ಹಿಂದಿ ಹೇರಿಕೆಯ ಈ ಕಪಟ ರಾಜಕಾರಣವನ್ನು ಕರ್ನಾಟಕದ ಜನರು ಖಂಡಿಸಬೇಕು. ತ್ರಿಭಾಷಾ ಸೂತ್ರದ ಹೆಸರಿನಲ್ಲಿ ನಮ್ಮ ಮಕ್ಕಳ ಮೇಲೆ ಹಿಂದಿ ಭಾರ ಹೇರಲು ಬಂದವರನ್ನು ತಿರಸ್ಕರಿಸಿ. ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಗೌರವವನ್ನು ರಕ್ಷಿಸಲು ಇದು ಸಮಯ. ಹಿಂದಿ-ಹಿಂದೂ-ಹಿಂದೂಸ್ಥಾನ್‌ನ ಹುನ್ನಾರಕ್ಕೆ ದೇಶ ಬಲಿಯಾಗಬಾರದು.
ಕರ್ನಾಟಕ ಸರ್ಕಾರವು ಎಸ್‌ಎಸ್‌ಎಲ್‌ಸಿ ಹಂತದಲ್ಲಿ ತೃತೀಯ ಭಾಷೆಯಾಗಿ ಹಿಂದಿಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕೆಂಬ ನಿಯಮವನ್ನು ತೆಗೆದುಹಾಕಿದೆ. ಇದರ ಬದಲಿಗೆ ತೃತೀಯ ಭಾಷೆಗೆ ಗ್ರೇಡಿಂಗ್ ನೀಡಲು ತೀರ್ಮಾನಿಸಿದೆ. ಈ ತೀರ್ಮಾನವನ್ನು ಬಹುತೇಕರು ಒಪ್ಪಿಕೊಂಡಿದ್ದಾರೆ. ಕೆಲವರು ಮಾತ್ರ ವಿರೋಧ ಮಾಡುತ್ತಿದ್ದಾರೆ. ಇದರ ಜೊತೆಗೆ ತ್ರಿಭಾಷಾ ಸೂತ್ರ ಎಂಬುದು ದೇಶದ ಏಕತೆಗೆ ಅಗತ್ಯ ಎಂಬ ರೀತಿಯ ವಾದವನ್ನು ಮುಂದಿಡುತ್ತಿದ್ದಾರೆ. ಈ ವಾದ ನಿಜಕ್ಕೂ ಸರಿಯಾಗಿದೆಯಾ? ಇದರಲ್ಲಿ ಏನಾದರೂ ತರ್ಕವಿದೆಯಾ? ಹಿಂದಿ ಭಾಷೆ ಗೊತ್ತಿಲ್ಲದಿದ್ದರೆ ಕನ್ನಡಿಗರು ಕಷ್ಟ ಅನುಭವಿಸಬೇಕಾ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕಿದೆ.
ಭಾರತ ಎಂಬುದು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ. ವಿವಿಧ ಜನರ ಭಾಷೆ, ಸಂಸ್ಕೃತಿ, ವೇಷ-ಭೂಷಣ, ಆಹಾರ ಪದ್ಧತಿ ಎಲ್ಲವನ್ನೂ ಒಳಗೊಂಡು ಏಕತೆಯನ್ನು ನೋಡುತ್ತೇವೆ. ಈಗ ಬಂದಿರುವ ಪ್ರಶ್ನೆ: ಹಿಂದಿಯನ್ನು ನಮ್ಮ ಶಿಕ್ಷಣದಿಂದ ತೆಗೆದರೆ ಏನಾಗುತ್ತದೆ? ತ್ರಿಭಾಷಾ ಸೂತ್ರವೇ ಇಲ್ಲದ ಉತ್ತರ ಭಾರತದ ರಾಜ್ಯಗಳು ಏನನ್ನು ಕಳೆದುಕೊಂಡಿವೆ? ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡ ಕರ್ನಾಟಕ ಏನು ಸಾಧಿಸಿದೆ? ಉತ್ತರದ ರಾಜ್ಯಗಳು ದಕ್ಷಿಣದ ಭಾಷೆಗಳನ್ನು ಏಕೆ ಕಲಿಯುವುದೇ ಇಲ್ಲ? ಹೀಗೆ ಅನೇಕ ಪ್ರಶ್ನೆಗಳನ್ನು ಕರ್ನಾಟಕದಲ್ಲಿ ಹಿಂದಿ ಬೇಕು ಎನ್ನುವವರಿಗೆ ಕೇಳಬೇಕು.
ಮೊದಲನೆಯದಾಗಿ, ತ್ರಿಭಾಷಾ ಸೂತ್ರ ಎಂಬುದೇ ಒಂದು ಐತಿಹಾಸಿಕ ಸುಳ್ಳು. 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಹಿಂದಿ ಭಾಷೆಯನ್ನು ತೀವ್ರವಾಗಿ ಬಳಸುತ್ತಿದೆ ಮತ್ತು ಬಳಸಲು ಉತ್ತೇಜನ ನೀಡುತ್ತಿದೆ. ಹಿಂದಿ ಭಾಷೆಯನ್ನು ಬಳಸಬೇಕೆಂಬ ಸುತ್ತೋಲೆಗಳು, ಕಚೇರಿಯಲ್ಲಿ ಟಿಪ್ಪಣಿಗಳು ಮತ್ತು ಆದೇಶಗಳನ್ನು ಕಳುಹಿಸಿದೆ. ಇದರ ಪರಿಣಾಮವಾಗಿ ಹೆಚ್ಚು ಸದ್ದು ಮಾಡದೆ ಅನೇಕ ಕಡೆಗಳಲ್ಲಿ ಹಿಂದಿ ವಾಮಮಾರ್ಗದ ಮೂಲಕ ಬಂದು ಸೇರಿಕೊಂಡಿದೆ. ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡಿರುವ ತಮಿಳುನಾಡು ಸೇರಿದಂತೆ, ತ್ರಿಭಾಷಾ ನೀತಿಯನ್ನು ಅನುಸರಿಸುತ್ತಿರುವ ಕರ್ನಾಟಕದ ಕೇಂದ್ರೀಯ ಸಂಸ್ಥೆಗಳಾದ ಬ್ಯಾಂಕ್, ಅಂಚೆ ಕಚೇರಿ, ರೈಲ್ವೆ ಇಲಾಖೆ, ವಿಮಾನ ನಿಲ್ದಾಣ, ರಕ್ಷಣಾ ಇಲಾಖೆ ಹೀಗೆ ಕೇಂದ್ರದ ಅಡಿಯಲ್ಲಿ ಬರುವ ಎಲ್ಲ ಕಡೆಗಳಲ್ಲಿಯೂ ಹಿಂದಿಯನ್ನು ವ್ಯಾಪಕವಾಗಿ ವಿಸ್ತರಿಸಲು ಕೇಂದ್ರ ಸರ್ಕಾರ ಹವಣಿಸಿದೆ. ಅದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರ ಜಾರಿಗೆ ತಂದ ಎಲ್ಲಾ ಯೋಜನೆಗಳಲ್ಲಿಯೂ ಹಿಂದಿ ಭಾಷೆಯ ಪದವನ್ನು ಸೇರಿಸಿದೆ. ಉದಾಹರಣೆಗೆ ಅಟಲ್ ಪೆನ್ಷನ್, ಜನ್‌ಧನ್ ಯೋಜನೆ, ಜನೌಷಧಿ ಕೇಂದ್ರ, ಕಿಸಾನ್ ಸಮ್ಮಾನ್, ನಾರೀ ಸಮ್ಮಾನ್, ಜಲಜೀವನ್ ಮಿಷನ್ ಹೀಗೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಬಿಜೆಪಿ ನಾಯಕರು ನಾಡದ್ರೋಹಿಗಳಾಗಲು ಬಯಸುತ್ತಿರುವುದೇಕೆ?
ಈಗ ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಯನ್ನು ಅಂಕಗಳಿಗೆ ಪರಿಗಣಿಸುವುದಿಲ್ಲ, ಬದಲಿಗೆ ಗ್ರೇಡಿಂಗ್ ಆಗಿ ಪರಿಗಣಿಸುವುದು ಎಂದು ತೀರ್ಮಾನಿಸಿದೆ. ಆದರೆ ಬಿಜೆಪಿ ಪಕ್ಷದ ಅನೇಕರು ಇದನ್ನು ಭಾರತದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ನೀತಿ ಎಂದು ಟೀಕಿಸುತ್ತಿದ್ದಾರೆ. ರಾಜಕೀಯವಾಗಿ ಮಾತ್ರವಲ್ಲದೆ ಸೈದ್ಧಾಂತಿಕವಾಗಿಯೂ ವಿರೋಧಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಈ ತೀರ್ಮಾನವು ಮಕ್ಕಳ ಮೇಲಿರುವ ಹಿಂದಿ ಕಡ್ಡಾಯ ಕಲಿಕೆಯ ಭಾರವನ್ನು ಕಡಿಮೆ ಮಾಡಿದೆ. ಆದರೆ ಬಿಜೆಪಿಯವರ ವಾದ ಮಾತ್ರ ಹಿಂದಿ-ಹಿಂದೂ-ಹಿಂದೂಸ್ಥಾನ್ ಎಂಬ ಸಂವಿಧಾನ ವಿರೋಧಿ ರಾಜಕಾರಣದ ಭಾಗವೇ ಆಗಿದೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹರಿದು ಹಂಚಿ ಹೋಗಿದ್ದ ರಾಜ್ಯಗಳ ಪುನರ್ ವಿಂಗಡಣೆ ಕಾರ್ಯ ಆರಂಭವಾಯಿತು. 1956ರಲ್ಲಿ ಆಂಧ್ರಪ್ರದೇಶದ ಪೊಟ್ಟಿ ಶ್ರೀರಾಮುಲು ಅವರು ಆಮರಣಾಂತ ಉಪವಾಸ ಮಾಡಿ ಭಾಷಾವಾರು ರಾಜ್ಯವಾಗಿ ಆಂಧ್ರಪ್ರದೇಶ ಸ್ಥಾಪನೆಗೆ ಕಾರಣರಾದರು. ಅದೇ ವರ್ಷ ಕನ್ನಡ ಭಾಷೆ ಮಾತನಾಡುವ ಜನರಿಂದ ಮೈಸೂರು ರಾಜ್ಯ ಸ್ಥಾಪನೆಯಾಯಿತು. ಅದೇ ರೀತಿಯಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ, ರಾಜಸ್ಥಾನ ಹೀಗೆ ಇಡೀ ಭಾರತವೇ ಭಾಷೆಯ ಆಧಾರದ ಮೇಲೆ ಸ್ಥಾಪನೆಯಾಯಿತು.
ಸಂವಿಧಾನ ರಚನಾ ಸಭೆಯಲ್ಲಿ ರಾಷ್ಟ್ರಕ್ಕೆ ಒಂದು ಭಾಷೆ ಬೇಕು ಎಂಬ ಬಗ್ಗೆ ಚರ್ಚೆ ನಡೆದಾಗಲೂ ಅನೇಕ ವಿರೋಧಗಳು ಬಂದವು. ಎಲ್ಲರನ್ನು ಕೂಡಿಸುವ ಭಾಷೆಯಾಗಿ ಇಂಗ್ಲಿಷ್ ಅನ್ನು ಮತ್ತು ಆಯಾ ರಾಜ್ಯಗಳ ಭಾಷೆಗಳನ್ನೇ ಮುಖ್ಯವೆಂದು ಭಾವಿಸಲಾಯಿತು. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಕನ್ನಡವೂ ಸೇರಿದಂತೆ 22 ಪ್ರಾದೇಶಿಕ ಭಾಷೆಗಳಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಅಸ್ಸಾಮಿ, ಬಂಗಾಳಿ, ಬೊಡೊ, ಡೊಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಂಥಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು. ಬಿಜೆಪಿಯವರು ಹೇಳುವ ಒಂದು ಭಾಷೆಯ ಸಿದ್ಧಾಂತದಿಂದ ಇಷ್ಟು ಭಾಷೆಗಳನ್ನು ಹೊರಗೆ ಹಾಕಬೇಕಾಗುತ್ತದೆ. ಇವೆಲ್ಲವೂ ಸೇರಿದಂತೆ ಹಿಂದಿಯೂ ಸಹ ಕೇವಲ ಒಂದು ಪ್ರಾದೇಶಿಕ ಭಾಷೆಯಾಗಿ ಮಾತ್ರ ನೋಡಬೇಕು.
ನಮ್ಮ ನಾಡಿನ ಮಕ್ಕಳು ಕನ್ನಡದ ಜೊತೆ ಇಡೀ ಜಗತ್ತಿಗೆ ಕೊಂಡಿಯಾಗಿರುವ ಇಂಗ್ಲಿಷ್ ಅನ್ನು ಕಲಿಯುವುದು ಸೂಕ್ತವೇ ಹೊರತು, ಹಿಂದಿಯನ್ನು ಕಡ್ಡಾಯವಾಗಿ ಕಲಿಸುವುದು ಎಷ್ಟು ಸರಿ? ಆರ್‌ಎಸ್‌ಎಸ್ ಮತ್ತು ಬಿಜೆಪಿ ಹೇಳುವ ‘ಒಂದು’ ಎನ್ನುವ ಸಿದ್ಧಾಂತದ ಹುನ್ನಾರವೇ ತ್ರಿಭಾಷಾ ನೀತಿ. ಬಿಜೆಪಿ ಚಿಂತನೆಗಳ ಪಿತಾಮಹನಾದ ವಿ.ಡಿ. ಸಾವರ್ಕರ್ ಅವರು 1923ರಲ್ಲಿ ಬರೆದ “Essentials of Hindutva” ಪುಸ್ತಕದಲ್ಲಿ ಸಂಸ್ಕೃತವನ್ನು ಭಾರತದ ಸಂಸ್ಕೃತಿಯ ಏಕಮಾತ್ರ ವಾಹಕ ಎಂದು ಕರೆದಿದ್ದರು. ಆದರೆ, ಈಗ ಎಲ್ಲರೂ ಸಂಸ್ಕೃತ ಕಲಿಯುವುದು ಕಷ್ಟವಾದ್ದರಿಂದ, ಸಂಸ್ಕೃತದ ಪದಗಳನ್ನು ಒಳಗೊಂಡಿರುವ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವುದು ಭಾರತವನ್ನು ಬ್ರಾಹ್ಮಣೀಕರಿಸುವ ಮತ್ತೊಂದು ಹುನ್ನಾರ. ಅದಕ್ಕೆ ಪೂರಕವಾಗಿ 2020ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ (NEP)ಯಲ್ಲಿಯೂ ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ಆಡುಭಾಷೆಯಲ್ಲಿ ಸಂಸ್ಕೃತ ಪದಗಳನ್ನು ಪರಿಚಯಿಸಬೇಕೆಂದು ಶಿಫಾರಸ್ಸು ಮಾಡಲಾಗಿತ್ತು
ಭಾರತವನ್ನು ಒಂದೇ ಎಂಬ ಪರಿಕಲ್ಪನೆಯಲ್ಲಿ ಗ್ರಹಿಸುವುದು ತಪ್ಪು. ಸಂವಿಧಾನದಲ್ಲಿ ಉಲ್ಲೇಖಿತವಾದ 22 ಭಾಷೆಗಳ ಮೇಲೆಯೇ ಈ ರಾಷ್ಟ್ರ ರೂಪುಗೊಂಡಿದೆ. ಆ ಎಲ್ಲಾ ಭಾಷೆಗಳನ್ನು ಕೋಟಿಗಟ್ಟಲೆ ಜನರು ಮಾತನಾಡುತ್ತಾರೆ. ಕರ್ನಾಟಕದಲ್ಲಿ ಮಾತ್ರ ಕನ್ನಡವನ್ನು ಸುಮಾರು ಐದು ಕೋಟಿಗೂ ಹೆಚ್ಚು ಜನರು ಮಾತನಾಡುತ್ತಾರೆ. ಹಿಂದಿಯನ್ನು ಪ್ರಮುಖ ಭಾಷೆ ಮಾಡುವುದಾದರೆ ಸಂವಿಧಾನದಲ್ಲಿರುವ ಎಲ್ಲಾ ಭಾಷೆಗಳು ಸತ್ತು ಹೋಗುತ್ತವೆ. ಆ ಭಾಷೆಗಳ ಜೊತೆಗೆ ಅವುಗಳ ಸಂಸ್ಕೃತಿ ಮತ್ತು ಇತಿಹಾಸವೂ ನಾಶವಾಗುತ್ತದೆ.
ಹಿಂದಿ-ಹಿಂದೂ-ಹಿಂದೂಸ್ಥಾನ್ ಅನ್ನುವ ಹುನ್ನಾರದ ಭಾಗವೇ ಈ ಹಿಂದಿ ಹೇರಿಕೆ. ಹಿಂದಿಯನ್ನು ಅತಿ ಹೆಚ್ಚು ಜನರು ಮಾತನಾಡುವ ಭಾಷೆ ಎಂದು ಸುಳ್ಳು ಬಿಂಬಿಸಲಾಗುತ್ತಿದೆ. ಮುಖ್ಯವಾಗಿ, ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಿ ಎಲ್ಲಾ ಮಾರಾಟದ ಸರಕುಗಳ ಮೇಲೆ ಕಡ್ಡಾಯವಾಗಿ ಹಿಂದಿಯಲ್ಲಿ ವಿವರಗಳನ್ನು ನಮೂದಿಸಬೇಕೆಂದು ಆಗ್ರಹಿಸಿ 2010ರಲ್ಲಿ ಸುರೇಶ್ ಕಚ್ಚಡಿಯಾ ಅವರು ಗುಜರಾತ್ ಹೈಕೋರ್ಟಿನಲ್ಲಿ ದಾವೆ ಸಲ್ಲಿಸಿದ್ದರು. ಆದರೆ, ಗುಜರಾತ್ ಹೈಕೋರ್ಟ್ ಹಿಂದಿಯು ಭಾರತದ ಒಂದು ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲ ಎಂದೂ, ಸಂವಿಧಾನದಲ್ಲಿ ರಾಷ್ಟ್ರಭಾಷೆ ಎಂಬ ವರ್ಗೀಕರಣವೇ ಇಲ್ಲ ಎಂದೂ ಸ್ಪಷ್ಟ ತೀರ್ಮಾನ ನೀಡಿದೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿಯವರ ಮತ್ತೊಂದು ವಾದವೆಂದರೆ ಹಿಂದಿಯನ್ನು ಅತಿ ಹೆಚ್ಚು ಜನರು ಬಳಸುತ್ತಾರೆ ಎಂಬುದು. 2011ರ ಭಾಷಾ ಗಣತಿ ಪ್ರಕಾರ ಇಡೀ ದೇಶದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇ.43ರಷ್ಟು ಎಂದು ಹೇಳುತ್ತಾರೆ. ಆದರೆ ಈ ಗಣತಿಯಲ್ಲಿ “ಹಿಂದಿ ತಿಳಿದಿದೆಯೇ?” ಎಂದು ಕೇಳಲಾಗಿದೆಯೇ ಹೊರತು “ಹಿಂದಿ ಮಾತೃಭಾಷೆಯೇ ಅಥವಾ ಮಾತನಾಡಬಲ್ಲರೇ?” ಎಂಬುದನ್ನು ಗಮನಿಸಿಲ್ಲ. ಅಷ್ಟೇ ಅಲ್ಲದೆ ಪ್ರತ್ಯೇಕ ನುಡಿಗಳಾದ ಡೋಗ್ರಿ, ಭೋಜಪುರಿ, ಮೈಥಿಲಿ, ಮಗಹಿ, ಅವಧಿ, ಹರ್ಯಾಣ್ವಿ, ಛತ್ತೀಸ್‌ಗಢಿ, ಬ್ರಜ್, ಬುಂಡೇಲಿ, ಗಢ್‌ವಾಲಿ, ಕುಮಾವುನಿ ಇತ್ಯಾದಿಗಳನ್ನು ಹಿಂದಿಯ ಅಡಿಯಲ್ಲಿ ತರಲಾಗಿದೆ. ಅಷ್ಟೇ ಯಾಕೆ, ರಾಜಸ್ತಾನಿ, ಪಂಜಾಬಿ, ಗುಜರಾತಿ, ಕಾಶ್ಮೀರಿ ನುಡಿಗಳನ್ನೂ ಹಿಂದಿ ಆಪೋಷನ ತೆಗೆದುಕೊಳ್ಳುತ್ತಿದೆ.
ಹಿಂದಿ ಹೇರಿಕೆಯ ಈ ಕಪಟ ರಾಜಕಾರಣವನ್ನು ಕರ್ನಾಟಕದ ಜನರು ಖಂಡಿಸಬೇಕು. ತ್ರಿಭಾಷಾ ಸೂತ್ರದ ಹೆಸರಿನಲ್ಲಿ ನಮ್ಮ ಮಕ್ಕಳ ಮೇಲೆ ಹಿಂದಿ ಭಾರ ಹೇರಲು ಬಂದವರನ್ನು ತಿರಸ್ಕರಿಸಿ. ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಗೌರವವನ್ನು ರಕ್ಷಿಸಲು ಇದು ಸಮಯ. ಹಿಂದಿ-ಹಿಂದೂ-ಹಿಂದೂಸ್ಥಾನ್‌ನ ಹುನ್ನಾರಕ್ಕೆ ದೇಶ ಬಲಿಯಾಗಬಾರದು. ಕನ್ನಡವೇ ನಮ್ಮ ಅಸ್ತಿತ್ವ, ಕನ್ನಡವೇ ನಮ್ಮ ಹೆಮ್ಮೆ. ಯಾರು ನಮ್ಮ ಭಾಷೆಯನ್ನು ಕೊಲ್ಲಲು ಬಂದರೂ ಪ್ರತಿರೋಧಿಸುವುದು ನಮ್ಮ ಹಕ್ಕು. ಕರ್ನಾಟಕ ಎಚ್ಚರಗೊಳ್ಳುತ್ತಿದೆ. ಅದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ.




