ಮಲಪ್ರಭಾ ಯೋಜನೆಯ ಕೊನೆಯ ಭಾಗದ ಜಮೀನುಗಳಿಗೂ ಸಮರ್ಪಕವಾಗಿ ನೀರು ತಲುಪಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಂದರಗಿ ಕ್ರೀಡಾ ಶಾಲೆಯ ಆವರಣದಲ್ಲಿ ನಡೆದ ಮಲಪ್ರಭಾ ಯೋಜನೆಯ 2026-27ನೇ ಸಾಲಿನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಭಾಗದ ರೈತರ ನೀರಾವರಿ ಅಗತ್ಯತೆಗಳು ಹಾಗೂ ಪ್ರಮುಖ ಸಮಸ್ಯೆಗಳ ಕುರಿತು ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಸಚಿವರು ಸುದೀರ್ಘವಾಗಿ ಚರ್ಚಿಸಿದರು. ರೈತರ ಬೆಳೆಗಳಿಗೆ ಸಕಾಲದಲ್ಲಿ ಅಗತ್ಯ ನೀರು ದೊರೆಯುವಂತೆ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕು. ಕಾಲುವೆಗಳ ಮೂಲಕ ಕೊನೆಯ ಹಂತದ ರೈತರ ಜಮೀನುಗಳಿಗೂ ನೀರು ತಲುಪುವಂತೆ ನೀರು ಹರಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ನೀರಿನ ಸಮರ್ಪಕ ನಿರ್ವಹಣೆ ಮಾಡುವುದು ಹಾಗೂ ಮಲಪ್ರಭಾ ಯೋಜನೆಯ ನೀರು ಕೊನೆಯ ಹಂತದ ರೈತರಿಗೂ ತಲುಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಶೋಕ ಪಟ್ಟಣ, ಎನ್.ಎಚ್. ಕೋನರಡ್ಡಿ, ವಿಶ್ವಾಸ ವೈದ್ಯ ಸೇರಿದಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಉನ್ನತಾಧಿಕಾರಿಗಳು, ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.



