ಇದು ಒಬ್ಬ ವ್ಯಕ್ತಿಯ ಕಥೆಯಲ್ಲ; ದಲಿತ ಸಮುದಾಯದ ನೋವು, ಅವಮಾನ ಮತ್ತು ಹಕ್ಕುಗಳಿಗಾಗಿ ನಡೆದ ನಿರಂತರ ಹೋರಾಟದ ಕತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನಕಥೆಯಾಗಿ ಆರಂಭವಾದರೂ; ಅದು ನಿಧಾನವಾಗಿ ಸಾಮಾಜಿಕ ದಾಖಲೆಯಾಗಿ, ಪ್ರತಿರೋಧದ ಕಥನವಾಗಿ, ಚಿಂತನೆಗೆ ದಾರಿ ಮಾಡಿಕೊಡುವ ಹೋರಾಟವಾಗಿ ರೂಪುಗೊಳ್ಳುತ್ತದೆ.
ಕಳೆದವಾರ ‘ಜಂಗಮ ಕಲೆಕ್ಟಿವ್’ ತಂಡದಿಂದ ಪ. ರಂಜಿತ್ ನಿರ್ಮಾಣದ, ಎಂಕೆಪಿ ಗ್ರಿಧರನ್ ನಿರ್ದೇಶನದ ‘ದಲಿತ್ ಸುಬ್ಬಯ್ಯ‘ ಸಾಕ್ಷ್ಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು. ಆ ಡಾಕ್ಯುಮೆಂಟರಿ ನೋಡಿ ಹೊರಬಂದಾಗ ಮಾತು ಮರೆತುಹೋಗಿತ್ತು. ಆ ಮಟ್ಟಿಗೆ ಅದು ಕಲಕಿತ್ತು, ಕಾಡಿತ್ತು.
ಆ ಸಂದರ್ಭದಲ್ಲಿ ಥಟ್ಟನೆ ತಲೆಯಲ್ಲಿ ನೂರಾರು ವ್ಯಕ್ತಿಗಳು, ಘಟನೆಗಳು ತೇಲತೊಡಗಿದವು. ನಮ್ಮಲ್ಲೂ ‘ಸುಬ್ಬಯ್ಯ’ನಂಥ ‘ಸ್ಟಫ್’ ಇರುವ ಸುಮಾರು ಜನರಿದ್ದಾರಲ್ಲ, ನಾವೂ ಇಂತಹ ಡಾಕ್ಯುಮೆಂಟರಿ ಮಾಡಬಹುದಲ್ಲ ಅನ್ನಿಸಿತು. ತಕ್ಷಣ ನೆನಪು 70ರ ದಶಕಕ್ಕೆ ಜಿಗಿಯಿತು. ಅಲ್ಲಿಂದ ಇಲ್ಲಿಯವರೆಗೆ, ಸುಮಾರು 50 ವರ್ಷಗಳಲ್ಲಿ ನಾಡು ಕಂಡ ದಲಿತ ಚಳವಳಿ ಕಣ್ಮುಂದೆ ಹಾದುಹೋಯಿತು.
ಆ ಚಳವಳಿಗೆ ಹಲವು ಬಗೆಯಲ್ಲಿ ತಮ್ಮ ಬುದ್ಧಿ ಬಳಸಿದ, ಬೆವರು ಬಸಿದ, ಬಲ ತುಂಬಿದ ನೂರಾರು ಮುಖಗಳು ಮುನ್ನಲೆಗೆ ಬಂದವು. ಪ್ರತಿಭಟನೆಗಳು, ಧರಣಿಗಳು, ಸತ್ಯಾಗ್ರಹಗಳು, ಹೋರಾಟಗಳು, ಜಾಥಾಗಳು, ರ್‍ಯಾಲಿಗಳು; ಅವು ಉಂಟು ಮಾಡಿದ ಪರಿಣಾಮಗಳ ಸುರುಳಿ ಬಿಚ್ಚಿಕೊಳ್ಳಲಾರಂಭಿಸಿತು. ಅವುಗಳ ಸಂಘಟಕರು, ನಾಯಕರು, ಭಾಗವಹಿಸಿದವರು, ಬರೆದವರು, ಹಾಡಿದವರು, ಹೆಜ್ಜೆ ಹಾಕಿದವರು- ಎಲ್ಲರೂ ನೆನಪಾದರು. ಇರಲಿ, ಈಗ ಸುಬ್ಬಯ್ಯರತ್ತ ನೋಡೋಣ.
69 ವರ್ಷಗಳ ಕಾಲ ಬದುಕಿದ್ದ ಸುಬ್ಬಯ್ಯನವರು, ಪಕ್ಕದ ತಮಿಳುನಾಡಿನ ಕವಿ, ಲೇಖಕ, ಹಾಡುಗಾರ, ಹೋರಾಟಗಾರ. ಅವರ ನಿಜನಾಮಧೇಯ ಕರುಪ್ಪನ್ ಪಿಚ್ಚೈ. ಬಾಲ್ಯದಿಂದಲೇ ಜಾತಿ ತಾರತಮ್ಯ, ದಬ್ಬಾಳಿಕೆಯನ್ನು ಎದುರಿಸಿದವರು. ಅದರ ಪ್ರತಿರೋಧವೆಂಬಂತೆ ಸುಮಾರು 400 ಹೋರಾಟದ ಹಾಡುಗಳನ್ನು ಬರೆದು ಬೀದಿ ಬೀದಿಗಳಲ್ಲಿ ಹಾಡಿದವರು. ಹಾಡುಗಳ ಮೂಲಕ ಪ್ರಭುತ್ವವನ್ನು ಪ್ರಶ್ನಿಸಿದವರು. ಜನರನ್ನು ಜಾಗೃತರನ್ನಾಗಿಸಿದವರು. ಹೆಸರು, ಖ್ಯಾತಿ ಅಥವಾ ಹಣಕ್ಕಾಗಿ ತಮ್ಮ ಕಲೆಯನ್ನು ಬಳಸದೆ, ನಿರಂತರ ಹೋರಾಟಗಾರರಾಗಿ ಉಳಿದವರು. ತಾವು ನಂಬಿದ ತತ್ವ-ಸಿದ್ಧಾಂತಕ್ಕೆ ಬದುಕಿನುದ್ದಕ್ಕೂ ಬದ್ಧರಾದವರು. ತಲೆ ತುಂಬ ಮಾರ್ಕ್ಸ್, ಲೆನಿನ್ ತುಂಬಿಕೊಂಡವರು. ಅಂಬೇಡ್ಕರ್, ಪೆರಿಯಾರ್‍ಗಳನ್ನು ಕರುಳಿಗಿಳಿಸಿಕೊಂಡವರು. ರಟ್ಟೆಯಲ್ಲಿ ಬಲವಿಲ್ಲದಿದ್ದರೂ, ಬೆನ್ನ ಹಿಂದೆ ಜನರಿಲ್ಲದಿದ್ದರೂ ವ್ಯವಸ್ಥೆ ವಿರುದ್ಧ ಸಿಡಿದೆದ್ದವರು. ಅದರ ಫಲವಾಗಿ ಮಡದಿ-ಮಕ್ಕಳನ್ನು ಹಸಿವು-ಅವಮಾನಗಳಿಗೆ; ಕಷ್ಟ-ನಷ್ಟಗಳಿಗೆ ದೂಡಿದವರು.
ಇದನ್ನು ಓದಿದ್ದೀರಾ?: ಅಂಬೇಡ್ಕರ್ ‘ಸಂವಿಧಾನ ಶಿಲ್ಪಿ’ಯಷ್ಟೇ ಅಲ್ಲ; RBIಗೆ ಅಡಿಪಾಯ ಹಾಕಿದ ಆರ್ಥಿಕತೆಯ ಬಲಭೀಮ
ಡಾಕ್ಯುಮೆಂಟರಿ, ಸುಬ್ಬಯ್ಯನವರು ಬಾಲ್ಯದಲ್ಲಿ ಕಂಡ ದಲಿತರ ಹತ್ಯಾಕಾಂಡ, ಎದುರಿಸಿದ ಜಾತಿ ಅವಮಾನ, ನೆಲೆಯಿಲ್ಲದೆ ಪಾಂಡಿಚೆರಿಗೆ ವಲಸೆ ಹೋಗಿದ್ದು ಎಲ್ಲವನ್ನು ತೆರೆದಿಡುತ್ತದೆ. ಶಿಕ್ಷಣ, ಉದ್ಯೋಗ ಮತ್ತು ಬದುಕಿನಲ್ಲಿ ಎದುರಾದ ಅಡೆತಡೆಗಳನ್ನು ಬಿಚ್ಚಿಡುತ್ತದೆ. ಅವರ ಅಭದ್ರತೆಯ ಬದುಕೇ ಅವರ ಬೌದ್ಧಿಕ ಚಿಂತನೆಗೆ ಬಲ ನೀಡುತ್ತದೆ. ಮಕ್ಕಳಿಗೆ ಸ್ಪಾರ್‍ಟಕಸ್ ಮತ್ತು ಗಾರ್ಕಿ ಎಂದು ಹೆಸರಿಡಲು ಪ್ರೇರೇಪಿಸುತ್ತದೆ. ತಾವು ಕಂಡುಂಡ ಕಹಿ ಅನುಭವಗಳೇ ಸಮಾಜ ಪರಿವರ್ತನೆಗಾಗಿ ತುಡಿಯುವಂತೆ, ಆ ಹಾದಿಯಲ್ಲಿ ಹೆಜ್ಜೆ ಹಾಕುವಂತೆ ಮಾಡುತ್ತವೆ. ಚಿತ್ರವು ಅವರ ವೈಯಕ್ತಿಕ ಬದುಕನ್ನಷ್ಟೇ ಅಲ್ಲ, ದಲಿತ ಹೋರಾಟವನ್ನು ನೋಡುಗರ ನಾಭಿಗೆ ಇಳಿಸುತ್ತದೆ.
ಡಾಕ್ಯುಮೆಂಟರಿ ಸಾಮಾನ್ಯ ಸುಬ್ಬಯ್ಯನವರ ಜೀವನ ಮತ್ತು ಹೋರಾಟವನ್ನು ಆಧರಿಸಿದ್ದದಾದರೂ, ಇದು ಒಬ್ಬ ವ್ಯಕ್ತಿಯ ಕಥೆಯಲ್ಲ; ದಲಿತ ಸಮುದಾಯದ ನೋವು, ಅವಮಾನ ಮತ್ತು ಹಕ್ಕುಗಳಿಗಾಗಿ ನಡೆದ ನಿರಂತರ ಹೋರಾಟದ ಕತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನಕಥೆಯಾಗಿ ಆರಂಭವಾದರೂ; ಅದು ನಿಧಾನವಾಗಿ ಸಾಮಾಜಿಕ ದಾಖಲೆಯಾಗಿ, ಪ್ರತಿರೋಧದ ಕಥನವಾಗಿ, ಚಿಂತನೆಗೆ ದಾರಿ ಮಾಡಿಕೊಡುವ ಹೋರಾಟವಾಗಿ ರೂಪುಗೊಳ್ಳುತ್ತದೆ. ತಮಿಳುನಾಡಿನ ಜಾತಿ ವಿರೋಧಿ ಚಳವಳಿಗಳಲ್ಲಿ ಸುಬ್ಬಯ್ಯನವರ ಪರಂಪರೆಯನ್ನು ಜೀವಂತವಾಗಿ ಉಳಿಸುವಲ್ಲಿ ಡಾಕ್ಯುಮೆಂಟರಿ ಯಶಸ್ವಿಯಾಗಿದೆ.
ಚಿತ್ರದ ಒಟ್ಟಂದವೆಂದರೆ ಅದರ ನೈಜತೆ ಮತ್ತು ಪ್ರಾಮಾಣಿಕತೆ. ಈ ನೈಜತೆ ಪ್ರೇಕ್ಷಕರನ್ನು ಅದದೇ ಸ್ಥಳದಲ್ಲಿ ಅವರೇ ಪಾತ್ರಧಾರಿಗಳಂತೆ ಪ್ರತಿಷ್ಠಾಪಿಸುತ್ತದೆ, ಕೆಲವೆಡೆ ಭಾವುಕತೆಗೆ ನೂಕುತ್ತದೆ. ಸುಬ್ಬಯ್ಯನವರ ಒಡನಾಡಿಗಳು ಅವರನ್ನು ನೆನಪಿಸಿಕೊಳ್ಳುವ ಮಾತುಗಳು, ಅದನ್ನು ಅವಿಸ್ಮರಣೀಯಗೊಳಿಸುವ ಹಾಡುಗಳು, ದಟ್ಟೈಸುವ ದೃಶ್ಯಗಳು ಮತ್ತು ಸಾಕ್ಷ್ಯಾಧಾರಗಳು ಡಾಕ್ಯುಮೆಂಟರಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ. ಯಾವುದೇ ಅತಿರೇಕವಿಲ್ಲದೆ, ನೇರವಾಗಿ ಪ್ರೇಕ್ಷಕರ ಎದೆಗೆ ನಾಟುತ್ತವೆ.

ಚಿತ್ರದ ಆರಂಭದಲ್ಲಿ ನಮ್ಮ ನಿಮ್ಮಂತೆಯೇ ಇದ್ದ ‘ದಲಿತ್ ಸುಬ್ಬಯ್ಯ’ನವರು, ಚಿತ್ರ ಮುಗಿಯುವಷ್ಟರಲ್ಲಿ ‘ಲೆನಿನ್ ಸುಬ್ಬಯ್ಯ’ನವರಾಗಿ ಮಾರ್ಪಟ್ಟಿರುತ್ತಾರೆ. ಸುಬ್ಬಯ್ಯನವರು ಒಬ್ಬ ಸಾಮಾನ್ಯ ವ್ಯಕ್ತಿ. ವಾಸಕ್ಕೆ ಯೋಗ್ಯವಾದ ಮನೆಯಿಲ್ಲ, ಹೊಟ್ಟೆತುಂಬ ಉಂಡ ನೆನಪಿಲ್ಲ, ಸುಖ-ಸಂತೋಷಗಳನ್ನು ಅನುಭವಿಸಿದವರಲ್ಲ. ಆದರೆ ಅವರ ಆಲೋಚನೆಯಲ್ಲಿ, ಬರಹಗಳಲ್ಲಿ, ಹಾಡುಗಳಲ್ಲಿ ಬುದ್ಧ, ಅಂಬೇಡ್ಕರ್, ಪೆರಿಯಾರ್, ಮಾರ್ಕ್ಸ್, ಚೆಗುವೆರಾ, ಸುಬ್ರಮಣ್ಯ ಭಾರತಿಗಳೆಲ್ಲ ಬಂದುಹೋಗುತ್ತಾರೆ.
ಹಾಗೆ ನೋಡಿದರೆ, ಇದು ಕೇವಲ ಅವರ ಬಗೆಗಿನ ಮಾಹಿತಿ ನೀಡುವ ಚಿತ್ರವಲ್ಲ; ಸಮಾಜದ ಅಂತರಂಗವನ್ನು ತೆರೆದು ತೋರಿಸುತ್ತದೆ. ಜಾತಿ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ನಡೆಸಿದ ಹೋರಾಟವನ್ನು ಹೇಳುತ್ತದೆ. ಇಂತಹ ಸಾಮಾಜಿಕ ಪ್ರತಿರೋಧದ ಚಳವಳಿಗಳ ಮೇಲೆ ಅವರು ಬೀರಿದ ಶಾಶ್ವತ ಪ್ರಭಾವವನ್ನು ಸ್ಪಷ್ಟವಾಗಿ ಹಿಡಿದಿಡುತ್ತದೆ. ನೋಡುಗರನ್ನು ಆತ್ಮಪರಿಶೀಲನೆಗೆ ಒಳಪಡಿಸುತ್ತದೆ. ಅಸಮಾನತೆಗಳನ್ನು ಪ್ರಶ್ನಿಸಲು ಪ್ರೇರೇಪಿಸುತ್ತದೆ. ಜೊತೆಗೆ ಬದಲಾವಣೆಯ ಅಗತ್ಯತೆಯನ್ನು ಬಯಸುತ್ತದೆ.
ಇದನ್ನು ಓದಿದ್ದೀರಾ? ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ: ಆ ಐತಿಹಾಸಿಕ ಕ್ಷಣದ ಮಹತ್ವವೇನು?
ನಿರ್ದೇಶನದ ದೃಷ್ಟಿಯಿಂದ, ಚಿತ್ರವು ಸರಳ ಮತ್ತು ಸತ್ಯನಿಷ್ಠ ಶೈಲಿಯನ್ನು ಅನುಸರಿಸಿದೆ. ಅನಗತ್ಯ ಅಲಂಕಾರಗಳಿಲ್ಲದೆ ಕಥೆಯನ್ನು ಹೇಳುವ ಪ್ರಯತ್ನ ಫಲ ಕೊಟ್ಟಿದೆ. ಸಂದರ್ಶನಗಳು, ನೆನಪುಗಳು ಮತ್ತು ನೈಜ ದೃಶ್ಯಗಳ ಸಂಯೋಜನೆ ಕಥೆಗೆ ಜೀವ ತುಂಬಿದೆ. ಸಾಮಾನ್ಯ ಸುಬ್ಬಯ್ಯರನ್ನು ಅಸಾಮಾನ್ಯ ಸುಬ್ಬಯ್ಯರನ್ನಾಗಿಸಿದೆ. ಕೆಲವು ಕಡೆ ನಿರೂಪಣೆ ಕೊಂಚ ನಿಧಾನ ಹಾಗೂ ಕೆಲವು ಭಾಗಗಳು ಅನಗತ್ಯ. ತಾಂತ್ರಿಕವಾಗಿ ಸೊರಗಿದೆ. ಕ್ಯಾಮೆರಾ ಕೆಲಸ ಕೊಂಚ ಕೈಕೊಟ್ಟಿದೆ. ಹಿನ್ನೆಲೆ ಸಂಗೀತ ಕೆಲವೆಡೆ ಮಿತವಾಗಿದ್ದರೆ ಇನ್ನಷ್ಟು ಪರಿಣಾಮಕಾರಿ ಆಗಬಹುದಿತ್ತೆನಿಸುತ್ತದೆ.
ಕೊನೆಯಲ್ಲಿ, ‘ದಲಿತ್ ಸುಬ್ಬಯ್ಯ’ದಂತಹ ಡಾಕ್ಯುಮೆಂಟರಿಗಳನ್ನು ನೋಡಿದಾಗ, ನಾವೂ ಮಾಡಬಹುದಲ್ಲ, ನಮ್ಮಲ್ಲೂ ಅದನ್ನು ಮೀರಿಸುವ ವ್ಯಕ್ತಿಗಳು, ವ್ಯಕ್ತಿತ್ವಗಳು ಇದ್ದಾವಲ್ಲ ಎನಿಸುತ್ತದೆ. ಹಾಗೆಯೇ ಸುಬ್ಬಯ್ಯನವರ ಕಠೋರ ಬದ್ಧತೆ ಮತ್ತು ಪ್ರಾಮಾಣಿಕತೆ ನಮ್ಮಲ್ಲಿದೆಯೇ ಎಂಬ ಪ್ರಶ್ನೆ ಕೂಡ ಎದುರಾಗುತ್ತದೆ.

ಲೇಖಕ, ಪತ್ರಕರ್ತ



