ನೆನಪು | ಮೇ ಡೇ ಎಂದಾಕ್ಷಣ ಬಹುಭಾಷಾ ಗಾಯಕ ಮನ್ನಾ ಡೇ ನೆನಪಾಗುವುದೇಕೆ?

Date:

ಮೇ ಡೇ- ಮನ್ನಾ ಡೇ ಜನ್ಮದಿನ. ಬಂಗಾಲಿ ಗಾಯಕ ಮುಂಬೈಗೆ ಹೋಗಿ ಭಾರತೀಯ ಗಾಯಕರಾದದ್ದು, ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಹಾಡಿದ್ದು, ರಾಗ, ಸ್ವರ, ಲಯಗಳ ಲೋಕದಲ್ಲಿ ವಿಹರಿಸುತ್ತಲೇ, ಸಂಗೀತವನ್ನು ಸಂಪೂರ್ಣವಾಗಿ ಆಸ್ವಾದಿಸಿ, ಅನುಭವಿಸಿ ಸ್ವರಸಾಮ್ರಾಟರಾದದ್ದು ಸಾಮಾನ್ಯ ಸಂಗತಿಯಲ್ಲ. ಮೇ ಒಂದನೇ ತಾರೀಖು ಅವರ ಹಾಡುಗಳನ್ನು ಕೇಳುವ ಮೂಲಕ ಅವರನ್ನು ಸ್ಮರಿಸೋಣ…

ಮನ್ನಾ ಡೇಗೂ ಮೇ ಡೇಗೂ ‘ಡೇ’ ಒಂದೇ ಕಾಮನ್. ಆ ಡೇ- ಮೇ ಫಸ್ಟ್ ಡೇ- ಕಾರ್ಮಿಕರ ದಿನ ಮತ್ತು ಮನ್ನಾ ಡೇ ಜನ್ಮದಿನ. ಹೆಸರಲ್ಲೂ, ದಿನದಲ್ಲೂ ಒಂದಾಗಿರುವುದೇ ಇಲ್ಲಿಯ ವಿಶೇಷ.

ಮನ್ನಾ ಡೇ ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕ. ಇವರ ನಿಜವಾದ ಹೆಸರು ಪ್ರಬೋದ್ ಚಂದ್ರ ಡೇ. ಕೋಲ್ಕತಾದ ಬಂಗಾಲಿ ಅವಿಭಕ್ತ ಕುಟುಂಬದಲ್ಲಿ ಮೇ 1, 1919ರಲ್ಲಿ ಜನಿಸಿದವರು. ಈಗಲೂ ಆ ಮನೆಯಲ್ಲಿ, ಕುಟುಂಬದಲ್ಲಿ ಮಿನಿಮಮ್ ಮೂವತ್ತು ಮಂದಿ ಇದ್ದಾರಂತೆ. ಕೋಲ್ಕತಾ ಎಂದರೆ ಕಸನಲ್ಲೂ ಕನವರಿಸುವ ಮನ್ನಾ ಡೇ, ತಮ್ಮ ಕೊನೆಯ ದಿನಗಳನ್ನು ಕಳೆಯಲು ಆರಿಸಿಕೊಂಡಿದ್ದು ಮಾತ್ರ ಬೆಂಗಳೂರನ್ನು.

ಮನ್ನಾ ಡೇಯವರ ಚಿಕ್ಕಪ್ಪ ಕೃಷ್ಣಚಂದ್ರ ಡೇ ಆ ಕಾಲಕ್ಕೇ ಮರಾಠಿ, ಬಂಗಾಲಿ ಭಾಷೆಯ ಚಿತ್ರರಂಗದಲ್ಲಿ ನಟ, ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದವರು. ಅವರ ಬಾಲಂಗೋಸಿಯಂತಿರುತ್ತಿದ್ದ ಮನ್ನಾ ಡೇಗೆ ಅವರ ಚಿಕ್ಕಪ್ಪನೇ ಸರ್ವಸ್ವ. ಅವರಿಂದ ಅರಿತದ್ದು ಅಪಾರ. ಮನ್ನಾ ಡೇಯವರನ್ನು ಸಂಗೀತದ ಸ್ವರಗಳ ಜಗತ್ತಿಗೆ ಸೆಳೆದದ್ದೇ ಅವರು. ಜೊತೆಗೆ ಉಸ್ತಾದ್ ಅಮನ್ ಅಲಿ ಖಾನ್‌ರಿಂದ ಸಾಂಪ್ರದಾಯಿಕ ಶೈಲಿಯ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತು ಕರಗತ ಮಾಡಿಕೊಂಡರು. ಚಿಕ್ಕಪ್ಪನ ಜೊತೆ ಕೋಲ್ಕತಾದಿಂದ ಆಗಾಗ ಮುಂಬೈಗೆ ಹೋಗಿಬರುತ್ತಿದ್ದ ಮನ್ನಾ ಡೇಗೆ ಮುಂದೊಂದು ದಿನ ಆ ನಗರದ ನಿವಾಸಿಯಾಗುತ್ತೇನೆ, ಜನಪ್ರಿಯ ವ್ಯಕ್ತಿಯಾಗುತ್ತೇನೆ ಎಂಬ ಕನಸೂ ಕೂಡ ಇರಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

1942ರಲ್ಲಿ ಚಿಕ್ಕಪ್ಪನ ಶಿಫಾರಸ್ಸಿನ ಮೇರೆಗೆ ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಕೈ ಕೆಳಗೆ ಕೆಲಸ ಕಲಿಯಲು ಸಹಾಯಕರಾಗಿ ಸೇರಿಕೊಂಡ ಮನ್ನಾ ಡೇ, 1943ರಲ್ಲಿ ‘ತಮನ್ನಾ’ ಚಿತ್ರಕ್ಕೆ ಹಾಡುವ ಮೂಲಕ ಭಾರತೀಯ ಚಿತ್ರರಂಗಕ್ಕೆ ಅಧಿಕೃತವಾಗಿ ಅಡಿಯಿಟ್ಟರು. ಆವತ್ತು ‘ತಮನ್ನಾ’ ಚಿತ್ರದ ಹಾಡಿಗೆ ಮನ್ನಾ ಡೇಯೊಂದಿಗೆ ಸ್ವರಬೆರೆಸಿದ ಬಾಲೆ ಸುರಯ್ಯಾ. ಆಕೆಗೆ ಆಗ ಕೇವಲ ಹನ್ನೊಂದು ವರ್ಷ. ಇವರು ಹಾಡಿದ ಗೀತೆ ರಚಿಸಿದವರು ಒಬ್ಬ ಅಂಧ ಕವಿ. ಈ ರೀತಿಯಾಗಿ ಮನ್ನಾ ಡೇಯವರ ಸಂಗೀತಲೋಕ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಕಿಶೋರ್ ಕುಮಾರ್, ಮಹಮದ್ ರಫಿ ಜೊತೆ ಮನ್ನಾ ಡೇ
ಕಿಶೋರ್ ಕುಮಾರ್, ಮಹಮದ್ ರಫಿ ಜೊತೆ ಮನ್ನಾ ಡೇ

1943ರಿಂದ 1990ರವರೆಗೆ, ಸರಿಸುಮಾರು ಐದು ದಶಕಗಳ ಕಾಲ ಹಿಂದಿ ಚಿತ್ರರಂಗವನ್ನು ಮನ್ನಾ ಡೇ ಆಳಿದರು. ಆಳುತ್ತಲೇ ಸಾವಿರಾರು ಹಾಡುಗಳಿಗೆ ಕಂಠದಾನ ಮಾಡಿದರು, ನೂರಾರು ನಟರ ಭವಿಷ್ಯಕ್ಕೆ ಬೆಳಕಾದರು. ಮೊಹಮ್ಮದ್ ರಫಿ, ಮುಖೇಶ್, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಬೋಸ್ಲೆ, ತಲತ್, ಗೀತಾದತ್‌ಗಳಂತಹ ಹಿರಿಯ ಪ್ರತಿಭಾವಂತರಿಗೇ ಹಿರಿಯಣ್ಣನಾಗಿ ಮೆರೆದರು. ಚಿತ್ರಜಗತ್ತಿನ ಶ್ರೇಷ್ಠ ಪ್ರಶಸ್ತಿಗಳನ್ನು, ಪದ್ಮಶ್ರೀ, ಪದ್ಮಭೂಷಣ, ಫಾಲ್ಕೆಯಂತಹ ಪ್ರತಿಷ್ಠಿತ ಪುರಸ್ಕಾರವನ್ನು ತಮ್ಮದಾಗಿಸಿಕೊಂಡರು. ಇವತ್ತಿನ ಫಾಸ್ಟ್ ಫುಡ್ ಕಾಲದ ಗಾಯಕರಿಗೆ ಹೋಲಿಸಿದರೆ, ಅವರು ಹಾಡಿದ ಹಾಡುಗಳ ಸಂಖ್ಯೆ ಮೂರು ಸಾವಿರ ಚಿಲ್ಲರೆ ಇರಬಹುದು, ಆದರೆ ಗುಣಮಟ್ಟದಲ್ಲಿ ಮನ್ನಾ ಡೇಗೆ ಮೀರಿಸುವವರಿಲ್ಲ.

ಬಂಗಾಲಿ ಗಾಯಕ ಮುಂಬೈಗೆ ಹೋಗಿ ಭಾರತೀಯ ಗಾಯಕರಾದದ್ದು, ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಹಾಡಿದ್ದು, ಹಾಡುತ್ತಲೇ ಸ್ವರಸಾಮ್ರಾಟರಾದದ್ದು ಸಾಮಾನ್ಯ ಸಂಗತಿಯಲ್ಲ. ಶಿಸ್ತು, ಶ್ರದ್ಧೆಯಿಂದ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ, ಸ್ವರಶುದ್ಧಿಯ ಆರಾಧಕರಾಗಿ, ದಿಗ್ಗಜರಿಂದ ಸೈ ಅನ್ನಿಸಿಕೊಂಡು ಸಂಗೀತದಲ್ಲಿ ಸಿದ್ದಿ ಸಾಧಿಸಿದ ಸಾಹಸಿಗ. ಅವರನ್ನು ಅರಿಯುವುದೆಂದರೆ ಸಿನೆಮಾ ಸಂಗೀತದ ಇತಿಹಾಸವನ್ನು ಮೆಲುಕು ಹಾಕಿದಂತೆ.

ಮನ್ನಾ ಡೇ ಬೆಂಗಳೂರಿನಲ್ಲಿ ವಾಸವಾಗಿದ್ದಾಗ, ಅಪರೂಪಕ್ಕೆ ಯಾವುದಾದರೂ ಕಾರ್ಯಕ್ರಮಕ್ಕೆ ಹಾಜರಾದಾಗ, ಇತ್ತೀಚಿನ ಸಿನೆಮಾ ಸಂಗೀತ ಮತ್ತು ಹಾಡುಗಳ ಬಗ್ಗೆ ಭಾರೀ ಖೇದದಿಂದಲೇ ಮಾತನಾಡುತ್ತಿದ್ದರು. ‘ರಚಿಸುವ ಪದಪುಂಜಗಳಲ್ಲಿ ಅರ್ಥವಿಲ್ಲ, ಭಾವವಿಲ್ಲ ಬರೀ ಸದ್ದು. ಆ ಸದ್ದು ನಮ್ಮ ಮನ ಗುದ್ದುವುದಿಲ್ಲ’ ಎಂದು ನೇರವಾಗಿ ಹೇಳುವಷ್ಟು ಪ್ರತಿಭೆ ಮತ್ತು ದಾಢಸಿ ಗುಣವುಳ್ಳ ವ್ಯಕ್ತಿ ಮನ್ನಾ ಡೇ.

ಹಾಗೆಯೇ ಇತ್ತೀಚಿನ ದಿನಗಳಲ್ಲಿ ನಿಮ್ಮನ್ನು ನಿರ್ಲಕ್ಷಿಸಲಾಗಿದೆಯೇ ಎಂದು ಪ್ರಶ್ನಿಸಿದರೆ, ‘ಆರೋಗ್ಯವೂ ಇಲ್ಲ, ಅವರೊಂದಿಗೆ ಸೇರಿ ಹಾಡುಕಟ್ಟುವ ಆಸೆಯೂ ಇಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿಬಿಡುವ ನಿಷ್ಠುರಿ. ಆದರೆ, ಕೋಲ್ಕತಾದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಕೇಳುಗನಾಗಿ ಹೋಗುತ್ತಿದ್ದ, ದಿನಗಟ್ಟಲೆ ಕೂತು ಕೇಳಿ ಆನಂದಿಸುತ್ತಿದ್ದ ಅಪರೂಪದ ಸಂಗೀತ ಆರಾಧಕ.

‘ಹಮ್ ದರ್ದ್’ ಚಿತ್ರದಲ್ಲಿನ ‘ರೀತು ಆಯೇ ರೀತು ಜಾಯೇ…’ ಹಾಡಿನಲ್ಲಿ ಲತಾ ಮಂಗೇಶ್ಕರ್ ಜೊತೆ ಸ್ವರ ಬೆರೆಸಿರುವ ಹಾಡು ಇವರ ಪ್ರತಿಭೆಗೊಂದು ಸಾಕ್ಷಿ. ನಾಲ್ಕು ರಾಗಗಳಲ್ಲಿ ವಿಭಿನ್ನ ಧಾಟಿಯಲ್ಲಿ ಹಾಡಿರುವ ಈ ಹಾಡು ಇವತ್ತಿಗೂ ಕೇಳುಗರ ಮನಸೂರೆಗೊಳ್ಳುವ ಹಾಡುಗಳಲ್ಲೊಂದು. ಹಾಗೆಯೇ ಕಿಶೋರ್ ಕುಮಾರ್ ಜೊತೆ ಹಾಡಿರುವ ‘ಶೋಲೆ’ ಚಿತ್ರದ ‘ಹೇ ದೋಸುತಿ… ಹಮ್ ನಹೀ ತೋಡೆಂಗೆ…’, ‘ಪಡೋಸನ್’ ಚಿತ್ರದ ‘ಏಕ್ ಚತುರ ನಾರ್…’ ಹಾಡುಗಳು ಇವತ್ತಿಗೂ ಜನಪ್ರಿಯ ಹಾಡುಗಳೆ.

ಮನ್ನಾ ಡೇ ಸರಿಸುಮಾರು ಎಲ್ಲ ಭಾಷೆಯಲ್ಲೂ ಹಾಡಿದ್ದಾರೆ. ಆ ಕಾಲಕ್ಕೇ ಕನ್ನಡಕ್ಕೂ ಬಂದಿದ್ದಾರೆ. ಹೆಚ್ಚಿನ ಜನಕ್ಕೆ ಗೊತ್ತೋ ಇಲ್ಲವೋ, ‘ಕಲ್ಪವೃಕ್ಷ’ ಎಂಬ ಚಿತ್ರಕ್ಕೆ ಮನ್ನಾ ಡೇ ಎರಡು ಹಾಡುಗಳನ್ನು ಹಾಡಿದ್ದಾರೆ. ‘ಜಯತೇ ಜಯತೆ ಸತ್ಯಮೇವ ಜಯತೇ…’ ಮತ್ತು ‘ಕುಹೂ ಕುಹೂ…’ ಎಂಬ ಹಾಡುಗಳು… ನೆನಪಾದವೆ?

ವಿ. ಶಾಂತರಾಂ ಜೊತೆ ಮನ್ನಾ ಡೇ
ವಿ. ಶಾಂತರಾಂ ಜೊತೆ ಮನ್ನಾ ಡೇ

ಬರೋಬ್ಬರಿ 94 ವರ್ಷಗಳ ಕಾಲ ಬದುಕಿದ್ದ, ವಿಶ್ರಾಂತ ಬದುಕಿಗಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದ ಮನ್ನಾ ಡೇ, 1992ರ ನಂತರ ಹಿಂದಿ ಸಿನೆಮಾ ಲೋಕದಿಂದ ದೂರ ಸರಿದರು. ಆದರೆ ಬಂಗಾಲಿ ಭಾಷೆಯಲ್ಲಿ ಭಜನ್ ಮತ್ತು ಗಜಲ್‌ಗಳನ್ನು ಹಾಡತೊಡಗಿದರು. 2012ರವರೆಗೂ ಲೈವ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಭಿಮಾನಿಗಳ ಒತ್ತಾಯದ ಮೇರೆಗೆ 2006ರಲ್ಲಿ ‘ಉಮರ್’ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ, ಕೊನೆಯ ಹಾಡನ್ನೂ ಹಾಡಿದರು. 2012ರಲ್ಲಿ ಪತ್ನಿ ಸುಲೋಚನಾ ಕುಮರನ್ ಕ್ಯಾನ್ಸರ್‍‌ನಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಪತ್ನಿಯ ಕೊರಗಿನಲ್ಲಿಯೇ ಮನ್ನಾ ಡೇ ಕೂಡ ಅಕ್ಟೋಬರ್ 24, 2013ರಂದು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಹೃದಯಾಘಾತದಿಂದ ತೀರಿಹೋದರು. ಅಂತಿಮ ಸಂಸ್ಕಾರ ಕೂಡ ಬೆಂಗಳೂರಿನಲ್ಲಿಯೇ ನಡೆಯಿತು.

ರಾಗ, ಸ್ವರ, ಲಯಗಳ ಲೋಕದಲ್ಲಿ ವಿಹರಿಸುತ್ತಲೇ, ಸಂಗೀತವನ್ನು ಸಂಪೂರ್ಣವಾಗಿ ಆಸ್ವಾದಿಸಿ, ಅನುಭವಿಸಿದ ಮನ್ನಾ ಡೇ, ಕೇರಳದ ಪತ್ನಿ ಸುಲೋಚನಾರೊಂದಿಗೆ ಸಂತೃಪ್ತಿಯ ದಾಂಪತ್ಯ ಬದುಕನ್ನೂ ಬದುಕಿದ್ದಾರೆ. ಮೇ ಒಂದನೇ ತಾರೀಖು ಅವರ ಹಾಡುಗಳನ್ನು ಕೇಳುವ ಮೂಲಕ ಅವರ ಅರ್ಥಪೂರ್ಣ ಬದುಕಿಗೊಂದು ಭಾವನಾತ್ಮಕ ಸಲಾಮು ಸಲ್ಲಿಸೋಣ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಸಿಗಾಳಿ | ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ಶಾರೂಖ್ ಖಾನ್

ಮಂಗಳವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ...

ರೈತ ಮತ್ತು ನೀರು: ಸಮತೋಲನ ಹೇಗೆ?

ಡಾ. ಬಿ.ಆರ್. ಅಂಬೇಡ್ಕರ್ ಅವರು ನದಿ ನೀರು ರೈಲ್ವೆಯಂತೆ ರಾಷ್ಟ್ರೀಕರಣಗೊಳ್ಳಬೇಕು ಎಂದು...

ʼಈ ದಿನʼ ಗ್ರೌಂಡ್‌ ರಿಪೋರ್ಟ್‌ 1 | ನಿಶ್ಚಿತಾರ್ಥ, ಮದುವೆ, ಸಂಬಂಧ ಮುರಿಯುವ ಆತಂಕದಲ್ಲಿ ಹಾಸನದ ಕುಟುಂಬಗಳು…

ಕುಟುಂಬದಲ್ಲಿ ಸಾವು-ನೋವು ಸಂಭವಿಸಿದರೆ ಕೆಲ ಕಾಲದಲ್ಲಿ ಎಲ್ಲರೂ ಯಥಾಸ್ಥಿತಿಗೆ ಮರಳುತ್ತಾರೆ. ಆದರೆ,...

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹೈದರಾಬಾದ್ ಮೆಟ್ರೋ ನಷ್ಟದಲ್ಲಿದೆ ಎಂಬ ಎಲ್&ಟಿ ವಾದ ನಿಜವೇ?

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ...