ನುಡಿಚಿತ್ರ | ಹೈದರಾಬಾದ್ ಆದಿಬಟ್ಲಂನ ಮಾರಯ್ಯ ಮತ್ತು ತರೀಕೆರೆಯ ಈಚಲ ಬನ

Date:

ತರೀಕೆರೆಯಲ್ಲಿ ನಮ್ಮ ಬಾಡಿಗೆ ಮನೆ ಹೆಂಡದ ಪೆಂಟೆಯಲ್ಲಿತ್ತು. ಅಲ್ಲಿಗೆ ವನಗಳಿಂದ ಲಾರಿಯಲ್ಲಿ ಹೆಂಡವು ಬಂದು ಇಳಿಯುತ್ತಿತ್ತು. ಅದನ್ನು ದೊಡ್ಡ ತೊಟ್ಟಿಗೆ ಹಾಕಿ, ಬಾಟಲಿಗಳಲ್ಲಿ ತುಂಬಿ ಕೇಸುಗಳನ್ನು ಲಾರಿಗಳಲ್ಲಿ ಗಂಡಂಗಿಗೆ ಕಳಿಸುತ್ತಿದ್ದರು. 24 ಗಂಟೆಯೂ ಹೆಂಡದ ನರುಗಂಪಿನ ಹುಳಿ ವಾಸನೆ ಅಲ್ಲಿ ಅಡರಿರುತ್ತಿತ್ತು

ಹೈದರಾಬಾದಿನ ಹೊರವಲಯದಲ್ಲಿರುವ ಆದಿಬಟ್ಲಂನಲ್ಲಿ ಮಗಳು ವಾಸವಾಗಿದ್ದಾಳೆ. ಅವಳ ಮನೆ ತಾಳೆಮರಗಳ ವನದಲ್ಲಿದೆ. ಬೆಳಗಿನ ವಾಕಿಂಗನ್ನು ತಾಳೆವನದಲ್ಲಿ ಮಾಡುತ್ತೇನೆ. ಅಲ್ಲಿಗೆ ತಾಳೆ ಹೆಂಡ ಇಳಿಸುವ ಒಬ್ಬ ವ್ಯಕ್ತಿ ಬರುತ್ತಾನೆ. ನನಗೆ ಅವನ ಸ್ನೇಹವಾಗಿದೆ. ಅವನು ಆಗತಾನೇ ಇಳಿಸಿದ ನೀರಾವನ್ನು ಒಮ್ಮೆ ಕುಡಿ ಕುಡಿ ಎಂದು ಒತ್ತಾಯಿಸುತ್ತಾನೆ. ಅದರಲ್ಲಿ ಬಹಳಷ್ಟು ಸಕ್ಕರೆ ಅಂಶ ಇರುವುದರಿಂದ ನಾನು ಕುಡಿಯುವುದಿಲ್ಲ. ಮಾರಯ್ಯನು ಮರ ಹತ್ತುವ ಚಾಕಚಕ್ಯತೆ ನೋಡಿದರೆ, ಚಿರತೆಯೂ ಕರಡಿಯೂ ಬೆರಗಾಗಬೇಕು. ಅಷ್ಟು ವೇಗವಾಗಿ ಹತ್ತಿ, ಮಡಕೆಗಳಲ್ಲಿ ಸಂಗ್ರಹವಾದ ಹಾಲನ್ನು ಸಂಗ್ರಹಿಸಿ ಕೆಳಗೆ ಇಳಿಯುತ್ತಾನೆ. ರಸ್ತೆ ಬದಿ ಬಿಸ್ಲೇರಿ ಬಾಟಲಿಗಳಲ್ಲಿ ಅವನ ಹೆಂಡತಿ ಹೆಂಡವನ್ನು ಮಾರುತ್ತಾಳೆ. ಕಾರಿನಲ್ಲಿ ಹೋಗಿಬರುವ ಜನ ಬಿಗುಮಾನವಿಲ್ಲದೆ ಅದನ್ನು ಕುಡಿಯುತ್ತಾರೆ.

ಈ ತಾಳೆಬನವು ನಾನು ಬಾಲ್ಯಕಾಲದಲ್ಲಿ ಕಳೆದ ಈಚಲ ಬನವನ್ನು ನೆನಪಿಸಿತು. ತರೀಕೆರೆಯಲ್ಲಿ ನಮ್ಮ ಬಾಡಿಗೆ ಮನೆ ಹೆಂಡದ ಪೆಂಟೆಯಲ್ಲಿತ್ತು. ಅಲ್ಲಿಗೆ ವನಗಳಿಂದ ಲಾರಿಯಲ್ಲಿ ಹೆಂಡವು ಬಂದು ಇಳಿಯುತ್ತಿತ್ತು. ಅದನ್ನು ದೊಡ್ಡ ತೊಟ್ಟಿಗೆ ಹಾಕಿ, ಬಾಟಲಿಗಳಲ್ಲಿ ತುಂಬಿ ಕೇಸುಗಳನ್ನು ಲಾರಿಗಳಲ್ಲಿ ಗಂಡಂಗಿಗೆ ಕಳಿಸುತ್ತಿದ್ದರು. 24 ಗಂಟೆಯೂ ಹೆಂಡದ ನರುಗಂಪಿನ ಹುಳಿ ವಾಸನೆ ಅಲ್ಲಿ ಅಡರಿರುತ್ತಿತ್ತು. ಅಪ್ಪನಿಗೆ ಹೆಂಡ ಇಳಿಸುವ ಈಳಿಗರಿಗೆ ಮರ ಕೆತ್ತಲು ಬೇಕಾದ ಉಳಿಗಳನ್ನು ಮಾಡಿಕೊಡುವ ಕಂತ್ರಾಟು. ಅವು ಈಚಲುಗಿಡದ ಗರ್ಭವನ್ನು ಹೆರೆಯುವ ಅತ್ಯಂತ ತೆಳ್ಳಗಿನ ಹರಿತವಾದ ಆಯುಧಗಳು. ತೆಂಗು, ತಾಳೆ, ಬಗಿನೆಯಲ್ಲಿ ಸಿಂಗಾರ ಕಡಿದರೆ ಹಾಲು ಬರುತ್ತದೆ. ಈಚಲುಗಿಡಕ್ಕೆ ಕಾಂಡದ ಸುಳಿಭಾಗವನ್ನು ಕೆತ್ತಬೇಕು. ಹೀಗಾಗಿ, ನಮ್ಮ ಕಡೆಯ ಈಚಲುಗಿಡಗಳೆಲ್ಲ ಅಷ್ಟಾವಂಕಗೊಂಡಿರುತ್ತವೆ.

ಈಳಿಗರು ಕೆಲವೊಮ್ಮೆ ನಮ್ಮನ್ನು ವನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಗತಾನೇ ಇಳಿಸಿದ ನೀರಾ ಕೊಡುತ್ತಿದ್ದರು. ಅದರಲ್ಲಿ ಕಲ್ಲುಸಕ್ಕರೆ ಹಾಕಿ ನಾವು ಕುಡಿಯುತ್ತಿದ್ದೆವು. ಬೆಳಗಿನ ಹೊತ್ತಲ್ಲಿ ಸಿಹಿಯಿರುವ ಹಾಲು, ಮಧ್ಯಾಹ್ನದ ಹೊತ್ತಿಗೆ ಹುಳಿಯಾಗಿ ಹೆಂಡವಾಗುವುದಂತೆ. ಹೆಂಡವು ಈಚೆಗೆ ಕಡಿಮೆಯಾಗಿದೆ. ತೆಂಗು, ಈಚಲು, ತಾಳೆ, ಬಗಿನೆ ಗಿಡಗಳಿಂದ ಇಳಿಸುವ ಹೆಂಡವು ಮೊದಲಿಂದಲೂ ಜನರ ಪಾನೀಯ. ಅದನ್ನು ಶಾಕ್ತರು ದೇವಿಯ ಆರಾಧನೆಗೆ ಎಡೆಯಲ್ಲಿ ಬಳಸುತ್ತಿದ್ದರು. ಶಾಕ್ತ ದೀಕ್ಷೆಯಲ್ಲಿ ಈಚಲ ಹಾಲು ಇರಬೇಕಿತ್ತು. ದೇವಿಯ ವಿಗ್ರಹಗಳಲ್ಲಿ – ಭೈರವನ ವಿಗ್ರಹಗಳಲ್ಲೂ ಕೂಡ – ಪಾನಪಾತ್ರೆ ಇರುತ್ತದೆ. ಈಳಿಗರು ಈಚಲುಮರವನ್ನು ದೇವಿಯೆಂದೂ ಅದರ ಹೆಂಡವನ್ನು ಆಕೆಯ ಎದೆಹಾಲೆಂದೂ ಪರಿಭಾವಿಸುವರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಹೀಗೆ ನಿತ್ಯ ಆಹಾರದ ಆರಾಧನೆಯ ಆಚರಣೆಯ ವಸ್ತುವಾದ ಹೆಂಡ ಮತ್ತು ಈಚಲು ಮರಗಳು, ಬ್ರಿಟಿಶರ ಕಾಲದಲ್ಲಿ ಸರ್ಕಾರದ ಆದಾಯದ ಮೂಲವಾದವು. ಅವರು ಅದರ ಹರಾಜು ಹಾಕುತ್ತಿದ್ದರು. ಅವರ ಆದಾಯದ ಮೂಲವನ್ನು ಭಗ್ನಗೊಳಿಸಲೆಂದು ಸ್ವಾತಂತ್ರ್ಯ ಚಳುವಳಿಗಾರರು ಈಚಲು ಗಿಡಗಳನ್ನು ಕಡಿಯುವ ಚಳವಳಿ ಮಾಡುತ್ತಿದ್ದರು. ಇದು ಪಾನ ನಿಷೇಧ ಮಾಡುವ ಗಾಂಧಿಯವರ ಚಳವಳಿಯ ಪ್ರಭಾವವೂ ಆಗಿತ್ತು. ನಿಜವಾಗಿ ಕುಡಿತವು ವ್ಯಸನವಾಗಿ ಆರೋಗ್ಯ ಹಾಳಾಗುತ್ತಿರುವುದು ಆಧುನಿಕ ಭಟ್ಟಿ ಇಳಿಸಿ ತಯಾರಿಸುವ ಪಾನೀಯಗಳಿಂದಲೇ ಹೊರತು, ಸಸ್ಯಗಳಿಂದ ಬರುವ ದ್ರವ ಸೇವನೆಯಿಂದಲ್ಲ. ಈಗ ಮತ್ತೆ ಸರ್ಕಾರಗಳು ಜನರಿಗೆ ಮರಗಳಿಂದ ರಸವನ್ನು ಇಳಿಸಲು ಅನುಮತಿ ನೀಡಿವೆ. ಕರಾವಳಿಯಲ್ಲಿ ಮೀನೂಟ ಮತ್ತು ತೆಂಗಿನ ಕಳ್ಳಿನ ಹೋಟೆಲು ಎಲ್ಲೆಡೆ ಇವೆ. ಕೇರಳದಲ್ಲಿ ಕೂಡ.

ಈ ಲೇಖನ ಓದಿದ್ದೀರಾ?: ದಿಟ್ಟಿ – ಫೋಟೊ ಆಲ್ಬಮ್ | ಹಾರುವಾಣದ ಅದ್ಧೂರಿ ಹೂಮೇಳದೊಂದಿಗೆ ಕಾಣಿಸಿಕೊಂಡ ಹಕ್ಕಿಗಳು

ಆದಿಬಟ್ಲಂನ ಮಾರಯ್ಯ ಪ್ರತಿದಿನ ನೂರಾರು ಮರ ಹತ್ತಿ ಇಳಿಯುತ್ತಾನೆ. “ಏನಪ್ಪ ನಿನ್ನ ಶಕ್ತಿಯ ಗುಟ್ಟು?” ಎಂದರೆ ಹೆಂಡವನ್ನು ತೋರಿಸಿದ. ಅವನ ರಟ್ಟೆ ಹಿಸುಕಿ ನೋಡಿದೆ. ಕಲ್ಲಿದ್ದಂಗಿದ್ದವು. ಮದ್ಯ ವ್ಯಸನವಾಗದೆ ಆಹಾರದ ಮತ್ತು ಔಷಧಿಯ ಭಾಗವಾದರೆ, ವಾತಾವರಣವನ್ನು ನಿಭಾಯಿಸುವ ಮೈಬೆಚ್ಚವಾದರೆ ಅಮೃತವಾಗುತ್ತದೆ. ಅದು ವ್ಯಸನವಾದಾಗ, ಉದ್ಯಮವಾದಾಗ, ಜನರಿಗೆ ನಿಶೆ ಬರಿಸಿ ವೋಟು ಪಡೆಯುವ ಬಂಡವಾಳವಾದಾಗ, ಜನರು ದುಃಖವನ್ನು ಮರೆಯಲು ಆಸರೆಯಾದಾಗ ವಿಷವಾಗುತ್ತದೆ. ಹಾವಿನ ವಿಷ ಜೀವ ಉಳಿಸುವ ಮದ್ದಾಗಬಲ್ಲದು. ತಾಯಹಾಲಿನಂತಹ ಹೆಂಡ ವಿಷವೂ ಆಗಬಲ್ಲದು. ವಸ್ತು, ಜ್ಞಾನ, ವಿಚಾರವನ್ನು ಯಾರು ಯಾಕೆ ಬಳಸುತ್ತಾರೆ ಎನ್ನುವುದರಿಂದ ವಸ್ತುವಿನ ಗುಣಾವಗುಣಗಳು ನಿರ್ಧಾರಗೊಳ್ಳುತ್ತವೆ.

ಪೋಸ್ಟ್ ಹಂಚಿಕೊಳ್ಳಿ:

ರಹಮತ್ ತರೀಕೆರೆ
ರಹಮತ್ ತರೀಕೆರೆ
ಒಂದಷ್ಟು ಮಂದಿಗೆ ಮೇಷ್ಟ್ರು. ಇನ್ನೊಂದಷ್ಟು ಮಂದಿಗೆ ಪಕ್ಕಾ ವಿಮರ್ಶಕ. ಕೆಲವರಿಗೆ ಸಂಶೋಧನಾ ಮಾರ್ಗದರ್ಶಿ. ಹೀಗೆ, ಲೇಖಕ ರಹಮತ್ ತರೀಕೆರೆ ನಾಡಿನ ಜನತೆಗೆ ತರಹೇವಾರಿ ತಿರುವುಗಳಲ್ಲಿ ಸಿಕ್ಕವರು. ಸಿದ್ಧರು, ನಾಥರು, ಸೂಫಿಗಳ ಬೆನ್ನು ಹತ್ತಿ ಅವರು ಕಂಡುಕೊಂಡ ಸಂಗತಿಗಳು ಅತ್ಯಮೂಲ್ಯ ಕಣಜ. ಸದ್ಯಕ್ಕೆ, ಪಾಠ ಹೇಳುವ ಕೆಲಸದಿಂದ ತಾಂತ್ರಿಕವಾಗಿ ಆಚೆ ಬಂದಿದ್ದರೂ, ನಿಜದಲ್ಲಿ ನಿವೃತ್ತರಾಗುವುದಿಲ್ಲ ಎಂಬುದು ಅವರ ಶಿಷ್ಯವೃಂದದ ಪ್ರತಿಪಾದನೆ. ಇದಕ್ಕೆ ತಾಜಾ ನಿದರ್ಶನ ಈ ಚಿತ್ರಕಥಾ ಸರಣಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನಸ್ಸಿನ ಕತೆಗಳು – 21 | ದೇಹದಲ್ಲಿ ಹುಳುಗಳಿವೆ ಅನ್ನುವ ಭ್ರಮೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...