ಜನಸಾಮಾನ್ಯರು ಸುಖಾಸುಮ್ಮನೆ ಸಿಟ್ಟಿಗೇಳುವ ಸ್ವಭಾವದವರಲ್ಲ. ಸಹನೆಗೇ ಸಮಾಧಾನ ಹೇಳಿ ಸಕಲವನ್ನು ಸಹಿಸಿಕೊಂಡು ಸುಮ್ಮನಾಗುವವರು. ಅಂತಹ ಸಾಮಾನ್ಯರ ಸಹನೆಯ ಕಟ್ಟೆಯೊಡೆದರೆ, ಸಿಟ್ಟಿಗೆ ಬಲಿಯಾದರೆ, ಬಿಜೆಪಿಯೊಂದೇ ಅಲ್ಲ, ಯಾವುದೂ ಉಳಿಯುವುದಿಲ್ಲ ಎನ್ನುವ ಮಾತಿದೆ. ಸಾಮ್ರಾಜ್ಯಗಳು ಸುಟ್ಟು ಭಸ್ಮವಾದ ಉದಾಹರಣೆಗಳಿವೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರು ನಗರದಲ್ಲಿ 19 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 36 ಕಿಲೋಮೀಟರ್ ರೋಡ್ ಶೋ ಮಾಡುವ ಮೂಲಕ ನಿಯಮ ಮರೆತು ವರ್ತಿಸಿದ್ದಾರೆ. ತಮ್ಮ ಮತ್ತು ತಮ್ಮ ಪಕ್ಷದ ಪ್ರಚಾರಕ್ಕಾಗಿ ಸೇನೆಯ ಹೆಲಿಕಾಪ್ಟರ್; ರಕ್ಷಣೆಗಾಗಿ, ಬಂದೂಬಸ್ತ್‌ಗಾಗಿ, ಪ್ರಚಾರ ವಾಹನಕ್ಕಾಗಿ ಸರ್ಕಾರಿ ಹಣವನ್ನು ಬಳಸಿಕೊಂಡಿದ್ದಾರೆ. ಕಟೌಟ್ ಹಾಕಬಾರದೆಂಬ ಹೈಕೋರ್ಟಿನ ಆದೇಶವನ್ನು ಉಲ್ಲಂಘಿಸಿದ್ದಾರೆ. ಕಡು ಕಷ್ಟದಿಂದ ಬೆಳೆದು ಬಂದೆ ಎಂದು ಹೇಳಿಕೊಳ್ಳುವ ಮೋದಿಯವರು, ಕಷ್ಟಪಟ್ಟು ದುಡಿದು ತಿನ್ನುವ ಸ್ವಾಭಿಮಾನಿ ಜನರ ಬದುಕನ್ನು ಅತಂತ್ರಗೊಳಿಸಿ ಅಪಹಾಸ್ಯ ಮಾಡಿದ್ದಾರೆ. ಅಮೃತಕಾಲವೆಂಬ ಭ್ರಮಾತ್ಮಕ ಭಾಷಣ ಬಿಗಿಯುವ ಮೋದಿಯವರು, ದೇಶವನ್ನು ದಟ್ಟ ದರಿದ್ರ ಸ್ಥಿತಿಗೆ ಕೊಂಡೊಯ್ಯುತ್ತಿದ್ದಾರೆ.
ವಿಪರ್ಯಾಸವೆಂದರೆ, ಈ ರೋಡ್ ಶೋ ಉದ್ದಕ್ಕೂ ಅವರ ಪಕ್ಕ ನಿಂತ ʻಉದಯೋನ್ಮುಖʼ ಸಂಸದರೊಬ್ಬರು, ಮೋದಿಯವರಲ್ಲಿ ದೈವತ್ವದ ಗುಣ ಕಂಡು ಕೊಂಡಾಡಿದ್ದಾರೆ. ಪಕ್ಕ ನಿಂತಿದ್ದಕ್ಕೆ ಯುದ್ಧಗೆದ್ದ ವ್ಯರ್ಥ ಸಂಭ್ರಮದಲ್ಲಿದ್ದಾರೆ. ಮಹಾತ್ಮರ ನಾಡು ಸುಳ್ಳರ, ಅಪ್ರಾಮಾಣಿಕರ ತವರೂರಾಗಿದೆ. ದುಷ್ಟ ವಾತಾವರಣದಲ್ಲಿ ದೋಷವನ್ನೇ ಕಾಣದ ಜನತೆ ಸನ್ನಿಯ ಸುಳಿಗೆ ಸಿಕ್ಕಿಹಾಕಿಕೊಂಡಿದೆ. ಸರಿ-ತಪ್ಪುಗಳ ತುಲನೆ ಮಾಡುವ ವಿವೇಕವನ್ನು ಕಳೆದುಕೊಂಡ ಭಕ್ತಗಣ ಗುಲಾಮಗಿರಿ ಬಯಸುತ್ತಿದೆ.
ರೋಡ್ ಶೋ ಮುಗಿದ ಮೇಲೆ ಬೆಂಗಳೂರು ನಗರದ ರಸ್ತೆಗಳು ನಿಜಕ್ಕೂ ಕುರುಕ್ಷೇತ್ರದ ಯುದ್ಧಭೂಮಿಯಂತೆ ಕಾಣುತ್ತಿದ್ದವು. ಕಾಂಗ್ರೆಸ್ಸಿಗರ ಪ್ರಣಾಳಿಕೆಯಲ್ಲಿ ಭಜರಂಗದಳದ ನಿಷೇಧ ಎಂಬ ಪ್ರಸ್ತಾಪವಿತ್ತು ಎಂಬ ಕಾರಣಕ್ಕೆ, ಮೋದಿಯವರ ರೋಡ್ ಶೋ ಉದ್ದಕ್ಕೂ ಭಜರಂಗಬಲಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಎಳೆಯ ಮಕ್ಕಳಿಗೆ ಭಜರಂಗಿ ವೇಷ ಧರಿಸಿ ಬಂದರೆ, ಬಹುಮಾನ ಕೊಡುವುದಾಗಿ ಬಿಜೆಪಿ ಘೋಷಿಸಿತ್ತು. ಹರಿದು ಹಾರಾಡುತ್ತಿದ್ದ ಕೇಸರಿ ಬಟ್ಟೆ, ರಸ್ತೆಯುದ್ದಕ್ಕೂ ಹರಿದು ಚೆಲ್ಲಾಡಿದ್ದ ಭಜರಂಗಿ ಮುಖವಾಡಗಳು- ಬಿಜೆಪಿಯ ಹಿಂದುತ್ವದ ಸೋಗಲಾಡಿತನವನ್ನು ಸಾರುತ್ತಿದ್ದವು. ಅಡ್ಡಾದಿಡ್ಡಿಯಾಗಿ ಬಿದ್ದು ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದ ಬ್ಯಾರಿಕೇಡ್‌ಗಳು ಪೊಲೀಸರ ಸೈರಣೆಗೆ ಸವಾಲಾಗಿದ್ದವು. 36 ಕೀಮಿಯುದ್ದಕ್ಕೂ ಮೋದಿಯವರ ಮೇಲೆ ಎರಚಲಾಗಿದ್ದ 40 ಟನ್ ಹೂವು, ಮಳೆಯಲ್ಲಿ ಕರಗಿ ಕಸದ ರಾಶಿಯಾಗಿ ಬಿದ್ದು ಪೌರ ಕಾರ್ಮಿಕರ ಸಹನೆಯನ್ನು ಕೆಣಕುತ್ತಿತ್ತು.
ಇವುಗಳ ನಡುವೆಯೇ, ಮರುಭೂಮಿಯಲ್ಲಿ ಕಾರಂಜಿ ಕಂಡಂತೆ, ಮೋದಿಯವರ ರೋಡ್ ಶೋನಿಂದ ಬೇಸತ್ತ ವೃದ್ಧರೊಬ್ಬರು, ʻನನ್ನ ಜೀವನದಲ್ಲಿ ನಾನು ಸುಮಾರು ಚುನಾವಣೆಗಳನ್ನು, ಪ್ರಧಾನ ಮಂತ್ರಿಗಳನ್ನು ಕಂಡಿದ್ದೇನೆ. ನಮ್ಮಂಥೋರಿಗೆ ಕಷ್ಟ ಕೊಟ್ಕೊಂಡು ಕಳ್ಳರ-ಸುಳ್ಳರ ಪರ ಹಿಂಗೆ ಗಲ್ಲಿ ಗಲ್ಲಿ ಸುತ್ತಿ ಓಟು ಕೇಳುವ ಪ್ರಧಾನಿಯನ್ನು ಕಂಡಿರಲಿಲ್ಲ. ಒಂದ್ಸಲ ಬಂದೋದ್ರೆ ಆ ಸ್ಥಾನಕ್ಕೊಂದು ಮರ್ಯಾದೆ. ಇದಕ್ಕಾಗೋ ಖರ್ಚು ಎಷ್ಟು? ಆ ದುಡ್ ಯಾರ್ದು? ಪಬ್ಲಿಕ್ ದುಡ್ನ ಹಿಂಗೆ ಬೇಕಾಬಿಟ್ಟಿ ಖರ್ಚು ಮಾಡೋದು ಎಷ್ಟು ಸರಿ?ʼ ಎಂದು ಕೇಳುತ್ತಿದ್ದರು.
ಇದು ಜನಸಾಮಾನ್ಯನ ಮನದ ಮಾತು. ದೇಶದ ಪ್ರಧಾನಿಗೆ ಕೇಳಿದ ಪ್ರಶ್ನೆ. ಮಾನವಂತ ಮತದಾರರು ಕೇಳಲೇಬೇಕಾದ ಪ್ರಶ್ನೆ.
ಆ ವೃದ್ಧರ ಒಡಲಾಳದ ಸಂಕಟ ಅಂದು ಸ್ಫೋಟಗೊಂಡಿತ್ತು. ಆ ಸಂಕಟವನ್ನು ನಾಡಿನ ಮುಂದಿಟ್ಟು ಪ್ರಭುತ್ವವನ್ನು, ಪ್ರಧಾನಿಯ ಪ್ರಲೋಭನೆಯನ್ನು ಪ್ರಶ್ನಿಸಬೇಕಾದ ಸುದ್ದಿ ಮಾಧ್ಯಮಗಳು ಮಾರಾಟವಾಗಿದ್ದವು. ʻಮೋದಿ ಮಾಂತ್ರಿಕತೆʼಗೆ ಒಳಗಾಗಿ ಭಜನೆ ಮಾಡುತ್ತಿದ್ದವು. ಮಾರಿಕೊಂಡ ಮಾಧ್ಯಮಗಳು ತೋರಿಸದಿದ್ದರೇನಂತೆ, ಸಾಮಾನ್ಯರೇ ನಿರ್ವಹಿಸುವ ಸಾಮಾಜಿಕ ಜಾಲತಾಣದಲ್ಲಿ ವೃದ್ಧರ ಕರುಳಿನ ಕೂಗು ಮಾರ್ದನಿಸಿತ್ತು. ಅವರೊಬ್ಬರೇ ಅಲ್ಲ, ಅಂತಹ ನೂರಾರು ಜನರ ಅಸಹನೆಯ ಕಟ್ಟೆ ಒಡೆದಿತ್ತು. ವಾಟ್ಸ್ ಆಪ್, ಟ್ವಿಟರ್, ಇಸ್ಟಗ್ರಾಂ, ಫೇಸ್‌ಬುಕ್ ಮೂಲಕ ನಾಡಿನ ಜನರಿಗೆ ತಲುಪಿತ್ತು. ಮೋದಿಯವರ ಮಾತಿನ ಹಿಂದಿನ ಅಸಲಿಯತ್ತನ್ನು ಬಯಲುಗೊಳಿಸಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಡಬಲ್ ಎಂಜಿನ್ ಸರ್ಕಾರ ಇರುವಲ್ಲೇ ಹೆಚ್ಚು ಗಲಭೆ ನಡೆಯುತ್ತಿರುವುದೇಕೆ?
ದೇಶದ ಜನಸಾಮಾನ್ಯರು ಸುಖಾಸುಮ್ಮನೆ ಸಿಟ್ಟಿಗೇಳುವ ಸ್ವಭಾವದವರಲ್ಲ. ಸಹನೆಗೇ ಸಮಾಧಾನ ಹೇಳಿ ಸಕಲವನ್ನು ಸಹಿಸಿಕೊಂಡು ಸುಮ್ಮನಾಗುವವರು. ಅಂತಹ ಸಾಮಾನ್ಯರ ಸಹನೆಯ ಕಟ್ಟೆಯೊಡೆದರೆ, ಸಿಟ್ಟಿಗೆ ಬಲಿಯಾದರೆ, ಬಿಜೆಪಿಯೊಂದೇ ಅಲ್ಲ, ಯಾವುದೂ ಉಳಿಯುವುದಿಲ್ಲ ಎನ್ನುವ ಮಾತಿದೆ. ಸಾಮ್ರಾಜ್ಯಗಳು ಸುಟ್ಟು ಭಸ್ಮವಾದ ಉದಾಹರಣೆಗಳಿವೆ.
ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬಂತೆ, ಮೋದಿಯವರ ಹಸೀ ಸುಳ್ಳುಗಳು, ಬೊಗಳೆ ಭಾಷಣಗಳು ದೇಶದ ಜನತೆಯಲ್ಲಿ ರೇಜಿಗೆ ಹುಟ್ಟಿಸುತ್ತಿವೆ. ಪ್ರಶ್ನಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಮಾಧ್ಯಮಗಳು ಪ್ರಭುತ್ವದೊಂದಿಗೆ ಕೈಜೋಡಿಸಿ, ದೇಶವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿವೆ. ಇನ್ನು ಇವರನ್ನು ನೆಚ್ಚಿ ಕೂರುವುದರಲ್ಲಿ ಅರ್ಥವಿಲ್ಲ.

ತಾವು ಬಹಳ ಸರಳ ಜೀವಿ ಎಂದು ಬಾಯಿ ಮಾತಿನಲ್ಲಿ ಹೇಳುವುದಲ್ಲ. ಕೃತಿ ಯಲ್ಲಿ ತೋರಿಸುವ ತಾಕತ್ತು ಆ ಮಹಾತ್ಮ ನಿಗೆ ಇತ್ತು ಈ dongi ಬಾಬಾ ನಿಗೆ ಅಲ್ಲಾ