ಈ ದಿನ ಸಂಪಾದಕೀಯ | ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸುವುದಕ್ಕೂ ಸಚಿವೆಯರಿಗೆ ಮೋದಿ ಅನುಮತಿ ಬೇಕೇ?

Date:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ್ದ ವಿರೋಧ ಪಕ್ಷದ ನಾಯಕರೊಬ್ಬರ ಬಗ್ಗೆ ಸಂಸತ್ತಿನಲ್ಲಿ ರೌದ್ರಾವತಾರ ತಾಳಿದ್ದ ಸ್ಮೃತಿ ಇರಾನಿ, ಸೋನಿಯಾ ಗಾಂಧಿಯವರು ಸಂಸತ್ತಿನ ಕ್ಷಮೆ ಕೇಳಬೇಕು ಎಂದು ಕಿರುಚಾಡಿದ್ದರು. ಆದರೆ, ತಮ್ಮದೇ ಪಕ್ಷದ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧದ ಆರೋಪದ ಬಗ್ಗೆ ಪ್ರಶ್ನೆ ಮಾಡಿದ ಪತ್ರಕರ್ತನಿಗೆ ಆತನ ಬಾಸ್‌ಗೆ ಹೇಳಿ ಕೆಲಸದಿಂದ ತೆಗೆಸುವ ಬೆದರಿಕೆಯೊಡ್ಡಿದ್ದರು.

ಎರಡೂವರೆ ತಿಂಗಳಿನಿಂದ ಹೊತ್ತಿ ಉರಿಯುತ್ತಿರುವ ಮಣಿಪುರದಿಂದ ಬಂದ ಆ ವಿಡಿಯೊ ʼವಿಶ್ವಗುರುʼವಿನ ಭಾರತದ ಸಮಸ್ತ ಜನರು ತಲೆ ತಗ್ಗಿಸುವಂತೆ ಮಾಡಿದೆ. ವಿಶ್ವಮಟ್ಟದಲ್ಲಿ ಪ್ರಭಾವಿ ನಾಯಕ ಎಂದು ತಮಗೆ ತಾವೇ ಅಂದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಕಳಚಿ, ಅರಗಿನಿಂದ ತಾನೇ ಕಟ್ಟಿಕೊಂಡ ಇಮೇಜ್‌ ಕರಗಿ ಬೆತ್ತಲಾಗಿದೆ.

ಬುಡಕಟ್ಟು ಸಮುದಾಯದ ಮಹಿಳೆಯನ್ನು ದೇಶದ ಪ್ರಥಮ ಪ್ರಜೆ ಮಾಡಿ, ಮಹಿಳೆಯೊಬ್ಬರಿಗೆ ಹಣಕಾಸಿನ ಖಾತೆ ನೀಡಿದ ಮಾತ್ರಕ್ಕೆ ಮೋದಿಜಿ ಮಹಿಳೆಯರನ್ನು ಗೌರವಿಸಿದ್ದಾರೆ, ಉನ್ನತ ಸ್ಥಾನ ನೀಡಿದ್ದಾರೆ ಎಂದುಕೊಂಡರೆ ಅದು ಮುಟ್ಟಾಳತನದ ಮಾತಾಗುತ್ತದೆ. ಅಷ್ಟೇ ಅಲ್ಲ, ಈ ಹೆಣ್ಣುಮಕ್ಕಳೆಲ್ಲ ಅಧಿಕಾರ ಸಿಕ್ಕ ನಂತರ ಸ್ತ್ರೀ ಸಂವೇದನೆಯನ್ನೇ ಕಳೆದುಕೊಳ್ಳುವುದು ಇನ್ನೂ ಅಪಾಯಕಾರಿ.

ಮೋದಿ ಅವರು ಪ್ರಧಾನಿಯಾದ ನಂತರ ದೇಶವೇ ತಲೆ ತಗ್ಗಿಸುವಂತಹ ಹಲವು ಪ್ರಕರಣಗಳು ನಡೆದಿವೆ. ಆಗಲೂ ಅವರು ಮೌನಿಯಾಗಿಯೇ ಇದ್ದರು. ಶ್ರೀನಗರ, ಉನ್ನಾವೊ, ಹತ್ರಾಸ್‌ನ ಅತ್ಯಾಚಾರ ಪ್ರಕರಣಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ಕಲಕಿದ ಘಟನೆಗಳು. ಆದರೆ, ಮೋದಿಯವರ 56 ಇಂಚಿನ ಎದೆಗೆ ಆ ಘಟನೆಯ ತಾಪ ತಟ್ಟಲೇ ಇಲ್ಲ. ಮೋದಿ ಸಂಪುಟದಲ್ಲಿರುವ ಸಚಿವೆಯರ ಕರುಳು ಚುರುಕ್‌ ಎಂದಿಲ್ಲ. ಅವರೆಲ್ಲ ಮೋದಿಯವರ ಬಾಯಿಗೆ ಕಟ್ಟಿದ ಅರಿವೆಯನ್ನೇ ತುಸು ಎಳೆದು ತಮ್ಮ ಬಾಯಿಗೂ ಮುಚ್ಚಿಕೊಂಡಂತಿದೆ. ಅಚ್ಚರಿಯೆಂದರೆ ರಾಷ್ಟ್ರಪತಿ ಮುರ್ಮು ಅವರೂ ಮಣಿಪುರದ ಹಿಂಸಾಚಾರದ ಬಗ್ಗೆ ಸರ್ಕಾರದ ಕಣ್ತೆರೆಸುವ ಮಾತಾಡಿಲ್ಲ. ಅಧಿಕಾರಯುತವಾಗಿ ಸರ್ಕಾರಕ್ಕೆ ನಿರ್ದೇಶನ ನೀಡುವ ಹಕ್ಕು ರಾಷ್ಟ್ರಪತಿಗಲ್ಲದೇ ಮತ್ಯಾರಿಗಿದೆ! ಅವರೂ ಮಾತನಾಡುತ್ತಿಲ್ಲ ಎಂದರೆ ಈ ದೇಶದ ಹೆಣ್ಣುಮಕ್ಕಳ ಪಾಲಿಗೆ ದುರಂತವೇ ಸರಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಣಿಪುರದಲ್ಲಿ ನೂರಾರು ಜನರ ಹತ್ಯೆಯಾದರೂ, ಸರಣಿಯಂತೆ ಗಲಭೆ ಭುಗಿಲೇಳುತ್ತಿದ್ದರೂ ಅತ್ತ ತಲೆ ಹಾಕದ, ಆ ಬಗ್ಗೆ ಮಾತೇ ಆಡದ, ತನಗೂ ಮಣಿಪುರಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮೌನವಾಗಿದ್ದ ಪ್ರಧಾನಿ, ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದ ನಂತರ ಗುರುವಾರ ಲೋಕಸಭಾ ಅಧಿವೇಶನ ಶುರುವಾಗುವ ಮುನ್ನ ಕೇವಲ 36 ಸೆಕೆಂಡ್‌ನಲ್ಲಿ ಮಣಿಪುರದ ಮಹಿಳೆಯರ ಮೇಲೆ ನಡೆದ ಕೃತ್ಯವನ್ನು ಖಂಡಿಸಿದ್ದಾರೆ. ಅದಾದ ನಂತರ ಮೋದಿಯ ಮಾತುಗಳನ್ನೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಪುನರುಚ್ಛರಿಸಿದ್ದಾರೆ. ನಿರ್ಮಲಾ ಸೀತಾರಾಮನ್‌ ತುಟಿ ಬಿಚ್ಚಿದಂತಿಲ್ಲ. ಇವರೆಲ್ಲ ನೋಡುವುದಕ್ಕೆ ಮಹಿಳೆಯರು ಮತ್ತು ಹೆಣ್ಣುಮಕ್ಕಳ ತಾಯಂದಿರು! ಆದರೇನು, ಹೆಂಗರುಳೇ ಇಲ್ಲದ ಸೋಗಲಾಡಿಗಳು.

ಮೋದಿ ಸರ್ಕಾರದಲ್ಲಿರುವ ಅಷ್ಟೂ ಮಹಿಳೆಯರಿಗೂ ಯಾವ ಭೂತ ಬಡಿದಿದೆ? ಅವರಿಗೆ ಬಾಯಿ ಬಿಡದಂತೆ ತಡೆಯುತ್ತಿರುವ ಆ ಶಕ್ತಿ ಯಾವುದು? ಒಂಬತ್ತು ವರ್ಷಗಳಲ್ಲಿ ದೇಶದೆಲ್ಲೆಡೆ ನಡೆದ ದಲಿತರ ಮೇಲಿನ ದೌರ್ಜನ್ಯ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಮುಸ್ಲಿಮರ ಮೇಲಿನ ಗುಂಪುಹಲ್ಲೆ, ಸ್ತ್ರೀ ವಿರೋಧಿ ಹೇಳಿಕೆಗಳಿಗೆ ಕನಿಷ್ಠ ಬಾಯಿ ಮಾತಿನ ಖಂಡನೆ ವ್ಯಕ್ತಪಡಿಸಿದ ಉದಾಹರಣೆ ಇಲ್ಲ. ರೈತರೊಬ್ಬರ ಬೇಜವಾಬ್ದಾರಿತನದಿಂದ ಕೇರಳದಲ್ಲಿ ಆನೆ ಸತ್ತಿದ್ದಕ್ಕೆ ಮರುಗಿ ಸುದ್ದಿಯಾದ ಉತ್ತರ ಪ್ರದೇಶದ ಸಂಸದೆ ಮನೇಕಾ ಗಾಂಧಿಯವರಿಗೂ ದೇಶದೆಲ್ಲೆಡೆ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸುವ ಧೈರ್ಯ ಇಲ್ಲವಾಯಿತೇ? ಅಥವಾ ತಮ್ಮ ಪಕ್ಷದಲ್ಲೇ ಬೇಕಾದಷ್ಟು ಸ್ತ್ರೀಪೀಡಕರು ಇರುವುದರಿಂದ ಸುಮ್ಮನಿರಬೇಕಾಯಿತೇ?

ಮೋದಿ ಸಂಪುಟದ ಸಚಿವೆಯರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್‌, ಶೋಭಾ ಕರಂದ್ಲಾಜೆ, ಮೀನಾಕ್ಷಿ ಲೇಖಿ ಸದಾ ಕಾಲವೂ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪಕ್ಷವನ್ನು ಗೇಲಿ ಮಾಡುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ್ದ ವಿರೋಧ ಪಕ್ಷದ ನಾಯರೊಬ್ಬರ ಬಗ್ಗೆ ಸದನದಲ್ಲಿ ರೌದ್ರಾವತಾರ ತಾಳಿದ್ದ ಸ್ಮೃತಿ ಇರಾನಿ ಸೋನಿಯಾ ಗಾಂಧಿಯವರು ಸಂಸತ್ತಿನ ಕ್ಷಮೆ ಕೇಳಬೇಕು ಎಂದು ಕಿರುಚಾಡಿದ್ದರು. ಆದರೆ, ಇತ್ತೀಚೆಗೆ ತಮ್ಮದೇ ಪಕ್ಷದ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿದ್ದ ಪ್ರತಿಭಟನೆಯ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರ ಕೊಡದೇ ಜಾರಿಕೊಂಡಿದ್ದರು. ಒಬ್ಬ ಪತ್ರಕರ್ತನಿಗೆ ʼನಿನ್ನ ಬಾಸ್‌ಗೆ ಹೇಳಿ ಕೆಲಸದಿಂದ ಕಿತ್ತು ಹಾಕಿಸುತ್ತೇನೆʼ ಎಂದು ಬೆದರಿಕೆ ಹಾಕಿದ್ದರು. ಮತ್ತೊಬ್ಬ ಸಚಿವೆ ಮೀನಾಕ್ಷಿ ಲೇಖಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೇ ಓಡಿ ಹೋಗಿ ಕಾರು ಹತ್ತಿ ಪಲಾಯನಗೈದಿದ್ದರು.

ಇದನ್ನು ಓದಿದ್ದೀರಾ? ಕಿಚ್ಚು ಹಚ್ಚಿದ ಮಣಿಪುರದ ವಿಡಿಯೋ : ದೇಶಾದ್ಯಂತ ಪ್ರತಿಭಟನೆ

ರಾಜ್ಯದಲ್ಲಿ ಹೆಣ ಬಿದ್ದ ತಕ್ಷಣ ಅದು ಹಿಂದೂ ಹೆಣವಾಗಿದ್ದರೆ ಓಡೋಡಿ ಬರುವ ಸಚಿವೆ ಶೋಭಾ ಕರಂದ್ಲಾಜೆ, ಹತ್ರಾಸ್‌, ಉನ್ನಾವೊ ಬಿಡಿ; ತನ್ನದೇ ಊರಿನ, ತನ್ನದೇ ಜಾತಿಯ ಬಾಲಕಿ ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆಯೇ ಬಾಯಿ ಬಿಟ್ಟೇ ಇಲ್ಲ. ಹನ್ನೊಂದು ವರ್ಷಗಳ ಹಿಂದೆ ಪ್ರಕರಣ ನಡೆದಾಗ ಆಕೆ ರಾಜ್ಯದ ಇಂಧನ ಸಚಿವೆ, ಆ ನಂತರ ಸಂಸದೆಯಾಗಿ ಈಗ ಕೇಂದ್ರ ಸಚಿವೆಯಾಗಿದ್ದಾರೆ. ಈಗಲೂ ಆಕೆ ಸೌಜನ್ಯ ಪ್ರಕರಣದ ಬಗ್ಗೆ ಮಾತಾಡಲ್ಲ. ಇವರಿಗೆಲ್ಲ ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಯಾಕೆ ಕಷ್ಟವಾಗುತ್ತಿದೆ? ಸ್ತ್ರೀಸಹಜ ಭಾವನೆಗಳು, ಕರುಣೆ, ಅಂತಃಕರಣ ಎಲ್ಲವನ್ನೂ ಕಳಚಿಟ್ಟು ರಾಜಕಾರಣಕ್ಕೆ ಹೋದವರೇ? ಹೆಣ್ಣುಮಕ್ಕಳ ಮೇಲಾಗುತ್ತಿರುವ ಪೈಶಾಚಿಕ ಕೃತ್ಯಗಳನ್ನು ಖಂಡಿಸುವುದಕ್ಕೂ ಮೋದಿಯವರ ಪರವಾನಗಿ ಬೇಕೇ ?

ಯಾವುದೇ ಸರ್ಕಾರ ಇರಲಿ, ಮಹಿಳೆಯರ ಮೇಲಿನ ದೌರ್ಜನ್ಯ, ಕ್ರೌರ್ಯವನ್ನು ತಡೆಯುವ ನಿಟ್ಟಿನಲ್ಲಿ ಮಹಿಳಾ ಪ್ರತಿನಿಧಿಗಳು ಪುರುಷರಿಗಿಂತ ಒಂದು ಹೆಜ್ಜೆ ಮುಂದೆ ಇರಬೇಕು. ಆದರೆ, ನಮ್ಮ ನಾಯಕಿಯರೂ ಪಕ್ಷಗಳ ಕೈಗೊಂಬೆಗಳಾಗುತ್ತಿರುವುದು ವಿಪರ್ಯಾಸ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ

ಎಪಿಎಂಸಿ ಕಾಯ್ದೆ ಬಂದಾಕ್ಷಣ ರೈತರ ಬದುಕು ಬಂಗಾರವಾಗುತ್ತದೆ ಎಂದು ಭ್ರಮಿಸುವ ಅಗತ್ಯವಿಲ್ಲ....

ಈ ದಿನ ಸಂಪಾದಕೀಯ | ಪ್ರಶ್ನಿಸುವವರಿಗೆ ನೈತಿಕತೆ ಇದ್ದರೆ ಪ್ರಶ್ನೆಗೆ ಬೆಲೆ, ಅಲ್ಲವೇ?

ಸರ್ಕಾರದ ನೂರೆಂಟು ಹಳವಂಡಗಳನ್ನು, ಹಗರಣಗಳನ್ನು ಸದನದಲ್ಲಿ ಎದ್ದುನಿಂತು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು,...