ಈ ದಿನ ಸಂಪಾದಕೀಯ | ಭದ್ರಾ ಮೇಲ್ದಂಡೆ ಯೋಜನೆ; ಕರ್ನಾಟಕದ ಮೇಲೆ ಮೋದಿ ಸರ್ಕಾರಕ್ಕೆ ಹಗೆತನವೇಕೆ?

Date:

ಕರ್ನಾಟಕಕ್ಕೆ ಬಿಜೆಪಿಯ ಮರ್ಜಿಯೇನೂ ಬೇಕಿಲ್ಲ. ನಮ್ಮ ತೆರಿಗೆಯ ನ್ಯಾಯಯುತ ಪಾಲನ್ನು ಕೇಳುವುದು, ಯೋಜನೆಗಳ ಅನುಷ್ಠಾನದಲ್ಲಿ ಧನಸಹಾಯ ಕೇಳುವುದು ನಮ್ಮ ರಾಜ್ಯದ ಹಕ್ಕು. ಇದು ಒಕ್ಕೂಟ ಸರ್ಕಾರದ ಜವಾಬ್ದಾರಿಯೂ ಹೌದು. ಆದರೆ, ಬಿಜೆಪಿಗೆ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ ಎನ್ನುವುದಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಯು ಟರ್ನ್ ಹೊಡೆದಿರುವುದೇ ನಿದರ್ಶನ.  

ಅನ್ನಭಾಗ್ಯ ಯೋಜನೆಗೆ ಹಣ ಕೊಟ್ಟರೂ ಕರ್ನಾಟಕಕ್ಕೆ ಅಕ್ಕಿ ಕೊಡುವುದಿಲ್ಲ ಎಂದಿದ್ದ ಕೇಂದ್ರ ಸರ್ಕಾರ ಈಗ ರಾಜ್ಯಕ್ಕೆ ಮತ್ತೊಂದು ಆಘಾತ ನೀಡಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದಿದ್ದ ಕೇಂದ್ರ ಸರ್ಕಾರ, ಇದೀಗ ತನ್ನ ಮಾತಿಗೆ ತಪ್ಪಿ ನಡೆಯುತ್ತಿದೆ.  ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ ನಾರಾಯಣಸ್ವಾಮಿ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಗಳಿಂದ ಈ ವಿಚಾರ ಸ್ಪಷ್ಟವಾಗಿದೆ.

ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದ ಮಹತ್ವದ ನೀರಾವರಿ ಯೋಜನೆಗಳಲ್ಲಿ ಒಂದು. ಯೋಜನೆಗೆ ಕೇಂದ್ರ ಸರ್ಕಾರವು ಶೇ.60 ಮತ್ತು ರಾಜ್ಯ ಸರ್ಕಾರವು ಶೇ.40ರಷ್ಟು ವೆಚ್ಚವನ್ನು ಭರಿಸುವ ಬಗ್ಗೆ ತೀರ್ಮಾನವಾಗಿತ್ತು. ಇದರಿಂದ ಮಲೆನಾಡಿನ ಚಿಕ್ಕಮಗಳೂರು, ಬಯಲುಸೀಮೆಯ ಚಿತ್ರದುರ್ಗ, ತುಮಕೂರು ಜಿಲ್ಲೆಗಳ 357 ಕೆರೆಗಳಿಗೆ ನೀರು ತುಂಬಿಸುವುದರ ಜತೆಗೆ ಹನಿ ನೀರಾವರಿ ಮೂಲಕ 2.25 ಲಕ್ಷ ಹೆಕ್ಟೇರ್‌ಗೆ ಹನಿ ನೀರಾವರಿ ಸೌಲಭ್ಯ ಸಿಗಲಿದೆ.

ಯೋಜನೆ ಘೋಷಣೆಯಾದ ನಂತರ ರಾಜ್ಯಕ್ಕೆ ಹಲವಾರು ತೊಡಕುಗಳು ಎದುರಾಗಿದ್ದವು. ಪರಿಸರ ಇಲಾಖೆಯ ನಿರಾಕ್ಷೇಪಣೆಯೂ ಸೇರಿದಂತೆ ಕೇಂದ್ರದ ಹಲವು ಇಲಾಖೆ, ನಿರ್ದೇಶನಾಲಯಗಳಿಂದ ಪರವಾನಗಿ ಪಡೆಯುವಲ್ಲಿ ಅಡೆತಡೆ ಎದುರಾಗಿತ್ತು. ಜೊತೆಗೆ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾದಲ್ಲಿ ಇವೆಲ್ಲ ಅಡೆತಡೆಗಳಿಂದ ಮುಕ್ತಿ ಸಿಗುತ್ತಿತ್ತು. ಜೊತೆಗೆ ಯೋಜನೆಯ ಪರಿಷ್ಕೃತ ವೆಚ್ಚ 21 ಸಾವಿರ ಕೋಟಿ ರೂ.ಗಳಲ್ಲಿ 16,125 ಕೋಟಿ ರೂ.ಗಳನ್ನು ಕೇಂದ್ರ ಭರಿಸಲಿದ್ದು, 2018-19ನೇ ಸಾಲಿನ ನಂತರ ಆಗಿರುವ ವೆಚ್ಚವನ್ನೂ ಕೇಂದ್ರವೇ ನೀಡುತ್ತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಎಷ್ಟು ಮುಖ್ಯ ಎನ್ನುವುದು ಬಿಜೆಪಿಗೆ ಗೊತ್ತಿತ್ತು. ಹೀಗಾಗಿಯೇ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವುದಾಗಿ ಬಿಜೆಪಿ 2019ರ ಲೋಕಸಭಾ ಚುನಾವಣೆಯ ವೇಳೆ ಭರವಸೆ ನೀಡಿತ್ತು.

ಬಸವರಾಜ ಬೊಮ್ಮಾಯಿ ಅವರು 2023ರಲ್ಲಿ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ಅನುದಾನ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಸಿಹಿ ಸುದ್ದಿ ನೀಡಿದ್ದರು. ಇದು ರಾಜ್ಯದ ಮೊದಲ ರಾಷ್ಟ್ರೀಯ ಯೋಜನೆಯಾಗಲಿದೆ ಎಂದು ಕೂಡ ಅವರು ಆಗ ಹರ್ಷ ವ್ಯಕ್ತಪಡಿಸಿದ್ದರು. ಅದಕ್ಕೆ ಪೂರಕವಾಗಿ ವಿಧಾನಸಭಾ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ 2023ರ ಫೆಬ್ರವರಿ ಒಂದರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದರು.

ಆದರೆ, ಚುನಾವಣೆ ಮುಗಿದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಮೋದಿ ಸರ್ಕಾರ ಯು ಟರ್ನ್ ಹೊಡೆದಿದೆ. ಯೋಜನೆಯ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ್ದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ‘ನಿಮಗೆ ಅನುದಾನ ಸಿಗುವುದು ಮುಖ್ಯವೋ, ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದು ಮುಖ್ಯವೋ? ರಾಜ್ಯ ಸರ್ಕಾರ ಯೋಜನೆಯಡಿ ಬದಲಿ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದಿಂದ ಅನುದಾನ ಬಿಡುಗಡೆಗೆ ಯತ್ನಿಸಲಾಗುವುದು’ ಎಂದಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ. ಬದಲಿ ಪ್ರಸ್ತಾವನೆ ಯಾಕೆ, ಕೇಂದ್ರ ರಾಷ್ಟ್ರೀಯ ಯೋಜನೆ ಘೋಷಣೆಯಿಂದ ಹಿಂದೆ ಸರಿಯಿತಾ ಎನ್ನುವ ಗುಮಾನಿ ಹುಟ್ಟಿಸಿದೆ. ಅದರ ಹಿಂದೆಯೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಮೋದಿ ಮಾತು ತಪ್ಪಿದ್ದಾರೆ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸೋತರೆ, ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹರಪನಹಳ್ಳಿಯಲ್ಲಿ ಕರುಣಾಕರ ರೆಡ್ಡಿ ಪರ ವಿಧಾನಸಭಾ ಚುನಾವಣೆಯ ಪ್ರಚಾರ ಮಾಡುವಾಗ ಹೇಳಿದ್ದರು. ರಾಜ್ಯದ ಜನತೆ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ವಂಚಿತವಾಗಬಾರದು ಎಂದು ಬೆದರಿಕೆ ಕೂಡ ಹಾಕಿದ್ದರು. ಅವರ ಮಾತಿನ ಅರ್ಥ ಏನು ಅನ್ನುವುದು ಈಗ ರಾಜ್ಯದ ಜನರಿಗೆ ಅರ್ಥವಾಗತೊಡಗಿದೆ. ರಾಜ್ಯದ ಜನರ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ.

ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರವು ಒಕ್ಕೂಟ ಧರ್ಮವನ್ನು ಮೀರಿ ನಡೆಯುತ್ತಿದೆ. ಕರ್ನಾಟಕದಿಂದ ತೆರಿಗೆಗಳ ರೂಪದಲ್ಲಿ ನಾಲ್ಕು ಲಕ್ಷ ಕೋಟಿ ರೂಪಾಯಿ ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿದೆ. ಅದರಲ್ಲಿ ಕನಿಷ್ಠ ಒಂದು ಲಕ್ಷ ಕೋಟಿ ರೂಪಾಯಿ ಆದರೂ ರಾಜ್ಯಕ್ಕೆ ನೀಡಬೇಕು ಎನ್ನುವ ಬೇಡಿಕೆ ಮತ್ತು ಭರವಸೆ ಇತ್ತು. ಹೀಗಿದ್ದರೂ 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡಿದ್ದು ಕೇವಲ 50,000 ಕೋಟಿ ರೂಪಾಯಿ. ಕೇಂದ್ರದ ಅನುದಾನ, ಜಿಎಸ್‌ಟಿ ಮರುಪಾವತಿ, ಸಬ್ಸಿಡಿ, ಸಹಾಯಧನ ಎಲ್ಲದರಲ್ಲೂ ಕೇಂದ್ರ ಸರ್ಕಾರ ಇದೇ ಧೋರಣೆ ಅನುಸರಿಸುತ್ತಿದೆ.

ಹಾಗೆಂದು ಕರ್ನಾಟಕಕ್ಕೆ ಬಿಜೆಪಿಯ ಮರ್ಜಿ ಬೇಕಿಲ್ಲ. ನಮ್ಮ ತೆರಿಗೆಯ ನ್ಯಾಯಯುತ ಪಾಲನ್ನು ಕೇಳುವುದು, ಯೋಜನೆಗಳ ಅನುಷ್ಠಾನದಲ್ಲಿ ಧನಸಹಾಯ ಕೇಳುವುದು ನಮ್ಮ ರಾಜ್ಯದ ಹಕ್ಕು. ಇದು ಒಕ್ಕೂಟ ಸರ್ಕಾರದ ಜವಾಬ್ದಾರಿಯೂ ಹೌದು.

ಆದರೆ, ಬಿಜೆಪಿಗೆ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ವೇಳೆ ಬಣ್ಣದ ಮಾತಾಡಿ, ಓಟು ಪಡೆದುಕೊಳ್ಳುವ ಬಿಜೆಪಿ ನಂತರ ತನಗೆ ಮತ ಹಾಕದ ಮತದಾರರನ್ನು, ಬಿಜೆಪಿ ವಿರೋಧಿ ಪಕ್ಷಗಳ ರಾಜ್ಯ ಸರ್ಕಾರಗಳನ್ನು ಶತ್ರುಗಳಂತೆ ಕಾಣುತ್ತಿರುವುದು ಪ್ರಜಾಪ್ರಭುತ್ವದ ವಿನಾಶಕಾರಿ ಪ್ರವೃತ್ತಿಯಾಗಿದೆ.      

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ; ಕುರುಡಾಯಿತೇ ಸಮಾಜ?

ಈ ಸಮಾಜ ಹೆಣ್ಣುಮಕ್ಕಳ ಬಗ್ಗೆ ಸಂವೇದನಾಶೂನ್ಯವಾಗಿದೆ. ಗಂಡು ಮಕ್ಕಳ ನಡವಳಿಕೆಗಳು ಬದಲಾಗುವ...

ಈ ದಿನ ಸಂಪಾದಕೀಯ | ರಾಮನಗರ ಜಿಲ್ಲೆ ಹೆಸರು ಬದಲಾವಣೆ ಯಾರಿಗಾಗಿ, ಏತಕ್ಕಾಗಿ?

ಮೂವತ್ತು ನಲವತ್ತು ವರ್ಷಗಳಿಂದ ರಾಜಕಾರಣದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರು ಈಗ ಎದುರಾಗಿರುವ...

ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ...

ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?

ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ...