- ಹದಿನೆಂಟು ಜನರ ಮೇಲೆ ಪ್ರಕರಣ ದಾಖಲು
- ಶಿಕಾರಿಪುರ ಟೌನ್ ಪೊಲೀಸರಿಂದ ಬಂಧನ
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಶಿಕಾರಿಪುರದ ನಿವಾಸದ ಮೇಲೆ ನಿನ್ನೆ (ಸೋಮವಾರ) ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ 18 ಜನರ ಮೇಲೆ ದೂರು ದಾಖಲಾಗಿದ್ದು, ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಬಂಜಾರ ಸಮುದಾಯದವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಅಂಬೇಡ್ಕರ್ ವೃತ್ತದಿಂದ ಹೊರಟಿದ್ದ ಪ್ರತಿಭಟನಾಕಾರರು ತಾಲೂಕು ಆಡಳಿತ ಕಚೇರಿ ಬಳಿ ಆಗಮಿಸಿದರು.
ಇದರಲ್ಲಿದ್ದ ಕೆಲವರು ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ನಿವಾಸವಿರುವ ಮಾಳೇರಕೇರಿಯತ್ತ ಧಾವಿಸಿ ಕಲ್ಲು ತೂರಾಟ ನಡೆಸಿ, ಮನೆಯ ಕಿಟಕಿ ಗಾಜುಗಳು ಪುಡಿ ಪುಡಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? : ಬಿಎಸ್‌ವೈ ಮನೆ ಮೇಲೆ ದಾಳಿ ಯಾರ ‘ಸಂತೋಷ’ದ ಕಾರಣಕ್ಕೆ : ಕಾಂಗ್ರೆಸ್ ಮಾರ್ಮಿಕ ಪ್ರಶ್ನೆ
ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಬಿಎಸ್ವೈ ಮನೆ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಭದ್ರತೆ ನೀಡಿದ್ದಲ್ಲದೇ, ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ಮಾಡಿ, ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.
ಈ ಸಂಬಂಧ 18 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಶಿಕಾರಿಪುರ ಟೌನ್ ಪೊಲೀಸರು ರಾಘವೇಂದ್ರ ನಾಯ್ಕ, ಪುನೀತ್ ನಾಯ್ಕ ಮತ್ತು ಕುಮಾರನಾಯ್ಕ ಎಂಬ ಮೂವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಮೂವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದ್ದು, ಗಲಾಟೆಯ ದೃಶ್ಯವನ್ನು ಪರಿಶೀಲಿಸಿ, ಇನ್ನಷ್ಟು ಆರೋಪಿಗಳನ್ನು ಬಂಧಿಸುವುದಾಗಿ ಮಾಹಿತಿ ನೀಡಿದ್ದಾರೆ.