಿನ ಪ್ರತಿಪಕ್ಷ ಬಿಜೆಪಿ, ಬಹಳ ನಾಜೂಕಾಗಿ ಬಳಸಿಕೊಂಡಿತು. ದೇಶದ ಜನತೆಯಲ್ಲಿ ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎಂಬಂತೆ ಬಿಂಬಿಸಿ, ಜನರ ವಿಶ್ವಾಸ ಗಳಿಸಿತು. 2014ರಲ್ಲಿ ಕೇಂದ್ರದಲ್ಲಿ ಅಧಿಕಾರವನ್ನೂ ಹಿಡಿಯಿತು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿತು, ನರೇಂದ್ರ ಮೋದಿಯವರು ಪ್ರಧಾನಿಯಾದರು. ಸುಬ್ರಮಣ್ಯನ್ ಸ್ವಾಮಿಯವರ `ಹೋರಾಟ’ದಿಂದ ಅನುಕೂಲ ಪಡೆದಿದ್ದ ಮೋದಿಯವರು, 2016ರಲ್ಲಿ ಉನ್ನತ ವ್ಯಕ್ತಿತ್ವದ ಆಧಾರದ ಮೇಲೆ ಸ್ವಾಮಿಯವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಿದರು. ಸ್ವಾಮಿ ಕೂಡ ಮೋದಿಯವರಲ್ಲಿ ವಿಶೇಷ ವ್ಯಕ್ತಿತ್ವವನ್ನು ಕಂಡು ಕೊಂಡಾಡಿದರು. ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗುವ ಆಸೆ ಇಟ್ಟುಕೊಂಡಿದ್ದರು. ಆದರೆ ಮೋದಿಯವರು, ಸ್ವಾಮಿಯವರ ಬಾಯಿಯನ್ನು ಬಲ್ಲವರಾದ್ದರಿಂದ; ಅವರನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಬಳಸಿಕೊಂಡು ಬದಿಗಿಟ್ಟರು. ಇನ್ನು ಹಗರಣಗಳು ಬೇಕಾದಾಗ ಬೇಕಾದಂತೆ ಬಳಸಲು ಬೇಕಾದ ಸ್ವಾಮಿಯವರ ಬತ್ತಳಿಕೆಯ ಬಾಣಗಳಾದ್ದರಿಂದ; ಅವೇ ಅವರ ಆದಾಯದ ಮೂಲಗಳು ಮತ್ತು ಅಧಿಕಾರದ ಮೆಟ್ಟಿಲು ಎಂಬ ಸತ್ಯ ಗೊತ್ತಾಗಿ ಸುಮ್ಮನಾದರು. ಇದರಿಂದ ಕೆರಳಿ ಕೆಂಡವಾದ ಸ್ವಾಮಿ, ಅವಕಾಶ ಸಿಕ್ಕಾಗಲೆಲ್ಲ ಮೋದಿಯವರನ್ನು ಟೀಕಿಸತೊಡಗಿದರು.

ಇದನ್ನು ಓದಿದ್ದೀರಾ?: ಕರ್ನಾಟಕದ ಚುನಾವಣಾ ಫಲಿತಾಂಶ : ‘ಬಿಜೆಪಿ ಮುಕ್ತ ದಕ್ಷಿಣ ಭಾರತ’ದ ಮುನ್ಸೂಚನೆಯೇ?

ಪ್ರಧಾನಿ ಮೋದಿಯವರ ವಿರುದ್ಧ ಸ್ವಾಮಿ ಆಡುತ್ತಿರುವ ಮಾತುಗಳು, ಈ ಸಂದರ್ಭದಲ್ಲಿ ಯಾಕಾಗಿ, ಯಾರಿಗಾಗಿ ಮತ್ತು ಅದರ ಪರಿಣಾಮವೇನು ಎಂಬುದನ್ನು ದೇಶದ ಜನತೆ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. 2024ರಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಮೋದಿಯವರು ಮತ್ತೊಮ್ಮೆ ಗೆಲ್ಲಲು ಬೇಕಾದ ತಂತ್ರಗಾರಿಕೆಗಳನ್ನು ಹೆಣೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸುಬ್ರಮಣ್ಯನ್ ಸ್ವಾಮಿಯವರು, ಬಿಜೆಪಿಗೆ ಮತ್ತು ಮೋದಿಗೆ ವಿರುದ್ಧವಿರುವ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮೋದಿ ಹಣಿಯಲು ಪಶ್ಚಿಮ ಬಂಗಾಲದ ದೀದಿ ಹಿಡಿದಿದ್ದಾರೆ. ತೃಣಮೂಲ್ ಕಾಂಗ್ರೆಸ್ಸಿನ ನಾಯಕಿ ಮಮತಾ ಬ್ಯಾನರ್ಜಿಯವರನ್ನು ಧೈರ್ಯಸ್ಥೆ ಎಂದು ಹಾಡಿ ಹೊಗಳುತ್ತಿದ್ದಾರೆ. ಬಿಜೆಪಿಯನ್ನು ಮಣಿಸಬೇಕಾದರೆ ಪ್ರತಿಪಕ್ಷಗಳು ಒಂದಾಗಬೇಕು, ಅದಕ್ಕೆ ಮಮತಾ ದೀದಿ ನೇತೃತ್ವ ವಹಿಸಬೇಕು ಎಂದು ಹೇಳುತ್ತಿದ್ದಾರೆ.

ಕುತೂಹಲಕರ ಸಂಗತಿ ಎಂದರೆ, ಮೋದಿ ಮತ್ತು ದೀದಿ- ಇಬ್ಬರೂ ಸ್ವಾಮಿಯನ್ನು ಅನುಮಾನದಿಂದ ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಪೂರ್ವಾಪರಗಳನ್ನು ಬಲ್ಲವರೆಲ್ಲರೂ ಸ್ವಾಮಿಯವರನ್ನು ವಿದೂಷಕನನ್ನಾಗಿ ಚಿತ್ರಿಸುತ್ತಿದ್ದಾರೆ. ಹಾಗಾಗಿ ಇವತ್ತು ಸುಬ್ರಮಣ್ಯನ್ ಸ್ವಾಮಿ ಆಡುವ ಮಾತುಗಳು, ಟಂಕಿಸುವ ಟ್ವೀಟ್‌ಗಳು ಅಸ್ತಿತ್ವ ಕಳೆದುಕೊಂಡ ಅತೃಪ್ತ ಆತ್ಮದ ಚೀರಾಟದಂತೆ ಕೇಳಿಸತೊಡಗಿವೆ.

ನಿಮ್ಮ ಹೋರಾಟ ಜನಪರವಾಗದೆ ಕೇವಲ ತೋರಿಕೆಯಾದರೆ; ಸ್ವಾರ್ಥಕೇಂದ್ರಿತವಾದರೆ; ನಿಮ್ಮ ಪತನ ಅಲ್ಲಿಂದಲೇ ಶುರುವಾಗುತ್ತದೆ. ಉದಾತ್ತ ವ್ಯಕ್ತಿತ್ವಕ್ಕೆ ಮಸಿ ಮೆತ್ತಿಕೊಳ್ಳುತ್ತದೆ. ಕಾಲ ನುಂಗಿ ನೊಣೆಯುತ್ತದೆ. ಅದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿ ಸುಬ್ರಮಣ್ಯನ್ ಸ್ವಾಮಿ ಕಾಣುತ್ತಿದ್ದಾರೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ವೈಫಲ್ಯ-6 | ಎಲ್ಲಿವೆ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳು?

ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ...

ಅನಾರೋಗ್ಯದಡಿ ಜಾಮೀನು ಪಡೆಯಲು ಕೇಜ್ರಿವಾಲ್ ಮಾವು ಸೇವನೆ: ಇ.ಡಿ

ಅಸ್ತಮ ಕಾಯಿಲೆಯಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅನಾರೋಗ್ಯದ ಆಧಾರದ...

ಗುಜರಾತ್ ಸರ್ಕಾರಿ ಕಚೇರಿಗಳ ಅಧಿಕೃತ ಭಾವಚಿತ್ರಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿಲ್ಲ

ಗುಜರಾತ್‌ನ ಸರ್ಕಾರಿ ಕಚೇರಿಗಳ ಅಧಿಕೃತ ಭಾವಚಿತ್ರಗಳಲ್ಲಿ 8 ನಾಯಕರ ಭಾವಚಿತ್ರಗಳಿವೆ ಎಂದು...

ಚಿಕ್ಕಮಗಳೂರು | ಜಯಪ್ರಕಾಶ್ ಹೆಗ್ಡೆ ಮಲೆನಾಡಿನ ಅಡಿಕೆ ಬೆಳೆಗಾರರ ಆಶಾಕಿರಣ: ಬಿ ಎ ರಮೇಶ್ ಹೆಗ್ಡೆ

"ಜಯಪ್ರಕಾಶ್ ಹೆಗ್ಡೆ ಅವರು ಅಡಿಕೆ ಬೆಳೆಗಾರರ ಆಶಾಕಿರಣ. ಕೇವಲ ಎರಡು ವರ್ಷಗಳಲ್ಲಿ...