ಇಂಟರ್ನೆಟ್‌ನಿಂದ ದೂರ ಸರಿದು, ಕೃತಕ ಬುದ್ಧಿಮತ್ತೆಯ ಅಧೀನಕ್ಕೊಳಗಾಗದೆ ಕೇವಲ ಕೈಬರಹದ ಚಿತ್ರಕಥೆ ಹಾಗೂ ಮನುಷ್ಯರ ನಡುವಿನ ನೇರ ಒಡನಾಟವನ್ನೇ ನಂಬಿರುವ 'ಡಾಗ್ಮ' ಕೇವಲ ಒಂದು ಕ್ಷಣಿಕ ಡಿಜಿಟಲ್ ಟ್ರೆಂಡ್ ಅಲ್ಲ. ಅದು ಇಡೀ ಮಾನವ ಸೃಜನಶೀಲತೆಯನ್ನು ಅಲ್ಗಾರಿದಮ್‌ಗಳು ನಿಯಂತ್ರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಮನುಷ್ಯನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ರೂಪಿಸಲಾದ ಒಂದು ಕಟ್ಟುನಿಟ್ಟಾದ ಪ್ರತಿರೋಧದ ಪ್ರಣಾಳಿಕೆ.
1995ರಲ್ಲಿ ಡೆನ್ಮಾರ್ಕ್‌ನ ಇಬ್ಬರು ನಿರ್ದೇಶಕರಾದ ಲಾರ್ಸ್ ವಾನ್ ಟ್ರೈಯರ್ ಮತ್ತು ಥಾಮಸ್ ವಿಂಟರ್‌ಬರ್ಗ್ ಚಿತ್ರರಂಗವನ್ನು ಆವರಿಸುತ್ತಿದ್ದ ತಾಂತ್ರಿಕ ಆಡಂಬರ ಮತ್ತು ನಕಲಿ ವೈಭವದ ವಿರುದ್ಧ ಜಂಟಿಯಾಗಿ ಧ್ವನಿ ಎತ್ತಿದರು. ಸಿನೆಮಾದ ಅಸಲಿ ಬೇರುಗಳನ್ನು ಹುಡುಕ ಹೊರಟ ಇವರು ರೂಪಿಸಿದ್ದೇ ಹತ್ತು ಕಠಿಣ ನಿಯಮಗಳ ಒಂದು ಪ್ರಣಾಳಿಕೆ. ಇಂತಹ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಲು ಅವರಿಗೆ ಮೂಲ ಪ್ರೇರಣೆ ಸಿಕ್ಕಿದ್ದು ಅವರು ಓದಿದ್ದ ‘ನ್ಯಾಷನಲ್ ಫಿಲ್ಮ್ ಸ್ಕೂಲ್ ಆಫ್ ಡೆನ್ಮಾರ್ಕ್’ನಿಂದ. ಆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿನೆಮಾ ಮಾಡುವಾಗ ಕಡ್ಡಾಯವಾಗಿ ಬಜೆಟ್ ಮತ್ತು ತಾಂತ್ರಿಕ ಮಿತಿಗಳನ್ನು ಹೇರಲಾಗುತ್ತಿತ್ತು. ವಿದ್ಯಾರ್ಥಿ ದೆಸೆಯ ಆ ಕಠಿಣ ಶಿಸ್ತನ್ನೇ ಮಾದರಿಯಾಗಿಟ್ಟುಕೊಂಡು, ಅದೇ ವರ್ಷ ಪ್ಯಾರಿಸ್‌ನಲ್ಲಿ ನಡೆದ ಚಲನಚಿತ್ರರಂಗದ ಶತಮಾನೋತ್ಸವದ ಜಾಗತಿಕ ಸಮ್ಮೇಳನದಲ್ಲಿ ವಾನ್ ಟ್ರೈಯರ್ ಈ ಪ್ರಣಾಳಿಕೆಯನ್ನು ಕ್ರಾಂತಿಯ ಸಂಕೇತದಂತೆ ಗಾಢ ಕೆಂಪು ಕಾಗದದ ಮೇಲೆ ಮುದ್ರಿಸಿ ಹಂಚಿದರು. ಇದು ಜಾಗತಿಕ ಚಿತ್ರರಂಗದಲ್ಲಿ ‘ಡಾಗ್ಮ 95’ ಚಳವಳಿಯಾಗಿ ಮುನ್ನೆಲೆಗೆ ಬಂದಿತು.

ಅಂದು ಜಗತ್ತಿಗೆ ಆಗಷ್ಟೇ ಅಡಿಯಿಡುತ್ತಿದ್ದ ಡಿಜಿಟಲ್ ವಿಡಿಯೋ (DV) ಕ್ಯಾಮೆರಾಗಳ ತಂತ್ರಜ್ಞಾನ ಮುಂದೆ ಇಡೀ ಜಗತ್ತನ್ನೇ ಆವರಿಸಲಿದೆ ಮತ್ತು ಸಿನೆಮಾವನ್ನು ಎಲ್ಲರಿಗೂ ಮುಕ್ತವಾಗಿಸಲಿದೆ ಎಂದು ಈ ಚಳವಳಿ ಮೊದಲೇ ಭವಿಷ್ಯ ನುಡಿದಿತ್ತು. ಡಾಗ್ಮ ನಿಯಮಗಳ ಪ್ರಕಾರ ಭಾರವಾದ 35mm ಕ್ಯಾಮೆರಾಗಳನ್ನು ಹೆಗಲ ಮೇಲೆ ಹೊತ್ತು ಶೂಟ್ ಮಾಡುವುದು ಅಸಾಧ್ಯವಾಗಿದ್ದರಿಂದ, ನಿರ್ದೇಶಕರು ಈ ಸಣ್ಣ ಮತ್ತು ಅಗ್ಗದ ಡಿಜಿಟಲ್ ಕ್ಯಾಮೆರಾಗಳನ್ನು ಬಳಸಲಾರಂಭಿಸಿದರು. ಇದು ಚಿತ್ರರಂಗದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆಗೆ ಹೊಸ ವೇಗವನ್ನು ನೀಡಿತಲ್ಲದೆ, ಆ ತಾಂತ್ರಿಕ ಮಿತಿಗಳೇ ಸಿನೆಮಾದ ಹೊಸ ಸೌಂದರ್ಯಶಾಸ್ತ್ರವಾಗಿ ರೂಪಾಂತರಗೊಂಡವು. ಹೀಗೆ ಸಿನಿಮಾವನ್ನು ತಾಂತ್ರಿಕ ಆಡಂಬರದಿಂದ ಮುಕ್ತಗೊಳಿಸಿ, ಕೇವಲ ಮನುಷ್ಯನ ಸಹಜ ಸತ್ಯವನ್ನು ಮಾತ್ರ ಸೆರೆಹಿಡಿಯಲು ಅವರು ರೂಪಿಸಿದ ಈ ಹತ್ತು ನಿಯಮಗಳನ್ನು ‘ಪವಿತ್ರತೆಯ ಶಪಥ’ (Vow of Chastity) ಎಂದು ಹೆಸರಿಸಲಾಯಿತು.
1. ಚಿತ್ರೀಕರಣಕ್ಕಾಗಿ ಯಾವುದೇ ಕೃತಕ ಸೆಟ್‌ಗಳನ್ನು ನಿರ್ಮಿಸುವಂತಿಲ್ಲ. ಕಥೆಗೆ ಅಗತ್ಯವಿರುವ ವಸ್ತುಗಳು ಆ ಸ್ಥಳದಲ್ಲೇ ಇರಬೇಕು. ಒಂದು ವೇಳೆ ಕಥೆಗೆ ನಿರ್ದಿಷ್ಟ ವಸ್ತು ಅನಿವಾರ್ಯವಾದರೆ, ಆ ವಸ್ತು ಮೊದಲೇ ಇರುವ ಜಾಗವನ್ನೇ ಹುಡುಕಿ ಅಲ್ಲಿಯೇ ದೃಶ್ಯೀಕರಿಸಬೇಕು.
2. ದೃಶ್ಯದ ಜೊತೆಯಲ್ಲೇ ಸ್ಥಳದಲ್ಲಿ ದಾಖಲಾಗುವ ಧ್ವನಿಯನ್ನು ಮಾತ್ರ ಬಳಸಬೇಕು. ಪ್ರೊಡಕ್ಷನ್ ನಂತರದ ಹಂತದಲ್ಲಿ ಹಿನ್ನೆಲೆ ಸಂಗೀತ ಸೇರಿಸುವುದು ಅಥವಾ ಡಬ್ಬಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಸಂಗೀತದ ಅಗತ್ಯವಿದ್ದರೆ ಆ ದೃಶ್ಯದ ಒಳಗೇ ಯಾರಾದರೂ ಹಾಡುತ್ತಿರಬೇಕು ಅಥವಾ ರೇಡಿಯೋ ಪ್ಲೇ ಆಗುತ್ತಿರಬೇಕು.
ಇದನ್ನು ಓದಿದ್ದೀರಾ?: ಮಣ್ಣಿನ ವಾಸನೆಯನ್ನು ಬೆಳ್ಳಿತೆರೆಯ ಮೇಲೆ ಹರಡಿದ ನಿರ್ದೇಶಕ ಭಾರತಿರಾಜ
3. ಕ್ಯಾಮೆರಾವನ್ನು ಸ್ಟ್ಯಾಂಡ್ (Tripod) ಅಥವಾ ಕ್ರೇನ್‌ಗಳ ಮೇಲೆ ಇಡುವಂತಿಲ್ಲ, ಇಡೀ ಸಿನೆಮಾ ಹ್ಯಾಂಡ್‌ಹೆಲ್ಡ್ (ಕೈಯಲ್ಲೇ ಹಿಡಿದು) ಶೈಲಿಯಲ್ಲೇ ಇರಬೇಕು. ಕ್ಯಾಮೆರಾ ನಟರನ್ನು ಹುಡುಕಿಕೊಂಡು ಹೋಗಬಾರದು, ಅದರ ವ್ಯಾಪ್ತಿಯ ಒಳಗೆ ನಟರೇ ಬಂದು ಅಭಿನಯಿಸಬೇಕು.
4. ಯಾವುದೇ ಕೃತಕ ಲೈಟಿಂಗ್ ವ್ಯವಸ್ಥೆ ಅಥವಾ ಶೂಟಿಂಗ್ ಲೈಟ್‌ಗಳ ಬಳಕೆ ನಿಷಿದ್ಧ. ಸೂರ್ಯನ ಬೆಳಕು ಅಥವಾ ಆ ಸ್ಥಳದಲ್ಲಿ ಮೊದಲೇ ಇರುವ ಬಲ್ಬ್ ಬೆಳಕಿನಲ್ಲೇ ಶೂಟ್ ಮಾಡಬೇಕು. ಬೆಳಕು ತೀರಾ ಕಡಿಮೆ ಇದ್ದರೆ ಆ ದೃಶ್ಯವನ್ನೇ ಕೈಬಿಡಬೇಕು; ಅತ್ಯಂತ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕ್ಯಾಮೆರಾಗೆ ಒಂದೇ ಒಂದು ಸಣ್ಣ ಲೈಟ್ ಜೋಡಿಸಿಕೊಳ್ಳಬಹುದು.
5. ಕ್ಯಾಮೆರಾ ಲೆನ್ಸ್‌ಗಳಿಗೆ ಯಾವುದೇ ರೀತಿಯ ಸ್ಪೆಷಲ್ ಎಫೆಕ್ಟ್ ಫಿಲ್ಟರ್‌ಗಳನ್ನು ಬಳಸುವಂತಿಲ್ಲ. ಕಣ್ಣಿಗೆ ಕಾಣುವ ದೃಶ್ಯವನ್ನು ಹಾಗೇ ಕಚ್ಚಾ ಸೆರೆಹಿಡಿಯಬೇಕು.
6. ಕೇವಲ ಪ್ರೇಕ್ಷಕರನ್ನು ರಂಜಿಸಲೆಂದೇ ಇಡುವ ಅನಗತ್ಯ ಕೊಲೆಗಳು, ಆಯುಧಗಳ ಬಳಕೆ ಅಥವಾ ಭೀಕರ ಅಪಘಾತಗಳಿಗೆ ಇಲ್ಲಿ ಜಾಗವಿಲ್ಲ.
7. ಸಿನೆಮಾ ಪ್ರಸ್ತುತ ಕಾಲಘಟ್ಟದಲ್ಲೇ ನಡೆಯಬೇಕು. ಕಥೆ ‘ಇಲ್ಲಿ ಮತ್ತು ಈಗ’ ಎನ್ನುವ ತತ್ವಕ್ಕೆ ಬದ್ಧವಾಗಿರಬೇಕು. ಭೂತಕಾಲಕ್ಕೆ ಕರೆದೊಯ್ಯುವ ಫ್ಲ್ಯಾಶ್‌ಬ್ಯಾಕ್‌ಗಳಾಗಲಿ ಅಥವಾ ಭವಿಷ್ಯತ್ತಿನ ಕಲ್ಪನೆಗಳಾಗಲಿ ಸಿನೆಮಾದಲ್ಲಿ ಇರಬಾರದು.
8. ಸಿನೆಮಾ ಹಾರರ್, ಆಕ್ಷನ್ ಅಥವಾ ರೊಮ್ಯಾಂಟಿಕ್ ಥ್ರಿಲ್ಲರ್‌ನಂತಹ ಯಾವುದೇ ನಿರ್ದಿಷ್ಟ ಶೈಲಿಯ ಪ್ರಕಾರಕ್ಕೆ (Genre) ಒಳಪಡುವಂತಿಲ್ಲ.
9. ಚಿತ್ರದ ಅಂತಿಮ ಸ್ವರೂಪವು ಅಕಾಡೆಮಿ 35mm ಫಿಲ್ಮ್‌ನಲ್ಲಿರಬೇಕು (ಆರಂಭದಲ್ಲಿ ಸಣ್ಣ ಡಿಜಿಟಲ್ ಕ್ಯಾಮೆರಾಗಳಲ್ಲಿ ಶೂಟ್ ಮಾಡಿದರೂ, ಅಂತಿಮವಾಗಿ ಅದನ್ನು ಫಿಲ್ಮ್‌ಗೆ ವರ್ಗಾಯಿಸುವುದು ಕಡ್ಡಾಯವಾಗಿತ್ತು).
10. ಸಿನೆಮಾದ ಆರಂಭದಲ್ಲಾಗಲಿ ಅಥವಾ ಮುಕ್ತಾಯದಲ್ಲಾಗಲಿ ನಿರ್ದೇಶಕರ ಹೆಸರು ಬರುವಂತಿಲ್ಲ. ನಿರ್ದೇಶಕನು ಕೇವಲ ಕಥೆಯನ್ನು ದಾಟಿಸುವ ಮಾಧ್ಯಮವಷ್ಟೇ, ಅವನೇ ಕಲೆಯ ಮಾಲೀಕನಲ್ಲ ಎಂಬುದು ಇದರ ಆಶಯ.
ಯಾವುದೇ ಒಬ್ಬ ನಿರ್ದೇಶಕ ತನ್ನ ಚಿತ್ರವನ್ನು ಅಧಿಕೃತ ಡಾಗ್ಮ ಸಿನೆಮಾ ಎಂದು ಘೋಷಿಸಿಕೊಳ್ಳಲು ಕೇವಲ ನಿಯಮ ಪಾಲಿಸಿದರೆ ಸಾಲುತ್ತಿರಲಿಲ್ಲ. ಚಿತ್ರೀಕರಣದ ನಂತರ ಕೋಪನ್ ಹ್ಯಾಗನ್‌ನಲ್ಲಿದ್ದ ಡಾಗ್ಮ ಸೆಕ್ರೆಟರಿಯೇಟ್‌ಗೆ ಸಿನೆಮಾವನ್ನು ಕಳುಹಿಸುವುದು ಕಡ್ಡಾಯವಾಗಿತ್ತು. ಅಲ್ಲಿನ ಸಮಿತಿಯು ಚಿತ್ರದ ಪ್ರತಿಯೊಂದು ದೃಶ್ಯವನ್ನೂ ಪರಿಶೀಲಿಸಿ, ಅದು ಹತ್ತೂ ನಿಯಮಗಳಿಗೆ ಬದ್ಧವಾಗಿದೆ ಎಂದು ದೃಢಪಡಿಸಿದ ನಂತರವಷ್ಟೇ ಅಧಿಕೃತ ಡಾಗ್ಮ ಪ್ರಮಾಣಪತ್ರ ಮತ್ತು ಚಳವಳಿಯ ಸರಣಿಯ ಸಂಖ್ಯೆಯನ್ನು ನೀಡಲಾಗುತ್ತಿತ್ತು.

ಈ ಕಠಿಣ ಚೌಕಟ್ಟಿನ ಒಳಗೇ ಜಾಗತಿಕ ಚಿತ್ರರಂಗವನ್ನು ಬೆಚ್ಚಿಬೀಳಿಸಿದ ಸಿನೆಮಾಗಳು ಮೂಡಿಬಂದವು. ಥಾಮಸ್ ವಿಂಟರ್‌ಬರ್ಗ್ ನಿರ್ದೇಶಿಸಿದ ‘ಫೆಸ್ಟನ್’ (The Celebration, 1998) ಚಳವಳಿಯ ಮೊದಲ ಚಿತ್ರ. ಶ್ರೀಮಂತ ಕುಟುಂಬವೊಂದರ ಆಚರಣೆಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ಸಂಭ್ರಮದ ಆಡಂಬರದ ನಡುವೆಯೇ ಕರಗುವ ಕೃತಕ ಮುಖವಾಡಗಳನ್ನು ಮತ್ತು ಕರಾಳ ರಹಸ್ಯಗಳನ್ನು ಬಯಲು ಮಾಡುತ್ತದೆ. 1998ರ ಕಾನ್ ಚಲನಚಿತ್ರೋತ್ಸವದಲ್ಲಿ ‘ಜ್ಯೂರಿ ಪ್ರಶಸ್ತಿ’ ಪಡೆದ ಈ ಚಿತ್ರದ ಬೆನ್ನಲ್ಲೇ ಲಾರ್ಸ್ ವಾನ್ ಟ್ರೈಯರ್ ಅವರ ‘ದಿ ಇಡಿಯಟ್ಸ್’ (The Idiots, 1998) ತೆರೆಕಂಡಿತು. ಸಮಾಜದ ರೂಢಿಗತ ಶಿಸ್ತನ್ನು ಕೆಣಕಲು ಬುದ್ಧಿಮಾಂದ್ಯರಂತೆ ನಟಿಸುವ ಒಂದು ಗುಂಪಿನ ಸುತ್ತ ಸಾಗುವ ಈ ಸಿನೆಮಾ, ತನ್ನ ನಿಷ್ಠುರ ನಿರೂಪಣೆ ಮತ್ತು ಯಾವುದೇ ಮುಚ್ಚುಮರೆಯಿಲ್ಲದ ಲೈಂಗಿಕ ದೃಶ್ಯಗಳ ಕಾರಣಕ್ಕಾಗಿ ಹಲವು ದೇಶಗಳಲ್ಲಿ ನಿಷೇಧ ಹಾಗೂ ಸೆನ್ಸಾರ್‌ಶಿಪ್ ಎದುರಿಸಿತು.
ಇದನ್ನು ಓದಿದ್ದೀರಾ?: A Foggy Tale: ಇತಿಹಾಸದ ಮಂಜಿನೊಳಗೆ ಮಾನವೀಯತೆಯ ಹುಡುಕಾಟ
ಆದರೆ, ಇವೆರಡೂ ಚಿತ್ರಗಳು ಜಾಗತಿಕ ಸ್ವತಂತ್ರ ನಿರ್ದೇಶಕರಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದವು. ಸಿನೆಮಾ ಮಾಡಲು ಭವ್ಯವಾದ ಸೆಟ್‌ಗಳು, ದೊಡ್ಡ ಬಜೆಟ್ ಅಥವಾ ತಂತ್ರಜ್ಞಾನದ ಆಡಂಬರ ಅನಿವಾರ್ಯವಲ್ಲ, ಒಂದು ಗಟ್ಟಿ ಕಥೆ, ನಟರ ಸಹಜ ಅಭಿನಯ ಮತ್ತು ಮಿತಿಗಳ ನಡುವೆಯೇ ದೃಶ್ಯ ಕಟ್ಟುವ ಸಿನೆಮ್ಯಾಟಿಕ್ ಜಾಣ್ಮೆಯಷ್ಟೇ ಸಾಕು ಎಂಬುದನ್ನು ಈ ಕೃತಿಗಳು ಮುಂಚೂಣಿಗೆ ತಂದವು.
ಇಲ್ಲಿನ ವಿರೋಧಾಭಾಸವೆಂದರೆ, ಈ ನಿಯಮಗಳನ್ನು ರೂಪಿಸಿದ ನಿರ್ದೇಶಕರೇ ಕೆಲವು ಸಂದರ್ಭಗಳಲ್ಲಿ ತಾವೇ ವಿಧಿಸಿಕೊಂಡ ಚೌಕಟ್ಟುಗಳನ್ನು ಮೀರಿದ್ದರು. ಆದರೆ, ಹಾಗೆ ನಿಯಮ ಮುರಿದಾಗ ಅದನ್ನು ಮರೆಮಾಚದೆ ಪ್ರೇಕ್ಷಕರ ಮುಂದೆ ಅಧಿಕೃತವಾಗಿ ಒಪ್ಪಿಕೊಂಡು ‘ತಪ್ಪೊಪ್ಪಿಗೆ’ (Confession) ಪತ್ರಗಳನ್ನು ಪ್ರಕಟಿಸುವುದು ಅವರಿಗೆ ಕಡ್ಡಾಯವಾಗಿತ್ತು.
ಉದಾಹರಣೆಗೆ, ‘ಫೆಸ್ಟನ್’ ಚಿತ್ರೀಕರಣದ ವೇಳೆ ಥಾಮಸ್ ವಿಂಟರ್‌ಬರ್ಗ್ ಒಂದು ದೃಶ್ಯದಲ್ಲಿ ಕಿಟಕಿಗೆ ಪರದೆಯೊಂದನ್ನು ಬಳಸಿದ್ದರು. ಅದು ಆ ಸ್ಥಳದಲ್ಲಿ ಮೊದಲೇ ಇರಲಿಲ್ಲ ಎಂಬುದನ್ನು ಮುಚ್ಚಿಡದ ಅವರು, ದೃಶ್ಯದ ಸೌಂದರ್ಯಕ್ಕಾಗಿ ನಿಯಮ ಮುರಿದದ್ದನ್ನು ತನ್ನ ಪಾಪನಿವೇದನೆಯಲ್ಲಿ ದಾಖಲಿಸಿದರು. ಹಾಗೆಯೇ, ಲಾರ್ಸ್ ವಾನ್ ಟ್ರೈಯರ್ ಕೂಡ ‘ದಿ ಇಡಿಯಟ್ಸ್’ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಬಳಸಬಾರದು ಎಂಬ ನಿಯಮವಿದ್ದರೂ, ಒಂದು ದೃಶ್ಯದಲ್ಲಿ ಕೃತಕವಾಗಿ ಆಡಿಯೋ ಎಫೆಕ್ಟ್ ಸೇರಿಸಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡರು. ನಿಯಮಗಳನ್ನು ತಾವೇ ಮುರಿದಾಗಲೂ ಅದನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದ ಇಂತಹ ನಡೆಗಳು, ಈ ಚಳವಳಿಯ ಹಿಂದಿದ್ದ ಕಲಾತ್ಮಕ ಪ್ರಾಮಾಣಿಕತೆಗೆ ಸಾಕ್ಷಿಯಾಗಿವೆ.

ಡಾಗ್ಮ 95 ಚಳವಳಿಯ ಒಡಲಿಂದ ಜಗತ್ತಿನಾದ್ಯಂತ ಮೂಡಿಬಂದದ್ದು 35 ಸಿನೆಮಾಗಳು ಮಾತ್ರ. ಹಾರ್ಮೋನಿ ಕೊರಿನ್ ನಿರ್ದೇಶನದ ‘ಜುಲಿಯನ್ ಡಾಂಕಿ-ಬಾಯ್’ ಮತ್ತು ಲೋನ್ ಶೆರ್‌ಫಿಗ್ ಅವರ ‘ಇಟಾಲಿಯನ್ ಫಾರ್ ಬಿಗಿನರ್ಸ್’ ಈ ಚಳವಳಿಯ ಮುಖ್ಯ ಕೃತಿಗಳು. ಕಲೆಯ ಇತಿಹಾಸವನ್ನು ಗಮನಿಸಿದರೆ, ಸಾಂಪ್ರದಾಯಿಕ ಚೌಕಟ್ಟುಗಳನ್ನು ಧಿಕ್ಕರಿಸಿದ ಇಪ್ಪತ್ತನೇ ಶತಮಾನದ ‘ದಾದಾಇಸಮ್’ (Dadaism) ಚಳವಳಿಯ ತಾತ್ವಿಕತೆಗೆ ಡಾಗ್ಮ ಸಿದ್ಧಾಂತವು ಅತ್ಯಂತ ಹತ್ತಿರವಾಗುತ್ತದೆ. ದಾದಾ ಚಳವಳಿಯು ಅಂದಿನ ಸಾಂಪ್ರದಾಯಿಕ ಕಲೆಯಲ್ಲಿದ್ದ ಸ್ಥಾಪಿತ ಮೌಲ್ಯಗಳನ್ನು ವಿರೋಧಿಸಿದಂತೆಯೇ, ಡಾಗ್ಮ ಕೂಡ ಸಿನೆಮಾದ ಆಡಂಬರದ ಸೌಂದರ್ಯದ ಮಾದರಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ಡಾಗ್ಮ ಚಳವಳಿಯು ದಾದಾಇಸಮ್‌ನಂತೆಯೇ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಬಂಡಾಯ ಎದ್ದಿದ್ದರೂ, ಅದು ಅರಾಜಕತೆಯನ್ನು ನಂಬಲಿಲ್ಲ; ಕಟ್ಟುನಿಟ್ಟಾದ ತಾತ್ವಿಕ ಚೌಕಟ್ಟು ಮತ್ತು ಕಠಿಣ ನಿಯಮಗಳ ಶಿಸ್ತನ್ನೇ ತನ್ನ ಶಕ್ತಿಯಾಗಿಸಿಕೊಂಡಿತು. ಈ ಸಿದ್ಧಾಂತದ ಪ್ರಕಾರ, ಸಿನೆಮಾ ಎಂದರೆ ಕೃತಕವಾಗಿ ಜೋಡಿಸಿದ ದೃಶ್ಯ ವೈಭವವಲ್ಲ, ಅದು ಮನುಷ್ಯನ ಸಹಜ ಸ್ಥಿತಿಯನ್ನು ಮತ್ತು ಜಗತ್ತಿನ ವಾಸ್ತವವನ್ನು ಯಾವುದೇ ನಯನಾಜೂಕಿಲ್ಲದೆ ಸೆರೆಹಿಡಿಯುವ ಮಾಧ್ಯಮ.
ಈ ಚಳವಳಿಯ ಆಲೋಚನಾ ಕ್ರಮ ಭಾರತೀಯ ಚಿತ್ರರಂಗವನ್ನೂ ತಲುಪಿತು. ಡೆನ್ಮಾರ್ಕ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ನಿರ್ದೇಶಕ ವಿನೋದ್ ಭರತನ್, ಡಾಗ್ಮ 95ರ ಕಟ್ಟುನಿಟ್ಟಾದ ಶರತ್ತುಗಳಡಿಯಲ್ಲೇ ಮಲಯಾಳಂ ಭಾಷೆಯ ‘ಕರ್ಮ ಕಾರ್ಟೆಲ್’ (Karma Cartel, 2015) ಚಿತ್ರವನ್ನು ರೂಪಿಸಿದರು. ಕೃತಕ ಬೆಳಕು, ಹಿನ್ನೆಲೆ ಸಂಗೀತ ಅಥವಾ ಸ್ಟುಡಿಯೋ ಸೆಟ್‌ಗಳ ಅಬ್ಬರವಿಲ್ಲದೆ ಅಪ್ಪಟ ನೈಜ ಪರಿಸರದಲ್ಲೇ ಶೂಟ್ ಮಾಡಲಾದ ಈ ಸಿನೆಮಾ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ತೀವ್ರ ಚರ್ಚೆಗೆ ಒಳಗಾಯಿತು.

ಈ ಸಣ್ಣ ಬಜೆಟ್‌ನ ಡಿಜಿಟಲ್ ಪ್ರಯೋಗಗಳು ಹಾಲಿವುಡ್‌ನ ಮುಖ್ಯವಾಹಿನಿಯ ಸಿನೆಮಾ ಸೌಂದರ್ಯಶಾಸ್ತ್ರವನ್ನು ತಲ್ಲಣಗೊಳಿಸಿದವು. ಮೈಕೇಲ್ ಮನ್ ಅವರ ‘ಕೊಲ್ಯಾಟೆರಲ್’ (Collateral) ಮತ್ತು ಡೇವಿಡ್ ಲಿಂಚ್ ಅವರ ‘ಇನ್‌ಲ್ಯಾಂಡ್ ಎಂಪೈರ್’ (Inland Empire)ನಂತಹ ಕೃತಿಗಳು ಡಿಜಿಟಲ್ ಮಾಧ್ಯಮವನ್ನು ಮುಕ್ತವಾಗಿ ಸ್ವೀಕರಿಸಿದ್ದರ ಹಿಂದೆ ಡಾಗ್ಮ ಸೃಷ್ಟಿಸಿದ ದೃಶ್ಯ ಸೌಂದರ್ಯಶಾಸ್ತ್ರದ ಪ್ರಭಾವವಿತ್ತು. ಇದೇ ಧಾಟಿಯಲ್ಲಿ ಮೂಡಿಬಂದ ‘ದಿ ಬ್ಲೇರ್ ವಿಚ್ ಪ್ರಾಜೆಕ್ಟ್’ (The Blair Witch Project, 1999) ಚಿತ್ರದ ಹ್ಯಾಂಡ್‌ಹೆಲ್ಡ್ ಕ್ಯಾಮೆರಾ ಶೈಲಿ ಮತ್ತು ಕಚ್ಚಾ ದೃಶ್ಯರಚನೆ, ತಾಂತ್ರಿಕವಾಗಿ ಡಾಗ್ಮ ಸಿದ್ಧಾಂತದ ವಿಸ್ತರಣೆಯಂತೆಯೇ ಕಾಣುತ್ತದೆ.
ಇದನ್ನು ಓದಿದ್ದೀರಾ?: ಜಾಗತಿಕ ಚಿತ್ರರಂಗಕ್ಕೆ ‘ವಾಸ್ತವ’ದ ಹೊಸ ದೃಷ್ಟಿಕೋನ ನೀಡಿದ ಗ್ಲೌಬರ್ ರೋಚಾ ಸಿನೆಮಾಗಳು
ನಿರ್ದೇಶಕನಿಗೆ ಯಾವುದೇ ಮನ್ನಣೆ (Credit) ಇರಬಾರದು ಎಂದು ಡಾಗ್ಮ 95ರ ಹತ್ತನೇ ನಿಯಮವು ಸ್ಪಷ್ಟಪಡಿಸಿದ್ದರೂ, ಪ್ರಾಯೋಗಿಕವಾಗಿ ಈ ಚಳವಳಿ ಲಾರ್ಸ್ ವಾನ್ ಟ್ರೈಯರ್ ಮತ್ತು ಥಾಮಸ್ ವಿಂಟರ್‌ಬರ್ಗ್ ಅವರ ವೈಯಕ್ತಿಕ ಪ್ರಚಾರದ ಅಸ್ತ್ರವಾಗಿಯೇ ಬಳಕೆಯಾಯಿತು. ಆದರೆ, ಈ ಚಳವಳಿಯ ಕಟ್ಟುನಿಟ್ಟಾದ ಮಿತಿಗಳೇ ಕೆಲವು ಪ್ರಮುಖ ಮಹಿಳಾ ನಿರ್ದೇಶಕರಿಗೆ ವಿಮೋಚನಾತ್ಮಕ ಹಾದಿಯನ್ನು ಸೃಷ್ಟಿಸಿಕೊಟ್ಟವು ಎನ್ನುವುದು ಚಲನಚಿತ್ರ ಇತಿಹಾಸದ ಒಂದು ಪ್ರಮುಖ ತಾತ್ವಿಕ ಆಯಾಮ. ಸುಸೇನ್ ಬೈರ್ ನಿರ್ದೇಶನದ ‘ಓಪನ್ ಹಾರ್ಟ್ಸ್’ (Open Hearts, 2002) ಮತ್ತು ನಟಾಶ ಆರ್ತಿ ಅವರ ‘ಓಲ್ಡ್, ನ್ಯೂ, ಬಾರೋಡ್ ಅಂಡ್ ಬ್ಲೂ’ (2003) ಚಿತ್ರಗಳು ಇದನ್ನು ಸ್ಪಷ್ಟಪಡಿಸುತ್ತವೆ. ಮುಖ್ಯವಾಹಿನಿಯ ಪುರುಷಪ್ರಧಾನ ತಾಂತ್ರಿಕ ಆಡಂಬರ ಹಾಗೂ ಬೃಹತ್ ಬಜೆಟ್‌ಗಳ ಅವಲಂಬನೆಯಿಂದ ಮುಕ್ತವಾಗಿ, ಕೇವಲ ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧಗಳನ್ನು ದೃಶ್ಯೀಕರಿಸಲು ಈ ಮಹಿಳಾ ನಿರ್ದೇಶಕರಿಗೆ ಡಾಗ್ಮದ ಚೌಕಟ್ಟುಗಳು ಸ್ವಾಯತ್ತತೆಯನ್ನು ನೀಡಿದವು. ಆದಾಗ್ಯೂ, ಚಳವಳಿಯ ಮೂಲ ಆಶಯಕ್ಕೆ ವಿರುದ್ಧವಾಗಿ ಇಂದಿಗೂ ಡಾಗ್ಮ ಪರಂಪರೆ ಎಂದರೆ ಕೇವಲ ವಾನ್ ಟ್ರೈಯರ್ ಮತ್ತು ವಿಂಟರ್‌ಬರ್ಗ್ ಅವರ ಹೆಸರುಗಳಷ್ಟೇ ಮುನ್ನೆಲೆಗೆ ಬರುವುದು ಈ ಸಿದ್ಧಾಂತದೊಳಗಿನ ದೊಡ್ಡ ವಿರೋಧಾಭಾಸ.

ಡಾಗ್ಮ 95ರ ಅಧಿಕೃತ ಸಿನೆಮಾಗಳ ಪ್ರಮಾಣೀಕರಣ ಪ್ರಕ್ರಿಯೆ ಸ್ಥಗಿತಗೊಂಡಿರಬಹುದು, ಆದರೆ ಆ ಚಳವಳಿ ರೂಪಿಸಿದ ತಾತ್ವಿಕ ಚೌಕಟ್ಟು ಇಂದಿನ ಜಾಗತಿಕ ಸ್ವತಂತ್ರ ಚಿತ್ರರಂಗದಲ್ಲಿ ಹೊಸ ಆಲೋಚನೆಗಳನ್ನು ಜಾಗೃತಗೊಳಿಸುತ್ತಲೇ ಇದೆ. ಅಂದು ಲಾರ್ಸ್ ವಾನ್ ಟ್ರೈಯರ್ ಮುನ್ಸೂಚಿಸಿದ ‘ಸಿನಿಮಾದ ಪ್ರಜಾಪ್ರಭುತ್ವೀಕರಣ’ (Democratization of Cinema) ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ವಾಸ್ತವಕ್ಕೆ ಹತ್ತಿರವಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಿನೆಮಾದ ಅಸಲಿ ಶಕ್ತಿ ಇರುವುದು ತಾಂತ್ರಿಕ ಆಡಂಬರದಲ್ಲಲ್ಲ, ಮನುಷ್ಯ ಸಹಜ ಸತ್ಯದ ದೃಶ್ಯೀಕರಣದಲ್ಲಿ ಎಂಬ ಸತ್ಯವನ್ನು ದಾಖಲಿಸಿದ್ದೇ ಡಾಗ್ಮ ಚಳವಳಿ ಚಿತ್ರರಂಗಕ್ಕೆ ನೀಡಿದ ಅತ್ಯಂತ ಪ್ರಮುಖ ಕೊಡುಗೆ.
ಡಾಗ್ಮ 95 ಚಳವಳಿಯು ಆರಂಭವಾದ ಹತ್ತನೇ ವರ್ಷಕ್ಕೆ, ಅಂದರೆ 2005ರಲ್ಲಿ ಅಧಿಕೃತವಾಗಿ ಮುಕ್ತಾಯಗೊಂಡಿತು. ಈ ನಿರ್ಧಾರದ ಹಿಂದೆ ಯಾವುದೇ ಕಲಾತ್ಮಕ ಭಿನ್ನಾಭಿಪ್ರಾಯಗಳಿರಲಿಲ್ಲ, ಅದು ಚಳವಳಿಯ ಆಶಯಕ್ಕೆ ಪೂರಕವಾದ ಪ್ರಕ್ರಿಯೆಯಷ್ಟೇ ಆಗಿತ್ತು. ಸಂಸ್ಥಾಪಕರು ಅಧಿಕೃತ ಪ್ರಮಾಣೀಕರಣ ಪ್ರಕ್ರಿಯೆಯನ್ನು ನಿಲ್ಲಿಸಲು ಸ್ಪಷ್ಟ ಕಾರಣಗಳಿದ್ದವು. ತಾವು ರೂಪಿಸಿದ ಹತ್ತು ಕಟ್ಟುನಿಟ್ಟಾದ ನಿಯಮಗಳು ಕಾಲಕ್ರಮೇಣ ಚಲನಚಿತ್ರಕಾರರ ಸೃಜನಶೀಲತೆಗೆ ಹೊಸ ಸಾಧ್ಯತೆಗಳನ್ನು ಕೊಡುವುದರ ಬದಲು, ಅವರ ಮುಕ್ತ ಆಲೋಚನೆಗಳನ್ನು ನಿರ್ಬಂಧಿಸುವ ಮತ್ತೊಂದು ಸಾಂಪ್ರದಾಯಿಕ ಚೌಕಟ್ಟಾಗಿ ಬದಲಾಗುತ್ತಿರುವುದನ್ನು ಲಾರ್ಸ್ ವಾನ್ ಟ್ರೈಯರ್ ಮತ್ತು ವಿಂಟರ್‌ಬರ್ಗ್ ಮನಗಂಡರು. ನಿಯಮಗಳೇ ಸಿನೆಮಾಕ್ಕಿಂತ ದೊಡ್ಡದಾಗಬಾರದು ಎಂಬುದು ಅವರ ನಿಲುವಾಗಿತ್ತು. ಇದೇ ಸಮಯದಲ್ಲಿ, ಅಂದು ಅವರು ಸಾರಿದ್ದ ಡಿಜಿಟಲ್ ಕ್ರಾಂತಿ ಮತ್ತು ಸಿನೆಮಾದ ಪ್ರಜಾಪ್ರಭುತ್ವೀಕರಣ 2005ರ ವೇಳೆಗೆ ಜಾಗತಿಕವಾಗಿ ಯಶಸ್ವಿಯಾಗಿತ್ತು. ಅಗ್ಗದ ಡಿಜಿಟಲ್ ಕ್ಯಾಮೆರಾಗಳು ಜಗತ್ತಿನಾದ್ಯಂತ ಸ್ವತಂತ್ರ ನಿರ್ದೇಶಕರಿಗೆ ಸುಲಭವಾಗಿ ಲಭ್ಯವಾಗತೊಡಗಿದ್ದವು. ತಾವು ಉದ್ದೇಶಿಸಿದ್ದ ಕಲಾತ್ಮಕ ಬಂಡಾಯ ಈಗಾಗಲೇ ಘಟಿಸಿ ಮುಗಿದಿದೆ ಎಂದು ಅರಿತ ನಿರ್ದೇಶಕರು, ‘ಡಾಗ್ಮ ತನ್ನ ಉದ್ದೇಶವನ್ನು ತಲುಪಿದೆ’ ಎಂದು ಘೋಷಿಸಿ ಅಧಿಕೃತ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದರು.
ಇದನ್ನು ಓದಿದ್ದೀರಾ?: ಅಕಿರಾ ಕುರೊಸಾವಾನ ‘ಡೆರ್ಸು ಉಜಾಲಾ’ ಎಂಬ ಕಾಡಿನ ಸಂತನೂ, ಕಾಡುವ ಚಿತ್ರವೂ
ಹೀಗೆ ಅಧಿಕೃತ ಪ್ರಮಾಣೀಕರಣ ಪ್ರಕ್ರಿಯೆ ಸ್ಥಗಿತಗೊಂಡರೂ, ಆ ಚಳವಳಿ ಸೃಷ್ಟಿಸಿದ ತಾತ್ವಿಕ ಚೌಕಟ್ಟು ಇಂದಿಗೂ ಪ್ರಸ್ತುತವಾಗಿದೆ. ಅಂದು ಡಾಗ್ಮ ತಾಂತ್ರಿಕತೆಯ ಅತಿರೇಕದ ವಿರುದ್ಧ ಬಂಡಾಯ ಎದ್ದಿದ್ದರೆ, ಇಂದು ಇಡೀ ಚಿತ್ರರಂಗವನ್ನು ಅಲ್ಗಾರಿದಮ್ ಮತ್ತು ಕೃತಕ ಬುದ್ಧಿಮತ್ತೆಯ (AI) ನಿರಂಕುಶಾಧಿಕಾರ ಆವರಿಸಿಕೊಳ್ಳುತ್ತಿದೆ. ಕಥೆಯ ಸ್ವರೂಪ ಮತ್ತು ಸೃಜನಶೀಲತೆಯನ್ನು ಮನುಷ್ಯರಿಗಿಂತ ಹೆಚ್ಚಾಗಿ ತಂತ್ರಜ್ಞಾನವೇ ನಿರ್ಣಯಿಸುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ, ಮನುಷ್ಯನ ಸ್ವಾಯತ್ತತೆಯನ್ನು ರಕ್ಷಿಸಲು ಹೊಸ ತಲೆಮಾರಿನ ನಿರ್ದೇಶಕರು ಹಾಗೂ ಲೋನ್ ಶೆರ್‌ಫಿಗ್ ಅವರಂತಹ ಹಿರಿಯ ಒಡನಾಡಿಗಳು ಒಟ್ಟಾಗಿ ‘ಡಾಗ್ಮ 25’ ಆಂದೋಲನವನ್ನು ರೂಪಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಹಸ್ತಕ್ಷೇಪವಿಲ್ಲದ ಕೈಬರಹದ ಚಿತ್ರಕಥೆ ಹಾಗೂ ಮನುಷ್ಯರ ನಡುವಿನ ನೇರ ಒಡನಾಟವನ್ನೇ ನಂಬಿರುವ ಈ ಹೊಸ ಪ್ರತಿರೋಧಕ್ಕೆ ಮೂಲ ಸಂಸ್ಥಾಪಕರಾದ ಲಾರ್ಸ್ ವಾನ್ ಟ್ರೈಯರ್ ಮತ್ತು ವಿಂಟರ್‌ಬರ್ಗ್ ಅವರ ತಾತ್ವಿಕ ಬೆಂಬಲವೂ ದಕ್ಕಿದೆ.
ಇಂಟರ್ನೆಟ್‌ನಿಂದ ದೂರ ಸರಿದು, ಕೃತಕ ಬುದ್ಧಿಮತ್ತೆಯ ಅಧೀನಕ್ಕೊಳಗಾಗದೆ ಕೇವಲ ಕೈಬರಹದ ಚಿತ್ರಕಥೆ ಹಾಗೂ ಮನುಷ್ಯರ ನಡುವಿನ ನೇರ ಒಡನಾಟವನ್ನೇ ನಂಬಿರುವ ‘ಡಾಗ್ಮ 25’ ಕೇವಲ ಒಂದು ಕ್ಷಣಿಕ ಡಿಜಿಟಲ್ ಟ್ರೆಂಡ್ ಅಲ್ಲ. ಅದು ಇಡೀ ಮಾನವ ಸೃಜನಶೀಲತೆಯನ್ನು ಅಲ್ಗಾರಿದಮ್‌ಗಳು ನಿಯಂತ್ರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಮನುಷ್ಯನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ರೂಪಿಸಲಾದ ಒಂದು ಕಟ್ಟುನಿಟ್ಟಾದ ಪ್ರತಿರೋಧದ ಪ್ರಣಾಳಿಕೆ. ಕಾಲ ಮತ್ತು ಮಾಧ್ಯಮ ಬದಲಾಗಿದ್ದರೂ, ಸಿನೆಮಾದ ಸೌಂದರ್ಯಶಾಸ್ತ್ರವು ತಾಂತ್ರಿಕ ಭ್ರಮೆಯ ಆಚೆಗಿನ ಮನುಷ್ಯನ ಸಹಜ ಅಸ್ತಿತ್ವದಲ್ಲೇ ಅಡಗಿದೆ ಎಂಬುದು ಈ ಎರಡೂ ಚಳವಳಿಗಳ ಮೂಲ ನಿಲುವು. ಯಾಂತ್ರಿಕ ಆಡಂಬರದ ವಿರುದ್ಧ ನಿಲ್ಲುವ ಈ ಹೊಸ ಕಲಾತ್ಮಕ ಬಂಡಾಯದ ಹಿಂದಿನ ತಾತ್ವಿಕ ಶರತ್ತುಗಳು ಹೀಗಿವೆ:
1. ಚಲನಚಿತ್ರದ ಚಿಂತನೆ, ಬರವಣಿಗೆ ಅಥವಾ ಚರ್ಚೆಯ ಯಾವುದೇ ಹಂತದಲ್ಲಿ ಇಂಟರ್ನೆಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಡೀ ಪ್ರಕ್ರಿಯೆಯು ಭೌತಿಕ ಜಗತ್ತಿನ ಮನುಷ್ಯರ ನಡುವಿನ ನೇರ ಸಂವಾದದಲ್ಲೇ ಘಟಿಸಬೇಕು.
2. ಕಥೆ ಮತ್ತು ಚಿತ್ರಕಥೆಯನ್ನು ಕಡ್ಡಾಯವಾಗಿ ಕೈಯಲ್ಲೇ ಬರೆಯಬೇಕು. ಕಂಪ್ಯೂಟರ್ ಟೈಪಿಂಗ್, ಡಿಜಿಟಲ್ ಸಾಫ್ಟ್‌ವೇರ್ ಅಥವಾ ಯಾವುದೇ AI ಪರಿಕರಗಳಿಗೆ ಇಲ್ಲಿ ಅವಕಾಶವಿಲ್ಲ.
3. ಸಿನೆಮಾದ ಕನಿಷ್ಠ ಅರ್ಧದಷ್ಟು ಭಾಗ ಯಾವುದೇ ಸಂಭಾಷಣೆ ಇಲ್ಲದೆ, ಕೇವಲ ಕಣ್ಣಿಗೆ ಕಾಣುವ ದೃಶ್ಯಗಳ ಮೂಲಕವೇ ಕಥೆಯನ್ನು ದಾಟಿಸಬೇಕು.
4. ಕ್ಯಾಮೆರಾದ ಹಿಂದೆ ಕೆಲಸ ಮಾಡುವ ತಾಂತ್ರಿಕ ತಂಡದ ಸದಸ್ಯರ ಸಂಖ್ಯೆ ಹತ್ತನ್ನು ಮೀರುವಂತಿಲ್ಲ.
5. ಚಿತ್ರೀಕರಣದ ನಂತರದ ಹಂತದಲ್ಲಿ ದೃಶ್ಯಗಳನ್ನು ಡಿಜಿಟಲ್ ಆಗಿ ಕ್ರಾಪ್ ಮಾಡುವುದು, ಝೂಮ್ ಮಾಡುವುದು ಅಥವಾ ಬಣ್ಣ ಬದಲಾಯಿಸುವುದನ್ನು (Color grading) ಸಂಪೂರ್ಣವಾಗಿ ನಿಷೇಧಿಸಲಾಗಿದೆ.
6. ದೃಶ್ಯದ ಜೊತೆಯಲ್ಲೇ ಸ್ಥಳದಲ್ಲಿ ದಾಖಲಾಗುವ ಧ್ವನಿಯನ್ನು ಮಾತ್ರ ಬಳಸಬೇಕು. ಸ್ಟುಡಿಯೋದಲ್ಲಿ ಕೃತಕವಾಗಿ ಸೃಷ್ಟಿಸುವ ಸೌಂಡ್ ಎಫೆಕ್ಟ್‌ಗಳು ಅಥವಾ ಹಿನ್ನೆಲೆ ಸಂಗೀತದ ಆಸ್ಪದವನ್ನು ನಿರಾಕರಿಸಲಾಗಿದೆ.
7. ನಿರ್ದೇಶಕರು ದೃಶ್ಯದ ಚೌಕಟ್ಟನ್ನು (Framing) ಮೊದಲೇ ನಿರ್ಧರಿಸುವಂತಿಲ್ಲ. ಕ್ಯಾಮೆರಾ ಕೇವಲ ನಟರನ್ನು ಹಿಂಬಾಲಿಸಬೇಕು, ನಟರು ತಮಗೆ ಸ್ವಾಭಾವಿಕ ಎನಿಸುವ ಜಾಗದಲ್ಲಿ ಚಲಿಸಲು ಸ್ವತಂತ್ರರು.
8. ಸಿನೆಮಾ ಪ್ರಸ್ತುತ ಜಗತ್ತಿನ ಕಥೆಯನ್ನೇ ಹೇಳಬೇಕು. ಅದು ಇಂದಿನ ವಾಸ್ತವಕ್ಕೆ ಕನ್ನಡಿ ಹಿಡಿಯಬೇಕೇ ಹೊರತು, ಫ್ಯಾಂಟಸಿ ಅಥವಾ ಸೈನ್ಸ್ ಫಿಕ್ಷನ್ ಲೋಕದ ಕಲ್ಪನೆಗಳನ್ನು ಸೃಷ್ಟಿಸುವಂತಿಲ್ಲ.
9. ಚಿತ್ರೀಕರಣಕ್ಕೆ ಡಿಜಿಟಲ್ ಕ್ಯಾಮೆರಾ ಬಳಸಿದರೂ, ಅಂತಿಮವಾಗಿ ಇಡೀ ಸಿನೆಮಾವನ್ನು ಯಾವುದೇ ತಾಂತ್ರಿಕ ಫಿಲ್ಟರ್‌ಗಳಿಲ್ಲದೆ ಅದರ ಅಪ್ಪಟ ಕಚ್ಚಾ (Raw) ರೂಪದಲ್ಲೇ ಪ್ರದರ್ಶಿಸಬೇಕು.
10. ಸಿನೆಮಾದ ಆರಂಭದಲ್ಲಾಗಲಿ ಅಥವಾ ಮುಕ್ತಾಯದಲ್ಲಾಗಲಿ ನಿರ್ದೇಶಕರ ಹೆಸರು ಪರದೆಯ ಮೇಲೆ ಮೂಡುವಂತಿಲ್ಲ. ನಿರ್ದೇಶಕನು ಕೇವಲ ಮಾಧ್ಯಮವಷ್ಟೇ.
ಇದನ್ನು ಓದಿದ್ದೀರಾ?: ಅಮೂರ್ತ ಮತ್ತು ಅಸಂಗತ ಸಿನೆಮಾಗಳು
1995ರ ‘ಡಾಗ್ಮ 95’ ಮತ್ತು ಇಂದಿನ ‘ಡಾಗ್ಮ 25’ ಕೇವಲ ನಿಯಮಗಳ ಪಟ್ಟಿಗಳಲ್ಲ, ಅವು ತಂತ್ರಜ್ಞಾನದ ಅತಿರೇಕಗಳ ನಡುವೆ ಸಿನೆಮ್ಯಾಟಿಕ್ ಅಭಿವ್ಯಕ್ತಿಯನ್ನು ಮರುಸ್ಥಾಪಿಸುವ ಕಲಾತ್ಮಕ ಪ್ರತಿರೋಧಗಳು. ತಾಂತ್ರಿಕ ವೆಚ್ಚದ ಹೆಚ್ಚಳದಿಂದಲೇ ಸಿನೆಮಾಗಳು ಶ್ರೇಷ್ಠವಾಗುವುದಿಲ್ಲ ಎಂಬ ಸತ್ಯವನ್ನು ದಾಖಲಿಸುವ ಇವೆರಡೂ ಆಂದೋಲನಗಳು, ಸೃಜನಶೀಲ ಮಿತಿಗಳ ನಡುವೆಯೇ ಮೂಡುವ ಕಲಾತ್ಮಕ ಪ್ರಾಮಾಣಿಕತೆಯನ್ನು ಮುಂಚೂಣಿಗೆ ತರುತ್ತವೆ.

ಬಾಬು ಈಶ್ವರ್ ಪ್ರಸಾದ್
ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.



