ನಾಳೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಗೃಹಸಚಿವರು ಯಾರಾಗಲಿದ್ದಾರೆ, ಅವರು ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಾರೋ ಅಥವಾ ಹಿಂದಿನಂತೆ ಮೃದು ಧೋರಣೆ ತಾಳಿ ಮತ್ತಷ್ಟು ಚಿಗುರಲು ಸಹಕರಿಸುತ್ತಾರೋ ಎಂಬುದರ ಮೇಲೆ ಕರಾವಳಿಯ ಕೋಮುವಾದದ ಉರಿ ಎಷ್ಟು ಏರಲಿದೆ ಎಂಬುದು ನಿರ್ಧಾರವಾಗಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದೆ. ಕಾಂಗ್ರೆಸ್ ಪಕ್ಷ 135 ಸೀಟು ಗಳಿಸುವ ಮೂಲಕ ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದ ಬಿಜೆಪಿ ಸರ್ಕಾರವನ್ನು ಮನೆಗೆ ಕಳಿಸಿದೆ. ದಕ್ಷಿಣ ಭಾರತವನ್ನು ಬಿಜೆಪಿ ಮುಕ್ತ ಮಾಡಿರುವ ಹೆಮ್ಮೆ ಕರ್ನಾಟಕ ಕಾಂಗ್ರೆಸ್ಸಿನದು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ʼಸಿದ್ರಾಮುಲ್ಲಾ ಖಾನ್ʼ ಎಂದು ಗೇಲಿ ಮಾಡುತ್ತಿದ್ದ ಚಿಕ್ಕಮಗಳೂರು ಶಾಸಕ ಸಿ ಟಿ ರವಿಯ ಸೋಲು ಇಡೀ ಚಿಕ್ಕಮಗಳೂರು ಜಿಲ್ಲೆಯನ್ನು ಕಡು ಕೋಮುವಾದಿ ರಾಜಕಾರಣದ ಕಪಿಮುಷ್ಠಿಯಿಂದ ಬಿಡಿಸಿದೆ. ರೋಸಿದ್ದ ಮತದಾರರು ಕೊಂಚ ನಿರಾಳ ನಿಟ್ಟುಸಿರು ಬಿಡುವಂತಾಗಿದೆ. ಶಿವಮೊಗ್ಗದಲ್ಲಿ ಕೋಮುವಾದದ ಬೆಂಕಿಗೆ ನಿತ್ಯ ನಿರಂತರ ಎಣ್ಣೆ ಎರೆದು ಭುಗಿಲೆಬ್ಬಿಸುತ್ತಿದ್ದ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪನವರ ರಾಜಕೀಯ ಹೆಚ್ಚುಕಡಿಮೆ ಅಂತ್ಯವಾಗಿದೆ.
ಇದೇ ಸಮಯದಲ್ಲಿ ಆತಂಕದ ವಿಚಾರವೊಂದು ಹಾಗೆಯೇ ಉಳಿದು ಹೋಗಿದೆ. ಇಡೀ ರಾಜ್ಯದ ಜನರನ್ನು ತಟ್ಟಿದ ಬೆಲೆಯೇರಿಕೆ, ಕೋಮುವಾದ, ದ್ವೇಷ-ಸುಳ್ಳಿನ ರಾಜಕಾರಣದ ಬಿಸಿ ಮತ್ತು ಅಸಹ್ಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ತಗುಲಿಲ್ಲ. ಬುದ್ಧಿವಂತರ ನಾಡಿನ ಜನ ಎಂದು ಅವರನ್ನು ಕರೆಯುವುದು ಅತಿರಂಜನೆಯಿದ್ದೀತು ಎನಿಸಿಬಿಡುತ್ತದೆ. ಉಡುಪಿ ಜಿಲ್ಲೆಯ ಎಲ್ಲ ಸ್ಥಾನಗಳು, ದಕ್ಷಿಣ ಕನ್ನಡದ ಆರು ಸ್ಥಾನ ಕೋಮುವಾದಿಗಳ ಮುಷ್ಠಿಯಲ್ಲಿ ಮುಂದುವರೆದಿವೆ. ಕರಾವಳಿ ಸೀಮೆ ಎಂಬುದು ಕೋಮುವಾದಿಗಳ ಪ್ರಯೋಗಶಾಲೆ ಎಂಬ ಕಳಂಕಕ್ಕೆ ಚ್ಯುತಿ ಬಂದೇ ಇಲ್ಲ.
2022ರಲ್ಲಿ ದೇಶದ ಗಮನ ಸೆಳೆದ ಹಿಜಾಬ್ ವಿರೋಧಿ ಪ್ರತಿಭಟನೆ, ಜಾತ್ರೆ-ಸಂತೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಮುಂತಾದ ಕೋಮು ಸಾಮರಸ್ಯ ಕದಡುವ ಅಭಿಯಾನಗಳು ಹುಟ್ಟಿದ್ದು ಈ ಎರಡು ಕರಾವಳಿಯ ಜಿಲ್ಲೆಗಳಲ್ಲಿಯೇ. ಹಿಜಾಬ್ ವಿವಾದದಲ್ಲಿ ಹುಟ್ಟಿ ಬೆಳೆದ ಕೋಮುವಾದಿ ನಾಯಕ ಯಶ್ಪಾಲ್ ಸುವರ್ಣ ಈಗ ಉಡುಪಿ ಕ್ಷೇತ್ರದ ಶಾಸಕ!
ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು, ಕರ್ನಾಟಕ ರಾಜ್ಯ ಕೋಮುವಾದದಿಂದ ಮುಕ್ತವಾಯಿತು ಎಂದು ನಿರಾಳ ದೂರವೇ ಉಳಿದಿದೆ. ನಿಜ ಹೇಳಬೇಕೆಂದರೆ ಕೋಮುವಾದಿಗಳು ಬಹಳ ಚುರುಕಾಗುವುದು ಈಗಲೇ. ಬಿಜೆಪಿ ನಾಯಕರಿಗೆ ತಮ್ಮ ಕೋಮುವಾದಿ ಕಾರ್ಯಸೂಚಿಯನ್ನು ಜಾರಿಗೊಳಿಸಲು ಅಥವಾ ಸಮಾಜದಲ್ಲಿ ಕೋಮುಗಲಭೆ, ಆತಂಕ ಮೂಡಿಸಲು ಅವರು ಅಧಿಕಾರದಲ್ಲಿ ಇರಲೇ ಬೇಕೆಂದೇನೂ ಇಲ್ಲ. ಧರ್ಮರಾಜಕಾರಣ ಮತ್ತು ಕೋಮುವಾದದ ಕೆಂಡವನ್ನು ಸದಾ ನಿಗಿ ನಿಗಿ ಇಡದಿದ್ದರೆ ಈ ಪಕ್ಷದ ಕತೆ ಮುಗಿದಂತೆಯೇ ಸರಿ. ಹಾಗಾಗದಂತೆ ಬಿಜೆಪಿಯ ನಾಯಕರು ಅಧಿಕಾರದಲ್ಲಿ ಇಲ್ಲದಿದ್ದಾಗ ಹೆಚ್ಚು ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಾರೆ. ಈ ಪ್ರವೃತ್ತಿಯೇ ಮುಂದೆ ಕಾಂಗ್ರೆಸ್ ಸರ್ಕಾರಕ್ಕೆ ಸವಾಲಾಗಬಹುದು.
ಚುನಾವಣಾ ಪ್ರಚಾರದ ಉದ್ದಕ್ಕೂ ಕರಾವಳಿಯಲ್ಲಿ ಬಿಜೆಪಿ ನಾಯಕರು, ʼಇದು ಹಿಂದುತ್ವ ಮತ್ತು ಜಿಹಾದಿಗಳ ನಡುವಿನ ಚುನಾವಣೆ, ಟಿಪ್ಪು ಮತ್ತು ಅಬ್ಬಕ್ಕನ ನಡುವಿನ ಚುನಾವಣೆ, ದೇಶಪ್ರೇಮಿಗಳು ಮತ್ತು ಭಯೋತ್ಪಾದಕರ ನಡುವಿನ ಚುನಾವಣೆ, ಸಾವರ್ಕರ್ ಮತ್ತು ಟಿಪ್ಪುವಿನ ನಡುವಿನ ಚುನಾವಣೆ ಎಂದು ನಗಾರಿ ಬಾರಿಸಿ ಕೋಮುವಾದದ ಸುತ್ತಲೇ ಗಿರಕಿ ಹೊಡೆದಿದ್ದಾರೆ. ಈ ದ್ವೇಷದ ಡೈಲಾಗ್ ಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಜನ ಮತ ಮನ್ನಣೆ ಕೊಟ್ಟಿದ್ದಾರೆ ಎಂಬುದು ಅಚ್ಚರಿಯ ಮತ್ತು ನೋವಿನ ಸಂಗತಿ. ಖುಷಿಯ ವಿಚಾರವೆಂದರೆ ಉಡುಪಿಯ ಜೊತೆ ಲೋಕಸಭಾ ಕ್ಷೇತ್ರ ಹಂಚಿಕೊಂಡಿರುವ ಚಿಕ್ಕಮಗಳೂರಿನ ಜನ ‘ಕಮಲ’ವನ್ನು ಹೊಸಕಿ ಹಾಕಿದ್ದಾರೆ. ಸಂಕಷ್ಟದಲ್ಲಿರುವ ಜನ ಹಿಂದುತ್ವ ಭಜರಂಗಬಲಿ, ಮೋದಿ ಮುಖ ನೋಡಿ ಮತ ಹಾಕಿಲ್ಲ ಎಂಬ ಕಟುಸತ್ಯ ಕೋಮುವಾದಿಗಳ ನಿದ್ದೆ ಕೆಡಿಸಿದೆ.
ಕಾಂಗ್ರೆಸ್ ಸಭೆಗಳಲ್ಲಿ ನುಗ್ಗಿ ಪಾಕಿಸ್ತಾನ ಪರ ಘೋಷಣೆ ಕೂಗುವುದು, ಕೋಮು ಗಲಭೆಗಳನ್ನು ಪ್ರಚೋದಿಸುವುದನ್ನು ಬಿಜೆಪಿಯವರು ತಾವು ಅಧಿಕಾರದಲ್ಲಿ ಇದ್ದಾಗಲೂ, ಇಲ್ಲದಾಗಲೂ ಮಾಡಿರುವ ಅನೇಕ ಉದಾಹರಣೆಗಳಿವೆ. ಕೊರೊನಾ ಕಾಲದಲ್ಲೂ ‘ಹೆಣ ರಾಜಕಾರಣ’ದಲ್ಲಿ ಅವರು ಹಿಂದೆ ಬಿದ್ದಿಲ್ಲ. ಬೆಂಗಳೂರಿನ ಗೋರಿಪಾಳ್ಯದಲ್ಲಿ ಇಬ್ಬರು ಬೈಕ್ ಸವಾರರ ನಡುವೆ ನಡೆದ ಚಿಕ್ಕ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ ಆದಾಗ, ಉರ್ದು ಮಾತಾಡಿಲ್ಲ ಎಂಬ ಕಾರಣಕ್ಕೆ ಹಿಂದು ಯುವಕನ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಸಿ ಟಿ ರವಿ, ಹೇಳಿಕೆ ಕೊಟ್ಟಿದ್ದರು. ಸ್ವತಃ ನಗರ ಪೊಲೀಸ್ ಕಮಿಷನರ್ ಅದು ಕ್ಷುಲ್ಲಕ ಕಾರಣಕ್ಕೆ ನಡೆದ ಕೊಲೆ ಎಂದು ಹೇಳಿಕೆ ನೀಡಿದಾಗ ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು.
ಕರಾವಳಿಯಲ್ಲಿ ಬಿಜೆಪಿ ನಾಯಕರು ಎಂದಿನಂತೆ ಸಕ್ರಿಯರಾಗಿದ್ದಾರೆ. ಚುನಾವಣಾ ಫಲಿತಾಂಶದ ದಿನ ಸಂಭ್ರಮಾಚರಣೆಯ ವೇಳೆ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆ ಬಗ್ಗೆ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರ ಈ ಹೇಳಿಕೆಯನ್ನೇ ನೋಡಿ- “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ತಾಲೀಬಾನೀಕರಣ ಶುರುವಾಗಿದೆ” .
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿಯ ಕಾರ್ಯಕರ್ತರೇ ಬಿಜೆಪಿ ಅಭ್ಯರ್ಥಿಯ ಸೋಲಿನ ಹತಾಶೆಯಿಂದ ನಳಿನ್‌ಕುಮಾರ್ ಮತ್ತು ಡಿ ವಿ ಸದಾನಂದ ಗೌಡರ ಚಿತ್ರವಿರುವ ಪೋಸ್ಟರ್‌ಗೆ ಚಪ್ಪಲಿ ಹಾರ ಹಾಕಿದ್ದರು. ಇದರ ವಿರುದ್ಧ ಮಾಜಿ ಶಾಸಕ ಮಠಂದೂರು ಮತ್ತು ಸೋತ ಅಭ್ಯರ್ಥಿ ಆಶಾ ತಿಮ್ಮಪ್ಪ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ನಾಲ್ವರು ಯುವಕರನ್ನು ಬಂಧಿಸಿದ ಪೊಲೀಸರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಈ ಘಟನೆಯ ಹಿಂದೆ ಕಾಂಗ್ರೆಸ್ ಇದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ ಈ ದಿನ ಸಂಪಾದಕೀಯ | ಬಿಜೆಪಿಯ ಹಾದಿ ಹಿಡಿದರೆ ಕಾಂಗ್ರೆಸ್‌ನ ಸೊಂಟವನ್ನೂ ಮುರಿದೀತು ಜನಶಕ್ತಿ!
ನಾಳೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಹೊಸ ಗೃಹಸಚಿವರು ಯಾರಾಗಲಿದ್ದಾರೆ, ಅವರು ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಾರೋ, ಅಥವಾ ಹಿಂದಿನಂತೆ ಮೃದು ಧೋರಣೆ ತಾಳಿ ಮತ್ತಷ್ಟು ಚಿಗುರಲು ಸಹಕರಿಸುತ್ತಾರೋ ಎಂಬುದರ ಮೇಲೆ ಕರಾವಳಿಯ ಕೋಮುವಾದದ ಉರಿ ಎಷ್ಟು ಏರಲಿದೆ ಎಂಬುದು ನಿರ್ಧಾರವಾಗಲಿದೆ. ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಕರಾವಳಿಯಲ್ಲಿ ಯು ಟಿ ಖಾದರ್, ರಮಾನಾಥ ರೈ, ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ನಾಲ್ವರು ಮಂತ್ರಿಗಳಿದ್ದರೂ ಕೋಮುವಾದವನ್ನು ಮಟ್ಟ ಹಾಕುವಲ್ಲಿ ವಿಫಲರಾಗಿದ್ದರು. ಅದೇ ಕಾಂಗ್ರೆಸ್‌ಗೆ ಮುಳುವಾಗಿತ್ತು.
ಈ ಬಾರಿಯಾದರೂ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ಮತ್ತು ಶಾಂತಿ ಸುವ್ಯವಸ್ಥೆಗೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ಮುಲಾಜಿಲ್ಲದೇ ಬಿಗಿ ಕ್ರಮ ಜರುಗಿಸಬೇಕಿದೆ.

ಕೋಮುವಾದವನ್ನೇ ಉಂಡು ಜನ ಬದುಕಬಹುದೇ? ಜಾತಿಯನ್ನು ರಕ್ತಕ್ಕಿಳಿಸಿಕೊಂಡದ್ದಾಯಿತು , ಏನೇ ಅಧ್ಯಾತ್ಮದ ಮಾತನಾಡಿದರೂ. ಮುಂದಿನ ದಿನಗಳು ಅನ್ನ,ಉದ್ಯೋಗ,ಅಭಿವೃದ್ಧಿಯ ದಿನಗಳಾಗಿರಲಿ ಎಂದು ಆಶಿಸುತ್ತೇನೆ.