ನಮ್ಮ ಸಚಿವರು | ಕರ್ನಾಟಕ – ಕೇರಳಕ್ಕೂ ಇದೆ ಹಲವು ರಾಜಕೀಯ ನಂಟು; ಅದು ಕೆ ಜೆ ಜಾರ್ಜ್‌ಗೂ ಉಂಟು

Date:

ಇಂದಿರಾಗಾಂಧಿಯವರ ಕಾಲದಿಂದಲೂ ಕೆ ಜೆ ಜಾರ್ಜ್ ಕಾಂಗ್ರೆಸ್ ಯುವ ನಾಯಕರಾಗಿದ್ದಾರೆ. 1989 ರಿಂದ ವಿವಿಧ ಕಾಂಗ್ರೆಸ್ ಸರ್ಕಾರಗಳಲ್ಲಿ ಸಚಿವರಾಗಿದ್ದ ಜಾರ್ಜ್ ಅವರು ಉನ್ನತಮಟ್ಟದಲ್ಲಿ ಯಶಸ್ವಿಯಾಗಲು ಅವರ ದೃಢವಾದ ತಳಮಟ್ಟದ ಸಂಘಟನೆಯೇ ಕಾರಣ. ಜನರ ಜೊತೆ ನಿರಂತರ ಸಂಪರ್ಕದಲ್ಲಿರುವ ಹಾಗೂ ಸಾರ್ವಜನಿಕರ ಅಹವಾಲು ಬಂದರೆ ತಕ್ಷಣ ಸ್ಪಂದಿಸುವ ಗುಣ ಜಾರ್ಜ್‌ ಅವರಲ್ಲಿದೆ

ಕೇಳಚಂದ್ರ ಜೋಸೆಫ್ ಜಾರ್ಜ್ ಅರ್ಥಾತ್‌ ಕೆ ಜೆ ಜಾರ್ಜ್‌ ಕಾಂಗ್ರೆಸ್‌ ರಾಜಕಾರಣದಲ್ಲಿ ವಿಶಿಷ್ಟತೆ ಹೊಂದಿರುವ ನಾಯಕ. ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದು ರಾಜಕಾರಣದಲ್ಲಿ ಪ್ರಭಾವಿಯಾದ ನಾಯಕರಲ್ಲಿ ಜಾರ್ಜ್‌ ಕೂಡ ಒಬ್ಬರು. ಈ ಹಿಂದೆ ವಲಸೆ ಬಂದ ಟಿ ಜಾನ್‌, ಜೆ ಅಲೆಕ್ಸಾಂಡರ್, ಎನ್‌ ಎ ಹ್ಯಾರಿಸ್ ಅವರು ಶಾಸಕರು, ಸಚಿವರಾಗಿ ಹೆಸರು ಮಾಡಿದ್ದಾರೆ. ಈ ಸಾಲಿನಲ್ಲಿ ಕೆ ಜೆ ಜಾರ್ಜ್‌ ಕೂಡ ಸೇರುತ್ತಾರೆ.

1946 ಆಗಸ್ಟ್‌ 24 ರಂದು ಕೇರಳದ ಕೊಟ್ಟಾಯಂನ ಚಿಂಗವನಂನಲ್ಲಿ ಕ್ರೈಸ್ತ ದಂಪತಿಗಳ ಮಗನಾಗಿ ಕೆ ಜೆ ಜಾರ್ಜ್‌ ಜನಿಸಿದರು. ವ್ಯಾಪಾರದ ನಿಮಿತ್ತ ಜಾರ್ಜ್‌ ಪೋಷಕರು 1960ರ ದಶಕದಲ್ಲಿ ಕೊಡಗು ಜಿಲ್ಲೆಗೆ ಸ್ಥಳಾಂತರಗೊಂಡರು. ತಮ್ಮ ಬಾಲ್ಯದ ಬಹುಪಾಲು ದಿನಗಳನ್ನು ಕೊಡಗಿನಲ್ಲಿ ಕಳೆದ ಜಾರ್ಜ್‌ 20ರ ಹರೆಯದಲ್ಲಿಯೇ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 1969ರಲ್ಲಿ ಗೋಣಿಕೊಪ್ಪಲು ಪಟ್ಟಣ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ ರಾಜಕೀಯ ಜೀವನ ಆರಂಭಿಸಿದರು. 1971–1972ರಲ್ಲಿ ವಿರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರು. 1985ರವರೆಗೂ ಕೊಡಗು ಹಾಗೂ ರಾಜ್ಯ ಕಾಂಗ್ರೆಸ್‌ನಲ್ಲಿ ವಿವಿಧ ರಾಜಕೀಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು.

ತಮ್ಮ ರಾಜಕೀಯದ ಗುರುಗಳಾದ ಮಾಜಿ ಮುಖ್ಯಮಂತ್ರಿ ಆರ್‌ ಗುಂಡೂರಾವ್‌ ಕೂಡ ಕೊಡಗು ಜಿಲ್ಲೆಯವರಾದ ಕಾರಣ ಅವರ ಸಖ್ಯದಿಂದ ರಾಜ್ಯ ಕಾಂಗ್ರೆಸ್ ಹಾಗೂ ಹೈಕಮಾಂಡ್‌ನಲ್ಲಿ ಪ್ರಭಾವ ಬೀರುವ ಮಟ್ಟದ ನಾಯಕರಾದರು. ತಮ್ಮ 37ನೇ ವಯಸ್ಸಿನಲ್ಲಿ 1983ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಭಾರತಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಾರ್ಜ್ ಸ್ಪರ್ಧಿಸಿದ್ದರು. ಕಾರಣ ಅತೀ ಹೆಚ್ಚು ಅಲ್ಪಸಂಖ್ಯಾತರಿರುವ ಕ್ಷೇತ್ರ ಭಾರತಿನಗರವಾಗಿತ್ತು. ಆದರೆ ಮೊದಲ ಚುನಾವಣೆಯಲ್ಲೇ ಅವರು ಸೋಲು ಕಂಡರು. ರಾಷ್ಟ್ರ ರಾಜಕಾರಣದ ಕಾರ್ಮಿಕ ಹಾಗೂ ಸಮಾಜವಾದಿ ಧುರೀಣ ಜಾರ್ಜ್ ಫರ್ನಾಂಡಿಸ್ ಅವರ ಸಹೋದರ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಮೈಕಲ್ ಫರ್ನಾಂಡಿಸ್ ವಿರುದ್ಧ ಕೆ ಜೆ ಜಾರ್ಜ್ ಪರಾಭವಗೊಂಡರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ನಮ್ಮ ಡಿಸಿಎಂ | ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿ ಬೆಳೆದ ಶಿವಕುಮಾರ್‌

ಬೆಂಗಳೂರಿನ ಭಾರತಿನಗರಕ್ಕೆ ಲಗ್ಗೆ

ಪುನಃ 1985ರಲ್ಲಿ ನಡೆದ ಚುನಾವಣೆಯಲ್ಲಿ ಎರಡನೇ ಬಾರಿ ಅದೇ ಮೈಕಲ್ ಫರ್ನಾಂಡಿಸ್ ವಿರುದ್ಧ ಸ್ಪರ್ಧಿಸಿದ ಕೆ ಜೆ ಜಾರ್ಜ್ ಅಮೋಘ ಗೆಲುವು ಸಾಧಿಸಿ ಸೋಲಿಗೆ ಸೇಡು ತೀರಿಸಿಕೊಂಡರು. 1989ರಲ್ಲಿ ಎರಡನೇ ಅವಧಿಗೆ ಭಾರತಿನಗರ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿ ಶಾಸಕರಾದರು. ಈ ಐದು ವರ್ಷದ ಅವಧಿಯಲ್ಲಿ ವೀರೇಂದ್ರ ಪಾಟೀಲ್ ಮಂತ್ರಿ ಮಂಡಲದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಬಂಗಾರಪ್ಪ ಸಂಪುಟದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು.

1994ರಲ್ಲಿ ಉಂಟಾದ ಅನೇಕ ರಾಜಕೀಯ ಏಳುಬೀಳುಗಳಲ್ಲಿ ಕಾಂಗ್ರೆಸ್‌ನಿಂದ ಹೊರಬಂದು ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) ಸೇರ್ಪಡೆಯಾದರು. ಆದರೆ ಕೆಸಿಪಿಯಿಂದ ಚುನಾವಣೆಯಲ್ಲಿ ಮತ್ತೆ ಸೋಲು ಕಾಣಬೇಕಾಯಿತು. ಜಾರ್ಜ್‌ ಅವರು ಪುನಃ ರಾಜಕೀಯ ಮರುಜನ್ಮ ಪಡೆಯಲು 2008ರವರೆಗೂ ಕಾಯಬೇಕಾಯಿತು. ಅಷ್ಟರಲ್ಲಾಗಲೇ ಸೋಲಿನಿಂದ ಸುಧಾರಿಸಿಕೊಂಡಿದ್ದರು. ಮತ್ತೆ ಮಾತೃ ಪಕ್ಷಕ್ಕೆ ಹಿಂತಿರುಗಿದ್ದರು. ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡರು.

2008ರಲ್ಲಿ ಆದ ಕ್ಷೇತ್ರ ಮರುವಿಂಗಡಣೆಯಿಂದಾಗಿ ಭಾರತಿನಗರ ಕ್ಷೇತ್ರ ಸರ್ವಜ್ಞ ನಗರ ಕ್ಷೇತ್ರಕ್ಕೆ ವಿಲೀನಗೊಂಡಿತ್ತು. ಈ ಕಾರಣದಿಂದ ಸರ್ವಜ್ಞ ನಗರದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆಲುವು ಗಳಿಸಿ ಮೂರನೇ ಬಾರಿಗೆ ಶಾಸಕರಾದರು. ಅಲ್ಲಿಂದ 2023ರವರೆಗೂ ಸತತ ನಾಲ್ಕು ಬಾರಿ ಜಯಗಳಿಸುತ್ತ ಬಂದಿದ್ದಾರೆ. ಈ ಮೂಲಕ ಜಾರ್ಜ್‌ ಕ್ಷೇತ್ರದಲ್ಲಿ ಹಿಡಿತ ಬಿಗಿಗೊಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಮ್ಮ ಸಚಿವರು | ಅಂದು ಗೌಡರ ಶಿಷ್ಯ, ಇಂದು ಸಿದ್ದು ಬಂಟ; ಪ್ರಭಾವಿ ರಾಜಕೀಯ ನಾಯಕನಾದ ಟ್ರಾವೆಲ್ಸ್ ಮಾಲೀಕ

ಮೂರು ಬಾರಿ ಮಂತ್ರಿ

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಗೃಹ, ನಗರಾಭಿವೃದ್ಧಿ ಖಾತೆಗಳನ್ನು ಕೆ ಜೆ ಜಾರ್ಜ್‌ ನಿಭಾಯಿಸಿದ್ದಾರೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ, ಗೃಹ ಸಲಹೆಗಾರರನ್ನಾಗಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ನೇಮಕ ಸೇರಿ ಹಲವು ವಿವಾದಗಳೂ ಗೃಹ ಸಚಿವರಾಗಿದ್ದಾಗ ಜಾರ್ಜ್‌ ಅವರನ್ನು ಸುತ್ತಿಕೊಂಡಿದ್ದವು.‌ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಪ್ರತಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿದ್ದರಿಂದ ಪದತ್ಯಾಗ ಮಾಡಬೇಕಾಗಿಯೂ ಬಂದಿತ್ತು. ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಪೊಲೀಸರು ಕೊನೆಗೂ ಜಾರ್ಜ್ ಅವರಿಗೆ ಕ್ಲೀನ್‌ಚಿಟ್ ನೀಡಿದರು. ನಂತರ ಅದೇ ಸರ್ಕಾರದಲ್ಲಿ ಕೆಲವು ತಿಂಗಳ ನಂತರ ಅವಧಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2018ರಲ್ಲಿಯೂ ಗೆಲುವು ಸಾಧಿಸಿದ ಜಾರ್ಜ್‌ ಅವರು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದರು. 2023ರಲ್ಲಿ 6ನೇ ಬಾರಿ ಜಯಗಳಿಸಿರುವ ಜಾರ್ಜ್‌ಗೆ ಪ್ರಸಕ್ತ ಸಂಪುಟದಲ್ಲಿ ಇಂಧನ ಖಾತೆ ದೊರಕಿದೆ. ಇದರೊಂದಿಗೆ ಮೂರನೇ ಬಾರಿ ಮಂತ್ರಿಯಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಮ್ಮ ಸಚಿವರು | ದಿನೇಶ್ ಗುಂಡೂರಾವ್: ವರ್ಚಸ್ಸಷ್ಟೇ ಸಾಲದು; ಅಭಿವೃದ್ಧಿಗೂ ಬೇಕಿದೆ ಒತ್ತು

ಸ್ವಕ್ಷೇತ್ರದ ಅಭಿವೃದ್ಧಿ

ಕೆ ಜೆ ಜಾರ್ಜ್‌ ಅವರು ರಾಜಕಾರಣದ ಜೊತೆ ಉದ್ಯಮಿಯಾಗಿಯೂ ಹೆಸರು ಗಳಿಸಿದ್ದಾರೆ. ಹಲವು ರೀತಿಯ ವಹಿವಾಟು ನಡೆಸುವ ಕೇಳಚಂದ್ರ ಗ್ರೂಪ್‌ ಎಂಬ ಸಂಸ್ಥೆಯನ್ನು 1980ರ ದಶಕದಲ್ಲಿಯೇ ಸ್ಥಾಪಿಸಿದ್ದು, ದೊಡ್ಡ ಮಟ್ಟದಲ್ಲಿ ವಿಸ್ತಾರಗೊಂಡಿದೆ. ಇದರ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮ, ಮಾನ್ಯತಾ ಟೆಕ್ ಪಾರ್ಕಿನ ಹಲವು ಕಟ್ಟಡಗಳು ಜಾರ್ಜ್ ಒಡೆತನದಲ್ಲಿದ್ದು, ಅವೆಲ್ಲವೂ ಮಗನ ಉಸ್ತುವಾರಿಯಲ್ಲಿವೆ ಎಂಬ ಸುದ್ದಿ ಇದೆ. ಅಲ್ಲದೆ ಸ್ವಕ್ಷೇತ್ರ ಸರ್ವಜ್ಞ ನಗರದಲ್ಲಿ ಸರ್ವಜ್ಞ ಹೆಲ್ತ್ ಕೇರ್ ಇನ್ಸ್ಟಿಟ್ಯೂಟ್, ಸರ್ವಜ್ಞ ಕೌಶಲ ಅಭಿವೃದ್ಧಿ ಕೇಂದ್ರ, ಸರ್ಕಾರಿ ಶಾಲೆಗಳಿಗೆ ಹೊಸ ರೂಪ, ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ, ಅಂಗನವಾಡಿಗಳ ಉನ್ನತೀಕರಣ, ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಗಳು ಸೇರಿ ಹಲವು ಅಭಿವೃದ್ಧಿ ಕೆಲಸಗಳಾಗಿವೆ.

ಇಂದಿರಾಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್‌ನ ಯುವ ನಾಯಕರಾಗಿದ್ದಾರೆ. 1989 ರಿಂದ ವಿವಿಧ ಕಾಂಗ್ರೆಸ್ ಸರ್ಕಾರಗಳಲ್ಲಿ ಸಚಿವರಾಗಿದ್ದ ಜಾರ್ಜ್ ಅವರು ಉನ್ನತಮಟ್ಟದಲ್ಲಿ ಯಶಸ್ವಿಯಾಗಲು ಅವರ ದೃಢವಾದ ತಳಮಟ್ಟದ ಸಂಘಟನೆಯೇ ಕಾರಣ ಎಂದು ಕಾರ್ಯಕರ್ತರು ಹೇಳುತ್ತಾರೆ. ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಾರ್ವಜನಿಕರ ಅಹವಾಲು ಬಂದರೆ ತಕ್ಷಣ ಸ್ಪಂದಿಸಬೇಕೆಂಬ ಕಾರಣಕ್ಕೆ ಎಲ್ಲ ವಾರ್ಡ್‌ ಗಳಲ್ಲಿ ಜನಸ್ಪಂದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಎಂದು ಕಾರ್ಯಕರ್ತರು ತಿಳಿಸುತ್ತಾರೆ.

ಅಪರಾಧ ಚಟುವಟಿಕೆಗಳ ಅಪಖ್ಯಾತಿ

ನಾಗವಾರ, ಎಚ್‌ಬಿಆರ್ ಬಡಾವಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ, ಮಾರುತಿ ಸೇವಾನಗರ ಸೇರಿದ ವಿಶಾಲ ಕ್ಷೇತ್ರ ಸರ್ವಜ್ಞ ನಗರ. ನೆರೆ ರಾಜ್ಯಗಳಿಂದ ಕೆಲಸ ಅರಸಿ ಬರುವ ಹೆಚ್ಚಿನ ಮಂದಿ ಆಶ್ರಯ ಪಡೆದುಕೊಳ್ಳುವುದು ಈ ಭಾಗದಲ್ಲಿಯೇ. ಈ ಕಾರಣದಿಂದ ಜನಸಂಖ್ಯೆಯ ಒತ್ತಡ, ಕಿರಿದಾದ ರಸ್ತೆಗಳು, ಅಡ್ಡಾದಿಡ್ಡಿ ಬೆಳೆದಿರುವ ಗಲ್ಲಿಗಳು, ಸಂಚಾರ ದಟ್ಟಣೆ, ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಹೀಗೆ ಸಮಸ್ಯೆಗಳ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ. ಅಭಿವೃದ್ಧಿ ಕಡಿಮೆ, ಸಮಸ್ಯೆಗಳು ಜಾಸ್ತಿ ಎನ್ನುವುದು ಸ್ಥಳೀಯರ ಆರೋಪ. ಹಲವು ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವುದರಿಂದ ಕ್ಷೇತ್ರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚು ಎನ್ನುವ ಅಪಖ್ಯಾತಿಯೂ ಇದೆ.    

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರ್ಗಮಿಸುವ ಪ್ರಧಾನಿ ತನ್ನನ್ನು ತಾನು ದೇವಮಾನವನೆಂದು ಭಾವಿಸಬಹುದು: ಕಾಂಗ್ರೆಸ್‌

"ನಿರ್ಗಮಿಸುತ್ತಿರುವ ಪ್ರಧಾನಿ ಸೋಲಿನ ವಾಸ್ತವ ತಿಳಿಯುತ್ತಿದ್ದಂತೆ, ಹೆಚ್ಚು ಭ್ರಮೆಯಲ್ಲಿದ್ದಾರೆ. ಅದಕ್ಕೆ ತನ್ನ...

ಕೊಪ್ಪಳ | ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ : ಕೆ.ಫಣಿರಾಜ್

ದಶಕಗಳ ಹಿಂದೆ ನಡೆದಿರುವ ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ. ಆದರೆ...

ರಾಯಚೂರು | ಕುರಿಗೆ ನೀರು ಕುಡಿಸಲು ನದಿಗೆ ತೆರಳಿದ್ದ ಬಾಲಕನ್ನು ಹೊತ್ತೊಯ್ದ ಮೊಸಳೆ

ಕೃಷ್ಣ ನದಿಯಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಬಾಲಕನ ಮೇಲೆ...

ಕೊಪ್ಪಳ | ಬಂಡವಾಳಶಾಹಿಗಳಿಂದ ಭೂಮಿ ಉಳಿಸಬೇಕಿದೆ: ರಾಕೇಶ್ ಟಿಕಾಯತ್

ಉದ್ಯಮಿಗಳಿಗೆ ರೈತರ ಜಮೀನು ಕಡಿಮೆ ದರದಲ್ಲಿ ಖರೀದಿಸಿ ಬಡಜನರ ಹೊಟ್ಟೆಗೆ ಬಟ್ಟೆ...