ಈ ದಿನ ಸಂಪಾದಕೀಯ | ಪೋಕ್ಸೊ ಕಾಯ್ದೆ ಬಂದರೂ ತಗ್ಗದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ

Date:

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರಿಗೆ ಪೋಕ್ಸೊ ಕಾಯ್ದೆಯಡಿ ಶಿಕ್ಷೆ ಆಗಬಹುದು. ಆದರೆ ಮಕ್ಕಳ ಮೇಲಾಗುವ ಮಾನಸಿಕ ಆಘಾತ, ಹೆತ್ತವರು ನಿರಂತರ ಅನುಭವಿಸುವ ಸಂಕಟಕ್ಕೆ ಮದ್ದು ಯಾವುದಿದೆ. ತನ್ನ ದೈಹಿಕ ರಚನೆ, ಅಂಗಾಂಗಗಳ ಬಗ್ಗೆ, ಸೆಕ್ಸ್‌ ಬಗ್ಗೆ ಅರಿವೇ ಇಲ್ಲ ಮಕ್ಕಳ ಮೇಲೆ ಬಲಾತ್ಕಾರದ ಲೈಂಗಿಕ ಕ್ರಿಯೆಯಿಂದ ಆಗುವ ದೈಹಿಕ, ಮಾನಸಿಕ ಗಾಯವನ್ನು ಅಪರಾಧಿಯ ಶಿಕ್ಷೆ ಗುಣಪಡಿಸುವುದೇ?

ಆಗಸ್ಟ್‌ 3ರಂದು ಬೆಂಗಳೂರಿನ ಖಾಸಗಿ ಶಾಲೆಯ ಹತ್ತು ವರ್ಷದ ಮಗುವಿನ ಮೇಲೆ ಅದೇ ಶಾಲೆಯ ಮುಖ್ಯಸ್ಥನೇ ಅತ್ಯಾಚಾರ ಮಾಡಿರುವ ಸುದ್ದಿ ಬಂದಿದೆ. ಅದೂ Dyslexia ಎಂಬ ನರದೌರ್ಬಲ್ಯ ಇರುವ ಮಗು. ಶಾಲಾ ವಾತಾವರಣದಲ್ಲಿ ನೂರಾರು ಮಕ್ಕಳು, ಸಿಬ್ಬಂದಿ ಇರುವ ಕಡೆಯೂ ಹೆಣ್ಣು ಮಗು ಸುರಕ್ಷಿತವಾಗಿಲ್ಲ ಎಂಬುದು ಮನುಷ್ಯನ ಕೀಳು ಕಾಮವಾಂಛೆಯ ಗಂಭೀರತೆಯನ್ನು ತೋರಿಸುತ್ತದೆ. ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ ಅಷ್ಟೇ ಅಲ್ಲ ನಾಚಿಕೆಪಡಬೇಕಾದ ವಿಚಾರ.

ಬೆಳಿಗ್ಗೆ ಶಾಲೆಗೆ ಬಂದ ಮಗುವನ್ನು ಶಾಲಾ ಮುಖ್ಯಸ್ಥ ಮತ್ತು ಪ್ರಾಂಶುಪಾಲ ಖಾಲಿಯಾಗಿದ್ದ ಕೊಠಡಿಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮನೆಗೆ ಬಂದ ಬಳಿಕ ಮಗು ನೋವು ತಾಳಲಾರದೆ ಒದ್ದಾಡಿದೆ. ಪೋಷಕರು ಮಗಳ ಬಳಿ ವಿಚಾರಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಮಗುವನ್ನು ಸ್ನಾನ ಮಾಡಿಸುವಾಗ ಅಮ್ಮನಿಗೆ ರಕ್ತದ ಕಲೆಗಳು ಕಂಡುಬಂದಿವೆ. ಯಾವ ಹೆತ್ತ ತಾಯಿಯೂ ಕಾಣಲಾರದ ಕಲೆಗಳವು.

ಶಾಲೆಗೆ ಹೋಗುವ ಎಳೆ ಮಗು ಬೆಳಿಗ್ಗೆಯಿಂದ ಸಂಜೆಯವರೆಗೂ ಅಪ್ಪ ಅಮ್ಮನಿಂದ ಪ್ರತ್ಯೇಕವಾಗಿರುವಾಗ ಭದ್ರತೆಯ ಭಾವ ಮೂಡಿಸಬೇಕಾದ, ಇಡೀ ದಿನ ಒಡನಾಟದಲ್ಲಿರುವ ಪ್ರೀತಿಯ ಮಾಮ, ಅಣ್ಣ, ಅಂಕಲ್‌, ಸರ್‌ ಗಳು ಹೀಗೆ ಮುಕ್ಕಿ ತಿಂದರೆ ನಾವು ಬದುಕುತ್ತಿರುವುದು ಎಂತಹ ಸಮಾಜ? ಹಾಲುಗಲ್ಲದ ಹಸುಳೆಗಳನ್ನು ಕಂಡಾಗಲೂ ಉದ್ರೇಕಗೊಳ್ಳುವ ಮನುಷ್ಯರು ಇರುವ ಈ ಸಮಾಜದಲ್ಲಿ ಯಾವ ಕ್ರಾಂತಿ ಮಾಡಿದರೇನು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ, ಮನೆಗೆ ತಲುಪಿಸುತ್ತಾರೆ ಎಂದು ಆಟೋ ಅಂಕಲ್‌, ಬಸ್‌ ಡ್ರೈವರ್‌ ಮಾಮ, ಸೆಕ್ಯುರಿಟಿ ಅಣ್ಣ, ಸಾರ್‌ಗಳನ್ನು ನಂಬಿ ಹೆತ್ತವರೂ ತಮ್ಮ ಮಕ್ಕಳನ್ನು ಕಳಿಸಿಕೊಡುತ್ತಾರಲ್ಲಾ, ಅವರಿಗೇನು ಗೊತ್ತು ಅವರಲ್ಲೊಬ್ಬ ಶಿಶುಕಾಮಿ, ಅತ್ಯಾಚಾರಿ ಇರುತ್ತಾನೆಂದು? ಹಾಗೆ ಎಲ್ಲರನ್ನೂ ಅನುಮಾನದಿಂದ ನೋಡುತ್ತ ಜೀವನ ನಡೆಸಲು ಸಾಧ್ಯವೇ?

ಶಾಲೆಗಳಲ್ಲಿ ಶಿಕ್ಷಕರು, ಶಾಲಾ ವಾಹನಗಳ ಸಿಬ್ಬಂದಿಗಳಿಂದ ಪುಟ್ಟ ಹೆಣ್ಣುಮಕ್ಕಳು ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದು ಹೊಸದೇನಲ್ಲ. ಕೆಲ ವರ್ಷಗಳ ಹಿಂದೆ ಇದೇ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರವಾಗಿರುವ ಸುದ್ದಿ ನಗರವನ್ನು ತಲ್ಲಣಗೊಳಿಸಿತ್ತು. ಅದಾದ ನಂತರ ಸರಣಿಯಂತೆ ಕೆಲವು ಅಂತಹದ್ದೇ ಸುದ್ದಿಗಳು ಶಾಲೆಯ ಪಡಸಾಲೆಯಿಂದ ಬಂದಿದ್ದವು. ಈಗಲೂ ಸುದ್ದಿಯಾಗುತ್ತಿರುವುದು ಬೆರಳೆಣಿಕೆಯಷ್ಟು, ಆಗದೇ ಇರುವುದು ಅದೆಷ್ಟಿದೆಯೋ.

ದಕ್ಷಿಣ ಕನ್ನಡ ವಿಟ್ಲದಲ್ಲಿ ಸತತ ಎರಡು ವರ್ಷಗಳಿಂದ ಒಬ್ಬರಾದ ಮೇಲೊಬ್ಬರಂತೆ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ವಾರದ ಹಿಂದಷ್ಟೇ ಬೆಳಕಿಗೆ ಬಂದಿತ್ತು. ಕೇಸರಿ ಶಾಲು ಹಾಕಿಕೊಂಡು ಧರ್ಮರಕ್ಷಣೆ, ಹಿಂದೂ ಹೆಣ್ಣುಮಕ್ಕಳ ರಕ್ಷಣೆ, ಲವ್‌ ಜಿಹಾದ್‌ ಎಂದೆಲ್ಲ ಬೊಗಳೆ ಬಿಡುವ ಸಂಘಟನೆಗೆ ಸೇರಿದ ಹುಡುಗರು ತಾವೇ ಅತ್ಯಾಚಾರ ಪ್ರಕರಣದ ಆರೋಪಿಗಳು. ಸಹಪಾಠಿಗಳು, ಸ್ನೇಹಿತರು, ತಮಗಿಂತ ಚಿಕ್ಕವಯಸ್ಸಿನ ಹುಡುಗರು, ಅಪ್ರಾಪ್ತ ಹುಡುಗರಿಂದ ಹೀಗೆ ಎಗ್ಗಿಲ್ಲದೇ ಹೆಣ್ಣುಮಕ್ಕಳ ಮೇಲೆ ಎಲ್ಲೆಂದರಲ್ಲಿ, ಧರ್ಮ ಜಾತಿಗಳ ಗಡಿಗಳಿಲ್ಲದೇ ಲೈಂಗಿಕ ಕಿರುಕುಳ ನಡೆಯುತ್ತಿದೆ.

2012ರಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದ ಒಕ್ಕೂಟ ಸರ್ಕಾರ ಮಹತ್ವದ ಕಾಯ್ದೆಯೊಂದನ್ನು ಜಾರಿಗೆ ತಂದಿತ್ತು. POCSO (Protection of Children from Sexual Offences Act, 2012). ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಮಾನವೀಯ ಕಾಳಜಿಯಿರುವ ಕಾಯ್ದೆಯದು. ಈ ಕಾಯ್ದೆಯಡಿ ನೂರಾರು ಅಪ್ರಾಪ್ತಮಕ್ಕಳ ಬಾಕರು ಜೈಲಿಗೆ ಹೋಗಿದ್ದಾರೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಸೂಕ್ತ ಸಾಕ್ಷ್ಯಾಧಾರ ಇದ್ದರೆ ಅವರು ಜೈಲೂಟ ಮಾಡಲೇಬೇಕು. ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾಗದಿರುವ ಪ್ರಕರಣ ಬಹಳ ಕಡಿಮೆ. ಕಳೆದ ವರ್ಷ ದೇಶದಲ್ಲೇ ಸುದ್ದಿಯಾದ ಚಿತ್ರದುರ್ಗದ ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಸ್ವಾಮಿ ತಾನೇ ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯ ಬಡ ಅಪ್ರಾಪ್ತ ಬಾಲಕಿಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಪ್ರಕರಣದಲ್ಲಿ ಬಂಧನವಾಗಿರುವುದು ಪೋಕ್ಸೊ ಕಾಯ್ದೆಯ ತಾಕತ್ತು. ದೇಶದಲ್ಲಿಯೇ ಬಲು ಪ್ರಭಾವಶಾಲಿ ಮಠದ ಸ್ವಾಮಿ ಆಗಿದ್ದರೂ ಬಂಧನವಾಗಿ ಹತ್ತು ತಿಂಗಳಾದರೂ ಆತನಿಗೆ ಜಾಮೀನು ಸಿಗದಿರುವುದು ಕಾಯ್ದೆಯ ಉರುಳು ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಸಾಕ್ಷಿ.

ಕಾಯ್ದೆಯೇನೋ ಅಪರಾಧಿಗಳಿಗೆ ಶಿಕ್ಷೆ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ ಏನೂ ಅರಿಯದ ಕಂದಮ್ಮಗಳ ಮೇಲಿನ ಕಾಮುಕರ ದಾಳಿ ಕಡಿಮೆಯಾಗಿದೆಯಾ? ಇಲ್ಲ. ಹಾಗೆ ನೋಡಿದರೆ ಯಾವ ಕಾಯ್ದೆಗಳು ಮನುಷ್ಯರಲ್ಲಿ ಭಯ ಹುಟ್ಟಿಸಿ ಅಪರಾಧ ಮಾಡದಂತೆ ತಡೆದಿದೆ? ವರದಕ್ಷಿಣೆ ಕಿರುಕುಳ, ಜಾತಿನಿಂದನೆ, ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ, ಅತ್ಯಾಚಾರ, ಕೊಲೆ… ಎಲ್ಲವನ್ನೂ ತಡೆಯಲು ಕಾಯ್ದೆಗಳಿವೆ. ಆದರೆ ಅದರ ಭಯ ಮಾತ್ರ ಯಾರಿಗೂ ಇಲ್ಲ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರಿಗೆ ಪೋಕ್ಸೊ ಕಾಯ್ದೆಯಡಿ ಶಿಕ್ಷೆ ಆಗಬಹುದು. ಆದರೆ ಮಕ್ಕಳ ಮೇಲಾಗುವ ಮಾನಸಿಕ ಆಘಾತ, ಹೆತ್ತವರು ನಿರಂತರ ಅನುಭವಿಸುವ ಸಂಕಟಕ್ಕೆ ಮದ್ದು ಯಾವುದಿದೆ. ತನ್ನ ದೈಹಿಕ ರಚನೆ, ಅಂಗಾಂಗಗಳ ಬಗ್ಗೆ, ಸೆಕ್ಸ್‌ ಬಗ್ಗೆ ಅರಿವೇ ಇಲ್ಲ ಮಕ್ಕಳ ಮೇಲೆ ಬಲಾತ್ಕಾರದ ಲೈಂಗಿಕ ಕ್ರಿಯೆಯಿಂದ ಆಗುವ ದೈಹಿಕ, ಮಾನಸಿಕ ಗಾಯವನ್ನು ಅಪರಾಧಿಯ ಶಿಕ್ಷೆ ಗುಣಪಡಿಸುವುದೇ?

ಕನಿಷ್ಠ ಶಾಲೆ, ಕಾಲೇಜು, ಕಚೇರಿ, ದುಡಿಯುವ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆಯದಂತೆ ನೋಡಿಕೊಳ್ಳುವುದು ಅಂತಹ ಸವಾಲಿನ ಕೆಲಸವೇನಲ್ಲ. ಆದರೆ, ಶಾಲಾ ಮುಖ್ಯಸ್ಥರೇ ಅಂತಹ ಕಾಮುಕರಾದಾಗ ಅವರ ಮೇಲೆ ಕಣ್ಣಿಡುವವರು ಯಾರು. ಇಂತಹ ಪ್ರಕರಣಗಳ ತುರ್ತು ವಿಚಾರಣೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾದರೆ ಸ್ವಲ್ಪ ಮಟ್ಟಿಗೆ ಕೆಲವರಿಗಾದರೂ ಕಾನೂನಿನ ಭಯ ಹುಟ್ಟಬಹುದು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಗ್ಯಾರಂಟಿಗಳ ಅಸ್ತಿಭಾರದ ಮೇಲೆ ಕಟ್ಟಿದ ಅಹಿಂದ ಬಜೆಟ್

ಐದು ಗ್ಯಾರಂಟಿಗಳನ್ನು ಜಾರಿಗೆ ತಂದರೂ, ರಾಜ್ಯದ ಹಣಕಾಸಿನ ಸ್ಥಿತಿಗತಿ ಕೆಡದಂತೆ ನಿಭಾಯಿಸಿರುವುದು...

ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ

ಎಪಿಎಂಸಿ ಕಾಯ್ದೆ ಬಂದಾಕ್ಷಣ ರೈತರ ಬದುಕು ಬಂಗಾರವಾಗುತ್ತದೆ ಎಂದು ಭ್ರಮಿಸುವ ಅಗತ್ಯವಿಲ್ಲ....