ಕಾಲದಾರಿ | ಮಣಿಪುರ; ‘ಮೌನವೊಂದು ಮಹಾಪಾಪ’ ಎಂದ ಕವಿಯೇ ಧನ್ಯವಾದ…

Date:

"ನಾವು ಮಣಿಪುರದವರು 36 ಜನಾಂಗದವರು ಎಂದಿನಿಂದಲೂ ಒಟ್ಟಾಗಿ ಬಾಳಿದ್ದೇವೆ… ನೀವು ತಿಳಿದಂತೆ 3 ಜನಾಂಗಗಳಲ್ಲ…" ಎಂದು ಮಣಿಪುರದ ಹೆಣ್ಣುಗಳು ಮಾತನಾಡುತ್ತಿರುವುದು ಕೇಳಿಸದಿದ್ದರೆ, 'ದೇಶ ಕಾದೆ, ಹೆಂಡತಿಯ ಮಾನ ಕಾಯದಾದೆ' ಎಂದ ಸೈನಿಕನ ಕಣ್ಣೀರು ನಮ್ಮಾತ್ಮ ಸುಡದಿದ್ದರೆ, ದೇಶದ ಪ್ರಜ್ಞಾವಂತರು ಜೀವದ ಹಂಗು ಹರಿದು ಸರ್ಕಾರಗಳನ್ನು ಪ್ರಶ್ನಿಸದಿದ್ದರೆ…

ಸ್ವಾತಂತ್ರ್ಯ ಪಡೆಯುವಾಗಲೇ ತನ್ನ ಮುಂದಿನ ಜನಾಂಗಕ್ಕೆ ಹಿಂಸೆ ಮತ್ತು ಅಸಹನೀಯತೆಗಳ ಮುಡಿಪು ಕಟ್ಟಿಕೊಂಡ ದೇಶ, ತನ್ನ ಮುಂದಿನ ನಡೆಯಲ್ಲಿ ಸಾಮಾಜಿಕ ಸಹನೆ ಮತ್ತು ಸ್ವಾಸ್ಥ್ಯವನ್ನು ಅಂತರ್ಗತಗೊಳಿಸಿಕೊಳ್ಳಬೇಕಿತ್ತು. ಸಾಂವಿಧಾನಿಕ ಆಶಯಗಳನ್ನು ಈಡೇರಿಸುವತ್ತ ಆಡಳಿತ ವ್ಯವಸ್ಥೆ ಶ್ರಮಿಸಬೇಕಿತ್ತು. ಅಧಿಕಾರ ರಾಜಕಾರಣದ ಸ್ವಾರ್ಥ, ಸ್ವಾತಂತ್ರ್ಯ ಸಂದರ್ಭದ ಆದರ್ಶಗಳ ಕನಸನ್ನು ಹುಸಿಗೊಳಿಸುತ್ತಿದೆ. ‘ಭಾರತೀಯ ಪ್ರಜೆ’ ಎಂಬ ಸಂವೇದನಾಶೀಲತೆ ಅಪಮಾನಿತಗೊಳ್ಳುತ್ತಿದೆ, ದಿಗಿಲು ಬೀಳುತ್ತಿದೆ. ನಾವು ಕರಾವಳಿಯವರಿಗೆ, ಮಣಿಪುರ ಅಪರಿಚಿತವಲ್ಲ. ನಮ್ಮ ಬಾಲ್ಯದಂಗಳದ ಯಕ್ಷಗಾನದ ಅಟ್ಟಗಳು ಮಣಿಪುರವನ್ನು ಕಾಣಿಸಿದ್ದವು. ಗಾಂಢೀವಿ ಅರ್ಜುನ ಚಿತ್ರಾಂಗದೆಯ ಗಂಡುಗಾಡಿಯನ್ನು ಕಂಡು ಗಂಡೆಂದೇ ಭ್ರಮಿಸಿದ್ದು, ಹೆಣ್ಣಿನ ಚೆಲುವಿನ ಸಶಕ್ತತೆಯ ಮೋಹಕ್ಕೀಡಾಗಿದ್ದು, ಬಬ್ರುವಾಹನನ ಜನ್ಮಕ್ಕೆ ಕಾರಣನಾಗಿದ್ದು, ಮತ್ತೊಮ್ಮೆ ಅಶ್ವಮೇಧಿಯಾಗಿ ಮಣಿಪುರವನ್ನು ಹೊಕ್ಕರೂ, ಹಳೆಯ ನೆನಪಿಲ್ಲದವನಾಗಿ ಬಭ್ರುವಾಹನನನ್ನು ಮಗನೆಂದು ಒಪ್ಪಲಾರದವನಾಗಿದ್ದು, ತಾಯಿಯ ಅಪಮಾನದಿಂದ ಸ್ಫೋಟಿಸುವ ಮಣಿಪುರದ ಮಗ ಬಬ್ರುವಾಹನ ಕಡೆಗೂ ಅರ್ಜುನನ ವಿಸ್ಮೃತಿಯನ್ನು ದಾಟಿಸುವುದು… ಓಹ್, ಈಗ ಹಿಂದಿರುಗಿ ಕಂಡರೆ, ನಮ್ಮ ಯಕ್ಷಗಾನದ ಅಟ್ಟಗಳು ಹೆಣ್ತನದ ಸೌಂದರ್ಯ, ಮಾತೃಮೂಲ ಸಂಸ್ಕೃತಿ, ಒಲಿದು ಮರೆವುದೇ ಮರ್ಯಾದೆಯಾಗಿಬಿಟ್ಟ ಹಸ್ತಿನಾವತಿಯ ಪಿತೃತ್ವ, ಚಿತ್ರಾಂಗದೆಯೆದುರು ತಬ್ಬಿಬ್ಬಾಗುವ ಗಾಂಢೀವಿಯನ್ನೂ ಕಾಣಿಸಿದ್ದವು. ನಾವು ಬಾಳುತ್ತಿದ್ದ ಸಾಮಾಜಿಕತೆಗಿಂತ ಬೇರೆಯೇ ಆಗಿದ್ದ ‘ಬಭ್ರುವಾಹನ ಕಾಳಗ’ ಮತ್ತೆ-ಮತ್ತೆ ಅಟ್ಟವೇರುತ್ತಿದ್ದದು, ಸ್ವ-ವಿಮರ್ಶೆಯ ಕಾರಣಕ್ಕೂ ಆಗಿತ್ತೇ? ಕವಿ ಕುವೆಂಪು ಕೂಡ ‘ಚಿತ್ರಾಂಗದ’ ಖಂಡಕಾವ್ಯದಲ್ಲಿ “ಅಂಜುವವರಾವಲ್ಲ! ಅಂಜಿಕೆಯ ಕಂಡಿಲ್ಲ, ಕೇಳಿಲ್ಲ!” ಎನ್ನುವ ಮಣಿಪುರದ ಹೆಣ್ಣನ್ನು ಅಲ್ಲಿಯ ಅನನ್ಯ ಪ್ರಾಕೃತಿಕ ಸೊಬಗು, ಸಶಕ್ತತೆಗಳಿಂದ ಚಿತ್ರಿಸಿದ್ದರು.

ಆದರೆ, ನಮ್ಮ ಬಾಲ್ಯವೀಗ ಛಿದ್ರಗೊಂಡಿದೆ. ಮನುಷ್ಯ ವಿವೇಕದ ತಿಳಿವನ್ನು ಊಡುವ ಕಲೆಯಂತಹ ಮಾಧ್ಯಮಗಳೂ ಅಧಿಕಾರ ಶಾಹಿಯ ಊಳಿಗದವಾಗುತ್ತಿವೆ. ಸ್ವಾತಂತ್ರ್ಯಾ ನಂತರದ ಭಾರತದ ರಾಜಕೀಯ ವಿದ್ಯಮಾನಗಳು ಈಶಾನ್ಯ ರಾಜ್ಯಗಳನ್ನು ಅದರ ಸ್ವಾಯತ್ತ ಸೊಬಗು-ಸಾಮರ್ಥ್ಯಗಳಿಂದ ಬಾಳಿಸಲಿಲ್ಲ. ಪ್ರಜಾಪ್ರಭುತ್ವದ ಸರ್ಕಾರ ಕೂಡ ಗಡಿಯ ವಿಷಯದಲ್ಲಿ ಸರ್ವಾಧಿಕಾರಿ ಧೋರಣೆಯನ್ನೇ ಹೊಂದಿರುತ್ತದೆ. ಆದರೆ, ಜನಬಾಳಿನ ಬೇರುಗಳು ಆಚೀಚೆಗಳಲ್ಲಿ ಹರಡಿಕೊಂಡಿರುತ್ತವೆ. ಈಶಾನ್ಯ ರಾಜ್ಯಗಳ ಬುಡಕಟ್ಟು ಸಮುದಾಯಗಳಿಗೆ ‘ಪ್ರಜಾಸತ್ತೀಯ ಕಾನೂನು’ಗಳನ್ನು ದಿಢೀರನೆ ಒಪ್ಪುವುದು ಸಾಧ್ಯವಾಗಲಿಲ್ಲ. ಸರ್ಕಾರಗಳು, ಆಡಳಿತ ವಿಧಾನಗಳು ಮಾನವೀಯವಾಗಿ ಅನುಸಂಧಾನಗೊಳಿಸಲಿಲ್ಲ. ಪರಿಣಾಮವಾಗಿ ಅಲ್ಲಿ ಸಶಸ್ತ್ರ ಮೀಸಲು ಸೇನಾಪಡೆಯ ಅಧಿಕಾರವನ್ನು ತರಲಾಯಿತು. ಈ ಕಾನೂನು, ಅಧಿಕಾರಗಳು ನಾಗರಿಕ ಸಮಾಜವೇ ಅಪರಿಚಿತವಾಗಿರುವ ಬುಡಕಟ್ಟು ಸಮುದಾಯಗಳ ಬಾಳನ್ನು ವಿಧ್ವಸ್ಥಗೊಳಿಸಿತು. ಮುಖ್ಯವಾಗಿ, ಹೆಣ್ಣುಗಳು ಕಾಮದ ಕೈಗೊಂಬೆಯಾಗಿ ಬಳಸಿ ಬಿಸಾಡಲ್ಪಟ್ಟರು. ಇದನ್ನು ವಿರೋಧಿಸುವವರು ಭಯೋತ್ಪಾದಕ ಚಟುವಟಿಕೆಗಳಲ್ಲಿ ನಿರತರೆಂದು ಗುರುತಿಸಲ್ಪಟ್ಟರು. ಹತ್ಯೆಯ ಅಧಿಕಾರ ಕಾನೂನುಬದ್ಧವಾಗಿದ್ದರಿಂದ ಯಾವುದೂ ಆ ರಾಜ್ಯಗಳ ಗಡಿ ದಾಟಿದ ಸುದ್ದಿಯಾಗಲಿಲ್ಲ. ಹಾಗೆ ನೋಡಿದರೆ, ಈಗಿನ ಮಣಿಪುರದ ಹಿಂಸಾಕಾಂಡಕ್ಕೆ ಬಲಿಯಾದವರು ಮಾತ್ರವಲ್ಲ, ಪೊಲೀಸ್ ಮತ್ತು ಸೈನ್ಯದ ಎನ್‍ಕೌಂಟರ್‌ಗಳಿಗೆ ಬಲಿಯಾದ ಅಮಾಯಕರ ಸಾವುಗಳೂ ನ್ಯಾಯಕ್ಕೆ ಮೊರೆಯಿಡುತ್ತಿವೆ. ಈ ವಾಸ್ತವದ ಭೀಕರ – ಹೊರ ಸಮಾಜದ ಅರಿವಿಗೆ ಬಂದಿದ್ದು ಇರೋಮ್ ಶರ್ಮಿಳಾ ಚಾನು 17 ವರ್ಷಗಳ ಸುದೀರ್ಘ ಕಾಲ ಆಮರಣ ಉಪವಾಸ ಸತ್ಯಾಗ್ರಹವನ್ನು ಮಾಡಿದಾಗ. ಅನ್ನಾಹಾರವನ್ನು ಸಂಪೂರ್ಣ ತ್ಯಜಿಸಿದ ಇರೋಮ್ ಅವರಿಗೆ ಸರ್ಕಾರ ಆಸ್ಪತ್ರೆಗೆ ನೂಕಿ, ನಿರಂತರವಾಗಿ ಮೂಗಿನ ನಳಿಕೆಗಳಿಂದ ದ್ರವಾಹಾರವನ್ನು ತುರುಕಿ ಸಾಯದಂತೆ ಉಳಿಸಿತು. ಅವರ ಮೂಗು ಒಡೆದು ದಪ್ಪಗಾಯಿತು ಭಾರತದ ಮಾರಿಕೊಂಡ ಮಾಧ್ಯಮಗಳಿಗೆ ಇದೊಂದು ತಲ್ಲಣದ ಸುದ್ದಿಯಾಗಲಿಲ್ಲ. ಸ್ವತಂತ್ರ ಭಾರತ ಕಂಡ ಬಲು ಸುದೀರ್ಘ ಉಪವಾಸ ಸತ್ಯಾಗ್ರಹ ದೇಶವಾಸಿಗಳ ಪ್ರಜ್ಞೆಯನ್ನು ತಾಕಲಿಲ್ಲ. ನಿರಂತರ ಅತ್ಯಾಚಾರದ ಬಲಿಪಶುಗಳಾಗುತ್ತಿರುವ ಮಣಿಪುರದ ಮಹಿಳೆಯರು, ಜಗತ್ತಿನ ಗಮನ ಸೆಳೆಯಬೇಕಾದ ಊಳಿಡುವ ಆರ್ದ್ರತೆಯಲ್ಲಿ, Indian Army Rape us ಎಂಬ ಬ್ಯಾನರ್ ಹಿಡಿದು ಬೆತ್ತಲೆಯಾಗಿ ಬೀದಿಗಿಳಿದರು. ಭಾರತದ ವಿವೇಕ ನಾಚಿ ತಲೆತಗ್ಗಿಸಿದ ಘಟನೆ ಇದು. ಇಷ್ಟಾದರೂ ಮಣಿಪುರದ ಬದುಕಿನಲ್ಲಿ ಪ್ರಭುತ್ವ ಪ್ರೇರಿತ ಹಿಂಸೆ ತಣ್ಣಗಾಗಲಿಲ್ಲ. ಈಗ, ಹೆಣ್ಣುಗಳ ಪ್ರತಿಭಟನೆಯ ಆ ಕಟ್ಟಕಡೆಯ ಸಾಧ್ಯತೆಯನ್ನೂ ಕ್ರೂರವಾಗಿ ಹಿಂಸಿಸುವ, ‘ಮಣಿಪುರದಲ್ಲಿ ಪೊಲೀಸ್ ಕಾರ್ಯಾಚರಣೆಗಳನ್ನು ತಡೆಯುವ ಬತ್ತಲೆ ಹೆಣ್ಣುಗಳ ಗುಂಪಿದೆ,’ ‘ಅವರೇ ಬತ್ತಲಾಗಬಹುದಂತೆ ಬತ್ತಲುಗೊಳಿಸಿದರೇನು?’ – ಎಂಬ ಅಸಹ್ಯದ ಸುಳ್ಳುಗಳನ್ನು ಅಪಪ್ರಚಾರಗೊಳಿಸಲಾಗುತ್ತಿದೆ.

ಪ್ರಾಕೃತಿಕ ಸಂಪತ್ತಿನ, ವೈಶಿಷ್ಟ್ಯದ ಮಣಿಪುರ 2011ರ ಜನಗಣತಿಯಲ್ಲಿ 29 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವಂಥದ್ದು. ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಪ್ರಬಲವಾಗಿರುವ ಶೇಕಡ 55ರಷ್ಟಿರುವ ಮೈತೇಯಿಗಳು ನಗರ ಪ್ರದೇಶ ವಾಸಿಗಳು, ಕುಕಿ ಮತ್ತು ನಾಗಾಗಳು ಕಾಡುಗಳಲ್ಲಿದ್ದಾರೆ. ಈಗಿನ ಮೀಸಲಾತಿ ಮಸೂದೆ ಮೈತೇಯಿ ಜನಾಂಗದವರಿಗೆ ಕಾಡುಪ್ರದೇಶದಲ್ಲಿ ಭೂಮಿಯನ್ನು ಖರೀದಿಸುವ ಹಕ್ಕನ್ನು ಕೊಡುತ್ತದೆ. ಅವರ ಮೂಲಕ ಜಾಗತೀಕರಣದ ಫಲಾನುಭವಿಗಳಾದ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳಗಾರರಿಗೆ ಮಣಿಪುರದ ಭೌಗೋಳಿಕ ಸಂಪತ್ತು ಬಿಕರಿಯಾಗುತ್ತದೆ. ಸಾಂಸ್ಕೃತಿಕ ವೈಶಿಷ್ಟ್ಯ ನಾಶವಾಗುತ್ತದೆ. ಆ ನೆಲ-ಜಲಗಳೊಂದಿಗೆ ಅಭಿನ್ನವಾಗಿ ಬಾಳಿ ಬಂದ ಬುಡಕಟ್ಟು ಸಮುದಾಯಗಳ ಬೇರುಗಳೇ ಕಿತ್ತುಹೋಗುವ ಭಯ ಆವರಿಸಿದಂತಿದೆ. ಹಾಗಾಗಿ, ಅವರು ಸಂಘಟನಾತ್ಮಕ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಅವರ ಪ್ರತಿರೋಧವನ್ನು ಜನಾಂಗೀಯ ಭಾವನೆಯನ್ನು ಉದ್ದೀಪಿಸಿ ಮಟ್ಟ ಹಾಕುವುದು ಸರ್ಕಾರಕ್ಕೆ ಲಾಭದಾಯಕವಾಗಿತ್ತು. ಯಾವ ಜನದಂಗೆಗಳೂ ಪ್ರಭುತ್ವ ಪೋಷಿತವಲ್ಲದೆ ಸುದೀರ್ಘ ಕಾಲದವರೆಗೆ ಮುನ್ನಡೆಯಲಾರದು – ಎಂಬ ಮಾತಿದೆ. ಮಣಿಪುರವನ್ನು ‘ಬಂಡವಾಳೋದ್ಯಮದ ಅಭಿವೃದ್ಧಿಯ ಮಾದರಿ’ಗೆ ಒಗ್ಗಿಸುವ ಇರಾದೆ ಸರ್ಕಾರಕ್ಕಿರುವುದೂ ಅದರ ಮೌನ ಪ್ರೇರಣೆಗೆ – ತಟಸ್ಥ ಧೋರಣೆಗೆ ಕಾರಣ. ಅಧಿಕಾರ ರಾಜಕಾರಣಕ್ಕೆ ಹಿತಕಾರಿಯಾದ ಇನ್ನೊಂದು ಎಳೆ ಈ ಹಿಂಸಾರತಿಯಲ್ಲಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡು ಜನರನ್ನು ಧಾರ್ಮಿಕ ಸಮುದಾಯವಾಗಿ ಒಡೆಯುವುದು. ಆಗ ಬಹುಸಂಖ್ಯಾತ ಮೈತೇಯಿ ಜನರು ‘ಹಿಂದೂ’ಗಳಾಗಿ ನಂಬಿಕೆಯನ್ನು ಉತ್ಪಾದಿಸಿಕೊಂಡರೆ ಚುನಾವಣೆಗಳ ಗೆಲುವು ಸುಲಭವಾಗುತ್ತದೆ. ಈ ಹಿಂಸೆ, ಕ್ರಿಶ್ಚಿಯನ್ ಧಾರ್ಮಿಕ ಸ್ಥಳಗಳನ್ನು ಚಹರೆಗಳನ್ನು, ಹಿಂದೂ ಅಲ್ಲದ ಬುಡಕಟ್ಟು ಸಮುದಾಯಗಳನ್ನು ಕೇಂದ್ರವಾಗಿಸಿಕೊಂಡಿರುವುದು ಆಕಸ್ಮಿಕವಾದ ಘಟನೆಯಲ್ಲ. ಇದರೊಂದಿಗೇ ಮಣಿಪುರದೊಂದಿಗೆ ಗಡಿ ಸಂಬಂಧ ಹೊಂದಿರುವ ಮ್ಯಾನ್ಮಾರ, ಚೀನಾಗಳ ‘ಗಡಿ ವಿವಾದ’ವನ್ನು ಸೃಷ್ಟಿಸುವುದರಿಂದ; ಮಣಿಪುರ, ಈಶಾನ್ಯ ರಾಜ್ಯಗಳು ಮಾತ್ರವಲ್ಲ ಇಡೀ ದೇಶದಲ್ಲಿ ‘ರಾಷ್ಟ್ರೀಯ ಸುರಕ್ಷತಾ’ ಭಾವನೆಯನ್ನು ವೋಟ್‍ಗಳಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಈ ದೇಶ ಇತ್ತೀಚಿನ ಪ್ರತಿಯೊಂದು ಲೋಕಸಭಾ ಚುನಾವಣೆಯಲ್ಲಿಯೂ ಗಡಿ, ಭಯೋತ್ಪಾದಕ ಚಟುವಟಿಕೆ, ಉಗ್ರಗಾಮಿಗಳ ವಿಷಯವನ್ನೇ ಆಧರಿಸಿಕೊಂಡಿತ್ತು. ಸುದೀರ್ಘ ಕಾಲದಿಂದ ಪಾಕಿಸ್ತಾನವನ್ನು ಮುಸ್ಲಿಮರನ್ನು ವೈರಿಗಳಾಗಿ ನಿಲ್ಲಿಸಿಯಾಗಿದೆ. ಭಾರತೀಯರು ದಣಿದಿದ್ದಾರೆ. ಹೊಸ ವೈರದ ರಾಷ್ಟ್ರೀಯ ಕಾರ್ಡನ್ನು ಚಲಾವಣೆಗೆ ತರುವುದು ಹೆಚ್ಚು ಲಾಭದಾಯಕವಾದೀತು ಎಂಬ ಚುನಾವಣಾ ತಂತ್ರಗಾರಿಕೆಯೂ, ಮಣಿಪುರದ ಹಿಂಸಾಕಾಂಡದ ಒಳಪಟ್ಟಾಗಿದೆ. ಮಣಿಪುರವೂ ಸೇರಿ ಈಶಾನ್ಯ ರಾಜ್ಯಗಳು, ಮಾದಕ ಉತ್ಪನ್ನಗಳನ್ನು ಬೆಳೆಯುತ್ತವೆ. ಹೌದು, ಇದಕ್ಕೆ ಪರ್ಯಾಯ ಉದ್ಯೋಗಾವಕಾಶಗಳನ್ನು ಬದುಕಿನ ದಾರಿಗಳನ್ನು ಕಲ್ಪಿಸಲು ಸೋತ ಸರ್ಕಾರವೂ ಜವಾಬ್ದಾರಿತವಲ್ಲವೇ? ಸರ್ಕಾರವೇ ನಿಂತು ಆಪಾದನೆ ಮಾಡಿದರೆ, ಉತ್ತರಿಸುವವರು ಯಾರು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಣಿಪುರವೀಗ ಭಾರತದ ಮಹಾನ್ ಹಿಂಸಾಕಾಂಡದ ಚರಿತ್ರೆಗೆ ಸೇರಿಯಾಯಿತು. ಸಾವು, ನೋವು, ನಾಶ, ಅತ್ಯಾಚಾರಗಳ ಲೆಕ್ಕವೂ ಅಗತ್ಯವಿಲ್ಲದ ಆಡಳಿತ ವ್ಯವಸ್ಥೆಯ ‘ಮೌನ ರಾಜಕಾರಣ’ದ ದಾಖಲೆಯಾಯಿತು. ರಾಜ್ಯದಲ್ಲಿ ಇಂಟರ್‌ನೆಟ್ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಿದ ಸುದೀರ್ಘ ಅವಧಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುವ ಭಯವನ್ನು ಹುಟ್ಟಿಸಿದೆ. ಹೆಣ್ಣುಗಳ ಬೆತ್ತಲು, ಹಿಂಸೆ, ಕೇಸ್ ತೆಗೆದುಕೊಳ್ಳಲು ಪೀಡಿಸುವ ಪೊಲೀಸ್ ವ್ಯವಸ್ಥೆ, ಸಂತ್ರಸ್ತೆಯರಿಗೆ ಸಿಗದ ಸಾಂತ್ವನ, ಹೇಳಿಕೆ ನೀಡಲು ಖುದ್ದು ಹಾಜರಾಗುವಂತೆ ಸಿಬಿಐ ಅಧಿಕಾರಗಳಿಂದ ಒತ್ತಡ, ರಾಷ್ಟ್ರೀಯ ಮಹಿಳಾ ಆಯೋಗದ ಅಮಾನುಷ ಸಹನೆ, ಮಾನ್ಯ ಪ್ರಧಾನಿಗಳ ಗಿಳಿಪಾಠದಂತಹ ನುಡಿಮುತ್ತುಗಳು… ಘನತೆವೆತ್ತ ರಾಷ್ಟ್ರಪತಿಗಳ ಭೀಕರ ಮೌನ, ಜನಾಂಗೀಯ ಭಾವವೇ, ಮುಖ್ಯವಾಗಿ ಹೆಣ್ಣುಗಳೇ ಅತ್ಯಾಚಾರಕ್ಕೆ ಪ್ರಚೋದಿಸಿದರೆಂಬ ಸಂಗತಿಗಳು… ಜಗತ್ತಿನೆದುರು ಭಾರತ ಅಪಮಾನಿತಗೊಂಡಿದೆ. ಮಾನವ ಚರಿತ್ರೆಯಲ್ಲಿ ಎಂದೂ ಮರೆಯಲಾಗದ ಜನಾಂಗೀಯ ಹಿಂಸೆಯ ಮತ್ತೊಂದು ಗಾಯದಿಂದ ಭಾರತ ಆತ್ಮಘಾತಕ್ಕೀಡಾಗಿದೆ.

ಸುಪ್ರೀಂ ಕೋರ್ಟಿನ ಸಿಜೆಐ ಡಿ ವೈ ಚಂದ್ರಚೂಡ್ ಅವರು ಮತ್ತು ಕಾನೂನು ವ್ಯವಸ್ಥೆ ಮಧ್ಯಪ್ರವೇಶಿಸದಿದ್ದರೆ, ಅತ್ಯಾಚಾರಿಗಳ ಮನೆಯನ್ನು ಅದೇ ಜನಾಂಗದ ಮಹಿಳೆಯರು ಸುಟ್ಟ ಘಟನೆಯಂತಹ (ಸತ್ಯವಾಗಿದ್ದರೆ) ಸುದ್ದಿಗಳು, “ನಾವು ಮಣಿಪುರದವರು 36 ಜನಾಂಗದವರು ಎಂದಿನಿಂದಲೂ ಒಟ್ಟಾಗಿ ಬಾಳಿದ್ದೇವೆ… ನೀವು ತಿಳಿದಂತೆ 3 ಜನಾಂಗಗಳಲ್ಲ…” ಎಂದು ಮಣಿಪುರದ ಹೆಣ್ಣುಗಳು ಮಾತನಾಡುತ್ತಿರುವುದು ಕೇಳಿಸದಿದ್ದರೆ, ‘ದೇಶ ಕಾದೆ, ಹೆಂಡತಿಯ ಮಾನ ಕಾಯದಾದೆ’ ಎಂದ ಸೈನಿಕನ ಕಣ್ಣೀರು ನಮ್ಮಾತ್ಮ ಸುಡದಿದ್ದರೆ, ದೇಶದ ಪ್ರಜ್ಞಾವಂತರು ಜೀವದ ಹಂಗು ಹರಿದು ಸರ್ಕಾರಗಳನ್ನು ಪ್ರಶ್ನಿಸದಿದ್ದರೆ… ಖಂಡಿತ ಈ ನೆಲ ಮನುಷ್ಯರು ವಾಸವಾಗಿರುವ ಭೂಖಂಡ ಅನ್ನಿಸುತ್ತಿರಲಿಲ್ಲ. ಮೌನವೊಂದು ಮಹಾಪಾಪ – ಎಂದ ಕವಿಯೇ ಧನ್ಯವಾದ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ವಿನಯಾ ಒಕ್ಕುಂದ
ವಿನಯಾ ಒಕ್ಕುಂದ
+ posts

ಸಾಮಾಜಿಕ ಸೂಕ್ಷ್ಮಗಳ ಕುರಿತು ದಣಿವರಿಯದೆ ಬರೆಯುವವರಲ್ಲಿ ಒಬ್ಬರು. ಬದುಕಿನ ಮೇಲೆ ವಿಪರೀತ ಅಕ್ಕರೆ. ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನುಡಿಗಟ್ಟು ಬಳಕೆ ಇವರ ಬರಹಗಳ ವಿಶೇಷ. ಕತೆ, ಕವಿತೆ, ಲೇಖನ... ಏನೇ ಬರೆದರೂ ಅದೆಲ್ಲದರಲ್ಲೂ ಮನುಷ್ಯರು ಮತ್ತು ಮನುಷ್ಯತ್ವವೇ ಕೇಂದ್ರಬಿಂದು ಆಗಿರುತ್ತದೆಂಬುದು ಗಮನಾರ್ಹ.

ಪೋಸ್ಟ್ ಹಂಚಿಕೊಳ್ಳಿ:

ವಿನಯಾ ಒಕ್ಕುಂದ
ವಿನಯಾ ಒಕ್ಕುಂದ
ಸಾಮಾಜಿಕ ಸೂಕ್ಷ್ಮಗಳ ಕುರಿತು ದಣಿವರಿಯದೆ ಬರೆಯುವವರಲ್ಲಿ ಒಬ್ಬರು. ಬದುಕಿನ ಮೇಲೆ ವಿಪರೀತ ಅಕ್ಕರೆ. ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನುಡಿಗಟ್ಟು ಬಳಕೆ ಇವರ ಬರಹಗಳ ವಿಶೇಷ. ಕತೆ, ಕವಿತೆ, ಲೇಖನ... ಏನೇ ಬರೆದರೂ ಅದೆಲ್ಲದರಲ್ಲೂ ಮನುಷ್ಯರು ಮತ್ತು ಮನುಷ್ಯತ್ವವೇ ಕೇಂದ್ರಬಿಂದು ಆಗಿರುತ್ತದೆಂಬುದು ಗಮನಾರ್ಹ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನಸ್ಸಿನ ಕತೆಗಳು – 21 | ದೇಹದಲ್ಲಿ ಹುಳುಗಳಿವೆ ಅನ್ನುವ ಭ್ರಮೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...