ಪಕ್ಷಾಂತರಿಗಳಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ತಿರಸ್ಕರಿಸಬೇಕು

ಪಕ್ಷಾಂತರದ ಪಿಡುಗನ್ನು ತಡೆಯಲು ರಾಜೀವ್ ಗಾಂಧಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಡಿಸಲ್ಪಟ್ಟ ಪಕ್ಷಾಂತರ ನಿಷೇಧ ಕಾಯ್ದೆ ಇದೀಗ ಹಲ್ಲುಕಿತ್ತ ಹಾವಿನಂತಾಗಿದೆ. ಚಾಪೆಯ ಕೆಳಗೆ ನುಸುಳುವುದನ್ನು ತಡೆಯಲು ಹೋದರೆ ರಂಗೋಲೆಯ ಕೆಳಗೆ ನುಸುಳುವ ಚತುರಮತಿ ರಾಜಕಾರಣಿಗಳು ಆ ಕಾಯ್ದೆಯ ಉದ್ದೇಶವನ್ನೇ ವಿಫಲಗೊಳಿಸಿದ್ದಾರೆ

ರಾಜ್ಯ ವಿಧಾನಸಭೆಗೆ ಇದೇ ಮೇ 10ರಂದು ಚುನಾವಣೆ ನಡೆಯುತ್ತಿದ್ದು ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಭಾರತೀಯ ಜನತಾ ಪಕ್ಷದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಪ್ರಬಲವಾಗಿದ್ದು ಅದರ ಲಾಭ ಪಡೆದು ಮತ್ತೆ ಅಧಿಕಾರದ ಗದ್ದುಗೆಯೇರಲು ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಮತ್ತೊಮ್ಮೆ ತ್ರಿಶಂಕು ಸ್ಥಿತಿಯ ಬಿಕ್ಕಟ್ಟಿನಲ್ಲಿ ಸಿಲುಕಬಹುದೆಂಬ ಲೆಕ್ಕಾಚಾರವನ್ನೂ ಕೆಲವರು ಮುಂದಿಡುತ್ತಿದ್ದಾರೆ. ಮತದಾನದ ದಿನ ಸಂಜೆ ಮತಗಟ್ಟೆ ಸಮೀಕ್ಷೆಗಳ ವರದಿಗಳೂ ಬಹಿರಂಗವಾಗಲಿವೆ.

ಮಾಧ್ಯಮಗಳ ಭವಿಷ್ಯವಾಣಿಯಿಂದ ಬೆಚ್ಚಿಬಿದ್ದಿರುವ ಕಮಲ ಪಾಳಯ ಬಳಲಿ ಬೆಂಡಾಗಿ ಮೊದಲಿನ ವೇಗ ಕಳೆದುಕೊಂಡಿರುವ ಲೋಕಲ್ ಎಂಜಿನ್‌ಗೆ ಕೇಂದ್ರದ ಹೈಸ್ಪೀಡ್ ಇಂಜಿನ್ ತಂದು ಜೋಡಿಸಿ ಡಬ್ಬಲ್ ಎಂಜಿನ್ ಸರ್ಕಾರದ ತುತ್ತೂರಿಯೊಂದಿಗೆ ಭಾರೀ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಮಬಲದ ಮೇಲೆ ಅವಲಂಬಿತವಾಗಿರುವ ರಾಜ್ಯ ಬಿಜೆಪಿ ನಾಯಕರು ಇದೀಗ ಭಜರಂಗದಳದ ದಾಳವನ್ನು ಉರುಳಿಸಿ ಹನುಮಾನ್ ಚಾಲೀಸಾ ಮಂತ್ರಪಠಣದಲ್ಲಿ ಮಗ್ನರಾಗಿದ್ದಾರೆ. ಇನ್ನೊಂದೆಡೆ ಹೇಗಾದರೂ ಮಾಡಿ ಕನಿಷ್ಠ ಎರಡು ಡಜನ್ ಸೀಟುಗಳನ್ನಾದರೂ ಗೆದ್ದು ಮತ್ತೊಮ್ಮೆ ಕಿಂಗ್ ಮೇಕರ್ ಆಗಲು ತೆನೆ ಹೊತ್ತ ಮಹಿಳೆಯ ಪಕ್ಷದ ದಳಪತಿಗಳು ಹರಸಾಹಸ ಮಾಡುತ್ತಿದ್ದಾರೆ.

ಒಂದು ವೇಳೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭಿಸದೆ ಅತಂತ್ರ ಪರಿಸ್ಥಿತಿ  ಉಂಟಾದರೆ ‘ಕೂಡಿಕೆ ಮದುವೆ’ಯ ಮೈತ್ರಿಕೂಟ ಸರ್ಕಾರದ ರಚನೆ ಅನಿವಾರ್ಯವಾಗಬಹುದು. ಅಷ್ಟೇ ಅಲ್ಲ, ‘ಆಪರೇಷನ್ ಕಮಲ’ ಕಾರ್ಯಾಚರಣೆಯನ್ನೂ ತಳ್ಳಿಹಾಕುವಂತಿಲ್ಲ.

ಹಾಗೇನಾದರೂ ಆದರೆ! ಅದೊಂದು ಜನಾದೇಶದ ಮಹಾದ್ರೋಹವೇ ಸರಿ. ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಅಪಚಾರವೆಸಗುವ ಅಂತಹ ಕುತಂತ್ರಕ್ಕೆ ಕಡಿವಾಣ ಹಾಕಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆ ಕರ್ನಾಟಕದ ಜನಮನವನ್ನು ಕೆಲಕಾಲದಿಂದ ಕಾಡುತ್ತಿದೆ. ಪಕ್ಷಾಂತರದ ಪಿಡುಗನ್ನು ತಡೆಯಲು ರಾಜೀವ್ ಗಾಂಧಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಡಿಸಲ್ಪಟ್ಟ ಪಕ್ಷಾಂತರ ನಿಷೇಧ ಕಾಯ್ದೆ ಇದೀಗ ಹಲ್ಲುಕಿತ್ತ ಹಾವಿನಂತಾಗಿದೆ. ಚಾಪೆಯ ಕೆಳಗೆ ನುಸುಳುವುದನ್ನು ತಡೆಯಲು ಹೋದರೆ ರಂಗೋಲೆಯ ಕೆಳಗೆ ನುಸುಳುವ ಚತುರಮತಿ ರಾಜಕಾರಣಿಗಳು ಆ ಕಾಯ್ದೆಯ ಉದ್ದೇಶವನ್ನೇ ವಿಫಲಗೊಳಿಸಿದ್ದಾರೆ. ಈ ಪಿಡುಗಿಗೆ ಸೂಕ್ತ ಪರಿಹಾರ ಇಲ್ಲವೇ… ಎಂಬುದು ನಮ್ಮ ಮುಂದಿರುವ ಯಕ್ಷಪ್ರಶ್ನೆ.

ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಪಕ್ಷಗಳು ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಮೈತ್ರಿಗಳ ಮೂಲಕ ಅಧಿಕಾರ ಗದ್ದುಗೆಯೇರಲು ಅವಕಾಶವಿದೆ. ಹೀಗಿದ್ದರೂ ಚುನಾಯಿತ ಜನಪ್ರತಿನಿಧಿಗಳನ್ನು ಖರೀದಿಸುವ ‘ಕುದುರೆ ವ್ಯಾಪಾರ’ದ ಅಡ್ಡದಾರಿ ಅನೈತಿಕ ಮತ್ತು ಅಪವಿತ್ರ ರಾಜಕಾರಣದ ಅಪಮಾರ್ಗ. ಯಾವುದೇ ವ್ಯಕ್ತಿ ತಾನು ನಂಬಿದ ತತ್ವ, ಸಿದ್ಧಾಂತ ಅಥವಾ ಅಭಿಪ್ರಾಯವನ್ನು ಬದಲಿಸಿಕೊಳ್ಳುವ ಹಾಗೂ ಪಕ್ಷ ನಿಷ್ಠೆ ಬದಲಾಯಿಸುವ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೆಂದು ಪ್ರತಿಪಾದಿಸಬಹುದು. ಆದರೆ ಆರೋಗ್ಯಪೂರ್ಣ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಚುನಾವಣೆಯ ನಂತರದ ಪಕ್ಷಾಂತರಕ್ಕೆ ಕಡಿವಾಣ ಹಾಕುವುದು ಅತ್ಯವಶ್ಯಕ.

ರಾಜಕೀಯ ಸ್ಥಿರತೆಯನ್ನು ಕಾಯ್ದುಕೊಳ್ಳಲು 1985ರಲ್ಲಿ ಸಂವಿಧಾನದ 52ನೇ ತಿದ್ದುಪಡಿ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲಾಯಿತು. ಅದಾದ ನಂತರ 91ನೇ ತಿದ್ದುಪಡಿಯ (2003) ಮೂಲಕ ಅದನ್ನು ಮತ್ತಷ್ಟು ಬಲಗೊಳಿಸಿ ಯಾವುದೇ ಪಕ್ಷದ ಒಂದು ಗುಂಪು ಬೇರೊಂದು ಪಕ್ಷದಲ್ಲಿ ವಿಲೀನವಾಗಲು ಮೂರನೇ ಒಂದರ ಬದಲಿಗೆ ಮೂರನೇ ಎರಡರಷ್ಟು ಸದಸ್ಯರು ಹೊರಬರಬೇಕೆಂಬ ನಿರ್ಬಂಧ ವಿಧಿಸಲಾಯಿತು. ಇದೇ ಸಂದರ್ಭದಲ್ಲಿ ಪಕ್ಷಾಂತರಿಗಳಿಗೆ ಮಣೆ ಹಾಕುವ ಪ್ರಲೋಭನೆಯ ಪ್ರವೃತ್ತಿಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯಗಳ ಮಂತ್ರಿಮಂಡಲಗಳ ಗಾತ್ರವನ್ನು ಆಯಾ ಸದನಗಳ ಸದಸ್ಯಬಲದ ಶೇ.15ಕ್ಕೆ ಮಿತಿಗೊಳಿಸಲಾಯಿತು.

ಈ ಹಿಂದೆ ಏಕ ಪಕ್ಷದ ಸರ್ಕಾರವಿದ್ದರೆ ಮಾತ್ರ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವೆಂದು ಪ್ರತಿಪಾದಿಸಲಾಗುತ್ತಿತ್ತು. ಆದರೀಗ ಪಕ್ಷಗಳೊಳಗೆ ಗುಂಪುಗಾರಿಕೆ ಪ್ರವೃತ್ತಿ ವಿಪರೀತವಾಗಿ ಬೆಳೆದಿದ್ದು ಒಂದೇ ಪಕ್ಷದ ಬಹುಮತವಿದ್ದರೂ 5 ವರ್ಷಗಳ ಅವಧಿಯೊಳಗೆ ಮೂರ‍್ನಾಲ್ಕು ಮುಖ್ಯಮಂತ್ರಿಗಳ ದರ್ಬಾರನ್ನು ಕಾಣಬಹುದಾಗಿದೆ. ಇನ್ನು ಸಮ್ಮಿಶ್ರ ಸರ್ಕಾರಗಳ ತಲೆಯ ಮೇಲಂತೂ ಸದಾ ತೂಗುಕತ್ತಿ ತೂಗುತ್ತಿರುತ್ತದೆ. ಆದರೆ ನೆರೆಯ ಕೇರಳ ರಾಜ್ಯದ ರಾಜಕಾರಣವು ಇದಕ್ಕೊಂದು ಅಪವಾದ. ಅಲ್ಲಿ ಸಾಮಾನ್ಯವಾಗಿ ಚುನಾವಣಾ ಪೂರ್ವ ಮೈತ್ರಿಯ ನೆಲೆಯಲ್ಲಿ ಅಧಿಕಾರಕ್ಕೆ ಬರುವ (ಎಲ್‌ಡಿಎಫ್ ಮತ್ತು ಯುಡಿಎಫ್) ಸಮ್ಮಿಶ್ರ ಸರ್ಕಾರಗಳು ಪೂರ್ಣಾವಧಿ ಆಡಳಿತವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿವೆ. ಮಾತ್ರವಲ್ಲದೆ ಕೆಲವೊಮ್ಮೆ ಅತ್ಯಲ್ಪ ಅಂತರದ ಕೂದಲೆಳೆಯ ಬಹುಮತವಿದ್ದರೂ ಪಕ್ಷಗಳನ್ನು ಒಡೆಯುವ ಅಥವಾ ಪಕ್ಷಾಂತರದ ಮೂಲಕ ಸರ್ಕಾರಕ್ಕೆ ಕಂಟಕ ತಂದೊಡ್ಡುವ ಪ್ರಸಂಗಗಳು ಅತಿವಿರಳ.

ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿದಿರುವ ಈ ಯಶಸ್ವಿ ಪ್ರಯೋಗ  ಅಧ್ಯಯನಯೋಗ್ಯ. ಹಣ ಮತ್ತು ಅಧಿಕಾರದ ಆಮಿಷಗಳಿಗೆ ಬಲಿಯಾಗಿ ಜನಾದೇಶಕ್ಕೆ ಅಪಚಾರವೆಸಗುವ ಪ್ರತಿನಿಧಿಗಳಿಗೆ ಪಾಠ ಕಲಿಸಲು ಇರುವುದೊಂದೇ ದಾರಿ. ಅದೇನೆಂದರೆ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕ ಅಥವಾ ಸಂಸದ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ಅಂತಹವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ನಿರಾಕರಿಸುವುದು. ಈ ನಿಟ್ಟಿನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಗೆ ತುರ್ತಾಗಿ ಮತ್ತೊಂದು ತಿದ್ದುಪಡಿಯನ್ನು ತರುವುದು ಅತ್ಯವಶ್ಯಕವಾಗಿದೆ.

ಪಕ್ಷಾಂತರಿಗಳನ್ನು ಅನರ್ಹಗೊಳಿಸುವ ಹಾಗೂ ಮಂತ್ರಿ ಪದವಿ ಅಥವಾ ಇನ್ನಾವುದೇ ಅಧಿಕಾರ ನೀಡದಂತೆ ಈಗಾಗಲೇ ನಿರ್ಬಂಧಿಸಲಾಗಿದೆ. ಆದರೆ ರಾಜೀನಾಮೆ ನೀಡುವ ಸದಸ್ಯರಿಗೆ ಈ ನಿಷೇಧವು ಅನ್ವಯಿಸುವುದಿಲ್ಲ. ಹೀಗಾಗಿ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ ಆರು ತಿಂಗಳೊಳಗೆ ಯಾವುದಾದರೊಂದು ಸದನದ ಸದಸ್ಯನಾಗಬೇಕೆಂಬ ನಿಯಮದ ನೆರಳಿನಲ್ಲಿಯೇ ಈ ಪಕ್ಷಾಂತರಿಗಳು ಆಶ್ರಯ ಪಡೆಯಲು ಅವಕಾಶವಿದೆ. ರಾಜೀನಾಮೆ ಹಕ್ಕನ್ನು ಚಲಾಯಿಸಲು ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದ್ದರೂ ಅದನ್ನು ಪಕ್ಷಾಂತರ ಕಾಯ್ದೆಯ ಉದ್ದೇಶವನ್ನು ವಿಫಲಗೊಳಿಸುವ ರಹದಾರಿಯಾಗಿ ಬಳಸಿಕೊಳ್ಳಲು ಖಂಡಿತ ಅವಕಾಶ ನೀಡಬಾರದು. ಈ ನಿಯಮ ಜಾರಿಗೆ ಬಂದರೆ ಯಾವೊಬ್ಬ ಜನಪ್ರತಿನಿಧಿಯೂ ಸದಸ್ಯ ಸ್ಥಾನ ತ್ಯಾಗದ ಸಾಹಸಕ್ಕೆ ಮುಂದಾಗಲಾರನು.

ಇದನ್ನು ಓದಿ ಈ ದಿನ ಸಂಪಾದಕೀಯ | ಪ್ರಧಾನಿಯ ಪ್ರಲೋಭನೆ ಮತ್ತು ಸಾಮಾನ್ಯರ ಸಿಟ್ಟು

ಪ್ರಸಕ್ತ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಇಂತಹ ಕಾಯ್ದೆ ತಿದ್ದುಪಡಿ ಜಾರಿಗೆ ಜನಾಗ್ರಹದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ. ಫಲಿತಾಂಶದ ಬಳಿಕ “ಆಪರೇಷನ್ ಕಮಲ” ಅಥವಾ “ಆಪರೇಷನ್ ಹಸ್ತ” ವಾಗಲೀ ನಡೆಯದಂತೆ ಪ್ರಬಲ ಜನಾಭಿಪ್ರಾಯವನ್ನು ರೂಪಿಸಬೇಕಿದೆ. ಜನಾದೇಶಕ್ಕೆ ದ್ರೋಹ ಬಗೆಯುವ ಜನಪ್ರತಿನಿಧಿಗಳಿಗೆ ರಾಜಕೀಯ ಬಹಿಷ್ಕಾರ ಹಾಕಲು ಪ್ರಜ್ಞಾವಂತರೆಲ್ಲರೂ ಮುಂದಾಗಬೇಕಿದೆ. ಅತಂತ್ರ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳು ಮತ್ತು ಸಣ್ಣ ಪಕ್ಷಗಳು ಅಂತಹ ಪಿತೂರಿಗೆ ಬಲಿಪಶುಗಳಾಗುವ ಸಾಧ್ಯತೆಯೇ ಹೆಚ್ಚಾಗಿದ್ದು ದಳಪತಿಗಳು ವಿಶೇಷ ಮುನ್ನೆಚ್ಚರಿಕೆ ವಹಿಸಿ ಈ ರಾಜಕೀಯ ಕಣ್ಣಾಮುಚ್ಚಾಲೆಯಾಟದಲ್ಲಿ ತಮ್ಮ ಗೂಡಿನ ಹಕ್ಕಿಗಳನ್ನು ಬಚ್ಚಿಟ್ಟುಕೊಳ್ಳಲು ಸೂಕ್ತ ರಕ್ಷಣಾತಂತ್ರವನ್ನು ರೂಪಿಸಿಕೊಳ್ಳಬೇಕಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಒಂದು ಕಾಲಕ್ಕೆ ಪರಮಾಪ್ತ ಮಿತ್ರನಾಗಿದ್ದವನ ಮನೆಗೇ ಕಮಲ ಪಡೆಯವರು ಕನ್ನ ಹಾಕಿದ ಪ್ರಸಂಗವಿನ್ನೂ ಹಸಿರಾಗಿದೆ.

ಅಂತೆಯೇ ಕರ್ನಾಟಕದ ಬಳಿಕ ಮಧ್ಯಪ್ರದೇಶದಲ್ಲೂ ಸರ್ಕಾರವನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ರಾಜಾಸ್ತಾನದಲ್ಲೂ ಅಂತಹುದೇ ಗಂಡಾಂತರ ಸದ್ಯದಲ್ಲೇ ಒದಗಿದರೆ ಆಶ್ಚರ್ಯವೇನಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕುವಲ್ಲಿ ಪೊರಕೆ ಪಕ್ಷ ಈವರೆಗೆ ಸಫಲವವಾಗಿದೆ. ಕೇರಳ ರಾಜ್ಯದಲ್ಲಿ ಅಂತಹ ಕಳ್ಳಾಟಕ್ಕೆ ಅವಕಾಶವೇ ಇಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿ ಎಸ್ಸೆಸ್ಸೆಲ್ಸಿ ಫಲಿತಾಂಶ | ಶೇ.87.87ರಷ್ಟು ಬಾಲಕಿಯರು ಉತ್ತೀರ್ಣರು

ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ರಾಷ್ಟ್ರೀಯ ಪಕ್ಷಗಳು (ಕಾಂಗ್ರೆಸ್ ಮತ್ತು ಜನತಾ ಎರಡೂ) ಸಂವಿಧಾನದ 356ನೇ ವಿಧಿಯನ್ನು ದುರುಪಯೋಗಪಡಿಸಿಕೊಂಡು ಅನೇಕ ರಾಜ್ಯ ಸರ್ಕಾರಗಳನ್ನು ಉರುಳಿಸಿದ್ದವು. ಇದೀಗ “ಎಲ್ಲರಿಗಿಂತ ವಿಭಿನ್ನವಾದ ಪಕ್ಷ” ಎಂದೇ ಕರೆದುಕೊಳ್ಳುತ್ತಿದ್ದ ಬಿಜೆಪಿ ಕೂಡಾ ಆಪರೇಷನ್ ಕಮಲದ ಅನೈತಿಕ ಮಾರ್ಗದಲ್ಲಿ ಸಾಗುತ್ತಿರುವುದು ಪ್ರಜಾಪ್ರಭುತ್ವದ ಅಣಕವೇ ಸರಿ.

ಎಸ್. ಆರ್. ಆರಾಧ್ಯ

LEAVE A REPLY

Please enter your comment!
Please enter your name here