ಶಸ್ತ್ರಚಿಕಿತ್ಸೆಗೆ ಹಣ ಬೇಕೆಂದು ಹೇಳಿ ಮಹಿಳೆಯೊಬ್ಬರಿಗೆ ನಕಲಿ ಚಿನ್ನ ನೀಡಿ ₹56 ಸಾವಿರ ವಂಚಿಸಿರುವ ಘಟನೆ ಸಮಾದೇವಿ ಮಂದಿರದ ಬಳಿ ನಡೆದಿದೆ.
ವೈಭವ ನಗರದ ನಿವಾಸಿ ಸುನೀತಾ ವೆಂಕಟೇಶ ದಾರಾ ವಂಚನೆಗೆ ಒಳಗಾದವರು.
ಶುಕ್ರವಾರ ಸಮಾದೇವಿ ಮಂದಿರಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಸುಮಾರು 55 ವರ್ಷದ ಅಪರಿಚಿತ ಮಹಿಳೆ ಸಂಪರ್ಕಿಸಿ, ‘ಗರ್ಭಾಶಯದ ತುರ್ತು ಶಸ್ತ್ರಚಿಕಿತ್ಸೆಗೆ ಹಣ ಬೇಕಿದೆ. ಇಲ್ಲಿ ಯಾರೂ ಪರಿಚಯಸ್ಥರಿಲ್ಲ. ನನ್ನ ಬಳಿಯ ಚಿನ್ನಾಭರಣ ಪಡೆದು ಹಣ ನೀಡಿ’ ಎಂದು ಮನವಿ ಮಾಡಿದ್ದಾಳೆ.
ಅವಳ ಮಾತು ನಂಬಿದ ಸುನೀತಾ ಅವರು ₹56 ಸಾವಿರ ನೀಡಿದ್ದಾರೆ. ಬಳಿಕ ಚಿನ್ನಾಭರಣ ಪರಿಶೀಲಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ.
ಈ ಕುರಿತು ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



